ADVERTISEMENT

ಕವಿತೆ: ಪಾರಿಜಾತ

ಸ್ಮಿತಾ ಅಮೃತರಾಜ್
Published 14 ಮಾರ್ಚ್ 2021, 5:11 IST
Last Updated 14 ಮಾರ್ಚ್ 2021, 5:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಗಲಿಗೆ ನಿಧಾನಕ್ಕೆ
ಇರುಳು ಮೆತ್ತಿಕೊಳ್ಳುವ ಹೊತ್ತಲ್ಲಿ
ಈ ಹೂವುಗಳು ಲಗುಬಗೆಯಲ್ಲಿ
ಅರಳುವ ತರಾತುರಿಗೆ ಬಿದ್ದಂತಿವೆ.

ಮೊದಲ ಪರಿಮಳವನ್ನು
ದೇವಲೋಕಕ್ಕೇ ಒಯ್ದು ಬಿಡುವ
ಇರಾದೆಯೋ
ಅಥವಾ ಅಲ್ಲಿ ಅರಳುವ ಮುಂಚೆಯೇ
ಇಲ್ಲಿಯೇ ಕಂಪ ತುಂಬಿಡುವ
ಹುನ್ನಾರವೋ..?

ಅರೆ! ಅಲ್ಲಿಯ ಕೃಷ್ಣನ ಕುರುಹು
ಈ ಭಾಮೆಯಂಗಳಕ್ಕೂ ಬಂದು ತಲುಪಿತೇ?
ಅಥವ ದಿಕ್ಕು ತಪ್ಪಿ ಉದುರಿ ಬಿದ್ದ ಒಂದು
ಹೂ ಪಕಳೆ ಇಲ್ಲೇ ಮೊಳೆತು ಚಿಗುರಿತೇ?

ADVERTISEMENT

ಊಹಾಪೋಹ,ಚರ್ವಿತ,ಚರ್ವಣ ಕತೆಗೆ
ಬಿಡುವೆಲ್ಲಿದೆ ಇಲ್ಲಿ
ಹಿಡಿಗೆ ದಕ್ಕದ ಉಸಿರಿಗಷ್ಟೇ ದಕ್ಕುವ ಗಂಧವ
ಹಿಡಿ ಹೃದಯದೊಳಗೆ ಬಚ್ಚಿಟ್ಟುಕೊಳ್ಳುವುದೇ
ಹರಸಾಹಸವಾಗಿರುವಾಗ

ಕವಲೊಡೆದ ಹಾದಿಯಲ್ಲೀಗ
ಅಚ್ಚ ಬಿಳುಪಿನ ಮೈ ತೆರೆದು,
ಕೇಸರಿ ತೊಟ್ಟು ಹೊತ್ತ ಲೋಲಾಕು
ತೂಗುತ್ತಿದೆ.
ನೆಲವೋ...ಬಾನೋ..?
ಅವಳೋ.. ಇವಳೋ..?

ಅವಸರಕ್ಕೆ ಬಿದ್ದ ಆಕೆ
ಹಸಿ ಹಸಿ ಮುಂಜಾವಿನಲಿ
ಮೃದು ಪಕಳೆಗಳ ಅಘ್ರಾಣಿಸಿ
ಬೊಗಸೆಯೊಳಗೆ ತುಂಬಿ ಒಳಮನೆಯೊಳಗೆ
ಒಯ್ಯುತ್ತಿದ್ದಾಳೆ
ಪರಿಮಳ ಬೆರಳ ಸಂದಿಯಿಂದ
ಸೋರಿ ಹೋಗುತ್ತಿದೆ.

ಅಲ್ಲಿಯದ್ದು ಇಲ್ಲಿಗೆ,ಇಲ್ಲಿಯದ್ದು ಅಲ್ಲಿಗೆ
ಎಲ್ಲರ ಅಂಗಳದೆದೆಯೊಳಗೊಂದು
ಪರಿಮಳದ ಸಸಿ ಮೊಳೆತು
ಅದಕ್ಕೂ ಅದರದೇ ಆದ ನೂರು ಬಗೆಯ
ಕತೆ ಎದ್ದು
ಹೊಸ ಹುಟ್ಟು ಪಡೆಯುತ್ತಿರುವಾಗ..


ಇಲ್ಲಿ,
ಅಂಗಳದ ಮೂಲೆಯಲ್ಲಿ ಹೂವಿನ
ರಂಗವಲ್ಲಿ ಹರಡಿಕೊಳ್ಳುತ್ತಿದೆ.
ಎದೆಗೂಡು ನೆನಪಲ್ಲಿ ನೋಯುತ್ತದೆ
ದಂಡೆ ಕಟ್ಟಿ ತುರುಬಿಗೆ ಮುಡಿಯುವಂತಾದರೂ
ಆಗಿದ್ದರೆ..?

ಹಾಗಾದರೆ,ದಂಡೆಯ ಕಟ್ಟಿನೊಳಗೆ ಸಿಗಲಾರದ
ಪಾರಿಜಾತವೆಂದರೆ ಕೃಷ್ಣನೇ...?ಅಥವಾ
ಹಾಗೆ ಸುಖಾ ಸುಮ್ಮನೆ ನೇವರಿಸಿ ಹೋಗುವ
ಒಂದು ಸುಖದ ನೆರಳೇ..?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.