ADVERTISEMENT

ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ: ಒಂದು ಅಂಗುಷ್ಠ ತುಂಡಾದ ಚಪ್ಪಲಿ

ದೀಪಾವಳಿ ಕವನಸ್ಪರ್ಧೆ

ಪೂರ್ಣಿಮಾ ಸುರೇಶ್
Published 5 ಡಿಸೆಂಬರ್ 2020, 19:30 IST
Last Updated 5 ಡಿಸೆಂಬರ್ 2020, 19:30 IST
ಕಲೆ: ರಾಮಕೃಷ್ಣ ಸಿದ್ರಪಾಲ
ಕಲೆ: ರಾಮಕೃಷ್ಣ ಸಿದ್ರಪಾಲ   

(ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ)

ಒಂದು ಅಂಗುಷ್ಠ ತುಂಡಾದ ಒಂಟಿ ಚಪ್ಪಲಿ
ನಡುರಸ್ತೆಯಲ್ಲಿ ಅಸ್ತವ್ಯಸ್ತ
ಸ್ಥಿತಿಯಲ್ಲಿ ಬಿದ್ದಿದೆ.

ಮುಂಜಾವಿನ ಕೆಂಪಿಗೆ ಹಕ್ಕಿಗಳ ದನಿಗೆ.
ಇಳಿಸಂಜೆ ಕಾಡುವ ಬೇಸರದ ನಡಿಗೆಗೆ
ದಟ್ಟ ಹಸಿರಿಗೆ
ಕಪ್ಪು ಕವಚಿ ಬೀಳುವವರೆಗೆ
ತಣ್ಣನೆ ಮೌನಕೆ
ಉಸಿರುಗಟ್ಟಿಸುವ ಒಳಸೆಖೆಗೆ
ತೆರೆದುಕೊಳ್ಳುವ ಹಾದಿ

ADVERTISEMENT

ಆ ದಾರಿಯಲ್ಲಿ ಎಷ್ಟೊಂದು ಚಪ್ಪಲಿಗಳು ಸವೆಯುತ್ತಿರುತ್ತವೆ.
ಚಪ್ಪಲಿ ಹಾದಿ ನಡುವೆ ತಿಕ್ಕಾಟ
ಚಪ್ಪಲಿ ಸವೆಯುತ್ತಿದೆ ಜತೆಗೆ ಹಾದಿಯೂ

ಮೊನ್ನೆ ಹಳೆಯ ಜೋಡು ಸರಿಯುತ್ತಿತ್ತು
ತೆವಳುತ್ತಿತ್ತು.

ಸಂಜೆಯ ಜಡಿ ಮಳೆಯ
ನಂತರದ
ಕ್ಷೀಣ ಬಿಕ್ಕು
ಎಲೆಗಳ ಕಣ್ಣಿನಿಂದ
ಹನಿ ಹನಿ ನೀರು
ಅವಾಹಿಸಿಕೊಂಡ ದಪ್ಪ ಕರಿ ಮೌನ

ಚೂರು ಅಲ್ಲಿ ಇಲ್ಲಿ ಮಾಸಿದ ಬಣ್ಣ
ಓರೆ ಕೋರೆ ಕೆರೆದ
ಎತ್ತರ ಸವೆದ, ಸಿಪ್ಪೆ ಎದ್ದ
ಹೆಣ್ಣು ಮೆಟ್ಟು
ಅದು ಇಲ್ಲಿ ..
ಮಳೆ ನೆನೆದುಕೊಂಡ
ಚರ್ಮದ ವಾಸನೆ
ಥೂ..
ತುಸು ಅಂತರವಿಟ್ಟೇ ನಡೆದೆ

ಧ್ವನಿಯಿರದ ಒಂಟಿ ಹಚ್ಚಡ
ಅನಾಥ
ನಡು ಹಾದಿಯಲ್ಲಿ

ಹಾದಿಯ ಕೊನೆಯಲ್ಲಿ
ಇನ್ನೊಂದು ಚಪ್ಪಲು ಕಚ್ಚಿದ ನಾಯಿಯೊಂದು ಓಡುತ್ತಿತ್ತು
ತೊಗಲ ವಾಸನೆ ಹಿಡಿದ
ನಾಯಿಗಳು ಬೊಗಳುತ್ತಾ ಬೆನ್ನಟ್ಟುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.