ADVERTISEMENT

ಸಮುದ್ರದ ನೀರು ಶುದ್ಧೀಕರಣಕ್ಕೆ ಯೋಜನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 20:31 IST
Last Updated 19 ಮಾರ್ಚ್ 2018, 20:31 IST
ಜಯಚಂದ್ರ
ಜಯಚಂದ್ರ   

ಬೆಂಗಳೂರು: ಸಮುದ್ರದ ನೀರನ್ನು ಶುದ್ಧೀಕರಿಸಿ ಸಾರ್ವಜನಿಕರಿಗೆ ಪೂರೈಸುವ ಮಹತ್ವದ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

₹806 ಕೋಟಿ ವೆಚ್ಚದಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಈ ಘಟಕದಲ್ಲಿ ಪ್ರತಿನಿತ್ಯ 10 ಕೋಟಿ ಲೀಟರ್ ಶುದ್ಧೀಕರಿಸಬಹುದು. ಈ ಕುರಿತು ತಾಂತ್ರಿಕ, ಕಾರ್ಯಸಾಧ್ಯತಾ ವಿವರಗಳಿರುವ ಸಮಗ್ರ ಯೋಜನಾ ವರದಿಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಭೆ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ನಗರ ಪ್ರದೇಶಗಳ ಕುಡಿಯುವ ನೀರಿನ ಬೇಡಿಕೆ ಪೂರೈಸಲು ಪರ್ಯಾಯ ಮಾರ್ಗಗಳ ಹುಡುಕಾಟ ನಡೆದಿದೆ. ಇದರ ಭಾಗವಾಗಿ ಸಮುದ್ರದ ನೀರನ್ನು ಶುದ್ಧೀಕರಿಸಿ ಪೂರೈಸುವ ಚಿಂತನೆ ಸರ್ಕಾರದ್ದಾಗಿದೆ.

ADVERTISEMENT

21 ಸಮುದಾಯದವರಿಗೆ ಜಮೀನು

ಬೆಂಗಳೂರು ನಗರ ಪೂರ್ವ ತಾಲ್ಲೂಕಿನ ಬಿದರಹಳ್ಳಿಯಲ್ಲಿರುವ 203 ಎಕರೆ ಸರ್ಕಾರಿ ಜಮೀನಿನಲ್ಲಿ 21 ಎಕರೆ ಜಮೀನನ್ನು ವಿವಿಧ ಜಾತಿ ಸಂಘಟನೆಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಪೈಕಿ ಕರ್ನಾಟಕ ಬಲಿಜ ಸಂಘ, ತೊಗಟವೀರ ಕ್ಷತ್ರಿಯ, ರಾಜು ಕ್ಷತ್ರಿಯ, ಹಂದಿ ಜೋಗಿ, ಹೆಳವರು, ಶಿಳ್ಳೇಕ್ಯಾತ ಸಮುದಾಯದವರ ಸಂಘಗಳಿಗೆ ಭೂಮಿ ಹಂಚಿಕೆ ಮಾಡಲಾಗಿದೆ.

ಮಣಿಕಂಠನ್‌ ಪತ್ನಿಗೆ ಉದ್ಯೋಗ

ನಾಗರಹೊಳೆ ಹುಲಿ ರಕ್ಷಿತ ಅರಣ್ಯದಲ್ಲಿ ಒಂಟಿ ಸಲಗ ದಾಳಿಯಿಂದ ಮೃತಪಟ್ಟ ಐಎಫ್ಎಸ್ ಅಧಿಕಾರಿ ಮಣಿಕಂಠನ್ ಪತ್ನಿಗೆ ಎ ಗ್ರೂಪ್ ನೌಕರಿ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಅವರ ಮಕ್ಕಳು ಸ್ನಾತಕೋತ್ತರ ಪದವಿ ಪೂರ್ಣಗೊಳಿಸುವವರೆಗೆ ಎಲ್ಲ ವೆಚ್ಚ ಭರಿಸಲು ₹50 ಲಕ್ಷ ನಿಶ್ಚಿತ ನಿಧಿ ಇಡಲು ಸಭೆ ಒಪ್ಪಿಗೆ ಸೂಚಿಸಿದೆ.

ಸಂಪುಟ ಸಭೆಯಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳು:

*ಸೌರಶಕ್ತಿ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡುವ ‘ಸೌರನೀತಿ’ಗೆ ಸಮ್ಮತಿ.

*ಇಲ್ಲಿನ ಜಕ್ಕೂರು ಸಮೀಪ ₹62.40 ಕೋಟಿ ವೆಚ್ಚದಲ್ಲಿ ಪಂಚಾಯತ್ ಭವನ ನಿರ್ಮಾಣ ಮಾಡುವ ಯೋಜನೆಗೆ ಅನುಮೋದನೆ.

*ಕಲಬುರ್ಗಿ ಜಿಲ್ಲೆ ಜೇವರ್ಗಿ ಪಟ್ಟಣಕ್ಕೆ ₹12.50 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಯೋಜನೆಗೆ ಒಪ್ಪಿಗೆ.

*ತುಮಕೂರು ಜಿಲ್ಲಾ ಶಿರಾ ತಾಲ್ಲೂಕಿನ ಬಾರಂಗಿಯಲ್ಲಿ 20 ಎಕರೆ ಭೂಮಿಯಲ್ಲಿ ಶಿಥಲೀಕರಣ ಘಟಕ ಸ್ಥಾಪಿಸುವ ಯೋಜನೆಗೆ ಸಮ್ಮತಿ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭೂಮಿ ಹಸ್ತಾಂತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.