ADVERTISEMENT

ಕಥೆ: ಬಣ್ಣದ ಚಿಟ್ಟೆ

ಭುವನಾ ಹಿರೇಮಠ
Published 26 ಡಿಸೆಂಬರ್ 2020, 19:31 IST
Last Updated 26 ಡಿಸೆಂಬರ್ 2020, 19:31 IST
ಕಲೆ: ಸಂಜೀವ್‌ ಕಾಳೆ
ಕಲೆ: ಸಂಜೀವ್‌ ಕಾಳೆ   

ಚಿಲಿಪಿಲಿ ಹಕ್ಕಿಗಳ ಉಲಿತಕ್ಕೆ ಎಚ್ಚರಗೊಂಡು ಕಣ್ಣುಜ್ಜಿಕೊಂಡು ಕಟ್ಟೆಯ ಮೇಲೆ ಚೆಲ್ಲಿದ ರಗಟಿಯೊಳಗಿಂದ ಎದ್ದು ಕುಳಿತ ರಾಧಿಗೆ ಒಂದು ಕ್ಷಣ ಗೊಂದಲವಾಯಿತು. ನಿನ್ನೆಯವರೆಗೂ ತಾಲೀಮು ಮನೆಯಲ್ಲೇ ಮಲಗುತ್ತಿದ್ದ ಅವರು ಗುಡಚಾಪಿ ಸಮೇತ ಅಯ್ಯನವರ ಹಿತ್ತಲುಮನೆಯ ಜಗಲಿಕಟ್ಟೆ ಸೇರಿದ್ದು ಕನಸಿನಂತೆನಿಸಿ ಒಮ್ಮೆಲೆ ಹಳವಂಡ ಕಾಡಿತು. "ಮಾಯಿ, ಮಾಯಿ..... "ಅಂತ ಕೂಗಿದಳು. ಆಗಲೆ ಎದ್ದು ಬಚ್ಚಲಿಲ್ಲದ ಕಟ್ಟೆಯೇ ಮನೆಯಾದ್ದರಿಂದ ಕವನೆಳ್ಳಿನಲ್ಲೇ ಎದ್ದು ಕ್ರಿಯಾಕರ್ಮ ಮುಗಿಸಿ ಸ್ನಾನ ಮಾಡಿ ಬಟ್ಟೆ ತೊಳೆಯುತ್ತಿದ್ದಳು ಮಾಯಿ ಅರ್ಥಾತ್ ಸುಲೋಚನಾ. ಅಸಲಿಗೆ ರಾಧಿಯ ತಾಯಿ ಸುಲೋಚನಾಳು 'ಚಂದ್ರಲಾಲಿ' ನಾಟಕದಲ್ಲಿ ನಟಿಸಿದ 'ಮಾಯಿ' ಪಾತ್ರಕ್ಕೆ ಜೀವ ತುಂಬಿ ಜನಜನಿತವಾದಂದಿನಿಂದಲೆ 'ಮಾಯಿ' ಆದದ್ದು. ಗಂಡಸು ದಿಕ್ಕಿಲ್ಲದ ಸುಲೋಚನಾ ಲಂಪಟ ಗಂಡಸರಿಂದಲೇ ಎರಡು ಹೆಣ್ಣುಮಕ್ಕಳ ತಾಯಿಯಾಗಿದ್ದಳು. ಕೈಯ್ಯ ಹಚ್ಚೆಯ ಮೇಲಷ್ಟೆ ಸಾಕ್ಷಿಯಾಗಿ ಉಳಿದಿದ್ದ 'ನಾಮದೇವ'ನ ಮಗಳು ರಾಧಿಗೆ ಈಗ ಏಳೆಂಟು ವರ್ಷ ವಯಸ್ಸಿರಬೇಕು ಆದರೂ ಮೂರು ವರ್ಷದ ಹಸುಳೆಯಂತೆ ಬೆರಳು ಚೀಪುತ್ತಿದ್ದಳು. ಯಾವಾಗಲೂ ಮಾಯಿಯ ಸೆರಗ ಹಿಡಿದು ಪೆದ್ದುಪೆದ್ದಾಗಿ ಹಲ್ಲು ಕಿರಿಯುತ್ತ ಅವಳ ಹಿಂದೆಯೇ ಸುಳಿದಾಡುತ್ತಿದ್ದಳು. ತಿನಿಸು ಬಾಕಿಯಾದ್ದರಿಂದ ತಿಂಡಿ ತಿನ್ನುವ ಸಮಯಕ್ಕೆ ಸರಿಯಾಗಿ ಕಳ್ಳ ಬೆಕ್ಕಿಕನಂತೆ ಐನೋರ ಅಡುಗೆಮನೆಯ ಹೊಸ್ತಿಲ ಹೊರಗೆ ನಿಲ್ಲುತ್ತಿದ್ದಳು. ಅವಮಾನಗೊಂಡ ಮಾಯಿ ಅವಳ ಜುಟ್ಟು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದೂ ಇದೆ. ಎರಡು ದಿನ ತೆಪ್ಪಗಿದ್ದು ಮೂರನೆ ದಿನಕ್ಕೆ ಮತ್ತದೇ ಹಾಡು. ಹೀಗೆ ಮಾಯಿಯ ಜೀವ ಹಿಂಡುತ್ತಿದ್ದಳು ರಾಧಿ. ಇನ್ನೊಬ್ಬ ಮಗಳು 'ಮತಿ'ಯನ್ನು ಹುಟ್ಟಿಸಿದವನ ಕುರುಹು ಮೈಮನಗಳಲ್ಲೆಲ್ಲೂ ಉಳಿದಿರಲಿಲ್ಲ. ಮತಿ ಶುಭ್ರ ಬಣ್ಣದ ಸ್ನಿಗ್ಧ ಚೆಲುವೆ. ಹೋದ ವರ್ಷ ಸೋನೂರಿನಲ್ಲೇ ದೊಡ್ಡವಳಾಗಿದ್ದಳು. ಆಗಲೂ ಐನೋರ ಕೊಟ್ಟಿಗೆಯ ಮಗ್ಗುಲಿನ ಖಾಲಿ ಜಾಗವೇ ಅವರಿಗೆ ಆಧಾರವಾಗಿತ್ತು. ಐನೋರವ್ವನ ಹಳೇ ಸೀರೆಯ ಪಡಕಿಯೇ ಅವಳ ಮುಟ್ಟು ಇಂಗಿಸಲು ನೆರವಾಗಿತ್ತು. ಮೊದಲೆಲ್ಲ ಗಗ್ಗರಿ ಅಂಗಿ ತೊಡುತ್ತಿದ್ದ ಮತಿ ದೊಡ್ಡವಳಾದ ಮೇಲೆ ಲಂಗಾ ಡೌಣಿಯಲ್ಲಿ ಹರೆಯ ತುಳುಕುವ ಹೆಣ್ಣಾಗಿದ್ದಳು. ಅವಳ ಮೌನ ಮೇಕಪ್ಪಿನಲ್ಲಿ ಅದ್ದಿ ತೆಗೆದಂತೆ ಹೊಳಪು ಹೆಚ್ಚಿಸುತ್ತಿತ್ತು. ಚೆಲ್ಲುತನವಿಲ್ಲದ ಅವಳ ಮೆಲುನಡಿಗೆ ಯುವಕರೆದೆಯಲ್ಲಿ ಭಾವಗೀತೆ ಉಲಿಯುವಂತೆ ಮಾಡುತ್ತಿತ್ತು. ಈಕೆಗೆ ಗಂಡು ಜೋಡಿಸುವ ಚಿಂತೆ ಮಾಯಿಯ ಪ್ರತಿ ಉಸಿರಿನ್ನೂ ಜೀವಂತ ಕೊಲ್ಲುತ್ತಿತ್ತು. ಮಾಯಿ ಈಗ ತುಸು ವಯಸ್ಸು ಬಾಗಿದ ಚೆಲುವು ಮಾಸಿದ ಹೆಣ್ಣಾಗಿದ್ದರಿಂದ ಪಾತ್ರಗಳು ಒಲಿಯುತ್ತಿರಲಿಲ್ಲ. ಚೆಲುವೆ ಮತಿಗೆ ಸಾಕಷ್ಟು ಕಂಪನಿಗಳಲ್ಲಿ ಆಫರ್ ಇದ್ದರೂ ಮಾಯಿ, ಪಾತ್ರದವರೆಂಬ ಐತಿಹಾಸಿಕ ಹಣೆಪಟ್ಟಿ ಅಳಿಸುವ ಪ್ರಯತ್ನದಲ್ಲಿದ್ದಳು. ಹೊಟ್ಟೆಪಾಡಿಗಾಗಿ ಅಪರೂಪಕ್ಕೆ ಹಳ್ಳಿಗಳಲ್ಲಿನ ಜಾತ್ರಾಮಂಡಳಿಗಳ ಹವ್ಯಾಸಿ ನಾಟಕಗಳಲ್ಲಿ ತಾನಷ್ಟೆ ನಟಿಸಲು ಒಂದೆರಡು ತಿಂಗಳುಗಳ ಮಟ್ಟಿಗೆ ತನ್ನ ಹೆಣ್ಣುಮಕ್ಕಳ ಕಟ್ಟಿಕೊಂಡು ನೆಲೆಯೂರುತ್ತಿದ್ದಳು. ಸೋನೂರಿನ ಜನ ತವರಿನಂತವರಂತೆಯೇ ಆದರದಿಂದ ಜಾತ್ರೆಗೆ ಕರೆಸಿಕೊಂಡು ನಾಟಕಗಳಲ್ಲಿ ಪಾತ್ರ ಕೊಡುತ್ತಿದ್ದರು. ಸಾಲದ್ದಕ್ಕೆ ತಾಲೀಮು ಮನೆಯಲ್ಲೇ ವಸತಿಗೂ ಕೂಡ ಅನುವು ಮಾಡಿಕೊಟ್ಟಿದ್ದರು. ದೊಡ್ಡ ಮಗಳು 'ಮತಿ' ಬೆಳೆದು ದೊಡ್ಡವಳಾಗಿ ಬಾಚಣಿಕೆಯಂತೆ ನಿವುಳಾಗಿ ಕೈಗೆ ಬಂದಿದ್ದಳು. ದುಂಡು ದುಂಡಗಿನ ಅವಳ ಮೈಮಾಟ ವಿಶ್ವಾಮಿತ್ರನ ತಪಸ್ಸು ಕೆಡಿಸಿದ ಮೇನಕೆಯಂತಿತ್ತು. ಈ ವರ್ಷದ 'ರತ್ನಮಾಂಗಲ್ಯ' ನಾಟಕದ ಪ್ರಮುಖ ಪಾತ್ರಧಾರಿಯಾಗಿ ನಟಿಸುತ್ತಿದ್ದ ಊರ ಗೌಡರ ಕುಲಪುತ್ರ 'ಮನೋಹರ' ಮತಿಯ ಸೊಬಗಿಗೆ ವಾಲಿದಂತೆ ತೋರಿತು. ಮನೋಹರ ತುಂಬುಹರೆಯದ ಚಿಗುರುಮೀಸೆಯ ಬಯಲುಸೀಮೆಯ ಸರದಾರನಂತಿದ್ದ. ಪಿಯುಸಿ ಫೇಲಾಗಿ ಲೇಟೆಸ್ಟು ಬೈಕಿನ ಮೇಲೆ ಗಲ್ಲಿ ಗಲ್ಲಿ ತಿರುಗುತ್ತಿದ್ದ. ತಾನು ಗುರಿಯಿಟ್ಟ ಹಕ್ಕಿ ಕವಣೆಗೆ ಬೀಳದಿದ್ದರೆ ಗೂಡು ಸುಟ್ಟಾದರೂ ಹಕ್ಕಿ ಹೊಡೆಯುವುದರಲ್ಲಿ ಚತುರನಾಗಿದ್ದ. ಇವನ ಉಡಾಫೆ ಡೈರೀಲಿ ಮತಿಯ ಯೌವ್ವನ ಹರಿದು ಬಿಸಾಕಿದ ಹಾಳೆಯಾಗಬಾರದೆಂದು ಭಯಭೀತಗೊಂಡ ಮಾಯಿ ತಡಮಾಡದೆ ತಾಲೀಮು ಮನೆಯಿಂದ ಠಿಕಾಣಿ ಕಿತ್ತು ಅಯ್ಯನವರ ಹಿತ್ತಲ ಕಟ್ಟೆ ಸೇರಿದ್ದಳು.

ವಾಸ್ತವಕ್ಕೆ ಮರಳಿದ ರಾಧಿ ತನ್ನದೇ ಉಚ್ಚೆಯಿಂದ ಒದ್ದೆಯಾಗಿದ್ದ ಜಾಗ ಬಿಟ್ಟು ಮುಗಿಯದ ನಿದ್ದೆಗೆ ಪೂರ್ಣವಿರಾಮ ಇಡಲು ಅಕ್ಕ ಮತಿಯ ರಗಟಿಯಲ್ಲೇ ಸೇರಿಕೊಂಡು ಅವಳ ಬಳುಕುವ ಸೊಂಟದ ಮೇಲೆ ಕಾಲುಹೇರಿ ಮಲಗಿದಳು. ಮಾಯಿ ನಿರುತ್ತರಿಯಾಗಿ ತನ್ನ ಕೆಲಸದಲ್ಲೇ ಮಗ್ನಳಾಗಿದ್ದಳು. ಸಂಜೆ ತಾಲೀಮು ನಡೆಯುವ ಸಮಯಕ್ಕೆ ಸೇದಿ ಮುಗಿಸಿದ ಸಿಗರೇಟನ್ನು ಚಪ್ಪಲಿಯಿಂದ ಹೊಸಕಿ ಒಳಬಂದ ಮನೋಹರ ದಿನಾಲೂ ಬಾಕಿನ ಮೇಲೆ ಕುಂತು ತಾಲೀಮು ವೀಕ್ಷಿಸಿ ಪಕಪಕನೆ ನಗೆಯಾಗುತ್ತಿದ್ದ ಮತಿಯ ಗೈರುಹಾಜರಿ ನೋಡಿ ದಂಗಾಗಿದ್ದ. ವಿಕಟತೆ ಇಲ್ಲದ ವಿಕಟನಗೆ ನಗುತ್ತ ಅವನ ಅಭಿನಯ ಮಂಕಾಗಿತ್ತು. ಎಂದಿಗಿಂತ ಬೇಗನೆ ಜಾತ್ರಾಮೇಳ ತೊರೆದು ಮನೆ ಸೇರಿದ.

ಕಟ್ಟೆಯ ಮೇಲೆ ಅಯ್ಯನವರ ಮನೆಯ ಸಾರು ಇಸಗೊಂಡು ಸ್ಟೌವ್ ಮೇಲೆ ಕುದಿಸಿದ ಅನ್ನಕ್ಕೆ ಸುರುವಿಕೊಂಡು ಉಂಡು ಸುಲೋಚನಾ ಸ್ವಲ್ಪ ಅಡಿಕೆ ಹಾಕ್ಕೊಂಡು ಮಾಸ್ತರ ಮನೆಯಲ್ಲಿ ಅಸ್ಮಿತ ಧಾರಾವಾಹಿ ನೋಡಿ ಬರುವಷ್ಟರಲ್ಲಿ ಮಕ್ಕಳು ಮಲಗಿದ್ದು. ತುಸು ಭಯದಲ್ಲಿಯೇ ಇರುತ್ತಿದ್ದ ಆಕೆ ಕೋಳಿ ಜಂಪಿನ ನಿದ್ದೆ ಮಾಡುತ್ತ ತನ್ನ ಪುಟ್ಟ ಸಂಸಾರಕ್ಕೆ ಗೂರ್ಕನಂತೆ ಕಾವಲು ಕಾಯುವುದು ವಾಡಿಕೆಯಾಗಿತ್ತು. ಕಟ್ಟೆಯಾದರೂ ತೀರ ಬಯಲಿನಂತೆ ಆಗಬಾರದೆಂದು ತಟ್ಟಿನ ಪಾಟು ಕೈಹೊಲಿಗೆಯಲ್ಲೇ ಹೊಲೆದು ತುಸು ಮರೆ ಮಾಡಿದ್ದಳು.

ADVERTISEMENT

ನಾಟಕ ಸಮೀಪಿಸಿತು. ತಾಲೀಮು ದಿನವಿಡೀ ನಡೆದರೂ ಮಾತುಗಳಲ್ಲಿ ಕರಾಮತ್ತನ್ನೇ ಕಳೆದುಕೊಂಡಿದ್ದ ಮನೋಹರ ವಿರಹವೇದನೆಯಲ್ಲಿ ಮಂಕಾಗಿಯೇ ಇದ್ದ. ನಾಟಕದಲ್ಲಿ ಸುಲೋಚನಾ ತನ್ನ ನೆಚ್ಚಿನ 'ಚೆಂಗು ಚೆಂಗೆಂದು ಹಾರುವ, ರಂಗುರಂಗಿನ ಈ ಜಿಂಕೆ' ಹಾಡಿಗೆ ಒನ್ಸ್ ಮೋರ್ ಹೇಳಿಸಿಕೊಂಡು ಅಕ್ಕಪಕ್ಕದ ಊರಿನವರಿಂದಲೂ ಆಯಾರು ಹೊಡೆದುಕೊಂಡಳು. ಮರುದಿನವೇ ಹುಬ್ಬಳ್ಳಿಗೆ ಮರಳುವ ತಯಾರಿಯಲ್ಲಿ ಸುಲೋಚನಾಳ ಸಹಕುಟುಂಬ ಗಂಟುಮೂಟೆ ಕಟ್ಟಿತ್ತು. ಹಿಂದಿನ ದಿನ ಇಡೀರಾತ್ರಿ ಕುಣಿಯಲಾಗದ ವಯಸ್ಸಿನಲ್ಲಿ ಹೊಟ್ಟೆಗಾಗಿ ಕುಣಿದ ಸುಲೋಚನಾ ಗೋರ್ಖಾ ಕೆಲಸಕ್ಕೆ ರಜೆಮಾಡಿ ನಿದ್ದೆಹೋಗಿದ್ದಳು. ರಾಧಿ ಮತಿ ಕೂಡ. ಚುಮುಚುಮು ಬೆಳಕಾಯಿತು. ಎದ್ದು ಕುಳಿತ ಸುಲೋಚನಾಳಿಗೆ ಮಕ್ಕಳು ಹೊದ್ದಿದ್ದ ರಗಟಿಯ ಒಳಗಿಂದ ಕಟಮಸ್ತಾದ ಕಾಲು ಮತಿಯ ಸೊಂಟದ ಮೇಲಿಂದ ಹೊರಬಿದ್ದಂತೆ ತೋರಿತು. ಯಾವ ಪರಿವೆಯೂ ಇಲ್ಲದೆ ನಿದ್ರಾಲೋಕದಲ್ಲಿ ವಿಹರಿಸುತ್ತಿದ್ದಳು ಮತಿ. ಸುಲೋಚನಾಳ ಬಬ್ಬಾಟು ಊರನ್ನೇ ಎನ್ನಿಸಿತು. ಮತಿ ರಾಧಿ ತಬ್ಬಿಬ್ಬಾಗಿ ಕಿರುಚಿದರು. ಹ್ಯಾಪೆಮೋರೆಹಾಕಿ ಕೈಕಟ್ಟಿ ನಿಂತಿದ್ದ ಕಚ್ಚೆಹರುಕ ಮನೋಹರ. ಜಾತ್ರೆಯ ಹಿನ್ನಾದಿನವೂ ಜನಜನ ಜಾತ್ರೆ ಅಯ್ಯನವರ ಹಿತ್ತಲು ಕಿಕ್ಕಿರಿದಿತ್ತು. ತಲೆಗೊಂದು ಮಾತು ಕೇಳುತ್ತಿದ್ದವು. ಈ ನಾಟಕದ ಹೆಣ್ಣುಗಳೇ ಹೀಗೆ, ಇವರನ್ನ ಊರಲ್ಲಿ ಸೇರಸ್ಬಾರ್ದು, ಯಾವಾಗ ಯಾರನ್ನ ಬುಟ್ಟಿಗೆ ಹಾಕೋತಾರೊ ಗೊತ್ತಾಗಲ್ಲ, ಪಾಪ ಊರ ಗೌಡ್ರಿಗೂ ಗಾಳಾ ಹಾಕಿ ಈಗ ಬಬ್ಬಾಟು ನೋಡ್ರಿ, ಮನೋಹರ ಗೌಡ್ರು ಮುಂದೆ ಗೌಡ್ತಿನ್ನ ತಂದು ಊರು ಆಳ್ಬೇಕಾದವ್ರು ಅಂತೆಲ್ಲ ಬಕೀಟು ಹಿಡಿಯುತ್ತಿದ್ರು. ಒಳ್ಳೆಯ ಮನಸಿನ ಸಹೃದಯಿಗಳಾಗಿದ್ದ ಅಯ್ಯನೋರ ಮನೆಯವರು ಈ ಗೂಂಡಾ ಗೌಡರ ವಿಷಯದಲ್ಲಿ ಬಾಯಿಹಾಕುವ ಉಸಾಬರಿ ಮಾಡದೆ ಮೌನವಾದರು. ಮರುಮಾತಾಡದೆ ಅಮಾಯಕ ಹೆಣ್ಣು ಜೀವಗಳು ಟ್ರಕ್ಕು ಏರಿ ಹುಬ್ಬಳ್ಳಿ ಸೇರಿಕೊಂಡವು. ಸುಲೋಚನಾ ಒಳಗೆ ಊದುಬತ್ತಿಯಿಂದ ತನ್ನ ಕೈಯ್ಯ ಹಚ್ಚೆ ಸುಟ್ಟುಕೊಳ್ಳುತ್ತಿದ್ದಳು. ಹೊರಗಡೆ ಹುಟ್ಟಲಿರುವ ಕೂಸಿನ ಅಪ್ಪನಿಗೆ ಸಾಕ್ಷಿಯಾಗಿ ಮತಿ ಕೈಗೆ ಇಂದ್ರಮ್ಮ "ಮನೋಹರ" ಎಂದು ಹಚ್ಚೆ ಹಾಕುತ್ತಿದ್ದಳು.

ಅಂದು ಸಂಜೆ ಕಲ್ಲೊಳ್ಳಿ ಊರುಕೇರಿ ತುಂಬ ಹಾಲು ಹಣಿಸಿದಂತೆ ಬೆಳದಿಂಗಳು, ಕಂಟಿ ಕಾಬಲು, ಬೇಲಿ ಗೊಟರಿ, ಗಿಡ ನೆಲ, ಗುಡಿ ಗುಂಡಾರ, ಮಸೊತ್ತಿ ಚರಚು, ಗುಡಿಸಲು ಮಹಲಿನ ಭೇದವಿಲ್ಲದೆ ಹರಡಿಕೊಂಡಿತ್ತು. ಹುಡುಗಿಯರೆಲ್ಲ ಬಣ್ಣ ಬಣ್ಣದ ಹೆಣಿಗೆ ವಸ್ತ್ರ, ಕಸೂತಿ ಕರವಸ್ತ್ರ, ಮಖಮಲ್ಲಿನ ಅರಿವಿ ಮುಂತಾದ ತಮ್ಮ ತಮ್ಮ ಮನೆಯಲ್ಲಿರುವ ಅತೀ ಚಂದದ ರೊಟ್ಟಿ ಅರಿವಿಯೊಳಗೆ ಕರ್ಚಿಕಾಯಿ, ಕರಿಗಡಬು, ಚಜ್ಜಕದ ಹೋಳಿಗಿ, ಹುರೆಕ್ಕಿ ಹೋಳಿಗಿ, ಎಣಿಮಜಲ ಹೋಳಿಗಿ ನಾನಾ ರೀತಿಯ ರುಚಿಕಟ್ಟಾದ ತಿನಿಸುಗಳನ್ನು ಕಟ್ಟಿಕೊಂಡು; ಗಗ್ಗರಿ ಅಂಗಿ, ಲೇಸು ಹಚ್ಚಿದ ಸ್ಟರ್ಟು, ಹೆಚ್ಚು ಗೇರಾವು ಇಡಿಸಿ ಹೊಲಿಸಿದ ಚೈನಾಸಿಲ್ಕ್ ಲಂಗಾಬೌಜು, ಬಾಳ ಚೆಲುವಿ ಅಂತ ತನ್ನನ್ನ ತಾನು ಅಂದುಕೊಂಡಿರುವಂತವ್ರು, ಮನೆಯೊಳಗೆ ವಸ್ತ್ರಸಂಹಿತೆಯ ಕಟ್ಟುಪಾಡು ಇಲ್ಲದವರು ಚಂದ್ರರಿಗೆ ಸೊಂಟದ ಮೇಲಿನ ಬೆಳದಿಂಗಳು ಪ್ರದರ್ಶಿಸುತ್ತಾ ಲಂಗಾಡೌಣಿ ಹಾಕಿಕೊಂಡು ಗೆಳತಿಯರ ಬಾಗಿಲಿಗೆ ಹೋಗಿ ಒಬ್ಬಳು ಇಬ್ಬರಾಗಿ ಇಬ್ಬರು ನಾಲ್ಕಾಗಿ "ಅಲ್ಲೀಕೇರಿಗಿ ಹೋಗುನು ಬರ್ತೀರೇನ್ರೆ, ಒಲ್ಲದಿದ್ದರ ಅಲ್ಲೇ ಇರ್ತೇರೆನ್ರೆ; ಕಲ್ಲವ್ವ ಮಲ್ಲವ್ವ ಕೂಡಿಕೊಂಡು, ಕಡಬು ಹೋಳಿಗಿ ಮಾಡಿಕೊಂಡು........ಇಲ್ಲದಿದ್ದರೆ ಅಲ್ಲೇ ಇರ್ತೇರೇನ್ರೆ" ಎಂದು ಪದ ಹಾಡುವುದು ಆ ಬೆಳದಿಂಗಳ ಐಸಿರಿಯಲ್ಲಿ ಗೆಳತಿಯರು ಸೇರಿ ಬಸವಂದೇವ್ರ ಗುಡಿ ಮುಂದಿನ ಕಟ್ಟೆಯ ಮೇಲೆ ಕುಳಿತು ಹಂಚಿ ಉಂಡು ಜೊತೆಜೊತೆಗೆ ಕಿವಿ ತೂತು ಬೀಳುವಷ್ಟು ಗುಸುಗುಸು ಗುನುಗುನು ಮಾತನಾಡಿ ಎಲ್ಲ ರೀತಿಯಲ್ಲಿ ಹೊಟ್ಟೆ ತುಂಬಿಸಿಗೊಂಡು ಚತ್ತರಗಿಯಂತೆ ಲಂಗಾ ಸ್ಕರ್ಟು ಹರಡುವಂತೆ ಮುಘಲ್ ಎ ಅಜಮ್ ನ "ಜಬ ಪ್ಯಾರ ಕಿಯಾ ತೊ ಢರನಾ ಕ್ಯಾ"ನಲ್ಲಿನ ಹಿರೋಇನ್ ತಾವೇ ಎಂದು ಭಾವಿಸಿಕೊಂಡು ಬಗಾಟಬರಗಿ ಆಡಿ ಕುಣಿದು ತಣಿದು ಬರುವ ಒಂದು ರೀತಿ ಈಗಿನ "ಪಬ್ಬು ಕ್ಲಬ್ಬು"ಗಳ ಗಬ್ಬು ಕುಣಿತವನ್ನು ನಿವಾಳಿಸಿ ಉಗುಳುವಂತೆ ಇತ್ತು.

ಈ ಅಲ್ಲೀಕೇರಿ ಗೆಳತಿಯರಲ್ಲಿ ಯಾವುದೇ ರೀತಿ ಜಾತಿಬೇಧಗಳೇನೂ ಗಣನೀಯವಾಗಿ ಇಲ್ಲದಿದ್ದರೂ ಕೂಡ ಕೇರಿಯ ಗೆಳತಿಯರು ಬಸವಂದೇವರ ಗುಡಿಯ ಮೇಲಿನ ಕಟ್ಟೆ ಹತ್ತಿದರೆ ತಮ್ಮನ್ನ ದೇವರು ಶಪಿಸುತ್ತಾನೆಂದು ಅಗಾಧವಾಗಿ ವಂಶಪಾರಂಪರ್ಯವಾಗಿ ನಂಬಿಕೊಂಡು ಬಂದಿದ್ದರಿಂದ ಅಂಗಳದಲ್ಲೇ ಕುಳಿತು ತಮ್ಮ ತಿನಿಸುಗಳನ್ನ ಮೇಲ್ಜಾತಿಯವರಿಗೆ ಹಂಚದೆಯೇ ಊಟ ಮಾಡುತ್ತಿದ್ದರು. ಆಟ ಮನರಂಜನೆಗಳ ವಿಷಯದಲ್ಲಿ ಇಂತಹ ಯಾವ ನಿಷೇಧಗಳು ಕೆಲಸ ಮಾಡುತ್ತಿರಲಿಲ್ಲ.

ಇಷ್ಟೆಲ್ಲ ಸಂಭ್ರಮಿಸುತ್ತಿರುವ ಗೆಳತಿಯರನ್ನು ಸೇರುವ ತಹತಹಿಕೆಯಲ್ಲಿ ಶಾಂತಿಯೂ ಕೂಡ ಸಂಗವ್ವಕ್ಕ ತಿರುವಿಕೊಟ್ಟ ಸಜ್ಜಕವನ್ನೇ ಚಕಳಿಯಾಕಾದ ತುಣುಕುಗಳನ್ನಾಗಿ ನೀಟಾಗಿ ಕತ್ತರಿಸಿಕೊಂಡು ಜರ್ಮನಿ ಟಬಕಾದಲ್ಲಿ ಹಾಕೊಂಡು ದೊಡ್ಡ ಮನಿ ಸೌಕಾರ ಹುಡಿಗ್ಯಾರು ತೊಟ್ಟು ಬ್ಯಾಸರಾಗಿ ಕೊಟ್ಟಿರೊ ಚೈನಾಸಿಲ್ಕ್ ಅಂಬ್ರೆಲ್ಲಾ ಫ್ರಾಕು ಹಾಕೊಂಡು ನಿಂತಿದ್ಳು. ಅನುದಿನದಂತೆ ಶಾಂತಿಯನ್ನು ಹುಟ್ಟಿಸಿದ ಗಂಗಪ್ಪ ಅರ್ಥಾತ್ 'ಲಾಕ್ ಲೇಕ್ ಗಂಗಪ್ಪ' ಓಣಿಯ ತುಂಬಾ ಅಗಡಾ ದಿಗಡಿ ಹೆಜ್ಜೆ ಚೆಲ್ಲಾಡುತ್ತಾ ಬೀಳುನಡಿಗೆಯಲ್ಲಿ ಮನೆ ಸಮೀಪಿಸಿದಂತೆ "ಎಲ್ಲಾ ಲಾಕ್ ಲೇಕ್ ಮಾಡ್ತನ.....ಏನಲೆ ನಾಲಾಯಕ್ ಬೋಸಡಿ, ಮಗಳನ್ನ ಎದಕ ರೆಡಿ ಮಾಡೀದಿ ಚಿನಾಲ್ ಕೀ, ಅಡ್ಡ ಕಡದೇನ ನಿನ್ನ ರಂಡೆ......" ಹೀಗೆಲ್ಲ ಅವಾಚ್ಯವಾಗಿ ಬೈಯ್ಯುತ್ತಾ ಓಲಾಡಿಕೊಂಡು ಬರುವಾಗ ಗೊಮ್ಮೆನ್ನುವ ಸೆರೆ ವಾಸನೆ ಓಣಿತುಂಬ ಬೆಳದಿಂಗಳ ಜೊತೆಗೆ ಮಿಶ್ರ ಆಗುತ್ತಾ ಇಡೀ ಓಣಿಯ ಉನ್ಮಾದದ ಹಾಲಗಡಲಿನಲಿ ಒಂದು ಹಿಡಿ ಉಪ್ಪು ಚೆಲ್ಲಿಬಿಟ್ಟಿದ್ದ. "ಏ ಹುಚ್ಚಡ್ಸು ಶಾಂತಿ ನಿಂಗೇನ ತಲ್ಯಾಗ ಶಗಣಿ ಗ್ವಾತಾ ತುಂಬೇತೇನ.. ಈ ಹುಚ್ಚ ಹಾಟ್ಯಾ ಬರೂದ್ರೊಳಗ ಮನಿ ಜಗಾ ಬಿಡಂತ ಹೇಳಿದ್ನೆಲ ಯಾಕ ದಿಂಗಂತ ನಿಂತಿ" ಎಂದು ಹೊಟ್ಟೆಯೊಳಗಿನ ಸಂಕಟ ತೋಡಿಕೊಳ್ಳುತ್ತ ಬೋರ್ಯಾಡಿ ಅಳತೊಡಗಿದಳು ಸಂಗವ್ವಕ್ಕ. ಏನೂ ತೋಚದ ಶಾಂತಿ ಸುಮ್ಮನೆ ನಿಂತುಬಿಟ್ಟಳು. ಅಣತಿ ದೂರದಲ್ಲಿ ಆಕೆಯನ್ನು ಕರೆಯಲು ಬರುತ್ತಿದ್ದ ಗೆಳತಿಯರು ಅತ್ತಿಂದತ್ತಲೇ ಮರೆಯಾಗಿಬಿಟ್ಟರು. ಗಂಗಪ್ಪ ಸಂಗವ್ವಕ್ಕನ್ನ ಓಣಿ ನಡುವೆ ದರದರ ಎಳದು ತಂದು ಆಕೆಯ ಹುಣಸೆ ಬೋಟಿನಂತ ಜಡೆ ಹಿಡಿದು ಹಿಗ್ಗಾಮುಗ್ಗಾ ಥಳಿಸಹತ್ತಿದ. ಸಂಗವ್ವಕ್ಕ ಲಬಲಬ ಹೊಯ್ಕಳ್ಳಲು ಶುರುಮಾಡಿದಳು. ಈ ಕುಡಕನ ಉಸಾಬರಿಗೆ ಬರಲು ತಯಾರಿಲ್ಲದೆ ಆಯಿಬಾಯಿಗಳೆಲ್ಲ ಬಾಗಿಲು ಜಡಿಯುತ್ತ "ದಿನಾ ಸಾಯಾವ್ರಿಗೆ ಅಳಾವ್ರ ಯಾರು ಕರಿಗಾಲ ಭಾಡ್ಯಾ" ಎನ್ನುತ್ತ ಅಗಳಿ ಹಿಕ್ಕಿದರು. ಎದುರಿಗೆ ಗಂಗಪ್ಪನ ಅಣ್ಣ ಸಿಂಗಪ್ಪನ ಮನೆ ಮಾತ್ರ ತೆರೆದುಕೊಂಡಿತ್ತು. ಬಾಯಲ್ಲಿ ಚುಟ್ಟಾ ಒಂದು ಪಕ್ಕಕ್ಕೆ ಹಿಡಿದುಕೊಂಡು ಇಣಚಿ ಚಾಪ ಕಡ್ಡಿ ಗೀರುತ್ತಾ ಹೊರಬಂದು ಒಂದು ದಮ್ ಎಳದು "ಇಂವಾ ಕುಡದಷ್ಟು ಬರೆ ಕಿವ್ಯಾಗ ಹಾಕೋತೇನ ನಾ, ನಾಲಾಯಕ್ ದುನಿಯಾ ದುನಿಯಾನ ಕುಡಿತೈತಿ ನಿನ್ನಂಗ ಯ್ಯಾಂವ ಮಾಡ್ತಾನೊ ಚೋದಿಕೆ" ಅಂದು ಸಂಗವ್ವನ್ನ ಈ ಕ್ಷಣಕ್ಕೆ ರಕ್ಷಣೆ ಮಾಡಿ ಗಂಗಪ್ಪನ್ನ ಎಳೆದು ಒಂದೆರಡು ತದಕಿ ಕಟ್ಟಿಮ್ಯಾಲ ಕೂಡ್ರಿಸಿದ. ಸಂಗವ್ವಕ್ಕ ಶಾಂತಿಯನ್ನ ಒಳಗೆ ಎಳಕೊಂಡು ಕದ ಹಾಕಿಕೊಂಡುಬಿಟ್ಳು. ನಿಶೆ ಹೆಚ್ಚಾಗಿದ್ದಕ್ಕೆ ಹಾಗೂ ಸಿಂಗಪ್ಪನ ಪೆಟ್ಟಿಗೆ ರೊಳ್ಳಿಗವದ ಗಂಗಪ್ಪ ಕಟ್ಟಿಮ್ಯಾಲ ಖಬರಗೆಟ್ಟು ಬಿದ್ದುಕೊಂಡ.
********

ಇವರ ಮದುವೆ ಆಗಿ ಸುಮಾರು ಇಪ್ಪತ್ತು ವರ್ಷ ಆಗಿರಬೇಕು. ಗಂಗಪ್ಪ ಒಂಥರ ಹುಟ್ಟುಕುಡುಕ. ಅಪ್ಪ ಬಸವಂತಪ್ಪನ ಜೊತೆಗೆ ಚಿಕ್ಕಂದಿನಿಂಲೇ ಕುಡಿತಕ್ಕೆ ಅಂಟಿಕೊಂಡಿದ್ದು. ಪಾಪ ಗಂಡಸಿನಂತಾ ಗಟ್ಯುಳ್ಳ ಸಂಗವ್ವಕ್ಕನ್ನ ಈ ಕುಡಕನಿಗೆ ಜೋಡ ಮಾಡಿಬಿಟ್ಟಿದ್ರು. ಗಂಗಪ್ಪಂದೂ ಹಾಗೆ ನೋಡಿದ್ರೆ ಹೊಲ ಮನಿ ಎಲ್ಲ ಚೆನ್ನಾಗೇ ಇತ್ತು ಕುಡಿತಕ್ಕೆ ಅಂಟಿಕೊಂಡು ಹೊಲ ಎಲ್ಲ ನುಂಗಿ ನೀರು ಕುಡದಾಗಿತ್ತು. ಮನೆ ಒಂದು ಎಷ್ಟೋ ವರ್ಷಗಳಿಂದ ಸುಣ್ಣ ಬಣ್ಣ ಇಲ್ಲದೆ ಸಂಗವ್ವಕ್ಕ ಯಾವಾಗಾದ್ರೂ ಒಮ್ಮೆ ಮಟ್ಟಿ ಮೆತ್ತಿ ಸಾಪ ಎಳಿಯುತ್ತಿದ್ಳು. ಮಳೆ ಬಂದ್ರೆ ಮನೆ ತುಂಬ ಅಲ್ಲಲ್ಲಿ ನೆನದು ಕುಕ್ಕಡಿ ಆಗ್ತಿತ್ತು. ಸಂಗವ್ವಕ್ಕನ ಸೌಕಾರ ಗಡ್ಡೆದ ಕೂಲಿ ದುಡ್ಡಿನ ಮೇಲೆಯೇ ಮನೆಯೊಳಗೆ ಆಗಾಗ ಒಗ್ಗರಣೆ ವಾಸನೆ. ಇಲ್ಲಾದ್ರೆ ಸೌಕಾರ ಮನೆಯಲ್ಲಿ ತಿಂದು ತೇಗಿ ಉಳಿದು ತಂಗಳಾದ ಕೂಳಿಗಾಗಿ ಉಡಿಯೊಡ್ಡಿ ನಿಲ್ಲದೆ ವಿಧಿಯೇ ಇರಲಿಲ್ಲ. ಸಂಗವ್ವಕ್ಕನಿಗೂ ಮೊದಲೇ ಕೂಲಿಆಳಿನ ಸಾಲಿನಲ್ಲಿ ನಿಂತೊ, ಅಲ್ಲೇ ಆಕೆಯನ್ನು ಥಳಿಸಿಯೊ ದುಡ್ಡೆಲ್ಲ ಕಳ್ಯಾನ ಸೆರೆ ಅಂಗಡಿಯ ಗಲ್ಲೆಗೆ ಸೇರುತ್ತಿದ್ದವು. ಎರಡು ಹೆಣ್ಣಿನ ಮೇಲೆ ಒಂದು ಗಂಡು ಮಗುವೂ ಹುಟ್ಟಿತ್ತು ವಾರಗಟ್ಟಲೆ ಜ್ವರ ಬಡಿದು ಆರೈಕೆ ಇಲ್ಲದೆ ಶಿವನ ಪಾದ ಸೇರಿತ್ತು. ಈಗಿರೋದು ಹರೆಯದ ಹೊಸ್ತಿಲಲ್ಲಿರೊ ಶಾಂತಿ ಮತ್ತು ಆಕೆಯ ತಂಗಿ ಆನಂದಿ ಮಾತ್ರ. ಆನಂದಿಗೆ ಆಗಲೆ ಗೋವಾದಲ್ಲಿ ಕೆಲಸ ಸಿಕ್ಕಿತ್ತು. ನಾಲ್ಕನೇ ಇಯತ್ತೆ ಇನ್ನೂ ರಿಜಲ್ಟ್ ಬರೋಕಿಂತ ಮೊದಲೇ ಸೌಕಾರ ಕೋಮಲಾಳಿಗೆ ಹೆರಿಗೆಯಾಗಿ ಆರು ತಿಂಗಳ ಕೂಸನ್ನು ಎತ್ತಿ ಆಡಿಸಲು ಗೋವಾದಂತಹ ಊರಲ್ಲಿ ವಿಶ್ವಾಸಿಗರು ಸಿಗದೆ, ಊಟ ಬಟ್ಟೆ ಕೊಟ್ಟು ವರ್ಷವೊಂದಕ್ಕೆ ಇಪ್ಪತ್ತು ಸಾವಿರ ಪಗಾರದ ಶರತ್ತಿನ ಮೇಲೆ ಗಂಗಪ್ಪ ಆನಂದಿಯನ್ನ ಜೀತಕ್ಕೆ ಅಟ್ಟಿ ಎರಡು ವರ್ಷಗಳೇ ಆಗಿತ್ತು. ವರ್ಷಕ್ಕೆ ಒಂದೆರಡು ಬಾರಿ ಊರಿಗೆ ಬರುತ್ತಿದ್ದ ಆಕೆ ಗೋವಾದ ವಾತಾರಣಕ್ಕೆ ಬೆಳ್ಳಗೆ ಮೈಕೈ ತುಂಬಿಕೊಂಡು ಚೆನ್ನಾಗಿಯೇ ಕಾಣುತ್ತಿದ್ದಳು. ಊರಲ್ಲಿ ಯಾವ ಆಸೆಯೂ ಆಕೆಗೆ ಉಳಿದಂತೆ ಕಾಣುತ್ತಿರಲಿಲ್ಲ. ಸಂತಸದಿಂದಲೆ ಗೋವಾಕ್ಕೆ ಮರಳುತ್ತಿದ್ದಳು. ಅವಳ ಬಗ್ಗೆ ಸಂಗವ್ವಳೂ ಕೂಡ ನಿಷ್ಕಾಳಜಿ ಧೋರಣೆ ತೋರಿಬಿಟ್ಟಿದ್ದಳು.

ಈಗ ಆರು ತಿಂಗಳ ಹಿಂದೆ ಋತುಮತಿಯಾದ ಶಾಂತಿಯನ್ನ ಏನು ಮಾಡುವುದೆಂಬ ಗುಂಗಿನಲ್ಲಿಯೇ ಗಂಗಪ್ಪ ಇದ್ದಾಗಲೇ ಸಂಜೆ ಕಳ್ಯಾನ ಸಾರಾಯಿ ಅಂಗಡಿಯಲ್ಲಿ ದಲಾಲನೊಬ್ಬ ರಾಜಸ್ತಾನಿಯೊಬ್ಬನಿಗೆ ಹೆಣ್ಣು ಮಾರುವ ಕುರಿತು ಸುದ್ದಿ ತಂದಿದ್ದ. ಅದರಿಂದಲೇ ಇವತ್ತು ಬೆಳೆದು ನಿಂತ ಮಗಳು ಅಂದವಾಗಿ ತಯಾರಾದದ್ದು ನೋಡಿ ಗಂಗಪ್ಪ ಬುಸುಗುಟ್ಟಿದ್ದು. ಮೂವತ್ತೈದು ಸಾವಿರಕ್ಕೆ ಮಗಳನ್ನು ಮಾರಿದರೆ ಮದುವೆ ಗಿದುವೆ ಜಂಜಾಟವೂ ಇಲ್ಲ ಕೈಯ್ಯಲ್ಲಿ ಕಾಂಚಣವೂ ಕುಣಿಯುತ್ತೆ ಎಂದು ಮಗಳನ್ನು ಮಾರಿಯೇ ತೀರುವುದೆಂದು ನಿರ್ಧರಿಸಿಬಿಟ್ಟಿದ್ದ. ಸಾಲ ಮಾಡಿ ಮದುವೆ ಮಾಡಿದರಾಯ್ತು ಅನ್ನೋಹಾಗೂ ಇರಲಿಲ್ಲ. ಅಸಲಿಗೆ ಈಗಾಗಲೇ ಮಾಡಿದ ಸಾಲಗಳಿಂದಲೇ ಇದ್ದಬದ್ದ ಹೊಲ ಎಲ್ಲ ಹಳ್ಳ ಹಿಡಿದು ಹೋಗಿತ್ತು. ಸಂಗವ್ವಕ್ಕನ ಮೈಮೇಲೆ ತವರಿನವರು ಹಾಕಿದ ಎರಡು ತೊಲೆ ಬಂಗಾರದಲ್ಲಿ ತಾಳಿಯನ್ನು ಬಿಟ್ಟು ಒಂದು ಗುಂಜಿ ಕೂಡ ಬಂಗಾರ ಉಳಿಸಿರಲಿಲ್ಲ ಮೂಗುತಿಯೂ ಕೂಡ ಒಂದು ದಿನದ ಕುಡಿತಕ್ಕೆ ಮಾರಿಕೊಂಡಿದ್ದ. ಈಗ ಮನೆಯಲ್ಲಿದ್ದ ಒಂದು ತಾಮ್ರದ ಹಂಡೆ ಮತ್ತು ಕೊಡವನ್ನೂ ಸಹ ಕಾರಕೂನ ಬಸಪ್ಪನ ಮನೆಯಲ್ಲಿ ಐದುನೂರು ರೂಪಾಯಿಗೆ ಒತ್ತೆಗೆ ಇಟ್ಟದ್ದಾಗಿತ್ತು. ಇಂತಹದರಲ್ಲಿ ವಯಸ್ಸಿಗೆ ಬಂದ ಮಗಳ ಮದುವೆ ಮಾಡಬೇಕೆಂದು ಸಂಗವ್ವಕ್ಕ ದಿನಾಲೂ ಅವನ ಕಿವಿಯೊಳಗೆ ಒದರುತ್ತಿದ್ದದ್ದಕ್ಕೆ ಈ ದಲಾಲ ತಂದ ರಾಜಸ್ತಾನದವನ ಸುದ್ದಿ ದೇವರು ಕೊಟ್ಟ ವರವೇ ಎಂದು ಭಾವಿಸಿಕೊಂಡ ಉಮೇದಿಯಲ್ಲೇ ಇವತ್ತು ಒಂದು ಪಾಕೀಟು ಹೆಚ್ಚೇ ಇಳಿಸಿದ್ದ.
*******

ಮುಖದ ಮೇಲೆ ಬಿಸಿಲು ಚುರುಗುಟ್ಟುವ ಕಡತಕ್ಕೆ ಎದ್ದು ಕಣ್ಣುಜ್ಜಿಕೊಂಡು ಮನೆಯೊಳಗೆ ಹೊಕ್ಕ ಗಂಗಪ್ಪ "ಏ ಬೋಸಡೆ ಶಾಂತಿನ್ನ ತಯಾರ ಮಾಡ ಸೀರಿ ಉಡಸಿ, ಮದ್ದಿನಮ್ಯಾಲ ನೋಡಾಕ ಬರಾವ್ರ ಅದಾರ; ನನಗೀಗ ಊಟಕ್ಕ ನೀಡಿಕೊಡು" ಅಂದ ಒಳ್ಳೆ ದರ್ಪದಲ್ಲಿ. ಸೌಕಾರು ಭಾಂಡಿಗೆ ಪಾತ್ರೆ ಹಾಕುವ ಮೊದಲೇ ಹೋಗಿ ತಂದಿದ್ದ ತಂಗಳನ್ನ ಸಾರು ಹಾಕಿಕೊಟ್ಟ ಸಂಗವ್ವಕ್ಕನಿಗೆ ಒಳಗೊಳಗೇ ಒಂಚೂರು ಖುಷಿಯಾಗಿತ್ತು. ಮಗಳ ಬಗ್ಗೆ ಕಾಳಜಿ ಹುಟ್ಟಿದೆಯಲ್ಲ ಗಂಡನಿಗೆ ಎಂದು. ಶಾಂತಿಗಾಗಿ ಎತ್ತಿಟ್ಟಿದ್ದ ಅನ್ನ ಸಾಂಬಾರು ಕೂಡ ಸುರವಿ "ಹಸದಿರ್ಬೇಕು ಉಣ್ಣು ರಾತ್ರಿನೂ ಏನೂ ತಿನದ ಉಪಾಸ ಬದ್ದಿದೀ" ಎಂದು ಬಲು ಕಾಳಜಿಯಿಂದ ಉಣಬಡಿಸಿದಳು.
ಬಕಾಸುರನಂತೆ ತಿಂದದ್ದಾಯಿತು ಹೊರನಡೆದ ಗಂಗಪ್ಪ.

ಇತ್ತ ಶಾಂತಿಯನ್ನ ಶಾಲೂ ಗೀಲೂ ಉಡಿಸಿ ತಯಾರು ಮಾಡಲಾಯಿತು ಗೊಂಬೆಯಂತೆಯೇ ಕಂಗೊಳಿಸುತ್ತಿದ್ದಳು ಡಿಡಿ ಕನ್ನಡದಲ್ಲಿ ಆಗಾಗ ಪ್ರಸಾರಗೊಳ್ಳುತ್ತಿದ್ದ "ಶಾನುಭೋಗರ ಮಗಳು ಹೆಸರು ಸೀತಾದೇವಿ.....ಹನ್ನೆರಡು ತುಂಬಿದರು ಮದುವೆಯಿಲ್ಲ," "ಹುಚ್ಚುಕೋಡಿ ಮನಸು.....ಯಾವ ಮದುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು" ಮೊದಲಾದ ಭಾವಗೀತೆಗಳು ಶಾಂತಿಯ ಎದೆಯ ಮೇಲೆ ಸುಳಿದು ಕಚಗುಳಿ ಇಟ್ಟಂತಾಗಿ ತುಂಬಿದ ತುಟಿಯ ನೆರಳಲಿ ನಸುನಗೆಯ ಬಚ್ಚಿಡುತ್ತಿದ್ದಳು. ಅಂಬಾರಿಯೇರಿದ ರಾಜಕುಮಾರಿಯ ಎದೆಯಂತೆಯೇ ಇವಳ ಎದೆಯೂ ಢವಢವ ಸದ್ದು ಮಾಡುತ್ತ ಡೋಲಾಯಮಾನ ಸ್ಥಿತಿಯಲ್ಲಿತ್ತು. ಸುಮಾರು ಎರಡು ಗಂಟೆಯ ಹೊತ್ತಿಗೆ ದಲಾಲ ಮತ್ತು ಒಬ್ಬ ಮಧ್ಯವಯಸ್ಕನನ್ನು ಕರೆದುಕೊಂಡು ಗಂಗಪ್ಪ ಮನೆ ಮುಂದೆ ಬಂದು ನಿಂತ. ನೆಗ್ಗಿ ನೆಲ್ಲಿಕಾಯಿಯಂತಾಗಿದ್ದ ಚರಿಗೆಯಲ್ಲೇ ನೀರು ಕೊಟ್ಟ ಸಂಗವ್ವ ಪ್ಯಾಲಿ ನಗೆ ಬೀರುತ್ತ ತಲೆಯ ಮೇಲೆ ಸೆರಗು ಹೊದ್ದುಕೊಂಡು ಒಳನಡೆದಳು. ಶರಬತ್ತು ಕೊಟ್ಟ ನಂತರ ಮಣೆಯ ಮೇಲೆ ಕುಳಿತ ಶಾಂತಿ ನಾಚಿ ನೀರಾಗಿದ್ದಳು. ದಲಾಲ ಮಾತೆತ್ತಿದ "ನೋಡವಾ ತಂಗಿ ನಿಂಗ ಅಗದೀ ಭಾರಿ ವರಾ ತಂದೇನು, ಇಲ್ಲೇ ಲೋಕಲ್ ಅಲ್ಲಿದು. 'ರಾಜಸ್ತಾನ' ಹೆಸರು ಕೇಳಿ ಇಲ್ಲ ಅದು ನಿನ್ನ ಗಂಡನ ಮನಿ, ಅಗದೀ ರಾಣಿ ರಾಣಿಯಂಗ ನೋಡ್ಕೋತಾರ ನಿನ್ನ....ಸಾಕಷ್ಟ ಬೀಗತಾನಗೋಳ ಮಾಡಿಸೇನ ನಾ ಇಲ್ಲೇ ಸುತ್ತಮುತ್ತ ಹಳ್ಳ್ಯಾಗ". ಅಂತಾ ಜಾಹೀರಾತೀಯವಾಗಿ ಮಾತನಾಡುತ್ತಿದ್ದ ಇದ್ಯಾವುದರ ಬಗ್ಗೆಯೂ ಗ್ಯಾನವಿಲ್ಲದ ಶಾಂತಿ ವರನ ಕಡೆಗೆ ಕಳ್ಳನೋಟ ಬೀರಿದಾಗ ಅವನೂ ಮುಗುಳ್ನಕ್ಕ ರೋಮಾಂಚನವ ತಡೆಯಲಾಗದೆ ಒಳನಡೆದಳು. ಅಂದವತಿಯಾಗಿದ್ದ ಶಾಂತಿಯನ್ನು ಆ ರಾಜಸ್ಥಾನಿ ಮೆಚ್ಚದೇ ಇರಲಿಲ್ಲ. ಮರುದಿನವೇ ಮೂವತ್ತೈದು ಸಾವಿರಕ್ಕೆ ಹೆಸರೇ ಗೊತ್ತಿರದ ಊರಿಗೆ ವರನ ಹೆಸರೂ ಕೇಳದೆ ಶಾಂತಿಯನ್ನು ಧಾರೆಯೆರೆದು ಕೈತೊದುಕೊಂಡದ್ದಾಯಿತು.

ಮೊದಮೊದಲು ಭಾಷೆ ಗೊತ್ತಿಲ್ಲದಿದ್ದರೂ ಪ್ರೇಮದ ಭಾಷೆಯಲ್ಲಿಯೆ ಇಬ್ಬರೂ ರಸವತ್ತಾಗಿ ಜೀವಿಸಿದರು. ಅವನ ಹೆಸರು ಬೀಜು ಎಂಬುದು ಶಾಂತಿಗೆ ಗೊತ್ತಾಗಬೇಕಾದರೆ ಒಂದೆರಡು ದಿನವೇ ಆಗಿರಬೇಕು. ಆರು ತಿಂಗಳಾದರೂ ಶಾಂತಿ ಯಾವತ್ತೂ ವಾಂತಿ ಮಾಡಲೆಯಿಲ್ಲ ತಿಂಗಳು ತಿಂಗಳು ಮುಟ್ಟಾಗುವುದೂ ನಿಲ್ಲಲಿಲ್ಲ. ಶಾಂತಿಗಿನ್ನೂ ಅಲ್ಲಿನ ಭಾಷೆ ಮಾತನಾಡಲು ಬರದಿದ್ದರೂ ಕೂಡ ಅವರ ಸಂಭಾಷಣೆಗಳು ಅರ್ಧಕ್ಕಿಂತ ಹೆಚ್ಚು ಅರ್ಥವಾಗುತ್ತಿದ್ದವು. ಒಂದು ದಿನ ರಾತ್ರಿ ಬೀಜುನ ತಾಯಿ ಬೀಜುಗೆ ಶಾಂತಿಯನ್ನು ವಾಪಸು ಅವಳ ಊರಿಗೆ ಬಿಟ್ಟುಬರುವಂತೆ ಹೇಳಿದ್ದು ತಿಳಿದು ಆಕೆಯ ಎದೆಯ ಮೇಲೆ ಕಲ್ಲುಚಪ್ಪಡಿ ಹೇರಿದಂತೆ ಆಯ್ತು. ಆದರೂ ಕೂಡ ಪೂರ್ಣವಾಗಿ ಮಾತು ತಿಳಿಯದ್ದಕ್ಕೆ ಮತ್ತು ಬೀಜು ತನ್ನೊಂದಿಗೆ ಪ್ರೀತಿಯಿಂದಲೇ ಇದ್ದದ್ದಕ್ಕೆ ಒಂದು ಆಸೆಯ ಗೆರೆ ಹಸಿರಾಗಿಯೇ ಉಳಿದಿತ್ತು. ಇದಾದ ಒಂದೆರಡು ದಿನಗಳಲ್ಲಿ ಕಲ್ಲೊಳ್ಳಿ ಸೇರಿದ ಅಳಿಯ ಮಗಳನ್ನು ಆದರದಿಂದ ಬರಮಾಡಿಕೊಳ್ಳಲು ಸಂಗವ್ವಕ್ಕ ಮಾತ್ರ ಖಾಲಿ ಇದ್ದಳು. ಗಂಗಪ್ಪನ ಹಣದ ತಿಜೂರಿ ಇನ್ನೂ ಖಾಲಿಯಾಗದಿದ್ದಕ್ಕೆ ಬಾರು ಧಾಬಾಕ್ಕೇ ದತ್ತಕವಾಗಿಬಿಟ್ಟಿದ್ದ. ಒಂದು ವಾರದವರೆಗೆ ಶಾಂತಿಯೊಂದಿಗೆ ಉಳಿದ ಬೀಜು ಮತ್ತೆ ಬೇಗ ಬರುವುದಾಗಿ ಹೇಳಿ ಬಸ್ಸು ಹತ್ತಿದ. ಶಾಂತಿಯ ಎದೆ ತಳಮಳಿಸಿತಾದರೂ ಅವನ ಕಣ್ಣಿನಲ್ಲಿ ಅವಳ ಪ್ರೀತಿಯ ಬಿಂಬ ಕಂಡಂತಾಗಿ ಆಶಾಭಾವದೊಂದಿಗೆ ಕೆಲ ದಿನಗಳನ್ನು ಕಳೆದಳು. ಬೀಜು ಬರಲೇಯಿಲ್ಲ. ಸಂಗವ್ವಕ್ಕ ತನ್ನ ಭಾವನ ಮಗ ಭದ್ರಪ್ಪನ ಕೈಕಾಲು ಹಿಡಿದು ರಾಜಸ್ಥಾನದ ದೇವಿಪುರಕ್ಕೆ ಹೋಗಿ ಬೀಜುನ ಬಗ್ಗೆ ವಿಚಾರಿಸಿಕೊಂಡು ಬರುವಂತೆ ವಿನಂತಿಸಿ ಗೋಗರೆದಳು. ಸೆಂಟ್ರಿಂಗ್ ಕೆಲಸದಲ್ಲಿ ಸುತ್ತ ಹಳ್ಳಿಯಲ್ಲಿ ಪ್ರಸಿದ್ಧನಾಗಿದ್ದ ಭದ್ರಪ್ಪ ಕೆಲಸದಲ್ಲಿ ಬಿಡುವು ಮಾಡಿಕೊಂಡು ನಾಲ್ಕೈದು ದೋಸ್ತರನ್ನೂ ಕರೆದುಕೊಂಡು ರಾಜಸ್ಥಾನಕ್ಕೆ ಪ್ರವಾಸಕ್ಕೆಂದು ಹೋಗಿ ಇದನ್ನೂ ವಿಚಾರಿಸಿದರಾಯಿತೆಂದು ತಾಳೆಮಾಡಿಕೊಂಡು ಹೊರಟೇಬಿಟ್ಟ. ದೇವಿಪುರದಲ್ಲಿ ಬೀಜುನ ಮನೆ ಹುಡುಕಿ ಹೋಗಿ ತಾವು ಕಲ್ಲೊಳ್ಳಿಯಿಂದ ಬಂದಿರುವುದಾಗಿ ಅಲ್ಪಸ್ವಲ್ಪವೇ ಗೊತ್ತಿರುವ ಹಿಂದಿಯಲ್ಲಿ ಹೇಳುತ್ತಲೇ ಯಾರೂ ಒಳಬರುವಂತೆ ಹೇಳದಿದ್ದರೂ ಒಳನಡೆದರು. ಸೋಫಾದ ಮೇಲೆ ಯಾವುದೋ ಹೆಂಗಸಿನ ಮೇಲೆ ಕೈಹೇರಿದ ಬೀಜು ಲಲ್ಲೆ ಹೊಡೆಯುತ್ತಿದ್ದ. ಸಿಟ್ಟಿನಿಂದ ಚಿಣಗಿ ಹಾವಿನಂತೆ ಭದ್ರಪ್ಪ ಅವನ ಮೇಲೆ ಆಕ್ರಮಣ ಮಾಡಿದ ಉಳಿದ ಗೆಳೆಯರೂ ಕೈಜೋಡಿಸಿದರು. ಥಳಿತದಿಂದ ಸುಸ್ತಾಗಿದ್ದ ಬೀಜು ಭಯಭೀತನಾಗಿ ನಿಂತಿದ್ದ ಅವರವ್ವನ ಫೋನು ಕಂಪ್ಲೇಂಟಿನ ಆಧಾರದ ಮೇಲೆ ಬಂದ ಪೋಲೀಸರು ಅವನನ್ನು ರಕ್ಷಿಸಿದರು. ಅವನ ತಪ್ಪನ್ನು ತಿಳಿಯಪಡಿಸುವಷ್ಟು ಭಾಷಾಜ್ಞಾನವಿಲ್ಲದ ಭದ್ರಪ್ಪ ಹಾಗೂ ಸ್ನೇಹಿತರು ಬೆಪ್ಪಾಗಿ ನಿಂತರು ಒಂದೆರಡು ಲಾಠಿಯೇಟೂ ತಿಂದು ಊರ ಹಾದಿ ಹಿಡಿದರು.
*******

ಶಾಂತಿ ಈಗ ಧಾಬಾವೊಂದರಲ್ಲಿ ತನ್ನ ಕೊಚ್ಚಿಹೋದ ಬದುಕಿನ ವಿಷಮ ಗಳಿಗೆಗಳನ್ನು ನೆನೆಯುತ್ತಾ, ರಾತ್ರಿಯಿಡೀ ಕಟರುಗೊಂಡ ಬಿರಿಯಾಣಿ ಬೋಗುಣಿಯನ್ನು ನೆಣೆಯಿಟ್ಟು ರಸ್ತೆಯ ಕಡೆಗೆ ದಿಟ್ಟಿಸುತ್ತಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.