ADVERTISEMENT

ಕವಿತೆ: ಕ್ರಾಂತಿಯ ಹೂಗಳು!

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 19:30 IST
Last Updated 19 ಡಿಸೆಂಬರ್ 2020, 19:30 IST
ಕಲೆ: ಸಂಜೀವ್‌ ಕಾಳೆ
ಕಲೆ: ಸಂಜೀವ್‌ ಕಾಳೆ   

ಹೂ ತೋಟದ ತುಂಬಾ
ಪರ ವಿರೋಧದ ಮಾತುಗಳ ಸದ್ದು!
ನಾನು ಚಂದವೋ? ನೀನು ಚಂದವೋ?
ಗುಲಾಬಿ ಮಲ್ಲಿಗೆಗೆ
ಮಲ್ಲಿಗೆ ಸೇವಂತಿಗೆಗೆ
ಸೇವಂತಿ ಕನಕಾಂಬರಿಗೆ
ಹೇಳುತಲಿ ಹಾಡುತಲಿ ಕುಣಿಯುತಲಿ
ತೋಟದ ಮಾಲೀಕನ ಮೇಲೆ
ಮಾಡಿದವು ದೋಷಾರೋಪ!
‘ಪ್ರೇಮಶಾಲೆಯ ಆರಂಭಕೆ
ಬಣ್ಣ ಬಣ್ಣದ ಹೂವುಗಳು ಬೇಕು
ಈ ಮಾಲೀಕನಿಗೆ’
ಬುಡಕೆ ನೀರು ಮಾತ್ರ ಗುಲಗಂಜಿಯಷ್ಟು
ಇನ್ನೂ ಗೊಬ್ಬರದ ಮಾತಿರಲಿ ಸುಳಿವೆ ಇಲ್ಲ!
ಬಲು ಜಿಪುಣ ಬಲು ಜಿಪುಣ ಈ ಮಾಲೀಕ
ಎಂದಿತು ಗುಲಾಬಿ ಕೋಪದಲಿ!

ಹೆಂಡತಿ ಮುನಿದರೆ ಬರುವನು ಮೆಲ್ಲನೆ
ಸುವಾಸನೆ ಹೀರುತ ಕೊಂಡಾಡುವನು!
ಮಲ್ಲಿಗೆ ಮಲ್ಲಿಗೆ ಹೊರಡುವೆ ಎಲ್ಲಿಗೆ?
ಎನ್ನುತ ಹೂಗಳ ಬಿಡಿಸುತ ಪದ್ಯವ ಕಟ್ಟುವನು!
ಕಟ್ಟಿದ ಹೂಗಳ ಮುಡಿಯೇರಿಸೆ
ಕರೆವಳು ಸತಿ ಪತಿಯನು ಬಲು ಹರುಷದಲಿ!
ಮುನಿಸಿಗೆ ಮಾತ್ರವೇ ಮಲ್ಲಿಗೆ ನೆನಪು!
ಎಂದಿತು ದುಂಡನೆ ಮಲ್ಲಿಗೆ ತುಸು ಮುನಿಸಿನಲಿ!

ಮನೆದೇವರ ಮುಡಿಗದು ಮುಕಟವು
ಊರದೇವರ ಗುಡಿಗದು ಶಕುತಿಯು
ಎನ್ನುತ ಬೆಳೆವನು ಸೇವಂತಿಯನು!
ಕೈತುಂಬಾ ಕಾಂಚಾಣವ ಎಣಿಸಲು
ನಲಿವನು ನುಲಿವನು ಹೊಗಳುತ ಕರೆವನು
‘ಸೇವಂತಿಗೆ ಸೇವಂತಿಗೆ ನೀ ಎನ್ನ ಇರುವಂತಿಗೆ’
ಎನ್ನುತ ಹೂಗಳ ಬಿಡಿಸಿ ರಾಶಿಯ ಹಾಕಿ
ಹೂಗಳ ಸಂತೆಗೆ ರಾಣಿಯ ಮಾಡಿ
ಝಣ ಝಣ ಕಾಸನು ಎಣಿಸುತ
ಮರೆವನು ಕ್ಷಣದಲಿ ನನ್ನನು,
ಎಂದಿತು ಸೇವಂತಿಗೆ ಬಲು ವ್ಯಂಗ್ಯದಲಿ!

ADVERTISEMENT

ಕೇಸರಿ ಬಣ್ಣದ ಹೂಗಳ ಕಾಂತೆ
ಕಿತ್ತಳೆ ಮಿಶ್ರಿತ ಹಳದಿಯ ಮೈ
ನಸುನೀಲಿಯ ಹೂ
ಬಿಡಿಸಲು ನಂಟು ಅಳುಕದೆ ಬರುವಳು
ಮುಗಿಲಿನ ಸೆಳೆತಕೆ ಗಾಳಿಯ ಮಾತಿಗೆ
ಅಂಚಿನ ಎಲೆಎಲೆಗಳು ಪಿಸುಗುಡುತಲಿ
ಕನಕಗೆ ಕನಕವ ತರುವಳು ಕನಕಾಂಬರಿ ಎನ್ನುತ
ಎಲೆಗಳ ನಂಟನು ಕಳಚುವನು
ಎಂದಿತು ಕನಕಾಂಬರಿ ಮರೆಯದ ನೋವಿನಲಿ!

ಪ್ರಶ್ನೆಯ ನೆಪದಲಿ
ಹೂತೋಟದ ಸಾಲಲಿ
ಸದ್ದನು ಮಾಡುತ
ಹೋರಾಟಕೆ ಇಳಿಯುವ
ಮುಳ್ಳಿನ ಗುಲಾಬಿ ಬೇಡವೇ ಬೇಡ!
ಕ್ರಾಂತಿಯ ಗೀತೆಯ ಹಾಡುವ ಕೂಗುವ
ದುಂಡನೆ ಮಲ್ಲಿಗೆ ಬೇಡ!
ನಸುನೀಲಿಯ ಕನಕಾಂಬರಿ ಬೇಡ!
ಹುಳದ ಸೇವಂತಿಯೇ ನೀನು ಬೇಡ!
ಹೊರಡಿರಿ ಈಗಲೇ
ಪಕ್ಕದ ತೋಟಕೆ ಎಂದನು
ಕನಕನು ಜಮದಗ್ನಿಯ ಸಿಟ್ಟಿನಲಿ!

ಹೂ-ತೋಟದ ಮನೆಯಲಿ
ಏನಿದೆ ನಿಮ್ಮದು?
ಹೋರಾಟದ ಕೂಗಿದೆ
ಹರಟೆಯ ಮಾತಿದೆ
ಮಲ್ಲಿಗೆ ಮೇಲೆ ಸಲ್ಲದ ಮುನಿಸಿದೆ
ತುಂಬೆಯ ಹೂವನು
ನೋಡಿರಿ ಕಲಿಯಿರಿ
ಮಲ್ಲಿಗೆ ಅರಳಿದೆ ಆಕಾಶದಲಿ!
ಮಲ್ಲಿಗೆ ಮಲ್ಲಿಗೆ ಆಕಾಶ ಮಲ್ಲಿಗೆ
ಹೂತೇರಿನ ಸಂಪಿಗೆಯವಳು
ಕೈಗೆಟುಕದವಳು ಅರಳು ಮುಖದವಳು
ಹಸಿರು ತಳದರಮನೆಗೆ
ಬಿಳಿಯ ಮೂಗುತಿಯವಳು!
ದೇವ ಪಾರಿಜಾತೆಯ ತಂಗಿ ಇವಳು
ಹತ್ತಿರ ಹೋದರೆ ಭಿನ್ನ ಬಿಂಕಾಣದಲ್ಲಿ
ನುಲಿಯುತ್ತಾ ಗಗನಕ್ಕೆ ಮುತ್ತಿಡುವವಳು
ಹರಸಿ ನೆರಳಿನಲಿ ನೆರೆಮನೆಯನು ಪೊರೆಯುವವಳು
ಹೆಸರಿಗೆ ಕನಸಿಗೆ ಕಾಡುಮಲ್ಲಿಗೆಯಲ್ಲ!
ಘಮ ಘಮ ಎನ್ನಲು ದುಂಡು ಮಲ್ಲಿಗೆಯಲ್ಲ!
ಮೃದು ಘಮದಲಿ ತನ್ನ ಅಂಗಳದ ತೋಟದಲಿ
ಊರ ನೀರೆಯ ಕೈತಟ್ಟಿ ಕರೆದು
ಅರಳಿ ನಿಂತವಳನು ಹೊಗಳುತಾ
ಕ್ರಾಂತಿಯ ಹೂಗಳ ತೆಗಳುತಾ
ಹೊರಡಿರಿ ಹೊರಡಿರಿ ಈಗಲೇ ಎನ್ನುತಾ
ಕನಕನು ಮನೆಯನು ಸೇರಿದನು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.