ADVERTISEMENT

ಕವಿತೆ | ತಾಲೀಮು

ಲಕ್ಷ್ಮಣ ವಿ.ಎ.
Published 4 ಏಪ್ರಿಲ್ 2020, 19:30 IST
Last Updated 4 ಏಪ್ರಿಲ್ 2020, 19:30 IST
ಕಲೆ: ಸಂಜೀವ್‌ ಕಾಳೆ
ಕಲೆ: ಸಂಜೀವ್‌ ಕಾಳೆ   

ಈ ಉರಿವ ಬೆಳದಿಂಗಳಿನಲಿ ಉಕ್ಕಿದ
ಕಡಲಿಗೆ
ಊರ ಬೀದಿಯಲಿ ಬಿಕ್ಕುವ ನಲ್ಲಿಯ ಕನಸು ಬಿದ್ದಿರುವುದು ನಿಜವೇ ?

ಒಣಗಿದ ಬಾಯಿಯ ನಲ್ಲಿಯ ಸುತ್ತ ಸಮುದ್ರ ರಾಜನ ಕತೆ ಹೇಳುತ್ತ
ಅವನ ರಾಣಿಯ ಚೆಲುವ ಹೊಗಳುತ್ತ
ಸಾಲಾಗಿ ಭಜನೆಗೆ ಕುಳಿತ ಬತ್ತಿದ ಕೊಡಗಳ
ಮೈ ಮನಸಿನ ತುಂಬ ಸೊಕ್ಕಿ ಹರಿವ
ಹಿರಿ ಹೊಳೆಯಲಿ
ಈಸು ಬಿದ್ದಂತಹ ಕನಸು

ಇನ್ನೇನು ಕಡಲ ಮೇಲಿನ ಚಂದ್ರ ಇವಳ ಕನಸಿನೊಳೂ ಮೂಡುತ್ತಾನೆ ಅನುದಿನವೂ
ನಲ್ಲಿಯ ಬಾಯಿಗೆ ಕಿವಿಯಿಟ್ಟ ಪೋರರ ಕಿವಿಯೊಳಗೆ
ಕಡಲ ಅಲೆಗಳ ತೋಂತನದ ಸರಿಗಮಪ
-ದ ಸದ್ದಿರದ ಸಂಗೀತದ ಅನುರಣನ

ತಿಂಗಳ ಬೆಳಕಿನ ಕಡಲ ರೇತಿನಲಿ
ಯಾರ ಖೂನೂ ಗುರುತೂ ಉಳಿಸದ ಚೆಲ್ಲಾಪಿಲ್ಲಿ ಹೆಜ್ಜೆಗಳು
ಮನೆಯಿರದ ಮಕ್ಕಳು
ಕಟ್ಟಿದ ಮರಳ ಮನೆಗಳು
ನಲ್ಲಿಯಲಿ ನೀರು ಬಂದರೆ ಮೊದಲು ಗೊತ್ತಾವುದೇ
ಈ ಕಡಲ ಕಿನ್ನರರ ಒಳಗಿವಿಗಳಿಗೆ

ADVERTISEMENT

ಎಲ್ಲಿ ನಡೆದು ಹೋದರು ಇವರೆಲ್ಲ ?
ತಮ್ಮ ತಮ್ಮ ಹೆಜ್ಜೆಗಳ ಗುರುತೂ ಇರಿಸದೆ
ಇನ್ನೇನು ಉಕ್ಕುತ್ತದೆ ಕಡಲು
ಅಲೆ ಮುಕ್ಕುತ್ತದೆ ಎಲ್ಲ ಮಕ್ಕಳ ಮರಳ ಮನೆ
ಮರಳಿಗೆ ನೋವಾಗದಂತೆ ಮೂಡಿದ ಅವಳ
ಅರ್ಧ ಮೂಡಿದ ಹೆಜ್ಜೆ
ಇಲ್ಲಿ
ಕಡಲ ಮೇಲಿನ ಚಂದ್ರ
ಇವಳ ಕೊಡದೊಳಗೂ ಇವಳ ಒಡಲೊಳಗೂ
ಏಕಕಾಲಕ್ಕೆ ಮೂಡುವುದ ನಿಂತು
ನೋಡಲು ಎರಡು ಕಣ್ಣಿದ್ದರೆ ಸಾಲದು
ಕಣ್ಣು ಗಳಿಗೆ ಕನಸು ಕಾಣುವ ತಾಲೀಮೂ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.