ADVERTISEMENT

ಅಕ್ಬರ್‌ ಸಾಹೇಬರ ಶಿಷ್ಯೋತ್ತಮೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 19:30 IST
Last Updated 13 ಮಾರ್ಚ್ 2021, 19:30 IST
ಕಲೆ: ಗುರು ನಾವಳ್ಳಿ
ಕಲೆ: ಗುರು ನಾವಳ್ಳಿ   

ಉಸ್ತಾದ್‌ ಅಲಿ ಅಕ್ಬರ್‌ಖಾನ್ ಅವರ ಶಿಷ್ಯೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜರೆನಿಸಿದ ಪಿಟೀಲು ವಾದಕಿ, ವಿದುಷಿ ಶಿಶಿರಕೊನಾ ಧರ್‌ ಚೌಧರಿ ಮೊನ್ನೆಯಷ್ಟೇ ಬದುಕಿನ ಯಾತ್ರೆಯನ್ನು ಮುಗಿಸಿದವರು. ಅವರ ಬದುಕಿನ ಪುಟಗಳ ಕೆಲವು ಆಪ್ತ ನೆನಪುಗಳು ಇಲ್ಲಿವೆ...

ನಾನು, 1955ರಲ್ಲಿ ಅಲಿ ಅಕ್ಬರ್‌ ಖಾನ್ ಸಾಹೇಬರ ಬಳಿ ಶಿಷ್ಯವೃತ್ತಿ ಸ್ವೀಕರಿಸಿ, ಮುಂಬೈನಲ್ಲಿದ್ದಾಗ ಶಿಶಿರಕೊನಾ ಅವರನ್ನು ಮೊದಲು ಭೇಟಿಯಾಗಿದ್ದೆ. ಕೆಲವು ತಿಂಗಳ ಬಳಿಕ ಅವರು ಕೋಲ್ಕತ್ತಕ್ಕೆ ಹೋದರು. ಆ ಬಳಿಕ, ನಾನೂ ಕೋಲ್ಕತ್ತಕ್ಕೆ ಹೋದಾಗ ಮತ್ತೆ ಅವರ ಒಡನಾಟ ಸಿಕ್ಕಿತು. ನಾನು ಆಗಷ್ಟೆ ಶುರುವಾತ್‌ ಮಾಡಿದ್ದೆ. ಶಿಶಿರಕೊನಾ ಅವರು ಆಗಲೇ ಉತ್ತಮ ಸಂಗೀತಗಾರ್ತಿ ಎಂದು ಹೆಸರು ಮಾಡಿದ್ದರು. ಕಛೇರಿ ನೀಡುತ್ತಿದ್ದರು. ಇದಕ್ಕೂ ಮೊದಲು ಅವರು ಪಿಟೀಲು ವಾದಕ ಪಂ. ವಿ.ಜಿ. ಜೋಗ್‌ ಅವರಲ್ಲಿ ಶಿಷ್ಯವೃತ್ತಿ ಮಾಡಿ, ಆಮೇಲೆ ಖಾನ್‌ ಸಾಹೇಬರ ಬಳಿ ಬಂದಿದ್ದರು. ಹೀಗಾಗಿ, ಕೋಲ್ಕತ್ತದಲ್ಲಿ ಅವರಿಗೆ ದೊಡ್ಡ ಹೆಸರಿತ್ತು.

ಅವರು ಅಸ್ಸಾಂನವರು. ಅವರದು ದೊಡ್ಡ ಬಂಗಾಳಿ ಮನೆತನ. ಕೋಲ್ಕತ್ತಕ್ಕೆ ಬಂದ ಮೇಲೆ ಇನ್ನೂ ಹೆಸರು ಮಾಡಿದರು. ಅವರೂ ನಾನೂ ಹಲವೆಡೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ಜುಗಲ್‌ಬಂದಿ ನೀಡಿದ್ದೇವೆ. ಖಾನ್‌ ಸಾಹೇಬರು ಸಿನಿಮಾಕ್ಕೆ ಸಂಗೀತ ಕೊಡುತ್ತಿದ್ದಾಗ, ಆಗ ಇಬ್ಬರೂ ನುಡಿಸಿದ್ದೆವು.

ADVERTISEMENT

1956ರಲ್ಲಿ ಕೋಲ್ಕತ್ತದಲ್ಲಿ ಖಾನ್ ಸಾಹೇಬರ, ‘ಅಲಿ ಅಕ್ಬರ್‌ ಖಾನ್‌ ಕಾಲೇಜ್‌ ಆಫ್‌ ಮ್ಯೂಸಿಕ್‌’ ಆರಂಭವಾಯಿತು. ಅಲ್ಲಿ ಶಿಶಿರಕೊನಾ ಅವರು ಪಾಠ ಮಾಡುತ್ತಿದ್ದರು. ನಾನು ಕೂಡ ಬಹಳ ಸಣ್ಣ ಕ್ಲಾಸಿನವರಿಗೆ ಹೇಳಿಕೊಡುತ್ತಿದ್ದೆ. ಖಾನ್‌ ಸಾಹೇಬರು ಎಲ್ಲೆಲ್ಲಿ ಪಾಠ ಮಾಡುತ್ತಿದ್ದರೋ ಅಲ್ಲೆಲ್ಲ ನಮ್ಮನ್ನು ಬರಹೇಳುತ್ತಿದ್ದರು. ಅಲ್ಲೆಲ್ಲ ಕೂತು ಕಲಿಯುತ್ತಿದ್ದೆವು. ಮುಂದೆ ಅವರ ಮನೆಗೆ ಹೋಗಿಯೂ ಕಲಿಯುತ್ತಿದ್ದೆವು.

ಆ ಹೊತ್ತಿನಲ್ಲಿ ನಾನು ದುಃಸ್ಥಿತಿಯಲ್ಲಿದ್ದೆ. ಕೈಯಲ್ಲಿ ದುಡ್ಡಿರಲಿಲ್ಲ. ಕೆಟ್ಟ ಬಡತನ ಬೇರೆ. ಇಂಥ ಹೊತ್ತಿನಲ್ಲಿ ಅಲ್ಲಿನ ಅನ್ನದಾತರನ್ನು ನಾನು ಇವತ್ತಿಗೂ ಮರೆಯುವುದಿಲ್ಲ. ಪ್ರಭಾತ್‌ಕುಮಾರ್‌ ದಾಸ್‌ ಎಂಬ ಜ್ಯುವೆಲರ್‌ ನನಗೆ ಆಶ್ರಯ ಕೊಟ್ಟು, ಊಟ ಹಾಕಿದರು. ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಂಡರು. ಇವತ್ತಿಗೂ, ನನ್ನ ಕುಟುಂಬದವರು ಯಾರಾದರೂ ಇದ್ದರೆ ಅದು ಅವರೇ ಎಂದು ಹೇಳುತ್ತೇನೆ. ಆ ಮನೆಯ ಪಕ್ಕದಲ್ಲಿಯೇ ಶಿಶಿರಕೊನಾ ಅವರ ಮನೆಯಿತ್ತು. ಅವರು ಅಭ್ಯಾಸ ಮಾಡುತ್ತಿರುವುದೂ ನಮಗೆ ಕೇಳಿಸುತ್ತಿತ್ತು. ಅಲ್ಲಿ ಆರೇಳು ವರ್ಷ ಇದ್ದುದರಿಂದ, ಆಗಾಗ ಅವರ ಭೇಟಿ ಆಗುತ್ತಿತ್ತು.

ಈಗ ಸಂಗೀತ ದುನಿಯಾದಲ್ಲಿ ರಾಜಂ ಅವರು ಯಾವ ಸ್ಥಾನ ಗಳಿಸಿದ್ದಾರೋ ವಯಲಿನ್‌ನಲ್ಲಿ ಅಂಥದ್ದು ಅಥವಾ ಅದಕ್ಕೂ ದೊಡ್ಡ ಸ್ಥಾನ 50ರ ದಶಕದಲ್ಲಿ ಶಿಶಿರಕೊನಾ ಅವರಿಗಿತ್ತು. 60ರ ದಶಕದಲ್ಲಿಯೂ ಕೂಡ.

ಖಾನ್‌ ಸಾಹೇಬರು ಅವರಿಗೆ ಬಹಳ ವಾತ್ಸಲ್ಯದಿಂದ ಹೇಳಿಕೊಟ್ಟರು. ಆ ವಾತ್ಸಲ್ಯ, ಆ ಮಾರ್ದವ ಶಿಶಿರಕೊನಾ ಅವರ ಸಂಗೀತದಲ್ಲಿ ಹೊಮ್ಮುತ್ತಿತ್ತು. ಗುರುಗಳ ಸಂಗೀತದ ಪ್ರೀತಿ ಮತ್ತು ಅದನ್ನು ವಾದ್ಯದಲ್ಲಿ ಹೊಮ್ಮಿಸುವ ಶಿಷ್ಯೆಯ ರೀತಿ ಎರಡೂ ಅಮೋಘ. ಶಿಷ್ಯತನ ಬಹಳೇ ಮುಖ್ಯ. ಖಾನ್‌ ಸಾಹೇಬರು ಎಷ್ಟು ವಾತ್ಸಲ್ಯದಿಂದ ಹೇಳಿಕೊಟ್ಟರೋ ಅಷ್ಟೇ ಭಕ್ತಿಯಿಂದ, ಅಷ್ಟೇ ಪ್ರೀತಿಯಿಂದ ಶಿಶಿರಕೊನಾ ಅವರು ಗುರು ಕೊಟ್ಟಿದ್ದನ್ನು ತೆಗೆದುಕೊಂಡರು.

ಇಡೀ ದೇಶದಲ್ಲಿ ಅವರ ಹೆಸರು ಹಬ್ಬಿತ್ತು. ನಾನು ಕರ್ನಾಟಕಕ್ಕೆ ಬಂದಮೇಲೆ, 1987ರಲ್ಲಿ ಅವರನ್ನು ಮೈಸೂರು ದಸರಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಭವ್ಯ ಕಾರ್ಯಕ್ರಮ ನೀಡಿದರು. ಮುಂದೆ ಒಂದೆರಡು ಕಡೆ ನಾವು ಜುಗಲ್‌ಬಂದಿ ನೀಡಿದ್ದೆವು. ಆಮೇಲೆ ಸಂಪರ್ಕ ಇರಲಿಲ್ಲ. ನಾನು ಅಮೆರಿಕಕ್ಕೆ ಹೋದೆ.

ಆ ಹೊತ್ತಿಗೆ, ಖಾನ್‌ ಸಾಹೇಬರು ಶಿಶಿರಕೊನಾ ಅವರನ್ನೂ ಅಮೆರಿಕಕ್ಕೆ ಕರೆಸಿದರು. ಬಂಗಾಳಿ–ಇಂಗ್ಲಿಷ್‌ ಎರಡರಲ್ಲೂ ಪ್ರೌಢಿಮೆ ಇದ್ದ ಅವರಿಗೆ ಕೆಲಸವೊಂದನ್ನು ಒಪ್ಪಿಸಿದರು. ಖಾನ್‌ ಸಾಹೇಬರ ತಂದೆ ಐದಾರು ದೊಡ್ಡ ನೋಟ್‌ಪುಸ್ತಕಗಳಲ್ಲಿ ರಾಗಗಳು, ಗತ್ತುಗಳನ್ನು ಬಂಗಾಳಿಯಲ್ಲಿ ಕೈಯಲ್ಲಿ ಬರೆದಿದ್ದರು. ಅದು ಇಂಗ್ಲಿಷ್‌ಗೆ ಭಾಷಾಂತರವಾಗಿ, ಮುದ್ರಣವಾಗಬೇಕು ಎಂಬುದು ಖಾನ್‌ ಸಾಹೇಬರ ಇಚ್ಛೆಯಾಗಿತ್ತು. ಹೀಗಾಗಿ ಈ ಪ್ರಾಜೆಕ್ಟ್‌ ಅವರಿಗೆ ಒಪ್ಪಿಸಿದ್ದರು. ಅಂದಾಜು ಎರಡು ವರ್ಷದಲ್ಲಿ ಅವರು ಅದನ್ನು ಮುಗಿಸಿದರೆನಿಸುತ್ತದೆ. ಮುಂದೆ ಅವರು ಅದೇ ಸ್ಯಾನ್‌ಫ್ರಾನ್ಸಿಸ್ಕೊ ಸಮೀಪದಲ್ಲೇ ಒಂದು ಸಂಗೀತ ಶಾಲೆ ಆರಂಭಿಸಿದರು. ಆ ಶಾಲೆಯನ್ನು ಬಹಳೇ ಚೆನ್ನಾಗಿ ನಡೆಸಿದರು.

ಅಲ್ಲಿ ಖಾನ್‌ ಸಾಹೇಬರ ಹುಟ್ಟಿದ ಹಬ್ಬವನ್ನು ಬಹಳ ವಿಜೃಂಭಣೆಯಿಂದ ನಡೆಸುತ್ತಿದ್ದರು. ಆ ಕಾರ್ಯಕ್ರಮದಲ್ಲಿ ನಾನೂ ಸರೋದ್‌ ನುಡಿಸಿದ್ದೆ. ಹೋದ ವರ್ಷ ಕೋವಿಡ್‌ನಿಂದಾಗಿ ಹೋಗಲಾಗಲಿಲ್ಲ. ಅವರು ಭಾರತಕ್ಕೆ ಬಂದು, ದಿಲ್ಲಿಯಲ್ಲಿ ಮಗಳ ಮನೆಯಲ್ಲಿದ್ದರು.

ಮಂಗಳವಾರ ರಾತ್ರಿ ಅಮೆರಿಕದಿಂದ ನನ್ನ ಶಿಷ್ಯೆಯೊಬ್ಬರು ಫೋನ್‌ ಮಾಡಿ, ಶಿಶಿರಕೊನಾ ಹೋಗಿಬಿಟ್ಟರು ಎಂಬ ಸುದ್ದಿ ತಿಳಿಸಿದಾಗ ನನಗೆ ದೊಡ್ಡ ಆಘಾತವಾಯಿತು. ದೊಡ್ಡ ಕಲಾಕಾರರನ್ನು ನಾವು ಕಳೆದುಕೊಂಡಿದ್ದೇವೆ. ಅದರ ಅರಿವು ನಮ್ಮ ಕರ್ನಾಟಕದಲ್ಲೂ ಬರಬೇಕು. ಅವರ ಸಂಗೀತ ಕೇಳಬೇಕು ಆ ಮೂಲಕ ಅವರನ್ನು ನೆನಪಿಸಿಕೊಳ್ಳಬೇಕು. ಅವರ ಸಾವನ್ನು ನಾವು ಗುರುತಿಸಬೇಕು. ಸುಮ್ಮನೇ ಒಂದು ಶ್ರದ್ಧಾಂಜಲಿ ಎಂದು ಮಾಡಿದರೆ ಅದೊಂದು ಸಮಾರಂಭ ಆಗಿಬಿಡಬಹುದು ಅಷ್ಟೆ.

ನಮ್ಮ ಸಂಸ್ಕೃತಿಯಲ್ಲಿ ಇರುವುದೇ ಸಂಗೀತ. ಅದರಲ್ಲಿಯೂ ಆ ಕ್ಷೇತ್ರದ ದಿಗ್ಗಜರೇ ಹೋಗಿಬಿಟ್ಟರೆ ಅದು ಬಹಳ ದೊಡ್ಡ ಆಘಾತ ಮತ್ತು ನಷ್ಟ.

ನಿರೂಪಣೆ: ವಿಶಾಲಾಕ್ಷಿ ಅಕ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.