ADVERTISEMENT

ಕವಿತೆ: ಮಣ್ಣಿನ ಋಣ

ವಿನಯಾ ಒಕ್ಕುಂದ
Published 17 ಜನವರಿ 2021, 4:13 IST
Last Updated 17 ಜನವರಿ 2021, 4:13 IST
ಕಲೆ: ಸಂಜೀವ್‌ ಕಾಳೆ
ಕಲೆ: ಸಂಜೀವ್‌ ಕಾಳೆ   

ಅಜ್ಜ ಬಂದಿದ್ದ

ರಾತ್ರಿಯ ಮೂರನೇ ಮಡಿಕೆ ಹೊರಳು ಹೊತ್ತಲ್ಲಿ ಧಕ್ಕನೇ!

ಜಲಫಿರಂಗಿಗೆ ಸಿಕ್ಕು ತಪತಪ ತೊಯ್ದಿದ್ದ

ADVERTISEMENT

ದಾಟಿ ಬಂದಿದ್ದ ಹತ್ತು ಹತ್ತರ ಹುಚ್ಚು ಕಂದಕ

ದೇಶದ್ರೋಹಿ– ಎಂಬ ಹರಲಿಯ ಗಂಗೆಗೆ ಎಸೆದು ಬಂದಿದ್ದ

ಮೈ–ಮನಸು ತರಚಿ ನೆತ್ತರ ನಿಶಾನೆಯಾಗಿದ್ದ

ಹರಿತ ಚಳಿಯ ಒಳ ಉರಿಯಲಿ ಗೆದ್ದವನಂತಿದ್ದ

ಪಂಜಾಬಿನ ಗೋದಿಯ ಸುಂಕು ಅವನ ತೆಳು ಕಂಬಳಿಯಲ್ಲಿತ್ತು

ಕಬ್ಬಿನ ಸೂಲಂಗಿಯ ನವೆ ಅವನ ಹೆಗಲ ಮೇಲಿತ್ತು

ಕಂಡ, ಒಮ್ಮೆ ಹರಿಯಾಲೀ ರುಮಾಲಿನಲಿ

ಒಮ್ಮೆ ಧಾರವಾಡೀ ಹಳದಿ ಪಟಗಾದಲಿ

ಒಮ್ಮೆ, ಕಡೆಯ ಹಾಸಿಗೆಯಲ್ಲಿದ್ದ ಬೋಳುನೆತ್ತಿಯಲಿ

ಅದೇ ಬರಲು ಬೆರಳು, ಚಪ್ಪಟೆ ಉಗುರು

ನನ್ನ ಬೊಗಸೆಯಲ್ಲೇ ಮಿಡುಕಿ ತಣ್ಣಗಾಗಿದ್ದ ಅದೇ

ನರ ಉಬ್ಬಿದ ಮುಂಗೈ, ನೆತ್ತಿ ಸವರಿದ.

ನಕ್ಕೆ, ನಗಲಿಲ್ಲ ಅವ

ಇಲ್ಲೀಗ ನಗೆ ನಿಷೇಧಿಸಿದೆ ಎಂಬಂತೆ ನಿಂತ

ನಿಂತ ನಿಂತಲ್ಲೇ ಉದ್ದುದ್ದ ಉದ್ದುದ್ದ ಉದ್ದುದ್ದ ಬೆಳೆದ

ಅವನ ಕೈಯ ಸಲಿಕೆ ಅವನುದ್ದ ಅವನುದ್ದ ಅವನುದ್ದ ಬೆಳೆದು

ಜಗತ್ತನ್ನೇ ಹೊಲ ಮಾಡಿ ಉತ್ತುವೆ ಅಂತು

ಕಣ್ಣೆದುರೇ, ಕರಿಹೊಲದ ಕಂಚಿನ ಪ್ರತಿಮೆಯಾದ

ಯಾರೂ ಕೆತ್ತದ, ಯಾರೂ ಕೆಡವದ, ಯಾರ ತಾಬೆಗೂ ಸಿಗದ

ಜೀವಂತ ಪ್ರತಿಮೆ. ಸುತ್ತಲ ಹತ್ತು ದಿಕ್ಕಿನೊತ್ತಿನಲಿ

ದನಿ ಮುತ್ತುತ್ತಿತ್ತು. ಮಣ್ಣ ಪೂಜೆಯೊಕ್ಕಲಿನ ಮಂತ್ರದಂತಿತ್ತು

‘ಹಮ್‌ ನಹೀ ರೂಕೆಂಗೇ, ಹಮ್‌ ನಹೀ ವಿಚಡೇಂಗೆ’

ಜೀವ ಕದಡುವ ಕೂಗು, ನಡುಗು.

ನೋಡುತ್ತಿದ್ದ ನನ್ನ– ಮಾರಿಕೊಂಡ ಕುರುಹ ಹುಡುಕಿ

ಅವನ ಬೆನ್ನ ಮೇಳಿತ್ತು ಬ್ರಿಟೀಷರ ಬೂಟಿನ ಹಚ್ಚೆ

ಎದೆಯ ಮೇಲಿತ್ತು ಸರ್ಕಾರಿ ಪೊಲೀಸರ ಲಾಟಿಯ ರಕ್ತ

ನಿಲ್ಲು ನಾಕಾದರೂ ದಿನ, ಸುಧಾರಿಸಿಕೋ ಎಂದೆ

ಕಾಲಿಲ್ಲದ ನಾನು ತೆವಳುತ್ತಿದ್ದೆ, ತೋಳು ಚಾಚಿದ

ಬಿಳಿರೆಪ್ಪೆಗಳಲಿ ನನಗಾಗಿ ಒಂದು ಬೆಚ್ಚಗಿನ ಹನಿ ತಂದಿದ್ದ

ಅನ್ನದ ಋಣ, ಮಣ್ಣಿನ ಋಣ ಬಲು ಒಜ್ಜೆ ಅಂದ

ಮಣ್ಣಾಳದ ಹನ್ನೊಂದನೇ ಪದರದಂತೆ

ಗಾಂಧಿಯ ಕೈಕೋಲಿನಂತೆ ಸಲಿಕೆ ಸರಸರ ಊರಿ

ಬೆನ್ನು ತಿರುವಿನ ಗಂಟಲಾರಿ, ಕಣ್ಣಾರಿ ಒಡ್ಡೊಡ್ಡ ಅಂದೆ

‘ನಿನ್ನ ಹೆಸರಿಗೊಂದು ಹೊಲ ಊಳುವೆ ನಾನೂ’

ಕಾಲಿಲ್ಲದ ನನ್ನ ನೇಗಿಲ ಕನಸಿಗೆ ಅವನ ಕಣ್ಣಾಲಿಗಳು ಕರೆಗಟ್ಟಿ

‘ಬಿತ್ತು ಬೀಜಗಳ ಎದೆಯಿಂದ ಎದೆಗೆ’

ಅಂದವನೇ ಕಣ್ಣೆದುರೇ ಕಾಣದೆ ನಡೆದ.

ಉಳಿಸಿದ್ದ, ಸುತ್ತ ಭತ್ತದ ಗದ್ದೆಯ ಗಮಲು

ಊರಿದ್ದ ಕಬೀರನ ದೋಹೆ

ಮಣ್ಣ ಕಣಕಣದಲ್ಲಿ ಕಾಳು ಒಕ್ಕಿದ ಹಾಗೆ

ಹಮ್‌ ನಹೀ ರೂಕೆಂಗೇ, ನಹೀ ಹಠೇಂಗೆ

ಕಾಯಿದೆ ನಿಮ್ಮ ಸ್ವರ್ಜಿತವಲ್ಲ, ಸ್ವಾರ್ಜಿತವಲ್ಲ

ದುಷ್ಟ ಕಾಯಿದೆಯಿಲ್ಲ ಊರ್ಜಿತವಲ್ಲ, ಊರ್ಜಿತವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.