ADVERTISEMENT

ಕವಿತೆ | ಅವ್ವನೆಂಬ ಮಾಯಾವಿ

ಶುಭಶ್ರೀ
Published 9 ಮೇ 2020, 19:30 IST
Last Updated 9 ಮೇ 2020, 19:30 IST
ಕಲೆ: ಸೃಜನ್‌
ಕಲೆ: ಸೃಜನ್‌   

ಈಗ.. ಈಗೀಗ..
ಏಕೋ ಸಾಸಿವೆ ಡಬ್ಬಿಯ
ಮುಚ್ಚಳ ತೆರೆವಾಗಲೆಲ್ಲ
ಕರುಳೊಳಗೆ ಕಾದ ಸಲಾಕೆ,

ಆಗ.. ಆಗೀಗ
ಉಳಿದ ಪುಡಿಗಾಸಿಗೆ
ಅವ್ವನಿಗೆ ಅದೇ ಗೋಲಕ,
ಆ ಡಬ್ಬದೊಳಗೇ ಅವಳ ಜೀವ.

ದಿನ ದಿನವೂ
ಕದ್ದುಮುಚ್ಚಿ ಮುಚ್ಚಳ ತೆಗೆದು
ಕಾಸಿಗೆ ಮತ್ತೊಂದ ಕಾಸ ಸೇರಿಸಿ,
ತುಂಬಬಹುದೇನೋ ಎಂದು
ತೆರೆವಳು ಕಾಸಿನಗಲ ಆಸೆಗಣ್ಣ.

ADVERTISEMENT

ಸುತ್ತ ಸುತ್ತಿದ
ಜೀವಳ್ಳಿಯ ಬೇರುಗಳಿಗೆ
ಸಾರ ರಸಧಾರೆ ತಂತು ನೀರಾವರಿ
ಅವಳಿಗೂ, ಡಬ್ವಿಯ ಬಾವಿಯಿಂದ

ಮತ್ತೆ ಮತ್ತೆ
ಅವಳ ರವಿಕೆಯೊಳಗೆ ಅವಿತ
ಪುಡಿಗಾಸಿನ ಬೆವರುವಾಸನೆ
ಸಾಸಿವೆಗೆ ಸಾಂಗತ್ಯ,

ಸದಾ ಸದಾ
ಹಕ್ಕಿಗಳ ನಗಿಸುವ ಅವ್ವನ
ಸೆರಗಿನ ತುದಿ ಸದಾ
ಸಾಸಿವೆ ಡಬ್ಬದೊಳಗೂ
ಬೆವರಿನುಪ್ಪಿನ ಸೊಗಡು.

ಒಮ್ಮೆ ಒಮ್ಮೊಮ್ಮೆ
ಹೆಚ್ಚಿದರೆ ಅನ್ನ
ಅವ್ವನ ಕೈತುತ್ತಿನ ರಸಯಾತ್ರೆ.
ಅವಳ ಹೊಟ್ಟೆಗೆ ತಂಬಿಗೆಯಾಸರೆ,
ಜೀವವಿರದ ಆ ಡಬ್ವಕೂ ಕನಿಕರ.

ಆಹಾ ಹಾ...
ಅವ್ವನ ಅಕ್ಷಯಪಾತ್ರೆಯ
ಜಾದೂ ತಿಳಿದವರುಂಟೆ?
ಕ್ಷಯವಾಗುವ ಸಾಸಿವೆ ಡಬ್ಬದ
ಮೂಲವ ಆಗಾಗ ಕೆದಕುವನಂತೆ ಅಪ್ಪ

ಸರ ಸರ
ಮೊಸರು ಕಡೆದ
ನೀರು ಮಜ್ಜಿಗೆ ನನ್ನವ್ವ,
ಬಡವರುದರದ ತಂಪು.
ಡಬ್ಬದ ಸಾಸಿವೆಯಾದರೋ
ಎಲ್ಲರ ನೋವಿನಮದ್ದು

ಜೋ... ಜೋ...
ನಾನು ತೊಟ್ಟಿಲಗೊಂಬೆ
ಅವಳು ತಪೋನಿಧಿ, ಡಬ್ಬವೋ ಜನಪದಸಿರಿ.
ಪುಸ್ತಕದಲಿಟ್ಟ ಪುಟ್ಟನವಿಲುಗರಿ ಮರಿ ಹಾಕುವುದಿಲ್ಲ,
ಅವ್ವನ ಸಾಸಿವೆಡಬ್ಬ ತುಳುಕುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.