ADVERTISEMENT

ಮರದ ಮೇಲೊಂದು ವಿಹಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 9:14 IST
Last Updated 13 ನವೆಂಬರ್ 2019, 9:14 IST
ಚಿತ್ರ ಬರೆದ ವಿದ್ಯಾರ್ಥಿ ಅನಿರುದ್ಧ ಪುರೋಹಿತ್‌, 8ನೇ ತರಗತಿ, ಟ್ರಿನಿಟಿ ಪಬ್ಲಿಕ್‌ ಸ್ಕೂಲ್‌ ಕೊಪ್ಪಳ
ಚಿತ್ರ ಬರೆದ ವಿದ್ಯಾರ್ಥಿ ಅನಿರುದ್ಧ ಪುರೋಹಿತ್‌, 8ನೇ ತರಗತಿ, ಟ್ರಿನಿಟಿ ಪಬ್ಲಿಕ್‌ ಸ್ಕೂಲ್‌ ಕೊಪ್ಪಳ   

ಮೊನ್ನೆಯಷ್ಟೆ ನಾಗರಹೊಳೆ ಅರಣ್ಯಕ್ಕೆ ಹೋಗಿದ್ದೆ. ಅರಣ್ಯದ ಮಧ್ಯದಲ್ಲಿ ಕಾರಿನಿಂದ ಇಳಿದು ಸುಮ್ಮನೆ ಆಚೀಚೆ ನೋಡುತ್ತಿದ್ದೆ. ಹತ್ತಿರದ ದೊಡ್ಡ ಮರವೊಂದರ ಮೇಲೆ ವ್ಯಕ್ತಿಯೊಬ್ಬ ಆರಾಮವಾಗಿ ಕುಳಿತಿದ್ದ. ನನ್ನನ್ನೇ ತದೇಕಚಿತ್ತದಿಂದ ನೋಡುತ್ತಿದ್ದ. ಆತನ ಹಾವಭಾವ ಬಲು ವಿಚಿತ್ರವಾಗಿತ್ತು. ಮೈಬಣ್ಣ ಯುರೋಪಿಯನ್ನರಂತೆ ಕೆಂಪಾಗಿತ್ತು. ಹತ್ತಿರ ಹೋಗಿ ‘ಯಾರು ನೀನು? ಮರದ ಮೇಲೇಕೆ ಕುಳಿತಿರುವೆ’ ಎಂದು ಪ್ರಶ್ನಿಸಿದೆ. ಆತ ನನ್ನ ಹೆಸರು ‘ಕೊಸಿಮೊ’ ಎಂದ. ‘ಓಹೋ ಬ್ಯಾರನ್‌ ಇನ್‌ ದಿ ಟ್ರೀಸ್‌’ ಎಂದು ಉದ್ಗರಿಸಿದೆ. ‘ನೆಲದ ಮೇಲೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿ, ಮರದ ಮೇಲೆಯೇ ಜೀವನ ಸಾಗಿಸಿದವನು ನೀನೇ ಅಲ್ಲವೇ’ ಎಂದು ಒಂದೇ ಉಸಿರಿಗೆ ಕೇಳಿದೆ.

ಭಾರತದಲ್ಲೂ ತನ್ನ ಕುರಿತು ಮಾಹಿತಿ ಇರುವವರು ಇದ್ದಾರಲ್ಲ ಎಂದು ಕೊಸಿಮೊಗೆ ತುಂಬಾ ಖುಷಿಯಾಯಿತು. ತಕ್ಷಣ ಇಬ್ಬರೂ ಫ್ರೆಂಡ್ಸ್‌ ಆದೆವು. ಆತ ಟೊಂಗೆಯಿಂದ ಜೋತು ಬಿದ್ದು, ಮರದ ಮೇಲೆ ನನ್ನನ್ನು ಎಳೆದುಕೊಂಡ. ಗಿಡದಿಂದ ಗಿಡಕ್ಕೆ ಜಿಗಿಸುತ್ತಾ ನಾಗರಹೊಳೆ ಅಭಯಾರಣ್ಯವನ್ನು ಇಡಿಯಾಗಿ ಸುತ್ತಿಸಿದ. ಗೊತ್ತೆ? ಕೆಲವೆಡೆ ಮಂಗಗಳೂ ನಮ್ಮನ್ನು ಹಿಂಬಾಲಿಸಿಕೊಂಡು ಟಣ್‌, ಟಣ್‌ ಜಿಗಿಯುತ್ತಾ ಬಂದವು. ನನಗೋ ಭಯ. ಆದರೆ, ಕೊಸಿಮೊ, ಅವುಗಳೂ ನಮ್ಮ ಫ್ರೆಂಡ್ಸ್‌. ನಮಗೆ ಏನೂ ಮಾಡಲ್ಲ ಎಂದು ಧೈರ್ಯ ತುಂಬಿದ.

ಆನೆಗಳ ಹಿಂಡು, ಹುಲಿಯ ಬೇಟೆಯ ರೌಂಡು, ಜಿಂಕೆಗಳ ದಂಡು... ಒಂದು ಒಳ್ಳೆಯ ಗರ್ದಿ ಗಮ್ಮತ್ತು ನೋಡಿದಂತಿತ್ತು ಮರಗಳ ಮೇಲಿನಿಂದ ನಾನು ಕಂಡ ಕಾಡಿನ ದೃಶ್ಯ. ಥರಾವರಿ ಹಣ್ಣುಗಳನ್ನು ಮರಗಳಿಂದ ಕಿತ್ತು ತಿನ್ನಿಸಿದ ಕೊಸಿಮೊ. ಟೊಂಗೆ ಮಧ್ಯೆ ಇದ್ದ ಜೇನು ಹುಡುಕಿ, ಕುಡಿಯಲು ಕೊಟ್ಟ.

ADVERTISEMENT

‘ಮರಗಳನ್ನು ಬಿಟ್ಟು ಕೆಳಗಿಳಿಯದ ನೀನು ಇಟಲಿಯಿಂದ ಹೆಂಗೆ ಬಂದೆ ಇಲ್ಲಿಗೆ’ ಎಂದು ಕೇಳಿದೆ. ಇಟಲಿಯಿಂದ ಆಸ್ಟ್ರಿಯಾ, ಜೆಕ್‌ ರಿಪಬ್ಲಿಕ್‌, ಪೋಲೆಂಡ್‌, ಬೆಲರಸ್‌, ರಷ್ಯಾ, ಕಜಕಿಸ್ತಾನ, ಕಿರ್ಗಿಸ್ತಾನ, ಚೀನಾ, ನೇಪಾಳ ಮೂಲಕ ಭಾರತಕ್ಕೆ ಬಂದೆ. ಎಲ್ಲಾ ಕಡೆ ಬೇಕಾಬಿಟ್ಟಿಯಾಗಿ ಮರಗಳನ್ನು ಕಡಿದು ಹಾಕಿಬಿಟ್ಟಿದ್ದಾರೆ ಮಾರಾಯ. ಎಷ್ಟೋ ಕಡೆಗಳಲ್ಲಿ ಮರದಿಂದ ಮರಕ್ಕೆ ಜಿಗಿಯಲು ಎಷ್ಟು ಸಾಹಸಪಟ್ಟೆ ಗೊತ್ತಾ? ನಿಮ್ಮ ರಸ್ತೆಯಲ್ಲಿ ಗಾಡಿಗಳು ಹೆಚ್ಚಾಗಿ ನಿಂತರೆ ನಿಮಗೆ ಟ್ರಾಫಿಕ್‌ ಜಾಮ್‌. ಮರಗಳಿಲ್ಲದಿದ್ದರೆ ನನಗೆ ಟ್ರಾಫಿಕ್‌ ಜಾಮ್‌ ಎಂದ ಕೊಸಿಮೊ. ಪರಿಸರದ ಉಳಿವಿಗೆ ಧ್ವನಿಯೆತ್ತಿ ಆ ಗ್ರೇಟಾ ಒಳ್ಳೆಯ ಕೆಲಸ ಮಾಡ್ತಿದ್ದಾಳೆ. ನೀವೆಲ್ಲ ಅವಳಿಗೆ ಶಕ್ತಿ ತುಂಬಿ’ ಎಂದ.

‘ನಮ್ಮ ಮನೆವರೆಗೆ ಬರ್ತಿಯಾ’ ಎಂದು ಕೇಳಿದ್ದಕ್ಕೆ, ನಿಮ್ಮ ಮನೆಯ ದಾರಿಯಲ್ಲಿ ಮರಗಳಿವೆಯೇ ಎಂದು ಮರುಪ್ರಶ್ನೆ ಹಾಕಿದ. ನಮ್ಮೂರು ಬೆಂಗಳೂರು. ನಮ್ಮ ಏರಿಯಾದಲ್ಲಿ ಬರೀ ಬಿಲ್ಡಿಂಗ್‌ಗಳಿವೆ. ಒಂದೂ ಮರ ಇಲ್ಲ ಎಂದೆ. ‘ನೀನು ಮರಗಳನ್ನು ಬೆಳೆಸಿದರೆ ಖಂಡಿತಾ ಬರುತ್ತೇನೆ’ ಎಂದ ಕೊಸಿಮೊ, ಮರದಿಂದ ನನ್ನನ್ನು ಇಳಿಸಿ, ಬೀಳ್ಕೊಟ್ಟ.

ಯುರೋಪಿನ ಇಟಾಲೊ ಕಾಲ್ವಿನೊ ಎಂಬ ಲೇಖಕ ಬರೆದ ತುಂಬಾ ವಿಶಿಷ್ಟ ಕಾದಂಬರಿ ‘ಬ್ಯಾರನ್‌ ಇನ್‌ ದಿ ಟ್ರೀಸ್‌’. ಜನರ ಸಂಪರ್ಕವನ್ನೂ ಸಂವಹನವನ್ನೂ ತ್ಯಜಿಸಿದ ಬಾಲಕನೊಬ್ಬ ಹೇಗೆ ತನ್ನ ಇಡೀ ಬದುಕನ್ನು ಮರದ ಮೇಲೆ ಕಳೆದ ಎಂಬುದರ ರೋಚಕ ಕಥೆ ಇದು. ‘ಕೊಸಿಮೊ’ ಹೆಸರಿನಲ್ಲಿ ಕೆ.ಪಿ. ಸುರೇಶ್‌ ಅವರು ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.