ADVERTISEMENT

ಕವಿತೆ | ಲಿಪ್ ಸ್ಟಿಕ್ ಸುಂದರಿಯರು

ಸುಬ್ರಾಯ ಚೊಕ್ಕಾಡಿ
Published 18 ಜನವರಿ 2020, 20:00 IST
Last Updated 18 ಜನವರಿ 2020, 20:00 IST
ಕಲೆ: ಬಸವರಾಜಾಚಾರ್‌ ಕೆ.ಆರ್‌.
ಕಲೆ: ಬಸವರಾಜಾಚಾರ್‌ ಕೆ.ಆರ್‌.   

ಜೀನ್ಸ್ ನಲ್ಲೋ ಮಿನಿ ಮ್ಯಾಕ್ಸಿಗಳಲ್ಲೋ
ಚೂಡಿಯಲ್ಲೋ ವೈವಿಧ್ಯಮಯ ಸೀರೆಗಳಲ್ಲೋ
ತೇಲಿ ಬರುತ್ತಾರೆ ತೂರಿ ಬರುತ್ತಾರೆ ಜಾರಿ ಬರುತ್ತಾರೆ
ಕ್ಯಾಟ್ ವಾಕಿನಲಿ
ತುಡುಗಿಯರು ಬೆಡಗಿಯರು ಬೆರಗಿಯರು ಅಹಹಾ!
ಲಿಪ್ ಸ್ಟಿಕ್ ಸುಂದರಿಯರು...

ಝಗಮಗದ ಉಡುಪು ಮೇಕಪ್ಪಿನಲಿ
ಪ್ರಾಯ ಬಚ್ಚಿಡುತ್ತಾ
ಹೊರ ಜಗತ್ತಿಗೆ ತಮ್ಮ
ವೈಯಾರ ಬಿಚ್ಚಿಡುತ್ತಾ
ಹಾಯ್ ಹೆಲೋ ಅನ್ನುತ್ತಾರೆ ತುಸುವೇ
ತುಟಿ ಕೊಂಕಿಸಿ ಕೆಂಪ ಸುರಿಸುತ್ತಾ
ದಂತಪಂಕ್ತಿಯ ಮಿಂಚ ಹೊಳೆಸುತ್ತಾ
ಆಗೀಗೊಮ್ಮೆ ಮರೆಯಲ್ಲಿ ವ್ಯಾನಿಟಿಯಿಂದ
ಕನ್ನಡಿಯೆತ್ತಿ
ತುಟಿ ಕೆಂಪ ಬಿರುಕ ಸರಿಪಡಿಸುತ್ತಾ
ಸಣ್ಣಗೆ ನಗುವ ಕಿರುಹರಿವ ಹಾಯಿಸುತ್ತಾ....

ಪಬ್ಬಿನಲಿ ಗ್ಲಾಸಿಗೆ ಸ್ಪರ್ಶಿಸಿಯೂ
ಸ್ಪರ್ಶಿಸದ ಹಾಗೆ ತುಟಿಯಿಟ್ಟ ಗುರುತಿನ್ನೂ
ಉಳಿದೇ ಇದೆ ಮೈಯ
ಗಂಧವಿನ್ನೂ ಗಾಳಿಯಲಿ ತೇಲಾಡಿದೆ ಆಡಿದ
ಮಾತುಗಳಿನ್ನೂ ಚೆಲ್ಲಾಪಿಲ್ಲಿ ಹರಡಿದೆ ಇಲ್ಲಿ
ಎಲ್ಲ ಈ ಬೆಡಗಿಯರ ಆಗಮನ ನಿರ್ಗಮನದ
ಗುರುತಾಗಿ

ಹಿಂದಿರುಗಿದ ಈ ಬೆಡಗಿಯರು
ಸೇರುತ್ತಾರೆ ತಮ್ಮ
ಖಾಸಗಿ ಕೋಣೆಗಳಿಗೆ
ತೆಗೆಯುತ್ತಾರೆ ತಮ್ಮ ಮೇಕಪ್ಪುಗಳ ತೊಳೆದು
ವಿದಾಯ ಹೇಳುತ್ತಾರೆ ತಮ್ಮ
ಝಗಮಗದ ಉಡುಪಿಗೆ ತುಟಿಗೆಂಪಿಗೆ

ಕನ್ನಡಿಯಲಿಣುಕಿದರೆ
ಗುಳಿಬಿದ್ದ ಕಣ್ಣ ಕಪ್ಪನೆಯ ತುಟಿಯ
ನೆರಿಗೆಯ ಮುಖವ
ಕಂಡಂತಾಗಿ
ಯಾರ ಮುಖವಿದು ಎಂದು ಗಾಬರಿಯಾಗಿ
ಕಡು ನಿರಾಶೆಯಲಿ ಕಂಗಾಲಾಗಿ
ಚೆಲ್ಲುತ್ತಾರೆ ತಮ್ಮದೇ ದೇಹವನು
ಹಾಸಿಗೆಯಲ್ಲಿ--

ಯಕ್ಷಗಾನದ ಸ್ತ್ರೀವೇಷದ ಹಿರಿಯ
ತನ್ನ ಚೆಲ್ಲಾಟದ ಆಟವನ್ನೆಲ್ಲ ಮುಗಿಸಿ
ಚೌಕಿಗೆ ಹೋಗಿ
ವೇಷ ಕಳಚಿ ಮೇಕಪ್ ಒರೆಸಿ
ಉರುಳಿಕೊಂಡಂತೆ ಚಾಪೆಯಲ್ಲಿ
ನಾಳಿನ ಚಿಂತೆಯಲ್ಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.