ADVERTISEMENT

ಎಲ್ಲ ಬಿಟ್ಟು ರಾತ್ರಿ ಮನೆ ತೊರೆದೆವು..

ನೆರೆಪೀಡಿತ ಪ್ರದೇಶಗಳ ಮಕ್ಕಳ ಮಾತು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 9 ನವೆಂಬರ್ 2019, 19:30 IST
Last Updated 9 ನವೆಂಬರ್ 2019, 19:30 IST
ಭಾಗ್ಯ ದನಗರ
ಭಾಗ್ಯ ದನಗರ   

ಮನೆಯಲ್ಲಿ ರಾತ್ರಿ ಒಮ್ಮಿಂದೊಮ್ಮೆಲೇ ನೀರು ನುಗ್ಗಿದಾಗ ಮನೆ, ಪುಸ್ತಕ, ಬ್ಯಾಗ್ ಎಲ್ಲವನ್ನೂ ಬಿಟ್ಟು ಅಪ್ಪನ ಹೆಗಲ ಮೇಲೆ ಕುಳಿತು ನಿದ್ದೆ ಹೋಗಿದ್ದೆನು.

ನೀರು ಬರುವುದನ್ನು ನೋಡಿ ಅಂಜಿಕೆ ಬರುತ್ತಿತ್ತು, ಮನೆಬಿಟ್ಟು ಮುತ್ತೂರಿನ ಪುನರ್ವಸತಿ ಕೇಂದ್ರಕ್ಕೆ ಹೋಗಿ ಎರಡು ದಿನ ನಿಂತೆವು. ಅಲ್ಲಿ ಸರಿಯಾಗಿ ಊಟ ಸಿಗಲಿಲ್ಲ, ಕೆಲವರು ಅಡುಗೆ ಮಾಡಿಕೊಂಡುಗಾಡಿಯಲ್ಲಿ ತೆಗೆದುಕೊಂಡು ಬಂದು ಕೊಡುತ್ತಿದ್ದರು. ನನ್ನ ಕೆಲ ಸ್ನೇಹಿತರು ಕೂಡ ಅವರ ಮನೆ ಮುಳುಗಿದ್ದ ಕಾರಣ ಅಲ್ಲಿಗೆ ಬಂದಿದ್ದರು. ಜನರು ಬಹಳ ಬರಲು ಪ್ರಾರಂಭಿಸಿದರು. ಸರಿಯಾಗಿ ಮಲಗಲು ಸ್ಥಳ ಇರಲಿಲ್ಲ, ಸೊಳ್ಳೆಗಳು ಕಚ್ಚುತ್ತಿದ್ದವು. ಅಲ್ಲಿ ಅಳುತ್ತಾ ಕುಂತಿದ್ದೆವು. ನಂತರ ಜಮಖಂಡಿಯ ನಮ್ಮ ಸಂಬಂಧಿಕರ ಮನೆಗೆ ಹೋದೆವು.

ನಮ್ಮ ಮನೆ, ಶಾಲೆ ಎಲ್ಲವೂ ಮುಳುಗಿ ಹೋಗಿದ್ದವು. ಅಭ್ಯಾಸ ಮಾಡಲು ಪುಸ್ತಕಗಳು ಇರಲಿಲ್ಲ. 20 ದಿನಗಳ ನಂತರ ಸಂಬಂಧಿಕರ ಮನೆಯಿಂದ ಮರಳಿದಾಗ ನಮ್ಮ ಮನೆ ನೀರಿನಲ್ಲಿ ಮುಳುಗಿ ನಾರುತ್ತಿತ್ತು. ನಂತರ ಒಂದು ತಿಂಗಳು ಶಾಲೆಗೆ ಹೋಗಲಿಲ್ಲ. ರಸ್ತೆ ಕೆಸರಿನಿಂದ ತುಂಬಿತ್ತು. ಪುಸ್ತಕಗಳನ್ನು ಕೊಡಿಸಲು ಅಪ್ಪನ ಹತ್ತಿರ ಹಣವಿರಲಿಲ್ಲ. ಬ್ಯಾಗ್‌ನಲ್ಲಿದ್ದ ಪುಸ್ತಕಗಳು, ಬುಕ್ಸ್, ಪೆನ್ನು, ಕಂಪಾಸ್ ಬಾಕ್ಸ್ ಎಲ್ಲವೂ ಕೊಳೆತು ಹೋಗಿದ್ದವು. ಊಟಕ್ಕೂ ಸಾಮಗ್ರಿ ಇರಲಿಲ್ಲ. ಅವ್ವ ತಾನು ಉಪವಾಸ ಇದ್ದು ನಮಗೆ ಊಟ ಮಾಡಿಸುತ್ತಿದ್ದರು.

ADVERTISEMENT

ಈಗ ಶಾಲೆ ಪ್ರಾರಂಭವಾಗಿದ್ದು ಅಲ್ಲಿ ಹೊಸ ಪುಸ್ತಕ ಕೊಟ್ಟಿದ್ದಾರೆ. ಯಾರೋ ಬಂದು ಬ್ಯಾಗ್, ನೋಟ್ ಬುಕ್‌, ಪೆನ್ನು ಕೊಟ್ಟು ಹೋಗಿದ್ದಾರೆ. ಪ್ರತಿದಿನ ಶಾಲೆಗೆ ಹೋಗುತ್ತಿದ್ದೇವೆ. ನಮ್ಮ ಮನೆಯಿಂದ ಶಾಲೆ ಎರಡು ಕಿ.ಮೀ ದೂರ ಇದೆ. ನಡೆದುಕೊಂಡು ಹೋಗುತ್ತೇನೆ.

ಆದರೆ, ಏನೇ ಕಷ್ಟ ಬಂದರೂ, ಒಂದಿಷ್ಟ ಓದಬೇಕು ಎಂಬ ಛಲವಂತೂ ಇದ್ದೇ ಇದೆ. ನೆರೆಯಲ್ಲಿ ಶಾಲೆ, ಮನೆ ಎಲ್ಲ ಮುಳುಗಿ ಹೋಗಿದ್ದರೂ ಕಲಿಯುವ ಆಸೆ ಮುಳುಗಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.