ADVERTISEMENT

ಕವಿತೆ: ಪವಾಡ ಪುರುಷ

ವೈ.ಕೆ.ಸಂಧ್ಯಾಶರ್ಮ
Published 24 ಏಪ್ರಿಲ್ 2021, 19:31 IST
Last Updated 24 ಏಪ್ರಿಲ್ 2021, 19:31 IST
ಸಾಂದರ್ಭಿಕ ಗೀತೆ
ಸಾಂದರ್ಭಿಕ ಗೀತೆ   

ಹೆಣ್ಣಿನ ಬಾಳಿಗೆ ಹೊಸತೊಂದು

ರೇಖೆ ತಿದ್ದುವ, ಭದ್ರ ಬೇಲಿ ಬಿಗಿವ,

ಇದ್ದ ಅಸ್ತಿತ್ವವನೆ ಕುಲುಕಾಡಿಸಿ

ADVERTISEMENT

ತನಗಿಷ್ಟದ ರೂಪ ಕೆತ್ತುವ

ಚತುರಶಿಲ್ಪಿಗೆ

ಗಂಡನೆಂದು ಹೆಸರು

ಸಮೃದ್ಧ ಗಾಳಿ-ಬೆಳಕ ಸೊನೆ ಹೀರಿ

ಹುಲುಸು ಹಸುರಾಗಿ ಚಿಗಿತ

ಪ್ರಫುಲ್ಲ ಕನಸುಗಳ ಮೆಟ್ಟಿ

ಜಂಬುಸವಾರಿಯ ಮೆರೆತ

ಅವನ ಹುಚ್ಚಾಟಗಳ ರಂಗ

ಜೀವ ಹಾರುವ ದಿಗಿಲು

ರಾಹು ಬಡಿದ ವಿಸ್ಮಯ; ತುಯ್ತ

ಆಸೆ ಗೋಪುರ-ಭಾವಮಹಲುಗಳನೆಲ್ಲ

ತೋರುಬೆರಳ ಪವಾಡ ಸ್ಪರ್ಶದಿ

ಗುಬ್ಬಚ್ಚಿಗೂಡು ಮಾಡಿ

ಧಿಮಿಕಿಟ ಧಿಂರಂಗನಂತೆ

ಪ್ರಳಯ ನರ್ತನಗೈವ

ಕಾಲಭೈರವನಿವನು

ಪಟಪಟನೆ ಅರಳುವ

ಬೆರಗು ಕಂಗಳ

ನಿಮಿರುವ ಕಿವಿಗಳ

ನಗೆಯ ಉತ್ಸವದ ತುಟಿಗಳ

ನಿರ್ದಾಕ್ಷಿಣ್ಯ ಮಡಿಸಿ

ಬರಬರನೆ ದಳಿಗೆ ಹಾಕಿಬಿಡುವ

ಮಹಾ ನಿಪುಣ ದರ್ಜಿ ಇವನು

ಅಸ್ಮಿತೆಯ ರೂಪದ

ಹೆಣ್ಣವ್ಯಕ್ತಿತ್ವವನು ತನ್ನಳತೆಗೆ

ಕತ್ತರಿಸಿ ಹೊಲಿದು

ಚೆಂದ ತೊಟ್ಟು ನಲಿವ

ಸೊಗಸುಗಾರ ಪುಟ್ಟಸ್ವಾಮಿ

ಸಕಲ ಸಂಪನ್ನನಿವನು

ಅವಳಾಸೆ ಕನಸು-ಕನವರಿಕೆಗಳ

ಮುತ್ತಂತೆ ಒತ್ತು ಪೋಣಿಸಿ

ಕೊರಳ ವೈಜಯಂತಿಮಾಲೆ ಮಾಡಿ

ವಿಜೃಂಭಿಸಿ ಮೆರೆದು

ವಿಶ್ವರೂಪದ ಜಾದು ತೋರುವ

ಮಹಾ ಮಾಯಗಾರನಿವನು

ಮಿದು ಹೃದಯದ ಪಕಳೆಗಳ

ಹರಿದು ಭಾವಕಣಜವ

ನಾರಸಿಂಹನಂತೆ ಸೀಳಿ ಬಗೆದು

ತೊಗಲ ಜೋಳಿಗೆ ಮಾಡಿ

ತನಗೆ ಬೇಕು ಬೇಕೆನಿಸಿದ್ದೆಲ್ಲ

ಮೊಗೆದು ತುಂಬಿಸಿಕೊಳ್ವ

ಹಪಹಪಿಯಮೈದಾಸನಿವನು

ಒಳಗೆ ಅಸಹಾಯ ಕುದಿ ರಕುತ

ನರನರದ ನೋವ ಮಿಡಿತ

ಸೊಲ್ಲೆತ್ತಲಾರದ ಕುಸಿತ

ಭಾವ ಭರತಗಳ ಹೊಯ್ದಾಟಕೆ

ಕ್ಷಣದಲೆ ಪಟ್ಟು ಹಾಕಿ

ಉಸಿರಡಗಿಸುವ

ನುರಿತ ಪೈಲ್ವಾನನಿವನು

ಮಿಡಿವ ಜೀವಸೆಲೆಯ ಹಿಡಿ

ಪಿಡಿಚೆ ಮಾಡಿ

ಸಪಿಂಡೀಕರಣ ತರ್ಪಣಗಳಲಿ

ಅವಳತನವ ಹೂತು

ಸಮಾಧಿಗಟ್ಟಿಸಿದ ಪೌರುಷ

ಸಾರುವ ಚಾಣಾಕ್ಷ

ಕರ್ಮಟ ವ್ಯಸನಿ ಇವನು

ಕ್ಷಣಚಿತ್ತ ಕ್ಷಣಪಿತ್ತದಿ

ಹೊಯ್ವ ವಿಹ್ವಲತೆಯ

ವ್ಯಸ್ತ ಚಿತ್ತಕೆ ಮುಖವಾಡ

ಗೆದ್ದ ಸೋಗಿನ ಗಾರುಡಿಯ

ಮಾಯಾಲೀಲೆಗಳು

ಈ ಸರ್ವಾಧಿಕಾರದ

ಕೆನೆತ

ಎಂದೂ ಮುಗಿಯದ

ಸರ್ಪಶೇಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.