ADVERTISEMENT

ನೀವೇನೂ ತಲೆ ಕೆಡಿಸಿಕೊಳ್ಳಬೇಡಿ!

ಗೀತಾ ವಸಂತ
Published 14 ಡಿಸೆಂಬರ್ 2019, 19:30 IST
Last Updated 14 ಡಿಸೆಂಬರ್ 2019, 19:30 IST
ಕಲೆ: ಡಿ.ಕೆ. ರಮೇಶ್‌
ಕಲೆ: ಡಿ.ಕೆ. ರಮೇಶ್‌   

ದೇಹ ಬಿಕರಿಗಿದೆ
ಹಸಿಹಸಿಯಾಗಿ ತಾಜಾ ಇದೆ ಸ್ವಾಮೀ
ಚಿವುಟಿದರೆ ಚಿಲ್ಲೆನ್ನುವಷ್ಟು ಹಚ್ಚಗಿದೆ
ಇನ್ನೂ ಸತ್ತಿಲ್ಲ ಹಾಗೆ ಬೆಚ್ಚಗಿದೆ

ಎದೆಯ ಮಿದು ತೊಡೆಯ ಹದ
ಮಾಂಸದ ಮುದ್ದೆಗೆ ಕೈಕಾಲು ಮೂಡಿದಂತಿದೆ
ಹಾಟ್, ಸ್ಪೈಸೀ, ಸೆಕ್ಸೀ....
ಏನೆಲ್ಲ ಪದಗಳ ಠಂಕಿಸಿದ ಜಾಹೀರಾತು
ಕಂಬ ಮೋರಿಗಳಲ್ಲಿ ರಾರಾಜಿಸಿದೆ
ಐಟಂ ಸಾಂಗುಗಳಲ್ಲಿ ಕೇಕೆ ಹಾಕುತ್ತಿದೆ

ಕೊಳ್ಳುವ ಮೊದಲು ಕೊಂದ ಕತೆ ಕೇಳಿ ಸ್ವಾಮೀ
ಬೇಟೆ ಓಡಿದಷ್ಟೂ ಹಲ್ಲುಹತ್ತಿದ ಅವರು
ದವಡೆಗೆ ಕಾವು ಬರಲೆಂದು
ರಕ್ತ ಕುಡಿದು ಅಮಲುಗಣ್ಣಲ್ಲಿ ಚಿತ್ತಾದರು
ಬೇಟೆಯ ನಾಟಿ ಕೊಂದು
ತಿಂದು ನಿಮಗೂ ಉಳಿಸಿ ಹೋದರು!

ADVERTISEMENT

ಕೈಗೆಟುಕುವಂತಿದೆ ಮಾಲು
ಬೇಯಿಸಬಹುದು ಹಾಗೇ ರಸ್ತೆ ಬದಿಗೇ
ಅರೆಬೆಂದ ಕೈ ಹೊರಗೇ ಇದೆ
ಏನೋ ಅಹವಾಲು ಹೇಳುವಂತಿದೆ
ನೀವು ತಲೆಕೆಡಿಸಿಕೊಳ್ಳಬೇಡಿ ಸ್ವಾಮೀ
ರಾಜಕೀಯ ಬಾಯಾಡಿಸುತ್ತ ಚಪ್ಪರಿಸಿ ತಿನ್ನಿ

ಅಂದು ಉನ್ನಾವೋದಲ್ಲಿ ಉಂಡು ತೇಗಿ
ಹೂಸುಬಿಟ್ಟು ಪಾರಾದ ಮೇಲೂ
ಸತ್ತವಳ ಮತ್ತೇಕೆ ಸುಟ್ಟಿರಿ ಸ್ವಾಮೀ
ಕೊಂದ ಪಾಪ ತಿಂದು ತೀರಿಸಲೆಂದಾ?
ಘನ ಸಂಸ್ಕೃತಿವಂತರು ನೀವು
ಶಾಸ್ತ್ರೋಕ್ತವಾಗಿಯೇ ಎಲ್ಲ ಮಾಡಿದಿರಿ

ಎಲ್ಲಿ ಹೋದಿರಿ ಸ್ವಾಮೀ ಉರಿ ಹಚ್ಚಿ?
ಅದು ಸರಿಯಾಗಿ ಬೆಂದಿದೆಯಾ ನೋಡಿ!
ಇಲ್ಲಿ ಬಿಸಿಬಿಸಿ ಚರ್ಚೆಶುರುವಾಗಿದೆ ತಟ್ಟೆಮುಂದೆ
ಅದು ತೊಡೆಮಾಂಸವಾ ಬದನೆಕಾಯಿಯಾ ಎಂದು....
ಬೆಂದ ಮಾಂಸದ ಜಾತಿ ಹುಡುಕಿ ಹೇಳಿ ಸ್ವಾಮೀ
ಇಲ್ಲವಾದರೆ ರುಚಿಸುವುದಿಲ್ಲ ನಮಗೆ ನೋಡಿ!

ಸಿದ್ಧಾಂತಗಳ ಕಟ್ಟಬೇಕಿದೆ ನಾವು
ಡೈನಿಂಗ್ ಟೇಬಲ್ಲಿನ ಮೇಲೆ
ವಿಜೃಂಭಿಸಬೇಕಿದೆ ಮುಖ ಹೊತ್ತಗೆಗಳಲ್ಲಿ

ಗರ್ಭದ ಮಣ್ಣಲ್ಲಿ ನೆಟ್ಟು ಬೆಳೆಸಿ
ರಕ್ತ ಬಸಿದು ಮಾಂಸವೂಡಿ
ಕರುಳಬಳ್ಳಿಯ ಕೊಳವೆಯಲ್ಲುಸಿರು ಊದಿ
ಪ್ರಾಣದಿಂದ ಪ್ರಾಣಾಗ್ನಿಯ ಹೊತ್ತಿಸಿ
ಹೆತ್ತತಾಯಿ ಮರುಗುತ್ತಿದ್ದಾಳೆ ಒಳಗೆ
ಹುಟ್ಟಬಾರದು ಹೆಣ್ಣುಜಾತಿಯೊಳಗೆ...

ಇದೆಲ್ಲ ಮಾಮೂಲಿ ಬಿಡಿ
ನೀವೇನೂ ತಲೆಕೆಡಿಕೊಳ್ಳಬೇಡಿ
ಹೊತ್ತಾಗಿದೆ ಗಡದ್ದಾಗಿ ಊಟಮಾಡಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.