ADVERTISEMENT

ಹೂ ....ಮಾತು (ಕವಿತೆ)

ಎಚ್.ಆರ್.ಸುಜಾತ
Published 17 ಮೇ 2020, 0:47 IST
Last Updated 17 ಮೇ 2020, 0:47 IST
ಹೂ...ಮಾತು                                                                             ಕಲೆ: ಸಂಜೀವ್‌ ಕಾಳೆ
ಹೂ...ಮಾತು ಕಲೆ: ಸಂಜೀವ್‌ ಕಾಳೆ   

ಶಾಲೆಯಿಂದ ಓಡೋಡಿ ಬರುತ್ತಿವೆ ಮಕ್ಕಳು
ಅಯ್ಯೋ....ಯಾಕೆ ಏನಾಯಿತು?
ಅಳಬೇಡ ಮಗುವೇ ನೀನೊಬ್ಬಳೇ ನಿಂತು
ಹೂವು ಇರುವುದೇ ನಗುವುದಕ್ಕೆ
ಹಕ್ಕಿ ಇರುವುದೇ ಹಾರುವುದಕ್ಕೆ

ಯಾರಿಲ್ಲದಿರೇನು ? ಒರೆಸು ಕಣ್ಣೀರ
ಆಗಸವಿರುವುದೇ ನೋವ ಮರೆಸುವುದಕ್ಕೆ
ಚಿಗುರ ಹುಲ್ಲಲ್ಲಿ ಕುಪ್ಪಳಿಸುವ ಮೊಲಕ್ಕೂ
ಮಣ್ಣ ಕಣ್ಣಿಗೆ ಚುಕ್ಕಿಯಿಟ್ಟು ನೆಗೆವ ಚಿಗರೆಗೂ
ತನಗೆ ತಾನೇ ಮರೆವಂಥ ದಿಗಿಲುಂಟು

ಮರೆತು ನಿಲ್ಲುವುದೇ ಕಾಲು? ಕರುಳ ಮರೆವುದೆ
ಸಾವು! ಇರಲಿ ಬಿಟ್ಟುಬಿಡು ನಿಟ್ಟುಸಿರನು
ಸುಯ್ಲಿಡುವ ಗಾಳಿ ಹೊತ್ತುಹೋಗಲಿ ಭಾರವ
ಹಗುರಾಗು ಮರದೆಲೆಯಂತೆ ತಂಪು ಕರೆದು
ನೆರಳ ಪೊರೆದು ತೊಟ್ಟ ಕಳಚು

ಹೋಗು ಹಸಿಮಣ್ಣಲಿ ಮಡಿಕೆಯ ಮಾಡು
ಕಪ್ಪೆಗೂಡ ಕಟ್ಟಿ ನೆಲಕೆ ಬೀಳಿಸು
ಸೋಲುವಾಗ ಬಿಟ್ಟೆದ್ದೇಳು! ಆಟವನ್ನು
ಕೋಟೆ ಕಟ್ಟಿ ರಾಣಿಯಾಗು ಸೇವಕಿಯಾಗಿ ಚಾಮರ ಬೀಸು, ಆಸೆಪಟ್ಟವರ ಜೊತೆಗೆ ಮದುವೆಯಾಟವಾಡು

ಅಮ್ಮನಾಗು ಅಪ್ಪನಾಗು ಅಣ್ಣನಾಗು ಅಕ್ಕನಾಗು
ಜಗಕೆ ಕೇಡೆಣಿಸುವ ಗಂಡಿನೆದೆಯಾಗದಿರು
ತೊಟ್ಟಿಲ ಕಟ್ಟಿ ತೂಗಿಬಿಡು, ಹಾಲುಕ್ಕಿ ಹರಿವ
ಎದೆಯಲ್ಲಿ ಪ್ರೀತಿ ತುಂಬಿಕೊ, ನಗುವ ಮಕ್ಕಳ
ರಾಗವನು ಮೈದುಂಬಿಕೊ, ಕಣ್ಣೀರನೊರೆಸು

ಬೇಕೆಂದೇ ಬೀಳಿಸುವರ, ಹೊಸಕಿ ಹಾಕಲು
ಬಂದವರ ಕೆನ್ನೆಗೆ ಬಾರಿಸು
ಒಬ್ಬಳೇ ನಿಂತು ಅಳದಿರು ಮಗಳೇ
ಕಣ್ಣೊರೆಸಿಕೋ ಜಗದಳಲಿಗೆ ಜೊತೆಯಾದರೆ
ಹೂವಿನೆದೆಯಲ್ಲಿ ಪರಿಮಳ ತುಳುಕುವುದು ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.