ADVERTISEMENT

ಮಣಿಪ್ರವಾಳ: ವಾಗ್ದೇವಿಯ ಮಣಿಹಾರ

ಮಂಜುನಾಥ ಕೊಳ್ಳೇಗಾಲ
Published 5 ಫೆಬ್ರುವರಿ 2020, 20:30 IST
Last Updated 5 ಫೆಬ್ರುವರಿ 2020, 20:30 IST
ವಸ್ತು ಪ್ರದರ್ಶನದಲ್ಲಿ ಇರಿಸಲಾಗಿದ್ದ ತಾಳೆಗರಿ
ವಸ್ತು ಪ್ರದರ್ಶನದಲ್ಲಿ ಇರಿಸಲಾಗಿದ್ದ ತಾಳೆಗರಿ   

‘ಸಾರ್ ಈಕೆ ನನ್ನ ವೈಫು. ನಿಮ್ಮ ಬ್ರಾಂಚಲ್ಲಿ ಅಕೌಂಟ್ ಓಪನ್ ಮಾಡಬೇಕಿತ್ತು.’
‘ನಮಸ್ಕಾರಮಂಡಿ, ಆರಾಮಾ?’
‘ಬನ್ನಿ ಶೆಟ್ರೇ. ನಮ್ದು ಚೊಕ್ರಾ ಮಂಡಿಯಿಂದ ವಾಪಸ್ ಬಂದ್ ಮೇಲೆ ನಿಮ್ದು ಲೆಕ್ಕಾ ಚುಕ್ತಾ-ಫೈಸಲ್ ಮಾಡಿ ಹೊಸಾ ಲೆಕ್ಕಾ ಓಪನ್ ಮಾಡ್ತೀನಿ.’

ಇಂತಹವುಗಳನ್ನು ಕೇಳುತ್ತಲೇ ಇರುತ್ತೇವೆ. ಕೆಲವು ಹೊಸಕಾಲದವು, ಕಿವಿಗೆ ಕಟು. ಇನ್ನು ಕೆಲವು ತಮ್ಮ ಬಹುಕಾಲದ ಬಳಕೆಯಿಂದ ಸಹಜವಾದ ಭಾಷಾಶೈಲಿಗಳೇ ಆಗಿಬಿಟ್ಟಿವೆ. ಈ ಬಗೆಯ ಮಿಶ್ರಣ ಪ್ರಪಂಚದ ಬಹುತೇಕ ಎಲ್ಲ ಬಹುಭಾಷಾಸಮುದಾಯಗಳಲ್ಲೂ ಕಾಲದಿಂದಲೂ ಚಾಲ್ತಿಯಲ್ಲಿದೆ.

ಶಿಷ್ಟಸಾಹಿತ್ಯವೂ ಈ ರೀತಿಯ ಮಿಶ್ರಣದಲ್ಲಿ ಹಿಂದೆ ಬಿದ್ದಿಲ್ಲ. ಕನ್ನಡವೂ ಸೇರಿದಂತೆ ಬಹುತೇಕ ಭಾರತೀಯಭಾಷೆಗಳಲ್ಲಿ ಪ್ರಾಚೀನಕಾಲದಿಂದ ಕಂಡುಬರುವ ಅತಿ ದೊಡ್ಡ ಮಿಶ್ರಣವೆಂದರೆ ಸಂಸ್ಕೃತದ್ದು. ಚೆಲುವಾದ ಕನ್ನಡದಲ್ಲಿ ಸಂಸ್ಕೃತದ ಹದವರಿತ ಮಿಶ್ರಣವು ‘ಕರಿಮಣಿಯ ಸರದೊಳ್ ಚೆಂಬವಳವಂ ಕೋದಂತೆ’ ಹೃದ್ಯವೆನ್ನುತ್ತಾನೆ ಕವಿ ಮುದ್ದಣ. ಈ ಚೆಂಬವಳವೇ ಸಂಸ್ಕೃತದ ಪ್ರವಾಳ (ಪ್ರವಾಳ > ಪವಳ) - ಕನ್ನಡದ 'ಮಣಿ'ಗೆ ಸಂಸ್ಕೃತದ 'ಪ್ರವಾಳ'. ಈ ರೀತಿಯ ಮಿಶ್ರಣಕ್ಕೆ ಮಣಿಪ್ರವಾಳವೆಂಬ ಮುದ್ದಾದ ಹೆಸರು ದೊರಕೊಂಡದ್ದು ಬಹುಶಃ ಮಲಯಾಳದಲ್ಲಿ - ಮಲಯಾಳಕ್ಕೆ ಸಂಸ್ಕೃತವನ್ನು ಬೆರೆಸಿ ಬರೆಯುವ ಭಾಷಾಶೈಲಿಯನ್ನು ಕುರಿತದ್ದು. ಆದರೆ ಕ್ರಮೇಣ ಈ ವ್ಯಾಪ್ತಿ ಹಿಗ್ಗಿ, ಸಂಸ್ಕೃತದ ಪ್ರವಾಳಕ್ಕೆ ಮಲಯಾಳದೊಡನೆ ತಮಿಳು ತೆಲುಗು ಮೊದಲಾದ ಇತರ ಹಲವು 'ಮಣಿ'ಗಳನ್ನು ಪೋಣಿಸುವ ರೂಢಿ ಬಂತು. ಹೀಗೆ ತಮಿಳು ತೆಲುಗು ಕನ್ನಡ ಮಲಯಾಳ ಮೊದಲಾದ ದೇಸೀ ಭಾಷೆಗಳನ್ನು ಸಂಸ್ಕೃತದೊಡನೆ ಹದವಾಗಿ ಕೋದ ನುಡಿಮಾಲಿಕೆಯಾಗಿ ಮಣಿಪ್ರವಾಳವೆಂಬ ಚೆಲುವಾದ ಭಾಷಾಶೈಲಿ ರೂಪುಗೊಂಡಿತು.

ADVERTISEMENT

ಇದರಲ್ಲಿ ಹಲವು ರೀತಿಯ ಪೋಣಿಸುವಿಕೆ ಸಾಧ್ಯ. ಅರ್ಥದ ಹರಿವು, ಒಟ್ಟಾರೆ ಭಾಷೆಯ ಚೆಲುವು ನಾದಗಳು ಕೆಡದಂತೆ ಹದವಾಗಿ ಪೋಣಿಸುವುದು ಮುಖ್ಯ. ಉದಾಹರಣೆಗೆ: ‘ಉನಕ್ಕಾಹ ಕಾದಿರುವೆ ರಾವಯ್ಯ ಮಮನಾಥ’ (ನಿನಗಾಗಿ ಕಾದಿರುವೆ ಬಾರಯ್ಯ ಎನ್ನೊಡೆಯ) - ಇದು ಮಣಿಪ್ರವಾಳದ ಶೈಲಿ. ಇದು ಸ್ವಾರಸ್ಯಕರವೇನೋ ಹೌದು, ಆದರೆ ನುಡಿಯ ಹದವರಿತರಿಗೆ ಮಾತ್ರ ಸಾಧ್ಯವಾಗುವಂಥದ್ದು. ವಿಶೇಷವಾಗಿ ದಕ್ಷಿಣಭಾರತದಲ್ಲಿ, ಅದರಲ್ಲೂ ಸಂಗೀತದಲ್ಲಿ ಈ ಶೈಲಿ ಬಹುಪ್ರಚಲಿತ. ಇಲ್ಲಿ ಈ ಮಣಿಪ್ರವಾಳದ ಮಾಲೆಗೆ ವಾಗ್ಗೇಯಕಾರರು ಸಂಗೀತದಿಂದಾಯ್ದ ಇನ್ನೆರಡು ವಿಶಿಷ್ಟವಾದ ಮಣಿಗಳನ್ನು ಕೋದರು - ಅದೆಂದರೆ, ಸ್ವರಾಕ್ಷರಗಳು (ಸರಿಗಮಪ ಇತ್ಯಾದಿ) ಮತ್ತು ಪಾಠಾಕ್ಷರಗಳು (ತಕಿಟ ತಝಣು ಇತ್ಯಾದಿ ಮೃದಂಗಧ್ವನಿಗಳು). ವಿವಿಧಭಾಷೆ ಮತ್ತು ಸಂಗೀತಾಕ್ಷರಗಳ ಚಿತ್ರವಿಚಿತ್ರ ಸಂಯೋಜನೆಯೊಂದಿಗೆ ವಾಗ್ಗೇಯಕಾರರು ಬಹುಸ್ವಾರಸ್ಯಕರವಾದ ರಚನೆಗಳನ್ನು ಇದರಲ್ಲಿ ಮಾಡಿದ್ದಾರೆ. ಮುತ್ತುಸ್ವಾಮಿದೀಕ್ಷಿತರ ಅಭಯಾಂಬಾವಿಭಕ್ತಿಕೃತಿಗಳಲ್ಲಿ ಕೊನೆಯದಾದ ‘ಶ್ರೀ ಅಭಯಾಂಬಾ’ ಮಣಿಪ್ರವಾಳಶೈಲಿಯಲ್ಲಿದೆ. ಸ್ವಾತಿತಿರುನಾಳ್ ಮತ್ತು ಮೈಸೂರಿನ ಹಲವು ವಾಗ್ಗೇಯಕಾರರೂ ಈ ಶೈಲಿಯನ್ನು ಸಾಕಷ್ಟು ಬಳಸಿದ್ದಾರೆ. ವಾದಿರಾಜರದ್ದೆನ್ನಲಾದ ಒಂದು ಕೃತಿ ಸಹ ಮಣಿಪ್ರವಾಳಶೈಲಿಯಲ್ಲಿದೆ - ಆದರಿದು ಮುದ್ರಣದಲ್ಲಿ ಲಭ್ಯವಿಲ್ಲ.

ಮಣಿಪ್ರವಾಳವು ಬಹುಭಾಷಾಸರಸ್ವತಿಯ ಚೆಲುವಾದ ಕಂಠಾಭರಣವೆಂದರೆ ಅತಿಶಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.