ADVERTISEMENT

ಇನ್ನು ಹಣ್ಣುಗಳ ರಾಜನ ಘಮಲು

ಕಾಳಿದಾಸ ಮಂಗಳಭವನದಲ್ಲಿ ಮಾವಿನ ಮೇಳಕ್ಕೆ ಚಾಲನೆ, ಕಾರ್ಬೈಡ್ ಮುಕ್ತ ಹಣ್ಣು ಪೂರೈಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2018, 8:03 IST
Last Updated 17 ಮೇ 2018, 8:03 IST
ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಮಾವು
ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಮಾವು   

ಬಾಗಲಕೋಟೆ: ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು ಸಾಮಾನ್ಯವಾಗಿ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಅಚ್ಚು ಮೆಚ್ಚು. ವಿವಿಧ ತಳಿಯ ಮಾವಿನ ಹಣ್ಣನು ತಿಂದು, ರುಚಿಯನ್ನು ಆಸ್ವಾದಿಸಲು ಇಚ್ಚಿಸುವ ಮಾವು ಪ್ರಿಯರಿಗೆ ತೋಟಗಾರಿಕೆ ವಿಶ್ವವಿದ್ಯಾಲಯ ನಗರದಲ್ಲಿ ವೇದಿಕೆ ಒದಗಿಸಿದೆ.

ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿನ ಕಾಳಿದಾಸ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಸಂಜೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್‌ ಮಾವು ಮೇಳಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಮಾವು ಬೆಳೆಗಾರರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿ ಕಾರ್ಬೈಡ್ ಮುಕ್ತ ಮಾವಿನ ಹಣ್ಣುಗಳನ್ನು ಪೂರೈಸಲು ಮೇಳ ಸಹಕಾರಿಯಾಗಲಿದೆ’ ಎಂದರು.

ADVERTISEMENT

‘ಈ ಭಾಗದಲ್ಲಿ ಬೆಳೆಯುವ ಪ್ರಮುಖ ಮಾವಿನ ತಳಿಗಳ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ಕೆಲಸವನ್ನು ತೋಟಗಾರಿಕೆ ವಿಶ್ವವಿದ್ಯಾಲಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಾವು ಬೆಳೆಗಾರರನ್ನು ಪ್ರಚೋದಿಸಿ, ಗ್ರಾಹಕರಿಗೆ ಗುಣಮಟ್ಟದ ಮಾವುಗಳನ್ನು ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

‘ಮೇಳದಲ್ಲಿ ರೈತರಿಂದ ಬೆಳೆದ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮಾವಿನ ಹಣ್ಣುಗಳನ್ನು ಕೃತಕವಾಗಿ ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲಾಗುತ್ತಿದೆ. ಆದರೆ ಇಲ್ಲಿ ಶುದ್ಧ ರೀತಿಯಲ್ಲಿ ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ತಲುಪಿಸುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಯೋಜನ ಪಡೆದುಕೊಳ್ಳುವಂತೆ’ ಸಲಹೆ ನೀಡಿದರು.

‘ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಎಲ್. ಮಹೇಶ್ವರ ಮಾತನಾಡಿ, ಬೆಳೆಗಾರರು–ಬಳೆಕೆದಾರ
ರಿಗೆ ಮಾವಿನ ಲಭ್ಯತೆ ನೀಡಲು ಮೇಳ ಆಯೋಜಿಸಲಾಗಿದೆ. ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವ ರೈತರಿಗೆ ಹೊಸ ತಳಿಗಳ ಉತ್ಪಾದನೆಯ ಕುರಿತು ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ’ ಎಂದರು.

‘ಮೇಳದಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ ಈ ಭಾಗದಲ್ಲಿ ಬೆಳೆಯುವ ಮಾವಿನ ತಳಿಗಳ ಬಗ್ಗೆ ವಿಶೇಷವಾದ ಮಾಹಿತಿ ನೀಡಲಾಗುತ್ತದೆ. ಇದೇ 28, 29 ಹಾಗೂ 30ರಂದು 300ಕ್ಕೂ ಹೆಚ್ಚು ಮಾವು ಹಾಗೂ ಹಲಸಿನ ತಳಿಗಳ ಪ್ರದರ್ಶನವನ್ನು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದರು.

‘ನಮ್ಮ ವ್ಯಾಪ್ತಿಯಲ್ಲಿ ಈಗಾಗಲೇ 150ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ಸಂರಕ್ಷಿಸಲಾಗಿದೆ. ಆಸಕ್ತಿ ಇರುವ ರೈತರಿಗೆ ಬೇಕಾದ ತಳಿಗಳನ್ನು ನೀಡಲಾಗುತ್ತಿದೆ. ಬೇಡಿಕೆಗೆ ಲಭ್ಯತೆ ಇರುವ ತಳಿಗಳನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕ ಜಿ.ಗೌಡರ ಇದ್ದರು.

ಮೇಳದಲ್ಲಿ ಸುಮಾರು 40ಕ್ಕೂ ಹೆಚ್ಚು ಮಾವಿನ ತಳಿಗಳನ್ನು ಪ್ರದರ್ಶಿಸಲಾಗಿದೆ. ಸುಮಾರು 20ಕ್ಕೂ ಹೆಚ್ಚು ಮಾವಿನ ತಳಿಯ ಹಣ್ಣು ಕೊಳ್ಳಲು ಲಭ್ಯವಿದೆ.

ಜಿಲ್ಲೆಯ ಬಾದಾಮಿ, ಬಾಗಲಕೋಟೆ, ಮುಧೋಳ, ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಧಾರವಾಡ ಜಿಲ್ಲೆಗಳಿಂದ ರೈತರು ಮಾವುಗಳನ್ನು ಮಾರಾಟಕ್ಕೆ ತಂದಿದ್ದರು. ಅದರಲ್ಲಿ ಪ್ರಮುಖವಾಗಿ ಆಫೂಸ್, ಮಲಗೋವಾ, ಕೇಸರ್, ತೋತಾಪುರಿ, ಅಲ್ಫಾನ್ಸೋ, ಮಲ್ಲಿಕಾ ಸಿಂಧೂರ, ದಶೇರಿ ಸೇರಿದಂತೆ ವಿವಿಧ ತಳಿಗಳ ಮಾವಿನ ಹಣ್ಣುಗಳು ಗ್ರಾಹಕರ ಕಣ್ಮನ ಸೆಳೆದವು.

‘ಆಫೂಸ್ ಡಜನ್‌ಗೆ ₹ 20 ರಿಂದ ₹400 ಇದ್ದರೆ, ಸಿಂಧೂರ ₹ 100, ಮಲ್ಲಿಕಾ ₹400, ಕೇಸರ್ ₹100 ರಿಂದ ₹200ಗೆ ಲಭ್ಯವಿದ್ದು, ಇನ್ನೂ ತೋತಾಪುರಿ ಕೆ.ಜಿಗೆ ₹50 ಇದೆ. ಎಲ್ಲವೂ ಸಂಪೂರ್ಣವಾಗಿ ನೈಸರ್ಗಿಕವಾಗಿವೆ. ಯಾವುದೇ ರೀತಿಯ ರಾಸಾಯನಿಕ ಬಳಕೆ ಮಾಡಿಲ್ಲ’ ಎನ್ನುತ್ತಾರೆ ಮಾವು ಮಾರಾಟಗಾರ ಜಡ್ರಾಮಕುಂಟೆಯ ಬಸವರಾಜ ತೋಟದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.