ADVERTISEMENT

ಕದ್ಯುತ ಗಾಂತಿಯೇ ಬಾರಮ್ಮ...

ಎಸ್.ಆರ್.ರಾಮಕೃಷ್ಣ
Published 29 ಮೇ 2021, 19:30 IST
Last Updated 29 ಮೇ 2021, 19:30 IST
ವಸಂತಾ ಕಣ್ಣನ್‌ ಅವರು (ಬಲಬದಿ), ತಮ್ಮ ಮಗಳು ಕಲ್ಕತ್ತ ಕೆ.ಶ್ರೀವಿದ್ಯಾ ಅವರೊಂದಿಗೆ ಅಪರೂಪದ ರಾಗವೊಂದನ್ನು ಹುಡುಕಿ ತೆಗೆದು ಪ್ರಯೋಗಿಸಿದ್ದಾರೆ
ವಸಂತಾ ಕಣ್ಣನ್‌ ಅವರು (ಬಲಬದಿ), ತಮ್ಮ ಮಗಳು ಕಲ್ಕತ್ತ ಕೆ.ಶ್ರೀವಿದ್ಯಾ ಅವರೊಂದಿಗೆ ಅಪರೂಪದ ರಾಗವೊಂದನ್ನು ಹುಡುಕಿ ತೆಗೆದು ಪ್ರಯೋಗಿಸಿದ್ದಾರೆ   

ಅಪರೂಪದ ರಾಗವೊಂದನ್ನು ಹುಡುಕಿ ತೆಗೆದು ಪ್ರಯೋಗದಲ್ಲಿ ಅಳವಡಿಸಿತು ಈ ಪರಿವಾರ, ಅದೂ ಒಬ್ಬೊಬ್ಬರು ಒಂದೊಂದು ಊರಲ್ಲಿ ಇದ್ದುಕೊಂಡು!

ಕರ್ನಾಟಕ ಸಂಗೀತದ ಗುರು ವಸಂತಾ ಕಣ್ಣನ್‌ ಅವರುಕದ್ಯುತ ಗಾಂತಿಯೆಂಬ ಅತಿವಿರಳ ರಾಗದಲ್ಲಿತಿಲ್ಲಾನವೊಂದನ್ನು ರಚಿಸಿದ್ದಾರೆ.ಮಗಳು ಕಲ್ಕತ್ತ ಕೆ. ಶ್ರೀವಿದ್ಯಾ ಮತ್ತು ಮಗ ಮೋಹನ್ ಕಣ್ಣನ್‌ ಅವರೊಡಗೂಡಿ ಈ ಸಂಯೋಜನೆಯನ್ನು ಹಾಡಿದ್ದಾರೆ. ಜೊತೆಗೆ ಪಿಟೀಲು ನುಡಿಸಿದ್ದಾರೆ. ಈ ಮೂವರೂ ಸೇರಿ ಮಾಡಿರುವ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.ಈ ಧ್ವನಿಮುದ್ರಣ ಹೇಗೆ ಮೂಡಿಬಂತು ಎಂಬುದನ್ನು ವಸಂತಾ ಮತ್ತು ಶ್ರೀವಿದ್ಯಾ ‘ಭಾನುವಾರದ ಪುರವಣಿ’ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

* ತಿಲ್ಲಾನವನ್ನು ನೀವು ಯಾವಾಗ ಸಂಯೋಜಿಸಿದಿರಿ ಮತ್ತು ಹೇಗೆ ಧ್ವನಿಮುದ್ರಿಸಿದಿರಿ?

ಶ್ರೀವಿದ್ಯಾ: ಇದೆಲ್ಲವೂ ಶುರುವಾಗಿದ್ದು ‘ಸದಾ’ ಹಾಡಿನಿಂದ. ಅದನ್ನು ನನ್ನ ಸಹೋದರ ಮೋಹನ್ ‘ಶಾಲಾ’ ಎಂಬ ಮರಾಠಿ ಚಲನಚಿತ್ರಕ್ಕಾಗಿ ಸಂಯೋಜಿಸಿದ್ದಾನೆ (2011). ಆ ಹಾಡನ್ನು ನಾವಿಬ್ಬರೂ ಹಾಡಿದ್ದು, ಗಂಡು, ಹೆಣ್ಣು ಎರಡೂ ದನಿಯ ಹಾಡಿಗೆ ನಮ್ಮ ತಾಯಿ ಪಿಟೀಲು ನುಡಿಸಿದ್ದಾರೆ. ಈ ಹಾಡು ಆ ವರ್ಷದ ವಿಡಿಯೊ ಮ್ಯೂಸಿಕ್‌ ಅವಾರ್ಡ್‌ ಅನ್ನು ಗೆದ್ದುಕೊಂಡಿತು. ಇತ್ತೀಚೆಗೆ, ಲಾಕ್‌ಡೌನ್‌ ಸಮಯದಲ್ಲಿ, ನಾನು ಮತ್ತು ಮೋಹನ್‌ ಈ ಹಾಡಿನಲ್ಲಿ ಹೇಗೆ ಮನೋಧರ್ಮ ಪ್ರಯೋಗ ಮಾಡಬಹುದು ಎಂದು ನೋಡುತ್ತಿದ್ದೆವು.‘ಸದಾ’ ಹಾಡು ಇರುವುದು ಶೇಖರ ಚಂದ್ರಿಕಾ ರಾಗದಲ್ಲಿ. ನಾವು ರಾಗಾಂತರಕ್ಕಾಗಿ ಗೃಹಭೇದ ತಂತ್ರವನ್ನು ಬಳಸಿದೆವು. ಶೇಖರ ಚಂದ್ರಿಕಾ ರಾಗದ ಧೈವತವನ್ನು ಆಧಾರ ಷಡ್ಜವಾಗಿ ಇಟ್ಟುಕೊಂಡು ಕದ್ಯುತ ಗಾಂತಿ ರಾಗಕ್ಕೆ ಬಂದೆವು. ಅದು ತುಂಬಾ ಮೋಹಕವಾಗಿದ್ದು ನನ್ನ ತಾಯಿಯ ಮನಸ್ಸಿನಲ್ಲಿ ಅನುರಣಿಸುತ್ತಲೇ ಇತ್ತು. ಅವರು ಕೇವಲ ಎರಡೇ ಎರಡು ದಿನಗಳಲ್ಲಿ ಈ ತಿಲ್ಲಾನವನ್ನು ರಚಿಸಿಕೊಟ್ಟರು.

ಲಾಕ್‌ಡೌನ್‌ನ ಉತ್ತುಂಗದ ದಿನಗಳಲ್ಲಿ ಧ್ವನಿಮುದ್ರಣವು ಒಂದು ಸವಾಲಾಗಿತ್ತು. ಮನೆಯಲ್ಲೇ ನಮ್ಮ ಝೂಮ್‌ ರೆಕಾರ್ಡರ್‌ಗಳನ್ನು ಬಳಸಿ ಧ್ವನಿಮುದ್ರಿಸಬೇಕಿತ್ತು. ಯಾವುದೇ ತರಹದ ಹೊರಗಿನ ಶಬ್ದ ಬಾರದಂತೆ ನೋಡಿಕೊಳ್ಳಲು ನಗರವು ನಿದ್ದೆಗೆ ಜಾರುವ ತನಕ ನಾವು ಕಾಯಬೇಕಿತ್ತು! ಹಾಗಾಗಿ ಚೆನ್ನೈನಲ್ಲಿರುವ ನಾನು ಮತ್ತು ಅಮ್ಮ, ಮುಂಬೈಯಲ್ಲಿರುವ ಮೋಹನ್‌ ಎಲ್ಲರಿಗೂ ಅದು ತಡರಾತ್ರಿಯ ಧ್ವನಿಮುದ್ರಣವಾಗಿತ್ತು.

ADVERTISEMENT

*ವಸಂತಾ ಕಣ್ಣನ್‌ ಅವರ ಪ್ರಯೋಗಗಳ ಕುರಿತು ಇನ್ನಷ್ಟು ಹೇಳಿ...

ಶ್ರೀವಿದ್ಯಾ: ಈ ರಾಗದಲ್ಲಿ ಯಾವುದೇ ಶಾಸ್ತ್ರೀಯ ರಚನೆ ಕಂಡುಬಂದಿರದ ಕಾರಣ, ಅಮ್ಮ ರಾಗದ ಸ್ವರಗಳು ಮತ್ತು ಆರೋಹಣ ಅವರೋಹಣದ ಲಕ್ಷಣಗಳನ್ನು ತಿಲ್ಲಾನದ ಸಾಹಿತ್ಯದಲ್ಲಿ ಸೇರಿಸಿದ್ದಾರೆ. ಒಮ್ಮೆ ತಿಲ್ಲಾನವನ್ನು ರಚಿಸಿದ ಮೇಲೆ ಅದನ್ನು ಹೇಗೆ ಹಾಡಿ ಪ್ರಸ್ತುತಪಡಿಸುವುದು ಎಂದು ಅಮ್ಮ, ಮೋಹನ್‌ ಮತ್ತು ನಾನು ಹಲವು ಸಾರಿ ಚರ್ಚಿಸಿದೆವು. ಅಮ್ಮ ಮತ್ತು ನಾನು ಹಾಡುವುದು ಹಾಗೂ ಪಿಟೀಲು ಕೂಡ ನುಡಿಸುವುದು ಎನ್ನುವ ಆಲೋಚನೆ ಬಂದಿದ್ದು ಮೋಹನನಿಗೆ. ಅವನು ಗಿಟಾರ್‌ ನುಡಿಸಿದ ಮತ್ತು ಕರ್ನಾಟಕ ಸಂಗೀತದಲ್ಲಿ ಪ್ರಚಲಿತವಿರದ ಆದರೆ ಪಾಶ್ಚಿಮಾತ್ಯ ಸಂಗೀತದ ಬಹುಮುಖ್ಯ ಭಾಗವಾಗಿರುವ ಹಾರ್ಮನಿ (ಬಹು ಸ್ವರಗಳನ್ನು ಮೇಳೈಸಿ ಏಕಕಾಲಕ್ಕೆ ನುಡಿಸುವುದು) ತಂದ. ಹಲವು ವಿಚಾರಗಳ ಬಗ್ಗೆ ನಾವು ಚರ್ಚಿಸಿದರೂ ಶಾಸ್ತ್ರೀಯ ಸಂಯೋಜನೆಯ ಪರಿಶುದ್ಧತೆಯನ್ನು ಉಳಿಸಿಕೊಳ್ಳಬೇಕು ಎನ್ನುವುದು ನಮ್ಮ ಖಚಿತ ನಿಲುವಾಗಿತ್ತು.

* ಎರಡು ಪಿಟೀಲು, ಒಂದು ಗಿಟಾರ್ ‌ಒಳಗೊಂಡ ಈಗಿನ ರೂಪದಲ್ಲಿಯೇ ಇದನ್ನು ಕಛೇರಿಯಲ್ಲಿ ಹಾಡುವ ಆಲೋಚನೆಗಳಿವೆಯೇ?

ಶ್ರೀವಿದ್ಯಾ: ತಿಲ್ಲಾನವನ್ನು ಸಾಧಾರಣವಾಗಿ ಕಛೇರಿಯ ಕೊನೆಯಲ್ಲಿ ಹಾಡುತ್ತಾರೆ. ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಸಭಿಕರೆದುರು ನೇರವಾಗಿ ಹಾಡುವಾಗ ಪಿಟೀಲು ಮತ್ತು ಮೃದಂಗ ನಮ್ಮ ಜೊತೆಗಿರುತ್ತವೆ. ಈ ಕೊರೊನಾ ಪಿಡುಗು ಮುಗಿದ ಮೇಲೆ ಮತ್ತೆ ನಾವು ಮೂವರೂ ಒಟ್ಟಾಗಿ ಈ ತಿಲ್ಲಾನವನ್ನು ಕೇಳುಗರೆದುರು ನೇರವಾಗಿ ಹಾಡಲು ಖಂಡಿತ ಕಾತರರಾಗಿದ್ದೇವೆ.

ಈ ನಂತರದಲ್ಲಿ ಮತ್ತೆ ಯಾವ ಹೊಸ ಸಂಯೋಜನೆ ಬರುತ್ತಿದೆ?

ವಸಂತಾ ಕಣ್ಣನ್‌ : ಖಂಡಿತವಾಗಿಯೂ ನನ್ನ ಮಗ ಮತ್ತು ಮಗಳೊಡನೆ ಸೇರಿ ಅವರ ಇನ್ನಷ್ಟು ರಚನೆಗಳನ್ನು ಹಾಡಬೇಕಿದೆ. ನಾನು ಸುನಾದಮ್‌ ಎಂದು ಹೆಸರಿಟ್ಟಿರುವ ಹೊಸ ರಾಗದಲ್ಲಿ ನನ್ನ ರಚನೆಗಳಲ್ಲೊಂದಾದ ‘ಪಾಡಿಡುವೋಮೇ’ ಎಂಬ ಕೃತಿಯನ್ನು ಧ್ವನಿಮುದ್ರಿಸುವ ಆಲೋಚನೆಯಿದೆ. ರಾಗಾನ್ವೇಷಣೆಯ ಕುರಿತಂತೆ ನನ್ನ ಮಗಳು ವಿಡಿಯೊ ಸರಣಿಯೊಂದನ್ನು ಮಾಡುತ್ತಿದ್ದಾಳೆ.

* ಕದ್ಯುತ ಗಾಂತಿ ರಾಗದ ಬಗ್ಗೆ, ಅದರ ಉಗಮ ಮತ್ತು ಇತಿಹಾಸದ ಕುರಿತಾಗಿ ಇನ್ನಷ್ಟು ತಿಳಿಸಿ. ಇದು ಹಿಂದೂಸ್ತಾನೀ ಸಂಗೀತದ ಜೋಗ್‌ ರಾಗವನ್ನು ಮತ್ತು ಕರ್ನಾಟಕ ಸಂಗೀತದ ನಾಟ ರಾಗವನ್ನು ಹೋಲುತ್ತದೆ. ಇದು ಅವೆರಡಕ್ಕಿಂತ ಹೇಗೆ ಭಿನ್ನ?

ವಸಂತಾ ಕಣ್ಣನ್‌: ಕದ್ಯುತ ಗಾಂತಿ ರಾಗವು ಮೇಳಕರ್ತ ಪದ್ಧತಿಯಲ್ಲಿನ ಮೂವತ್ತೆರಡನೆಯ ರಾಗವಾದ ರಾಗವರ್ಧಿನಿಯಲ್ಲಿ ಜನ್ಯವಾಗಿದೆ. ಸ ರಿ3 ಗ3 ಮ1 ಪ ನಿ2 ಸ – ಸ ನಿ2 ಪ ಮ1 ಗ3 ರಿ3 ಸ – ಇವು ಆರೋಹಣ, ಅವರೋಹಣಗಳು. ಇದೊಂದು ಅತಿವಿರಳ ರಾಗವಾಗಿದ್ದು ನನ್ನ ತಿಲ್ಲಾನಕ್ಕೂ ಮೊದಲು ಇದರಲ್ಲಿ ಯಾವ ಶಾಸ್ತ್ರೀಯ ಸಂಯೋಜನೆಯೂ ಬಂದಿರುವುದು ತಿಳಿದಿಲ್ಲ. ಇದು ಹಿಂದೂಸ್ತಾನೀ ಸಂಗೀತದ ಜೋಗ್‌ ರಾಗಕ್ಕೆ ಹತ್ತಿರವಾಗಿದ್ದರೂ ಸೂಕ್ಷ್ಮಸಂಗತಿಗಳಲ್ಲಿ ವಿಭಿನ್ನವಾಗಿದೆ. ಜೋಗ್‌ ರಾಗವು ಹೀಗಿದೆ: ಸ ಗ3 ಮ1 ಪ ನಿ2 ಸ –ಸ ನಿ2 ಪ ಮ1 ಗ3 ಮ1 ಗ2 ಸ. ನಾಟ ರಾಗಕ್ಕೆ ಹೋಲಿಸಿದರೆ, ಆರೋಹಣದಲ್ಲಿನ ಮೊದಲ ಕೆಲವು ಸ್ವರಗಳಲ್ಲಿ ಮಾತ್ರ ಸಾಮ್ಯತೆಯಿದೆ. ನಾಟದಲ್ಲಿನ ನಿಷಾದವು ಭಿನ್ನವಾಗಿದ್ದು ರಾಗದ ಸ್ವರೂಪ ಹೀಗಿದೆ: ಸ ರಿ3 ಗ3 ಮ1 ಪ ನಿ3 ಸ – ಸ ನಿ3 ಪ ಮ1 ಗ3 ಮ1 ರಿ3 ಸ. ಎರಡೂ ರಾಗಗಳಲ್ಲಿ ರಿ ಒಂದೇ ರೀತಿಯಿದ್ದರೂ ಕದ್ಯುತ ಗಾಂತಿಯಲ್ಲಿ ಅದರ ಪ್ರಯೋಗ ಭಿನ್ನವಾಗಿದ್ದು, ನಾಟ ರಾಗದಲ್ಲಿರುವ ಆಂದೋಲನ ಇಲ್ಲಿ ಸೌಮ್ಯವಾಗಿದೆ.

ಅನುವಾದ: ಸಹನಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.