ADVERTISEMENT

ಸಂಜೆಯ ಸವಿಗೆ ಸಿಹಿ ತಿನಿಸು

ಭಾಗ್ಯ ಆರ್‌.
Published 22 ಫೆಬ್ರುವರಿ 2019, 19:30 IST
Last Updated 22 ಫೆಬ್ರುವರಿ 2019, 19:30 IST
   

ಸಿಹಿ ಹಾಗೂ ಎಣ್ಣೆಯಲ್ಲಿ ಕರಿದ ತಿಂಡಿಗಳು ಎಂದರೆ ಅನೇಕರಿಗೆ ಅಚ್ಚುಮೆಚ್ಚು. ಅದರಲ್ಲೂ ಮಕ್ಕಳ ಬಾಯಿಗೆ ಇಂತಹ ತಿಂಡಿಗಳೇ ಹೆಚ್ಚು ರುಚಿಸುವುದು. ಮನೆಯಲ್ಲಿ ಇಂತಹ ತಿಂಡಿಗಳನ್ನು ತಯಾರಿಸುವುದು ಕಷ್ಟದ ಕೆಲಸ ಎಂಬ ಕಾರಣಕ್ಕೆ ಸಿಹಿತಿಂಡಿಗಳನ್ನು ಮಾರುವ ಅಂಗಡಿಗೆ ಮೊರೆ ಹೋಗುತ್ತಾರೆ. ಆದರೆ ಈ ತಿನಿಸುಗಳನ್ನು ಅಂಗಡಿಗಳಷ್ಟೇ ರುಚಿಯಾಗಿ ಮನೆಯಲ್ಲಿಯೇ ತಯಾರಿಸಿ ತಿನ್ನಬಹುದು. ಕೊಂಚ ಸಮಯ ಹಿಡಿದರೂ ರುಚಿಕರವಾಗಿ, ಆರೋಗ್ಯಕರವಾಗಿರುತ್ತದೆ.

ಶಂಕರ ಪೋಳೆ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – 1ಬಟ್ಟಲು , ಪುಡಿ ಮಾಡಿದ ಸಕ್ಕರೆ – 1/2ಬಟ್ಟಲು ಏಲಕ್ಕಿ – ಒಂದೆರಡು, ಅಡುಗೆ ಸೋಡಾ, ಕರಿಯಲು ಎಣ್ಣೆ.

ADVERTISEMENT

ತಯಾರಿಸುವ ವಿಧಾನ: ಮೈದಾಹಿಟ್ಟಿಗೆ ಸಕ್ಕರೆ, ಸೋಡಾ, ಏಲಕ್ಕಿ ಪುಡಿ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಚೆನ್ನಾಗಿ ನಾದಿಕೊಳ್ಳಬೇಕು. ಹಿಟ್ಟನ್ನು ಹತ್ತು ನಿಮಿಷ ಬಿಟ್ಟು ಚಪಾತಿ ಲಟ್ಟಿಸಿಕೊಳ್ಳಬೇಕು. ಚಪಾತಿ ತೆಳುವಾಗಿರದೆ ಒಂದು ಹಂತದಲ್ಲಿ ದಪ್ಪಗಿರಬೇಕು. ಚಪಾತಿಯನ್ನು ನಮಗೆ ಬೇಕಾದ ಆಕಾರದಲ್ಲಿ ಚಾಕುವಿನಿಂದ ಕತ್ತರಿಸಿಕೊಳ್ಳಬೇಕು. ಕತ್ತರಿಸಿಕೊಂಡ ತುಂಡುಗಳನ್ನು ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಕರಿಯಬೇಕು. ಕಂದು ಬಣ್ಣಕ್ಕೆ ಬಂದ ಮೇಲೆ ಎಣ್ಣೆಯಿಂದ ಹೊರ ತೆಗೆದು ಟಿಶ್ಯು ಪೇಪರ್‌ ಇಟ್ಟ ಪ್ಲೇಟ್‌ಗೆ ಹಾಕಬೇಕು. ಆರಿದ ನಂತರ ಸಿಹಿ ಶಂಕರಪೋಳೆ ತಿನ್ನಲು ಸಿದ್ಧ.

ಚಕೋಲಿ

ಬೇಕಾಗುವ ಸಾಮಗ್ರಿಗಳು: ಗೋದಿಹಿಟ್ಟು – ಒಂದು ಕಪ್‌ , ಬೆಲ್ಲ - 1ಕಪ್‌ , ಸೋಂಪು ಕಾಳು - 2 ಚಮಚ, ಏಲಕ್ಕಿ - 2, ತುಪ್ಪ - 2 ಚಮಚ, ಕೊಬ್ಬರಿ ತುರಿ -1/2ಬಟ್ಟಲು

ತಯಾರಿಸುವ ವಿಧಾನ: ಗೋದಿಹಿಟ್ಟನ್ನು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಚೆನ್ನಾಗಿ ನಾದಿಕೊಳ್ಳಬೇಕು. ನಾದಿದ ಹಿಟ್ಟನ್ನು 10 ನಿಮಿಷ ಬಿಡಬೇಕು. ಒಂದು ಪಾತ್ರೆ ತೆಗೆದುಕೊಂಡು ಅರ್ಧ ಲೋಟ ನೀರು ಹಾಕಿ ಬೆಲ್ಲ ಕರಗಿಸಿ ಸೋಸಿಕೊಳ್ಳಬೇಕು. ಸೋಸಿಕೊಂಡ ಬೆಲ್ಲದ ನೀರಿಗೆ 2ರಿಂದ 3 ಗ್ಲಾಸ್‌ ನೀರು ಹಾಕಿ ಕುದಿಯಲು ಇಡಬೇಕು. ಚಪಾತಿ ಹಿಟ್ಟನ್ನು ತೆಗೆದುಕೊಂಡು ಉಂಡೆಗಳಾಗಿ ಮಾಡಿ ಚಪಾತಿ ಲಟ್ಟಿಸಬೇಕು. ಚಪಾತಿಗಳನ್ನು ಮಾಡಿ ಚೌಕಾಕಾರದ ತುಂಡುಗಳನ್ನಾಗಿ ಕತ್ತರಿಸಬೇಕು. ಕತ್ತರಿಸಿದ ತುಂಡುಗಳನ್ನು ಬೇಯುತ್ತಿರುವ ಬೆಲ್ಲದ ನೀರಿಗೆ ಹಾಕಬೇಕು. ಹಾಗೆ ಬೇಯುತ್ತಿರುವ ಸಂದರ್ಭದಲ್ಲೇ ಅದಕ್ಕೆ ಏಲಕ್ಕಿ ಪುಡಿ, ಕೊಬ್ಬರಿ ತುರಿ, ಸೋಂಪು ಕಾಳು ಹಾಗೂ ತುಪ್ಪ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಬೆಂದ ನಂತರ ಪ್ಲೇಟ್‌ಗೆ ಹಾಕಿಕೊಂಡು ಬಿಸಿಬಿಸಿಯಾದ ಚಕೋಲಿ ಸವಿಯಲು ಸಿದ್ಧ.

ಹಾಲು ಕೋವದ ಹಲ್ವಾ

ಬೇಕಾಗುವ ಸಾಮಗ್ರಿಗಳು: ಹಾಲು – 1/4 ಲೀಟರ್‌, ಏಲಕ್ಕಿ – 1ರಿಂದ 2 , ಸಕ್ಕರೆ – 100 ಗ್ರಾಂ, ನಿಂಬೆರಸ –2 ಚಮಚ

ತಯಾರಿಸುವ ವಿಧಾನ: ಹಾಲನ್ನು ಒಂದು ಪಾತ್ರೆಗೆ ಹಾಕಿ ಕೆನೆ ಬಾರದಂತೆ ಕಾಯಿಸಿಕೊಳ್ಳಬೇಕು. ಚೆನ್ನಾಗಿ ಕಾದ ಹಾಲನ್ನು ಒಲೆಯಿಂದ ಕೆಳಗೆ ಇಳಿಸಿ ಅದಕ್ಕೆ ನಿಂಬೆ ರಸ ಬೆರೆಸಿ ಚಮಚೆಯಿಂದ ಆಡಿಸಬೇಕು. ನೀರು, ಹಾಲು ಬೇರ್ಪಟ್ಟ ನಂತರದಲ್ಲಿ ಒಂದು ಕಾಟನ್‌ ಬಟ್ಟೆ ತೆಗೆದುಕೊಂಡು ಹಾಲನ್ನು ಸೋಸಿಕೊಳ್ಳಬೇಕು. ಒಂದೆರಡು ಗ್ಲಾಸ್‌ ನೀರು ಬಳಸಿ ನಿಂಬೆ ಹುಳಿ ಹೋಗುವ ರೀತಿಯಲ್ಲಿ ಕೋವವನ್ನು ತೊಳೆದುಕೊಳ್ಳಬೇಕು. ಒಲೆಯ ಮೇಲೆ ಬಾಣಲೆ ಇಟ್ಟುಕೊಂಡು ಕೋವವನ್ನು ಬಾಣಲೆಗೆ ಹಾಕಿ ಸಕ್ಕರೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಸಕ್ಕರೆ ಕರಗುವವರೆಗೂ ಕೆದುಕುತ್ತಿರಬೇಕು. ನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ ಕಲೆಸಿಕೊಂಡು ಒಂದು ಸರ್ವಿಂಗ್‌ ಬೌಲ್‌ಗೆ ಹಾಕಿಕೊಂಡು ತಿನ್ನಬಹುದು.

ರಸಗುಲ್ಲಾ

ಬೇಕಾಗುವ ಸಾಮಗ್ರಿಗಳು: ಗಟ್ಟಿ ಹಾಲು – 1/2ಲೀಟರ್‌, ಸಕ್ಕರೆ –300 ಗ್ರಾಂ, 2ರಿಂದ 3 ಬಾದಾಮಿ(ಉದ್ದಗೆ ಕಟ್‌ ಮಾಡಿಟ್ಟುಕೊಳ್ಳಬೇಕು) 3 ಗ್ಲಾಸ್‌ ನೀರು, 3ರಿಂದ 4 ಟೀ ಸ್ಪೂನ್‌ ನಿಂಬೆಹಣ್ಣಿನ ರಸ.

ತಯಾರಿಸುವ ವಿಧಾನ: ಹಾಲನ್ನು ಕೆನೆ ಬಾರದಂತೆ ಚೆನ್ನಾಗಿ ಕಾಯಿಸಿಕೊಳ್ಳಬೇಕು. ಹಾಲಿನ ಪಾತ್ರೆಯನ್ನು ಒಲೆಯಿಂದ ಕೆಳಗೆ ಇಳಿಸಿ ನಿಂಬೆ ಹಣ್ಣಿನ ರಸ ಹಾಕಬೇಕು. ಚಮಚೆಯಿಂದ ಕಲೆಸುತ್ತಿರಬೇಕು. ನಂತರ ಹಾಲು ಒಡೆದು ಕೋವ ಬರುತ್ತದೆ. ಒಂದು ಜರಡಿ ತೆಗೆದುಕೊಂಡು ಹಾಲನ್ನು ಸೋಸಿಕೊಳ್ಳಬೇಕು. ಒಂದು ಕಾಟನ್‌ ಬಟ್ಟೆಯಲ್ಲಿ ಹಾಕಿ ಕೋವಕ್ಕೆ ನೀರು ಹಾಕಿ ನಿಂಬೆ ರಸದ ಹುಳಿ ಹೋಗುವಂತೆ ತಣ್ಣೀರು ಹಾಕಿ ತೊಳೆದುಕೊಳ್ಳಬೇಕು. ಕೋವವನ್ನು ಅದೇ ಬಟ್ಟೆಯಲ್ಲಿ 10ರಿಂದ 20 ನಿಮಿಷ ಗಂಟು ಹಾಕಿ ಸಿಂಕ್‌ ಕೊಳಾಯಿಗೆ ಅಥವಾ ಯಾವುದಾದರೂ ಜಾಗದಲ್ಲಿ ನೀರು ಸೋರುವ ಹಾಗೆ ನೇತುಹಾಕಬೇಕು. ಒಲೆಯ ಮೇಲೆ 3 ಗ್ಲಾಸ್‌ ನೀರು, ಸಕ್ಕರೆ ಹಾಕಿ ಪಾಕಕ್ಕೆ ಇಡಬೇಕು. ತೆಳುವಾದ ಪಾಕ ಬರಬೇಕು. ಕೋವ ಒಂದು ತಟ್ಟೆಗೆ ಹಾಕಿಕೊಂಡು ಚೆನ್ನಾಗಿ ನಾದಬೇಕು. ಕೋವ ಮೆದುವಾದ ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಪಾಕದಲ್ಲಿ ಹಾಕಿ 20 ನಿಮಿಷಗಳ ಮೇಲೆ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಬೇಕು. ಬೆಂದ ನಂತರ ಒಂದು ಸರ್ವಿಂಗ್‌ ಬೌಲ್‌ಗೆ ಹಾಕಿ ಅದರ ಮೇಲೆ ತುಂಡರಿಸಿದ ಬಾದಾಮಿಗಳನ್ನು ಇಡಬೇಕು. ಈಗ ರಸಗುಲ್ಲಾ ಸಮಿಯಲು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.