ADVERTISEMENT

ಸುಧಾಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 19:45 IST
Last Updated 7 ಡಿಸೆಂಬರ್ 2019, 19:45 IST
   

ಈತ ಶ್ರೀಕೃಷ್ಣನ ಬಾಲ್ಯದ ಸ್ನೇಹಿತ. ಕುಚೇಲ ಎನ್ನುವುದು ಸುಧಾಮನ ಇನ್ನೊಂದು ಹೆಸರು. ಶ್ರೀಕೃಷ್ಣ ಮತ್ತು ಸುಧಾಮ ಸಾಂದೀಪನಿ ಮುನಿಯ ಆಶ್ರಮದಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದವರು. ಶ್ರೀಕೃಷ್ಣ ಮತ್ತು ಸುಧಾಮನ ಸಾಮಾಜಿಕ ಸ್ಥಾನಮಾನಗಳು ಇಬ್ಬರ ಸಂಬಂಧವನ್ನು ಹಾಳುಮಾಡಲಿಲ್ಲ.

ಸುಧಾಮನಿಗೆ ಇಬ್ಬರು ಮಕ್ಕಳು. ಆತ ಬಡವನಾಗಿಯೇ ಇದ್ದ. ಬಡತನವನ್ನು ಸಹಿಸಲು ಅಸಾಧ್ಯವಾದಾಗ, ‘ನಿಮ್ಮ ಸ್ನೇಹಿತ ಶ್ರೀಕೃಷ್ಣನಿಂದ ಸಹಾಯ ಕೇಳಿ’ ಎಂದು ಪತ್ನಿ ಹೇಳಿದಳು. ಸಹಾಯ ಕೇಳಲು ಮುಜುಗರ ಆದರೂ ಸುಧಾಮನು ಶ್ರೀಕೃಷ್ಣನಲ್ಲಿಗೆ ಹೊರಟ. ಹೋಗುವಾಗ ಒಂದು ಬಟ್ಟೆಯ ಗಂಟಿನಲ್ಲಿ ಒಂದಿಷ್ಟು ಅವಲಕ್ಕಿ ಕಟ್ಟಿಕೊಂಡು ಹೋದ. ಶ್ರೀಕೃಷ್ಣನಿಗೆ ಕೊಡಲು ಬಡ ಸುಧಾಮನ ಬಳಿ ಬೇರೆ ಏನೂ ಇರಲಿಲ್ಲ.

ಸುಧಾಮನನ್ನು ಕಂಡು ಖುಷಿಪಟ್ಟ ಶ್ರೀಕೃಷ್ಣ, ಅವನನ್ನು ಬಹಳ ಆದರದಿಂದ ಬರಮಾಡಿಕೊಂಡ. ಅವನಿಗೆ ರಾಜಮರ್ಯಾದೆ ನೀಡಿದ. ಸುಧಾಮ ಹಿಂಜರಿಕೆಯಿಂದ ನೀಡಿದ ಅವಲಕ್ಕಿಯನ್ನು ಬಹಳ ಇಷ್ಟಪಟ್ಟು ತಿಂದ. ‘ಎಷ್ಟು ರುಚಿಯಾಗಿದೆ ನೀನು ಮನೆಯಿಂದ ತಂದ ಅವಲಕ್ಕಿ’ ಎಂದು ಖುಷಿಪಟ್ಟ. ಶ್ರೀಕೃಷ್ಣ ತನಗೆ ನೀಡಿದ ಸತ್ಕಾರ ಕಂಡು ಸುಧಾಮನಿಗೆ ಮಾತೇ ಹೊರಡದಂತೆ ಆಯಿತು. ತಾನು ಬಂದಿದ್ದು ಏಕೆ ಎಂಬುದನ್ನೇ ಮರೆತ ಸುಧಾಮ ಮನೆಗೆ ಮರಳಿದ.

ADVERTISEMENT

ಆದರೆ, ಆಶ್ಚರ್ಯವೆಂಬಂತೆ ಸುಧಾಮ ಮನೆಗೆ ಮರಳಿದಾಗ ತನ್ನ ಗುಡಿಸಲು ಇದ್ದ ಜಾಗದಲ್ಲಿ ದೊಡ್ಡ ಮನೆ ತಲೆ ಎತ್ತಿರುವುದನ್ನು ಕಂಡ. ಅಷ್ಟೇ ಅಲ್ಲ, ಶ್ರೀಕೃಷ್ಣನು ಸುಧಾಮನ ಕುಟುಂಬಕ್ಕೆ ಹಣದ ಸಹಾಯವನ್ನೂ ಮಾಡಿದ್ದ. ತಾನು ಬಾಯಿಬಿಟ್ಟು ಕೇಳದಿದ್ದರೂ ತನ್ನ ಅಗತ್ಯ ಏನು ಎಂಬುದನ್ನು ಅರ್ಥಮಾಡಿಕೊಂಡ ಬಾಲ್ಯದ ಗೆಳೆಯ ಶ್ರೀಕೃಷ್ಣನಿಗೆ ಸುಧಾಮ ಕೃತಜ್ಞತೆ ಸಮರ್ಪಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.