ADVERTISEMENT

ಇಲಿಗಳ ಥಕ್ಕಥೈ

ಪಂಜೆ ಮಂಗೇಶರಾಯ
Published 9 ನವೆಂಬರ್ 2019, 19:31 IST
Last Updated 9 ನವೆಂಬರ್ 2019, 19:31 IST
ಕಲೆ: ಸುರೇಶ್‌ ಅರ್ಕಸಾಲಿ
ಕಲೆ: ಸುರೇಶ್‌ ಅರ್ಕಸಾಲಿ   

ಕನ್ನಡ ಮಕ್ಕಳ ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು ಪಂಜೆ ಮಂಗೇಶರಾಯರದು.ಓರಿಯಂಟ್‌ ಲಾಂಗ್‌ಮನ್‌ ಲಿಮಿಟೆಡ್‌ ಸಂಸ್ಥೆ 1970ರ ದಶಕದಲ್ಲಿ ಹೊರತಂದ ಪಂಜೆಯವರ ಮಕ್ಕಳ ಕಥೆಗಳು ಕೃತಿಯಿಂದ ಆಯ್ದ ಒಂದು ಅನನ್ಯ ಕಥೆ ಇಲ್ಲಿದೆ..

ಒಂದಾನೊಂದು ಊರಿನಲ್ಲಿ ಒಬ್ಬ ಅರಸನು ಇದ್ದನು. ಆ ಅರಸನಿಗೆ ಹೆಂಡತಿ ಇದ್ದಳು. ಅರಸನ ಹೆಂಡತಿಗೆ ಅರಸಿ ಎನ್ನುತ್ತಾರೆ. ಅವರಿಗೆ ಒಬ್ಬ ಮಗಳು ಇದ್ದಳು. ಅರಸನ ಮಗಳು ಅರಮನೆಯಲ್ಲಿ ಸುಖವಾಗಿ ಇದ್ದಳು.

ಆ ಅರಮನೆಯಲ್ಲಿ ಎರಡು ಇಲಿಗಳು ಇದ್ದವು. ಇಲಿಗಳಲ್ಲಿ ಒಂದು ಗಂಡು, ಒಂದು ಹೆಣ್ಣು.

ADVERTISEMENT

ಆ ಇಲಿಗಳು ತಮ್ಮ ಬಿಲದಿಂದ ಹೊರಗೆ ಬಂದು ರಾತ್ರಿಯಲ್ಲಿ ಚೀರುತ್ತಿದ್ದವು. ಇಲಿಗಳ ಚಿಲಿಪಿಲಿಯಿಂದ ಅರಸನ ನಿದ್ದೆಗೆ ಅಡ್ಡಿಯಾಗುತ್ತಿತ್ತು. ಒಂದುದಿನ ಅರಸನು ತನ್ನ ಆಳನ್ನು ಕರೆದು ‘ಎಲಾ ಈ ಇಲಿಗಳನ್ನು ಹಿಡಿಯಬೇಕು’ ಎಂದು ಅಪ್ಪಣೆಕೊಟ್ಟನು.

ಆ ಆಳು ಒಂದು ಗೂಡನ್ನು ಮಾಡಿ, ಅದರಲ್ಲಿ ತಿಂಡಿಯನ್ನು ಮಡಗಿ ಬಿಲದ ಹತ್ತಿರ ಇಟ್ಟನು. ಇಲಿಗಳು ಬಿಲದಿಂದ ಹೊರಗೆ ಬಂದು, ಅಲ್ಲಿ ಇಲ್ಲಿ ಆಡಿದುವು. ಅತ್ತ ಇತ್ತ ಓಡಿದವು. ಕಡೆಗೆ ತಿಂಡಿಯ ವಾಸನೆ ಹಿಡಿದು ಗೂಡಿನ ಹತ್ತಿರ ಬಂದವು. ಗಂಡು ಇಲಿ ಗೂಡಿನ ಒಳಗೆ ನುಸುಳಿ, ಚೂರಿಗೆ ಬಾಯಿ ಹಾಕಿತು. ಅಷ್ಟರಲ್ಲಿ ಗೂಡಿನ ಬಾಗಿಲು ಡಬ್‌ ಎಂದು ಮುಚ್ಚಿತು. ಗಂಡು ಇಲಿ ಗೂಡಿನಲ್ಲಿ ಸಿಕ್ಕಿ ಬಿತ್ತು. ಅದನ್ನು ಕಂಡು ಹೆಣ್ಣು ಇಲಿ ‘ಚೂಂ, ಚೂಂ’ ಎಂದು ಇಡೀ ರಾತ್ರಿ ಗೋಳಾಡಿತು.

ಕತ್ತಲೆ ಹೋಗಿ ಬೆಳಕು ಹರಿಯಿತು. ಅರಮನೆಯವರು ಎಚ್ಚರವಾದರು. ಆಗ ಹೆಣ್ಣು ಇಲಿ, ‘ನಮ್ಮ ಅರಸನ ಮಗಳು ಈಗ ಹಿತ್ತಲಿಗೆ ಬರುವಳು. ನಾನು ಅವಳ ಕಾಲಿಗೆ ಬೀಳುವೆನು. ಅವಳು ನನ್ನ ಗಂಡನನ್ನು ಬಿಡಿಸಿಕೊಡುವಳು’ ಎಂದು ನೆನಸಿ ಹಿತ್ತಲಿಗೆ ಹೋಯಿತು.

ಹಾಗೆ ಹೋಗುತ್ತಿದ್ದಾಗ ಇಲಿಯ ಕಾಲಿಗೆ ಒಂದು ಮುಳ್ಳು ಹೆಟ್ಟಿತು. ಮುಳ್ಳನ್ನು ತೆಗೆಯುವುದಕ್ಕಾಗಿ ಆ ಇಲಿ ಒಬ್ಬ ಕೆಲಸಿಯ ಮನೆಗೆ ಹೋಯಿತು. ಆ ಕೆಲಸಿ ತನ್ನ ಬಾಳನ್ನು ಕಲ್ಲಿನ ಮೇಲೆ ಮಸೆಯುತ್ತಿದ್ದನು. ಬಾಳು ಅಂದರೆ ಕತ್ತಿ.

ಇಲಿ ಕೆಲಸಿಯನ್ನು ಕಂಡು ‘ಅಣ್ಣಾ, ಅಣ್ಣಾ, ಈ ಮುಳ್ಳನ್ನು ಕಿತ್ತು ತೆಗೆಯುವೆಯಾ’ ಎಂದು ಹೇಳಿ ತನ್ನ ಕಾಲನ್ನು ತೋರಿಸಿತು.

‌ಕೆಲಸಿ ತನ್ನ ಬಾಳಿನಿಂದ ಆ ಮುಳ್ಳನ್ನು ತೆಗೆಯುವಾಗ ಇಲಿಯ ಕಾಲು ಕಡಿದು ಹೋಯಿತು. ಆಗ ಇಲಿ ‘ಎಲಾ, ಎಲಾ, ಕೊಡು ನನ್ನ ಕಾಲು; ಇಲ್ಲವೆ ಇಡು ನಿನ್ನ ಬಾಳು’ ಎಂದು ಗದರಿಸಿತು.

ಕೆಲಸಿ ತನ್ನ ಬಾಳನ್ನು ಇಲಿಗೆ ಕೊಟ್ಟನು. ಆ ಇಲಿ ಆದನ್ನು ಹಿಡಿದುಕೊಂಡು ಅರಮನೆಗೆ ಬರುತ್ತಿತ್ತು.

ಹಾಗೆ ಬರುತ್ತಿದ್ದಾಗ ಒಬ್ಬ ಕುಂಬಾರನು ಒಂದು ಗಡಿಗೆಯನ್ನು ಬೆರಳಿನಿಂದ ತಟ್ಟುತ್ತಿದ್ದನು.

ಇಲಿ ಕುಂಬಾರನನ್ನು ಕಂಡು, ‘ಅಣ್ಣಾ, ಅಣ್ಣಾ, ಗಡಿಗೆಯನ್ನು ಕೈಯಿಂದ ಯಾಕೆ ತಟ್ಟುತ್ತೀ? ಇಕೋ, ಈ ಬಾಳು ಇದೆ. ಇದರಿಂದ ತಟ್ಟು’ ಎಂದು ಹೇಳಿ, ಬಾಳನ್ನು ತೋರಿಸಿತು.

ಕುಂಬಾರನು ಬಾಳನ್ನು ಹಿಡಿದುಕೊಂಡು ಗಡಿಗೆಯನ್ನು ತಟ್ಟುವಾಗ ಬಾಳು ಮುರಿದು ಹೋಯಿತು. ಆಗ ಇಲಿ ‘ಎಲಾ, ಎಲಾ, ಕೊಡು ನನ್ನ ಬಾಳು, ಇಲ್ಲವೆ ಇಡು ನಿನ್ನ ಗಡಿಗೆ’ ಎಂದು ಗದರಿತು.

ಕುಂಬಾರನು ತನ್ನ ಗಡಿಗೆಯನ್ನು ಇಲಿಗೆ ಕೊಟ್ಟನು. ಇಲಿಯು ಅದನ್ನು ಹೊತ್ತುಕೊಂಡು ಅರಮನೆಗೆ ಬರುತ್ತಿತ್ತು.

ಹಾಗೆ ಬರುತ್ತಿದ್ದಾಗ ಒಬ್ಬ ತೋಟಗಾರನು ಬಾಳೆಯ ತೋಟಕ್ಕೆ ಹಾಳೆಯಿಂದ ನೀರು ಮೊಗೆಯುತ್ತಿದ್ದನು. ಇಲಿ ತೋಟಗಾರನನ್ನು ಕಂಡು, ‘ಅಣ್ಣಾ, ಅಣ್ಣಾ, ಹಾಳೆಯಿಂದ ಯಾಕೆ ನೀರು ಮೊಗೆಯುತ್ತೀ? ಇಕೋ, ಈ ಗಡಿಗೆ ಇದೆ; ಇದರಿಂದ ಮೊಗೆ’ ಎಂದು ಹೇಳಿ ಗಡಿಗೆಯನ್ನು ತೋರಿಸಿತು.

ತೋಟಗಾರನು ಆ ಗಡಿಗೆಯನ್ನು ಎತ್ತಿಕೊಂಡು ನೀರು ಮೊಗೆಯುವಾಗ ಗಡಿಗೆ ಒಡೆದು ಹೋಯಿತು. ಆಗ ಇಲಿ, ‘ಎಲಾ, ಎಲಾ, ಕೊಡು ನನ್ನ ಗಡಿಗೆ; ಇಲ್ಲವೆ ಇಡು ನಿನ್ನ ಹಣ್ಣು’ ಎಂದು ಗದರಿಸಿತು. ಆ ತೋಟಗಾರನು ತನ್ನ ಹಣ್ಣುಗೊನೆಯನ್ನು ಇಲಿಗೆ ಕೊಟ್ಟನು. ಇಲಿಯು ಅದನ್ನು ಎತ್ತಿಕೊಂಡು ಅರಮನೆಗೆ ಬರುತ್ತಿತ್ತು.

ಹಾಗೆ ಬರುತ್ತಿದ್ದಾಗ, ಒಬ್ಬ ಗಾಡಿಯಾಳು ಖಾಲಿ ಗಾಡಿಯನ್ನು ಹೊಡೆದು ಕೊಂಡು ಹೋಗುತ್ತಿದ್ದನು.

ಇಲಿ ಗಾಡಿಯಾಳನ್ನು ಕಂಡು, ‘ಅಣ್ಣಾ, ಅಣ್ಣಾ, ಖಾಲಿಗಾಡಿ ಯಾಕೆ ಹೊಡೆಯುತ್ತೀ? ಇಕೋ ಈ ಗೊನೆ ಇದೆ; ಇದನ್ನು ಗಾಡಿಯಲ್ಲಿ ಇಡು’ ಎಂದು ಹೇಳಿ ಹಣ್ಣುಗೊನೆಯನ್ನು ತೋರಿಸಿತು.

ಗಾಡಿಯಾಳು ಆ ಗೊನೆಯನ್ನು ಗಾಡಿಯಲ್ಲಿ ಇಡುವಾಗ ಗಾಡಿಯ ಎತ್ತು ಅದನ್ನು ತಿಂದು ಬಿಟ್ಟಿತು.

ಆಗ ಇಲಿ ‘ಎಲಾ, ಎಲಾ, ಕೊಡು ನನ್ನ ಹಣ್ಣು; ಇಲ್ಲವೆ ಇಡು ನಿನ್ನ ಎತ್ತು’ ಎಂದು ಗದರಿಸಿತು.

ಆ ಗಾಡಿಯಾಳು ತನ್ನ ಎತ್ತನ್ನು ಕೊಟ್ಟನು. ಇಲಿಯು ಅದನ್ನು ಅಟ್ಟಿಕೊಂಡು ಅರಮನೆಗೆ ಬರುತ್ತಿತ್ತು.

ಹಾಗೆ ಬರುತ್ತಿದ್ದಾಗ ಒಬ್ಬ ಗಾಣಿಗನು ಗಾಣವನ್ನು ನೂಕುತ್ತಿದ್ದನು. ಇಲಿ ಗಾಣಿಗನನ್ನು ಕಂಡು ‘ಅಣ್ಣಾ, ಅಣ್ಣಾ, ನೀನು ಯಾಕೆ ಗಾಣ ನೂಕುತ್ತೀ? ಇಕೋ, ಈ ಎತ್ತು ಇದೆ; ಇದನ್ನು ಗಾಣಕ್ಕೆ ಕಟ್ಟು’‍ ಎಂದು ಹೇಳಿ ಎತ್ತನ್ನು ತೋರಿಸಿತು. ಗಾಣಿಗನು ಎತ್ತನ್ನು ಹಿಡಿದು ಗಾಣಕ್ಕೆ ಕಟ್ಟುವಾಗ, ಎತ್ತು ಸತ್ತು ಹೋಯಿತು.

ಆಗ ಇಲಿ ‘ಎಲಾ, ಎಲಾ, ಕೊಡು ನನ್ನ ಎತ್ತು; ಇಲ್ಲವೆ ಇಡು ನಿನ್ನ ಎಣ್ಣೆ’ ಎಂದು ಗದರಿಸಿತು.

ಗಾಣಿಗನು ತನ್ನ ಎಣ್ಣೆಯನ್ನು ಕೊಟ್ಟನು. ಇಲಿಯು ಅದನ್ನು ತೆಗೆದುಕೊಂಡು ಅರಮನೆಗೆ ಬರುತ್ತಿತ್ತು.

ಹಾಗೆ ಬರುತ್ತಿದ್ದಾಗ ಅರಸಿಯು ತನ್ನ ಮಗಳಿಗೆ ತಲೆ ಬಾಚುತ್ತಿದ್ದಳು.

ಇಲಿ ಅರಸಿಯನ್ನು ಕಂಡು ‘ಅಮ್ಮಾ, ಅಮ್ಮಾ, ಬರಿ ಕೂದಲು ಯಾಕೆ ಬಾಚುತ್ತೀ? ಇಲ್ಲಿ ಎಣ್ಣೆ ಇದೆ, ಕೂಸಿನ ತಲೆಗೆ ಎಣ್ಣೆ ಹಚ್ಚು’ ಎಂದು ಹೇಳಿ, ಎಣ್ಣೆಯನ್ನು ತೋರಿಸಿತು.

ಅರಸಿಯು ಕೂಸಿಗೆ ಎಣ್ಣೆ ಹಚ್ಚುವಾಗ ಎಣ್ಣೆ ಚೆಲ್ಲಿ ಹೋಯಿತು. ಆಗ ಇಲಿ ‘ಅಮ್ಮಾ, ಅಮ್ಮಾ, ಕೊಡು ನನ್ನ ಎಣ್ಣೆ; ಇಲ್ಲವೆ, ಇಡು ನಿನ್ನ ಕೂಸು’ ಎಂದು ಗದರಿಸಿತು.

ಅರಸಿಯು ‘ಇಲಿ, ಇಲಿ, ನನಗೆ ಇದು ಒಂದೇ ಕೂಸು; ಇವಳನ್ನು ಕೊಟ್ಟರೆ ನನಗೆ ಯಾರು ಇದ್ದಾರೆ? ಬೇರೆ ಯಾವುದನ್ನು ಬೇಕಾದರೂ ಕೇಳು, ತಂದು ಕೊಡುತ್ತೇನೆ. ನಮ್ಮ ಕೂಸನ್ನು ಮಾತ್ರ ಕೇಳಬೇಡ’ ಎಂದು ಹೇಳಿದಳು.

‘ಹಾಗಾದರೆ ನನ್ನ ಗಂಡನನ್ನು ಕೊಟ್ಟು ಬಿಡು, ನನಗೆ ನಿನ್ನ ಮಗಳು ಬೇಡ.’ ಎಂದು ಇಲಿ ಹೇಳಿತು.

‘ನಿನ್ನ ಗಂಡನನ್ನು ನಾನು ನೋಡಲೇ ಇಲ್ಲ; ನೋಡಿದ್ದರೆ ತಂದು ಕೊಡುತ್ತಿದ್ದೆನು’ ಎಂದು ಅರಸಿ ಹೇಳಿದಳು.

‘ಓ ಅಲ್ಲಿ ನೋಡು; ಆ ಗೂಡಿನಲ್ಲಿ ನನ್ನ ಗಂಡನು ಇದ್ದಾನೆ. ಒಂದು ಸಲ ಬಾಗಿಲು ತೆರೆದು ಬಿಡು’ ಎಂದು ಹೇಳಿ, ಇಲಿ ಗೂಡಿನ ಬಳಿ ಓಡಿತು. ಕೂಡಲೆ ಅರಸಿಯು ಗೂಡಿನ ಬಾಗಿಲನ್ನು ತೆರೆದು ಆ ಗಂಡು ಇಲಿಯನ್ನು ಹೊರಗೆ ಬಿಟ್ಟಳು.

ಆಮೇಲೆ ಗಂಡು ಇಲಿ ಮತ್ತು ಹೆಣ್ಣು ಇಲಿ ಕೈ ಕೈ ಹಿಡಿದು ಕುಣಿಯುತ್ತಾ ಹೀಗೆ ಹಾಡಿದುವು.

ಕಾಲು ಕೊಟ್ಟು ಬಾಳು ತಂದೆ, ಥೈ ಥಕ್ಕ ಥೈ!
ಬಾಳು ಕೊಟ್ಟು ಗಡಿಗೆತಂದೆ, ಥೈ ಥಕ್ಕ ಥೈ!
ಗಡಿಗೆ ಕೊಟ್ಟು ಹಣ್ಣುತಂದೆ, ಥೈ ಥಕ್ಕ ಥೈ!
ಹಣ್ಣು ಕೊಟ್ಟು ಎತ್ತುತಂದೆ, ಥೈ ಥಕ್ಕ ಥೈ!
ಎತ್ತು ಕೊಟ್ಟು ಎಣ್ಣೆತಂದೆ, ಥೈ ಥಕ್ಕ ಥೈ!
ಎಣ್ಣೆ ಕೊಟ್ಟು ಗಂಡತಂದೆ, ಥೈ ಥಕ್ಕ ಥೈ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.