ADVERTISEMENT

ಮೆಹಂದಿಗೆ ಇನ್ನಷ್ಟು ರಂಗು

​ಪ್ರಜಾವಾಣಿ ವಾರ್ತೆ
Published 24 ಮೇ 2019, 19:57 IST
Last Updated 24 ಮೇ 2019, 19:57 IST
ಮೆಹೆಂದಿ
ಮೆಹೆಂದಿ   

ಮೆಹಂದಿ ಅಥವಾ ಮದರಂಗಿ ಎಂದರೆ ಹೆಂಗಳೆಯರಿಗೆ ಅಚ್ಚುಮೆಚ್ಚು. ಅದರ ರಂಗು ರಂಗಿನ ಚಿತ್ತಾರಕ್ಕೆ ಮನಸೋಲದವರಿಲ್ಲ. ಸೌಂದರ್ಯ ವೃದ್ಧಿಸುವ ಹಾಗೂ ಯಾವುದೇ ಹಾನಿಯಿಲ್ಲದೇ ತ್ವಚೆಯ ಮೇಲೆ ಆಕರ್ಷಕ ಚಿತ್ತಾರ ಮೂಡಿಸುವ ಮದರಂಗಿ ಅತ್ಯಂತ ಜನಪ್ರಿಯ ಹಾಗೂ ಸಾಂಪ್ರದಾಯಿಕ ವಿಧಾನ. ವಿವಾಹ, ಹಬ್ಬ, ಜಾತ್ರೆ ಸಮಯದಲ್ಲಿ ಮೆಹಂದಿ ಅದರ ಭಾಗವೇ ಆಗಿರುತ್ತದೆ. ನಿಮಗೂ ಮದರಂಗಿ ಎಂದರೆ ಬಹಳ ಇಷ್ಟವಾಗಿದ್ದು, ಪ್ರತಿ ಬಾರಿ ಹಚ್ಚಿಕೊಂಡ ಬಳಿಕ ಇದರ ಬಣ್ಣ ಗಾಢ, ಆಕರ್ಷಕ ಹಾಗೂ ಸ್ಪಷ್ಟವಾಗಿರಬೇಕು ಎನಿಸಿದರೆ ಈ ಲೇಖನದಲ್ಲಿ ಕೆಲವು ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ. ಇವು ಸರಳ ಹಾಗೂ ಸುರಕ್ಷಿತವಾಗಿದ್ದು ಮದರಂಗಿಯ ರಂಗನ್ನು ಇನ್ನಷ್ಟು ಗಾಢವಾಗಿಸಲು ನೆರವಾಗುತ್ತದೆ

ಹಚ್ಚುವ ವಿಧಾನ
ಮದರಂಗಿ ಹಚ್ಚಿಕೊಳ್ಳುವ ಮುನ್ನ ಹಸ್ತ ಹಾಗೂ ಮದರಂಗಿ ಹಚ್ಚಿಕೊಳ್ಳುವ ಭಾಗವನ್ನು ಚೆನ್ನಾಗಿ ತೊಳೆದು ಪೂರ್ಣವಾಗಿ ಒಣಗಿರುವಂತೆ ನೋಡಿಕೊಳ್ಳಿ. ಏಕೆಂದರೆ ನೀರಿನಿಂದ ತೋಯ್ದ ಹಸ್ತ ಹಾಗೂ ಬೆರಳುಗಳ ಚರ್ಮ ನೆರಿಗೆ ನೆರಿಗೆಯಾಗಿರುತ್ತದೆ. ಈ ಸಮಯದಲ್ಲಿ ಹಚ್ಚುವ ಮದರಂಗಿ ಅಕ್ಕ ಪಕ್ಕ ಹರಡಿಬಿಡುತ್ತದೆ. ಹೀಗಾಗಿ ಪೂರ್ಣವಾಗಿ ಒಣಗಿದ ಬಳಿಕ ಹಚ್ಚುವ ಮದರಂಗಿ ಚರ್ಮದಾಳಕ್ಕೆ ಇಳಿಯಲು ಹಾಗೂ ಹರಡದೇ ಇರಲು ಸಾಧ್ಯವಾಗುತ್ತದೆ.

ಮದರಂಗಿ ಹಚ್ಚಿದ ಬಳಿಕ ಬಣ್ಣ ಪೂರ್ಣವಾಗಿ ಚರ್ಮಕ್ಕೆ ಇಳಿಯಬೇಕಾದರೆ ಕೆಲವು ಗಂಟೆಗಳಾದರೂ ಅದನ್ನು ಒಣಗಲು ಬಿಡಬೇಕು. ಅದು ತನ್ನ ಬಣ್ಣವನ್ನು ನೈಸರ್ಗಿಕವಾಗಿಯೇ ಚರ್ಮಕ್ಕೆ ನೀಡುವುದು ಅತ್ಯಂತ ಸುರಕ್ಷಿತವಾಗಿರುತ್ತದೆ. ಆಗಲೇ ಈ ಬಣ್ಣ ಗಾಢವಾಗಿ, ಸ್ಪಷ್ಟವಾಗಿ ಮೂಡಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಹೆಚ್ಚು ಅಲ್ಲಾಡದೇ, ಅತ್ತಿತ್ತ ಹೋಗದೇ ಇರುವಷ್ಟು ಮುನ್ನೆಚ್ಚರಿಕೆಗಳನ್ನು ಮೊದಲೇ ವಹಿಸಬೇಕು.

ADVERTISEMENT

ಮೆಹಂದಿ ಬೇಗನೆ ಒಣಗಲಿ ಎಂದು ಕೆಲವರು ಫ್ಯಾನ್ ಗಾಳಿಗೆ ಕೈಯೊಡ್ಡುತ್ತಾರೆ. ಹಾಗೆ ಮಾಡಿದರೆ ಮೆಹಂದಿಯ ರಂಗು ಏರುವುದಿಲ್ಲ. ಅಲ್ಲದೇ ಬಿಸಿಗಾಳಿ ಸೂಸುವ ಹೀಟರ್, ಕೂದಲನ್ನು ಒಣಗಿಸುವ ಬ್ಲೋ ಡ್ರೈಯರ್ ಮೊದಲಾದವುಗಳಿಗೆ ಮದರಂಗಿ ಹಚ್ಚಿದ ಭಾಗ ಒಡ್ಡದಂತೆ ಜಾಗೃತೆ ವಹಿಸಿ. ಈ ಮೂಲಕ ಮದರಂಗಿಯನ್ನು ಒಣಗಿಸಿದರೆ ಬಣ್ಣ ಚರ್ಮಕ್ಕಿಳಿಯುವುದೇ ಇಲ್ಲ. ಅದು ಮತ್ತಷ್ಟು ಗಾಢವಾಗಿ ಮೂಡಬೇಕೆಂದರೆ ಸಕ್ಕರೆ ಮತ್ತು ನಿಂಬೆರಸವನ್ನು ಬಿಸಿಮಾಡಿಆಗಾಗ ಮದರಂಗಿಯ ಮೇಲೆ ಹಾಕುತ್ತಿರಿ.

ಕಾರ್ಯಕ್ರಮ ಇರುವ ಒಂದೆರಡು ದಿನಕ್ಕೂ ಮೊದಲೇ ಮೆಹಂದಿ ಹಚ್ಚಿ. ಒಂದು ವೇಳೆ ವಿವಾಹ ಮೊದಲಾದ ಪ್ರಮುಖ ಸಂದರ್ಭಕ್ಕಾಗಿ ಮದರಂಗಿ ಹಚ್ಚಿಕೊಳ್ಳುತ್ತಿದ್ದರೆ ಎರಡು ದಿನ ಮುಂಚಿತವಾಗಿ ಮದರಂಗಿ ಹಚ್ಚಿಕೊಳ್ಳುವ ಕಾರ್ಯಕ್ರಮವನ್ನಿರಿಸಿಕೊಳ್ಳಿ. ಸಮಯವನ್ನು ಪರಿಗಣಿಸಿ ಸೂಕ್ತ ಸಮಯದಲ್ಲಿ ಮದರಂಗಿ ಹಚ್ಚಿಕೊಂಡರೆ ಮದರಂಗಿಯ ನೈಸರ್ಗಿಕ ಹಾಗೂ ಪ್ರಖರ ವರ್ಣ ಅತ್ಯುತ್ತಮವಾಗಿ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.