ADVERTISEMENT

ಕವಿತೆ: ಇರುವೆಯ ಮಾಲೀಕ

ಸತ್ಯಮಂಗಲ ಮಹದೇವ
Published 21 ನವೆಂಬರ್ 2020, 19:30 IST
Last Updated 21 ನವೆಂಬರ್ 2020, 19:30 IST
   

ಬರಿಯ ಕಣ್ಗೆ ಕಾಣದಂತೆ
ಯಂತ್ರಗಣಕೆ ದಕ್ಕದಂತೆ
ಶತ ಶತ ಶತಮಾನಗಳಲಿ
ವ್ಯೋಮ ಬಯಲ ಗಾಳಿಯಲಿ
ಉಸಿರೆನ್ನುವ ಉಸಿರಿನಲಿ
ಇರುವೆ ನೀ ಮಾಲೀಕ

ಚಾರ್ವಾಕರ ದನಿಗಳಲಿ
ಕಬ್ಬಿನೊಳಗೆ ಸಿಹಿಯಾಗಿ
ನಾಸ್ತಿಕರ ಹೃದಯಗಳಲಿ
ಬಂಡೆಯೊಳಗೆ ಜಲವಾಗಿ
ಆಸ್ತಿಕರ ಮೌಲ್ಯಗಳಲಿ
ಹೂವಿನೊಳಗೆ ಮಕರಂದವಾಗಿ
ಇರುವೆ ನೀ ಮಾಲೀಕ

ಈ ಗಾಳಿ ಬಯಲ ಲೋಕದಲ್ಲಿ
ಎರೆಹುಳದ ಹೃದಯದೊಳಗೆ
ಪ್ರೇಮದಂತೆ ತುಂಬಿ ಬಂದೆ
ಇರುವೆಯ ಬಾಯೊಳಗೆ
ಆಹಾರದ ತುಂಡಿನಂತೆ ಜೀವ ಪೋಷಕ
ಮಿಡತೆ, ಕೀಟ ಕುಕ್ಕುಟಗಳ ರೆಕ್ಕೆಯೊಳಗೆ
ಹಾರುವಂತ ಬಲವಾಗಿ
ನೀ ಇರುವೆ ಮಾಲೀಕ
ಇರುವೆಯ ಮಾಲೀಕ

ADVERTISEMENT

ಮೋಡದಾಚೆ, ಹಿಮದ ಮಧ್ಯೆ
ಪಾತಾಳದ ಪದರಗಳಲಿ
ಕಾಣಲಾಗದಂತ ನಿನ್ನ ಮೊಗವ
ಶಿಶು ಕಂದನ ಮರುಳುನಗೆಯಲಿ
ಜೇನಿನ ಸವಿಯ ಸ್ವಾದದಲಿ
ಸಂಗೀತದ ಇಂಪಿನಲ್ಲಿ
ಬೇಲಿಹೂವ ಸ್ಥೈರ್ಯದಲಿ
ನಿನ್ನ ಕುರಿತು ಬರೆಯುವ ಈ ಪದಗಳಲ್ಲಿ
ನೀ ಇರುವೆ ಮಾಲೀಕ
ಇರುವೆಯ ಮಾಲೀಕ

-ಸತ್ಯಮಂಗಲ ಮಹಾದೇವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.