ADVERTISEMENT

ನಾನು ನಿಮ್ಮ ಡೇಟಾ ಅಲ್ಲ: ಅಭಯ್ ಕಾಕಾ ಅವರ ಮೂರು ಕವನಗಳು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 6:36 IST
Last Updated 30 ಆಗಸ್ಟ್ 2020, 6:36 IST
ವರ್ಲಿ ಕಲೆ
ವರ್ಲಿ ಕಲೆ   

ಅವರಿಗೆ ದೂರದೃಷ್ಟಿ ಇತ್ತು. ಅವರಿಗೆ ಅನುಭವವಿತ್ತು. ಅವರು ಪ್ರತಿಭಾನ್ವಿತರಾಗಿದ್ದರು ಮತ್ತು ಅವರ ಆಸಕ್ತಿಗಳಿಗೆ ಸರಿಹೊಂದುವ ಧ್ವನಿ ಇತ್ತು. ಅವರು ಈ ವರ್ಷ ತಮ್ಮ 43ನೇ ವಯಸ್ಸಿನಲ್ಲೇ ಸಾವನಪ್ಪಿದರು. ಇದರಿಂದ ಭಾರತವು ಯುವ ನಾಯಕ ಮತ್ತು ಆದಿವಾಸಿಗಳ ಅಪ್ರತಿಮ ಮತ್ತು ದೂರದೃಷ್ಟಿಯುಳ್ಳ ವಿಶ್ವಾಸನೀಯ ಸಲಹೆಗಾರ, ಮಾರ್ಗದರ್ಶಿ ಮತ್ತು ಮಧ್ಯವರ್ತಿಯನ್ನು ಕಳೆದುಕೊಂಡಿತು. ಅಭಯ್ ಕಾಕಾ ಛತ್ತೀಸಗಡದ ಓರಣ್ ಆಗಿದ್ದರು ಮತ್ತು ಅವರ ಅವಮಾನ ಮತ್ತು ಶೋಷಣೆಯ ಆರಂಭಿಕ ಅನುಭವಗಳು ಮತ್ತು ಆದಿವಾಸಿಗಳ ಅಂಚಿನಲ್ಲಿರುವ ಸ್ಥಿತಿಗೆ ಸಂವೇದನೆ ನೀಡಿತು.

ಅಭಯ್‌ ಅವರು ಫೋರ್ಡ್ ಫೌಂಡೇಶನ್ ಫೆಲೋಶಿಫ್ ಪಡೆದು, ಸಸೆಕ್ಸ್ ಯುನಿರ್ವಸಿಟಿಯಿಂದ ಸ್ನಾತಕೊತ್ತರ ಪದವಿ ಮುಗಿಸಿ, ಜೆಎನ್‍ಯುನಿಂದ ಸಮಾಜಶಾಸ್ತ್ರದಲ್ಲಿ ಪಿಎಚ್‍.ಡಿ ಪದವಿ ಪಡೆದಿದ್ದರು. ಅವರ ಪ್ರತಿಭೆ ಮತ್ತು ಸಾಹಿತ್ಯ ಕೌಶಲ್ಯಗಳ ಹೊರತಾಗಿಯೂ ಅವರು ಯಾವುದೇ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಪೂರ್ಣ ಸಮಯದ ಉದ್ಯೋಗ ಪಡೆಯಲು ಸಾಧ್ಯವಾಗಲಿಲ್ಲ. ಅವರು ತಮ್ಮ ಸಮಯ ಮತ್ತು ಸಾಮರ್ಥ್ಯವನ್ನು ದೇಶದ ದಲಿತ ಮತ್ತು ಆದಿವಾಸಿಗಳ ಸಂಘರ್ಷಗಳಲ್ಲಿ ವಿನಿಯೋಗಿಸಿದರು. ಆದಿವಾಸಿಗಳ ಹಿತಾಸಕ್ತಿಗಳಿಗೆ ವಕ್ತಾರರಾಗಿದ್ದರು. ಅನೇಕ ಸಂಸ್ಥೆಗಳು ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರುವ ಮತ್ತು ಅವರನ್ನು ಗುರುತಿಸುವ ಮತ್ತು ಪಳಗಿಸುವ ಸನ್ನಿವೇಶದಲ್ಲಿ ಇದ್ದಾರೆ. ಆದರೆ ಅಭಯ್ ಕಾಕಾ ಆದಿವಾಸಿಗಳಿಗೆ ಪರ್ಯಾಯ ಮತ್ತು ವಿಮರ್ಶಾತ್ಮಕ ಧ್ವನಿಯಾಗಿ ಇದ್ದರು. ಇದಲ್ಲದೆ ಪ್ರಬಲ ಸಮಾಜದ ದಬ್ಬಾಳಿಕೆ ಮತ್ತು ಅದರ ರಾಜಕೀಯ ಆರ್ಥಿಕತೆಯ ವಿರುದ್ಧ ವಿಮರ್ಶಾತ್ಮಕ ಧ್ವನಿಯಾಗಿಯೂ ಮಾರ್ಪಟ್ಟಿದರು.

ಅಭಯ್‌ ಅವರ ಅಕಾಲಿಕ ಮರಣವು ಅವರು ಸಂಬಂಧ ಹೊಂದಿದ ಅನೇಕ ಸಂಸ್ಥೆಗಳಿಗೆ ಮತ್ತು ಆದಿವಾಸಿಗಳ ಜಗತ್ತಿಗೆ ಮಾತ್ರವಲ್ಲದೆ, ಅವರಂತಹ ಯುವ ನಾಯಕರ ಅವಶ್ಯಕತೆಯಿರುವ ರಾಷ್ಟ್ರಕ್ಕೂ ನಷ್ಟವಾಗಿದೆ. ಅವರ ಪ್ರತಿ ಕವಿತೆಗಳು ಅನುಭವ ಮತ್ತು ಆದಿವಾಸಿಗಳ ಗಾಯಗಳ ನಿರೂಪಣೆಯಾಗಿದೆ. ನಾವು ಕನ್ನಡದಲ್ಲಿ ಅವರ ಮೂರು ಕವನಗಳನ್ನು ಮಾತ್ರ ತಂದಿದ್ದೇವೆ. ಅವರ ಈ ಕವನಗಳು ನಮ್ಮ ಕಪಟ ಜಗತ್ತನ್ನು ಬಿಚ್ಚಿಟ್ಟು, ಆದಿವಾಸಿಗಳು ಎದುರಿಸುತ್ತಿರುವ ದಬ್ಬಾಳಿಕೆ ಮತ್ತು ಮುಖ್ಯವಾಹಿನಿ ಕಡೆಗಣಿಸಿದ ಜನರನ್ನು ಪ್ರತಿನಿಧಿಸುತ್ತವೆ.

ADVERTISEMENT

***

ನಾನು ನಿಮ್ಮ ಡೇಟಾ ಅಲ್ಲ

ನಾನು ನಿಮ್ಮ ಡೇಟಾ ಅಲ್ಲ ಅಥವಾ ನಾನು ನಿಮ್ಮ ಮತ ಬ್ಯಾಂಕ್ ಅಲ್ಲ

ನಾನು ನಿಮ್ಮ ಯೋಜನೆ ಅಲ್ಲ ಅಥವಾ ವಿಲಕ್ಷಣ ಸಂಗ್ರಹಾಲಯದ ಯೋಜನೆ ಅಲ್ಲ

ನಾನು ಕೊಯ್ಲಿಗೆ ಕಾದಿರುವ ಆತ್ಮ ಅಲ್ಲ

ನಾನು ನಿಮ್ಮ ಸಿದ್ಧಾಂತ ಪರೀಕ್ಷೆ ಮಾಡುವ ಪ್ರಯೋಗಾಲಯ ಅಲ್ಲ

ನಾನು ನಿಮ್ಮ ತೋಪಿನ ಮೇವು ಅಲ್ಲ ಅಥವಾ ಆಗೋಚರ ಕೆಲಸಗಾರನೂ ಅಲ್ಲ

ಇಂಡಿಯಾ ಹ್ಯಾಬಿಟಟ್ ಸೆಂಟರ್‌ನಲ್ಲಿ ನಿಮ್ಮ ಮನರಂಜನೆ ಕೂಡ ಅಲ್ಲ

ನಾನು ಅಲ್ಲ, ನಿಮ್ಮ ಕ್ಷೇತ್ರ, ನಿಮ್ಮ ಬೀಡು, ನಿಮ್ಮ ಇತಿಹಾಸ.

ನಿಮ್ಮ ಸಹಾಯ, ನಿಮ್ಮ ಅಪರಾಧ, ನಿಮ್ಮ ಜಯದ ಪದಕ ಅಲ್ಲ

ನಾನು ನಿಮ್ಮ ಹಣೆಪಟ್ಟಿಯನ್ನು ತಿರಸ್ಕರಿಸುತ್ತೇನೆ, ಪ್ರತಿರೋಧಿಸುತ್ತೇನೆ

ನಿಮ್ಮ ತೀರ್ಮಾನಗಳು, ದಾಖಲೆಗಳು, ವ್ಯಾಖ್ಯಾನಗಳು

ನಿಮ್ಮ ಮಾದರಿಗಳು, ನಾಯಕರು ಮತ್ತು ಆಶ್ರಯದಾತಗಳನ್ನು ನಾನು ಪ್ರತಿರೋಧಿಸುತ್ತೇನೆ

ಏಕೆಂದರೆ, ಅವು ನನ್ನ ಇರುವಿಕೆ, ನನ್ನ ದೃಷ್ಟಿ, ನನ್ನ ಸ್ಥಳ ನಿರಾಕರಿಸುತ್ತವೆ.

ನಿಮ್ಮ ಪದಗಳು, ನಕ್ಷೆಗಳು, ಅಂಕಿ-ಅಂಶಗಳು, ಸೂಚಕಗಳು

ಇವೆಲ್ಲವೂ ಭ್ರಮೆಗಳನ್ನು ಹುಟ್ಟಿಸಿ, ನಿಮ್ಮನ್ನು ಪೀಠದ ಮೇಲೆ ಕೂರಿಸಿ

ಅಲ್ಲಿಂದ ನೀವು ನನ್ನನ್ನು ಕೀಳಾಗಿ ನೋಡುತ್ತೀರಾ

ಹಾಗಾಗಿ ನಾನು ನನ್ನ ವೈಯಕ್ತಿಕ ಚಿತ್ರ ಬಿಡಿಸುತ್ತೇನೆ, ನನ್ನ ಸ್ವಂತ ವ್ಯಾಕರಣ ಆವಿಷ್ಕಾರ ಮಾಡುತ್ತೇನೆ

ನಾನು ನನ್ನ ಕದನಕ್ಕಾಗಿ, ನನ್ನ ಸ್ವಂತ ಉಪಕರಣಗಳನ್ನು ಮಾಡುತ್ತೇನೆ

ನನಗೆ, ನನ್ನ ಜನರು, ನನ್ನ ಪ್ರಪಂಚ ಮತ್ತು ನನ್ನ ಆದಿವಾಸಿ ಸ್ವಾಯತ್ತತೆಗಾಗಿ!

***

ಸುಂದರ, ಹಾನಿಗೊಳಗಾದ ಜನರು

ನಷ್ಟ ಮತ್ತು ದುಃಖದ ಮಧ್ಯೆ ಅವರ ಕಿರುನಗೆ

ಹುಚ್ಚು ತರ್ಕಬದ್ಧ ಪ್ರಪಂಚ, ಬುದ್ಧಿಹೀನರು ಎಂದು ತಪ್ಪಾಗಿ ಗ್ರಹಿಸಿದ

ಆದಿವಾಸಿಗಳು, ಸುಂದರವಾಗಿ ಹಾನಿಗೊಳಗಾದ ಜನರು!

ಅವರು ಕುಳಿತುಕೊಳ್ಳುವುದು ಕಬ್ಬಿಣ, ಚಿನ್ನ ಮತ್ತು ವಜ್ರದ ಸಂಪತ್ತಿನ ಮೇಲೆ

ಬಡತನ ಮತ್ತು ಶಕ್ತಿಹೀನ, ಪ್ರಕೃತಿಯ ಶಾಪ ಹಿಡಿದುಕೊಂಡು.

ಅವರು ಭೂಮಿ, ನೀರು, ಕಾಡನ್ನು ಪ್ರೀತಿಸುವುದೇ ಶಾಪ

ಅಲ್ಲಿ ಅವರು ಹುಚ್ಚು ಪ್ರೇಮಿ ತರಹ ಸಾಯಲು ಬಯಸುತ್ತಾರೆ

ಸುಂದರವಾಗಿ ಹಾನಿಗೊಳಗಾದ ಜನರು!

ಅವರ ಕಣ್ಣುಗಳಲ್ಲಿ ನಕ್ಷತ್ರಗಳು, ಅವರ ಮನಸ್ಸಿನಲ್ಲಿ ಚಂದ್ರ

ನಿರ್ಬಂಧವಿಲ್ಲದ ನದಿಯಂತೆ ಆಲೋಚನೆಗಳು ಹರಿಯುತ್ತವೆ

ತಿರುಚಿದ ತತ್ವಗಳ ಕಲಬೆರಕೆಯಿಲ್ಲದ ಹೃದಯಗಳೊಂದಿಗೆ

ಧರ್ಮ, ಸಿದ್ಧಾಂತ, ಕಾಮ ಮತ್ತು ದುರಾಸೆ

ಅವರ ದೃಷ್ಟಿ ತಾರುಣ್ಯ ಎಂದು ತಪ್ಪಾಗಿ ಅರ್ಥೈಸಿ

ಹಿಂಸೆ, ಲೂಟಿ ಮತ್ತು ಹತಾಶೆಯ ಮುಖದಲ್ಲಿ ಅವರು ಉಳಿದಿದ್ದಾರೆ

ಕನಸುಗಾರ, ವಿರೋಧಿ ಮತ್ತು ದೋಷಿ

ಸುಂದರವಾಗಿ ಹಾನಿಗೊಳಗಾದ ಜನರು!

ಹಣ ಮತ್ತು ಅಧಿಕಾರ ಜಗತ್ತಿನಲ್ಲಿ ಸಂಪೂರ್ಣವಾಗಿ ಅನರ್ಹ

ಪ್ರಕೃತಿ ಮತ್ತು ಸಂಸ್ಕೃತಿಯ ಮಾನಸಿಕ ಆಶ್ರಯದಲ್ಲಿ ಬಂಧಿಸಿ

ಅವರಿಗೆ ಮಾಡುವುದು ಕೀಟಲೆ, ಅಂಗಿಸುವುದು, ಅತ್ಯಾಚಾರ ಮತ್ತು ಕೊಲ್ಲುವುದು

ಪರೋಪಕಾರ ಮತ್ತು ಅಭಿವೃದ್ಧಿ ಆಯುಧಗಳೊಂದಿಗೆ

ಸಮಯ ನಂತರ ಸಮಯ, ಇತಿಹಾಸ ನಂತರ ಇತಿಹಾಸ

ಸುಂದರವಾಗಿ ಹಾನಿಗೊಳಗಾದ ಜನರು!

ಅವರು ಬುದ್ಧಿವಂತ ಪ್ರಪಂಚದ ತರ್ಕವನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ

ಕಾಡುಗಳಿಗಿಂತ ಗಣಿಗಳು ಏಕೆ ಮುಖ್ಯ

ಅಥವಾ ನೀರು ಖರೀದಿಸಲು ಮತ್ತು ಮಾರಾಟ ಮಾಡುವ ಸರಕುಗಳಾಗಿವೆ

ಪ್ರೀತಿ, ನೃತ್ಯ ಮತ್ತು ಮಾಹುವಾವನ್ನು ಏಕೆ ಸಂಯಮಿಸಬೇಕು

ಗೋಲಿಯಾತ್‍ಗಳ ವಿರುದ್ಧ ಡೆವಿಡ್‍ನಾಗಿರುವುದು ಏಕೆ ಅಪಾಯಕಾರಿ

ಸುಂದರವಾಗಿ ಹಾನಿಗೊಳಗಾದ ಜನರು!

***

ವಿಶ್ವದ ಕುರೂಪ – ಸಾಮಾನ್ಯ ಜನರು

ಶಿಸ್ತುಬದ್ಧ, ಅಸುರಕ್ಷಿತ, ದುರಾಸೆ ಮತ್ತು ಕಾಮ

ಲೂಟಿ, ಮೋಸ ಮತ್ತು ಗೊಂದಲಗಳ ಫಲಾನುಭವಿಗಳು

ಅವರ ಪೀಳಿಗೆಯ ಭವಿಷ್ಯವನ್ನು ಕಂಡುಹಿಡಿಯಲು ಭಯಪಡುತ್ತಾ

ಇದ್ದಕ್ಕಿದ್ದಂತೆ ಅರಿತುಕೊಂಡರು ಅವರು ಓದುತ್ತಿದ್ದ ಪುಸ್ತಕ ತಲೆಕೆಳಗಾಗಿದೆ ಎಂದು

ಬುದ್ಧಿಹೀನ ಮತ್ತು ಬುದ್ಧಿವಂತಿಕೆ, ಅಗತ್ಯ ಮತ್ತು ದುರಾಸೆ ನಡುವೆ ಗೊಂದಲ

ಆದಿವಾಸಿಗಳು ಏಕೆ ಸಂತೋಷವಾಗಿರುತ್ತಾರೆ ಎಂದು ಆಲೋಚಿಸಿ

ಏಕೆಂದರೆ, ಈ ಜಗತ್ತಿಗೆ ಭವಿಷ್ಯದ ಬಗ್ಗೆ ಯಾವುದೇ ಭರವಸೆ ಇದ್ದರೆ

ಅದು ಸುಂದರವಾಗಿ ಹಾನಿಗೊಳಗಾದ ಜನರಿಂದ

ಇವರು ನಷ್ಟ ಮತ್ತು ದುಃಖದ ಮಧ್ಯೆ ನಗುತ್ತಾ ಬದುಕುಳಿಯುತ್ತಾರೆ

ಪ್ರಕೃತಿಯೊಂದಿಗೆ ಒಟ್ಟಾಗಿ

ಆದಿವಾಸಿಗಳು!

ಕನ್ನಡಕ್ಕೆ: ಪಿ.ವೀರಭದ್ರನಾಯ್ಕ ಮತ್ತು ಎ.ಆರ್.ವಾಸವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.