ADVERTISEMENT

ಪ್ರಜಾವಾಣಿ ಕ್ಲಬ್‌ಹೌಸ್: ಆಲದ ಮರದಡಿ ಕವಿ ಸಿದ್ದಲಿಂಗಯ್ಯ ನೆನಪುಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜುಲೈ 2021, 13:54 IST
Last Updated 18 ಜುಲೈ 2021, 13:54 IST
ಜಾವಾಣಿ ‘ಆಲದಮರ ಕ್ಲಬ್‌ಹೌಸ್‌’ನಲ್ಲಿ ‘ಕವಿ ಸಿದ್ದಲಿಂಗಯ್ಯ ನೆನಪುಗಳು'
ಜಾವಾಣಿ ‘ಆಲದಮರ ಕ್ಲಬ್‌ಹೌಸ್‌’ನಲ್ಲಿ ‘ಕವಿ ಸಿದ್ದಲಿಂಗಯ್ಯ ನೆನಪುಗಳು'   

ಬೆಂಗಳೂರು: ಆಲದಮರ (ಪ್ರಜಾವಾಣಿ ಕ್ಲಬ್ ಹೌಸ್)- ಭಾನುವಾರ ಬೆಳಿಗ್ಗೆ ನಾಡಿನ ಹಲವೆಡೆ ಧೋ ಎಂದು ಸುರಿಯುತ್ತಿತ್ತು ಮುಗಿಲಿಂದ ಮುಸಲಧಾರೆ. ಪ್ರಜಾವಾಣಿ ಕ್ಲಬ್ ಹೌಸ್ ನಲ್ಲಿ ಅದೇ ವೇಳೆ ಅಗಲಿದ ಕವಿ ಸಿದ್ದಲಿಂಗಯ್ಯವರ ಭಾವುಕ ನೆನಪಿನ ನುಡಿಧಾರೆ. ಸುಮಾರು ಮೂರು ಗಂಟೆಗಳ ಕಾಲ ಗೆಳೆಯರು, ಶಿಷ್ಯರು, ಅಭಿಮಾನಿಗಳು, ಮಗಳು- ಹೀಗೆ ಕವಿಯನ್ನು ನೆನಪಿಸಿಕೊಂಡವರ ಮಾತಿನ ಮಳೆಯಲ್ಲಿ ನೂರಾರು ಜನರು ತೋಯ್ದರು.

ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅವರ ಕಂಚಿನ ಕಂಠದಿಂದ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ.. ಆಕಾಶದ ಅಗಲಕ್ಕೆ ನಿಂತ ಆಲವೇ..’ ಎಂಬ ಹಾಡಿನೊಂದಿಗೆ ಆರಂಭವಾಯಿತು ಕಾರ್ಯಕ್ರಮ. ಅದು ಅಂಬೇಡ್ಕರ್ ಕುರಿತು ಸಿದ್ದಲಿಂಗಯ್ಯ ಅವರು ಬರೆದ ಹಾಡು. ದಲಿತ ಚಳವಳಿಯ ಪ್ರಾರ್ಥನೆಯಂತಹ ಗೀತೆ. ಅದರ ಬೆನ್ನಲ್ಲೇ ಅಗ್ರಹಾರ ಕೃಷ್ಣಮೂರ್ತಿ ಅವರಿಂದ ಮೊದಲ ಮಾತು.

‘ಇಲ್ಲಿ- ಸಾಹಿತ್ಯದಲ್ಲಿ ಹಲವಾರು ಸಂಹಿತೆಗಳು ಇವೆ ಸಾಹಿತ್ಯದಲ್ಲಿ ಹಲವಾರು ಸಂಹಿತೆಗಳು ಇವೆ. ಸಿದ್ದಲಿಂಗಯ್ಯ ಅವರದ್ದು ಮೆಲುದನಿಯ ಹಾಸ್ಯ ಸಂಹಿತೆ. ಅದನ್ನು ಅವರು ಕೊನೆವರೆಗೂ ಉಳಿಸಿಕೊಂಡು ಬಂದರು. ಅವರ ಹಾಡುಗಳು ಎಂಥದ್ದೇ ಕ್ರಾಂತಿಯ ಕಿಡಿ ಹೊತ್ತಿಸಿರಬಹುದು. ಆದರೆ ಮಾತು, ಮನಸ್ಸು ಅಷ್ಟೇ ಸಾತ್ವಿಕವಾಗಿತ್ತು. 1970ರ ದಶಕದ ಆಸುಪಾಸಿನಲ್ಲಿ ನವೋದಯ ಸಾಹಿತ್ಯದ ಕಾಲದಲ್ಲಿ ಇಕ್ರೆಲ್ಲಾ, ವದೀರ್ಲಾ ಎಂಬ ಸಾಹಿತ್ಯದ ಸಾಲುಗಳು ಅಂದಿನ ಕಾಲದ ಸಾಹಿತ್ಯ ಕೃಷಿ ಮಾಡುತ್ತಿದ್ದ ಹಿರಿಯ ಕವಿಗಳ ಕಿವಿಗೂ ಬಿದ್ದು ಅವರೂ ತಿರುಗಿ ನೋಡುವಂತಾಗಿತ್ತು. ಒಂದು ಬದಲಾವಣೆಯ ಅಲೆ ತಂದಿತು’ ಎಂದರು ಕೃಷ್ಣಮೂರ್ತಿ.

ADVERTISEMENT

ಸುಬ್ಬು ಹೊಲೆಯಾರ್‌ ಅವರು ಬಾಳುಪೇಟೆಯಲ್ಲಿ ನಡೆದ ದಲಿತರ ಮೆರವಣಿಗೆಯಲ್ಲಿ ಹುಟ್ಟಿದ‘ಹೋರಾಟದ ಸಾಗರಕೆ ಸಾವಿರಾರು ನದಿಗಳು’ ಎಂಬ ಕವಿತೆಯನ್ನು ನೆನಪಿಸಿಕೊಂಡರು. ಈ ಹಾಡುಗಳು ಅಕ್ಷರವನ್ನು ಮೀರಿ ಜನರಿಂದ ಜನರ ಬಾಯಿಗೆ ಹರಿದಾಡಿತು. ಈ ನೆಲೆಯಲ್ಲಿ ಅವರೊಬ್ಬ ಜನಪದ ಕವಿ ಎಂದು ಸಿದ್ದಲಿಂಗಯ್ಯ ಅವರನ್ನು ಬಣ್ಣಿಸಿದರು.

ಬಿ.ಎಂ ಪುಟ್ಟಯ್ಯ ಅವರು ಸಿದ್ದಲಿಂಗಯ್ಯ ಅವರನ್ನು ಬಣ್ಣಿಸಿದ್ದು ಅವರೊಬ್ಬ ಜನಪದ ಕವಿ ಎಂದೇ, ‘ಕರ್ನಾಟಕದ ಅಷ್ಟೂ ಹಳ್ಳಿಗಳ ಕಷ್ಟ ಸುಖವನ್ನು ಸಿದ್ದಲಿಂಗಯ್ಯ ಅವರು ಸದನದಲ್ಲಿ ಸಮರ್ಥವಾಗಿ ಮಂಡಿಸಿದ್ದರು. ಇಂದು ಪರಿಶಿಷ್ಟ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸೋಪು, ತಲೆಗೆ ಎಣ್ಣೆ ಸಿಗುತ್ತದೆ ಎಂದಾದರೆ ಅದಕ್ಕೆ ಸಿದ್ದಲಿಂಗಯ್ಯ ಅವರು ಬಹಿರಂಗ ಸಭೆಯೊಂದರಲ್ಲಿ ಪ್ರಸ್ತಾಪಿಸಿದ್ದೇ ಕಾರಣ. ನಾಲ್ಕನೇ ತರಗತಿಯ ಪಠ್ಯದಲ್ಲಿದ್ದ ‘ಬಡವರ ಚರಕ’ ಎನ್ನುವ ಪಾಠವನ್ನೇ ತೆಗೆದು ಹಾಕಲು ಅವರು ಕಾರಣರಾಗಿದ್ದರು. ಆ ಪಾಠವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಚರಕದ ಹೆಸರಿನಲ್ಲಿ ಬಡವ– ಶ್ರೀಮಂತ ಎಂಬ ಬೇಧ ಭಾವವನ್ನು ಪ್ರತಿಪಾದಿಸುತ್ತದೆ ಎಂದು ಅವರು ಕಟುವಾಗಿ ಟೀಕಿಸಿದ್ದರು. ಅವರ ಕೃತಿ‘ಸದನದಲ್ಲಿ ಸಿದ್ದಲಿಂಗಯ್ಯ’ ವಿಧಾನಸೌಧಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ರಾಜಕಾರಣಿ ಅಧ್ಯಯನ ಮಾಡಲೇಬೇಕಾದ ಪುಸ್ತಕ’ ಎಂದರು.

ವಿಮರ್ಶಕ ಆರ್‌.ಜಿ.ಹಳ್ಳಿ ನಾಗರಾಜ್‌ ಅವರು ಸಿದ್ದಲಿಂಗಯ್ಯ ಅವರ ಆಫ್ರಿಕನ್‌ ಸಾಹಿತ್ಯದ ಓದು ಮತ್ತು ಪ್ರೀತಿಯ ಕುರಿತು ಗಮನ ಸೆಳೆದರು. ಆಫ್ರಿಕಾದ ಕವಿಯ ಕವಿತೆಯೊಂದನ್ನು ಸಿದ್ದಲಿಂಗಯ್ಯ ಅನುವಾದಿಸಿದ್ದನ್ನು ಓದಿ ಹೇಳಿದರು. ಜಗತ್ತಿನ ಎಲ್ಲ ಶೋಷಿತರ ಪರವಾಗಿ ಯೋಚಿಸುತ್ತಿದ್ದ ಮನಸ್ಸು ಸಿದ್ದಲಿಂಗಯ್ಯ ಅವರದ್ದು ಎನ್ನುವುದು ನಾಗರಾಜ್‌ ಅವರ ವಿವರಣೆ.

ಸಾಹಿತಿ, ಚಿಂತಕ ಡಾ.ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ‘ನಾವು ಕೂಡಾ ಸಿದ್ದಲಿಂಗಯ್ಯ ಅವರು ಪ್ರತಿಪಾದಿಸಿದ ‘ಚೋಮನ ಮಕ್ಕಳು’ ನಾನೂ ಕೂಡಾ ಚೋಮನ ‘ಮಗ’(ನಾಟಕದ ಪಾತ್ರ). ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿದ್ದಾಗ ಅವರ ಕಾವ್ಯಗಳನ್ನು ಹಾಡುತ್ತಿದ್ದೆವು. ಊರಿನ ಗೋಡೆಗಳಲ್ಲಿ ಅವರ ಕಾವ್ಯದ ಸಾಲುಗಳನ್ನು ಬರೆದಿದ್ದೆವು. ಎಲ್ಲಿಗೆ ಬಂತು ಸ್ವಾತಂತ್ರ್ಯ ಎಂದು ಕೇಳಿದರೆ ಗೋಡೆಗೆ ಬಂತು ಎನ್ನುತ್ತಿದ್ದೆವು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

‘ಅವರು ವೈಚಾರಿಕತೆ– ಭಾವುಕತೆಯನ್ನು ಲೌಕಿಕದ ನೆಲೆಯಲ್ಲಿ ಕೊಂಡೊಯ್ದರು. ಲೋಕೋತ್ತರ ನೆಲೆಗೆ ಒಯ್ಯಲಿಲ್ಲ’ ಎಂದರು.

ಸಭೆಯಲ್ಲಿ ಎಲ್ಲರ ಕಣ್ಣು ಆರ್ದ್ರವಾಗಿಸಿದ್ದು ಸಿದ್ದಲಿಂಗಯ್ಯ ಅವರ ಪುತ್ರಿ ಡಾ.ಮಾನಸಾ ಸಿದ್ದಲಿಂಗಯ್ಯ ಅವರ ಮಾತು. ಸಿದ್ದಲಿಂಗಯ್ಯ ಅವರ ಊಟ ತಿಂಡಿಯ ಮೋಹವನ್ನು ಬಣ್ಣಿಸಿದ ಮಾನಸಾ, ‘ಅವರು ಎಂದೂ ಆಹಾರವನ್ನು ಇಂಥದ್ದೇ ಬೇಕು ಎಂದು ಬಯಸಿ ಕೇಳಿದವರಲ್ಲ. ಏನು ಬೇಯಿಸಿ ಕೊಡುತ್ತಿದ್ದೆನೋ ಅದನ್ನು ಹಾಗೆಯೇ ಅವರು ಪ್ರೀತಿಯಿಂದ ತಿನ್ನುತ್ತಿದ್ದರು’ ಎಂದು ಮಾನಸಾ ಹೇಳಿದರು.

ಜೊತೆಗೆ ಮಾನಸಾ ಅವರ ಪುಟ್ಟ ಮಗಳು ತಾತನ ಪದ್ಯವೊಂದನ್ನು ತನ್ನ ತೊದಲು ನುಡಿಯಲ್ಲಿ ಹೇಳಿದ್ದು ಪ್ರೇಕ್ಷಕರನ್ನು ಕವಿಯ ಭಾವಲೋಕಕ್ಕೆ ಕರೆದೊಯ್ದಿತು.

ಸಿದ್ದಲಿಂಗಯ್ಯ ಅವರ ಆತ್ಮೀಯರಾಗಿದ್ದ ಗಾಯಕ ಜನ್ನಿ (ಜನಾರ್ದನ್‌) ಈ ನೆನಪಿನ ಮಳೆಯನ್ನು ಇನ್ನಷ್ಟು ತೇವವಾಗಿಸಿದರು. ಅವರ ಜೊತೆಗಿನ ಭಾವುಕ ಒಡನಾಟವನ್ನು ನೆನಪಿಸಿಕೊಂಡರು. ಮಾನಸಾ ಅವರು ತಮ್ಮ ಮಾತಿನ ನಡುವೆ, ‘ಎಷ್ಟೋ ಸಲ ಜನ್ನಿ ಅವರ ಮನೆಯಿಂದ ಚಪಾತಿ ಮತ್ತು ಆಹಾರ ಸಿಕ್ಕಿದ್ದೇ ನಮಗೆ ಊಟ ಎಂದು ತಂದೆ ಹೇಳುತ್ತಿದ್ದದ್ದನ್ನು ನೆನಪಿಸಿಕೊಂಡದ್ದು ಜನ್ನಿ ಅವರು ಮತ್ತಷ್ಟು ಭಾವುಕರಾಗಲು ಕಾರಣವಾಯಿತು. ಸಿದ್ದಲಿಂಗಯ್ಯ ಅವರ ಎರಡು ಮೂರು ಕವಿತೆಗಳನ್ನು ಜನ್ನಿ ಅವರು ಸುಶ್ರಾವ್ಯವಾಗಿ ಹಾಡಿದರು.

ಅದರಲ್ಲೂ ತುರ್ತು ಪರಿಸ್ಥಿತಿಯ ಕರಾಳ ಕಥೆಯನ್ನು ಸಂಕೇತಗಳಲ್ಲಿ ನೆನಪಿಸಿದ ‘ಉತ್ತರದ ರಾಣಿಯೊಬ್ಬಳು ಇದ್ದಳು ಬಲು ಹಿಗ್ಗಿ’ ಕೇಳುಗರ ಗಮನವನ್ನು ವಿಶೇಷವಾಗಿ ಸೆಳೆಯಿತು.

ಇಡೀ ಗೋಷ್ಠಿಯಲ್ಲಿ ಸಿದ್ದಲಿಂಗಯ್ಯ ಅವರ ಹಾಸ್ಯಪ್ರವೃತ್ತಿಯನ್ನು ತೆರೆದಿಟ್ಟದ್ದು ಕಿರುತೆರೆ ನಿರ್ದೇಶಕ ಟಿ.ಎನ್‌. ಸೀತಾರಾಂ ಅವರ ಮಾತುಗಳು. ಗೆಳೆಯ ಸಿದ್ದಲಿಂಗಯ್ಯ ಅವರು ಆಸ್ಪತ್ರೆಗೆ ಸೇರುವ ಮುನ್ನಾ ದಿನದ ಸಂಭಾಷಣೆಯನ್ನು ನೆನಪಿಸಿಕೊಂಡು ಸೀತಾರಾಂ ಅವರೂ ಭಾವುಕರಾದರು.

ಸಿದ್ದಲಿಂಗಯ್ಯ ಅವರು ಅನಾರೋಗ್ಯಕ್ಕೆ ಒಳಗಾದ್ದನ್ನು ತಿಳಿದು ಅವರನ್ನು ನೋಡಲು ಅಭಿಮಾನಿಗಳು ಅವರ ಮನೆಯ ಮುಂದೆ ಸೇರಿದ್ದು, ಅವರು ಕವಿಯನ್ನು ನೋಡಲು ಬಯಸಿದಾಗ, ಕೋವಿಡ್‌ ಕಾರಣದಿಂದಾಗಿ ಮನೆಯವರು ನಿರಾಕರಿಸಿದ್ದು, ಬಳಿಕ ಸಿದ್ದಲಿಂಗಯ್ಯ ಅವರ ಪರವಾಗಿ ಆ ಅಭಿಮಾನಿಗಳು ಘೋಷಣೆ ಕೂಗುತ್ತಾ ಪ್ರೀತಿ ವ್ಯಕ್ತಪಡಿಸಿದ್ದನ್ನು ಹಾಸ್ಯ ಪ್ರಸಂಗವಾಗಿ ಸೀತಾರಾಂ ಮಾತುಗಳಲ್ಲಿ ತೆರೆದಿಟ್ಟರು.

‘ನಾನು ಸಾಯುವುದಿಲ್ಲ ಗುರುಗಳೇ... ನಾನು ಹೇಗೆ ಸಾಯುವುದಕ್ಕೆ ಸಾಧ್ಯ ನೀವೇ ಹೇಳಿ? ಹೀಗೆ ಸಾವನ್ನೂ ನಗೆಯಾಗಿಯೇ ತೇಲಿಸುತ್ತಲೇ ಹಾಗೇ ಹೊರಟುಬಿಟ್ಟರು ಸಿದ್ದಲಿಂಗಯ್ಯ...’ ಅವರು ಇಲ್ಲವಾದರು ಎಂದು ಹೇಳುವಲ್ಲಿಗೆ ಸೀತಾರಾಂ ಅವರ ಧ್ವನಿಯೂ ತಡವರಿಸಿಬಿಟ್ಟಿತು.

ಸೀತಾರಾಂ ಅವರಿಗೆ ಸಿದ್ದಲಿಂಗಯ್ಯ ಈ ಘಟನೆಯನ್ನು ವಿವರಿಸಿದ್ದನ್ನು ಹೇಳಿದಾಗ ಕೇಳುಗರ ಮುಖದಲ್ಲೂ ಮಂದಹಾಸ ಮೂಡಿತು.

ಮಾಜಿ ಸಚಿವೆ ಮೋಟಮ್ಮ, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಮಾವಳ್ಳಿ ಶಂಕರ್‌, ಚಿಂತಕ ರಘೋತ್ತಮ ಹೋ.ಬ. ಅವರು ಸಿದ್ದಲಿಂಗಯ್ಯ ಅವರ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

ಸಿದ್ದಲಿಂಗಯ್ಯ ಅವರು ಕೊನೆಯ ದಿನಗಳಲ್ಲಿ ತಾವು ಯಾವ ಸಿದ್ಧಾಂತವನ್ನು ಪ್ರತಿಪಾದಿಸಿ ಇನ್ಯಾವ ಸಿದ್ಧಾಂತವನ್ನು ವಿರೋಧಿಸಿದ್ದರೋ ತಮ್ಮ ಸಿದ್ಧಾಂತದ ಪಕ್ಷಕ್ಕೆ ನಿಕಟವಾಗಿದ್ದನ್ನು ಅಭಿಮಾನಿಗಳು ಚರ್ಚೆ ಮಾಡಿದರು. ಅದನ್ನು ಹಲವು ನೆಲೆಯಲ್ಲಿ ವಿಶ್ಲೇಷಿಸಿದರು

ಒಟ್ಟಾರೆ ಇಡೀ ಕಾರ್ಯಕ್ರಮ ಸಿದ್ದಲಿಂಗಯ್ಯ ಅವರ ಜೊತೆಗಿನ ಪಯಣದಂತಿತ್ತು.

ಪ್ರಜಾವಾಣಿ ಪ್ರತಿ ಭಾನುವಾರ, ಆಲದ ಮರ ಕ್ಲಬ್‌ ಹೌಸ್ ಮೂಲಕ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ವಿಶೇಷ ಮಾತುಕತೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಪ್ರಜಾವಾಣಿಯನ್ನು ಕ್ಲಬ್‌ಹೌಸ್‌ನಲ್ಲಿ ಫಾಲೊ ಮಾಡಿ: https://www.clubhouse.com/club/prajavani

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.