ADVERTISEMENT

ಮುಚ್ಚಿಕೊಂಡಿದ್ದೇವೆ ಕಣ್ಣು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 19:30 IST
Last Updated 25 ಏಪ್ರಿಲ್ 2020, 19:30 IST
ಕಲೆ: ಮಹಂತೇಶ್‌ ಹನಮಂತ
ಕಲೆ: ಮಹಂತೇಶ್‌ ಹನಮಂತ   

ಮುಚ್ಚಿಕೊಂಡಿದ್ದೇವೆ ಕಣ್ಣು, ನೀವು ಹೇಳುವ ಮುನ್ನ

ನೀವು ಕಾಡುವ ಮುನ್ನ ನೀವೆಮ್ಮ ಮುಟ್ಟುವ ಮುನ್ನ

ಮುಚ್ಚಿಕೊಂಡಿದ್ದೇವೆ ಕಣ್ಣು.

ADVERTISEMENT

ನಿಮ್ಮ ಗಂಟಲ ಅಂಟು, ನಿಮ್ಮ ಮೂಗಿನ ನೆಂಟು

ಆಗಸವನೇರಿ ಭುವಿಗೆ ಧುಮ್ಮಿಕ್ಕಿ

ನಮ್ಮ ಕಿವಿ, ಮೂಗು, ಬಾಯಿಗಳ ಮುಚ್ಚಿಸುವ ಮುನ್ನ

ಮುಚ್ಚಿಕೊಂಡಿದ್ದೇವೆ ಕಣ್ಣು.

ಬೆವರ ಬಟ್ಟೆಯ ಒಗೆದು, ಉಂಡ ತಟ್ಟೆಯ ತೊಳೆದು

ಕೊಳೆ ಬೀದಿ, ಕೊಚ್ಚೆಯ ಹೊಲಸ, ಸ್ವಚ್ಛ ಭಾರತ ಮಾಡುವ ಮುನ್ನ

ಮುಚ್ಚಿಕೊಂಡಿದ್ದೇವೆ ಕಣ್ಣು.

ರೋಗ ಸೋಂಕಿನ ಜತೆಗೆ, ಜಗದೆಡೆಗೆ ಹಾರುತ್ತ ಮೆರೆದು ಕುಣಿದಾಗಲೂ

ಹೆಣಗುಂಡಿ, ಚಿತೆ ಬೆಂಕಿ– ಮುಕುತಿಕೊಡುವಾಗಲೂ

ಮುಚ್ಚಿಕೊಂಡಿದ್ದೇವೆ ಕಣ್ಣು.

ಮರಳು ಕಬ್ಬಿಣ ಸುಣ್ಣ, ಸಿಮೆಂಟು ಕಲ್ಲಿನ ಹಾಸು

ಅರಮನೆಯ ಕಟ್ಟಿದರೂ, ಜೋಪಡಿಯ ಒಳತೂರಿ

ಮುಚ್ಚಿಕೊಂಡಿದ್ದೇವೆ ಕಣ್ಣು.

ಮುಟ್ಟದಿರಿ, ದೂರವಿರಿ, ಮನೆಯೊಳಗೆ ತೆಪ್ಪಗಿರಿ

ಬೀದಿರಕ್ಷಕ, ಅಲೆಮಾರಿ ಬದುಕೆಂದು ಕಳೆವ ದಿನಗಳ ಮಧ್ಯೆ

ಮುಚ್ಚಿಕೊಂಡಿದ್ದೇವೆ ಕಣ್ಣು.

ಅ–ಧರ್ಮರಕ್ಷಕರೆಲ್ಲ– ಅ– ಜ್ಞಾನ ವಿತರಕರೆಲ್ಲ

ನಮ್ಮ ರಕ್ಷಿಸುವ ಮುನ್ನ

ನೂರೇಕೆ ಸಾವಿರದ ಮೈಲುಗಳ ಬಿಸಿಲ ಯಾತ್ರೆಯ ಮಾಡಿ

ನಮ್ಮೂರ‍ಪದ ಗ್ರಹಣ, ನಮ್ಮೂರು ಎಲ್ಲಿ?

ಮುಚ್ಚಿಕೊಂಡಿದ್ದೇವೆ ಕಣ್ಣು.

ಶಾಂತಿರಸ್ತು, ತುಷ್ಟಿರಸ್ತು, ಪುಷ್ಟಿರಸ್ತು, ವೃದ್ಧಿರಸ್ತು

ಮುಚ್ಚಿಕೊಳ್ಳುತ್ತೇವೆ ಕಣ್ಣು

ಮುಚ್ಚಿಕೊಂಡಿದ್ದೇವೆ ಕಣ್ಣು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.