ADVERTISEMENT

ಗಾಲಿ ಚಕ್ರದ ಮೇಲೆ ಪವಾಡ

ಭಾಗ್ಯಲಕ್ಷ್ಮಿ ಪದಕಿ
Published 27 ಜುಲೈ 2019, 19:30 IST
Last Updated 27 ಜುಲೈ 2019, 19:30 IST
ಗಾಲಿ ಕುರ್ಚಿಯ ಮೇಲೆ ಪವಾಡ ಸಂಸ್ಥೆಯ ಅಂಗವಿಕಲರು ಪ್ರದರ್ಶಿಸಿದ ಭಗವದ್ಗೀತೆಯ ನೃತ್ಯ ಪ್ರದರ್ಶನ
ಗಾಲಿ ಕುರ್ಚಿಯ ಮೇಲೆ ಪವಾಡ ಸಂಸ್ಥೆಯ ಅಂಗವಿಕಲರು ಪ್ರದರ್ಶಿಸಿದ ಭಗವದ್ಗೀತೆಯ ನೃತ್ಯ ಪ್ರದರ್ಶನ   

ಪಾಷ ನೃತ್ಯಪಟು ಮತ್ತು ನೃತ್ಯ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ.ಆದರೆ, ಅವರ ಮನಸ್ಸೆಲ್ಲಾ ‘ನಾನು ನರ್ತಿಸಿದರೆ ಹೆಚ್ಚುಗಾರಿಕೆಯಿಲ್ಲ. ಅಂಗವಿಕಲರು ನೃತ್ಯ ಮಾಡಲು ನೆರವಾಗಬೇಕು’ ಎಂದು ಹಪಹಪಿಸುತ್ತಿತ್ತು. ಇದರ ಫಲವಾಗಿ ಹುಟ್ಟಿಕೊಂಡ ಕಲ್ಪನೆಯೇ ‘ಮಿರಾಕಲ್ ಆನ್ ವೀಲ್ಸ್’

ಸಂಗೀತ ಕಲೆಗೆ ಶಾರೀರ ಎಷ್ಟು ಮುಖ್ಯವೋ, ನೃತ್ಯ ಕಲೆಗೆ ಅಂಗಸೌಷ್ಠವವೂ ಅಷ್ಟೇ ಮುಖ್ಯ. ಭಾರತೀಯ ನಾಟ್ಯ ಪಿತಾಮಹ ಭರತಮುನಿ ಹೇಳುವಂತೆ, ‘ನಾಟ್ಯಕ್ಕೆ ಎಲ್ಲ ಅವಯವಗಳೂ ಅತಿಮುಖ್ಯ. ಅಂಗ ನ್ಯೂನತೆಯಿರುವ ವ್ಯಕ್ತಿ ನಾಟ್ಯಕ್ಕೆ ಅನರ್ಹ’. ಆದರೆ, ಈ ಮಾತನ್ನು ಸರ್ವಥಾ ಸುಳ್ಳು ಮಾಡಿ ತೋರಿಸಿದ್ದಾರೆ ಬೆಂಗಳೂರಿನ ಭರತನಾಟ್ಯ ಹಾಗೂ ಕಥಕ್ ನೃತ್ಯ ಗುರು ಸಯ್ಯದ್‌ ಸಲ್ಲಾವುದ್ದೀನ್ ಪಾಷ.

ಹಲವು ಕಲಾವಿದರಂತೆ ಅವರು ತಮ್ಮ ಪ್ರತಿಭೆಯನ್ನು ಮಾತ್ರ ಪ್ರದರ್ಶಿಸದೆ, ಅಂಗವಿಕಲರಿಗೂ ನೃತ್ಯದ ಸಿಹಿ ಉಣಿಸಿ, ಅವರಿಂದ ಅತ್ಯದ್ಭುತ ಸಾಧನೆಗಳನ್ನು ಮಾಡಿಸಿದ್ದಾರೆ. ಅವರು ನಡೆಸಿಕೊಡುವ ಗಾಲಿ ಚಕ್ರದ ಮೇಲೆ ಪವಾಡ (ಮಿರಾಕಲ್ ಆನ್ ವೀಲ್ಸ್) ನೃತ್ಯ ಪ್ರದರ್ಶನ ನೋಡುಗರನ್ನು ಮೂಕವಿಸ್ಮಿತಗೊಳಿಸಿದೆ. ಪಾಷ ಮತ್ತವರ ತಂಡದ ಇಚ್ಛಾಶಕ್ತಿಗೆ ತಲೆಬಾಗದವರು ವಿರಳ.

ADVERTISEMENT
ಗಾಲಿ ಕುರ್ಚಿಯ ಮೇಲೆ ನೃತ್ಯ ಪ್ರದರ್ಶಿಸುತ್ತಿರುವ ಅಂಗವಿಕಲರು

1968ರಲ್ಲಿ ಆನೇಕಲ್‍ನ ಹಕೀಂ ವಂಶದಲ್ಲಿ ಹುಟ್ಟಿದ ಸಯ್ಯದ್ ಸಲ್ಲಾವುದ್ದೀನ್ ಪಾಷ ಅವರದು ವಿಶಿಷ್ಟ ಪ್ರತಿಭೆ. ತಮ್ಮ ಊರಿನಲ್ಲಿ ನಡೆಯುತ್ತಿದ್ದ ಸಂಗೀತ, ನೃತ್ಯ, ನಾಟಕ, ಹರಿಕಥೆ ಕೇಳುವುದರಲ್ಲಿ ಅವರಿಗೆ ತೀವ್ರ ಆಸಕ್ತಿ. ಆ ಕಲೆಯನ್ನು ಕಲಿಯಬೇಕೆನ್ನುವ ಅಮಿತ ಉತ್ಸಾಹ. ಅಂತೆಯೇ ಟಿ.ಎಸ್. ರಮಾಮಣಿ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಕಟ್ಟಪ್ಪ ಪಿಳ್ಳೈ- ನರ್ಮದಾ ಮತ್ತು ಪದ್ಮಿನಿ ರಾವ್ ಅವರಿಂದ ಭರತನಾಟ್ಯ, ಮಾಯಾರಾವ್ ಅವರಿಂದ ಕಥಕ್ ನೃತ್ಯ ಕಲಿತರು.

ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ವಿಭಾಗದಲ್ಲಿ ಪದವಿ ಪಡೆದ ಪಾಷ, ಮುಂದೆ ಖ್ಯಾತನಾಮರಾದ ಬಿ.ವಿ. ಕಾರಂತ, ಎಂ.ಎಸ್. ಸತ್ಯು ಮತ್ತು ರೇಣುಕಾ ಶರ್ಮ ಅವರೊಂದಿಗೆ ಟಿ.ವಿ. ಮತ್ತು ಚಲನಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದರು. ಇಷ್ಟೇ ಆಗಿದ್ದರೆ ಅವರಿಂದು ನೃತ್ಯಪಟುವಾಗಿ ಮಾತ್ರವೇ ಪ್ರಸಿದ್ಧಿ ಪಡೆಯುತ್ತಿದ್ದರು. ಆದರೆ, ತಾವೂ ಬೆಳೆದು, ಬೇರೆಯವರನ್ನೂ ಬೆಳೆಸುವ ಜಾಯಮಾನ ಅವರದು. ಹಾಗಾಗಿಯೇ, ಅಂಗವಿಕಲರ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತರು. ತಮ್ಮ ಸುತ್ತ ಇದ್ದ ವಾಕ್‌ ದೋಷ, ಶ್ರವಣ ದೋಷವುಳ್ಳ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಲು ಒತ್ತು ನೀಡಿದರು.

ಪಾಷ ಅವರು ನೃತ್ಯಪಟು ಮತ್ತು ನೃತ್ಯ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿದ್ದರು. ಆದರೆ, ಅವರ ಮನಸ್ಸೆಲ್ಲಾ ‘ನಾನು ನರ್ತಿಸಿದರೆ ಹೆಚ್ಚುಗಾರಿಕೆಯಿಲ್ಲ. ಅಂಗವಿಕಲರು ನೃತ್ಯ ಮಾಡಲು ನೆರವಾಗಬೇಕು’ ಎಂದು ಹಪಹಪಿಸುತ್ತಿತ್ತು. ಇದರ ಫಲವಾಗಿ ಹುಟ್ಟಿಕೊಂಡ ಕಲ್ಪನೆಯೇ ‘ಮಿರಾಕಲ್ ಆನ್ ವೀಲ್ಸ್’. ಇದರಲ್ಲಿ ಕಾಲಿಲ್ಲದವರು, ಗಾಲಿ ಕುರ್ಚಿಗಳ ಮೇಲೆ ಕುಳಿತು ನರ್ತಿಸಿದರೆ, ಬುದ್ಧಿಮಾಂದ್ಯರು, ವಾಕ್‌ ದೋಷ, ಶ್ರವಣ ದೋಷವುಳ್ಳವರು ಶಿಕ್ಷಕರ ಸೂಚನೆ ಅನುಸರಿಸುತ್ತಾ ನರ್ತಿಸುತ್ತಾರೆ. ನೋಡುಗರಿಗೆ ಇವರು ಅಂಗವಿಕಲರು ಎನಿಸುವುದೇ ಇಲ್ಲ; ಅಷ್ಟು ಸಹಜವಾಗಿ ಮುಖಭಾವ- ಹಾವಭಾವಗಳೊಡನೆ ನರ್ತನ ಮಾಡುತ್ತಾರೆ. ಪಾಷ ಅವರು ಗಾಲಿ ಕುರ್ಚಿಯನ್ನು ಅಂಗವಿಕಲರ ಜೀವನದ ರಥವಾಗಿ ಮಾಡಿ, ಅವರ ಜೀವನ ಪಯಣವನ್ನು ಸರಾಗ ಮಾಡಿರುವ ಕಾಯಕಕ್ಕೆ ಮೂರು ದಶಕ ತುಂಬಿದೆ. ಇಡೀ ವಿಶ್ವದಲ್ಲೇ ಗಾಲಿ ಕುರ್ಚಿಯ ನರ್ತನದ ಕಲ್ಪನೆಯನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಡುತ್ತಿರುವ ಏಕೈಕ ಕಲಾವಿದ ಎನ್ನುವುದು ಅವರ ಹೆಗ್ಗಳಿಕೆ.

ಪ್ರತಿಭೆ ಗುರುತಿಸಿದ ವಿದೇಶಿ ನೆಲ

ಮೊದಲ ಬಾರಿಗೆ ಪಾಷ ಅವರ ಪ್ರಯೋಗಶೀಲತೆಯನ್ನು ಗುರುತಿಸಿ, ಪ್ರೋತ್ಸಾಹಿಸಿದ್ದು ವಿದೇಶಿ ಸಂಸ್ಥೆಗಳು. ಅವರ ವೈಶಿಷ್ಟ್ಯಪೂರ್ಣ ನೃತ್ಯ ಪ್ರಯೋಗಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದು ಮಲೇಷ್ಯಾದ ಸೂತ್ರ ನೃತ್ಯ ನಾಟಕ ಕೇಂದ್ರ. ಆ ಕೇಂದ್ರವು ಪಾಷ ಅವರನ್ನು ಕೆಲಕಾಲ ನೃತ್ಯ ಶಿಕ್ಷಕರನ್ನಾಗಿಯೂ ನೇಮಕ ಮಾಡಿಕೊಂಡಿತು. ಆ ಸಮಯದಲ್ಲೇ, ಮಲೇಷ್ಯಾದ ಪ್ರಧಾನಿ ಮತ್ತು ದೊರೆ ಕೂಡ ಪಾಷ ಅವರ ಪ್ರತಿಭೆಗೆ ನೀರೆರೆದು ಪೋಷಿಸಿದರು. ಬಳಿಕ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯವು ಪಾಷ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿತು. ಇದೇ ವೇಳೆ ಯೂರೋಪಿನ ಅತಿದೊಡ್ಡ ಚಿಕಿತ್ಸಕ ನೃತ್ಯ ಯೋಜನೆಯಾದ ಗಾಲಿ ಕುರ್ಚಿಯ ಮೇಲೆ ರಾಮಾಯಣ ನೃತ್ಯವನ್ನು 108 ಫಿನ್ನಿಶ್ ಮಕ್ಕಳಿಗೆ ನಿದೇಶಿಸಿದರು. ಆ ಮೂಲಕ ಅಂಗವಿಕಲರ ಬಗೆಗಿನ ಕಾಳಜಿ ಮತ್ತು ಭಾರತೀಯ ಸಂಸ್ಕೃತಿಯ ಮೇಲೆ ತಮಗಿರುವ ‍ಪ್ರೀತಿಯನ್ನು ಪ್ರತಿಬಿಂಬಿಸಿದರು.

ಅಂಗವಿಲಕರಿಗೆ ನೃತ್ಯ ಕಲಿಸಿಕೊಡುತ್ತಿರುವ ಸಯ್ಯದ್‌ ಸಲ್ಲಾವುದ್ದೀನ್ ಪಾಷ

ವಿದೇಶದಲ್ಲಿ ಹೆಸರು ಮಾಡಿದ ಪಾಷ ಅವರನ್ನು ಅವರ ತಾಯ್ನೆಲವೂ ಕೈಬೀಸಿ ಕರೆಯಿತು. 2007ರಲ್ಲಿ ಕೇಂದ್ರ ಸರ್ಕಾರ ಅಂಗವಿಕಲರ ಕಲ್ಯಾಣ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು. ರಾಷ್ಟ್ರಪತಿಗಳಾಗಿದ್ದ ಪ್ರತಿಭಾ ಪಾಟೀಲ್, ಡಾ.ಅಬ್ದುಲ್ ಕಲಾಂ ಮತ್ತು ಪ್ರಣವ್‌ ಮುಖರ್ಜಿ ಅವರ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದಲ್ಲಿ ಗಾಲಿಕುರ್ಚಿ ನೃತ್ಯ ಪ್ರದರ್ಶನ ನಡೆಸಿಕೊಟ್ಟ ಹಿರಿಮೆ ಅವರದು.

ಪ್ರತಿಷ್ಠಿತ ವಿಶ್ವಸಂಸ್ಥೆಯ ಮಾಹಿತಿ ಕೇಂದ್ರದೊಡನೆ ಪಾಷ ನೃತ್ಯ ಆಯೋಜಿಸಿದ್ದು ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ನೋಂದಾಯಿತ ಸದಸ್ಯರೂ ಆಗಿರುವುದು ಕನ್ನಡಿಗರು ಹೆಮ್ಮೆಪಡುವ ಸಂಗತಿ. ಇತ್ತೀಚೆಗೆ ಅವರು ಕೆನಡಾ ಪಾರ್ಲಿಮೆಂಟಿನ ಹೌಸ್ ಆಫ್ ಕಾಮನ್ಸ್‌ ವಿಶೇಷ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ದಾಖಲೆಗಳತ್ತ ದಾಪುಗಾಲು

ಸಂಖ್ಯೆಗಳ ಗಣನೆಯೇ ಇಲ್ಲದೆ ಅಂಗವಿಕಲ ಮಕ್ಕಳ ನೃತ್ಯ ಪ್ರದರ್ಶನವನ್ನು ತಮ್ಮ ಪಾಡಿಗೆ ತಾವು ಮಾಡುತ್ತ, ಅವರಿಗಾಗಿ ತಮ್ಮ ಖರ್ಚಿನಲ್ಲಿ ಸಂಸ್ಥೆ ನಡೆಸುತ್ತಿರುವ ಪಾಷ ಅವರ ಸಂಸ್ಥೆಯು ಹಲವು ದಾಖಲೆ ಕೂಡ ಬರೆದಿದೆ. 2008ರಲ್ಲಿ ಅವರು ತಮ್ಮ ಶಿಷ್ಯರಿಗೆ ನೃತ್ಯ ಹೇಳಿಕೊಡುವಾಗ ಗಾಲಿ ಕುರ್ಚಿಯನ್ನು ಒಂದು ನಿಮಿಷದಲ್ಲಿ 63 ಬಾರಿ ತಿರುಗಿಸಿದ್ದು ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಿದೆ. ಅಂಗವಿಕಲರಿಂದ ನೂರು ನೃತ್ಯ ನಾಟಕ ಮತ್ತು ಹತ್ತು ಸಾವಿರ ಗಾಲಿಚಕ್ರ ನೃತ್ಯ ಪ್ರದರ್ಶನ ಮಾಡಿದ್ದು, 2011ರಲ್ಲಿ ಗಿನ್ನಿಸ್ ದಾಖಲೆಯಾಗಿದೆ.

ಸಯ್ಯದ್ ಸಲ್ಲಾವುದ್ದೀನ್ ಪಾಷ ಸರ್ವಧರ್ಮ ಸಮನ್ವಯತೆಯ ದ್ಯೋತಕವಾಗಿದ್ದಾರೆ. ಸಂಸ್ಕೃತ ಭಾಷೆಯ ಮೇಲೂ ಅವರಿಗೆ ಹಿಡಿತವಿದೆ. ಅವರ ಪತ್ನಿ ಮಹಿರಾಸಂಜ್ಞಾ ಚಿಕಿತ್ಸೆ ಮತ್ತು ವಾಕ್ ಚಿಕಿತ್ಸೆಯಲ್ಲಿ ನುರಿತ ಚಿಕಿತ್ಸಕಿ. ಧರ್ಮ- ಜಾತಿ- ಭಾಷೆಯ ಹಂಗಿಲ್ಲದೆ ಅಂಗವಿಕಲರ ಸ್ವಾವಲಂಬಿ ಬದುಕಿಗೆ ಈ ದಂಪತಿ ಹಗಲಿರುಳು ದುಡಿಯುತ್ತಿದ್ದಾರೆ.

‘ಅಂಗವಿಕಲರ ಬಗ್ಗೆ ಅನುಕಂಪ ತೋರಬೇಡಿ. ಅದರಿಂದ ಅವರಲ್ಲಿ ಕೀಳರಿಮೆ ಬೆಳೆಯುತ್ತದೆ. ಅವರಲ್ಲಿ ಸುಪ್ತವಾಗಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಅಂಗವಿಕಲರು ಯಾರಿಗೂ ಹೊರೆಯಾಗದಂತೆ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಕಲ್ಪಿಸುವುದೇಗಾಲಿ ಕುರ್ಚಿಯ ಮೇಲೆ ಪವಾಡ ಸಂಸ್ಥೆಯ ಏಕೈಕ ಗುರಿ’ ಎನ್ನುತ್ತಾರೆ ಪಾಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.