ಕವಿತೆ: ಕಣ್ಣಿವೆಯ ತಪ

ಮಂಜುಳಾ ಸಿ.ಎಸ್‌. Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಎಂದೂ ಮುಗಿಯದ
ತಪಕೆ ನಿಂತಿಹ
ಕಣ್ಣುಗಳ ಸಂತೈಸು
ಕಾರಿರುಳಲಿ ಕಣ್ಣವೆಗಳೆರಡು
ಒಂದಾಗಲಿ ಅದಾಗದಿದ್ದರೆ
ಕಡೇಪಕ್ಷ
ಕಣ್ಣಿನನಿಗಳು
ಸ್ವಾತಿ ಮುತ್ತಾಗಳಾದರೂ ಆಗಲಿ ಬಿಡು॥

ಒಪ್ಪಿಕೋ ನಲ್ಲ
ಸುಟ್ಟು ಹೋಗಲಿ
ಇನ್ನಾದರೂ ಹತ್ತಲವು
ವರುಷಗಳ ವಿರಹ
ಅದಾಗದಿದ್ದರೆ
ಕಡೇಪಕ್ಷ
ಕಳೆದ ನಿರಥ೯ಕ ಕ್ಷಣಗಳಿಗೆ
ತಿರಸ್ಕಾರದ ಮುದ್ರೆಯೊತ್ತಿ ಬಿಡು॥

ನಿದಿರೆ ಕಾಣದ ಕಣ್ಣವೆಗಳಿಗೆ
ತಂಪನೀವ
ಮುತ್ತನಿಡು ಅದಾಗದಿದ್ದರೆ
ಕನಸ ಬಸಿರ ಹೊತ್ತಿಹ
ಉಸಿರಿಗಿನ್ನಾದರೂ
ಕಡೆಪಕ್ಷ ಚೆಂದದ
ಹೆಸರನೊಂದ ಇಟ್ಟು ಬಿಡು॥

ಹೆಚ್ಚೇನಿಲ್ಲ ಮುಗಿಯದ
ಕತೆಗೆ ಮಾತುಕತೆಗೆ
ಜನುಮಕ್ಕಾಗುವಷ್ಟು-
ರವಷ್ಟು
ನೆನಪು ಕಟ್ಟಿ ಕೊಡು
ಅದಾಗದಿದ್ದರೆ ಕಡೆಪಕ್ಷ
ಕುಡಿನೋಟದ ಪ್ರೀತಿಯ
ಕಡ ಕೊಟ್ಟು ಬಿಡು॥

ನಾಲ್ಕಾರು ಸಂಜೆಗಳು
ನಲಿವಿನ ರಂಗು ತರಲಿ
ಅದಾಗದಿದ್ದರೆ ಕಡೇಪಕ್ಷ
ಕಾನನ ಬೆಳದಿಂಗಳಲಿ ಒಮ್ಮೆ
ಯಾದರೂ ಮಲ್ಲಿಗೆ ಮುಡಿಯಲಿಡು
ಅರೆಘಳಿಗೆಯಾದರೂ ಅವು
ಬಿರಿದು ಉದುರಲಿ॥

ಅಂತಿಮ ಭೇಟಿಗೆ
ಗುರುತಿಟ್ಟ ಜಾಗಕೆ
ಹೇಳಿದ ತಾರೀಕಿಗೆ
ಖಂಡಿತ ನೀನೆಂದು ಬಾರದಿರು
ಕಡೇಪಕ್ಷ ಮುಂದಿನ
ದಾರಿಗೆ ನೀರೀಕ್ಷೆಯ ಕಾವಿಗೆ
ಜೀವವ ಮತ್ತೆ
ಬೇಯಲು ಬಿಡು॥

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.