ADVERTISEMENT

ಮರೆಯಲಾಗದ ಬಂಧುಗಳು

ವೆಂಕಟೇಶ ಚಾಗಿ
Published 19 ಜನವರಿ 2019, 19:30 IST
Last Updated 19 ಜನವರಿ 2019, 19:30 IST
ಚಿತ್ರ: ಎಂ.ಎಸ್. ಶ್ರೀಕಂಠಮೂರ್ತಿ
ಚಿತ್ರ: ಎಂ.ಎಸ್. ಶ್ರೀಕಂಠಮೂರ್ತಿ   

ಆ ದಿನ ರಾತ್ರಿ ಮನೆಯ ಹಿತ್ತಿಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ. ಇಡೀ ರಾತ್ರಿ ಅದಾವುದೋ ಬೆಕ್ಕು ಬುಸುಗುಡುವ ಶಬ್ದ. ಆಗಾಗ ನಾಯಿ ಬೊಗಳುವ ಶಬ್ದ ಬೇರೆ. ರಾತ್ರಿ ಎದ್ದು ಆ ಬೆಕ್ಕು ಮತ್ತು ನಾಯಿ ಎರಡನ್ನೂ ಓಡಿಸೋಣ ಎಂದುಕೊಂಡರೆ ಮನದಲ್ಲಿ ಅದೇನೋ ಭಯ. ಆದರೂ ಧೈರ್ಯ ತಂದುಕೊಂಡು ಕೈಯಲ್ಲಿ ಟಾರ್ಚ್ ಹಾಗೂ ಮೂಲೆಯಲ್ಲಿದ್ದ ಕೋಲನ್ನು ಹಿಡಿದು ನಿಧಾನವಾಗಿ ಬಾಗಿಲು ತರೆದು ಹೊರಬಂದೆ.

ವಿದ್ಯುತ್ ಕೈಕೊಟ್ಟಿದ್ದರಿಂದ ಹೊರಗಿನ ಬಲ್ಬ್ ಉರಿಯುತ್ತಿರಲಿಲ್ಲ. ಧೈರ್ಯ ತಂದುಕೊಂಡು ಮನೆ ದೇವರ ನೂರು ಸಾರಿ ನೆನೆಯುತ್ತಾ ಕೈಯಲ್ಲಿ ಕೋಲನ್ನು ಬಿಗಿಯಾಗಿ ಹಿಡಿದು ಶಬ್ದ ಬರುತ್ತಿದ್ದ ಕಡೆಗೆ ಬೆಳಕು ಹರಿಸಿದೆ. ಅರೆ, ಆ ಬೆಕ್ಕು ನಮ್ಮದೇ! ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಇರುವ ಅದು ಎಲ್ಲರಿಗೂ ಅಚ್ಚುಮೆಚ್ಚು. ನಿನ್ನೆಯಿಂದ ಅದೇಕೋ ಕಾಣೆಯಾಗಿತ್ತು. ಗರ್ಭವತಿಯಾಗಿದ್ದ ಅದು ಯಾವುದೋ ಸ್ಥಳದಲ್ಲಿ ಮರಿ ಹಾಕಿರಬಹುದೆಂದು ಮನೆಯ ಸದಸ್ಯರೆಲ್ಲ ಅಂದುಕೊಂಡಿದ್ದೆವು.

ನಮ್ಮ ತಾಯಿಗೆ ಆ ಬೆಕ್ಕಿನ ಮೇಲೆ ನಮಗಿಂತಲೂ ವಿಶೇಷ ಪ್ರೀತಿ. ಪಾಪ ಬಾಣಂತಿ ಎನ್ನುತ್ತಾ ಒಂದು ಬಟ್ಟಲು ತುಂಬಾ ಹಾಲನ್ನು ಅದಕ್ಕೆ ಕುಡಿಯಲು ಕೊಡುತ್ತಿದ್ದಳು. ಮರಿ ಹಾಕುವ ಮುಂಚೆ ನಮಗೋ ತುಂಬಾ ಕುತೂಹಲ. ಮರಿ ಎಷ್ಟಿರಬಹುದು ಎಂಬುದನ್ನು ಅದರ ಹೊಟ್ಟೆ ಸವರುತ್ತಾ ಲೆಕ್ಕ ಹಾಕುತ್ತಿದ್ದೆವು. ಅದೂ ಕೂಡಾ ನಾವೇನೇ ಮಾಡಿದರೂ ಸುಮ್ಮನಿರುತ್ತಿತ್ತು. ಆಗಾಗ ಮೀಸೆ ಜಗ್ಗುವ, ಅದರ ನಿದ್ದೆ ಕೆಡಿಸುವ ತರಲೆ ಕೆಲಸಗಳನ್ನು ಮಾಡಿದರೂ ಮಿಯಾಂ ಎನ್ನುತ್ತಿತ್ತೇ ಹೊರತು ಕಡಿಯುವುದಾಗಲೀ ಪಂಜಿನಿಂದ ಹೊಡೆಯುವುದಾಗಲಿ ಮಾಡುತ್ತಿರಲಿಲ್ಲ. ಮರಿ ಹಾಕಿದ ಜಾಗಕ್ಕೆ ಅದು ಹೋದಾಗ ಅದರ ಮರಿಗಳೊಂದಿಗೆ ನಾವು ಆಟ ಆಡುತ್ತಿದ್ದೆವು. ಬಾಣಂತಿಗೆ ತೊಂದರೆಯಾಗಬಾರದೆಂದು ಮರಿಗಳಿದ್ದ ಜಾಗದಲ್ಲಿ ಹಾಲು–ಅನ್ನ ಕಲೆಸಿ ಒಂದು ಬಟ್ಟಲಲ್ಲಿ ಇಟ್ಟಾಗ ಅದು ಅಲ್ಲೇ ತಿಂದು ತನ್ನ ಮರಿಗಳೊಂದಿಗೆ ಇರುತ್ತಿತ್ತು.

ADVERTISEMENT

ಬುಸುಗುಡುತ್ತಿದ್ದ ಪಕ್ಕದಲ್ಲಿ ನಾಯಿ ಇತ್ತು. ಅದು ನಾವು ಪ್ರೀತಿಯಿಂದ ಸಾಕಿದ ಹೆಣ್ಣು ನಾಯಿ. ಅದು ಕೂಡ ಬೆಕ್ಕಿನಂತೆ ಮನೆಯವರೊಂದಿಗೆ ತುಂಬ ಸಲಿಗೆಯಿಂದಿದ್ದ ನಾಯಿ. ಬೆಕ್ಕು ಹಾಗೂ ನಾಯಿ ಅದೆಷ್ಟು ಅನ್ಯೋನ್ಯವಾಗಿದ್ದವೆಂದರೆ ಕೆಲವೊಮ್ಮೆ ಅಕ್ಕಪಕ್ಕದಲ್ಲೇ ಮಲಗಿರುತ್ತಿದ್ದವು. ನಮ್ಮ ತರಲೆ ಕೆಲಸಗಳಿಗೆ ಅವೆಂದೂ ಜಗಳವಾಡಿದ್ದನ್ನು ನಾವು ಕಂಡಿಲ್ಲ. ಮರಿಗಳಿದ್ದಾಗಿನಿಂದ ಒಟ್ಟಾಗಿ ಬೆಳೆದಿದ್ದ ಅವುಗಳ ಮಧ್ಯೆ ಅನ್ಯೋನ್ಯ ಸಂಬಂಧವಿತ್ತು. ನಾಯಿಗೆ ನಮ್ಮ ಕುಟುಂಬದ ಮೇಲೆ ಅದೆಂತಹ ಕೃತಜ್ಞತೆ ಇತ್ತೆಂದರೆ ನಾವು ಬೇರೆ ಊರಿಗೆ ಹೋಗುವಾಗ ನಾವು ಬಸ್ ಏರುವವರೆಗೂ ನಮ್ಮ ಜೊತೆ ಬರುತ್ತಿತ್ತು. ಕೆಲವು ಸಾರಿ ಕಂಡಕ್ಟರ್ ನಮ್ಮ ನಾಯಿಯನ್ನು ಓಡಿಸಿದ ಉದಾಹರಣೆಗಳೂ ಇವೆ.

ಎರಡೂ ಜೀವಿಗಳು ಈ ರಾತ್ರಿ ಅದೇಕೋ ಜಗಳವಾಡುತ್ತಿವೆಯಲ್ಲ ಎಂದೆನಿಸಿ ಬೆಕ್ಕು ಮತ್ತು ನಾಯಿ ಎರಡನ್ನೂ ಓಡಿಸಿ, ಮತ್ತೆ ಬಂದು ನಿದ್ದೆ ಹೋದೆ. ಒಂದೆರಡು ಗಂಟೆಗಳ ನಂತರ ಮತ್ತೆ ಅದೇ ಸದ್ದು. ಅವೆರಡನ್ನೂ ಎಲ್ಲಾದರೂ ದೂರ ಬಿಟ್ಟು ಬರಬೇಕೆಂದೆನಿಸಿತ್ತು. ಆದರೂ ಮನೆಯವರೆಲ್ಲಾ ಸುಮ್ಮನೇ ನಿದ್ದೆ ಹೋದರು.

ಬೆಳಿಗ್ಗೆ ಎದ್ದು ಅದೇ ಸ್ಥಳಕ್ಕೆ ಹೋದಾಗ ಅವೆರಡೂ ಅಲ್ಲೆ ಇದ್ದವು. ಇವಕ್ಕೇನೋ ತಲೆ ಕೆಟ್ಟಿರಬೇಕು ಎಂದುಕೊಂಡು ಆ ಸ್ಥಳದ ಹತ್ತಿರಕ್ಕೆ ಹೋದಾಗ ಯಾವುದೋ ಜಾತಿಯ ಹಾವು ಅರೆ ಜೀವವಾಗಿ ಬಿದ್ದಿತು. ಈಗ ಮನೆಯವರಿಗೆಲ್ಲಾ ಆ ಎರಡೂ ಜೀವಿಗಳ ರಾತ್ರಿ ಇಡೀ ಹೋರಾಟದ ಕಾರಣ ಅರ್ಥವಾಯಿತು. ಮನೆಯವರ ರಕ್ಷಣೆಗಾಗಿ ಬೆಕ್ಕು ಹಾಗೂ ನಾಯಿ ಸತತ ಎರಡು ದಿನಗಳ ಹೋರಾಟ ಮಾಡಿದ್ದವು. ಬೆಕ್ಕಿನ ಪಂಜಿನ ಹೊಡೆತಕ್ಕೆ ಹಾವು ಅರೆ ಜೀವವಾಗಿತ್ತು. ನಾಯಿ ಹಾವನ್ನು ಮನೆಯೊಳಗೆ ನುಸುಳದಂತೆ ತಡೆಹಿಡಿದಿತ್ತು. ಇವುಗಳ ಹೋರಾಟ ಕಂಡು ನಾನಂತೂ ಮೂಕವಿಸ್ಮಿತನಾದೆ. ಕೊನೆಗೆ ಆ ಹಾವಿಗೆ ನಾವೇ ಒಂದು ಗತಿ ಕಾಣಿಸಬೇಕಾಯಿತು.

ಮೂಕಪ್ರಾಣಿಗಳಲ್ಲಿ ಅದೆಂತಹ ಕೃತಜ್ಞತೆ ಇರುತ್ತದೆ ಎಂಬುದಕ್ಕೆ ಆ ಘಟನೆ ಸಾಕ್ಷಿಯಾಗಿತ್ತು. ಆದರೆ ಇಂದು ಆ ಎರಡೂ ಜೀವಿಗಳು ನಮ್ಮೊಂದಿಗಿಲ್ಲ‌. ನಮ್ಮ ನಾಯಿ ಒಮ್ಮೆ ಹೊರಗಡೆ ಹೋದಾಗ ಯಾವುದೋ ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡು ಬಂದಿತ್ತು. ಅದು ನಮಗೆ ಅರ್ಥವಾಗಿದ್ದು ಅದಕ್ಕೆ ಹುಚ್ಚು ಹೆಚ್ಚಾದಾಗಲೇ. ಆದರೆ ಅದು ಮನೆಯವರಿಗೆ, ಜನರಿಗೆ ತೊಂದರೆ ಕೊಟ್ಟಿರಲಿಲ್ಲ. ಆದರೆ ಅಕ್ಕ ಪಕ್ಕದ ಬೀದಿ ನಾಯಿಗಳೊಂದಿಗೆ ಅದರ ಜಗಳ ಮಿತಿ ಮೀರಿಹೋಯಿತು‌. ಒಮ್ಮೆಯಂತೂ ತುಂಬಾ ಆತ್ಮೀಯತೆಯಿಂದ ಇದ್ದ ನಮ್ಮ ಬೆಕ್ಕಿನೊಂದಿಗೆ ಜಗಳವಾಡಿ ಬೆಕ್ಕಿಗೆ ಅಂತ್ಯ ಕಾಣಿಸಿತ್ತು. ಜನರ ಒತ್ತಡಕ್ಕೆ ಮಣಿದು ದೂರ ಬಿಟ್ಟು ಬಂದಾಗ ಊರಿನ ಜನ ಅದಕ್ಕೆ ಅಂತ್ಯ ಕಾಣಿಸಿದರು. ಒಂದೇ ದಿನ ಆ ಎರಡೂ ಜೀವಗಳೂ ನಮ್ಮ ಕುಟುಂಬದಿಂದ ದೂರವಾದವು. ಮನೆಯೊಳಗೆ ಸೂತಕದ ಛಾಯೆ ಆವರಿಸಿತ್ತು. ಆ ಎರಡೂ ಜೀವಿಗಳು ನಮ್ಮ ಕುಟುಂಬ ಎಂದೂ ಮರೆಯದ ಬಂಧುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.