ADVERTISEMENT

ಶಂಕರ್ ಸಿಹಿಮೊಗೆ ಕವಿತೆ: ಅವ್ವ ಮತ್ತು ದುಡ್ಡಿನ ಚೀಲ

ಶಂಕರ್ ಸಿಹಿಮೊಗೆ
Published 12 ಜೂನ್ 2021, 19:30 IST
Last Updated 12 ಜೂನ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಲೆಯ ಮೇಲೆ
ಸಾಬರ ಮನೆಯ ಹುರುಳಿ
ಬೇಯಿಸುವಾಗ
ಮನೆಯ ತುಂಬಾ
ಅಮವಾಸ್ಯೆಯ ಕತ್ತಲು,
ಬುಡ್ಡಿದೀಪದ ಮುಂದೆ
ಕೂತಿರುತ್ತಿದ್ದ ಅವ್ವ ನನಗೆ
ಥೇಟ್ ಬುದ್ಧನಂತೆಯೇ
ಕಾಣಿಸುತ್ತಿದ್ದಳು, ಅವಳ ಮುಖ
ಸೂರ್ಯನ ಕಿರಣಗಳ ಪ್ರತಿಫಲನಕ್ಕೆ ಹೊಳೆಯುವ
‘ಮರುಭೂಮಿಯಲ್ಲಿನ ಓಯಸಿಸ್‌ನಂತೆ
ಫಳಫಳನೆ ಹೊಳೆಯುತ್ತಿತ್ತು’
ಇಂತಹ ಅವ್ವ ಅವಳ ದುಡ್ಡಿನ ಚೀಲ
ಕಳೆದುಕೊಂಡ ದಿನ ಮಾತ್ರ
ಊರು ಕೇರಿಯ ಒಂದು ಮಾಡಿಬಿಡುತ್ತಿದ್ದಳು.

ಬಳ್ಳಿಯು ಮರವನ್ನು
ನದಿಯು ದಡವನ್ನು
ತಬ್ಬಿ ನಿಂತಂತೆ, ದುಡ್ಡಿನಚೀಲ
ಸದಾಕಾಲವೂ ಅವಳ ಸೊಂಟದ
ಸೆರಗಿನರಮನೆಯೊಳಗೆ ಬೆಚ್ಚಗಿರುತ್ತಿತ್ತು,
ಮಗ ಮಗಳು ಮೊಮ್ಮಕ್ಕಳು
ಇಲ್ಲ ಯಾರೆಂದರೆ ಯಾರು
ಅದನ್ನು ಮುಟ್ಟುವಂತಿರಲಿಲ್ಲ,
ಮುಟ್ಟಿದರೋ ಜಮದಗ್ನಿ
ಅವತಾರವನ್ನೇ ತಾಳಿ ಬಿಡುತ್ತಿದ್ದಳು.

ಪಾರ್ಕಿನ ಗಿಡಗಳಿಗೆ ನೀರುಣಿಸುವಾಗಲೋ,
ಇಲ್ಲ ಕತ್ತಿ ಕಾಯಿಯ ಹೊರೆ ತಲೆಯ ಮೇಲೆ
ಹೊತ್ತುಕೊಂಡು ಪಾರ್ಕಿನಿಂದ ಮನೆಗೆ ಬರುವಾಗಲೋ,
ಇಲ್ಲ ಬೀದಿ ಬದಿಯ ನಲ್ಲಿಯ ಮುಂದೆ
ಕುಡಿಯುವ ನೀರಿಗಾಗಿ ಸರತಿ ಸಾಲಿನಲ್ಲಿ ನಿಂತಾಗಲೋ,
ಚೀಲವನ್ನು ಕಳೆದುಕೊಂಡು ಬಿಡುತ್ತಿದ್ದಳು,
ಗಾಂಧಿಪಾರ್ಕಿನ ಗೆಳತಿ ನಾಗಮ್ಮ,
ಬೇಕೆಂದಾಗ ಸಾಲ ಕೊಡುತ್ತಿದ್ದ ಲಕ್ಷ್ಮಮ್ಮ,
ಮನೆಯ ಜಗಳದ ಪಂಚಾಯತಿಗೆ ಬರುತ್ತಿದ್ದ ಚೆನ್ನಮ್ಮ,
ಮಾತಿಗೆ ಸಿಗುತ್ತಿದ್ದ ತಿಮ್ಮಕ್ಕ,
ಮನೆಗೆ ಬಂದಾಗಲೆಲ್ಲಾ
ಮೀನಿಗೆ ಕಿವಿರಂತೆ,
ನಿಮ್ಮವ್ವನ ಜೀವ ಇರೋದೆ
ಅವಳ ಚೀಲದೊಳಗೆ ಕಣ್ರೋ ಎಂದು ಕಿರುಚುತ್ತಿದ್ದರು,
ಒಮ್ಮೊಮ್ಮೆ ಇವರುಗಳೇ
ಗೆಳೆತನದ ಸಲುಗೆಗೆ
ದುಡ್ಡಿನ ಚೀಲವನ್ನು ಬಚ್ಚಿಟ್ಟು,
ಅವ್ವ ಪಾರ್ಕಿನ ತುಂಬೆಲ್ಲಾ
ನಿಟ್ಟುಸಿರು ಬಿಡುವಂತೆ ಮಾಡಿದ್ದ
ಉದಾಹರಣೆಗಳಿಗೇನು ಕೂಡ ಕೊರತೆ ಇಲ್ಲ!

ADVERTISEMENT

ಬೇಸಿಗೆಯ ರಜಕ್ಕೆ
ಮಕ್ಕಳ ಮಕ್ಕಳೆಲ್ಲ ಮನೆಯ ತುಂಬಾ,
ಬಿದ್ದು ಏಳುವ ಕೂಸುಗಳ ಗಾಯಕ್ಕೆ
ಅವ್ವ ಅರಿಷಿಣವ ಮೆತ್ತುವಾಗ,
ಕುಡುಗೋಲಿನಲ್ಲಿ ತರಿದ
ಅನುಭವ ಎಳೆಯ ಚರ್ಮಕ್ಕೆ,
ದಶಕಗಳ ಕಾಲ ದುಡಿದ
ಅವಳ ಅಂಗೈ,
ಬರಗಾಲದಲ್ಲಿ ಬಿರುಕು ಬಿಟ್ಟ
ಕಬ್ಬಿನ ಗದ್ದೆಯ ನೆಲದಂತೆ ಒರಟು ಒರಟಾಗಿತ್ತು!

ಒಡಲೊಳಗಿನ ಕಿಚ್ಚು
ಅಕ್ಕಿ ತೊಳೆದ ಅಕ್ಕಚ್ಚಿನಂತೆ,
ಜಗುಲಿಯ ಮೇಲೆ
ಅವಳು ಕಥೆ ಹೇಳುವಾಗ
ಮೊಮ್ಮಕ್ಕಳ ತಲೆಯಲ್ಲಿ ಕಥೆ
ಥಕಥಕನೇ ಕುಣಿಯುತ್ತಿತ್ತು,
ಪಾತಾಳಲೋಕದಿಂದ ಇಂದ್ರಲೋಕದವರೆಗೂ
ಆನೆಯ ಮೇಲೆ ಕಥೆ ಸಾಗುವಾಗ,
ಮುಳ್ಳುಗಳ ಬೇಲಿ ಕೈ ತಾಕಿ,
ಚಂದ್ರನ ಬೆಳಕು ಜಗುಲಿಯ ಮೇಲೆ ಮೈತಾಳುತ್ತಿತ್ತು.

ಪೂರ್ವಿಕರು ಬಿಟ್ಟುಹೋದ
ಗತಕಾಲದ ನಿಧಿಯಂತೆ!
ಅವಳು ಜತನದಿಂದ
ಕಾಯುತ್ತಿದ್ದ ದುಡ್ಡಿನ ಚೀಲದಲ್ಲಿ,
ಹೆಚ್ಚೆಂದರೆ ಏನಿರುತ್ತಿತ್ತು?
ಎಲೆ, ಗೋಟು ಅಡಿಕೆ, ಏಲಕ್ಕಿ,
ಸುಣ್ಣದ ಡಬ್ಬಿ, ಒಣಕೊಬ್ಬರಿ
ಮತ್ತು ತಿಂಗಳಾದರೆ ಸಾಕು
ಎಣಿಸುತ್ತಿದ್ದ ಸರಕಾರಿ ಸಂಬಳದ
ಗರಿಗರಿ ಗಾಂಧಿ ನೋಟು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.