ADVERTISEMENT

ಲೋಡ್ ಶೆಡ್ಡಿಂಗ್

ಆರ್.ವಿಜಯರಾಘವನ್
Published 8 ಫೆಬ್ರುವರಿ 2020, 19:30 IST
Last Updated 8 ಫೆಬ್ರುವರಿ 2020, 19:30 IST
ಕಲೆ: ಸೃಜನ್‌
ಕಲೆ: ಸೃಜನ್‌   

ವರ್ಷಗಳ ಬಳಿಕ ಊರಿಗೆ; ಬರ ಹೇಳಿದ ಖಾಲಿಯನು ಕಂಡು ಮರಳುವಾಗ
ಹೊಲದ ಪೈರಿನ ಹಸಿರು ಪರಿಮಳದುಸಿರು, ಹಳದಿ ಬೆಳಕಿನ ನೆನಪು
ಥಟ್ಟನೆ ಎಂಥೆಂತದೋ ಏರಿ ಕುಳಿತು ಭಾರವಾದ ಹೆಗಲು, ಮಂಜುಗಣ್ಣು
ಬಲವಂತಕ್ಕೆ ಎಳೆವ ಸೋತ ಕಾಲು, ಸವೆಯದ ಹಾದಿ
ಮೈನ ಕಸುವಿಡೀ ಯಾರೋ ಹುನ್ನಾರ ಹೂಡಿ ದೋಚಿಕೊಂಡಂತೆ

ಎಲ್ಲವೂ ಅಲ್ಲಲ್ಲೇ ಇವೆ, ಯಾವುದೂ ಅಳಿಯುವುದಿಲ್ಲ ನಾನಳಿಯದೆ
ಬರದ ಬಾಲ್ಯದಲ್ಲಿ ಕಾಗೆ ಕಾದ ಬಗೆಯಂತೆ ಕಾಡಿದ ಹಸಿವು
ಹೊಲದ ನೇಗಿಲ ಸಾಲು ಉಳಿಸಿಟ್ಟ ಉಳದ ಮಣ್ಣಿನ ಗಡ್ಡೆ
ಆ ಶಪಿತ ಮನೆತನದ ಅತೃಪ್ತ ಆತ್ಮಗಳ ಸಂತೆಯಲ್ಲಿ
ಎಲ್ಲೋ ಕಳೆದುಹೋದ ಅಸಂಗತ ಭೂತ
ಮಾರಲು ಯತ್ನಿಸಿ ಸೋತು ಸಂತೆ ಬಿಟ್ಟೆದ್ದು ಹೊರಟ ವ್ಯಾಪಾರಿಯಂತೆ
ಅಲ್ಲಿಂದ ಹೊರಟವನ ಮನಸಿನ ತುಂಬ ಸರಕು

ಅಲ್ಲಿದ್ದ ಮನೆಯಲ್ಲಿಲ್ಲ; ಅಲ್ಲಿದ್ದ ಜನರಲ್ಲಿಲ್ಲ ಎಂದರೂ ಮನಸು ಬೆತ್ತಲೆಯಿಲ್ಲ
ಅಲ್ಲಿದ್ದವರೆಲ್ಲ ಅಲ್ಲಿಯೇ ಇದ್ದಾರೆ, ಆ ಮನೆಯ ಅಂಗುಲಂಗುಲ
ತೊಲೆ ಇಟ್ಟಿಗೆ ಕಂಬ, ಹೊತ್ತುರಿದ ದೀಪವಾರಿದ ಕಮಟು
ಹಬ್ಬಹಬ್ಬಕ್ಕೆ ದೇವರು ಕೊಟ್ಟಷ್ಟು ಪಾಯಸ, ಕೋಸಂಬರಿ, ಹಾಡು
ಅಲ್ಲಿ ಸೂರಿನ ಹಾವು, ಹೊಗೆಯ ಕರಿಬಲೆಯ ತೂಗು ಕತ್ತಲೆ
ಸೋರುವ ಸೂರು, ಗೆದ್ದಲ ತಾವು, ಇದ್ದರೂ ಒಂದೊಂದು ಬಿಸಿಲಕೋಲು

ADVERTISEMENT

ಅಲ್ಲಿನ ಎಲ್ಲವೂ ಇಲ್ಲಿವೆ, ಎಲ್ಲವೂ ಮತ್ತೆ ಮತ್ತೆ ಕೊಳ್ಳುತ್ತ ನೆನಪಿನಂಗುಲ ಸೈಟು
ನೆಹರು ಜೊತೆ ನಗುವ ಗಾಂಧಿ, ವೀಣೆ ಹಿಡಿದ ಸರಸತಿ, ಸತ್ಯನಾರಾಯಣ
ತಾತ ಅಜ್ಜಿಯರದೊಂದು ಭಾವ ಚಿತ್ರ, ದವಸದ ಬದಲು ಕಣಜ ಸೇರಿದ ನಾಗರ
ಜಾರಿ ಬಿದ್ದ ಅಂಗಳ, ಜಗುಲಿ, ಹಸಿವು, ರೋಗ, ರೇಜಿಗೆ, ಜಗಳ
ಮಸಿ ಕುಡಿಕೆ, ದವುತಿ, ದಫ್ತರು, ಬಾಗಿಲ ಹಿಂದೆ ಕಂಬಿಗೆ ನೇತಾಡಿಸಿದ ದಿದ ಕಾಗದ
ಉಳಿದಂತಿರುವ ನನ್ನದೆನ್ನುವ ಎಲ್ಲೆಲ್ಲಿಯೂ ಅವೇ ಅವು
ಕಣ್ಣೆದುರು ನಿಂತ ಮಾಯದ ಬಯಲು

ಮರಳುವಾಗ ಕಾಲಿಗೆ ಸಿಕ್ಕ ಅತ್ತೆ ಕಾಫಿಪುಡಿ ತರಲು ಕೊಟ್ಟು
ಕಳಕೊಂಡ ಅರ್ಧ ರೂಪಾಯಿಯ ಬಿಲ್ಲೆ; ಕಾಫಿಯಿಲ್ಲದ ಅತ್ತೆ ಸತ್ತು ನಲವತ್ತು ವರ್ಷ
ಮರಳಿಸುವುದಾದರೂ ಯಾರಿಗೆ? ಜೇಬು ಜಗ್ಗುವ ಮಣಭಾರದ ಬಿಲ್ಲೆ
ಅಲ್ಲೇ ಬಿಟ್ಟುಬಿಟ್ಟಿದ್ದೇನೆ ಮರಳಿನ ಅಡಿಗೆ, ಹೊಯಿಗೆಯಲಿ ನೀರು ಹುಯ್ದಂತೆ
ನಿಸೂರು ಜೀವ; ಹೊರೆಹೊರುವುದು ಅನಿವಾರ್ಯವಲ್ಲ ಭ್ರಮೆ
ಮತ್ತೆ ಬಂದಿದೆ ಎದುರು ಹೊಳೆವ ಹೊಳೆಯಲ್ಲಿ ಹರಿವ ನೀರಿನ ಸೆಳವು
ಪಂಚೆ ಮೇಲೆತ್ತಿ ಸೊಂಟಕೆ ಕಟ್ಟಿ ಹೆಜ್ಜೆಯೆಳೆಯುತ್ತಾ ತಲುಪುವುದು ಆ ಬದಿಯ ತಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.