ADVERTISEMENT

ಒರಿಯಾ ಕಥೆ: ಸ್ಮಶಾನದ ಹೂವು

ಸಚ್ಚಿದಾನಂದ ರಾವುತ್ ರಾಯ್
Published 7 ನವೆಂಬರ್ 2020, 19:30 IST
Last Updated 7 ನವೆಂಬರ್ 2020, 19:30 IST
ಕಲೆ: ಸೃಜನ್‌
ಕಲೆ: ಸೃಜನ್‌   

ಬ್ರಾಹ್ಮಣರ ಪ್ರದೇಶದ ಪೋಡಾಬಸಂತಿನ ಜಗ್ಗೂ ತಿವಾಡಿ ಕೀರ್ತನೆ ಮಾಡುತ್ತಿದ್ದ, ಮೃದಂಗ ಬಾರಿಸುತ್ತಿದ್ದ, ಗಾಂಜಾ ಸೇವಿಸುತ್ತಿದ್ದ ಮತ್ತು ಹೆಣಗಳನ್ನು ಸುಡುತ್ತಿದ್ದ. ವಿಧಿ-ವಿಧಾನಗಳಿಂದ ಶವಗಳನ್ನು ಸುಡುವವರಲ್ಲಿ, ಅಕ್ಕಪಕ್ಕದ ಆ ಪ್ರದೇಶದಲ್ಲಿ ಜಗ್ಗೂ ಸಾಕಷ್ಟು ಪ್ರಸಿದ್ಧನಾಗಿದ್ದ.

ಚಿತೆಯ ಬೆಂಕಿಯಲ್ಲಿ ಶವ ಸೇಂ-ಸೇಂ ಎನ್ನುತ್ತಾ ಅಥವಾ ಅದರ ಕಾಲು ಬೆಂಕಿಯ ಕಾವಿಗೆ ಸೆಟೆದು ಮೇಲಕ್ಕೆ ಬಂದಾಗ ಅಥವಾ ಹೊಟ್ಟೆಯ ಕರುಳುಗಳಿಂದ ನೀರು ಬಂದು, ಬೆಂಕಿ ಸರಿಯಾಗಿ ಉರಿಯದಿದ್ದಾಗ, ಅವನ ಇನ್ನಿತರ ಜೊತೆಗಾರರು ಜಗ್ಗೂ ತಿವಾಡಿಯನ್ನು ನೋಡಿ, ಅವನ ಸಲಹೆಯನ್ನು ಬಯಸುತ್ತಿದ್ದರು.

ಗಾಂಜಾದ ಅಮಲಿನಲ್ಲಿ ಅಲ್ಲಿಯೇ ಕೂತು ತೂಕಡಿಸುತ್ತದ್ದ ಜಗ್ಗೂ ಗಾಬರಿಗೊಳ್ಳುತ್ತಿದ್ದ. ಅವನು ತಕ್ಷಣ ಎದ್ದು ನಿಲ್ಲುತ್ತಿದ್ದ; ನಂತರ ಚಿತೆಯಿಂದ ಮೂರು ಕೈ-ಅಳತೆಯ ಬಿದಿರನ್ನೆಳೆದು, ‘ಹೊಡಿ-ಹೊಡಿ’ ಎನ್ನುತ್ತಾ ಶವಕ್ಕೆ ಮೂರ್ನಾಲ್ಕು ಬಾರಿ ಪೆಟ್ಟು ಕೊಡುತ್ತಿದ್ದ.

ADVERTISEMENT

ಶವದ ತಲೆ ಬಹುಶಃ ಚೂರು-ಚೂರಾಗುತ್ತಿತ್ತು, ಕೊಬ್ಬಿನಂಶ ಬಂದಿದ್ದರಿಂದ ಸ್ವಲ್ಪ ದೂರದವರೆಗಿನ ಬೆಂಕಿ ಆರುತ್ತಿತ್ತು. ಸುಟ್ಟಿದ್ದ ಕಾಲು ಕೋಲಿನ ಹೊಡೆತದಿಂದ ಮೊಣಕಾಲಿನಿಂದ ಕಳಚಿ ಕೆಳಗಿದ್ದ ಸೌದೆಗಳಲ್ಲಿ ಚಡಪಡಿಸುತ್ತಿತ್ತು. ಹೊಟ್ಟೆ ಒಡೆದು ಎರಡು ಭಾಗವಾಗುತ್ತಿತ್ತು, ಕರುಳುಗಳಲ್ಲಿ ಬೆಂಕಿಯ ಜ್ವಾಲೆ ದಹದಹಿಸುತ್ತಾ ನುಗ್ಗುತ್ತಿತ್ತು. ಕಣ್ಣು ಮಿಟುಕಿಸುವುದರಲ್ಲಿ ಎಲ್ಲವೂ ಸುಟ್ಟು ಬೂದಿಯಾಗುತ್ತಿತ್ತು.

ಮೊಣಕಾಲಿನವರೆಗೆ ಬೂದಿ, ಮೊರ, ಪರಕೆ, ಎಲುಬುಗಳು, ಹೆಂಚುಗಳು, ಹರಿದ-ಚಿಂದಿಗಳಿಂದ ತುಂಬಿದ ಒದ್ದೆಯಾದ ಸ್ಮಶಾನದ ಬಯಲು. ಉಗುರು, ಕೂದಲು, ಚಿಕ್ಕ-ಚಿಕ್ಕ ಮೂಳೆಗಳು ಮತ್ತು ವ್ಯರ್ಥದ ಕೊಳಕು...

ಜಗ್ಗೂ ತಿವಾಡಿ ಖುಷಿಯಿಂದ ಮರಳಿ ಹೋಗುತ್ತಿದ್ದ. ಕೆರೆಯ ಘಟ್ಟದಲ್ಲಿ ಎಣ್ಣೆಯನ್ನು ಹಚ್ಚಿಕೊಳ್ಳುತ್ತಾ ತೊಡೆಯನ್ನು ತಟ್ಟಿಕೊಳ್ಳುತ್ತಾ ಸಹಜವಾಗಿ, ‘ದೇವರ ಕೃಪೆಯಿಂದ ಕೆಲಸ ಸಾಕಷ್ಟು ಹೆಚ್ಚಿದೆ’ ಎನ್ನುತ್ತಿದ್ದ.

‌ಹಳ್ಳಿಯಲ್ಲಿ ವಾಂತಿ-ಭೇದಿ ಹರಡಿದಾಗ, ಅಮ್ಮ ಬಂದಾಗ, ಶವಗಳು ಸಾಲು-ಸಾಲಾಗಿ ಬರುತ್ತಿದ್ದವು, ಆಗ ಹಳ್ಳಿಯಲ್ಲಿ ಜಗ್ಗೂ ತಿವಾಡಿಯ ಬೆಲೆ ಏರುತ್ತಿತ್ತು. ಎಲ್ಲರೂ ಬಂದು ಅವನನ್ನು ಹೊಗಳುತ್ತಿದ್ದರು. ಕೆಲವರು ಕಣ್ಣೀರು ಹರಿಸುತ್ತಿದ್ದರು, ಕೆಲವರು ಧೋತಿಯ ಗಂಟಿನಿಂದ ಹಣವನ್ನು ಹೊರ ತೆಗೆಯುತ್ತಿದ್ದರು, ಕೆಲವರು ಕೈಯನ್ನು ಹೊಸೆಯುತ್ತಾ ಅಂಗಲಾಚಿ ಪ್ರಾರ್ಥಿಸುತ್ತಿದ್ದರು. ಜಗ್ಗೂ ತಿವಾಡಿ ಎಲ್ಲರ ವ್ಯಥೆಯನ್ನು ಸಾಕಷ್ಟು ಗಂಭೀರನಾಗಿ ಕೇಳುತ್ತಿದ್ದ, ಆದರೆ ಇದ್ದಕ್ಕಿದ್ದಂತೆ ಉತ್ತರಿಸುತ್ತಿರಲಿಲ್ಲ.

“ನಿನ್ನೆ ರಾತ್ರಿಯಿಂದ ಮನೆಯಲ್ಲಿ ಹೆಣ ಬಿದ್ದು ಕೊಳೆಯುತ್ತಿದೆ.”

“ಹೊಸದಾಗಿ ಮದುವೆಯಾದ ಮದುವಣಗಿತ್ತಿ ಮನೆಯ ಮೂಲೆಯಲ್ಲಿ ಸತ್ತು ಕೊಳೆಯುತ್ತಾ ಎರಡು ದಿನಗಳಾದವು.”

ಇಂಥ ನಾನಾ ರೀತಿಯ ಮಾತುಗಳನ್ನು ಜನ ಜಗ್ಗೂಗೆ ಹೇಳುತ್ತಿದ್ದರು, ಅವನಲ್ಲಿ ವಿನಂತಿಸುತ್ತಿದ್ದರು. ಜಗ್ಗೂ ತನ್ನ ಶ್ರಮಕ್ಕೆ ಒಂದು ಚಿಲಿಮೆ ಗಾಂಜಾ, ಅಫೀಮಿನ ಗೋಲಿ ಮತ್ತು ನಾಲ್ಕಾಣೆ ತನ್ನ ಲುಂಗಿಯ ಗಂಟಿಗೆ ತುರುಕಿಕೊಳ್ಳಲು ಸಿಗದಿದ್ದರೆ, ಯಾವ ಹೆಣವನ್ನೂ ನೋಡುತ್ತಿರಲಿಲ್ಲ. ಅಲ್ಲದೆ ಶ್ರಾದ್ಧದ ಊಟ, ಘಟ್ಟದ ಧೋತಿ, ಹತ್ತಾರು ಮನೆಗಳ ಆಮಂತ್ರಣ ಮುಂತಾದವುಗಳು ಅವನ ಮೇಲು ಸಂಪಾದನೆಗಳಾಗಿದ್ದವು.

ಮುತ್ತೈದೆ ಶವವಾದರೆ ಜಗ್ಗೂಗೆ ಇನ್ನಷ್ಟು ಹೆಚ್ಚು ಲಾಭವಾಗುತ್ತಿತ್ತು. ಒಳ್ಳೆಯ ಮನೆತನಗಳಾಗಿದ್ದರೆ ಕಿವಿಯ ಓಲೆಗಳು, ತೋಳುಬಳೆ ಅಥವಾ ನತ್ತು, ಕಾಲುಂಗುರ ಜಗ್ಗೂಗೆ ದಕ್ಷಿಣೆಯಾಗಿ ಸಿಗುತ್ತಿದ್ದವು. ಶವದ ಚಿತೆಗೆ ಬೆಂಕಿ ಹೊತ್ತಿಸುವುದಕ್ಕೂ ಮೊದಲು ಅವನು ಅದರ ಶರೀರದ ಮೇಲೆ ದೃಷ್ಟಿ ಹರಿಸುತ್ತಿದ್ದ; ಅಲ್ಲಿ ಒಡವೆಗಳಿದ್ದರೆ, ಅವುಗಳನ್ನು ತೆಗೆದುಕೊಳ್ಳುತ್ತಿದ್ದ. ಒಮ್ಮೊಮ್ಮೆ ಹೆಣದ ಶರೀರದಿಂದ ಓಲೆಗಳು, ತೋಳುಬಳೆ ಅಥವಾ ನತ್ತು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಆಗ ಜಗ್ಗೂ ತಿವಾಡಿ ರೇಗುತ್ತಾ ತನ್ನ ಹಲ್ಲುಗಳಿಂದ ಆ ಆಭರಣಗಳನ್ನು ಕಚ್ಚಿ ಸಾಕಷ್ಟು ಎಳೆದು-ಎಳೆದು ಹೆಣಗಳ ಮೂಗು-ಕಿವಿಗಳಿಂದ ಒಡವೆಗಳನ್ನು ಕಿತ್ತುಕೊಳ್ಳುತ್ತಿದ್ದ. ಶವದ ಮೂಗು ಹರಿದು ಹೋಗುತ್ತಿತ್ತು, ಕಿವಿಗಳು ತುಂಡಾಗುತ್ತಿದ್ದವು, ನೀಲಿ ಬಣ್ಣದ, ನೀರು-ನೀರಾದ ರಕ್ತ ಶವದ ಮುಖದ ಮೇಲೆ ಹರಡಿದರೂ, ಜಗ್ಗೂ ತಿವಾಡಿ ಅದನ್ನು ಲೆಕ್ಕಿಸುತ್ತಿರಲಿಲ್ಲ. ಇದು ಅವನ ನಿತ್ಯದ ಕೆಲಸ, ಇದೊಂದು ಮೇಲು ಸಂಪಾದನೆ. ಈ ಕಸುಬಿನಿಂದ ಅವನ ಹೃದಯ ಕಲ್ಲಾಗಿತ್ತು.

ಮಹಿಳೆಯೊಬ್ಬಳು ಹೆರಿಗೆ ಮನೆಯಲ್ಲಿಯೇ ಸತ್ತರೆ ಜಗ್ಗೂ ತಿವಾಡಿ ಬೆಳ್ಳಿಯ ರೂಪಾಯಿಯನ್ನು ಲುಂಗಿಯಲ್ಲಿ ತುರುಕಿಕೊಳ್ಳದೆ ಚಟ್ಟಕ್ಕೆ ಹೆಗಲು ಕೊಡುವುದಿಲ್ಲ. ತನ್ನ ದಕ್ಷಿಣೆಯಲ್ಲಿ ಅಲ್ಪ-ಸ್ವಲ್ಪ ಕಡಿಮೆಯಾದರೂ, ಅವನು ಹೆಣವನ್ನು, ಹಳಸು-ಹೆಣ ಮಾಡುವುದಾಗಿ ಬೆದರಿಸುತ್ತಿದ್ದ, ಇನ್ನಿತರ ಜೊತೆಗಾರರಿಗೂ ಇದೇ ಉಪದೇಶ ಕೊಡುತ್ತಿದ್ದ; ತನ್ನ ಬೇಡಿಕೆಯಿಂದಲೂ ಕದಲುತ್ತಿರಲಿಲ್ಲ.

ದುಡ್ಡು ಸಿಕ್ಕ ಕೂಡಲೇ ಢಕ್ಕದ ತಾಳಕ್ಕೆ ತಾಳ ಹೊಂದಿಸುತ್ತಾ ‘ರಾಮ್ ನಾಮ್ ಸತ್ಯ ಹೈ’ ಎಂದು ಜಗ್ಗೂ ತಿವಾಡಿ ಗರ್ವದಿಂದ ಹೆಜ್ಜೆಗಳನ್ನು ಹಾಕುತ್ತಾ ಹೋಗುತ್ತಿದ್ದ. ಅವನ ‘ಪರೀಕ್ಷಕ-ಕಲ್ಲಿ’ನಂಥ ಕಪ್ಪು ಶರೀರದಲ್ಲಿ ಬಿಳಿ ಜನಿವಾರ ಹೊಳೆಯುತ್ತಿತ್ತು.

ಅವನ ಗಟ್ಟಿ ಧ್ವನಿಯನ್ನು ಕೇಳಿ ಇಡೀ ಹಳ್ಳಿ ಹೊರ ಹೊಮ್ಮಿ ಬರುತ್ತಿತ್ತು; ಮೊಹಲ್ಲಾದ ಮಹಿಳೆಯರು ಹೊರ ಬಂದು ಜಮಾಯಿಸುತ್ತಿದ್ದರು. ಚಿಕ್ಕ ಮಕ್ಕಳು ಹೆದರಿ ಮನೆಯೊಳಗೆ ಅಡಗಿಕೊಳ್ಳುತ್ತಿದ್ದರು.

ಸ್ಮಶಾನದಲ್ಲಿ ಧೋಬಿಯ ಕೊಡಲಿಯಿಂದ ಗರ್ಭಿಣಿಯ ಹೊಟ್ಟೆಯನ್ನು ಸೀಳಿ ಮಗುವನ್ನು ಹೊರ ತಂದ ನಂತರ ಜಗ್ಗೂ ತಿವಾಡಿ ಎರಡು ಕುಣಿಗಳನ್ನು ತೋಡಿ ತಾಯಿ- ಮಗು ಇಬ್ಬರನ್ನು ಅದರಲ್ಲಿ ಅಂಗಾತ ಮಲಗಿಸುತ್ತಿದ್ದ. ಒಮ್ಮೊಮ್ಮೆ ಇಬ್ಬರನ್ನು ಒಟ್ಟಿಗೆ ಅಕ್ಕ-ಪಕ್ಕ ಮಲಗಿಸಿ ಬೆಂಕಿ ಹೊತ್ತಿಸುತ್ತಿದ್ದ. ಒಂದು ಕುಣಿಯಲ್ಲಿ ಸ್ಥಳಾವಕಾಶ ಕಡಿಮೆಯಾದರೆ, ಚಿತೆಯನ್ನು ಎಳೆಯುವ ಕೋಲಿನಿಂದ ಮಗುವಿನ ಶವವನ್ನು ಮಡಚಿ ಮಾಂಸದ ಪಿಂಡದಂತೆ ಚಿತೆಗೆ ಹಾಕುತ್ತಿದ್ದ.

ಇದೇ ರೀತಿಯಲ್ಲಿ ಜಗ್ಗೂ ತಿವಾಡಿ ತನ್ನ ಹೊಲದ ಬೆಳೆಯೊಂದಿಗೆ ಆಗಾಗ್ಯೆ ಮೇಲು ಸಂಪಾದನೆಯನ್ನೂ ಗಳಿಸಿ ತನ್ನ ಜೀವನವನ್ನು ಸಾಗಿಸುತ್ತಿದ್ದ, ಲೇವಾದೇವಿಯನ್ನೂ ಮಾಡುತ್ತಿದ್ದ, ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಉಡುಗೊರೆಗಳನ್ನೂ ಕೊಡುತ್ತಿದ್ದ. ಯಾರೂ ಜಗ್ಗೂ ತಿವಾಡಿಯೊಂದಿಗೆ ಜಗಳವಾಡುತ್ತಿರಲಿಲ್ಲ. ಆ ಹಳ್ಳಿಯಲ್ಲಿ ಜಗ್ಗೂಗಿಂತ ಹೆಚ್ಚು ಸಂಖ್ಯೆಯಲ್ಲಿ ಶವವನ್ನು ಸುಟ್ಟವರು ಬೇರಾರೂ ಇರಲಿಲ್ಲ.

ಒಂದು ವೇಳೆ ಅವನ ದಕ್ಷಿಣೆಯನ್ನು ಕಡಿಮೆ ಮಾಡಲು ಹವಣಿಸಿದರೆ, ಅವನು ತನ್ನ ತರ್ಕಗಳಿಂದ, ‘ನನ್ನ ಶ್ರಮಕ್ಕೆ ಹೋಲಿಸಿದರೆ ನೀವು ಕೊಡುವ ದಕ್ಷಿಣೆ ತುಂಬಾ ಕಡಿಮೆ’ ಎನ್ನುತ್ತಿದ್ದ. ಅವನು ತನ್ನ ದೊಡ್ಡಸ್ತಿಕೆಯನ್ನು ತೋರಿಸುತ್ತಾ ತನ್ನ ಅತೀತದ ಘಟನೆಗಳನ್ನು ಪುನರಾವರ್ತಿಸಿ, ‘ನನ್ನಂಥೆ ಹೆಣ ಸುಡುವವನು ಬೇರಾರೂ ಇಲ್ಲ’ ಎಂದು ಪ್ರಮಾಣೀಕರಿಸುತ್ತಿದ್ದ.

ಕಳೆದ ವರ್ಷ ನರಸಿಂಹ ಮಿಶ್ರರ ಹೆಂಡತಿಯ ಶವವನ್ನು, ಅಕಸ್ಮಾತ್ ಸುರಿದ ಭಾರಿ ಮಳೆಯಲ್ಲಿಯೂ ತಾನು ಸುಟ್ಟು ಬಂದ ಬಗ್ಗೆ; ಮರಳಿ ಬರುವಾಗ ಸತಗಛಿಯಾ ಅಮರಾಯಿ ದಡದಲ್ಲಿ ತಲೆಯಿಲ್ಲದ ಪ್ರೇತದ ಹಿಡಿತಕ್ಕೆ ಸಿಲುಕಿಕೊಂಡ ಬಗ್ಗೆ; ಪುಷ್ಯ ಮಾಸದ ನಡುಗುವ ಚಳಿ ರಾತ್ರಿಯಲ್ಲಿ ವಾಂತಿ-ಭೇದಿಯಿಂದ ಸತ್ತ ನಾಥ್ ಬ್ರಹ್ಮಾನನ್ನು ಸುಡುವಾಗ, ಶವದ ಹೊಟ್ಟೆಯಿಂದ ಬಂದ ಎರಡು ಮಡಿಕೆ ನೀರಿನಿಂದ ಚಿತೆಯ ಬೆಂಕಿ ಆರಿದ ಬಗ್ಗೆ ಹಾಗೂ ತಾನು ಯಾವ ಬುದ್ಧಿವಂತಿಕೆಯಿಂದ ಅಷ್ಟು ದೊಡ್ಡ ಶವವನ್ನು ಸುಡುವಲ್ಲಿ ಯಶಸ್ವಿಯಾದೆ ಎಂಬ ಹಳೆಯ ಕಥೆಗಳ ಬಗ್ಗೆ ಜಗ್ಗೂ ತುಂಬಾ ನಿಪುಣತೆಯಿಂದ ಮತ್ತು ಸ್ವಾರಸ್ಯಕರವಾಗಿ ಹೇಳುತ್ತಿದ್ದ.

ಜಗ್ಗೂ ತಿವಾಡಿಯ ಅನುಭವ ಮತ್ತು ಅವನು ಶವಗಳನ್ನು ಸುಡುವ ವಿದ್ಯೆಯಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಗ್ರಾಹಕ ಸಹ, ಅವನೊಂದಿಗೆ ಒಂದು ಗಳಿಗೆ ಮಾತನಾಡಿ ತಿಳಿದುಕೊಳ್ಳುತ್ತಿದ್ದ. ನಿತ್ಯ ಸಂಜೆ ಜಗ್ಗೂ ತಿವಾಡಿ ಭಾಗವತವನ್ನು ಪಠಿಸುವ ಕೊಠಡಿಯಲ್ಲಿ ಕೂತು ತನ್ನ ಅನುಭವವನ್ನು ಎಲ್ಲರಿಗೂ ಒಮ್ಮೆ ಹೇಳುತ್ತಿದ್ದ. ಮಳೆಗಾಲದಲ್ಲಿ ಅನೇಕ ಶ್ರೋತೃಗಳು ಅವನನ್ನು ಸುತ್ತುವರೆದು ಕೂರುತ್ತಿದ್ದರು. ಗಾಂಜಾದ ಚಿಲಿಮೆಯಿಂದ ಒಂದು ದಮ್ ಎಳೆದ ನಂತರ, ಮೊದಲು ಜಗ್ಗೂ ಸ್ವಲ್ಪ ಕೆಮ್ಮಿ ಗಂಟಲನ್ನು ಸರಿಪಡಿಸಿಕೊಳ್ಳುತ್ತಿದ್ದ. ಆಗ ಶ್ರೋತೃಗಳು, ಇನ್ನು ಜಗ್ಗೂ ವಿಷಯಕ್ಕೆ ಬರುತ್ತಾನೆಂದು ತಿಳಿದುಕೊಳ್ಳುತ್ತಿದ್ದರು.

‘ಒಮ್ಮೆ ನಾನು ಒಬ್ಬನ ಶವವನ್ನು ಸುಟ್ಟು ಮರಳಿ ಬರುವಾಗ, ಮುಕ್ತಾ ಝರಿಯ ಸಮೀಪದಲ್ಲಿದ್ದ ಮಾವಿನ ಮರದ ಕೊಂಬೆಯಲ್ಲಿ ಕೂತಿದ್ದ ಪಿಶಾಚಿನಿಯೊಂದು, ಬೆಂಕಿ ಹೊತ್ತಿಸಿ ತನ್ನ ಮಗುವಿಗೆ ಶಾಖ ಕೊಡುತ್ತಿತ್ತು’ ಎಂಬುದನ್ನು ಜಗ್ಗೂ ಓರ್ವ ಯಶಸ್ವಿ ಚಿತ್ರಕಾರನಂತೆ ವರ್ಣಿಸುತ್ತಿದ್ದ. ಶ್ರೋತೃಗಣ ಭಯದಿಂದ ಮುದುಡಿ, ಗೋಡೆಗೊರಗಿ ಕೂರುತ್ತಿದ್ದರು.

ಹೀಗೆ ಆ ಚಿಕ್ಕ ಬ್ರಾಹ್ಮಣ-ಪ್ರದೇಶದಲ್ಲಿ ಜಗ್ಗೂ ತಿವಾಡಿಯ ಜೀವನ ಸಾಗುತ್ತಿತ್ತು.

ಆಶ್ವಯುಜ ಮಾಸದ ಒಂದು ರಾತ್ರಿ. ಸಂಜೆಯಿಂದಲೇ ಮೋಡಗಳು ಅಲ್ಲಲ್ಲಿ ಹರಡಿದ್ದವು. ಬಹಶಃ ಜಗ್ಗೂ ತಿವಾಡಿಯ ತಲೆನೋಯುತ್ತಿತ್ತು. ಅವನು ತನ್ನೆರಡು ಗಂಡಸ್ಥಳಗಳಲ್ಲಿ ಸುಣ್ಣವನ್ನು ಮೆತ್ತಿಕೊಂಡು, ತಲೆಗೆ ಮಫಲರ್ ಕಟ್ಟಿಕೊಂಡು, ಹೊರಗಿನ ಜಗಲಿಯಲ್ಲಿ ಕೂತು ‘ಹರಿವಂಶ ಪುರಾಣ’ವನ್ನು ಕೇಳುತ್ತಿದ್ದ.

ಹಳ್ಳಿಯಲ್ಲಿ ಅಕಸ್ಮಾತ್ ಅಳುವುದು-ಕಿರುಚುವುದು ಕೇಳಿಸಿತು. ಇನ್ನೊಂದು ಗಲ್ಲಿಯ ಅಂಗಡಿಯಿಂದ ಒಬ್ಬರು ಎಲೆ-ಅಡಿಕೆಯನ್ನು ತೆಗೆದುಕೊಂಡು ಹಾದು ಹೋಗುತ್ತಿದ್ದರು. ಅವನು, ಜಟಿಯಾನ ವೃದ್ಧ ತಾಯಿಯ ಸೊಸೆ ಸತ್ತು ಹೋದಳು ಎಂದು ಸುದ್ದಿ ತಿಳಿಸಿದ. ನೋಡು-ನೋಡುತ್ತಿದ್ದಂತೆಯೇ ಇಡೀ ಹಳ್ಳಿಯಲ್ಲಿ ಸುದ್ದಿ ಹಬ್ಬಿತು. ದುಡ್ಡು ಸಿಗುವುದೆಂಬ ಯೋಚನೆಯಿಂದ ಜಗ್ಗೂ ತಿವಾಡಿ ಮನಸ್ಸಿನಲ್ಲಿಯೇ ಸಂತಸಪಡುತ್ತಿದ್ದ. ಅನೇಕ ಜನರು ಬಂದು, ನಾನಾ ರೀತಿಯಲ್ಲಿ ಮಾತುಗಳನ್ನಾಡಿ ಹೊರಟು ಹೋದರು. ಮೊಹಲ್ಲಾದ ಮಹಿಳೆಯರು ತಲೆ-ಬುಡವಿಲ್ಲದ ಮಾತುಗಳನ್ನು ಪಿಸುಗುಟ್ಟುತ್ತಿದ್ದರು.

“ಪಾಪದ ಗರ್ಭ ನಿಂತಿತ್ತು.” ಎಂದ ಒಬ್ಬ.

“ಗರ್ಭವನ್ನು ಬೀಳಿಸಿಕೊಳ್ಳಲು ಅವಳು ಯಾವುದೋ ಔಷಧವನ್ನು ಸೇವಿಸಿದ್ದಳು-ಇದರಿಂದಾಗಿ ವಿಷ ಇಡೀ ಶರೀರವನ್ನು ವ್ಯಾಪಿಸಿತು.” ಎಂದ ಇನ್ನೊಬ್ಬ.

ಜಗ್ಗೂ ತಿವಾಡಿ ಮೌನವಾಗಿ ಎಲ್ಲವನ್ನೂ ಕೇಳಿ ಬೆಚ್ಚಿದ. ಜಾತಿಯಿಂದ ಹೊರ ಹಾಕಲಾಗುವ ಭಯದಿಂದ ಅವನು ದೊಡ್ಡ ಗಂಟಿನ ಆಸೆಯನ್ನು ಬಿಟ್ಟ. ಜಟಿಯಾನ ವೃದ್ಧ ತಾಯಿಗೆ ಈ ಜಗತ್ತಿನಲ್ಲಿ ಯಾರೂ ಇರಲಿಲ್ಲ, ಅತ್ತೆ-ಸೊಸೆ ಮಾತ್ರವಿದ್ದರು. ಶೋಭನಪ್ರಸ್ತದ ಒಂದು ತಿಂಗಳ ನಂತರ ಮಗ ಕೋಲ್ಕತ್ತಾಕ್ಕೆ ಹೋದ; ಹಣ ಸಂಪಾದಿಸಿ ಸಾಲ ತೀರಿಸುವುದು ಅವನ ಉದ್ದೇಶವಾಗಿತ್ತು. ಮೂರು ವರ್ಷಗಳಾದರೂ ಅವನ ಸುದ್ದಿ ಇರಲಿಲ್ಲ. ಆರಂಭದಲ್ಲಿ ಒಂದೆರೆಡು ಪತ್ರಗಳನ್ನು ಬರೆಯುತ್ತಿದ್ದ. ಆದರೆ ಈಚೆಗೆ ಒಂದು ವರ್ಷದಿಂದ ಯಾವ ಪತ್ರವೂ ಬರಲಿಲ್ಲ. ಕೋಲ್ಕತ್ತಾದಿಂದ ಮರಳಿ ಬಂದ ಆ ಹಳ್ಳಿಯ ಕೆಲವು ಜನ, ಅವನು ಒಬ್ಬ ಹೆಂಗಸಿನೊಂದಿಗೆ ಕೋಲ್ಕತ್ತಾದ ಮಟಿಯಾಬುರ್ಜನಲ್ಲಿದ್ದಾನೆ ಎಂದು ಹೇಳುತ್ತಾರೆ. ಮನೆಯಲ್ಲಿ ಸೊಸೆ ಮಾತ್ರವಿದ್ದಳು, ಅವಳೂ ಸಹ ಇಂದು ವೃದ್ಧೆಯ ಬದುಕಿಗೆ ಕಳಂಕ ಬಗೆದು ಹೊರಟು ಹೋದಳು. ವೃದ್ಧೆ ಬ್ರಾಹ್ಮಣಿಯ ಕಣ್ಣೀರು ನಿಲ್ಲುತ್ತಿರಲಿಲ್ಲ.

ಜನರ ಮುಂದೆ ರೋದಿಸುವುದರಿಂದ ಅವಳ ಸಮಸ್ಯೆ ಕೊನೆಗೊಳ್ಳುತ್ತಿರಲಿಲ್ಲವೇನೋ, ಆದರೆ ಹಳ್ಳಿಯ ಕೆಲವು ಹಿರಿಯರು ಮುಂದೆ ಬಂದು ಪರಿಸ್ಥಿತಿಯನ್ನು ಸಂಭಾಳಿಸಿದರು. ಸೊಸೆಯನ್ನು ಪ್ರಾರಂಭದಿಂದ ಹದ್ದುಬಸ್ತಿನಲ್ಲಿಟ್ಟುಕೊಂಡಿರದ ಬಗ್ಗೆ ಹಿರಿಯರು ಜಟಿಯಾನ ತಾಯಿಯನ್ನು ಸಾಕಷ್ಟು ನಿಂದಿಸಿದರು, ಆದರೆ ಕೊನೆಗೆ ತೀರ್ಮಾನ ಹೇಳಿದರು, “ಆದಷ್ಟು ಬೇಗನೇ ಶವವನ್ನು ಹೂಳಬೇಕು, ಇಲ್ಲದಿದ್ದರೆ ಛಾಟಿಯಾ ಠಾಣೆಗೆ ಸುದ್ದಿ ಮುಟ್ಟುತ್ತಲೇ ಇಡೀ ಹಳ್ಳಿಗೆ ಕಳಂಕ ತಟ್ಟುವುದು. ಎಷ್ಟಾದರು ನಾವೂ ಸಹ ನಮ್ಮ ಸೊಸೆ ಮತ್ತು ನಮ್ಮ ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದೇವೆ.”

ಜಟಿಯಾನ ತಾಯಿ ಮೌನವಾಗಿದ್ದು, ಎಲ್ಲರೆದುರು ಕೈ ಮುಗಿಯುತ್ತಿದ್ದಳು. ತನ್ನನ್ನು ಈ ಘೋರ ವಿಪ್ಪತ್ತಿನಿಂದ ಪಾರು ಮಾಡಿದ್ದಕ್ಕೆ ಅವಳು ಎಲ್ಲರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದಳು.

ಚಟ್ಟ ಹೊರಲು ಹಳ್ಳಿಯ ಮೂರ್ನಾಲ್ಕು ಯುವಕರು ಮುಂದೆ ಬಂದರು. ದರ್ಬೆಯ ಹಗ್ಗವನ್ನು ಹಂಚಲಾಯಿತು. ಚಟ್ಟವನ್ನು ಅಣಿಗೊಳಿಸಲಾಯಿತು. ಮೊರ, ಹೆಂಚು, ಹಗ್ಗದ ಜಾಳಿಗೆ, ಪೊರಕೆ, ಮರದ ದೊಣ್ಣೆ ಮುಂತಾದವುಗಳನ್ನು ಹೊರ ಬಾಗಿಲ ಬಳಿ ಒಟ್ಟುಮಾಡಲಾಯಿತು. ಶವದ ಶರೀರ ಮತ್ತು ತಲೆಯನ್ನು ಬಟ್ಟೆಯಲ್ಲಿ ಸುತ್ತಿ ಅದನ್ನು ಹೊರಗೆ ತಂದು ಚಟ್ಟಕ್ಕೆ ಕಟ್ಟಲಾಯಿತು. ಆದರೆ ಸಂಸ್ಕಾರ ಮಾಡುವ ಹಿರಿಯ ಬ್ರಾಹ್ಮಣನಿಲ್ಲದೆ ಮುಂದಿನ ಕರ್ಮಗಳು ಸಾಗುತ್ತಿರಲಿಲ್ಲ. ಅರ್ಧ ಗಂಟೆಯೊಳಗೆ ಶವವನ್ನು ಹೂಳದಿದ್ದರೆ, ಅಪಾಯದ ಸಾಧ್ಯತೆ ಸಹ ಇತ್ತು; ಪೊಲೀಸ್ ಇನ್ಸ್‌ಪೆಕ್ಟರ್‌ನ ಕಿವಿಗೆ ಸುದ್ದಿ ಮುಟ್ಟಿದರೆ ಇಡೀ ಹಳ್ಳಿಯನ್ನು ಬಂಧಿಸಿ ಕರೆದೊಯ್ಯುತ್ತಾನೆ. ಹಳ್ಳಿಯಲ್ಲಿ ಚಾಡಿಖೋರರಿಗೇನು ಕೊರತೆಯೇ!

“ತಿವಾಡಿಯನ್ನು ಕರೆದು ತನ್ನಿ. ತಿವಾಡಿ ಇಲ್ಲದಿದ್ದರೆ ಇಷ್ಟು ದೊಡ್ಡ ಕೆಲಸ ಸುಲಭವಾಗಿ ಪೂರ್ಣವಾಗದು.” ಎಂದರು ಹಿರಿಯರು.

ಜಗ್ಗೂ ತಿವಾಡಿಯನ್ನು ಕರೆಸಲಾಯಿತು, ಆದರೆ ಅವನು ಬರಲು ಸಿದ್ಧನಾಗಲಿಲ್ಲ. ಅವನು ಬರುವುದಿಲ್ಲವೆಂದು ಹಟ ಹಿಡಿದಿದ್ದ.

“ಅವಳು ಪಾಪದ ಗರ್ಭದಿಂದ ಸತ್ತಿದ್ದಾಳೆ. ನಾನೇಕೆ ಆ ಶವವನ್ನು ಮುಟ್ಟಲಿ? ಹಾದರಗಿತ್ತಿ ಮತ್ತು ಸೂಳೆಯಾದ ಅವಳಿಗೆ ನನ್ನ ಹೆಗಲನ್ನು ಕೊಡಲೇ?” ಎಂದು ಜಗ್ಗೂ ರೇಗಿದ.

ಎಲ್ಲರೂ ಅವರವರ ವಿಧಾನದಿಂದ ಅವನನ್ನು ಒಪ್ಪಿಸಲು ಪ್ರಯತ್ನಿಸಿದರು, ಆದರೆ ಜಗ್ಗೂ ಮಿಸುಕಾಡಲಿಲ್ಲ. ಕಟ್ಟಕಡೆಗೆ ಹಳ್ಳಿಯ ಹಿರಿಯರು ಸಾಕಷ್ಟು ಹೇಳಿದ ನಂತರ ಜಗ್ಗೂ ತಿವಾಡಿ ಚಟ್ಟ ಎತ್ತಲು ಸಿದ್ಧನಾದ; ಆದರೆ ಐದು ರೂಪಾಯಿ ಕೊಡದಿದ್ದರೆ ತಾನು ಇಂಥ ದೊಡ್ಡ ಪಾಪದ ಕಾರ್ಯವನ್ನು ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ. ಜಟಿಯಾನ ತಾಯಿಯ ಬಳಿ ಉಳಿಸಿದ ಅಲ್ಪ-ಸ್ವಲ್ಪ ಕಾಸುಗಳಿದ್ದವು, ಆದರೆ ಅದು ಸೌದೆ, ಸೀಮೆಯೆಣ್ಣೆ, ಧೋಬಿ ಮತ್ತು ಕ್ಷೌರಿಕನಿಗೆ ಕೊಡುವುದಕ್ಕೂ ಸಾಕಾಗುತ್ತಿರಲಿಲ್ಲ. ಕಡೆಗೆ, ಸೊಸೆಯ ಮೂಗಿನಲ್ಲಿರುವ ಬಂಗಾರದ ಮೂಗು ಬೊಟ್ಟನ್ನು ಜಗ್ಗೂ ತಿವಾಡಿಗೆ ಕೊಡುವುದಾಗಿ ತಿರ್ಮಾನಿಸಲಾಯಿತು.

ಜಗ್ಗೂ ತಿವಾಡಿ ಸಂತಸದಿಂದ ಹೇಳಿದ-“ರಾಮ್ ನಾಮ್ ಸತ್ಯ ಹೈ!”

ಸ್ಮಶಾನದಲ್ಲಿ ಒದ್ದೆಯಾದ, ಕೊಳಕು ಎಲುಬುಗಳು-ಮೂಳೆಗಳು, ಸೌದೆ, ನರಮುಂಡ, ಮೊರ, ಹಂಡೆ, ಸುಟ್ಟ ಕಲ್ಲಿದ್ದಲೊಳಗೆ ರಾಶಿ-ರಾಶಿ ಬೂದಿ... ಸುತ್ತಮುತ್ತಲಿನಿಂದ ಒಂದು ರೀತಿಯ ವಿಚಿತ್ರ ಮಾಂಸದ ವಾಸನೆ ಬರುತ್ತಿತ್ತು.

‘ಪಥಶ್ರಾದ್ಧ’ ಮುಗಿಯಿತು. ಜಗ್ಗೂ ತಿವಾಡಿ ಬೆಂಕಿಗೂಡಿನಂತೆ ದೊಡ್ಡದೊಂದು ಹೊಂಡವನ್ನು ಅಗೆದ. ನಂತರ ಶವವನ್ನು ಸೌದೆಯ ಚಿತೆಯ ಮೇಲೆ ಅಂಗಾತ ಮಲಗಿಸಿ ಅದರ ಮುಖದಿಂದ ಬಟ್ಟೆಯನ್ನು ತೆಗೆದ.

ನಾಲ್ಕಾಣೆ ತೂಕದ ಬಂಗಾರ! ಲಾಟೀನಿನ ಬೆಳಕಿನಲ್ಲಿ, ಮೂಗುಬೊಟ್ಟು ಶವದ ಮೂಗಿನಲ್ಲಿ ಲಕಲಕನೆ ಹೊಳೆಯುತ್ತಿತ್ತು.

ಚಂದ್ರನನ್ನು ಆವರಿಸಿದ್ದ ಮೋಡ ಚದುರಿದವು, ಚಂದ್ರ ಮೆಲ್ಲ-ಮೆಲ್ಲನೆ ಹೊರ ಬಂದ. ಶವದ ಮೇಲೆ ಚಂದ್ರನ ಅಸ್ಪಷ್ಟ ಬೆಳಕು ಬೀಳುತ್ತಿತ್ತು.

ಜೊತೆಗೆ ಬಂದಿದ್ದ ಜನ ಹೇಳಿದರು, “ಬೇಗ-ಬೇಗ ಕೆಲಸ ಮುಗಿಸಿ. ಪೊಲೀಸರು ಬಂದರೆ ಎಲ್ಲಾ ತಲೆಕೆಳಗಾಗುತ್ತೆ.”

ಜಗ್ಗೂ ಮೂಗಿನಿಂದ ಮೂಗುಬೊಟ್ಟನ್ನು ಎಳೆದುಕೊಳ್ಳಲು ಕೈ ಚಾಚಿದ. ಚಿಕ್ಕ ವಯಸ್ಸಿನ ಸೊಸೆಯ ಅಸ್ಪಷ್ಟ ಮುಖ ಚಂದ್ರನ ಬೆಳಕಿನಲ್ಲಿ ಬಾಡಿದ ನೈದಿಲೆಯಂತೆ ಕಾಣಿಸುತ್ತಿತ್ತು. ಅವಳ ಮುಖದ ಅಕ್ಕಪಕ್ಕ, ಆಗಸದಲ್ಲಿ ಚಂದ್ರನ ಹಿಂಭಾಗದಲ್ಲಿ ಕಪ್ಪು ಮೋಡಗಳ ದಟ್ಟ ನೆರಳಿನಂತೆ, ದಟ್ಟ ಕಪ್ಪು ಗುಂಗುರು ಕೂದಲುಗಳಿದ್ದವು.

ಸೊಸೆಯ ಮುಖದಲ್ಲಿ ಬಾಡಿದ ಹೂವಿನ ಸೌಂದರ್ಯ ಕಂಗೊಳಿಸುತ್ತಿತ್ತು. ಅವಳ ಅಸ್ತವ್ಯಸ್ತ ತಲೆಗೂದಲುಗಳ ಮೇಲೆ ಚಂದ್ರನ ಅಲೆಗಳು ಡಿಕ್ಕಿ ಹೊಡೆದು ಹೊರಳಾಡುತ್ತಿದ್ದವು.

ಜಗ್ಗೂ ತನ್ನ ಕೈಯನ್ನು ಹಿಂದಕ್ಕೆಳೆದುಕೊಂಡ. ನಂತರ ಆಗಸದ ಮಂದ ಚಂದ್ರನನ್ನು ನೋಡಿದ.

ಜಗ್ಗೂ ಇಂಥ ಅನೇಕ ಶವಗಳನ್ನು ಸುಟ್ಟಿದ್ದಾನೆ, ಆದರೆ ಅವನೆಂದೂ ತನ್ನೊಳಗೆ ಇಂಥ ಬಿರುಗಾಳಿಯನ್ನು ಅನುಭವಿಸಿರಲಿಲ್ಲ. ಈ ಚಿಕ್ಕ ಸುಂದರ ಮುಖವನ್ನು ಕುರೂಪಗೊಳಿಸಿ ಬಂಗಾರದ ಮೂಗು ಬೊಟ್ಟನ್ನು ತೆಗೆದುಕೊಳ್ಳಲು ಅವನ ಕೈ ಹಿಂಜರಿಯುತ್ತಿತ್ತು. ಸೊಸೆಯ ಮೂಗಿನ ಆ ಮೂಗು ಬೊಟ್ಟುಗಳು ಅವನ ಕಣ್ಣುಗಳನ್ನು ಕೋರೈಸುತ್ತಿದ್ದವು. ಅವನು ಆ ಹೆಣ್ಣಿನ ಬಗ್ಗೆ ಏನೇನು ಯೋಚಿಸುತ್ತಿದ್ದನೋ...

ಅಷ್ಟರಲ್ಲಿ ಜಗ್ಗೂಗೆ, ಇನ್ನು ಕೆಲವೇ ದಿನಗಳಾಗಿದ್ದರೆ, ಈ ಸೊಸೆ ತಾಯಿಯಾಗುತ್ತಿದ್ದಳು ಎಂಬುದು ನೆನಪಾಯಿತು. ಅಲ್ಲದೆ, ಇನ್ನೂ ಏನೇನೋ ಘಟಿಸುತ್ತಿದ್ದವು, ಆದರೆ ಹೀಗೇನೂ ಆಗಲಿಲ್ಲ. ಇದು ಯಾರ ತಪ್ಪು? ಮಂದ ಬೆಳದಿಂಗಳಿನ ಅಪಾರ ಸಮುದ್ರದ ನಡುವೆ, ನಿರ್ಜನ ಸ್ಮಶಾನದ ನಗ್ನ ಶರೀರದ ಮೇಲೆ ಅರೆಬಿರಿದ ಒಂಟಿ ಹೆಣ್ಣು ನಿದ್ರಿಸುತ್ತಿದ್ದಳು. ಅವಳು ವಾಸ್ತವವಾಗಿಯೂ ಒಂಟಿಯಾಗಿದ್ದಳು. ಚಟ್ಟವನ್ನು ಹೊರುವ ಜಗ್ಗೂ ತಿವಾಡಿ ಅವಳನ್ನೇ ಎವೆಯಿಕ್ಕದೆ ನೋಡುತ್ತಿದ್ದ. ಖಂಡಿತ ಇವಳು ಒಂಟಿ; ಇಂದು ಮಾತ್ರವಲ್ಲ, ಜೀವಮಾನವಿಡಿ ಹೀಗೆಯೇ ಒಂಟಿಯಾಗಿದ್ದಳು ಎಂದು ಅವನ ಅಶಿಕ್ಷಿತ, ಹಳ್ಳಿಯ ಮನಸ್ಸು ತನ್ನ ಭಾಷೆಯಲ್ಲಿ ಯೋಚಿಸುತ್ತಿತ್ತು. ಈ ಏಕಾಂತ, ಗೃಹಸ್ಥ ಜೀವನವನ್ನು ತ್ಯಜಿಸಿ, ಬೇರೊಂದು ರೀತಿಯಲ್ಲಿ ಬದುಕಿದ್ದರಿಂದಾಗಿ ಬಹುಶಃ ಅವಳು ಸ್ಮಶಾನದ ಹೆಣವಾಗಬೇಕಿದೆ. ಸೊಸೆಯ ಮಾಸಲು ಮುಖದಲ್ಲಿ ಅನೇಕ ದಿನಗಳವರೆಗೆ ಅವಳು ಬದುಕುವ ಆಸೆಯನ್ನು ಅವನು ಕಂಡ.

ಜಗ್ಗೂ ತಡಮಾಡುವುದನ್ನು ಗಮನಿಸಿದ ಇನ್ನಿತರ ಜೊತೆಗಾರರು ರೇ0ಗಿ ಗದರಿದರು, “ನೀನು ಹೀಗೆ ತಡಮಾಡಿದರೆ, ನಾವು ಹೆಣವನ್ನು ಹೀಗೆಯೇ ಬಿಟ್ಟು ಓಡಿ ಹೋಗುತ್ತೇವೆ. ಪೊಲೀಸರು ಬಂದರೆ, ಯಾರು ಜವಾಬ್ದಾರರು? ಹೋಗು...ನಿನ್ನ ಮೂಗುಬೊಟ್ಟನ್ನು ತೆಗೆದುಕೋ, ಇಲ್ಲದಿದ್ದಲ್ಲಿ ನಾವು ಚಿತೆಗೆ ಬೆಂಕಿ ಹೊತ್ತಿಸುತ್ತೇವೆ. ಮೂಗುಬೊಟ್ಟಿಗಾಗಿ ನೀನು ಸಾಯ್ತಿದ್ದೆಯಲ್ಲ, ಈಗ ನಿನ್ನ ಕೈ ಯಾಕೆ ಮುಂದಕ್ಕೆ ಹೋಗ್ತಿಲ್ಲ?”

ಜಗ್ಗೂ ತಿವಾಡಿಯ ಕನಸು ಭಗ್ನವಾಯಿತು. ಅವನು ತುಂಬಾ ಲಜ್ಜಿತನಾದ. ಆದರೆ ತನ್ನ ದೌರ್ಬಲ್ಯವನ್ನು ಮರೆಮಾಚಿಕೊಳ್ಳಲು ಹೇಳಿದ, “ಛೀಃ-ಛೀಃ! ನಾನು ಈ ಹೆಣದ ಮೂಗಬೊಟ್ಟನ್ನು ನನ್ನ ಮನೆಗೆ ತಗೊಂಡು ಹೋಗ್ತೀನ? ಇದು ಎಂಥ ಪಾಪದ ಗರ್ಭವೋ...”

“ಹಾಗಾದರೆ, ನೀನು ತಗೊಳ್ಳೋದಿಲ್ಲವೇ? ನಾವು ಬೆಂಕಿ ಹೊತ್ತಿಸುವುದೇ?” ಜೊತೆಗಾರರು ಮುಂದಕ್ಕೆ ಬಂದರು.

ಜಗ್ಗೂ ತಿವಾಡಿ ಅನ್ಯಮನಸ್ಕತೆಯಿಂದ ಹೇಳಿದ, “ಹೂಂ-ಹೂಂ, ಬೆಂಕಿ ಹೊತ್ತಿಸಿ. ಚೆನ್ನಾಗಿ ಹೊತ್ತಿಸಿ, ಎಲ್ಲವೂ ಸುಟ್ಟು ಬೂದಿಯಾಗಲಿ.”

ಬೆಂಕಿ ಹಾಹಾಕಾರ ಮಾಡುತ್ತಾ ಹೊತ್ತಿ ಉರಿಯಿತು. ಬೆಂಕಿಯ ಜ್ವಾಲೆ ಎಲ್ಲವನ್ನೂ ನುಂಗಿ ನೀರು ಕುಡಿಯಲು ಸಿದ್ಧವಾಗಿತ್ತು. ಸೊಸೆಯ ಮಾಸಿದ ಬಿಳಿ ದೇಹ ಬೆಂಕಿಯಲ್ಲಿ ಉರಿದು ಕಪ್ಪು-ಕಟ್ಟಿಗೆಯಾಯಿತು, ನಂತರ ಎಲ್ಲವೂ ಉದುರಲಾರಂಭಿಸಿತು.

ಜಗ್ಗೂ ತಿವಾಡಿ ಮೌನವಹಿಸಿ ಉರಿಯುವ ಆ ಚಿತೆಯನ್ನೇ ನೋಡುತ್ತಿದ್ದ. ದೂರದಲ್ಲಿದ್ದ ವಿಷಮುಷ್ಟಿ ಮರದಲ್ಲಿ ಗೂಬೆ, ಹದ್ದು ಮತ್ತು ಕಾಡು ಕೋಳಿಗಳ ಗುಂಪು ಕಲೆತಿತ್ತು. ಸಾಕಷ್ಟು ದೂರದ ಹೊಲಗಳಿಂದಾಚೆಯಿಂದ ಅದೇ ವೇಳೆಗೆ ನರಿಯೊಂದು ಕೂಗುವ ಧ್ವನಿ ಕೇಳಿ ಬಂತು.

ಕೊಳಕು, ಅಂಧಕಾರ, ಎಲುಬುಗಳು, ಬೂದಿ, ಇದ್ದಿಲು- ಚಿತೆಯಿಂದ ಒಂದು ವಿಚಿತ್ರ ಕೊಳಕು ವಾಸನೆ ಹೊರಟು ಸುತ್ತಮುತ್ತ ಆವರಿಸಿತು.

ಜಗ್ಗೂನೊಂದಿಗೆ ಬಂದ ಇನ್ನಿತರ ಜೊತೆಗಾರರು ಜಗ್ಗೂವನ್ನು ಉದ್ದೇಶಿಸಿ ಹೇಳಿದರು, “ಜಗ್ಗೂ, ಮಕ್ಕಳು-ಮರಿಗಳಿರುವ ನಿನ್ನ ಮನೆಗೆ ಈ ದುರಾಚಾರಿಣಿಯ ಒಡವೆಯನ್ನು ಒಯ್ಯದೆ ಒಳ್ಳೆಯದು ಮಾಡಿದೆ! ಇಲ್ಲದಿದ್ದಲ್ಲಿ ನಿನಗೆ ತುಂಬಾ ಕೆಟ್ಟದ್ದಾಗುತ್ತಿತ್ತು. ನೋಡಿದೆಯಲ್ಲ, ಅವಳು ಅದೆಷ್ಟು ನರಳಿ-ನರಳಿ ಸತ್ತಳು? ತನ್ನ ಹೊಟ್ಟೆಯಲ್ಲಿದ್ದ ಮಗುವನ್ನು ಸಾಯಿಸುವವಳು, ಖುದ್ದು ಸಾಯುವುದಿಲ್ಲವೇ? ಧರ್ಮ ಎನ್ನುವುದೂ ಇದೇ ತಾನೇ?”

ಆ ಉರಿಯುವ ಚಿತೆಯನ್ನು ನೋಡುತ್ತಾ ಜಗ್ಗೂ ರೇಗಿದ, “ಇರಲಿ ಬಿಡು! ಇನ್ನೊಬ್ಬರ ಬಗ್ಗೆ ಧರ್ಮದ ಮಾತನಾಡುವುದು ಬೇಡ! ಮನುಷ್ಯ, ಮನುಷ್ಯನನ್ನು ನಿಜವಾಗಿಯೂ ಯೋಗ್ಯವಾಗಿ ಅರಿಯಲು ಸಾಧ್ಯವಾಗಿದೆಯೇ?”

***

(ಸಚ್ಚಿದಾನಂದ ರಾವುತ್ ರಾಯ್1916ರಲ್ಲಿ ಜನಿಸಿದ ಇವರು ಸ್ವಾತಂತ್ರ್ಯ ಹೋರಾಟದೊಂದಿಗೆ ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದರು, ಹೀಗಾಗಿ ಅನೇಕ ಬಾರಿ ಜೈಲಿಗೆ ಹೋದರು. ಇವರು ತಮ್ಮ ಹನ್ನೆರಡನೆಯ ವಯಸ್ಸಿಗೇ ತಮ್ಮ ಬರವಣಿಗೆ ಆರಂಭಿಸಿದ್ದರು. ಇದುವರೆಗೆ ಇವರ 18 ಕವನ-ಸಂಕಲನಗಳು, 2 ಕಾದಂಬರಿಗಳು, 4 ಕಥಾ-ಸಂಕಲನಗಳು, 1 ಕಾವ್ಯ-ನಾಟಕ ಹಾಗೂ ವಿಮರ್ಶೆಗೆ ಸಂಬಂಧಿಸಿದ 3 ಕೃತಿಗಳು ಪ್ರಕಟಗೊಂಡಿವೆ. ಇವರಿಗೆ 1963ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1986ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿವೆ. ಅಲ್ಲದೆ ಇವರಿಗೆ ಸೋವಿಯತ್‌ ಲ್ಯಾಂಡ್ ನೆಹರೂ ಪುರಸ್ಕಾರ ಮತ್ತು ಪದ್ಮಶ್ರೀ ಪುರಸ್ಕಾರ ಸಹ ಲಭಿಸಿವೆ. ಸಚ್ಚಿದಾನಂದ ರಾವುತ್ ರಾಯ್ ಅವರು ಕಥಾ-ಶಿಲ್ಪಿ, ನಾಟಕಕಾರರು ಮತ್ತು ಸಾಹಿತ್ಯ-ಮನೀಷಿಯಾಗಿ ಭಾರತೀಯ ಸಾಹಿತಿಗಳಲ್ಲಿ ಪ್ರಮುಖರಾಗಿದ್ದಾರೆ.)

ಮೂಲ: ಸಚ್ಚಿದಾನಂದ ರಾವುತ್ ರಾಯ್
ಕನ್ನಡಕ್ಕೆ: ಡಿ.ಎನ್.ಶ್ರೀನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.