ADVERTISEMENT

‘ಸೊಗಸುಗಾ ಮೃದಂಗ ತಾಳಮು...’

ಉಮಾ ಅನಂತ್
Published 9 ಅಕ್ಟೋಬರ್ 2021, 19:30 IST
Last Updated 9 ಅಕ್ಟೋಬರ್ 2021, 19:30 IST
ಎ.ವಿ.ಆನಂದ್‌
ಎ.ವಿ.ಆನಂದ್‌   

ಲಯವಾದ್ಯ ಮೃದಂಗದ ಘನ ವಿದ್ವಾಂಸ ಎ.ವಿ. ಆನಂದ್ ಅವರು ನಾಲ್ಕು ತಲೆಮಾರಿನ ಸಂಗೀತ ದಿಗ್ಗಜರಿಗೆ ಮೃದಂಗ ಪಕ್ಕವಾದ್ಯ ಸಹಕಾರ ನೀಡಿದ ಅಗ್ಗಳಿಕೆ ಉಳ್ಳವರು. ಮೈಸೂರು ದಸರಾದಲ್ಲಿ ಈ ಬಾರಿ ‘ರಾಜ್ಯ ಸಂಗೀತ ವಿದ್ವಾನ್‌’ ಪುರಸ್ಕಾರಕ್ಕೆ ಭಾಜನರಾದ ಆನಂದ್‌ ತಮ್ಮ ನಾದ ತಪಸ್ಸಿನ ಹರವನ್ನು ‘ಭಾನುವಾರದ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

**
‘ಸೊಗಸುಗಾ ಮೃದಂಗ ತಾಳಮು...’ ಎಂದು ಸಂತ ತ್ಯಾಗರಾಜರು ಅವನದ್ಧ ವಾದ್ಯ ಮೃದಂಗ ನಾದ ಕುರಿತಾಗಿ ಸೊಗಸಾದ ಕೃತಿಯೊಂದನ್ನು ರಚಿಸಿದ್ದಾರೆ. ಇಪ್ಪತ್ತೆರಡನೆ ಮೇಳಕರ್ತ ರಾಗ ‘ಖರಹರಪ್ರಿಯ’ದಲ್ಲಿ ಜನ್ಯವಾಗಿರುವ ‘ಶ್ರೀರಂಜಿನಿ’ ರಾಗದಲ್ಲಿ ರಚಿಸಿದ ಈ ಕೃತಿ ‘ಮೃದಂಗ ಲಯ ಇದ್ದರೇ ಸಂಗೀತ ಸೊಗಸು’ ಎಂಬುದನ್ನು ಧ್ವನಿಸುತ್ತದೆ. ಈ ಮಾತನ್ನೇ ಮುಂದುವರಿಸಿ ‘ಮೃದಂಗ ಸಹಕಾರಕ್ಕೆ ವಿದ್ವಾನ್‌ ಎ.ವಿ. ಆನಂದ್‌ ಅವರು ಇದ್ದರೇ ಸಂಗೀತ ಕಛೇರಿ ಸೊಗಸು’ ಎಂಬಷ್ಟು ಲಯವಾದ್ಯಕ್ಕೆ ಅನ್ವರ್ಥನಾಮವಾಗಿದ್ದಾರೆ ಈ ಹಿರಿಯ ಮೃದಂಗ ವಾದಕ. ಹೀಗಾಗಿಯೇ ಸಂಗೀತ ದಿಗ್ಗಜರಾಗಿದ್ದ ಪಿಟೀಲು ಚೌಡಯ್ಯ, ಚೆಂಬೈ ವೈದ್ಯನಾಥ ಭಾಗವತರ್‌, ಕೊಳಲು ಮಾಂತ್ರಿಕ ಟಿ.ಆರ್‌. ಮಹಾಲಿಂಗಂ, ವೈಣಿಕ ಎಚ್‌.ಎಸ್‌. ದೊರೆಸ್ವಾಮಿ ಅಯ್ಯಂಗಾರ್‌, ಚಿಟ್ಟಿಬಾಬು, ಡಿ.ಕೆ. ಪಟ್ಟಮ್ಮಾಳ್‌, ಎಂ.ಎಲ್‌ ವಸಂತಕುಮಾರಿ, ಬಾಲಮುರಳಿಕೃಷ್ಣ... ಮುಂತಾದವರು ತಮ್ಮ ಕಛೇರಿಗಳಿಗೆ ಆನಂದ್‌ ಅವರ ಮೃದಂಗ ಸಹಕಾರವನ್ನೇ ಬಯಸುತ್ತಿದ್ದರು.

ಸುಮಾರು ನಾಲ್ಕು ತಲೆಮಾರುಗಳ ವಿದ್ವಾಂಸರ ಗಾಯನ ವಾದನಗಳಿಗೆ ಮೃದಂಗ ಸಹಕಾರಿ ನೀಡಿ ಬೆರಗುಗೊಳಿಸಿದ ಅಗ್ಗಳಿಕೆ ಇರುವ ಈ ಹಿರಿಯ ಕಲಾವಿದರ ತನಿಯಾವರ್ತನಕ್ಕೆ ಕಿವಿಯಾನಿಸಿ ಕೇಳುವವರ ಸಂಖ್ಯೆ ಅಸಂಖ್ಯವಾಗಿತ್ತು. ಲಯವಾದ್ಯದಲ್ಲಿ ಅಸಾಧಾರಣ ಕೈಚಳಕ, ತಾಳದಲ್ಲಿ ಹಿಡಿತ, ತನಿಯಲ್ಲಿ ಕೌಶಲ, ನುಡಿಸಾಣಿಕೆಯಲ್ಲಿ ಬೆರಗು, ಕೇಳ್ಮೆಗೆ ಸೊಬಗು, ‘ಮನೋಧರ್ಮ’ದಲ್ಲಿ ಸರಿಸಾಟಿ ಇಲ್ಲದ ಅದ್ಭುತ ಕಲಾವಿದರಾಗಿ ಬೆಳೆದವರು ಸದ್ಯ ಎಂಬತ್ತಾರರ ಹರೆಯದ ವಿದ್ವಾನ್‌ ಆನಂದ್‌.

ADVERTISEMENT

1950ರ ದಶಕದಲ್ಲಿ ನಡೆಯುತ್ತಿದ್ದ ಬಹುತೇಕ ಎಲ್ಲ ದಿಗ್ಗಜರ ಕಛೇರಿಗಳಿಗೆ ಆನಂದ್ ಅವರೇ ಮೃದಂಗದ ಕೇಂದ್ರಬಿಂದು. ಪಿಟೀಲು ಚೌಡಯ್ಯನವರಿಗೆ ತಮ್ಮ ಹನ್ನೊಂದನೇ ವಯಸ್ಸಿನಲ್ಲೇ ಮೃದಂಗ ಸಾಥಿ ನೀಡಿದ ಆನಂದ್‌ ಅವರನ್ನು ಈ ಕಛೇರಿಯನ್ನೊಮ್ಮೆ ಮೆಲುಕು ಹಾಕಿಕೊಳ್ಳಿ ಎಂದಾಗ ಹೇಳಿದ್ದಿಷ್ಟು.

‘ಅದು ಅನಂತ ಚತುದರ್ಶಿಯ ದಿನ. ನಮ್ಮ ಮನೆಯಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿತ್ತು. ಅಂದು ಆಕಸ್ಮಿಕವಾಗಿ ಪಿಟೀಲು ಚೌಡಯ್ಯನವರು ನಮ್ಮ ಮನೆಗೆ ಬಂದರು. ಪೂಜೆಯ ನಂತರ ಸಂಗೀತ ಸೇವೆ ಇತ್ತು. ಚೌಡಯ್ಯನವರು ಪಿಟೀಲು ಕೈಗೆತ್ತಿಕೊಂಡರು. ಅವರಿಗೆ ಮೃದಂಗ ನುಡಿಸಲು ಸದಾ ಮೃದಂಗ ವಾದಕ ಎಂ.ಎಲ್‌. ವೀರಭದ್ರಯ್ಯ ಅವರೇ ಬೇಕು. ಆದರೆ ಈ ಕಛೇರಿಯಲ್ಲಿ ಅವರಿಲ್ಲದ ಕಾರಣ ಆನಂದನೇ ನುಡಿಸಲಿ ಎಂಬ ಅಭಿಪ್ರಾಯ ಬಂತು. ಹಾಗೆ ನಾನೇ ಸುಮಾರು ಒಂದೂವರೆ ಗಂಟೆ ಪಿಟೀಲು ಕಛೇರಿಗೆ ಪಕ್ಕವಾದ್ಯ ನುಡಿಸಿ ಚೌಡಯ್ಯನವರಿಂದ ಬೆನ್ನು ತಟ್ಟಿಸಿಕೊಂಡೆ. ಈ ಸೌಭಾಗ್ಯ ನನ್ನದಾದ ನಂತರ ದಿಗ್ಗಜರಿಗೆಲ್ಲ ಮೃದಂಗ ನುಡಿಸುವ ಅವಕಾಶ ತಾನಾಗಿ ಒದಗಿ ಬಂತು.’

ಶಾಸ್ತ್ರೀಯ ಸಂಗೀತದಲ್ಲಿ ಘಟಾನುಘಟಿಗಳಾದ ಚೆಂಬೈ, ಟಿ. ಆರ್. ಮಹಾಲಿಂಗಂ, ಡಿ.ಕೆ. ಪಟ್ಟಮ್ಮಾಳ್‌, ಎಂಎಲ್‌ವಿ ಅವರಂಥವರು ಆನಂದ್‌ ಅವರ ನುಡಿಸಾಣಿಕೆಯನ್ನು ಕೊಂಡಾಡುವವರೇ ಆಗಿದ್ದರು. ಇವರ ಪಕ್ಕವಾದ್ಯವೇ ಬೇಕು ಎನ್ನುವಷ್ಟು ಬೇಡಿಕೆಯನ್ನೂ ಇಡುತ್ತಿದ್ದರು. ಇದು ಆನಂದ್ ಅವರ ನುಡಿಸಾಣಿಕೆಯ ಹೆಚ್ಚುಗಾರಿಕೆಯೂ ಆಯಿತು.

ಮುಂದೆ 1980ರ ದಶಕದಲ್ಲಿ ಆನಂದ್, ವೀಣೆ ದೊರೆಸ್ವಾಮಿ ಅಯ್ಯಂಗಾರ್‌ ಅವರೊಡಗೂಡಿ ಅಮೆರಿಕ, ಇಂಗ್ಲೆಂಡ್‌, ಸಿಂಗಾಪುರ, ಮಲೇಶ್ಯಾ ಮುಂತಾದ ದೇಶಗಳಿಗೆ ಹೋಗಿ ಸರಣಿ ಕಛೇರಿ ನೀಡಿದರು. ಜೊತೆಗೆ ಮೃದಂಗದ ಬಗ್ಗೆ ಪ್ರಾತ್ಯಕ್ಷಿಕೆ, ಉಪನ್ಯಾಸಗಳನ್ನೂ ನೀಡಿ ವಿದೇಶದಲ್ಲೂ ಲಯವಾದ್ಯದ ರುಚಿ ವರ್ಧನೆ ಮಾಡಿದರು.

ಸ್ವಾತಂತ್ರ ಪೂರ್ವದಿಂದಲೂ ಮೃದಂಗನಾದಕ್ಕೆ ಆತುಕೊಂಡು ಇಂದಿನವರೆಗೂ ಲಯವಾದ್ಯದಲ್ಲಿ ತನ್ಮಯತೆ, ತಪಸ್ಸು ಮಾಡಿಕೊಂಡು ಬಂದಿರುವ ಆನಂದ್‌, ತಾವು ಕಲಿತ ಗುರು–ಶಿಷ್ಯ ಪರಂಪರೆಯ ಕ್ರಮಕ್ಕೂ ಇಂದಿನ ಸಂಗೀತ ಕಲಿಕಾ ಪದ್ಧತಿ ಎರಡನ್ನೂ ಸನಿಹದಿಂದ ಕಂಡವರು.

‘ಅಂದಿನ ಪಾಠ ಕ್ರಮದಲ್ಲಿ ಬಹಳ ಕಟ್ಟುನಿಟ್ಟು ಇತ್ತು. ಅಂದಿನ ಪಾಠವನ್ನು ಮರುದಿನ ಯಥಾವತ್‌ ಒಪ್ಪಿಸಲೇ ಬೇಕಿತ್ತು. ದಿನಕ್ಕೆ ಏಳೆಂಟು ಗಂಟೆ ನಿರಂತರ ಅಭ್ಯಾಸ ನಡೆಯುತ್ತಿತ್ತು. ಹೀಗಾಗಿ ವಾದ್ಯದಲ್ಲಿ, ನುಡಿಸಾಣಿಕೆಯಲ್ಲಿ ಪಕ್ವವಾಗಲು ಸಾಧ್ಯವಾಗುತ್ತಿತ್ತು. ಇಂದು ಮಕ್ಕಳಿಗೆ ಬೇರೆ ಬೇರೆ ಆಕರ್ಷಣೆ ಇದೆ, ಸಂಗೀತ ಜಗತ್ತು ಬದಲಾಗಿದೆ. ಮಕ್ಕಳಲ್ಲೂ ಸಂಗೀತ ತಪಸ್ಸು ಮಾಡುವ ಮನೋಭಾವ ಇಲ್ಲ, ಸಮಯವೂ ಇಲ್ಲ. ಪಾಠ ಹೇಳಿಕೊಡುವ ಹೆಚ್ಚಿನ ಗುರುಗಳ‌ಲ್ಲೂ ಬದ್ಧತೆ ಕಡಿಮೆಯಾಗಿದೆ’ ಎಂಬ ಕೊರಗು ಆನಂದ್‌ ಅವರದು.

ಶಾಸ್ತ್ರೀಯ ಸಂಗೀತದಲ್ಲಿ ಗಾಯನವೇ ಇರಲಿ, ವಾದನವೇ ಇರಲಿ ಒಬ್ಬೊಬ್ಬ ಕಲಾವಿದರದ್ದು ಒಂದೊಂದು ರೀತಿಯ ಮನೋಧರ್ಮ. ಇವರೆಲ್ಲರನ್ನೂ ಹೊಂದಾಣಿಕೆ ಮಾಡಿಕೊಂಡು ಮೃದಂಗ ನುಡಿಸೋದು ಹೇಗೆ?

ಆನಂದ್‌ ಹೀಗೆ ಹೇಳುತ್ತಾರೆ...
‘ನಮ್ಮ ಸಂಸ್ಕಾರ, ಸಾಧನೆ ಮೇಲೆ ಮನೋಧರ್ಮ ಅಡಗಿದೆ. ಸಂಗೀತದಲ್ಲಿ ‘ಸಂಗತಿ’ಗಳನ್ನು ಎಲ್ಲರೂ ಒಂದೇ ತರ ಹಾಡುವುದಿಲ್ಲ. ಕೀರ್ತನೆಯಲ್ಲಿ ಸಾಹಿತ್ಯ ಒಂದೇ ಆದರೂ ಹಾಡುವ ಶೈಲಿ ಬೇರೆ ಬೇರೆ. ಇವರನ್ನು ಅನುಸರಿಸಿ ನುಡಿಸುವ ಜಾಣ್ಮೆ ಪಕ್ಕವಾದ್ಯಗಾರರಿಗೆ ಇದ್ದರೆ ಆತ ಗೆದ್ದಂತೆಯೇ. ಭಾವಕ್ಕೆ ಅನುಗುಣವಾಗಿ ಲಯವನ್ನು ಕಾಪಾಡಿಕೊಳ್ಳಬೇಕಾದದ್ದು ಕಲಾವಿದರ ಕರ್ತವ್ಯ ಹಾಗೂ ಧರ್ಮ. ತನಿಯಾವರ್ತನದಲ್ಲಿ ತನಿ ಬಿಟ್ಟಾಗ ರಂಜನೀಯವಾಗಿ ನುಡಿಸುವ ಕಲೆಗಾರಿಕೆಯೂ ಇರಬೇಕು. ಆಗ ಒಬ್ಬ ಪಕ್ಕವಾದ್ಯಗಾರ ಪರಿಪೂರ್ಣ ಎನಿಸುತ್ತಾನೆ’.

ಲಯವಾದ್ಯಕ್ಕಾಗಿ ಗಾನ ಕಲಾಭೂಷಣ, ಸಂಗೀತ ಕಲಾರತ್ನ, ಕರ್ನಾಟಕ ಕಲಾಶ್ರೀ, ಲಯಕಲಾ ನಿಪುಣ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿದ ಆನಂದ್ ಇದೀಗ ‘ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ’ಯ ಕಿರೀಟ ಏರಿಸಿಕೊಂಡಿದ್ದಾರೆ.

‘ಪ್ರಶಸ್ತಿ ಬಹಳ ಖುಷಿ ತಂದಿದೆ. ಎಷ್ಟೋ ಅರ್ಹರಿಗೆ ಇನ್ನೂ ಈ ಸೌಭಾಗ್ಯ ಒದಗಿ ಬಂದಿಲ್ಲ. ನಾನು 50ರ ದಶಕದಿಂದಲೂ ಖ್ಯಾತನಾಮರಿಗೆ ನುಡಿಸಿದರೂ ಈಗ ಪುರಸ್ಕರಿಸಲಾಗುತ್ತಿದೆ. ನಾನು ಯಾವತ್ತೂ ಪ್ರಶಸ್ತಿಯನ್ನು ಅರಸಿಕೊಂಡು ಹೋಗಿಲ್ಲ. ಈಗ ಅದೇ ನನ್ನನ್ನು ಹುಡುಕಿಕೊಂಡು ಬಂದಿರುವುದನ್ನು ಸಂತೋಷವಾಗಿ ಸ್ವೀಕರಿಸುತ್ತೇನೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.