ADVERTISEMENT

ಕವಿತೆ: ಮೂಗೊಣಗಿ ಮೂಗುತ್ತವಾಗಿ

ಉಜ್ಜಜ್ಜಿ ರಾಜಣ್ಣ
Published 2 ಜನವರಿ 2021, 19:30 IST
Last Updated 2 ಜನವರಿ 2021, 19:30 IST
ಕಲೆ: ಸಂಜೀವ್‌ ಕಾಳೆ
ಕಲೆ: ಸಂಜೀವ್‌ ಕಾಳೆ   

ಹೊಟ್ಟೆ ಚೀಲ
ಪಟ್ಟೆ ದಟ್ಟಿ
ಬೆಳ್ಳಿ ಲಾಳ
ಸುತ್ತಿದಾ ದಿಂಡುಡಿಗೆ
ಹೋರಿ ಪಯಣ
ಹಟ್ಟಿಉದೀಲಿ
ಐಬಾದ
ಗಿಡ ಹುಟ್ಟಿ
ಹಟ್ಟಿ ಗೌಡುನ
ನಡೆ ಹಿಂದೆ
ಒಕ್ಕಲು ಮುಂದೆ
ಒಕ್ಕಲು ಮಕ್ಕಳು ಮುಂದೆ ಮುಂದೆ

ತೆಂಕಲು ಮುಖವಾಗಿ
ಮೂಡ್ಲು ಉರಿದೋಗಿ
ಪಡುವಲು ಹೆಳವನಾಗಿ
ಬಡಗಲೊಳಗೆ
ಹರಿಯ
ಶಿರ ತರಿದು
ಹೊತ್ತು ಹುಟ್ಟುವಾಗ
ಹೂ ಅರಳುವಾಗ
ಹುತ್ತದಾ ನಾಗ
ಎಡೆ ಎತ್ತಿ ಆಡೋವಾಗ
ಕಾಡುಗ ಬಂದಾವೆ
ಹೊಲಕೆಲ್ಲಾ

ಆವಿಗೆ ಬೂದಿ
ಹಾರೀತು ಕೇರೀಗೆ
ಹಟ್ಟಿಗೇ ರಂಗಾಲಿ ಇಟ್ಟಂಗೆ
ದೊಣೆ ಗುಡ್ಡದೊಳಗೆ
ಮಟ್ಟಾಡಿ ಮಸಕಾಡಿ
ಸೂಲೊಳ್ಳೆ ಮಾಡಗಳು
ಸುರಿಸ್ಯಾವೆ ಇಸದ ಹನಿಯ
ಗಡಗಡನೆ ನಡುಗೇವೆ
ಕುಬ್ಬದಾ ಮರಿ ತೊಳ್ಳೊಡೆದು

ಬಿದ್ದ ಹೊಡೆಗಾಯೀಗೆ
ಗರ್ಭ ನಡುಗಾವೆ
ಒಡಲೊಳಗೆ
ಈಡುಗಾಯಿ ಹಿಡುದಾರೆ
ಹಾಸಿ ಅಡ್ಡುಬಿದ್ದು
ಬಾಸಿ ಕೈಯ್ಯಾ ಮುಗಿದು
ಮಾರುದ್ದ ಕೈ ಹಾಕಿ
ಬಾಗಲು ಮಗ್ಗಲು ತಡೆದು
ಇಟ್ಟಾಡಿ ಹೊತ್ಲುಟ
ತುಳಿದಾವೆ ಕಾಯೆಲ್ಲ
ಸುರಿದಾವು ದಟ್ಟಿ ಒಳುಗೆ
ರವುರವುನಾದ ವರವೆಲ್ಲ
ಜಗ್ಗಿ ಬೆಲೆಯಾದೋ ದಿನಿಸೆಲ್ಲ

ಕೊಡಲಿ ಹೆಗಲಿಗೆ ಏರಿ
ನೆಟ್ಟಂದ ಮರ ಇಳಿಸಿ
ಚಿತ್ತಾರದ ಏಣು
ರೂವಾರದ ಏಣು
ಕದಲಿದವು ಬಣ್ಣಗಳು
ಎತ್ತಲಾರದ ಕಂಬಿ
ಎತ್ತಲಾರೆನು ಸಿವುನೆ
ಬಾಲದ ಬುಡದಿಂದ
ಬನಿಯಾದ ನಡ ಹಾಯ್ದು
ಸೆಂಬೆಗೆ ಸೆಲೆಯಾಗಿ
ಮೂಗೊಣಗಿ ಮೂಗುತ್ತವಾಯ್ತು
ಉರಿ‌ ಬಾವು ಬಂತಲ್ಲ
ಭುಜ ಬಲಕೆ

ಕುಟ್ದಕ್ಕಿ ಕೊಂಡು
ಕುಡಿಕೆಗಳು ಎಣ್ಣೆ ಕೊಂಡು
ಗಿಡಕೊಂದು ಹೂವ ಕೊಯ್ಕಂಡು
ಸುತ್ತೊಕ್ಕಲೆಲ್ಲಾ ಸೇರಿ
ದ್ಯಾವರು ದಿಂಡ್ರು ಮಾಡಿ
ನಡೆದಾರೆ ಸಿವುನ ನೆಲೆ ಹುಡುಕಿ

ಹಳ್ಳ ಇಳುದಾರೆ
ದಿಣ್ಣೇಯ ಹತ್ತೇರೆ
ಗುಡುಗಿಲ್ಲ ಮಿಂಚಿಲ್ಲ
ಎರಗಿ ಬರುವಾ ಸಿಡಿಲು
ಮೊದಲಿಲ್ಲ ಹರನೆ
ಕೆಮ್ಮೂಗಿಲಿಲ್ಲ
ಕೆಸರಿಲ್ಲ ಸಿವುನೆ

-ಉಜ್ಜಜ್ಜಿ ರಾಜಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT