ADVERTISEMENT

ಕವಿತೆ | ಹಣ್ಣುಗಳು

ರೇಣುಕಾ ರಮಾನಂದ
Published 1 ಮಾರ್ಚ್ 2020, 2:52 IST
Last Updated 1 ಮಾರ್ಚ್ 2020, 2:52 IST
ಕಲೆ: ಸಂಜೀವ್‌ ಕಾಳೆ
ಕಲೆ: ಸಂಜೀವ್‌ ಕಾಳೆ   

ಹುಣ್ಣಿಮೆ ನಗೆಯ ಸಣ್ಣ ಹುಡುಗರು
ಸಂತೆಯಲ್ಲಿ
ಹಣ್ಣು ಮಾರುತ್ತಾರೆ

ಕೇಜಿಗೆ ಇಪ್ಪತ್ತರ ಕಿತ್ತಳೆ
ಮೂವತ್ತರ ದ್ರಾಕ್ಷಿ
ನಲವತ್ತರ ಸೇಬು
ತಾಸುಗಟ್ಟಲೆ ಕುಕ್ಕರುಗಾಲಿನಲ್ಲಿ ಕುಳಿತು
ಎಲ್ಲರೂ ಹೆಕ್ಕುಳಿದ ಮೇಲೆ
ಮಂಡಿಯಿಂದ
ಅಡ್ಡಾದುಡ್ಡಿಗೆ ತಂದಿದ್ದಾರೆ

ಒಟ್ರಾಶಿ ತುಂಬಿ ತಂದಿದ್ದರ ಗುರುತೆಂಬಂತೆ
ಅವು ಮಾಸಲಾಗಿವೆ
ಅಲ್ಲಲ್ಲಿ ಕಲೆಯಾಗಿವೆ
ಮತ್ತು ಎರಡು ದಿನ ಇಟ್ಟರೆ
ಗ್ಯಾರಂಟಿ ಹಾಳಾಗುತ್ತವೆ
ಎಂಬಂತಿವೆ

ADVERTISEMENT

ಇನ್ನಷ್ಟು ಕಡಿಮೆಗೆ ಸಿಕ್ಕಬಹುದು
ಎಂಬ ಮುಖಭಾವದ
ಕೆಲವು ಅವ್ವಂದಿರು ಕೈಗೂಸುಗಳೊಂದಿಗೆ
ಅವರ ಹತ್ತಿರಕ್ಕೆ
ಹೋಗಿ.. ಬಂದು.. ಮಾಡುತ್ತಿದ್ದಾರೆ
ಮತ್ತವರ ಗಂಡಂದಿರು ಅಲ್ಲೇ
ಸಮೀಪದ ಶರಾಬಿನಂಗಡಿಯ
ಮುಂದೆ ಕುಕ್ಕರುಗಾಲಲ್ಲಿ ಕುಳಿತು
ಬೀಡಿ ಸೇದುತ್ತಿದ್ದಾರೆ

ಕಬ್ಬಿನಹಾಲು ಕುಡಿದರೆ ಖರ್ಚಾಗಿಬಿಡುವ
ಹತ್ತು ರೂಪಾಯಿ
ಸಪ್ಪೆ ಬನ್ನಿಗಾಗಿ ಇಟ್ಟ ಹದಿನೈದು ರೂಪಾಯಿ
ಸಣ್ಣ ಮೀನಿನ ಗುಪ್ಪೆಗೆ ಮಾತ್ರ ಸಾಕಾಗುವ
ಇಪ್ಪತ್ತು ರೂಪಾಯಿ
ಇವೆಲ್ಲವನ್ನು ಈ ದಿನದ ಹಣ್ಣುಗಳಿಗಾಗಿ
ಹೆಂಗಸರು ತ್ಯಾಗಮಾಡಲು ಸಿದ್ಧರಿದ್ದಾರೆ
ಇದಿಷ್ಟನ್ನೂ ಅವರು
ಚಪ್ಪಲಿ ಇಲ್ಲದೇ ಎರಡು ಮಾರ್ಗ ಸವೆದು
ಸೌದೆ ಮಾರಿ ಗಳಿಸಿದ್ದಾರೆ
ತಂದದ್ದು ಕೂಡ ಗಾವುದ ದೂರದ
ಬೆಟ್ಟದಿಂದ.....
ಅದರದ್ದು ಮಹಾ ಕಥೆ

ಇಷ್ಟಾಗಿ ಸಂಜೆಯಾಗಬೇಕು
ಆಯಿತು
ಅಲ್ಲಿ
ಮೊದಲು ಉಣ್ಣಲಿ ಮಕ್ಕಳು ಎಂದು
ಕಾದು ಕುಳಿತಿರುವ ಅವ್ವಂದಿರು
ರೊಟ್ಟಿ ಬಿಸಿಯಾಗಿದೆಯೇ ಎಂದು
ಮುಟ್ಟಿ ಮುಟ್ಟಿ ನೋಡಿದರು
ಇಲ್ಲಿ
ಇನ್ನು ಯಾಪಾರ ಅಷ್ಟಕ್ಕಷ್ಟೇ ಎನ್ನಿಸಿ
ಚೀಲ ಕೊಡವಿದ ಹುಡುಗರು
ಬಾಕಿ ಹಣ್ಣುಗಳನ್ನು
ಹೆಂಗಸರಿಗೆ ಮುಫತ್ತಾಗಿ ಕೊಟ್ಟು
ಗಾಡಿ ಹತ್ತಿದರು

ಹೆಕ್ಕುಳಿದ ಹಣ್ಣುಗಳು
ಮಂಡಿಯಲ್ಲೇ ಮಣ್ಣುಪಾಲಾಗಬೇಕಿದ್ದವು
ಆಗದೇ
ಹುಡುಗರ ಮನೆಯ ರೊಟ್ಟಿಗೆ ಹಿಟ್ಟಾದವು
ಮೀನಿಗೂ...ಬನ್ನಿಗೂ... ಕಬ್ಬಿನಹಾಲಿಗೂ...
ದುಡ್ಡು ಉಳಿಸಿ ಅವ್ವಂದಿರನ್ನು
ಬೀಳ್ಕೊಟ್ಟವು

* * *

ತೊಳೆದು
ಬಿಡಿಸಿ
ಕತ್ತರಿಸಿ
ತಿನ್ನಲು ಆಲಸ್ಯವಾಗಿ
ಬೀಟೆ ಮರದ ಮೇಜಿನ ಮೇಲಿಟ್ಟ
ಬಾರ್‌ಕೋಡ್ ಹಣ್ಣುಗಳು
ದಿನಕ್ಕೊಂದರಂತೆ ಕೊಳೆತು
ಎಸೆಯಲ್ಪಟ್ಟ ಸುದ್ದಿ ಕೇಳಿದಾಗ
ಈ ಮೇಲಿನ ಸಂಗತಿ ನೆನಪಾಯಿತು
ಅಷ್ಟೇ..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.