ADVERTISEMENT

ಕಥೆ: ಬಾರ್ಬಿ ಬ್ಯಾಗು ಮತ್ತು ಸೋನುಪುಟ್ಟಿ

ನಂದಿನಿ ವಿಶ್ವನಾಥ ಹೆದ್ದುರ್ಗ
Published 2 ಜನವರಿ 2021, 19:31 IST
Last Updated 2 ಜನವರಿ 2021, 19:31 IST
ಕಲೆ: ಸಂಜೀವ್‌ ಕಾಳೆ
ಕಲೆ: ಸಂಜೀವ್‌ ಕಾಳೆ   

'ಪುಟ್ಟೂ..

ಬಾ ಮಗನೇ ಇಲ್ಲಿ. ಇದೊಂಚೂರು ಎಣಿಸಿಕೊಡು.'

ಆಚೆ ಕಡೆ ಮೆಟ್ಟಿಲು ಮೇಲೆ ಕುಳಿತು ಮೊಬೈಲ್ ಗೇಮ್ ಆಡ್ತಿದ್ದ ತನ್ನ ಹನ್ನೊಂದು ವರ್ಷದ ‌ಮಗನನ್ನು ಕೂಗಿ ಕರೆದಳು ಸಿಂಧೂರಿ.

ADVERTISEMENT

ಮತ್ತೆ ‌ತನ್ನ ಲೆಕ್ಕದ ಪುಸ್ತಕ ತೆಗೆದು ಪಕ್ಕದಲ್ಲಿದ್ದ ಕ್ಯಾಲ್ಕುಲೇಟರ್ ಒತ್ತಿ ಕೂಡಿಸಿ ಕಳೆದು ಕೈ ಬೆರಳು ಮಡಿಸಿ ಎಣಿಸಿ ಬಂದ ಮೊತ್ತವನ್ನು ಲೆಕ್ಕದ ಪುಸ್ತಕಕ್ಕೆ ಬರೆದು ಬೆವರೊರೆಸಿಕೊಂಡಳು.

ತಣ್ಣಗಿನ ಅಲೆಯೊಂದು‌ ಕಾಲ್ಬೆರಳಿಂದ‌ ನಡುನೆತ್ತಿವರೆಗೆ ಹಾದು ಹೋದಂತಾಗಿ ಮತ್ತೆ ಪಕ್ಕದಲ್ಲಿದ್ದ ಲೆಕ್ಕದ ಪುಸ್ತಕ ನೋಡಿ ನೋಟು ಎಣಿಸಿದಳು.ಎಂಟುಸಾವಿರದ ಇಪ್ಪತ್ತು ರೂಪಾಯಿ ಬರ್ತಿದೆ.ಕಣ್ಣು ಕಿರಿದುಗೊಳಿಸಿ‌ ಕ್ಯಾಲ್ಕುಲೇಟರ್ ನ್ನು ತನ್ನ ಲೆಕ್ಕದ ಪುಸ್ತಕವನ್ನು ನೋಡಿ ಮತ್ತೆ "ಪುಟ್ಟೂ " ಸ್ವಲ್ಪ ಗಡಸು ಧ್ವನಿಯಲ್ಲಿ ಕೂಗಿದಳು.

ಬಂದೇ ಕಣಮ್ಮಾ ಅಂತ ಸಹಜ ಸಿಡುಕಿನಲ್ಲಿ ಬಳಿಬಂದ ಪುಟ್ಟು 'ಎಂತದಮ್ಮಾ'ಅಂದ.

'ಪುಟ್ಟು..ಬಾ ಮಗನೇ ಇಲ್ಲಿ.

ಈ ದುಡ್ಡು ಒಂಚೂರು ಎಣಿಸಿಕೊಡಪ್ಪಾ.ಯಾಕೋ ಕನಫ್ಯೂಸ್ ಆಗ್ತಿದೆ'

ಎಂದವಳನ್ನು

'ನಿಂದೊಂದು ಕಣಮ್ಮಾ.ಯಾವಾಗಲೂ ಇದ್ದಿದ್ದೆ'

ಅಂದ ಪುಟ್ಟು.

ತನ್ನ ವಯಸ್ಸಿಗೂ ಮೀರಿ ಸಿಕ್ಕಿದ ಈ ದೊಡ್ಡ ಜವಬ್ದಾರಿಯಿಂದಾಗಿ ಸ್ವಲ್ಪ ದೊಡ್ಡವನಾದಂತೆಯೂ ಅಮ್ಮನಿಗೆ ತನ್ನ ಸಹಾಯ ಈ ಸಮಯದಲ್ಲಿ ಅಗತ್ಯ ಅಂತಲೂ ಅನ್ನಿಸಿ ಅದೇ ಖುಷಿಯಲ್ಲಿ ಅಮ್ಮನನ್ನು ಗದರಿದ.

'ಎಲಾ. ಆ ಕಡೆ ಒತ್ಕಾ ಒಂಚೂರು'

ಸಿಂಧೂರಿ ಪಕ್ಕಕ್ಕೆ ಕೂತು ನಿಧಾನವಾಗಿ ಎಣಿಸು‌ ಮಗನೇ ಅಂದಳು.ಅವಳ ಸ್ವರ ನಡುಗುತಿತ್ತು.ಪುಟ್ಟು ಕತ್ತೆತ್ತಿ‌ ಒಮ್ಮೆ ಅಮ್ಮನನ್ನು ನೋಡಿದವನು ನೂರರ ಹತ್ಹತ್ತು‌ ನೋಟುಗಳನ್ನು ಬೇರೆಬೇರೆ ಇಟ್ಟು ಎಣಿಸತೊಡಗಿದ. ನೋಟುಗಳು‌ ಮುಗ್ಗಿದಂತಾಗಿ ಒಂದಕ್ಕೊಂದು ಅಂಟಿಕೊಂಡಿದ್ದರಿಂದ ಎಣಿಕೆ ನಿಧಾನ ಆಗ್ತಿತ್ತು.

ಈ ವಾರದ ಆಳುಗಳ ಬಟವಾಡೆ ಆರಸಾವಿರದಿನ್ನೂರು. ಸಾವಿರದೇಳ್ನೂರು ಗೊಬ್ಬರದಂಗಡಿ ಬಾಕಿ. ಬಿತ್ತನೆ ಶುಂಠಿ ಸಾಕಾಗದೆ ಪುನಃ ತರಿಸಿಕೊಂಡಿದ್ದು ಸಾವಿರದೈನೂರು. ಈ ವಾರದ ಖರ್ಚು ಲೆಕ್ಕ ಹಾಕಿ ವರ್ಷಗಳ ಹಿಂದೆ ಕಪಾಟಿನ ಒಳಗಿನ ಪುಟ್ಟ ಮೂಲೆಯಲ್ಲಿಟ್ಟದ್ದ ದುಡ್ಡನ್ನು ಎಣಿಸಿ ಒಂಬತ್ತೂವರೆ ಸಾವಿರ ಬಂದಾಗ ಈ ವಾರಕ್ಕೆ ಆಗ್ತದೆ ಅಂದುಕೊಂಡಿದ್ದಳು. ಎಣಿಸಿ ಲೆಕ್ಕದ ಪುಸ್ತಕದ ಒಳಗಿಟ್ಟು ಪುಸ್ತಕವನ್ನೂ ಬೀರಿನ ಒಳಗಿಟ್ಟು ಬೀಗ ಹಾಕಿದ್ದು ನೆನಪಿದೆ. ಮುಂದಿನ ವಾರದಿಂದ ಶುಂಠಿ ಗದ್ದೆ ಖರ್ಚಿಗೆ ಬ್ಯಾಂಕಿಂದ ಹಣ ತರಬೇಕಾಗುತ್ತೆ ಅಂದುಕೊಂಡಳು.

ಬ್ಯಾಂಕಲಿ ಇರುವ ದುಡ್ಡನ್ನೂ ಎಷ್ಟಿದೆ ಅಂತ ಪಾಸ್ ಬುಕ್ ತೆಗೆದುನೋಡಿದ್ದವಳು ಇನ್ನೂ ಆರು ತಿಂಗಳು ಪ್ರತಿ ವಾರ ಕನಿಷ್ಠ ಅಂದರೂ ಹತ್ತುಸಾವಿರ ಖರ್ಚು. ಬ್ಯಾಂಕಿನ ಹಣ ಶುಂಠಿ ಕೀಳುವವರೆಗೆ ಸಾಕಾಗುವುದು ಕಷ್ಟ ಎನಿಸಿದರೂ ಮುಂದೆ ನೋಡಿಕೊಳ್ಳೋಣಾ, ದೇವರಿದ್ದಾನೆ ಅನಿಸಿತ್ತು. ಆದರೆ ಈಗ ನೋಡಿದರೆ ನಿನ್ನೆ ಎಣಿಸಿಟ್ಟ ದುಡ್ಡೇ ಕಡಿಮೆ ಬರ್ತಿದೆ.
ಮಕ್ಕಳು ಮತ್ತು ನಾವಿಬ್ರು ಬಿಟ್ರೆ ಮನೆಗೆ ಯಾರೂ ಬಂದಿಲ್ಲ.

'ಅಮ್ಮಾ,ಎಂಟು ಸಾವಿರ ಇದೆ ನೋಡ್ಕೋ.ಇಪ್ಪತ್ತು ರೂಪಾಯಿ ಇಲ್ಲಿದೆ'ಎನ್ನುತ್ತಾ ಅಮ್ಮನ ಮುಖ ನೋಡಿದ ಪುಟ್ಟು. ಸಿಂಧೂರಿ ಇನ್ನೂ ಗಾಬರಿ ಯಿಂದ ಬೀರು ತೆಗೆದು ಮತ್ತೆಮತ್ತೆ ಹುಡುಕತೊಡಗಿದಳು.ಉಳಿದ ಸಾವಿರದೈನೂರು ಕಾಣ್ತಿಲ್ಲ. ದೇವರೆ..ಈಗೇನು ಮಾಡುವುದು. ಕಳೆದ ವಾರವೇ ಗೊಬ್ಬರದ ಅಂಗಡಿಯಲ್ಲಿ ಮುಂದಿನ ವಾರ ಕೊಡುವುದಾಗಿ ವಾಯಿದೆ ಹೇಳಿಯಾಗಿದೆ. ಇನ್ನು ಬಟವಾಡೆ ಒಂದ್ರೂಪಾಯಿ ನಿಲ್ಲಿಸಿದ್ರೂ ಬರುವ ವಾರಕ್ಕೆ ಹೆಣ್ಣಾಳು ಕೈಕೊಡುವುದು ಗ್ಯಾರೆಂಟಿ. ಬಿತ್ತನೆ ಶುಂಠಿಯವ ಫೋನ್ ಮಾಡಿ ಅಕ್ಕಾ ಇನ್ನೈನೂರು ಸೇರಿಸಿ‌ ಕೊಟ್ಟಿರಕ್ಕಾ.ತಿಂಗಳೊಳಗೆ ಕೊಡ್ತಿನಿ ಅಂತ ವರಾತ ತೆಗೆದಿದ್ದಾನೆ. ಅವನ‌ ಹಣವನ್ನಾದ್ರೂ ಕೊಡಲೇಬೇಕು.ನಿಲ್ಸೋ ಹಾಗಿಲ್ಲ. ಆದರೆ ಪ್ರಶ್ನೆ ಅದಲ್ಲ. ಸಾವಿರದೈನೂರು ಯಾಕೆ ಕಡಿಮೆಯಾಗಿದೆ.

'ಪುಟ್ಟು..ಇನ್ನುಳಿದಿದ್ದು ದುಡ್ಡು ಏನಾಗಿರಬಹುದೋ' ಎಂದಾಗ ಪುಟ್ಟುವಿಗೆ ತಾನು ಅಮ್ಮನ ಸಮಸ್ಯೆಗಳನ್ನು ಬಗೆಹರಿಸಿಲಿಕ್ಕಾಗಿಯೇ ಇರುವವನು ಎನ್ನಿಸಿ ಎದೆಯುಬ್ಬಿದಂತಾಯಿತು. ಐದು ವರ್ಷದ ಸೋನು ಪುಟ್ಟಿ ಆಚೆಮನೆಯಿಂದ 'ಅಮ್ಮಾ...ಅಮ್ಮ'ಕೂಗುತ್ತಲೇ ಕುಣಿಯುತ್ತಾ ಒಳಬಂದಳು.ಸಿಂಧೂರಿ ಮಗಳ ಕಡೆಗೆ ನೋಡದೆ 'ನಿಧಾನ ಓಡಾಡಬೇಕು ಸೋನು.ಬೀಳ್ತೀಯಾ' ಎಂದವಳು ಹುಡುಕಾಟ ಮುಂದುವರೆಸಿದಳು.

ನೆರೆಮನೆಯಲ್ಲಿ ಅತ್ತೆ ತನ್ನ ಹಿರಿಮಗನ ಜೊತೆಗೆ ಇರ್ತಾರೆ. ಸೋನು ಮೆಟ್ಟಿಲಿಳಿಯುವ ಹಾಗಾದ ಮೇಲೆ ಆಚೆಮನೆಗೂ ಈಚೆಮನೆಗೂ ಓಡಾಡಿಕೊಂಡಿರ್ತಾಳೆ. ಸಿಂಧೂರಿಗೆ ಮಗಳು ನೆರೆಮನೆಗೆ ಹೋಗುವುದು ಇಷ್ಟವಿಲ್ಲವಾದರೂ ಪುಟ್ಟ ಹುಡುಗಿಯನ್ನು ತಡೆಯಲಾಗ್ತಿರಲಿಲ್ಲ. ಪುಟ್ಟು ಅಮ್ಮನ ಬೆವರುತ್ತಿದ್ದ ಮುಖವನ್ನು ಒಂದು ಬಗೆಯ ಅಸಹಾಯಕತೆಯಲ್ಲಿ ನೋಡ್ತಾ ತಾನು ಅಮ್ಮನಿಗೆ ಸಹಾಯವಾಗುವ ಹಾಗೆ ಮತ್ತೇನೂ‌ ಮಾಡಬಹುದು ಅಂತ ಯೋಚಿಸುತ್ತಿರುವ‌ ಹೊತ್ತಿನಲ್ಲೇ ಕೂಗುತ್ತಾ ಬಂದ ಪುಟ್ಟಿಯನ್ನು 'ಏಯ್ ಸುಮ್ನೇ ಹೋಗೆ ಆ‌ ಕಡೆಗೆ. ಇಲ್ ನೋಡಿದ್ರೆ ಅಮ್ಮಂಗೇ ಏನೋ ಟೆನ್ಷನ್ ಇದೆ.ಇವಳೊಬ್ಳು'ಎಂದ. ಈಗಷ್ಟೆ ತನಗೆ ದೊರಕಿದೆ ಎಂದುಕೊಂಡ ಸಹಜ ಜವಬ್ದಾರಿಯಿಂದ.

ಸೋನು ತನ್ನ ಬಟ್ಟಲುಗಣ್ಣುಗಳನ್ನು ಇನ್ನಷ್ಟು ಅಗಲಗೊಳಿಸುತ್ತಾ ಅಮ್ಮನನ್ನು ನೊಡಿದವಳು ತಕ್ಷಣ ತನ್ನ ಸಿಂಬಳ ಸೀಟಿಕೊಂಡು ಕೊಳಕಾಗಿದ್ದ ಕೈಗಳನ್ನು ಹಿಂದೆ ಕಟ್ಟಿದಳು. ಸಿಂಧೂರಿ ಸೋನುವಿನ ಮುಖವನ್ನೇ ನೋಡಿ ಒಮ್ಮೆಗೆ ಮೈ ಬೆಂಕಿಯಂತಾಗಿ 'ಸೋನೂಊಊ..ಎಷ್ಟು ಸರ್ತಿ ಹೇಳದು ನಿಂಗೆ ಮೂಗಲ್ಲಿ ಇಳಿಸ್ಕೊಬಾರದು ಅಂತ.ಪಿನ್ ಹಾಕಿದ್ದ ಕರ್ಚಿಫ್ ಎಲ್ಲಿ ಬಿಸಾಕ್ದೆ ನೀನು. ಹೋಗು ಮೂಗು ಕ್ಲೀನ್ ಮಾಡ್ಕೋ ಬಾ ಹೋಗು' ಜೋರು ಸ್ವರದಲ್ಲಿ ಗದರಿದಳು. ಪುಟ್ಟು ಧ್ವನಿಗೂಡಿಸಿದ.

'ಹೋಗೆ ,ಹೇಳಿದ್ದು ಒಂದೂ‌ ಕೇಳಲ್ಲ.ಇಲ್ಲಿ ನೋಡಿದ್ರೆ ಅಮ್ಮಂಗೆ ಎಷ್ಟು ಕಷ್ಟ' ಪುಟ್ಟುವಿಗೆ ಅಮ್ಮನ ದುಃಖದಲ್ಲಿ ತಾನೂ ಪಾಲು ಪಡೆಯಬೇಕು ಅನಿಸಿತ್ತು.

'ಗೊಬ್ಬರದಂಗಡಿಗೆ ಮುಂದಿನ ವಾರ ಕೊಡ್ತಿವಿ ಅಂತ ಹೇಳಬಹುದಲ್ವಮ್ಮಾ'ಅಂದ.

'ಇಲ್ಲ ಪುಟ್ಟು.ನಿನಗಿದೆಲ್ಲಾ ಗೊತ್ತಾಗಲ್ಲ.ನೀನಿನ್ನೂ ಸಣ್ಣವನು'

ಅಮ್ಮ ತನ್ನನ್ನು ಸಣ್ಣವನು ಅಂದಿದ್ದು ಮಾತ್ರ ಇಷ್ಟವಾಗಲಿಲ್ಲ ಪುಟ್ಟುವಿಗೆ.

'ಹಾಗೇ ಪದೇಪದೇ ಮುಂದಿನ ವಾರ ಅನ್ನಬಾರದು.ಅಪ್ಪ ವ್ಯವಹಾರ ಮಾಡ್ತಿದ್ರೆ ಏನನಿಸಲ್ಲ.'

ನಿಜ. ಶುಂಠಿ ಹಾಕುವಾಗ ಬಿತ್ತನೆ ಶುಂಠಿಗೆ ಅದ್ಲಿಕ್ಕೆ ತರಿಸಿದ ಔಷಧಿ ಹಣವನ್ನು ಅಪ್ಪನ ಹತ್ರ ಕೊಟ್ಟು ಕಳಿಸಿದ್ಳು ಅಮ್ಮ.

ಅಪ್ಪ ಅದರಲ್ಲಿ ಅರ್ದ ಮಾತ್ರ ಕೊಟ್ಟು ಅಂಗಡಿಯವರು ಉಳಿದ ಹಣಕ್ಕೆ ಅಮ್ಮನಿಗೆ ಫೋನ್ ಮಾಡ್ದಾಗ 'ಹೇಗೋ ಎಡಜಸ್ಟ್ ಮಾಡಕೊಳ್ಳೋಣಾ ಬಿಡಿ' ಎಂದಿದ್ದು‌ ಕೇಳಿ ಅಮ್ಮ ಥಟಕ್ಕನೆ ಫೋನ್ ಇಟ್ಟಿದ್ದು ,ಅವತ್ತಿಡೀ ಅಮ್ಮ ಅತ್ತಿದ್ದು‌ ನೆನಪಿದ್ದೇ ಇದೆ ಪುಟ್ಟುಗೆ.

ಸಿಂಧೂರಿ ಮತ್ತೂ ಹುಡುಕುತ್ತಲೇ ಇದ್ದವಳು

'ಪುಟ್ಟು,, ಸಿಕ್ತಿಲ್ಲ ಕಣೋ.ಇವತ್ತು ಒಂಬತ್ತೂವರೆ ಸಾವಿರ ಬೇಕೇಬೇಕು.

ಮಾಮಾನ್ನ ಎರಡು ಸಾವಿರ ಕೇಳಿದ್ರೆ ಹೆಂಗೋ.

ತಕ್ಷಣ ಕೊಟ್ಟು ಕಳಿಸು ಅಂದರೆ ಕಳಿಸ್ತಾರೆ ಅಲ್ವಾ'

ಅಮ್ಮ ಹೀಗೆ ಕೇಳಿದಾಗ ತಾನು ಮತ್ತಷ್ಟು ದೊಡ್ಡವನಾದಂತೆನಿಸಿ 'ಏನ ಮಾಡಬಹುದು' ಅಂತ ಯೋಚಿಸಿದ.

ಈಗ ಸದ್ಯಕ್ಕೆ ಅವನಿಗೆ ಹಿಂದಿನ ಸಂಜೆ ಅಪ್ಪ ಆಚೆ ಹೊರಡುವ ಮುನ್ನ ಕಂಡ ದೃಶ್ಯವನ್ನು ಅಮ್ಮನಿಗೆ ಹೇಳುವುದೋ ಬೇಡವೋ ಅನ್ನುವುದು ತಲೆಯಲ್ಲಿ ಕೊರೆಯಹತ್ತಿತು.

'ಏನು ಮಾಡಬಹುದು.ಅಮ್ಮ ಹೇಳಿದ ಹಾಗೇ ಮಾಡು ಎನುವುದಾ ಅಥವಾ?'

ನಿನ್ನೆ ಸಂಜೆ ಶಾಲೆಯಿಂದ ಬಂದ ಪುಟ್ಟು ಎಂದಿನಂತೆ ಮೊಬೈಲ್ ಗೇಮ್ ಆಡ್ತಾ ಮೆಟ್ಟಿಲಲ್ಲಿ ಕೂತಿದ್ದಾಗ ಅಪ್ಪ ನೂರರ ನೋಟುಗಳನ್ನು ಗೋಡೆ ಕಡೆಗೆ ತಿರುಗಿ ಎಣಿಸ್ತಿರುವುದು ಕಂಡಿತು.ಆ ನೋಟುಗಳು ಮುಗ್ಗಿದಂತಾಗಿ‌ ಒಂದಕ್ಕೊಂದು ಅಂಟಿಕೊಂಡು ಬೇಗ ಬೇಗ ಎಣಿಸಲಾಗದೆ ಒಳಗಿನ ಬಾಗಿಲನ್ನು ಪದೇಪದೇ ಹಣಕಿ‌ನೋಡ್ತಾ ಅಪ್ಪ ದುಡ್ಡು ಎಣಿಸಿ ಜೋಬಿಗೆ ಹಾಕಿಕೊಂಡ. 'ಏನಾರು ಬೇಕೆನೋ'ಎನ್ನುತ್ತಾ ಪುಟ್ಟು ಉತ್ತರಿಸುವ ‌ಮೊದಲೇ ಬೈಕು ಸ್ಟಾರ್ಟು ಮಾಡಿಕೊಂಡು ಹೋಗಿದ್ದ.

ಅಮ್ಮ ಬೆಳಗಿಂದಲೂ ಶುಂಠಿ ಗದ್ದೆಯಲ್ಲಿ ಔಷದಿ ಹೊಡೆಸಿಬಂದವಳು ಆಗಷ್ಟೇ ಸ್ನಾನಕ್ಕೆ ಹೋಗಿದ್ದಳು.

'ಎನ್ ಮಾಡಲಿ ಪುಟ್ಟು.ಮಾಮಾನ್ನ ಕೇಳಲಾ?'

ಪುಟ್ಟುವಿಗೆ ಗೊಂದಲವಾಯಿತು.

ಈಗ ಅಮ್ಮನಿಗೆ ಅಪ್ಪ ದುಡ್ಡು ಎಣಿಸ್ತಿದ್ದಿದ್ದು ಹೇಳಿದ್ರೆ ಮೈಮೇಲೆ ದೆವ್ವ ಬಂದವಳಂತೆ ಆಡ್ತಾಳೆ.

ಅದೂ ಅಲ್ಲದೆ ಅಪ್ಪ ಅಮ್ಮನ ಬೀರಿಂದ ದುಡ್ಡು ತೆಗೆದಿದ್ದನ್ನು ತಾನೇನು ನೋಡಿರಲಿಲ್ಲ.

ಹಾಗೆಲ್ಲ ತಂದೆತಾಯಿಯ ಮೇಲೆ ಸುಳ್ಳಪೊಳ್ಳು ಹೇಳಿದ್ರೆ ಮುಂದಿನ ಜನ್ಮದಲ್ಲಿ ಅನಾಥರಾಗಿ ಹುಟ್ತಾರೆ ಅಂತ ವೀಜಿಮಾಸ್ಟರು ಅಗಾಗ ಹೇಳಿದ್ದು ನೆನಪಾಗಿ ಆ ಯೋಚನೆಯನ್ನು ಕೊಡವಿ ಅಮ್ಮನಿಗೆ ನಿರ್ಧಾರ ‌ತಿಳಿಸಿದ.

'ಅಮ್ಮ. ಈಗ ಮಾಮನ ಹತ್ರ ಕೇಳಿರು.

ಅವೊತ್ತು ಅಪ್ಪ ನಿನ್ನ ದುಡ್ಡು ಅರ್ದ ಬಳಸ್ಕೊಂಡಿತ್ತಲ್ಲ.ಅದನ್ನು ನಾಳೆನಾಡಿದ್ದರಲ್ಲಿ ಕೇಳಿದ್ರಾಯ್ತು.ಅಪ್ಪ ಕೊಟ್ಟಿದ್ದನ್ನ ಮಾಮಾಂಗೆ ಕೊಡಬಹುದು'

ಸಮಸ್ಯೆಯನ್ನು ಇಷ್ಟು ಸಲೀಸಾಗಿ ನಿರ್ವಹಿಸಿದ್ದರಿಂದ ಪುಟ್ಟುವಿಗೆ ತನ್ನ ಬಗ್ಗೆ ತನಗೆ ಹೆಮ್ಮೆಯಾದಂತಾಗಿ ನಿಧಾನವಾಗಿ ತಾನು ಆ ಮನೆಯ ಜವಬ್ದಾರಿ ತೆಗೆದುಕೊಳ್ತಿರುವಂತೆ ಭಾಸವಾಯಿತು.

ಪುಟ್ಟು ಮತ್ತೂ ಯೋಚಿಸಿದ.

ಆ ರಾತ್ರಿ ಮೊಬೈಲ್ ಗೇಮ್ ಕೂಡ ಆಡದೆ ಮುಂದಿನ ವಾರದ ಟೆಸ್ಟಿಗೆ ಪ್ರೀಪೇರ್ ಆಗಬೇಕೆಂದುಕೊಂಡ. ಆಮೇಲೆ ‌ಹೀಗಂದುಕೊಂಡ.

ನಾನು ಚೆನ್ನಾಗಿ ಓದಿ ಊರಜ್ಜಿ ಹೇಳುವ ಹಾಗೆ ದೊಡ್ಡ ಸಾಹೇಬನಾಗಿ ಅಮ್ಮನ ಕಷ್ಟಗಳನ್ನೆಲ್ಲ ಪರಿಹರಿಸಬೇಕು.

ಸಾಹೇಬನಾದಾಗ ಅಮ್ಮ ಇಷ್ಟ ಪಡುವ ಉದ್ದನೆಯ ಕೆಂಪು ಬಣ್ಣದ ಕಾರು ಕೊಂಡ್ಕೊಂಡು ಅಮ್ಮನನ್ನು ‌ಮುಂದೆ ಕೂರಿಸ್ಕೊಳ್ಳಬೇಕು.

ತನ್ನ ‌ಮೊದಲನೇ ಸಂಬಳದಲ್ಲಿ ಅಮ್ಮನಿಗೆ ಪಕ್ಕದ ಮನೆ ಆಂಟಿ‌ ತೊಡುವಂತ ದಟ್ಟ ಹಸಿರು ಬಣ್ಣದ ಚೂಡಿದಾರು ಕೊಡಿಸಬೇಕೆಂದುಕೊಂಡ. ಅಮ್ಮ ಯಾವಾಗಲೂ ಮ್ಯಾಚಿಂಗ್ ಹೇರ್ಬ್ಯಾಂಡ್ ತೊಡ್ತಾಳಾದ್ದರಿಂದ ಅದೇ ಬಣ್ಣದ ಹೇರಬ್ಯಾಂಡನ್ನು ಎಷ್ಟೇ ಕಷ್ಟ ಅದರೂ ಸರಿ ಹುಡುಕಿ ‌ತೆಗೆದುಕೊಡಬೇಕು.

'ಅಮ್ಮ ಹಸಿರು ಚೂಡಿದಾರು ತೊಟ್ಟು ಕೆಂಪು ಉದ್ದನೆಯ ಕಾರಲ್ಲಿ ಕೂತು…'

ಚಿತ್ರಗಳು ಅವನ ಕಣ್ಮುಂದೆ ಮೂಡಲಾರಂಬಿಸಿದವು.

ಸಿಂಧೂರಿ ಫೋನ್ ಮಾಡ್ತಿದ್ದಾಳೆ.

'ಅಣ್ಣಾ. ಹು. ಎರಡು ಸಾವಿರ ಕಣೋ. ಆಯ್ತಣ್ಣಾ ಮುಂದಿನ ವಾರವೇ ಕೊಡ್ತೀನಿ. ಇಲ್ಲಣ್ಣಾ ,ನಾಳೆ ನಾಡಿದ್ದರಲ್ಲಿ ದುಡ್ಡು ಬರುತ್ತೆ.

ಸರಿ'

ಅಮ್ಮ ಹೀಗೆಲ್ಲಾ ತವರಿನವರ ಜೊತೆ ಏನಾದರೂ ಕೇಳಬೇಕು ಅಂದಾಗಲೆಲ್ಲಾ ಎದುರಿಗೆ ಯಾರೂ ಇರದಿದ್ರೂ ಹಿಡಿಯಂತಾಗುವುದು ಗಮನಕ್ಕೆ ‌ಬರುತ್ತದೆ ಪುಟ್ಟುವಿಗೆ.

ತಾನು ಮತ್ತೂ ಜವಬ್ದಾರಿ ಕಲಿಯಬೇಕೆನಿಸಿತು.

'ಕುಡಿಯಬಾರದು. ಇಸ್ಪೀಟು ಆಡಬಾರದು, ಸಂಜೆ ಹೊತ್ತು ಮನೆಯಿಂದ ಆಚೆ ಹೋಗಿ ನಡುರಾತ್ರಿಯಲ್ಲಿ ಮನೆಗೆ ಬರಬಾರದು. ತೋಟಕ್ಕೆ ಹೋದಾಗ ಆಳುಗಳ ಹತ್ರ ಅಮ್ಮನಂತೆ ನಿಂತು‌ ಕೆಲ್ಸ ತೆಗಿಬೇಕು. ಸುಮ್ ಸುಮ್ನೆ ಕೊಳಕು ‌ಮಾತಾಡಬಾರದು'

ಪುಟ್ಟು ಯೋಚಿಸಿದ.

ಸೋನು ಪುಟ್ಟಿ ಅಮ್ಮನಿಂದಲೂ ಅಣ್ಣನಿಂದಲೂ ಬೈಸಿಕೊಂಡು ಆಚೆಗೆ ಓಡಿದವಳು ನಿಧಾನವಾಗಿ ತನ್ನ ಪುಟ್ಟ ಪುಟ್ಟ ಪಾದಗಳನ್ನು ಅ ಉದ್ದನೆಯ ಮೆಟ್ಟಿಲು ಸಾಲುಗಳಲ್ಲಿ ಸಾವಕಾಶವಾಗಿ ಇಳಿದವಳು ಬಲಕ್ಕೆ ಹೊರಳಿ ಮತ್ತೆ ಅಜ್ಜಿ ಮನೆಗೆ ಹೋದಳು. ಅಲ್ಲಿ ಅವಳಿಗಿಂತ ಮೂರು ವರ್ಷ ದೊಡ್ಡವಳಾದ ದೊಡ್ಡಪ್ಪನ ಮಗಳು ವರ್ಚಕ್ಕಾನ ಜೊತೆಗೆ ಆಡುವುದು ಅವಳಿಗಿಷ್ಟ. ಪುಟ್ಟಾಣಿ ಸೋನುಪುಟ್ಟಿಗೆ ಅಣ್ಣನ ಮೇಲೆ ವಿಪರೀತ ಕೋಪ ಬಂದಿತ್ತು.

'ಥೊ..ಈ

ಅಮ್ಮನೂ ಅಷ್ಟೇ. ಅವನೊಬ್ಬನನ್ನೇ ಮುದ್ದು‌ಮಾಡುತ್ತೆ.'

ತನ್ನ ಮಲ್ಲಿಗೆ ಹೂವಿನಂತ ಹೃದಯದ ತುಂಬಾ ಮಣ ಭಾರವಾದ ನೋವುಗಳನ್ನಿಟ್ಟುಕೊಂಡ ಸೋನು ಪುಟ್ಟಿ ಆಚೆ ಮನೆಯ ಹೊಸಿಲಿನೊಳಕ್ಕೆ ವರ್ಚಕ್ಕಾ ಅಂತಾ‌ ಕಾಲಿಟ್ಟಳು.

ಅಲ್ಲೇ ಏನೋ ಮಾಡ್ತಿದ್ದ ಅಜ್ಜಿ ಅಂದರೆ ಸಿಂಧೂರಿಯ ಅತ್ತೆ

'ಅಗಳ್ ಮತ್ ಬಂತಲ್ಲೋ ಈ ಹುಡುಗಿ'ಅಂದರು.

ಸೋನುವಿಗೆ ಒಂಥರಾ ಆಯಿತಾದರೂ ವರ್ಚಕ್ಕನ್ನ ಜೊತೆಗೆ ಆಡಲು ಒಳಗೆ ಹೋದಳು.

ವರ್ಷಾ ಸೋಫಾ ಮೇಲೆ ಕುಳಿತು ಅಜ್ಜಿ ಕೊಡಿಸಿದ ತನ್ನ ಹೊಸ ಬಾರ್ಬಿ ಗೊಂಬೆಗೆ ತಲೆ ಬಾಚುತ್ತಿದ್ದಳು.

ಸೋನು ಬೆಳಿಗ್ಗೆ ಬಂದಾಗಲೇ ಗೊಂಬೆಯನ್ನು ನೋಡಿ ಹೋಗಿದ್ದಳಾದರೂ ಅದರ ಅಂದಚಂದಕ್ಕೆ‌ ಮತ್ತೊಮ್ಮೆ ಅದನ್ನು ಮುಟ್ಟುವ ಆಸೆಯಾಗಿ ವರ್ಚಕ್ಕನಿಗೆ ಗೊಂಬೆಯ ತಲೆ ಬಾಚಲು ಸುಲಭವಾಗೋ ಹಾಗೆ ಹಿಡಿದಳು.

'ಯೇಏಎ.ಹೋಗೆ..ಇವಳೊಬ್ಳು ಬಂದ್ಬಿಟ್ಳು.

ಮೂಗಿನ ಸಿಂಬಳ ಒರೆಸ್ಕೊಂಡು ಕೈ ತೋಳ್ಕೋ ಹೋಗು ಮೊದಲು. ಮುಟ್ಟಿದ್ರೆ ನೋಡು'

ವರ್ಚಕ್ಕಾ ಹೊಡೆಯಲು ‌ಕೈ ಎತ್ತಿದಾಗ ಸೋನು ಭಯದಿಂದ ದೂರ ಸರಿದು ಫ್ರಾಕಿನ‌ ಕೆಳತುದಿಯಿಂದ ಸಿಂಬಳ‌ ಸೀಟಿಕೊಂಡು ಗೊಂಬೆ ಯನ್ನು ಆಸೆಗಣ್ಣಿಂದ ನೋಡತೊಡಗಿದಳು.

ವರ್ಚಕ್ಕಾ ಗೊಂಬೆಗೆ ತಲೆಬಾಚುವುದನ್ನು ನಿಲ್ಲಿಸಿ ಗೊಣ್ಣೆ ಸೀಟಿಕೊಂಡ ಲಂಗದ ತುದಿಯ ಸೋನುವನ್ನು ದುರುದುರು ನೋಡಿ ತನ್ನ ರೂಮಿಗೆ ಹೋದಳು.

'ಥೊ.ಆ ಹುಡ್ಗಿಗೆ ಒಂದ ಘಳಿಗೆ ಹೊಸಗೊಂಬೆ ಜೊತೆ ನೆಮ್ದಿಯಾಗಿ ಆಡಕೆ ಬಿಡಲ್ಲ ಇದು'

ಅಂತ ಒಳಗೆ ದೊಡ್ಡಮ್ಮ ಹೇಳಿದ್ದು ಕೇಳಿ ಸೋನುಪುಟ್ಟಿಯ ಮಲ್ಲಿಗೆ ಹೃದಯ ಮತ್ತಷ್ಟು ಮುದುಡಿತು.

ಅಲ್ಲಿಂದ ಹೊರಬಂದು ಮತ್ತೆ ಲಂಗದ ತುದಿಯಿಂದ ಸೀಟಿಕೊಳ್ಳಬೇಕೆಂದುಕೊಂಡವಳು ಅಲ್ಲೇ ಅಜ್ಜಿ ಇದ್ದುದ್ದನ್ನು ನೋಡಿ ಲಂಗವನ್ನು ಹಾಗೇ ಕೆಳಗೆ ಬಿಟ್ಟಳು‌.

'ತಗಳೇ ಹುಡುಗಿ'

ಅಂತ ಅಜ್ಜಿ ಕಾಗದದ ಪುಟ್ಟ ಬಾರ್ಬಿ ಗೊಂಬೆಯ ಚಿತ್ರವಿದ್ದ ಬ್ಯಾಗನ್ನು ಸೋನುವಿಗೆ ಕೊಟ್ಟು

'ಹೋಗು‌ ಮನೆಗೋಗಿ ಆಡ್ಕಾ ಹೋಗು' ಅಂದರು.

ಗಾಢ ಗುಲಾಬಿ ಬಣ್ಣದ ಬಾರ್ಬಿ ಗೊಂಬೆಯ ಚಿತ್ರವಿರುವ ಕಾಗದದ ಬ್ಯಾಗಿಗೆ ಅದೇ ಬಣ್ಣದ ಚಿತ್ರವಿರುವ ಪುಟ್ಟ ಹಿಡಿಕೆ. ಸೋನುವಿನ ಕಣ್ಣು ಒಮ್ಮೆಗೆ ಅರಳಿದವು.

'ಸುಮಾರು ದುಡ್ಡು ಆದ್ಕೆ.

ವರ್ಷಂಗೆ ಗೊಂಬೆ ತಂದ್ನಲ್ಲ ,ನಿಂಗೆ ಬ್ಯಾಗ್ ತಂದೆ‌.ಹಾಳ್ ಮಾಡ್ಕಬೇಡ'

ಅಂದ ಅಜ್ಜಿಯನ್ನು ನೋಡ್ತಾ ಈ ಅಜ್ಜಿ ಎಷ್ಟು ಒಳ್ಳೆಯವಳು.

ಅಮ್ಮ ಸುಮ್ಸುಮ್ನೇ ಬಯ್ಯುತ್ತೆ.

ಅಂದುಕೊಳ್ತಾ ಆ ಪುಟಾಣಿ ಗೊಂಬೆ ಬ್ಯಾಗ್ ಪಡೆದು ಆಚೀಚೆ ತಿರುಗಿಸಿ ನೋಡಿ ಸವರಿ ತೃಪ್ತಿಯಾಗಿ ಮೃದುವಾಗಿ ಅವುಚಿಕೊಂಡು ಮತ್ತೆ ಜಾಗ್ರತೆಯಿಂದ ಮೆಟ್ಟಿಲೇರಿ ಮನೆಗೆ ಬಂದಾಗ ಅಮ್ಮ ಹೆಣ್ಣಾಳಿಗೆ ಬಟವಾಡೆ ಮಾಡ್ತಿದ್ಳು.

'ಎಲಾ. ಎಂತದವ್ವಾ ಇದು..ಏನ್ ಚೆನಾಗಿತೇ'

ಅಂತ ಹೆಣ್ಣಾಳು ಸೋನುವಿನ ಕೈಯಲ್ಲಿದ್ದ ಬ್ಯಾಗು ಮುಟ್ಟಬಂದಾಗ ಅವರಿಗೆ ಮುಟ್ಟಕೊಡದೆ ಎರಡೂ ಕೈಯಲ್ಲೂ ಬ್ಯಾಗನ್ನು ಎದೆಗೆ ಅವುಚಿ ಅಮ್ಮನ ಬಳಿ ಬಂದಳು.

ಅಂಟಿಕೊಂಡಿದ್ದ ನೋಟು ಎಣಿಸುತ್ತಿದ್ದವಳು ಮಗಳನ್ನೂ, ಅವಳ ಕೈಯಲ್ಲಿದ್ದ ಕಾಗದದ ಬ್ಯಾಗನ್ನೂ ನೋಡಿ ಮೈ ಉರಿದರೂ ಕೊನೆಯ ಬಟವಾಡೆ ಮುಗಿಸಿ ಮುಂದಿನ ವಾರದ ಕೆಲಸ ಇಂತಿಂತದ್ದು ಅಂತ ಹೇಳಿ ಮುಂದಿನ ವಾರ ಮನೆಲಿ ಕೂರಬೇಡಿ ಅಂತಂದವಳು ಮಗಳ ಕಡೆಗೆ ತಿರುಗಿ

'ಯಾರೇ ಕೊಟ್ಟಿದ್ದು ಇದನ್ನು' ಅಂದಳು.

ನೆರೆಮನೆಯಲ್ಲಿ ಅತ್ತೆ ವಾರೆಗಣ್ಣಿನಲ್ಲಿ ನೋಡ್ತಾ ಮೆಟ್ಟಿಲಿಳಿಯುವುದು ಕಂಡಿತು.ಜೊತೆಗೆ ಕೊಂಕು ನಗೆಯೂ.

'ಯಾರು ಏನೂ ಕೊಟ್ರೂ ಇಸ್ಕೋಬಾರದು ಅಂತ ಹೇಳಿಲ್ವಾ ನಾನು ನಿಂಗೆ' ಅಂತ ಬೆನ್ನ ಮೇಲೆ ಒಂದು ಗುದ್ದಿದಳು.

ಆ ಬದಿಯ ಕೊಂಕುನಗೆ ಸಿಂಧೂರಿಗೆ ಮೈ ಉರಿಯೆಬ್ಬಿಸಿತ್ತು.

ಅಮ್ಮ ಹೊಡೆದ ರಭಸಕ್ಕೆ ಸೋನು ಮುಗ್ಗರಿಸಿ ಬಿದ್ದರೂ ಎದೆಗೆ ಅವುಚಿದ್ದ ಗುಲಾಬಿ ಬ್ಯಾಗು ಮಾತ್ರ ಬಿಡದೆ ಎದ್ದು ಅಳುತ್ತಾ ಒಳಗೋಡಿತು. ಪುಟ್ಟು ಅವನ ಪೆನ್ನು ರಿಪೇರಿ ಮಾಡಿಕೊಳ್ತಿದ್ದ.

ಒಳಗೆ ಅಳ್ತಾ ಬಂದ ಸೋನುವನ್ನು ನೋಡಿ ಪೆನ್ನು ಬಿಸಾಕಿ ಅವಳು ಎದೆಗವುಚಿಕೊಂಡಿದ್ದ ಬ್ಯಾಗನ್ನೂ ನೋಡ್ತಾ

'ಯಾರು ಪುಟ್ಟಕ್ಕಾ ಇದನ್ನು ಕೊಟ್ಟಿದ್ದು'

ಅಂತಂದಾಗ ಸೋನುಪುಟ್ಟಿ ತನ್ನ ಹಿಡಿತ ಸಡಿಲಿಸಿ ಬಾರ್ಬಿ ಬ್ಯಾಗನ್ನು ಅಣ್ಣನಿಗೆ ತೋರಿಸಿದಳು.

'ಅಣ್ಣಾ.ಅಜ್ಜಿ ನಂಗೇ ಅಂತ ತಂದಿರುವುದು.ಅದ್ಕೆ ಸುಮಾರು ದುಡ್ಡಂತೆ ಅಣಾ.ನಾನೇನು ಮಾಡಿದ್ರೂ ನಿಮ್ಮಮ್ಮ ನನ್ನನ್ನು ಬಯ್ತಾಲೇ ಇರ್ತಳೆ ಅಂತಿತ್ತು ಅಜ್ಜಿ' ಅಂದಳು ಸೋನು.

ಸೋನು ಕೊಟ್ಟ ಆ ಬ್ಯಾಗನ್ನು ಪುಟ್ಟು ಆಚೀಚೆ ತಿರುಗಿಸಿ‌ಅದ್ರ ಎಮ್ ಅರ್ ಪಿ ನೋಡ್ದ. ಸಾವಿರದೈನೂರು ಇತ್ತು. ಆ ಬ್ಯಾಗಿನ ಮೇಲೆ ಗುಲಾಬಿ ಬಣ್ಣದ ಬಾರ್ಬಿಯ ಚಿತ್ರವೂ ಇತ್ತು.

'ಸೋನು ,ಇದರೊಳಗೆ ಗೊಂಬೆ ಇರಲಿಲ್ವೇನೇ ಇದೇ ಥರದ್ದು' ಅಂತ ಚಿತ್ರ ತೋರಿಸ್ದ.

ಸೋನು ತನ್ನ ಲಂಗದ ತುದಿಯಲ್ಲಿ ಸಿಂಬಳ ಒರೆಸುತ್ತ'ವರ್ಚಕ್ಕನ ಹತ್ರ ಐತೆ ಅಣ್ಣಾ. ಕೆಂಪು ಫ್ರಾಕು.ಉದ್ದ‌ಕೂದಲೂ ,ಚೂಸೂ ಇದೆ ಅದಕೆ. ಅಜ್ಜಿ ಅವಳಿಗೆ ಗೊಂಬೆ ‌,ನಂಗೆ ಬ್ಯಾಗು ತಂದಿದಂತೆ' ಅಂದಳು.

ಪುಟ್ಟುವಿಗೆ ವಿಪರೀತ ಅವಮಾನವಾದಂತಾಗಿ ತಾನು ಹೊರಬೇಕಾದ ಜವಬ್ದಾರಿ ಮತ್ತೂ ಜಾಸ್ತಿ ಆದಂತೆನಿಸಿತು.

ಬಟವಾಡೆ ಮುಗಿಸಿ ಒಳಬಂದು‌ ಮುಂದಿನ ವಾರದ ಖರ್ಚು ಲೆಕ್ಕ ಹಾಕ್ತಿದ್ದ ಅಮ್ಮನ ಹತ್ರ ಹೋಗಿ 'ಅಜ್ಜಿ ಎಷ್ಟು ಕೆಟ್ಟ ಜನ ನೋಡಮ್ಮಾ' ಅಂದ. ಸಿಂಧೂರಿ ಒಮ್ಮೆ ಬೆಚ್ಚಿದವಳಂತೆ 'ಯಾಕ ಪುಟ್ಟು' ಅಂದಳು.

ದೊಡ್ಡವರು ಯಾರೇ ಅದರೂ ಅವರಿಗೆ ಕೆಟ್ಟ ಪದ ಉಪಯೋಗಿಸಿದ್ರೆ ಬಾಯಿ ಮೇಲೆ ಬಿಡ್ತಿದ್ದ ಸಿಂಧೂರಿ ಮಗನ ಕೈಯಲ್ಲಿದ್ದ ಬಾರ್ಬಿ ಬ್ಯಾಗನ್ನು ನೋಡಿ 'ಏನಂತೆ ಪುಟ್ಟಿದು' ಅಂದಳು.

'ಅಮ್ಮಾ. ಈ ಅಜ್ಜಿ ನೋಡಮ್ಮಾ. ವರ್ಷಂಗೆ ಬಾರ್ಬಿ ಗೊಂಬೆ ತೆಗೆದುಕೊಟ್ಟು ಅದನ್ನು ಹಾಕೊಡ್ತರಲ್ಲಾ ,ಈ ಜುಜುಬಿ ಬ್ಯಾಗು. ಇದನ್ನು ನಮ್ ಪುಟ್ಟಂಕಂಗೆ ಕೊಟ್ಟಿದ್ದಿರಲ್ಲಮ್ಮಾ. ಎಷ್ಟು ಕೆಟ್ಟ ಜನ ಅಮ್ಮ ಈ ಅಜ್ಜಿ' ಅಂದ.

ಸಿಂಧೂರಿ ಒಂದು ಕ್ಷಣ ದಿಗ್ಮೂಡಳಾದಳು.

ಅತ್ತೆ ಈ ಹಂತಕ್ಕೆ ಇಳಿದು ಅಪಮಾನಿಸಬಹುದು ಅಂದುಕೊಂಡಿರಲಿಲ್ಲ. ಮಗನ ಕೈಯಿಂದ ಆ ಬ್ಯಾಗು ಪಡೆದು ಹಿಂದುಮುಂದು ತಿರುಗಿಸಿ ನೋಡಿದಳು.ಅವಳ‌ ಕಣ್ಣಿಂದ ಧಾರಕಾರ ನೀರು ಸುರಿಯಹತ್ತಿತು. ಸೋನುವಿಗೆ ಬಾರಿಸಬೇಕೆಂದು ಕೈಯೆತ್ತಿದ್ದು ಕಂಡು ಪುಟ್ಟು ತಂಗಿಯನ್ನು ತಬ್ಬಿ ಹಿಡಿದು ಕೂತ. ಸೋನುಪುಟ್ಟಿ ತನ್ನ ಇಳಿಯುತ್ತಿದ್ದ ಸಿಂಬಳವನ್ನೂ ಲೆಕ್ಕಿಸದೆ ಅಮ್ಮ ಎಲ್ಲಿ ಆ ಬಾರ್ಬಿ ಬ್ಯಾಗನ್ನು ನೀರೊಲೆಗೆ ಹಾಕ್ತಳೋ ಎನ್ನುವ ಭಯಕ್ಕೆ ಅಮ್ಮ ಅಳುವಾಗ ಕೈ ಬಿಟ್ಟ ಬ್ಯಾಗನ್ನು ಗಬಕ್ಕನೆ ಬಾಚಿ ಎದೆಗವುಚಿಕೊಂಡಿತು.

ಪುಟ್ಟುವಿಗೆ ತಾನೀಗ ಇನ್ನಷ್ಟು ದೊಡ್ಡವನೂ ಜವಬ್ದಾರಿ ಹೊರಬೇಕಾದವನು ಎನಿಸತೊಡಗಿತು. ಈ ಕಡೆಯ ಪ್ರಜ್ಞೆಯೇ ಇಲ್ಲದಂತೆ ಅಳುತ್ತಿದ್ದ ಅಮ್ಮನನ್ನು ಕಂಡು 'ಅಮ್ಮಾ. ಸುಮ್ನಿರಮ್ಮಾ.ಪ್ಲೀಸ್‌. ಅಮ್ಮಾ' ಅಂದ.

ಸೋನು ಪುಟ್ಟಿ ಅಮ್ಮನ ಕಣ್ಣೀರು ಬಿದ್ದಿದ್ದ ಆ ಬ್ಯಾಗನ್ನು ತನ್ನ ಲಂಗದ ತುದಿಯಿಂದ ಒರೆಸುತ್ತಿದ್ದಳು.

ಪುಟ್ಟು ಸೋನುವಿನ ಸಿಂಬಳವನ್ನು ಅಲ್ಲೆ ಇದ್ದ ಬಟ್ಟೆಯಲ್ಲಿ ಸೀಟಿ‌ ತಬ್ಬಿಕೊಂಡು ಅಮ್ಮನಿಗೆ ತಾಗಿಕೊಂಡ.

ಪುಟ್ಟು ತಾನು ಈಗ ಇನ್ನೂ ದೊಡ್ಡವನಾದಂತೆ ಯೋಚಿಸಿದ.

'ನಾನು ಇವತ್ತಿಂದಲೇ ಮೊಬೈಲ್ ಗೇಮು ಆಡುವುದು ಬಿಡಬೇಕು. ಪೆನ್ ರಿಪೇರಿ ‌ಮಾಡಬಾರದು.ಈ ರಾತ್ರಿ ಚೆನ್ನಾಗಿ ಓದಿ ಮುಂದಿನ ಟೆಸ್ಟಲ್ಲಿ ಜಾಸ್ತಿ ‌ಮಾರ್ಕು ತಗೊಂಡು ದೊಡ್ಡ ಸಾಹೇಬ ಆಗಬೇಕು. ಅಮ್ಮನಿಗೆ ಗ್ರೀನ್ ಹೇರಬ್ಯಾಂಡು ತೆಗೆಸಿಕೊಡಬೇಕು. ಸೋನು ಪುಟ್ಟು ಆಡೋವಷ್ಟು ಬಾರ್ಬಿ ಗೊಂಬೆ ತೆಗೆದುಕೊಡಬೇಕು. ಅವಳ ಕೋಣೆ ತುಂಬಾ ಗೊಂಬೆಯೇ ಇರಬೇಕು. ನಾನು ದೊಡ್ಡ ಸಾಹೇಬ ಆಗಿ ಮಾಮಗಿಂತಲೂ ದೊಡ್ಡ ಕಾರು ತಗೋಬೇಕು. ಅಮ್ಮಂಗೆ ಶುಂಠಿ ಬೆಳೆಯೊಕೆ ಹಣ ಹೊಂದಿಸಬೇಕು. ಸೋನು ಪುಟ್ಟಿಗೆ ಡಾಕ್ಟರ್ ಹತ್ರ ತೋರ್ಸಿ ಸಿಂಬಳ ಸುರಿಯುವುದು ನಿಲ್ಲಿಸಬೇಕು. ದೊಡ್ಡವನಾಗಿ ಮದುವೆಯಾದ ಮೇಲೆ ಹೆಂಡ್ತಿ‌ ಬೀರಿಂದ ದುಡ್ಡು ಕದೀಬಾರದು..' ಪುಟ್ಟು ತನ್ನ ಜವಾಬ್ದಾರಿಗಳನ್ನು ಹೇಳಿಕೊಳ್ಳುತ್ತಲೇ ಇದ್ದ.

'ಅಮ್ಮ ಯಾವತ್ತೂ ಅಳಬಾರದು. ಸೋನು ಪುಟ್ಟಿಗೆ…’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.