ADVERTISEMENT

ಮಾಗಿ ಉತ್ಸವದ ಅನುಭವ

ಎಂ.ವಿ.ನೆಗಳೂರ
Published 7 ಜನವರಿ 2019, 20:00 IST
Last Updated 7 ಜನವರಿ 2019, 20:00 IST
ದ್ರೋಹ ನಾಟಕ ದೃಶ್ಯ
ದ್ರೋಹ ನಾಟಕ ದೃಶ್ಯ   

ನೆಲಮಂಗಲದ ರಂಗ ಶಿಕ್ಷಣ ಕೇಂದ್ರವು ಮಾಗಿ ಸಾಂಸ್ಕೃತಿಕ ಉತ್ಸವವನ್ನು 4ದಿನ ನಿತ್ಯ ಸಂಜೆ ಅಂಬೇಡ್ಕರ್ ಭವನದಲ್ಲಿ ನಾಟಕೋತ್ಸವ, ಜನಪದ ಕಲಾ ಪ್ರದರ್ಶನ, ವಿಚಾರ ಸಂಕಿರಣ, ರಂಗ ಗೀತೆ ಗಾಯನ, ಭರತನಾಟ್ಯ ಹಾಗು ರಂಗಗೌರವದೊಂದಿಗೆ ನಡೆಸಿದರು. ಸಾವು, ದ್ರೋಹ, ರಾಮಧಾನ್ಯ ನಾಟಕ ಪ್ರದರ್ಶನಗಳು ಚಳಿಯಲ್ಲಿ ರಂಗಾಸಕ್ತರಿಗೆ ರಂಗರಸದೌತಣ ಉಣಬಡಿಸಿ ಬೆಚ್ಚನೆಯ ಅನುಭವ ನೀಡಿದವು.

ನಾಟಕ ಪದವಿ ಪಡೆದ ಯುವಕ ಸಿ.ಸಿದ್ದರಾಜು 1995ರಲ್ಲಿ ರಂಗಶಿಕ್ಷಣ ಕೇಂದ್ರ ಸ್ಥಾಪಿಸಿ, ರಂಗ ತರಬೇತಿ, ನಿರ್ದೇಶನ, ಹೊಸ ನಾಟಕಗಳ ಪ್ರಯೋಗ, ಶಿಬಿರ, ಬೀದಿ ನಾಟಕ, ಕಲಾ ಮೇಳ, ಕವಿಗೋಷ್ಠಿ ನಡೆಸುತ್ತಿದ್ದಾರೆ. ಕೇಂದ್ರದ ವಿದ್ಯಾರ್ಥಿಯಾದ ಬಿ.ಪ್ರಕಾಶಮೂರ್ತಿ ರಚನೆಯ ‘ಸಾವು’ ನಾಟಕ ಪ್ರಯೋಗವಾಯಿತು.

ಸಾವು ನಾಟಕದ ರಚನೆಕಾರ ಬೈರನಹಳ್ಳಿ ಪ್ರಕಾಶಮೂರ್ತಿ ರಂಗ ಶಿಕ್ಷಣದ ಸೆಳೆತದಿಂದ ಅಭಿನಯ ತರಬೇತಿ ಪಡೆದ ವಿದ್ಯಾರ್ಥಿ ಇಂದು ರಂಗಕರ್ಮಿಯಾಗಿ ಹೊರಹೊಮ್ಮಿದ್ದು ರಂಗ ಶಿಕ್ಷಣ ಕೇಂದ್ರದ ಸಾಧನೆ. ಶತಮಾನದ ಹಿಂದಿನ ನೈಜ ಘಟನೆಯನ್ನು ಕುರಿತ ಈ ನಾಟಕವನ್ನು ರಚನೆಕಾರ ಪ್ರಕಾಶಮೂರ್ತಿ ಮನೋಜ್ಞವಾಗಿ ಚಿತ್ರಿಸಿ ಜಾತಿಯ ಸಂಘರ್ಷಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ADVERTISEMENT

ದಟ್ಟ ದಾರಿದ್ರ್ಯ, ಹಸಿವಿನ ತೀವ್ರತೆ, ಕುಡಿತ, ಅನಕ್ಷರತೆ, ಹೆಣ್ಣಿನ ಅಸಹಾಯಕತೆ, ದೀರ್ಘಕಾಲದ ಕಾಯಿಲೆಗಳಿಂದ ನರಳುವುದನ್ನು ವಾಸ್ತವದ ನೆಲೆಯಲ್ಲಿ ನಿರೂಪಿಸಲಾಗಿದೆ. ರಂಗಾಯಣದ ವಿದ್ಯಾರ್ಥಿ, ಹಿರಿ ಕಿರಿತೆರೆಯ ನಟ ಕೆ.ರಂಗನಾಥ ಅವರ ನಿರ್ದೇಶನ ಮತ್ತು ಬೆಳಕಿನ ನಿರ್ವಹಣೆಯಲ್ಲಿ ಕಲಾವಿದ ಸಿ.ಎಚ್.ಸಿದ್ದಯ್ಯ ಅವರ ಸಂದರ್ಭೋಚಿತ ಹಾಡುಗಾರಿಕೆಯಲ್ಲಿ ನಾಟಕ ಅತ್ಯಂತ ಯಶಸ್ವಿಯಾಗಿ ಮೂಡಿಬಂತು.

ಮೂರು ದಿನ ಪ್ರಯೋಗಗೊಂಡ ಡಾ.ನಾಗೇಶ ಬೆಟ್ಟಕೋಟೆ ಅವರ ‘ದ್ರೋಹ’ ನಾಟಕ ಡಾ.ಪುಷ್ಪಲತಾ ನಿರ್ದೇಶನದಲ್ಲಿ ಪ್ರದರ್ಶನವಾಯಿತು. ನಾಗೇಶ ಅವರು ಹೊಸ ಆಲೋಚನೆಯಿಂದ ನಿರೂಪಕ ಸಂದರ್ಶಕರೊಂದಿಗೆ ಸಂವಾದ ರೀತಿಯಲ್ಲಿ ದೃಶ್ಯಾವಳಿ ಚಿತ್ರಿಸಿರುವುದು ವಿಶೇಷವಾಗಿದೆ. ವಿ.ದೇವರಾಜು ಹಿಮ್ಮೇಳದ ಸುಶ್ರಾವ್ಯ ಗಾನ ಮಾಧುರ್ಯ ಮನ ತುಂಬಿದವು. ರಂಗ ಶಿಕ್ಷಣ ಕಲಾವಿದರು ಅಭಿನಯಿಸಿದ ‘ರಾಮಧಾನ್ಯ’ ಕಾವ್ಯ ನಾಟಕ ಡಾ.ಎಂ.ಪುಷ್ಪಲತಾ, ಡಾ.ಸಾ.ಶಿ.ಮರುಳಯ್ಯ ಅವರು ಸಂಪಾದಿಸಿದ ‘ಕನಕದಾಸರ ಕಾವ್ಯ’ ಕೃತಿಯಿಂದ ರಾಮಧಾನ್ಯ ಚರಿತೆಯನ್ನು ಆಯ್ದುಕೊಂಡು ರಂಗರೂಪ ನೀಡಲಾಗಿದೆ. ಮೂರು ದಿನ ಅಭಿನಯಿಸಿದ ಮೂರು ಪ್ರಯೋಗಗಳು (ಸಾವು, ದ್ರೋಹ, ರಾಮಧಾನ್ಯ) ರಂಗ ಶಿಕ್ಷಣ ಕೇಂದ್ರದ ಸಾಧನೆಗೆ ಸಾಣೆಹಿಡಿದಂತಿದ್ದವು. ಅಚ್ಚುಕಟ್ಟಾದ ರಂಗ ಸಚ್ಚಿಕೆ, ವಸ್ತ್ರವಿನ್ಯಾಸ, ದ್ವನಿ ಸಂಯೋಜನೆಗಳು ಸಮರ್ಪಕವಾಗಿದ್ದವು. ವಿವಿಧ ಕ್ಷೇತ್ರಗಳ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಲ್ಲಿ ರಂಗಭೂಮಿ ಆಸಕ್ತಿಮೂಡಿಸಲು ನಾಟಕ ಅಕಾಡೆಮಿ ಸದಸ್ಯರಾದ ಆರ್.ವೆಂಕಟರಾಜು ಸಮ್ಮುಖದಲ್ಲಿ ವಿಚಾರ ಸಂಕಿರಣವನ್ನು ಪ್ರಿಯದರ್ಶಿನಿ ಪಿಯು ಕಾಲೇಜಿನಲ್ಲಿ ನಡೆಸಲಾಯಿತು. ನಾಲ್ಕುದಿನ ರಂಗ ಶಿಕ್ಷಣ ಕೇಂದ್ರನಾಟಕ ಪ್ರಯೋಗ, ವಿಚಾರ ಸಂಕಿರಣ, ಕಲಾ ಪ್ರದರ್ಶನ, ಭರತನಾಟ್ಯ, ರಂಗ ಗೌರವದೊಂದಿಗೆ ಮಾಗಿ ಉತ್ಸವ ಆಚರಿಸಿ ನೆಲಮಂಗಲ ನಾಗರಿಕರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.