ADVERTISEMENT

‘ತಂಬೂರಿ’ ನಾದದಲ್ಲಿ ಅಶ್ವಥ್‌ ಗಾನ, ಕುವೆಂಪು ಗೀತನಮನ

‘ಪ್ರಜಾವಾಣಿ’ ಫೇಸ್‌ಬುಕ್‌ ಸಂಗೀತ ಕಾರ್ಯಕ್ರಮ

ಉಮಾ ಅನಂತ್
Published 31 ಡಿಸೆಂಬರ್ 2020, 19:32 IST
Last Updated 31 ಡಿಸೆಂಬರ್ 2020, 19:32 IST
ಅಶ್ವಥ್‌ ನೆನಪಿನ ಗೀತಗಾಯನ ‘ತಂಬೂರಿ’ ತಂಡ
ಅಶ್ವಥ್‌ ನೆನಪಿನ ಗೀತಗಾಯನ ‘ತಂಬೂರಿ’ ತಂಡ   

ಸುಗಮಸಂಗೀತ ಲೋಕಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡ ಗಾಯಕ, ಸಂಗೀತ ಸಂಯೋಜಕ ಸಿ. ಅಶ್ವಥ್‌ ಅವರ ನೆನಪಿನಲ್ಲಿ ‘ಪ್ರಜಾವಾಣಿ’ ಫೇಸ್‌ಬುಕ್‌ ಸಂಗೀತ ಕಾರ್ಯಕ್ರಮ ಬುಧವಾರ (ಡಿ.30) ಸಂಜೆ ಕೇಳುಗರಿಗೆ ಲಘುಸಂಗೀತದ ರಸಾಸ್ವಾದನೆ ನೀಡಿತು. ‘ತಂಬೂರಿ’ ಶೀರ್ಷಿಕೆಯಡಿ ಅಶ್ವಥ್‌ ಸಂಯೋಜಿಸಿ ಹಾಡಿ ಜನಪ್ರಿಯಗೊಳಿಸಿದ್ದ ಭಾವಗೀತೆಗಳನ್ನು ಗಾಯಕರಾದ ಎಂ.ಡಿ. ಪಲ್ಲವಿ, ಸುಪ್ರಿಯಾ ರಘುನಂದನ್, ಮಂಗಳಾ ರವಿ, ಸುನೀತಾ, ವಿಜಯ್ ನಾಡಿಗ್‌, ವ್ಯಾಸರಾಜ್ ಮನದುಂಬಿ ಹಾಡಿದರು.

‘ತನುವ ತೋಟವ ಮಾಡಿ ಮನವ ಗುದ್ದಲಿ ಮಾಡಿ..’ ಗೀತೆ ಕಾರ್ಯಕ್ರಮಕ್ಕೆ ಉತ್ತಮ ಮುನ್ನುಡಿ ಬರೆಯಿತು. ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶ ಮೂರ್ತಿ ಅವರು, ಸುಗಮ ಸಂಗೀತ, ಧಾರಾವಾಹಿ, ಸಿನಿಮಾ, ರಂಗಭೂಮಿ ಸಂಗೀತಕ್ಕೆ ಅಶ್ವಥ್‌ ನೀಡಿದ ಕೊಡುಗೆಯನ್ನು ಅರ್ಥಪೂರ್ಣವಾಗಿ ಸ್ಮರಿಸಿದರು. ‘ಅಶ್ವಥ್‌ ಮಹಾನ್‌ ಗಾಯಕರು ಮಾತ್ರವಲ್ಲ, ತಮ್ಮೊಳಗೆ–ಹೊರಗೆ ನ್ಯಾಯದಕ್ಕುವ ರೀತಿಯಲ್ಲಿ ಕಲಾಪೋಷಣೆ ಮಾಡಿದವರು’ ಎಂದರು.

ಅಶ್ವಥ್ ರಾಗಸಂಯೋಜನೆಯ ‘ಮುಕ್ತ ಮುಕ್ತ’ ಧಾರಾವಾಹಿ ಶೀರ್ಷಿಕೆ ಗೀತೆ ಪ್ರಮುಖ ಆಕರ್ಷಣೆಯಾಯಿತು. ‘ಸೋರುತಿಹುದು ಮನೆಯ ಮಾಳಿಗೆ’ ಗೀತೆಯನ್ನು ಅಶ್ವಥ್‌ ಅವರು ತಾರಸ್ಥಾಯಿಯಲ್ಲಿ ಹಾಡುತ್ತಿದ್ದುದು ಇನ್ನೂ ಸಹೃದಯರು ಮರೆತಿಲ್ಲ. ಅದೇ ಹಾಡು ಇದೇ ತಂಡದ ಸದಸ್ಯರು ಹಾಡಿದರು. ಕೊನೆಗೆ ‘ನೀನಿಲ್ಲದೆ ನನಗೇನಿದೆ..’ ಹಾಡು ಕೂಡ ಕೇಳುಗರನ್ನು ರೋಮಾಂಚನಗೊಳಿಸುವಲ್ಲಿ ಸಫಲವಾಯಿತು.

ADVERTISEMENT

ಕುವೆಂಪು ಅವರಿಗೆ ಗೀತನಮನ

ಮಹಾನ್‌ ಚೇತನ ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮದಿನಾಚರಣೆ ಪ್ರಯುಕ್ತ ಕುವೆಂಪು ಗೀತೆಗಳನ್ನು ಹಾಡುವ ಮೂಲಕ ಡಿ.29ರ ಸಂಜೆ ಮಲೆನಾಡ ಗಾಯಕಿಯರು ಗೀತನಮನ ಸಲ್ಲಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ಕುವೆಂಪು ಹಾಡುಗಳು ರಾಗಧಾರೆಯಾಗಿ ಹರಿದವು.

‘ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ...’ ಕುವೆಂಪು ಅವರ ಪ್ರಸಿದ್ಧ ಕವನ. ಇದೇ ಶೀರ್ಷಿಕೆಯಡಿಯಲ್ಲಿ ಮಲೆನಾಡಿನ ಗಾಯಕಿಯರು ಮಂಗಳವಾರ ಸಂಜೆ ವಿಶ್ವಕವಿಗೆ ಗಾನ ನಮನ ಸಲ್ಲಿಸಿದರು. ರೂಪಾ ಅಶ್ವಿನ್‌, ಅನುಷಾ ಅಂಚನ್‌ ಹಾಗೂ ಸುಮಾ ಪ್ರಸಾದ್ ಕುವೆಂಪು ಗೀತೆಗಳನ್ನು ಭಾವಪೂರ್ಣವಾಗಿ ಹಾಡಿದರು.

‘ಬಾ ಶ್ರೀಗುರು ದೇವನೆ ಬಾ..’ ಕುವೆಂಪು ಅವರ ಸುಪ್ರಸಿದ್ಧ ಕವನ. ಈ ಹಾಡಿಗೆ ದನಿಯಾದವರು ರೂಪಾ ಅಂಚನ್‌ ಮತ್ತು ಸುಮಾ ಪ್ರಸಾದ್. ‘ಮುಚ್ಚುಮರೆ ಇಲ್ಲದೆಯೇ...’ ಹಾಡು ಎಂದಿಗೂ ಜನಪ್ರಿಯ. ಈ ಹಾಡನ್ನು ಅನುಷಾ ಅಂಚನ್‌ ಭಾವಪೂರ್ಣವಾಗಿ ಹಾಡಿದರು. ಮುಂದೆ ‘ಅಂತರ ತನು ನೀ ಗುರು’ ಗೀತೆ ರೂಪಾ ಅಶ್ವಿನ್‌ ದನಿಯಲ್ಲಿ ಮಧುರವಾಗಿ ಮೂಡಿಬಂತು. ಇದೇ ಲಯ, ಗತಿ ಹಾಗೂ ಗಾಯನ ಮನೋಧರ್ಮವನ್ನು ರೂಪಾ ಮುಂದಿನ ಗೀತೆ ‘ನಿನ್ನ ಬಾಂದಳದಂತೆ ನನ್ನ ಮನವಿರಲಿ..’ ಹಾಡಿನಲ್ಲೂ ತೋರಿಸಿಕೊಟ್ಟಿದ್ದು ಅರ್ಥಪೂರ್ಣವಾಗಿತ್ತು. ಸಾಮಾನ್ಯವಾಗಿ ಕುವೆಂಪು ಗೀತೆಗಳು ಎಂದಾಗ ‘ಓ ನನ್ನ ಚೇತನಾ.., ಬಾರಿಸು ಕನ್ನಡ ಡಿಂಡಿಮವ.., ಆನಂದಮಯ ಈ ಜಗ ಹೃದಯ...’ ಹಾಡುಗಳನ್ನು ಹಾಡಿಲ್ಲ ಎಂದರೆ ಇಡೀ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟು ಖ್ಯಾತಿ. ಈ ಕಾರ್ಯಕ್ರಮದಲ್ಲೂ ಈ ‘ಕನ್ನಡ ಕುಸುಮಗಳು’ ಅಲೆಅಲೆಯಾಗಿ ತೇಲಿಬಂದು ಮನಸ್ಸಿಗೆ ತಂಪು ನೀಡಿದವು.

ಕಾರ್ಯಕ್ರಮದ ಅಂತ್ಯದಲ್ಲಿ ‘ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ..’ ಹಾಡು ಅತ್ಯಂತ ಸುಶ್ರಾವ್ಯವಾಗಿ ಮೂಡಿಬಂದು ಕುವೆಂಪು ಅವರ ಜನ್ಮದಿನದಂದು ನಾದ ನಮನ ಸಲ್ಲಿಸಿದ್ದು ಸಮಯೋಚಿತವಾಗಿತ್ತು. ಕಾರ್ಯಕ್ರಮಕ್ಕೆ ಚಿಕ್ಕಮಗಳೂರಿನ ಸುಗಮ ಸಂಗೀತ ಗಂಗಾ ಸಹಕಾರ ನೀಡಿತ್ತು. ಶ್ರೀನಿವಾಸ ಕಪ್ಪಣ್ಣ ಕಾರ್ಯಕ್ರಮ ಸಂಘಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.