ADVERTISEMENT

ನುಡಿ ನಮನ | ಸಂಗೀತ ಪೂಜೆ ನಿಂತಿದೆ; ನಾದನದಿ ಸ್ತಬ್ಧವಾಗಿದೆ!

ಉಮಾ ಅನಂತ್
Published 25 ಏಪ್ರಿಲ್ 2021, 22:09 IST
Last Updated 25 ಏಪ್ರಿಲ್ 2021, 22:09 IST
ರಾಜನ್‌ ಮಿಶ್ರಾ
ರಾಜನ್‌ ಮಿಶ್ರಾ   

‘ಮ್ಯೂಸಿಕ್‌ ಈಸ್‌ ವರ್ಶಿಪ್‌ ಫಾರ್‌ ಅಸ್‌...’ ಸಹೋದರ ಪಂ. ಸಾಜನ್‌ ಮಿಶ್ರಾ ಅವರೊಂದಿಗೆ ಜುಗಲ್‌ಬಂದಿ ಕಛೇರಿ ಎಲ್ಲಿಯೇ ಯಾವ ಸಮಯದಲ್ಲೇ ನಡೆಯಲಿ, ಪಂ. ರಾಜನ್‌ ಮಿಶ್ರಾ ಕಛೇರಿ ಆರಂಭಿಸುತ್ತಿದ್ದುದೇ ಈ ವ್ಯಾಖ್ಯಾನದೊಂದಿಗೆ. ಹಿಂದೂಸ್ತಾನಿ ಸಂಗೀತದ ಬನಾರಸ್‌ ಘರಾಣೆಯಲ್ಲಿ ಹಾಡುತ್ತಿದ್ದ ವಿಶ್ವವಿಖ್ಯಾತ ಸಂಗೀತ ವಿದ್ವಾಂಸ ಪಂ. ರಾಜನ್‌ ಮಿಶ್ರಾ ಅವರಿಗೆ ಪ್ರತೀ ಕಛೇರಿಯೂ ಪೂಜೆಯೇ. ತಂಬೂರಿಯ ನಾದಕ್ಕೆ ತಮ್ಮ ಶಾರೀರವನ್ನು ಸೇರಿಸುತ್ತಿದ್ದುದು ಈ ಮಾತಿನ ಬಳಿಕವೇ.

ಅದು ರಾಗ ಬಿಹಾಗ್‌ ಆಗಿರಲಿ, ಬಿಲಾಸ್‌ಖಾನಿ ತೋಡಿಯೇ ಆಗಿರಲಿ ರಾಗ ವಿಸ್ತರಣೆ, ಮಂದ್ರದಿಂದ ಅತಿತಾರಕ ಸ್ಥಾಯಿಯವರೆಗೆ ಲೀಲಾಜಾಲವಾಗಿ ಸ್ವರಸಂಚಾರ ಮಾಡುತ್ತಿದ್ದ ರೀತಿ ಕೇಳುಗರಿಗೆ ಆಪ್ಯಾಯಮಾನವಾಗಿರುತ್ತಿತ್ತು. ಹೀಗಾಗಿ ಪಂ. ರಾಜನ್‌ ಮಿಶ್ರಾ ಸಹೋದರರ ಸಂಗೀತ ಕಛೇರಿ ಯಾವಾಗಲೂ ಸಂಗೀತರಸಿಕರಿಂದ ಕಿಕ್ಕಿರಿದು ತುಂಬಿರುತ್ತಿದ್ದುದು.

ವಾರಾಣಸಿಯಲ್ಲಿ, ತಾತ ಬಡೇ ರಾಮದಾಸ್‌ ಮಿಶ್ರಾ ಅವರಿಂದ ಸಂಗೀತದ ಆರಂಭಿಕ ಶಿಕ್ಷಣ ಪಡೆದರು. ತಂದೆ ಹನುಮಾನ್ ಪ್ರಸಾದ್‌ ಮಿಶ್ರಾ ಹಾಗೂ ಚಿಕ್ಕಪ್ಪ ಗೋಪಾಲ ಪ್ರಸಾದ್‌ ಮಿಶ್ರಾ ಅವರಿಂದ ಹೆಚ್ಚಿನ ಮಾರ್ಗದರ್ಶನ ಸಿಕ್ಕಿತು. ದೇಶದ ಉದ್ದಗಲಕ್ಕೂ ನಾದ ಪಯಣ ನಡೆಸಿದರು. 1977ರಲ್ಲಿ ದೆಹಲಿಗೆ ಹೋಗಿ ನೆಲೆಸಿದ ಸಹೋದರರು, ಹದಿಹರೆಯದಲ್ಲೇ ಹಲವಾರು ಕಛೇರಿ ನೀಡಿ ಪ್ರಸಿದ್ಧಿ ಪಡೆದವರು. 1978ರಲ್ಲಿ ಶ್ರೀಲಂಕಾದಲ್ಲಿ ಮೊದಲ ವಿದೇಶಿ ಕಛೇರಿ. ಅಲ್ಲಿಂದ ಮುಂದೆ ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲೆಂಡ್‌, ಅಮೆರಿಕ, ಇಂಗ್ಲೆಂಡ್, ರಷ್ಯಾ, ನೆದರ್ಲೆಂಡ್‌.. ಹೀಗೆ ಸುಮಾರು 60 ದೇಶಗಳಲ್ಲಿ ಜುಗಲ್‌ಬಂದಿ ಕಛೇರಿಗಳನ್ನು ನಡೆಸಿದ ಶ್ರೇಯಸ್ಸು ಅವರದು.

ADVERTISEMENT

ಸಂಗೀತದೊಂದಿಗೆ ವಿಶ್ವಪರ್ಯಟನೆ: ವಿಶ್ವಶಾಂತಿಗಾಗಿ 2014ರಲ್ಲಿ ವಿಶ್ವಮಟ್ಟದಲ್ಲಿ ಸಂಗೀತ ಯಾತ್ರೆ ನಡೆಸಿದ್ದು ಈ ಮೇರುಗಾಯಕರ ಸಾಧನೆಯ ಮತ್ತೊಂದು ಮೈಲಿಗಲ್ಲು. ‘ಭೈರವ್‌ ಸೆ ಭೈರವಿ ಥಕ್‌..’ ಶೀರ್ಷಿಕೆಯಲ್ಲಿ ನಡೆಸಿದ ಈ ಸಂಗೀತ ಯಾತ್ರೆ ತಮ್ಮ ಜನ್ಮಸ್ಥಳವಾದ ವಾರಾಣಸಿಯಿಂದ ಪ್ರಾರಂಭವಾಗಿ ಹಲವು ದೇಶಗಳಲ್ಲಿ ಸಂಚರಿಸಿತ್ತು.

‘ಸಂಗೀತವನ್ನು ವಿಶ್ವಮಟ್ಟದಲ್ಲಿ ಜನರೊಂದಿಗೆ ಬೆಸೆಯುವ ಪ್ರಯತ್ನ ಮಾಡುತ್ತಿದ್ದೇವೆ. ಎರಡು ಸುಮಧುರ ರಾಗಗಳ ನಡುವೆ ಬಂದು ಹೋಗುವ ಎಲ್ಲ ರಾಗಗಳನ್ನು ಹಾಡುವ ಮೂಲಕ ವಿಶ್ವಶಾಂತಿ ನೆಲೆಸುವಂತೆ ಮಾಡುವುದು ನಮ್ಮ ಉದ್ದೇಶ. ಇಂದಿನ ಪರಿಸ್ಥಿತಿಯಲ್ಲಿ ದೇಶ ವಿದೇಶದಾದ್ಯಂತ ನೆಲೆಸಿರುವ ಅಶಾಂತಿ, ಕೋಮು ಸಂಘರ್ಷ, ಮನುಷ್ಯ–ಮನುಷ್ಯರ ನಡುವಿನ ಬಾಂಧವ್ಯದ ಕೊರತೆ.. ಇವೆಲ್ಲವನ್ನು ದೂರ ಮಾಡಲು ಸಂಗೀತದಿಂದ ಖಂಡಿತ ಸಾಧ್ಯ ಎಂಬುದನ್ನು ನಾವು ಸಾಬೀತುಪಡಿಸುತ್ತಿದ್ದೇವೆ’ ಎಂದು ಆ ಸಂದರ್ಭದಲ್ಲಿ ಪಂ. ರಾಜನ್‌ ಮಿಶ್ರಾ ‘ಪ್ರಜಾವಾಣಿ’ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇದೇ ವರ್ಷ ನ್ಯೂಯಾರ್ಕ್‌ನಲ್ಲಿ ನಡೆದ ಅಹೋರಾತ್ರಿ ಸಂಗೀತೋತ್ಸವದಲ್ಲಿ ನಾಲ್ಕು ಗಂಟೆಗಳ ಕಾಲ ನಿರಂತರ ಸಂಗೀತ ಕಛೇರಿ ನೀಡಿದ್ದು ಕೂಡ ಸಂಗೀತಲೋಕದಲ್ಲಿ ದಾಖಲೆಯ ಭಾಷ್ಯ ಬರೆದಿತ್ತು.

ಚಿನ್ನಕ್ಕೆ ಒಡವೆಯ ಆಕಾರ ಕೊಡಬೇಕಾದರೆ ಬೆಂಕಿಯಲ್ಲಿ ಇಟ್ಟು ಕಾಯಿಸಿ ಕರಗಿಸಿ ನಾಜೂಕಾಗಿ ಮಾಡಬೇಕು. ಇದಕ್ಕೆ ಕಲೆಗಾರಿಕೆ, ಕೈಚಳಕ, ಕೌಶಲ್ಯದ ಅಗತ್ಯವಿದೆ. ಸಂಗೀತವೂ ಹಾಗೆ. ಸೃಜನಶೀಲತೆ, ಕಲಾತ್ಮಕತೆ, ಅಪಾರ ಪರಿಶ್ರಮ ವಹಿಸುವ ವಿದ್ಯೆ ಇದು ಎಂದು ಯಾವಾಗಲೂ ಹೇಳುತ್ತಿದ್ದರು.

ರಾಜನ್ ಮಿಶ್ರಾ, ಸಾಜನ್ ಮಿಶ್ರಾ

ಆಕರ್ಷಕ ಗಾಯನಶೈಲಿ: ಕಛೇರಿಗಳಲ್ಲಿ ರಾಗದ ವಿಲಂಬಿತ್‌ ಹಂತದಿಂದ ಮೆಲ್ಲಮೆಲ್ಲನೆ ಸ್ವರಗಳನ್ನು ಏರಿಸುತ್ತಾ, ಜಾರಿಸುತ್ತಾ ವಾದಿ ಸಂವಾದಿ ಸ್ವರಗಳೊಂದಿಗೆ ಆಟವಾಡುತ್ತಾ ಧೃತ್‌ಗೆ ಬರುತ್ತಿದ್ದ ರೀತಿ ಅನನ್ಯ. ಆಕರ್ಷಕವಾದ ಸ್ವರಗಳು, ತಾನ್‌ಗಳು, ಆಕಾರ್‌ಗಳು ಮೊಳಮೊಳಗುತ್ತಾ ಸಾಗಿದಾಗ ವಿಶೇಷವಾದ ಸಂಚಲನ ಉಂಟು ಮಾಡುತ್ತಿತ್ತು. ಗಾಯನದ ಉತ್ತುಂಗಕ್ಕೇರಿದ ಬಳಿಕ ಹದವರಿತ ರಾಗದ ಛಾಯೆಯನ್ನು ಹಾಗೇ ಸುಂದರವಾದ ‘ತರಾನ’ದೊಂದಿಗೆ ಮಿಳಿತಗೊಳಿಸುತ್ತಿದ್ದ ಪರಿ ಅನನ್ಯ.

ಡೆಹ್ರಾಡೂನ್‌ನಲ್ಲಿ ಸಂಗೀತ ಗುರುಕುಲ ಸ್ಥಾಪಿಸಿದ್ದರು. ಬೆಂಗಳೂರಿನ ಹಿಂದೂಸ್ತಾನಿ ಗಾಯಕ ಹೆಗ್ಗಾರ ಅನಂತ ಹೆಗಡೆ ಸೇರಿದಂತೆ ಹಲವಾರು ಶಿಷ್ಯಂದಿರ ಅಚ್ಚುಮೆಚ್ಚಿನ ‘ಗುರೂಜಿ’ ಆಗಿದ್ದರು. ಸುಮಾರು 300 ವರ್ಷಗಳ ಸಂಗೀತ ಪರಂಪರೆಯ ಕೊಂಡಿಯಂತಿದ್ದ, ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಪಂ. ರಾಜನ್‌ ಮಿಶ್ರಾ ಇನ್ನು ನೆನಪು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.