ADVERTISEMENT

ಅದೇ ರಾಗ ಹಲವು ಭಾವ

ಶ್ರೀಮತಿ ದೇವಿ
Published 24 ಏಪ್ರಿಲ್ 2021, 19:31 IST
Last Updated 24 ಏಪ್ರಿಲ್ 2021, 19:31 IST
ಶ್ರೀಮತಿ ದೇವಿ
ಶ್ರೀಮತಿ ದೇವಿ   

ಸಂಗೀತದ ಪ್ರಸ್ತುತಿಯು ಸೃಜನಶೀಲ ಪ್ರಕ್ರಿಯೆ. ಕಿವಿಗೆ ಇಂಪಾಗಿ ಕೇಳಿ-ಮನಸ್ಸನ್ನು ಮುದಗೊಳಿಸುವ ಸಂಗೀತ ಪ್ರತಿಬಾರಿಯೂ ಕಲಾವಿದನಿಂದಾಗುವ ರಾಗದ ‘ಮರುಸೃಷ್ಟಿ’ ಆಗಿರುತ್ತದೆ. ಇದು ಕೇವಲ ಶ್ರವಣೀಯವಾದ ಸ್ವರಗಳ ಮೊತ್ತ ಮಾತ್ರವಲ್ಲ, ‘ಶ್ರಾವ್ಯ’ವು ‘ದೃಶ್ಯ’ವಾಗಿ ಕಣ್ಣಮುಂದೆ ನಿಲ್ಲುವ ಅದ್ಭುತ ಮಾಯಾಲೋಕ. ಇಲ್ಲಿ ಗಾಯಕನು ರಾಗದ ಸ್ವರೂಪದ ಬಗ್ಗೆ ತನಗಿರುವ ಚಿತ್ರಣವನ್ನು ನೋಡುತ್ತಾ ರಾಗದ ಅಭಿವ್ಯಕ್ತಿಗೆ ತೊಡಗಿದರೆ, ಕೇಳುಗನು ಆ ಪ್ರಸ್ತುತಿ ತನ್ನ ಮುಂದೆ ಕಟ್ಟಿರುವ ಚಿತ್ರಣವನ್ನು ನೋಡಿ, ಅದರೊಳಗೆ ಹೋಗಿ ಆನಂದಿಸತೊಡಗುತ್ತಾನೆ.

ಕಿಶೋರಿ ಅಮೋಣಕರ್‌

ಹಿಂದೂಸ್ತಾನಿ ಖ್ಯಾಲ್ ಸಂಗೀತವನ್ನು ‘ರಾಗ ಸಂಗೀತ’ವೆಂದೇ ಕರೆಯಲಾಗಿದೆ. ಇಲ್ಲಿ ರಾಗದಲ್ಲಿನ ರಚನೆಗಳಿಗಿಂತ ಜಾಸ್ತಿ ರಾಗದ ವಿಸ್ತಾರಕ್ಕೆ, ಗಾಯಕನ ಮನೋಧರ್ಮಕ್ಕೆ ಹೆಚ್ಚಿನ ಸ್ಥಾನವಿದೆ. ನುರಿತ ಗಾಯಕನೊಬ್ಬನು ತನ್ನ ಪ್ರಸ್ತುತಿಯಲ್ಲಿ ರಾಗವನ್ನು ಕಟ್ಟುವ ಕೆಲಸ ಮಾಡುತ್ತಾನೆ. ಅತ್ಯಂತ ತಳದಿಂದ ರಾಗದ ಕಟ್ಟೋಣವನ್ನು ಹಂತ ಹಂತವಾಗಿ ಕಟ್ಟುತ್ತಾ, ಕೇಳುಗರನ್ನು ಅದರಲ್ಲಿ ಒಳಗು ಮಾಡಿಕೊಳ್ಳುತ್ತಾ ಸ್ವರ-ರಾಗ-ಲಯ-ಶಬ್ದಗಳ ಭಾವಸೌಧವನ್ನು ಕಣ್ಣಮುಂದೆ ನಿರ್ಮಿಸುತ್ತಾನೆ. ಈ ಕ್ರಿಯೆಯಲ್ಲಿ ಗಾಯಕನಿಗೆ ದಾರಿ ತೋರಿಸುವ ಕೆಲಸವನ್ನು ಬಂದಿಶ್ (ಹಿಂದೂಸ್ತಾನಿ ಖ್ಯಾಲ್ ಸಂಗೀತದಲ್ಲಿ ಬರುವ ರಚನೆಗಳಿಗೆ ಬಂದಿಶ್‍ಗಳೆನ್ನಲಾಗುತ್ತದೆ. ಬಂದಿಶ್‍ಗಳು ಒಂದು ರಾಗದಲ್ಲಿ ಕಟ್ಟಲಾದ ಸ್ವರ-ತಾಳ-ಸಾಹಿತ್ಯ ಬದ್ಧವಾದ ರಚನೆಗಳು) ಮಾಡುತ್ತದೆ.

ರಾಗದ ಸ್ವರೂಪವನ್ನು ಒಂದು ಸಣ್ಣ ಝಲಕ್‍ನಲ್ಲಿ ತೋರಿಸಿದ ಬಳಿಕ ಗಾಯಕನು, ಆ ರಾಗದಲ್ಲಿ ವಿಲಂಬಿತ್ ಲಯದ ಬಂದಿಶ್‌ ಅನ್ನು ಹಾಡುತ್ತಾನೆ ಹಾಗೂ ಇಲ್ಲಿ ರಾಗದ ವಿಸ್ತಾರವನ್ನು ಮಾಡುತ್ತಾ ಭಾವಸೃಷ್ಟಿ ಮಾಡುತ್ತಾನೆ. ಮುಂದೆ ಲಯವನ್ನು ಹೆಚ್ಚಿಸಿ ಬೋಲ್‍ತಾನ್, ಸರಗಮ್, ತಾನ್‍ಗಳನ್ನು ಹಾಡುತ್ತಾನೆ. ಆ ನಂತರ ಧೃತ್ ಬಂದಿಶ್‍ನಲ್ಲಿ ಪ್ರಸ್ತುತಿಯು ವೇಗವನ್ನು ಪಡೆದುಕೊಂಡು, ಭಾವದ ತೀವ್ರತೆಯೆಡೆಗೆ ಕರೆದೊಯ್ಯುವಂಥದ್ದು. ಮೇಲೆ ಹೇಳಿದ ಹಂತಗಳೆಲ್ಲವೂ ತಾಂತ್ರಿಕ ಆಗಿದ್ದರೂ ಅದರಲ್ಲಿರುವ ಭಾವದಿಂದಾಗಿ ಅದರ ಪ್ರಭಾವ ಮಾತ್ರ ಪ್ರತಿಯೊಬ್ಬ ಕೇಳುಗನ ಮೇಲೆ ಬೇರೆ ಬೇರೆ ರೀತಿಯಲ್ಲಿ ಆಗುತ್ತದೆ. ಅದು ಅವರವರ ‘ಭಾವ’ಕ್ಕೆ ನಿಲುಕುವಂಥದ್ದು.

ADVERTISEMENT

ಜೊತೆಗೆ ಈ ಇಡೀ ಪ್ರಕ್ರಿಯೆ ಕೇಳುಗರ ಎದುರಲ್ಲಿ ಹೃದಯಂಗಮವಾದ ಕಥೆಯೊಂದನ್ನು ಕಟ್ಟಿಬಿಟ್ಟಿರುತ್ತದೆ. ಇದರಿಂದಾಗಿಯೇ ಒಂದೇ ಸಂಗೀತ ಕಛೇರಿ ಬೇರೆ ಬೇರೆ ವ್ಯಕ್ತಿಯ ಮೇಲೆ ಬೇರೆ ಬೇರೆ ಬಗೆಯ ಪರಿಣಾಮ ಬೀರಿರುತ್ತದೆ. ಮಾತ್ರವಲ್ಲ ಅದೇ ಕಲಾವಿದನನ್ನು, ಅದೇ ರಾಗವನ್ನು ಅಥವಾ ಅದೇ ಕಛೇರಿಯ ಮುದ್ರಣವನ್ನು ಮತ್ತೆ ಕೇಳಿದಾಗಲೂ ಒಬ್ಬನೇ ವ್ಯಕ್ತಿಗೆ ಪ್ರತೀ ಬಾರಿಯೂ ಬೇರೆ ಬೇರೆ ಬಗೆಯ ಅನುಭವಗಳಾಗುತ್ತವೆ. ಇದಕ್ಕೆ ಆ ಪ್ರಸ್ತುತಿಯನ್ನು ನಿರ್ಧರಿಸುವ ಅಂಶಗಳಾದ ಗಾಯಕನ ಮನಃಸ್ಥಿತಿ, ಧ್ವನಿ ವ್ಯವಸ್ಥೆ, ಸಭಾಂಗಣ, ಸಾಥಿದಾರರು, ಶ್ರೋತೃಗಳ ದರ್ಜೆ ಮುಂತಾದವುಗಳೊಂದಿಗೆ ಆ ಹೊತ್ತಲ್ಲಿ ಇದ್ದ ಕೇಳುಗನ ಮನಃಸ್ಥಿತಿಯೂ ಕಾರಣವಾಗುತ್ತದೆ.

ಗಾನ ಸರಸ್ವತಿ ಕಿಶೋರಿ ಅಮೋಣಕರ್ ಅವರ ಅಲ್ಹಯ್ಯಾ ಬಿಲಾವಲ್ ಅಥವಾ ಬಿಲಾಸ್‍ಖಾನಿ ತೋಡಿ ರಾಗಗಳು ಒಮ್ಮೆ ಕೇಳಿದಾಗ ನೌಕೆಯಲ್ಲಿ ಕೂತು ಆನಂದದಿಂದ ಗೊತ್ತಿರದ ಊರಿನೆಡೆಗೆ ಸಾಗುತ್ತಿರುವ ಅನುಭವ ಕೊಟ್ಟರೆ, ಇನ್ನೊಮ್ಮೆ ಅವೇ ರಾಗಗಳನ್ನು ಕೇಳಿ ಬಿಕ್ಕಿ ಬಿಕ್ಕಿ ಅಳುವಂತಾಗುತ್ತದೆ. ಆಳದಲ್ಲಿರುವ ಬೇಸರವನ್ನೆಲ್ಲಾ ಯಾಕಿವರು ಹೊರಗೆಳೆಯುತ್ತಾರೆ ಎಂದೆನಿಸಿಬಿಡುತ್ತದೆ. ಇನ್ನೊಮ್ಮೆ ಈ ರಾಗಗಳು ಭಾವಸಮಾಧಿಗೆ ಏರಿಸಿಬಿಡುತ್ತವೆ.

ಹೆಚ್ಚಾಗಿ ತೋಡಿ, ಭೈರವ್, ಸಾರಂಗ, ಮುಲ್ತಾನಿ, ಭೀಂಪಲಾಸ್, ಯಮನ್, ಮಾರವಾ, ಬಾಗೇಶ್ರೀ, ಮಾಲ್‍ಕೌಂಸ್, ಬಿಹಾಗ್ ಮುಂತಾದ ವಿಸ್ತಾರಪೂರ್ಣ ರಾಗಗಳನ್ನೇ ನಾನು ಹಾಡುತ್ತಾ ಬಂದಿದ್ದೆ. ಸ್ವಲ್ಪ ವೇಗವನ್ನು ಬಯಸುವ ರಾಗಗಳು ಹಾಗೂ ವಕ್ರ ಸಂಚಾರದ ರಾಗಗಳು ಜೊತೆಗೆ ಮತ್ತೆ ಮತ್ತೆ ಪುನರಾವರ್ತನೆಯ ಸ್ವರ ಸಂಚಾರಗಳುಳ್ಳ ರಾಗಗಳನ್ನು (ನಂದ, ಗೌಡ್ ಸಾರಂಗ ಇತ್ಯಾದಿ) ಹಾಡಲು ತುಂಬಾ ಹಿಂದೇಟು ಹಾಕುತ್ತಿದ್ದುದನ್ನು ಒಮ್ಮೆ ನನ್ನ ಗುರು ರವಿಕಿರಣ್ ಅವರು ಗುರುತಿಸಿದರು ಹಾಗೂ ಅದರ ಕಾರಣವನ್ನು ನನಗೆ ತಿಳಿಸಿದರು.

ನಾನು ಹಾಡುತ್ತಾ ಬಂದಿರುವ ರಾಗಗಳಲ್ಲಿ ವಿಸ್ತಾರಕ್ಕೆ ಅವಕಾಶಗಳು ಬೇಕಾದಷ್ಟಿರುತ್ತವೆ. ಇಂತಹ ರಾಗಗಳಲ್ಲಿ ಸುಲಭವಾಗಿ ಹಲವು ಭಾವ-ಬಣ್ಣಗಳಿಂದ ತುಂಬಿದ ಕಥಾನಕವೊಂದನ್ನು ಸೃಷ್ಟಿಸುವುದು ಸಾಧ್ಯವಿದೆ. ಆದರೆ ನಂದ, ಗಾವತಿ ಮುಂತಾದ ರಾಗಗಳು ನಿಗದಿತವಾದ ಕೆಲವು ಸಂಚಾರಗಳಿಂದ ಆಗಿದ್ದು, ಅಲ್ಲಿ ಎಲ್ಲಿ ಬೇಕಲ್ಲಿ ಘಟನೆಗಳನ್ನು ಕಟ್ಟುತ್ತಾ ಕಥೆಯನ್ನು ಹೇಳಲು ಸಾಧ್ಯವಾಗುವುದಿಲ್ಲ.

ನನ್ನ ಗುರುಗಳು ಹೇಳುವಂತೆ, ಈ ರಾಗಗಳಲ್ಲಿ ಮತ್ತೆ ಮತ್ತೆ ಬರುವ ಸ್ವರ ಸಂಚಾರವನ್ನು ಪುನರಾವರ್ತನೆ ಎಂದಷ್ಟೇ ಭಾವಿಸಿದಲ್ಲಿ ಪ್ರಸ್ತುತಿಯು ಜನರ ಮನಸ್ಸನ್ನು ತಲುಪುವಲ್ಲಿ ಸೋಲುತ್ತದೆ. ಬದಲಿಗೆ ನಮ್ಮ ಜೀವನದಲ್ಲೂ ಮತ್ತೆ ಮತ್ತೆ ಮರುಕಳಿಸುವ ಕೆಲವು ಸುಖದ ಅಥವಾ ನೋವಿನ ಕ್ಷಣಗಳಂತೆ ಇದನ್ನು ಭಾವಿಸಿ ಪ್ರತಿಬಾರಿಯೂ ಭಾವಪೂರ್ಣವಾಗಿ ಪುನರಾವೃತಿ ಮಾಡಿದಾಗ, ಶ್ರೋತೃಗಳು ಮತ್ತೆ ಮತ್ತೆ ಅದೇ ಸ್ವರವಾಕ್ಯಕ್ಕಾಗಿ ಕಾಯುವಂತಾಗುತ್ತದೆ.

ಇದು ಚಿಂತನಶೀಲರಾದ ನನ್ನ ಗುರುಗಳ ತಾತ್ವಿಕ ವಿವರಣೆ. ಆದರೆ, ತಾಂತ್ರಿಕವಾಗಿ ನೋಡಿದರೆ ಮರುಕಳಿಸುವ ಸ್ವರವಾಕ್ಯವನ್ನು ಪ್ರತಿಬಾರಿ ಬೇರೆ ಬೇರೆ ಸ್ವರಭಾರಗಳೊಂದಿಗೆ, ವಿವಿಧ ಸಮಯಾವಧಿಯಲ್ಲಿ, ತಾಳದ ವಿವಿಧ ಜಾಗಗಳಲ್ಲಿ, ಆವರ್ತನದೊಳಗೆ ಆಕಾರದಿಂದ ಅಥವಾ ಶಬ್ದದೊಂದಿಗೆ ಶ್ರುತಿಬದ್ಧವಾದ ಶಾರೀರದಲ್ಲಿ ಉಚ್ಚರಿಸಿದಾಗ ಅದು ಬೇರೆ ಬೇರೆ ಅನುಭವವನ್ನು ನೀಡುತ್ತದೆ ಎನ್ನುವುದು ಹೌದಾದರೂ ರಾಗವು ವಿಶೇಷವಾಗಿ ಮಿನುಗಲು ಬೇರೆಯದೇ ಆದ ಅಂಶವೊಂದು ಇಲ್ಲಿ ಕೆಲಸ ಮಾಡುತ್ತದೆ. ಪ್ರತಿದಿನ ನಡೆಯುವ ಅದೇ ಸೂರ್ಯಾಸ್ತ-ಸೂರ್ಯೋದಯಗಳು ದಿನವೂ ಹೊಸದಾಗಿ-ಸೊಗಸಾಗಿ ಕಾಣುವಂತೆ.

ರಾಗಕ್ಕೆ ಬೇಕಾದ ವ್ಯಾಕರಣ ಒಮ್ಮೆ ಸೃಷ್ಟಿಯಾದ ಮೇಲೆ ಅದು ಮತ್ತೆಂದೂ ಬದಲಾಗುವುದಿಲ್ಲ. ಆದರೆ ಅದನ್ನು ಹಾಡುವ ಸನ್ನಿವೇಶ ಬದಲಾದಂತೆ ಗಾಯನವೂ ಹೊಸದೆನಿಸುತ್ತದೆ. ಇದು ಹೇಗೆಂದರೆ, ಮರಳಿನಲ್ಲಿ ಮನೆ ಕಟ್ಟುವ ಮಕ್ಕಳು ಮತ್ತೆ ಮತ್ತೆ ಅದನ್ನು ಒಡೆದು ಹೊಸ ಮನೆ ಕಟ್ಟುವಂತೆ. ಪ್ರತಿಬಾರಿಯೂ ಅದನ್ನು ಮೂಲದಿಂದ ಕಟ್ಟುವುದಿದ್ದರೂ ಅದೆಷ್ಟು ಸಂಭ್ರಮ, ಉತ್ಸಾಹ ಅಲ್ಲಿರುತ್ತದೆ. ಕಲಾವಿದನೊಬ್ಬ ಮತ್ತೆ ರಾಗ ಶಿಲ್ಪವನ್ನು ಸೃಷ್ಟಿಸಲು ಕೂತಾಗ ಕೆತ್ತಲು ಹೊರಟದ್ದು ಅಂಥದ್ದೇ ಶಿಲ್ಪವನ್ನೇ ಆದರೂ ಈ ಬಾರಿ ನಿನ್ನೆಯ ಕೆತ್ತನೆಗಿಂತ ಮೂಗು ಚೂಪಾಗಲಿ, ಆಚೆಯ ಗೆರೆ ದಪ್ಪ ಬರಲಿ ಎಂಬೆಲ್ಲಾ ಪರಿಪೂರ್ಣತೆಯೆಡೆಗಿನ ಗುರುತುಗಳನ್ನು ಹಾಕಿಕೊಂಡಿರುತ್ತಾನೆ. ಎಲ್ಲಿಯವರೆಗೆ ಕಲಾವಿದನೊಳಗೆ ಭಾವವಿರುತ್ತದೋ ಅಲ್ಲಿಯವರೆಗೆ ಪ್ರಸ್ತುತಿಯು ‘ಪುನರಾವರ್ತನೆ’ಯಾಗಲು ಸಾಧ್ಯವಿಲ್ಲ, ಬರಡಾಗಲು ಸಾಧ್ಯವಿಲ್ಲ.

ಕೇವಲ ಸ್ವರ ಹಾಗೂ ತಾಳವನ್ನು ಅನುಸರಿಸುತ್ತಾ ಹಾಡಿದಾಗ ಅದು ಬರೀ ಶುಷ್ಕವೆನಿಸುತ್ತದೆ, ವ್ಯಾಕರಣವೆನಿಸುತ್ತದೆ. ರಾಗದ ಪ್ರಕೃತಿಯು ಗಾಯಕನಿಗೆ ತಿಳಿದಾಗ ಮಾತ್ರ ಪ್ರಸ್ತುತಿಯು ಸಂವೇದನಾಶೀಲವಾಗಲು ಸಾಧ್ಯ. ಆದರೆ, ರಾಗದ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸ. ಹಾಗೊಮ್ಮೆ ಅರ್ಥವಾದರೂ ಅದನ್ನು ಪ್ರಸ್ತುತಿಯಲ್ಲಿ ತಂದು, ಕೇಳುಗರ ಮನಸ್ಸಿಗಿಳಿಸಲು ತುಂಬಾ ಶ್ರಮ ಬೇಕಾಗುತ್ತದೆ. ಈ ಹಂತದಲ್ಲಿ ನಮ್ಮಲ್ಲಿ ಹಲವು ಕಾಲದಿಂದ ವಿದ್ವಾಂಸರು ಚರ್ಚೆ-ಜಿಜ್ಞಾಸೆಗಳನ್ನು ನಡೆಸಿಕೊಂಡು ಬಂದ ರಸಸಿದ್ಧಾಂತದೊಳಗೆ ಬರುವ ‘ಸೃಜನಶೀಲತೆ, ಪ್ರತಿಭೆ’ ಕಲಾವಿದನಿಗೆ ಸಾಥ್ ಕೊಡಬೇಕಾಗುತ್ತದೆ.

ರಾಗದ ಪ್ರಕೃತಿಯನ್ನು ಅರಿಯುವ ವಿಧಾನಗಳು ಹಲವು ಇರಬಹುದಾದರೂ ನನ್ನ ಗುರುಗಳು ನನಗೆ ಸೂಚಿಸಿದ ವಿಧಾನ ಅಪರೂಪದ್ದು. ಅದು ಸಾಹಿತ್ಯದ ಅಧ್ಯಯನದಲ್ಲಿ ಬರುವ ಸಿನಸ್ತೆಸಿಯಾ (synaesthesia) ಎನ್ನುವ ವಿಚಾರವನ್ನು ಹೋಲುವಂಥದ್ದು. ಸಿನಸ್ತೆಸಿಯಾ ಎಂದರೆ ಯಾವುದಾದರೊಂದು ವಸ್ತುವನ್ನು ವರ್ಣಿಸುವಾಗ ಪಂಚೇಂದ್ರಿಯಗಳ ನಡುವೆ ಸಮನ್ವಯವನ್ನು ತರುವುದು. ಉದಾಹರಣೆಗೆ ‘ಉರಿ ನೋಟ’, ‘ಸುಮ್ಮನಾದ ಸೂರ್ಯ’, ‘ಜೇನಿನಂಥ ಮಾತು’ ಇವೆಲ್ಲವೂ ಕೇಳುವಂತಹ ವಿಷಯವನ್ನು ದೃಶ್ಯವಾಗಿಸಿ, ಕಣ್ಣ ಮುಂದೆ ಕಟ್ಟಿಸುತ್ತವೆ. ಕುವೆಂಪು ಅವರು ತಮ್ಮ ‘ನಾಡಿನ ಪುಣ್ಯದ ಪೂರ್ವ ದಿಗಂತದಿ ನವ ಅರುಣೋದಯ ಹೊಮ್ಮುತಿದೆ’ ಎಂಬ ಕವನದಲ್ಲಿ ‘ಕಿವಿ ಕಣ್ಣಾಗುತಿದೆ, ಕಣ್ ಕಿವಿಯಾಗುತಿದೆ’ ಎಂದಿರುವುದು ಇದನ್ನೇ. ಇಲ್ಲಿ ಕಂಡ ಅದ್ಭುತವನ್ನು ಆನಂದಿಸಲು ಕಣ್ಣು-ಕಿವಿ ಇವೆರಡೂ ಒಂದರೊಳಗೊಂದು ಸೇರುತ್ತವೆ. ಇವೆಲ್ಲಾ ಮನೋರಂಗದಲ್ಲಿ ನಡೆಯುವಂಥವು.

ಮಳೆಗಾಲದ ಮಲ್ಹಾರ್ ರಾಗಗಳ ಕಲಿಕೆ ನಡೆಯುತ್ತಿದ್ದಾಗ ಪೂರಾ ಮಲ್ಹಾರ್ ರಾಗಗಳ ಪ್ರಕೃತಿ-ಸ್ವಭಾವವನ್ನು ಗುರುಗಳು ಕಣ್ಣ ಮುಂದಿರಿಸಿದ ರೀತಿ ವಿಹಂಗಮವಾದದ್ದು. ಯಾವುದೋ ಕಾರ್ಯಕ್ರಮಕ್ಕಾಗಿ ‘ಮಿಯಾ ಮಲ್ಹಾರ್’ ರಾಗದ ಅಭ್ಯಾಸದಲ್ಲಿ ನಾನಿದ್ದೆ. ಹೆಚ್ಚಾಗಿ ಭೀಮಸೇನ ಜೋಶಿ, ಜಸರಾಜ್ ಮುಂತಾದವರ ಧ್ವನಿಯಲ್ಲಿ ಈ ರಾಗವನ್ನು ಕೇಳಿದ ನಮಗೆ ಹೆಣ್ಣು ಧ್ವನಿಯಲ್ಲಿ ಈ ರಾಗವನ್ನು ಕೇಳುವುದು ಕಷ್ಟವಾಗುತ್ತದೆ. ಈ ರಾಗಕ್ಕೆ ಬೇಕಾದ ಗತ್ತು, ರಭಸ ತರುವ ಪ್ರಯತ್ನದಲ್ಲಿದ್ದಾಗ, ಸರ್ ನನಗೆ ಹೇಳಿದ್ದು ‘ಮಿಯಾ ಮಲ್ಹಾರ್ ಎಂದರೆ ಮಲಗಿರುವ ಸಿಂಹ ಅಂತ ಅಂದುಕೋ. ಕಾಡಿನ ರಾಜ ಸಿಂಹಕ್ಕೆ ಹಸಿವಾಗಿದ್ದರೆ ಅಥವಾ ಕಣ್ಣ ಮುಂದೆ ಬೇಟೆ ಇದ್ದಾಗ ಅದು ಹೇಗೆ ಆಕ್ರಮಿಸುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ ಈಗ ಅದು ಮಲಗಿದೆ. ಮಲಗಿದ್ದರೂ ಅದರ ಚುರುಕುತನ, ಗಾಂಭೀರ್ಯ, ಜಾಗ್ರತೆ ಇವುಗಳೆಲ್ಲಾ ಇದ್ದೇ ಇರುತ್ತವೆ. ಇದನ್ನು ಲಕ್ಷ್ಯದಲ್ಲಿರಿಸಿಕೊಂಡು ಹಾಡು. ಅದರಲ್ಲಿ ಆಕ್ರಮಣ ಬೇಡ, ಆದರೆ ಗಾಂಭೀರ್ಯ ಬೇಕು, ಚೆಲ್ಲಾಟವಿಲ್ಲ’. ಇದೊಂದು ಅಪರೂಪದ ಕಾಣ್ಕೆ (ಅಬ್ಸರ್ವೇಷನ್).

ಯಾವುದೇ ಒಂದು ರಾಗವನ್ನು ಈ ರೀತಿಯಾಗಿ ನಾವು ಅರಿಯಲು ಹೊರಟಾಗ, ‘ಶ್ರಾವ್ಯ’ವು ರೂಪಾಂತರಗೊಂಡು ‘ದೃಶ್ಯ’ವಾಗಿ ಬಿಡುತ್ತದೆ. ಹೀಗಾದಾಗ ಕಲಾವಿದನೊಬ್ಬನಿಗೆ ಮುಂದೆ ಕಾಣುತ್ತಿರುವ ಚಿತ್ರಣದ ಪರಿಚಯ, ಅನಾವರಣವನ್ನು ಮಾಡುವುದು ಸುಲಭವಾಗುತ್ತದೆ ಹಾಗೂ ಮತ್ತೆ ಇದೇ ರೀತಿಯ ದೃಶ್ಯವನ್ನು ಕೇಳುಗರ ಮುಂದೆ ನಿಲ್ಲಿಸಲು ಸಾಧ್ಯವಾಗುತ್ತದೆ. ಆದರೆ ಪ್ರತಿಯೊಂದು ರಾಗದ ಬಗ್ಗೆ ಹೀಗೊಂದು ಚಿತ್ರಣ ಹೊಂದಲು ಆ ರಾಗದ ಅಭ್ಯಾಸ, ಮನನ, ಚಿಂತನೆಗಳು ಸತತವಾಗಿ ನಡೆಯುತ್ತಿರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.