ADVERTISEMENT

ಕಥೆ | ಸಡಗರೋತ್ಪಾದಕರು!

ಬಿಂಡಿಗನವಿಲೆ ಭಗವಾನ್
Published 9 ಮೇ 2020, 19:30 IST
Last Updated 9 ಮೇ 2020, 19:30 IST
ಕಲೆ: ಭಾವು ಪತ್ತಾರ್
ಕಲೆ: ಭಾವು ಪತ್ತಾರ್   

ನಿಜ ಹೇಳಿ– ‘ಬರೊ ರವಿವಾರ, ಮಗಳ ಮದುವೆ.... ಏನೋ ಒಂದೂ ತೋಚ್ತಾಯಿಲ್ಲ, ಕೈಕಾಲು ಆಡ್ತಾಯಿಲ್ಲ, ಮೂರು ಕಾಸಿನ ಕೆಲ್ಸವೂ ಆಗಿಲ್ಲ’ ಎನ್ನುವುದರಲ್ಲಿ ಇರುವ ಖುಷಿ, ‘ಎಲ್ಲ ಸಿದ್ಧ, ಆ ದಿನ ಬರೋದೇ ಬಾಕಿ’ ಎನ್ನುವುದರಲ್ಲಿ ಇದೆಯೇ?

ಅವಸರ, ಕಾತರಗಳು ಪುಲಕಗಳ ಬುತ್ತಿಗಳನ್ನೇ ಹೊತ್ತು ತರುತ್ತವೆ. ಗಡಿಬಿಡಿಯನ್ನು ತಂದುಕೊಳ್ಳುವುದರಲ್ಲಿ ಅವ್ಯಕ್ತ ಆನಂದವಿದೆ. ಮದುವೆ, ಮುಂಜಿ, ನಿಶ್ಚಿತಾರ್ಥ, ಗೃಹಪ್ರವೇಶ, ಹುಟ್ಟಿದ ಹಬ್ಬ ಹೀಗೆ ಯಾವುದೇ ಸಂದರ್ಭಗಳಲ್ಲಿ ನಮಗೇ ತಿಳಿಯದಂತೆ ನಾವು ಈ ಸಡಗರಗಳನ್ನು ಆವಾಹಿಸಿಕೊಂಡೇ ಇರುತ್ತೇವೆ.

ನಮಗೆ ಒಂದಲ್ಲೊಂದು ಬಗೆಯಲ್ಲಿ ಸಾಥ್ ನೀಡಲು ಸಡಗರೋತ್ಪಾದಕರು ಇದ್ದೇ ಇರುತ್ತಾರೆ. ಪುರೋಹಿತರು, ಓಲಗದವರು, ಅಲಂಕಾರದವರು, ಅಡುಗೆಯವರು, ಚಪ್ಪರ ಹಾಕುವವರು...ಎಲ್ಲರೂ ಟಕ್ ಅಂತ ಸಮಯಕ್ಕೆ ಸರಿಯಾಗಿ ಬಂದುಬಿಟ್ಟರೆ ಅದು ಮದುವೆ ಮನೆ ಎಂದು ಕರೆಸಿಕೊಳ್ಳಲು ಅಸಾಧ್ಯ. ಹೊರಟಿದ್ದಾರೆ, ಟ್ರಾಫಿಕ್ ಜಾಮ್‌, ಇನ್ನೇನು ಬಂದ್ರು, ಆಗಲೇ ಬಸ್ಸಿನಲ್ಲಿ ಕೂತಿದಾರೆ... ಇತ್ಯಾದಿ ಉದ್ಘೋಷಣೆಗಳು ಇದ್ದರೇನೆ ಲಕ್ಷಣ.

ADVERTISEMENT

ಬೆಂಗಳೂರಿನ ಹೊರವಲಯದ ನಿವಾಸಿಯಾದ ನನಗೆ ಒಂದು ಆಮಂತ್ರಣ ಪತ್ರ ಬಂದಿತ್ತು. ‘ನಿವೃತ್ತರಾಗುತ್ತಿರುವ ಬ್ಯಾಂಕ್ ಮ್ಯಾನೇಜರ್‌ಗೆ ಬೀಳ್ಕೊಡಿಗೆಯಿದೆ... ಬನ್ನಿ’ ಎಂದು ಒಕ್ಕಣೆ. ನನ್ನ ಖಾತೆಯಿರುವ ಶಾಖೆಯ ಸಿಬ್ಬಂದಿ ಇಷ್ಟೊಂದು ಅಭಿಮಾನ ಇಟ್ಟುಕೊಂಡಿದ್ದಾರಲ್ಲ ಅಂತ ಹಿಗ್ಗಿದೆ. ನನ್ನಂತೆಯೇ ಸುಮಾರು ನಲವತ್ತು ಮಂದಿ ಆಹ್ವಾನಿತರು ನೆರೆದಿದ್ದರು. ಅಂದು ಸಂಜೆ ನಾಲ್ಕಕ್ಕೆ ಸಮಾರಂಭ. ನಾವು ಮೂವರು ಅಕ್ಕಪಕ್ಕದ ಮನೆಯವರು. ಹೋದೆವು. ನಮ್ಮನ್ನು ಕಂಡಿದ್ದೇ ತಡ, ಕ್ಯಾಶಿಯರ್ ‘ಅರೆ! ನಿಮಗೆ ಕಾರು ಕಳಿಸಿದ್ದೆನಲ್ಲ, ಅದ್ರಲ್ಲೇ ಬರ್ಬೋದಿತ್ತು... ಎಂಥಾಯ್ತು ಮಾರಾಯರೆ’ ಎಂದು ಚಡಪಡಿಸಿದರು.

ನಮಗೆ ಕಾರಿನ ವ್ಯವಸ್ಥೆಯಾಗಿದ್ದೂ ನಿಜ, ಅದಕ್ಕೆ ಅವರು ದುಬಾರಿ ಬಾಡಿಗೆ ತೆತ್ತಿದ್ದೂ ನಿಜ. ಏನಿದು ಭರ್ಜರಿ ಹಣ ಖರ್ಚಾಯಿತು ನಮಗಾಗಿ ಅಂತ ನೀವು ಅಂದುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಸಡಗರಕ್ಕೂ ಉತ್ಪಾದನಾ ವೆಚ್ಚ ಎನ್ನುವುದಿದೆಯಲ್ಲ! ಎಂಥ ವೈಭವ. ಕಾರು ಏರ್ಪಾಡು ಮಾಡಲಾಗಿತ್ತು ಎನ್ನುವುದು ಮುಖ್ಯವಾಗುವುದೇ ಪರಂತು ಉಳಿದಿದ್ದು ಗೌಣ.

ನೀವೇ ಗಮನಿಸಿ– ‘ಎರಡು ಸ್ವೀಟ್ ಆರ್ಡರ್ ಮಾಡಿದ್ದೆ’ ಎನ್ನುವುದರಲ್ಲಿ ಸಾಂದ್ರವಾಗುವ ಸಿಹಿ ಖಂಡಿತಕ್ಕೂ ಸ್ವೀಟ್‍ಗಳಲ್ಲಿ ಇರುವುದಿಲ್ಲ. ನಿಮ್ಮ ಮಗನ ಪಿ.ಯು. ರಿಸಲ್ಟ್ ಏನಾಯಿತೆಂದು ನಿಮ್ಮ ಆಪ್ತ ಗೆಳೆಯರೊಬ್ಬರಿಗೆ ಕೇಳುವಿರಿ. ಅವರೋ ‘ಛೇ! ನೋಡಿ ನಮ್ಮ ಪಕ್ಕದ ಮನೆಯ ಹುಡುಗ ಮೂರು ಸಬ್ಜೆಕ್ಟ್‌ಗಳಲ್ಲಿ ಫೇಲಾದ’ ಅಂದಿರುತ್ತಾರೆ! ಹೋಲಿಕೆಯಿಂದ ಸ್ವಸಮಾಧಾನವೂ ಹೌದು, ಸಡಗರವೂ ಹೌದು!

ಮಲ್ಲೇಶ್ವರದಲ್ಲಿರುವ ಶೇಷು ಅಂಕಲ್ ಮದುವೆ ಮನೆಯಲ್ಲಿ ಓಡಾಡಿ ಭೇಷ್ ಎನ್ನಿಸಿಕೊಳ್ಳುವ ರಹಸ್ಯವೊಂದನ್ನು ನನಗೆ ಹೇಳಿಕೊಟ್ಟಿದ್ದಾರೆ. ‘ಏನಿಲ್ಲ ಕಣಯ್ಯ, ನೀನು ಒಂದು ಬಾಳೆಲೆಯನ್ನು ಕೆಳ ಅಂತಸ್ತಿನಿಂದ ಮೇಲಂತಸ್ತಿಗೆ ತೆಗೆದುಕೊಂಡು ಹೋಗು. ಇಳಿದು ಬಂದ ಹತ್ತು ನಿಮಿಷಗಳ ನಂತರ ಪುನಃ ಮೇಲಂತಸ್ತಿಗೆ ಹೋಗಿ ಅದೇ ಬಾಳೆಲೆಯನ್ನು ಕೆಳಗೆ ತಾ. ಹೀಗೆ ಎರಡು ಅಥವಾ ಮೂರು ಬಾರಿ ಮಾಡಿದರಾಯ್ತು– ನೀನೇ ಹೀರೋ!’

ಅಂದಕಾಲತ್ತಿನ ಮದುವೆ ಮನೆಗಳಲ್ಲಿ ಕಡ್ಡಾಯವಾಗಿ ‘ಮಹಾಭಾರತ’ಕ್ಕೆ (ಇಸ್ಪೀಟ್‌)ಒಂದು ವಿಶಾಲ ಕೊಠಡಿಯನ್ನು ಮೀಸಲಿಡಲಾಗುತ್ತಿತ್ತು. ದ್ಯೂತಪಟುಗಳಿಗೆ ಕುಳಿತಲ್ಲೇ ತಿಂಡಿ, ಕಾಫಿ; ಅದರ ಉಸ್ತುವಾರಿಗೆ ಒಬ್ಬರ ನಿಯೋಜನೆ ಬೇರೆ!

‘ನೀವು ಒಯ್ಯುವ ಸೀರೆ ಬದಲಿಸಲು ಯಾವಾಗ ಬರುತ್ತೀರಿ’ ಅಂತ ಜವಳಿ ಅಂಗಡಿಯವರೆ ವಧುವಿನ ಕಡೆಯವರಿಗೆ ಹೇಳುವುದರ ಮೂಲಕ ಸಡಗರವನ್ನು ವೃದ್ಧಿಸಿರುತ್ತಾರೆ! ಬಣ್ಣ ಮಂಕಾಯಿತು, ಜರಿ ಸುಮಾರು, ಬಾರ್ಡರ್ ಸಾಲದು, ಜಾಳುಜಾಳಾಗಿದೆ, ಭಾರ ಜಾಸ್ತಿ ಇತ್ಯಾದಿ ಗೊಣಗಿನಿಂದ ಖರೀದಿಸಿದವರು ಒಮ್ಮೆಯಾದರೂ ಅಂಗಡಿಯಲ್ಲಿ ಪ್ರತ್ಯಕ್ಷವಾಗದಿದ್ದರೆ ಅದು ಮದುವೆ ಸಂಭ್ರಮವಾಗಲು ಸಾಧ್ಯವೇ?

ಮೊನ್ನೆ ನಾನೊಂದು ‘ಗೃಹ ಪ್ರವೇಶ’ದಲ್ಲಿದ್ದೆ. ಮನೆಯೊಡೆಯ ನನ್ನ ಬಳಿ ಬಂದು ‘ವಿಪರೀತ ಧಗೆ ಅಲ್ವಾ?’ ಎಂದರು. ನಾನು ಸಹಜವಾಗಿ ‘ಜುಲೈ ಬರ್ತಿದೆ, ಮಳೆಗಾಲದಲ್ಲಿ ಎಂಥ ಬಿಸಿ ಗಾಳಿ...’ ಎಂದೆ. ‘ಇಲ್ಲಪ್ಪ, ನೀವು ಏರ್ ಕಂಡೀಶನ್ ರೂಮ್‌ನಲ್ಲಿ ಕೂತುಬಿಡಿ... ಏನಾದ್ರೂ ಆಗ್ಲಿ’ ಅಂತ ಅವರು ಒತ್ತಾಯಿಸಿದರು. ತಮ್ಮ ಹೊಸ ಮನೆಯಲ್ಲಿ ಅಂಥ ವ್ಯವಸ್ಥೆ ಇದೆ ಎಂದು ತೋರಿಸುವುದು ಅವರ ಉದ್ದೇಶ!

ಕೈಯಲ್ಲಿ ಕನ್ನಡಿಯಂತೆ ವಿಮಾನದ ಟಿಕೆಟ್ ಇದ್ದರೂ, ವಿಮಾನ ನಿಲ್ದಾಣಕ್ಕೆ ಪದೇ ಪದೇ ಫೋನಾಯಿಸಿ ‘ವಿಮಾನ ಆನ್ ಟೈಂ ತಾನೇ? ಎಷ್ಟು ಹೊತ್ತಿಗೆ ತಲುಪುತ್ತೆ? ಹಾರಾಟ ಸಮಯವೆಷ್ಟು?’ಎಂದು ವಿಚಾರಿಸುವುದರ ಮುಖೇನ ಪುಲಕವನ್ನು ಹಿಗ್ಗಿಸಿಕೊಳ್ಳುವವರುಂಟು. ಗೊತ್ತಿದ್ದೂ ಪ್ರಶ್ನಿಸಿದರೆ ಸಡಗರ ಹೆಚ್ಚು!

ಅಂದಹಾಗೆ ನನ್ನ ಹಿರಿಯ ಮಿತ್ರರೊಬ್ಬರು ತಮ್ಮ ಮಗನೊಂದಿಗೆ ದೊಡ್ಡ ಮಾಲ್‍ಗೆ ಬಂದಿದ್ದರು. ನಾವು ಮೂವರು ಹೊರಬರುವಾಗ ಅವರ ಮಗ ಬಾಗಿಲನ್ನು ತಳ್ಳುವುದರ ಬದಲು ಎಳೆದ. ಹೇಗೆ ತಾನೆ ಅದು ತೆರೆದುಕೊಳ್ಳಲು ಸಾಧ್ಯ? ‘ಏನೂ ತಿಳ್ಕೊಬೇಡಿ... ಇವ್ನು ಸಾಫ್ಟ್‌ವೇರ್‌ ನೋಡಿ... ಈಗಲೇ ಮರೆಗುಳಿತನ, ಅದರ ಪರಿಣಾಮ ನೋಡಿ’ ಎಂದರು ಅವರ ಅಪ್ಪ. ಪುತ್ರನ ಸ್ಥಾನಮಾನ ಹೇಳಿಕೊಂಡು ಸಡಗರಿಸುವ ಅವಕಾಶ ಅವರಿಗೆ! ‘ಉತ್ಸವ ಪ್ರಿಯಾ ಹಿ ಮಾನವಾಃ’ ಎಂಬ ಕಾಳಿದಾಸನ ನುಡಿಯಂತೆ ನಾವು, ನೀವೆಲ್ಲರೂ ಸಡಗರೋತ್ಪಾದಕರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.