ADVERTISEMENT

ಮೋಹಿನಿಯಾಟ್ಟಂನ ಮೋಹದಲ್ಲಿ...

Dancer Rekha raju

ಮಂಜುಶ್ರೀ ಎಂ.ಕಡಕೋಳ
Published 9 ನವೆಂಬರ್ 2018, 19:45 IST
Last Updated 9 ನವೆಂಬರ್ 2018, 19:45 IST
ರೇಖಾ ರಾಜು
ರೇಖಾ ರಾಜು   

ಮೂರೂವರೆ ವರ್ಷ...

ಓರಗೆಯ ಸ್ನೇಹಿತರೊಂದಿಗೆ ಆಟವಾಡುವ ವಯಸ್ಸು. ಆದರೆ, ರೇಖಾರಾಜು ಆಟವಾಡುವ ಸಮಯದಲ್ಲಿ ಪುಟ್ಟ ಕಾಲುಗಳಿಗೆ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕುತ್ತಾ ಬೆಳೆದವರು. ಬಾಲ್ಯದಲ್ಲೇ ನೃತ್ಯಲೋಕಕ್ಕೆ ಪದಾರ್ಪಣೆ ಮಾಡಿದ ಅವರೀಗ ಭರತನಾಟ್ಯಂ ಮತ್ತು ಮೋಹಿನಿಯಾಟ್ಟಂ ನೃತ್ಯಪ್ರಕಾರದ ಖ್ಯಾತ ಕಲಾವಿದೆ.

ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ಹುಟ್ಟಿದ ರೇಖಾ ಅವರು, ಆ ಮಣ್ಣಿನ ಕಲೆಯೇ ಮುಂದೊಂದು ದಿನ ತಮ್ಮ ಕೈಹಿಡಿಯುತ್ತದೆ ಎಂದು ಕನಸು–ಮನಸಿನಲ್ಲೂ ಎಣಿಸಿರಲಿಲ್ಲವಂತೆ. ಅಮ್ಮ ಜಯಲಕ್ಷ್ಮಿ ರಾಘವನ್ ಅವರಿಗೆ ನೃತ್ಯ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ. ಸಂಪ್ರದಾಯದ ಚೌಕಟ್ಟು ಮೀರಿ ನೃತ್ಯ ಕಲಿಯುವುದು ನೆರೆದವರ ಕೆಂಗಣ್ಣಿಗೆ ತುತ್ತಾಗುವ ಕಾಲವದು. ಹಾಗಾಗಿ, ಸಂಗೀತದಲ್ಲೇ ತಮ್ಮ ಆಸೆಯನ್ನು ಪೂರೈಸಿಕೊಂಡವರು ಅವರು. ಮಗಳು ಹುಟ್ಟಿದರೆ ಅವಳಿಗೆ ನೃತ್ಯ ಕಲಿಸಿಯೇ ತೀರಬೇಕೆಂಬ ಮಹದಾಸೆಯನ್ನು ಮಗಳು ರೇಖಾರಾಜು ಪೂರೈಸಿದರು. ಅಮ್ಮನ ಪುಟ್ಟ ಕನಸನ್ನು ನೃತ್ಯದಲ್ಲಿ ಪಿಎಚ್‌.ಡಿ ಪದವಿ ಪಡೆಯುವ ಮೂಲಕ ಮಗಳು ರೇಖಾ ವಿಸ್ತರಿಸಿದರು.

ADVERTISEMENT

ಹಾಸನ ಮೂಲದ ಅಪ್ಪ ಎಂ.ಆರ್. ರಾಜು ರಂಗಭೂಮಿಯ ಕಲಾವಿದ. ಮಗಳ ನೃತ್ಯಾಸಕ್ತಿಯನ್ನು ಪೋಷಿಸಿದರು. ಪುಟ್ಟ ಮಗುವಾಗಿದ್ದಾಗಲೇ ಬೆಂಗಳೂರಿನಲ್ಲಿ ತಂದೆ–ತಾಯಿಯೊಂದಿಗೆ ನೆಲೆ ನಿಂತ ರೇಖಾ ಅವರಿಗೆ ಕುಂತಲ್ಲಿ ನಿಂತಲ್ಲಿ ನೃತ್ಯದ್ದೇ ಗುಂಗು. ಸಿ.ಎ. ಅಂತಿಮ ವರ್ಷವಿರುವಾಗ ನೃತ್ಯದ ಮೋಹ ಹೆಚ್ಚಾಗಿ ಪದವಿಯನ್ನೇ ಅರ್ಧಕ್ಕೇ ಬಿಟ್ಟರು. ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಕಲೆಯಲ್ಲೇ ಪದವಿ ಪಡೆಯಬೇಕೆಂಬ ತುಡಿತದಿಂದ ಸ್ನಾತಕೋತ್ತರ ಪದವಿಯಲ್ಲಿ ನೃತ್ಯವನ್ನೇ ಆರಿಸಿಕೊಂಡರು. ಅದಕ್ಕೆ ತಕ್ಕಂತೆ ರ‍್ಯಾಂಕ್ ಕೂಡಾ ಗಳಿಸಿದರು. ಈ ನಡುವೆ ಪ್ರಿಯ ವಿಷಯವಾಗಿದ್ದ ಅಕೌಂಟ್ಸ್ ವಿಷಯದಲ್ಲೂ ರೇಖಾ ಪದವಿ ಪಡೆದರು.

ಕೇರಳದ ಪ್ರಸಿದ್ಧ ನೃತ್ಯಕಲೆಯಾದ ಮೋಹಿನಿಯಾಟ್ಟಂನ ಮೋಡಿಗೊಳಗಾದ ರೇಖಾ,‘ಭರತನಾಟ್ಯಂ ಮತ್ತು ಮೋಹಿನಿಯಾಟ್ಟಂ ನೃತ್ಯದಲ್ಲಿ ಮಾರ್ಗ ಮತ್ತು ದೇಸಿ ಶೈಲಿಯ ತಂತ್ರಗಳು’ ವಿಷಯದ ಕುರಿತು ಪಿಎಚ್.ಡಿಯನ್ನೂ ಮಾಡಿದರು. ಭರತನಾಟ್ಯಂ ಮತ್ತು ಮೋಹಿನಿಯಾಟ್ಟಂ ಎರಡೂ ನೃತ್ಯಪ್ರಕಾರಗಳಲ್ಲಿ ಕೌಶಲ ಸಾಧಿಸಿದರು. ಮೋಹಿನಿಯಾಟ್ಟಂ ಕೇರಳದಲ್ಲಷ್ಟೇ ಏಕೆ ಪ್ರಸಿದ್ಧಿಯಾಗಬೇಕು? ಅದು ಅಲ್ಲಿನ ಪ್ರಾದೇಶಿಕತೆಯನ್ನೂ ಮೀರಿ ಎಲ್ಲೆಡೆ ತನ್ನ ಕಂಪು ಸೂಸುವಂತಾಗಬೇಕೆಂಬ ಹಂಬಲದಲ್ಲಿ ರೇಖಾ, ಹಲವು ಪ್ರಯೋಗಗಳಿಗೆ ಮುಂದಾದರು.

‘ಹಿಂದೆ ದೇವದಾಸಿಯರು ಆಡುತ್ತಿದ್ದ ದಾಸಿಯಾಟ್ಟಂ, ತಿರುವಾಂಕೂರಿನ ಸ್ವಾತಿ ತಿರುನಾಳ್ ಮಹಾರಾಜರ ದೆಸೆಯಿಂದಾಗಿ ಮುಖ್ಯವಾಹಿನಿಗೆ ಬಂತು. ಆದರೆ, ಅದು ಕೇರಳಕ್ಕಷ್ಟೇ ಸೀಮಿತವಾಗಿತ್ತು. ಮೋಹಿನಿಯಾಟ್ಟಂ ಎಲ್ಲ ನೃತ್ಯಪ್ರಿಯರ ಮನ ಗೆಲ್ಲಬೇಕೆಂಬ ಉದ್ದೇಶದಿಂದ ಡಿವಿಜಿ, ಕುವೆಂಪು ಕಾವ್ಯ, ತಮಿಳಿನಲ್ಲಿ ಭಾರತೀಯಾರ್ ಕಾವ್ಯ, ಹಿಂದಿಯಲ್ಲಿ ತುಳಸೀದಾಸರ ಕಾವ್ಯ, ಮರಾಠಿಯಲ್ಲಿ ಅಭಂಗ್ ಹೀಗೆ ಆಯಾ ಪ್ರಾದೇಶಿಕತೆಗೆ ಅನುಗುಣವಾಗಿ ಮೋಹಿನಿಯಾಟ್ಟಂ ಅನ್ನು ಅಳವಡಿಸುತ್ತಾ ಹೋದೆ. ಹೊರದೇಶಗಳಿಗೆ ಹೋದಾಗ ಅಲ್ಲಿನ ಇಂಗ್ಲಿಷ್ ಕಾವ್ಯವನ್ನು ದೇಸಿಯ ಶಾಸ್ತ್ರೀಯ ಶೈಲಿಗೆ ಒಗ್ಗೂಡಿಸಿ ಮೋಹಿನಿಯಾಟ್ಟಂ ಪ್ರದರ್ಶಿಸುತ್ತೇನೆ’ ಎಂದು ತಮ್ಮ ಪ್ರಯೋಗಗಳ ಪರಿಯನ್ನು ಬಿಚ್ಚಿಡುತ್ತಾರೆ ರೇಖಾ.

‘ಹಸ್ತ ಪ್ರಯೋಗ, ಕಣ್ಣೋಟಗಳ ಚಲನೆ, ಭಾವಾಭಿವ್ಯಕ್ತಿಯಲ್ಲಿ ಭರತನಾಟ್ಯಂಗಿಂತ ಭಿನ್ನವಾಗಿರುವ ಮೋಹಿನಿಯಾಟ್ಟಂ ಎಂಥವರಿಗೂ ಅರ್ಥವಾಗುವ ನೃತ್ಯಪ್ರಕಾರ. ಅದನ್ನು ಎಲ್ಲೆಡೆ ಪಸರಿಸಬೇಕೆಂಬುದೇ ನನ್ನ ಹಂಬಲ. ಹಾಗಾಗಿ, ಐದಾರು ವರ್ಷಗಳಿಂದ ಈ ನೃತ್ಯವನ್ನೇ ಪ್ರದರ್ಶಿಸುತ್ತಿದ್ದೇನೆ. ಆದರೆ, ‘ನೃತ್ಯಧಾಮ’ದಲ್ಲಿ ಎಲ್ಲಾ ಪ್ರಕಾರಗಳ ನೃತ್ಯವನ್ನು ಕಲಿಸುತ್ತೇನೆ’ ಎನ್ನುತ್ತಾರೆ ಅವರು.

ಬಾಲ್ಯದಲ್ಲಿ ತಂದೆ ವ್ಯಾಪಾರದಲ್ಲಿ ನಷ್ಟ ಅನುಭವಿಸಿದಾಗ ಬಡತನದ ಕಾರಣಕ್ಕಾಗಿ ರೇಖಾರಾಜು ಎರಡು ವರ್ಷ ನೃತ್ಯಕಲಿಕೆಯಿಂದ ದೂರವುಳಿದ್ದರು. ಈ ಅನುಭವ ಅವರಿಗೆ ಕಲಿಸಿದ ಪಾಠ ದೊಡ್ಡದು. ನೃತ್ಯಕಲಿಕೆಗೆ ಬಡತನವಾಗಲೀ, ಹಣವಾಗಲೀ ಅಡ್ಡಯಾಗಬಾರದು ಅನ್ನುವ ಕಾರಣಕ್ಕಾಗಿ ಅವರು ನಗರ ಮತ್ತು ಗ್ರಾಮೀಣ ಹಿನ್ನೆಲೆಯ ಬಡ ಕುಟುಂಬದ ಮಕ್ಕಳಿಗೆ ಉಚಿತವಾಗಿ ನೃತ್ಯ ಕಲಿಸುತ್ತಾರೆ.

ಆತ್ಮವಿಶ್ವಾಸವನ್ನು ವೃದ್ಧಿಸಿ, ವ್ಯಕ್ತಿತ್ವ ಕಟ್ಟಿಕೊಡುವ ಶಕ್ತಿ ನೃತ್ಯಕ್ಕಿದೆ. ಅದು ಬರೀ ದೇಹ–ಮನಸಿಗೆ ಮುದ ನೀಡುವುದಷ್ಟೇ ಅಲ್ಲ, ಅದು ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿಯನ್ನೂ ಕಲಿಸುತ್ತದೆ. ನೃತ್ಯವನ್ನು ಬರೀ ಹವ್ಯಾಸಕ್ಕಾಗಿ ಮಾತ್ರ ಕಲಿಯದಿರಿ. ಶ್ರದ್ಧೆ–ಬದ್ಧತೆಯಿಂದ ಕಲಿತಲ್ಲಿ ಮಾತ್ರ ಅದು ನಿಮ್ಮನ್ನು ಕಾಪಾಡಬಲ್ಲದು ಎಂದು ಕಿವಿಮಾತು ಹೇಳುತ್ತಾರೆ ರೇಖಾರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.