ADVERTISEMENT

ಸಂಧ್ಯಾರಾಣಿ ಬರೆದ ಕಥೆ: ಉಗ್ರಪ್ಪನ ಹಡಪ

ಸಂಧ್ಯಾರಾಣಿ
Published 29 ಮೇ 2021, 19:30 IST
Last Updated 29 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅದು 1976ನೆಯ ಇಸವಿ, ತುರ್ತು ಪರಿಸ್ಥಿತಿ ಎಲ್ಲರ ಕಣ್ಣುಕಿವಿ ತೆರೆಯಿಸಿ, ಬಾಯಿ ಮುಚ್ಚಿಸಿತ್ತು. ಪಟ್ಟಣದಲ್ಲಿ ಓದುತ್ತಿದ್ದ ಆನಂದ ಹೇಳದೆ ಕೇಳದೆ ಹಿಂದಿನ ದಿನ ರಾತ್ರಿ ಕಡೆಯ ಬಸ್ಸಿನಲ್ಲಿ ಹಳ್ಳಿಗೆ ಬಂದಿದ್ದ. ‘ಕಿಟ್ಟಯ್ಯ ಶೆಟ್ಟಿ ಮನೆಗೆ ಪೋಲೀಸರು ಬಂದವ್ರಂತೆ’ – ಮನೆಯ ಜಗಲಿಗೆ ಅಂಟಿದಂತೆ ಇದ್ದ ಅಂಗಡಿಯಲ್ಲಿ ಯಾರೋ ಉದ್ವೇಗದಲ್ಲಿ ಆಡಿದ ಈ ಮಾತು ಕಿವಿಗೆ ಬಿದ್ದ ತಕ್ಷಣ, ಕಿಟಕಿ ಸರಳಿಗೆ ಕನ್ನಡಿ ಸಿಕ್ಕಿಸಿ, ಶೇವಿಂಗ್ ಮಾಡಿಕೊಳ್ಳುತ್ತಿದ್ದ ಆನಂದ ‘ಯಾಕಂತೆ?’ ಎಂದು ಗಾಬರಿಯಿಂದ ಕೇಳಿದ. ಕಳೆದ ವರ್ಷ, 1975, ಜೂನ್ 26ರಂದು ತುರ್ತುಪರಿಸ್ಥಿತಿ ಘೋಷಣೆಯಾದ ಮೇಲಿನಿಂದ ಪೊಲೀಸರು ಎನ್ನುವ ಪದ ಕೇಳಿದರೆ ಸಾಕು ಅನುಮಾನ, ಕಳವಳ ಎಲ್ಲಾ ಜೊತೆಜೊತೆಯಾಗಿಯೇ ಬರುತ್ತಿದ್ದವು. ಆ ದಿನ ಆನಂದನಿಗೆ ಇಂದಿಗೂ ನೆನಪಿದೆ. ಬೆಳಗ್ಗೆ ಮುಖ ತೊಳೆದು ಹಾಸ್ಟೆಲ್ ಕ್ಯಾಂಟೀನಿಗೆಂದು ಬಂದ ಅವನಿಗೆ ಸ್ನೇಹಿತರು ನ್ಯೂಸ್ ಪೇಪರ್ ಕೈಲಿಟ್ಟುಕೊಂಡು ಅಲ್ಲಲ್ಲಿ ಗುಂಪುಗುಂಪಾಗಿ ನಿಂತು ಚರ್ಚಿಸುತ್ತಿದ್ದುದು ಕಣ್ಣಿಗೆ ಬಿತ್ತು. ಆ ಬೆಳಗು ಎಂದಿನ ಬೆಳಗಿನಂತಿರಲಿಲ್ಲ. ಯಾವುದೂ ಸ್ಪಷ್ಟವಿಲ್ಲ, ಯಾರಿಗೂ ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಖಚಿತವಿಲ್ಲ. ಕೆಲವರು ಜೋರುಜೋರಾಗಿ ಮಾತನಾಡುತ್ತಿದ್ದರು. ಅಡ್ವಾಣಿ, ಜೇಪಿ, ಮುರಾರ್ಜಿ ದೇಸಾಯಿ ಹೆಸರುಗಳು ದೋಸೆ ಹೆಂಚಿನ ಮೇಲೆ ಚಿಮುಕಿಸಿದ ನೀರಿನಂತೆ ಬಿಸಿಯಾಗಿ ಚಿಮ್ಮಿ, ಗಾಳಿಯಲ್ಲಿ ಗುರುತೂ ಉಳಿಸದಂತೆ ಮಾಯವಾಗುತ್ತಿದ್ದವು.

ಅಲಹಾಬಾದ್ ಹೈಕೋರ್ಟ್ ಕೊಟ್ಟ ಒಂದು ತೀರ್ಪಿಗೆ ಇಡೀ ದೇಶಕ್ಕೇ ಸಂಕೋಲೆ ತೊಡಿಸಿ ನಿಲ್ಲಿಸಿದಂತಾಗಿತ್ತು. ಅಂದಿನಿಂದ ನಿಧಾನವಾಗಿ ಬೆಂಕಿಯ ಕಿಡಿ ಹರಡುವಂತೆ ಆತಂಕ, ಪ್ರತಿಭಟನೆ ಎರಡೂ ಹಬ್ಬುತ್ತಿದ್ದವು. ಸೆಂಟ್ರಲ್ ಕಾಲೇಜ್ ಆವರಣದಲ್ಲಿ, ಜನರಲ್ ಹಾಸ್ಟೆಲ್ ಕೊಠಡಿಗಳಲ್ಲಿ, ಗ್ಯಾಸ್ ಕಾಲೇಜ್ ಮೈದಾನದಲ್ಲಿ ವಿದ್ಯಾರ್ಥಿಗಳು ಗುಂಪುಗುಂಪಾಗಿ ಕೂಡಿ, ಚರ್ಚಿಸಿ, ಘೋಷಣೆಗಳನ್ನು ಕೂಗುತ್ತಿದ್ದರು. ಕೈಪತ್ರಗಳನ್ನು ತರುತ್ತಿದ್ದರು, ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು. ಕೆಲವು ಅಧ್ಯಾಪಕರು ಅವರಿಗೆ ಒತ್ತಾಸೆಯಾಗಿ ನಿಂತಿದ್ದರು. ನಿಧಾನವಾಗಿ ಅವರ ಮೇಲಿನ ನಿಗಾ ಹೆಚ್ಚಾಗುತ್ತಿದೆ ಎನ್ನುವ ಸುದ್ದಿ ಹಬ್ಬಿತು. ಕೆಲವರು ತಲೆಮರೆಸಿಕೊಂಡು, ಅಂಡರ್ ಗ್ರೌಂಡ್ ಆಗಿ, ಪೋಲೀಸರು ಎಂದರೆ ಬೆಚ್ಚುವಂತಾಗುತ್ತಿತ್ತು. ಕಾಲೇಜು ಹುಡುಗರು ಕೂಗಿದ ಘೋಷಣೆಗಳು ಚಾಚೂ ತಪ್ಪದಂತೆ ಪೋಲೀಸರ ಕಿವಿಗೆ ಬಿದ್ದು, ಅವರು ಬಂದು ಸರಿಯಾಗಿ ಘೋಷಣೆ ಕೂಗಿದವರನ್ನು ವಿಚಾರಿಸುತ್ತಿದ್ದರೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಅನುಮಾನ. ಇದ್ದ ನಾಲ್ವರಲ್ಲಿ ಪೋಲೀಸರಿಗೆ ಸುದ್ದಿ ಕೊಟ್ಟಿದ್ಯಾರು? ಪಕ್ಕದವನನ್ನೇ ನಂಬದ ಪರಿಸ್ಥಿತಿ. ಯಾವುದೋ ಸಭೆಗೆ ಹೋಗಿದ್ದ ಇವನ ಗೆಳೆಯನನ್ನು ಪೊಲೀಸರು ಎತ್ತಾಕಿಕೊಂಡು ಹೋಗಿದಾರೆ, ಅವನು ಎಲ್ಲಿದ್ದಾನೆ ಎನ್ನುವುದೇ ಪತ್ತೆಯಿಲ್ಲ, ಅವನ ಗೆಳೆಯರನ್ನೆಲ್ಲಾ ಜಾಲಾಡುತ್ತಿದ್ದಾರೆ ಎನ್ನುವ ಗುಸುಗುಸು ಕಿವಿಗೆ ಬಿದ್ದದ್ದೇ ಆನಂದ ಇದ್ದ ಎರಡು ಜೊತೆ ಬಟ್ಟೆ ಬ್ಯಾಗಿಗೆ ತುರುಕಿಕೊಂಡು, ಲಾಸ್ಟ್ ಬಸ್ ಹತ್ತಿದ್ದ.

ಹಾಗೆ ನೋಡಿದರೆ ಹಳ್ಳಿಯಲ್ಲಿ ತುರ್ತುಪರಿಸ್ಥಿತಿ ಅಂತಹ ವ್ಯತ್ಯಾಸವೇನೂ ಮಾಡಿರಲಿಲ್ಲ, ವ್ಯವಸಾಯ, ಸಣ್ಣ ಪುಟ್ಟ ಜಗಳ, ಸಾಲ, ಹಾದರ, ಪಂಚಾಯತಿ ಕಟ್ಟೆ ವ್ಯಾಜ್ಯ ಎಂದುಕೊಂಡು ಜನ ಆರಾಮಾಗೇ ಇದ್ದರು. ಅಂಥಾದ್ದರಲ್ಲಿ ಬೆಳೆಗ್ಗೆ ಬೆಳಗ್ಗೆ ಪೊಲೀಸರು ಯಾಕೆ ಬಂದರು ಎನ್ನುವುದು ಅವನ ಗಾಬರಿಗೆ ಕಾರಣವಾಗಿತ್ತು. ಅರ್ಧ ಶೇವ್ ಆಗಿದ್ದ ಮುಖ ನೋಡಿಕೊಂಡವನು, ನವೀನನ ಕಡೆ ತಿರುಗಿ, ನವೀನ ಹೋಗೋ ಏನದು ನೋಡ್ಕೊಂಡು ಬಾ ಅಂದ. ನವೀನ ಆನಂದನ ಅಕ್ಕನ ಮಗ, ಅಕ್ಕ ಎರಡನೆಯ ಮಗುವಿಗೆ ಗರ್ಭಿಣಿ ಆಗಿದ್ದರಿಂದ ಮಹಾತುಂಟ ನವೀನನ್ನು ನೋಡಿಕೊಳ್ಳುವುದು ಕಷ್ಟ ಎಂದು ಅವನನ್ನು ಹಳ್ಳಿಯ ಪ್ರಾಥಮಿಕ ಶಾಲೆಗೆ ಸೇರಿಸಲಾಗಿತ್ತು. ಹಳ್ಳಿಯಲ್ಲಿ ಅಜ್ಜ ಅಜ್ಜಿಯರ ಮುದ್ದಿನಲ್ಲಿ ಅವನೂ ಸುಖವಾಗೇ ಇದ್ದ. ಆನಂದ ಕೂಗಿದಾಗ ಜೇಬಿನಲ್ಲಿಯ ಗೋಲಿಗಳ ನಡುವೆ ಕೈಬೆರಳುಗಳನ್ನಾಡಿಸುತ್ತಾ, ಗುಳುಗುಳು ಅನುಭವದ ಮಜಾ ಅನುಭವಿಸುತ್ತಿದ್ದ ಅವನಿಗೆ ಎದ್ದು ಹೋಗುವ ಮನಸ್ಸು ಸುತರಾಂ ಇರಲಿಲ್ಲ. ತಪ್ಪಿಸಿಕೊಳ್ಳಬಹುದೇನೋ ನೋಡೋಣ ಎಂದುಕೊಂಡು ಮಾವ ಕೂಗಿದ್ದು ಕೇಳಿಸದಂತೆ ಎಲ್ಲೋ ನೋಡುತ್ತಿದ್ದು, ಒಂದೆರಡು ಕ್ಷಣ ಬಿಟ್ಟು ಮಾಮೂಲಾಗಿ ನೋಡುವಂತೆ ಈ ಕಡೆ ತಿರುಗಿದ. ಆದರೆ ಮಾವ ಕೆಲಸ ನಿಲ್ಲಿಸಿ ಇವನ ಕಡೆಗೇ ನೋಡುತ್ತಿದ್ದದ್ದು ಅರಿವಾಗಿ, ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದುಕೊಂಡು ಎದ್ದ.

ADVERTISEMENT

ಸಿಟ್ಟು ಬಂದರೆ ಮಾವ ಬಲಗೈ ನಡುಬೆರಳಿನಲ್ಲಿ ಹೆಬ್ಬೆರಳನ್ನು ಮೀಟಿ, ತೆಂಗಿನಕಾಯಿ ಬಲಿತಿದೆಯಾ ಎಂದು ನೋಡುವಂತೆ ಹಿಂದಲೆ ಮೇಲೆ ‘ಟಪ್’ ಎಂದು ಬಿಡುತ್ತಿದ್ದ ನೋವು ಸುಲಭಕ್ಕೆ ಕಮ್ಮಿ ಆಗುತ್ತಿರಲಿಲ್ಲ. ಅಜ್ಜಿ, ತಾತನ ಮುಂದೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದ ನವೀನನ ‘ಅಮ್ಮಾ...’ ಎನ್ನುವ ಅಳುವಿಗೆ ಮಾವನೆದುರಲ್ಲಿ ಕವಡೆ ಕಿಮ್ಮತ್ತಿರಲಿಲ್ಲ. ಹಾಗಾಗಿ ಅವನ ಮಾತು ಕೇಳುವುದೇ ಕ್ಷೇಮ ಎಂದು ನವೀನ ಯಾವತ್ತೋ ಅರ್ಥ ಮಾಡಿಕೊಂಡುಬಿಟ್ಟಿದ್ದ. ಎದ್ದವನೇ ‘ಡ್ ರ್ ರ್ ರ್’ ಎಂದು ಬಾಯಲ್ಲೇ ಬಸ್ ಸ್ಟಾರ್ಟ್ ಮಾಡಿ, ಪೋಂ ಪೋಂ ಎಂದು ಸದ್ದು ಹೊರಡಿಸುತ್ತಾ, ಜಾರುತ್ತಿದ್ದ ಚಡ್ಡಿ ಎಳೆದುಕೊಂಡು, ಜೋಬಿನ ಗೋಲಿಗಳು ಘಲ್ ಘಲ್ ಎನ್ನುತ್ತಿರಲು ಅಂಗಡಿ ಬೀದಿಯ ಇನ್ನೊಂದು ತುದಿಯಲ್ಲಿದ್ದ ಕಿಟ್ಟಯ್ಯ ಶೆಟ್ಟಿ ಮನೆಗೆ ಓಡಿದ.

ಕಿಟ್ಟಯ್ಯ ಶೆಟ್ಟಿ ಆ ಊರಿನ ಬ್ಯಾಂಕ್, ಬ್ಯಾಂಕರ್ ಎಲ್ಲಾ. ಯಾರದೇ ಮನೆಯಲ್ಲಿ ಮದುವೆ, ಪ್ರಸ್ತ, ಮಗಳು ಮೈನೆರೆಯುವುದು, ಮಗನನ್ನು ಕಾಲೇಜಿಗೆ ಸೇರಿಸುವುದು, ಬೆಳೆ ಕೈಹತ್ತದಿರುವುದು ಏನೇ ಆಗಲಿ ಸಾಲಕ್ಕೆ ಜನ ಇಲ್ಲೇ ಬರುತ್ತಿದ್ದರು. ಚಿನ್ನ, ಬೆಳ್ಳಿ, ಸೈಕಲ್, ತಾಮ್ರದ ಕೊಡ, ಬಿಂದಿಗೆ ಯಾವುದೇ ಇದ್ದರೂ ಶೆಟ್ಟಿ ಅಡ ಇಟ್ಟುಕೊಳ್ಳುತ್ತಿದ್ದ. ಮೊದಲೆಲ್ಲಾ ಒಬ್ಬನೇ ವ್ಯವಹಾರ ನಡೆಸುತ್ತಿದ್ದರೂ ತಮ್ಮ ಲಚ್ಚಯ್ಯ ಶೆಟ್ಟಿ ಜಗಳ ಆಡಿ ಪಾಲು ತೆಗೆದುಕೊಂಡ ಮೇಲೆ ಇಬ್ಬರೂ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಅವರ ಆಸ್ತಿ ಪಾಲಾದ ದಿನದ ವಹಿವಾಟನ್ನು ವರ್ಷ ಕಳೆದರೂ ಜನ ಮಾತನಾಡಿಕೊಳ್ಳುತ್ತಾರೆ. ಚಿನ್ನ, ಜಮೀನು, ಕಾಗದ ಪತ್ರ ಎಲ್ಲವೂ ಬಾಗಿಲ ಹಿಂದೆ ಭಾಗವಾಗಿದ್ದವು. ಬೆಳ್ಳಿಬಂಗಾರ ಸೇರಿನಲ್ಲಿ ಪಾಲು ಮಾಡಿಕೊಂಡರಂತೆ ಎಂದು ಹಳ್ಳಿ ಜನ ಬೆರಗಿನಿಂದಲೂ, ಅಸೂಯೆಯಿಂದಲೂ, ಸಂಕಟದಿಂದಲೂ ಮಾತಾಡಿಕೊಂಡರು. ಆಮೇಲೆ ಮನೆಯ ಖುರ್ಚಿ, ಅಲಮಾರು, ಮಂಚ, ಮೇಜು ಭಾಗ ಆಯಿತು. ನಂತರ ಅಡಿಗೆಮನೆ ಪಾತ್ರೆಗಳು, ಹಂಡೆ, ಕೊಳಗ. ತಟ್ಟೆ, ಲೋಟ, ರೈಲ್ವೆ ಚೆಂಬು. ಇಷ್ಟರಲ್ಲಾಗಲೇ ಲಚ್ಚಯ್ಯ ಶೆಟ್ಟಿ ಭಾಗ ಮನೆಬಾಗಿಲು ದಾಟಿ ಅಂಗಳ ಸೇರಿತ್ತು.

ಇನ್ನೇನು ಮುಗಿಯಿತಲ್ಲ ಎಂದು ನ್ಯಾಯಸ್ಥರು ಏಳಬೇಕು ಅಷ್ಟರಲ್ಲಿ ಅಣ್ಣ ತಮ್ಮಂದಿರಿಬ್ಬರೂ ಹಗೇವಿನಲ್ಲಿರುವ ದವಸ ತಂದು ಸುರಿದರು. ಸರಿ ಅದೂ ಆಯ್ತು, ಕುಂಡಿ ಒರೆಸಿಕೊಳ್ಳುತ್ತಾ ಬಂದವರು ಎದ್ದು ನಿಂತರು, ಅಷ್ಟರಲ್ಲಿ ಲಚ್ಚಯ್ಯ ಶೆಟ್ಟಿ, ‘ಆವಾಲು’ ಎಂದು ಉಗ್ರಾಣದ ಅಟ್ಟದ ಮೇಲಿದ್ದ ಡಬ್ಬವೊಂದನ್ನು ಹಿಡಿದುಕೊಂಡು ಬಂದ. ನೋಡಿದರೆ ಅದು ‘ಸಾಸಿವೆ’. ಹಳ್ಳಿಗರೂ, ಪಂಚಾಯತಿದಾರರು ಒಟ್ಟಿಗೇ ಅವಾಕ್ಕಾಗಿದ್ದರು! ಆದರೆ ಅಣ್ಣ ತಮ್ಮ ಇಬ್ಬರೂ ಸರಿಯಾಗಿ ಲೆಕ್ಕ ನೋಡಿ ಅರ್ಧರ್ಧ ಸೇರು ಭಾಗಮಾಡಿಕೊಂಡಿದ್ದರು. ಹಳ್ಳಿ ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡು ಈ ವ್ಯವಹಾರ ನೋಡಿದ್ದರು. ‘ಕಿಟ್ಟಯ್ಯಶೆಟ್ಟಿ ಮನೆ ಆಸ್ತಿ ಭಾಗ’ ಎನ್ನುವುದು ಹಳ್ಳಿಯಲ್ಲಿನ ಒಂದು ನುಡಿಗಟ್ಟಾಗಿ ಹೋಗಿತ್ತು. ಅಂತಹ ಕಿಟ್ಟಯ್ಯ ಶೆಟ್ಟಿ ಮನೆಗೆ ಪೋಲೀಸರು ಎಂದ ತಕ್ಷಣ ಹಸಿಹುಲ್ಲಿಗೆ ದನ ಎಮ್ಮೆ ಮುತ್ತುವ ಹಾಗೆ ನೇಗಿಲು ಹೊತ್ತ, ದನ ಹೊಡೆದುಕೊಂಡು ಹೋಗುತ್ತಿದ್ದ ಒಕ್ಕಲುತನದವರು, ಪಂಚಾಯತಿ ಹಾಲ್ ಎದುರು ಕೂತು ಹುಲಿಗಟ್ಟಾ ಆಡುತ್ತಿದ್ದ ಪುಂಡು ಪೋಕರಿಗಳು, ಸೀನೀರು ತರಲು ಊರಾಚೆ ಬಾವಿ ಕಡೆ ಹೊರಟವರು ಎಲ್ಲಾ ಆ ಕಡೆಯೇ ಹೆಜ್ಜೆ ಹಾಕುತ್ತಿದ್ದರು.

ಅಂಗಡಿ ಇನ್ನೂ ಅಷ್ಟು ದೂರದಲ್ಲಿರುವಾಗಲೇ ‘ಅಯ್ಯೋ ದೇವುಡಾ ಇದೇಂ ಚೇಸಾವುರಾ, ನಾನು ಯಾರಿಗೆ ಅನ್ಯಾಯ ಮಾಡಿದ್ದೆ, ಧರ್ಮ ಕರ್ಮ ಅಂತ ಬದುಕೋ ನಂಗೇ ಹಿಂಗಾಗ್ಬೇಕಾ, ಈ ಕಾಲ್ದಲ್ಲಿ ನ್ಯಾಯಾನಿಕಿ ಬೆಲೆ ಇಲ್ಲಾ’ ಎಂದು ದೇವರಿಗೇ ಗೊಂದಲ ಆಗುವ ಹಾಗೆ ಶೆಟ್ಟಿ ಗೋಳಾಡುತ್ತಾ ಇದ್ದ. ಪಕ್ಕದ ಕಟ್ಟೆಯ ಮೇಲೆ 4–5 ಜನ ಪೋಲೀಸರು, ಅವರ ಕೈಯಲ್ಲಿ ಒಂದು ಕಟ್ಟು ಸಾಲದ ಪ್ರಾಮಿಸರಿ ಪತ್ರಗಳು. ಅವರು ಬಂದ ಉದ್ದೇಶ ಕೇಳಿ ಅಚ್ಚರಿಯಿಂದ, ಆಸೆಯಿಂದ ನಿಧಾನಕ್ಕೆ ಸೇರುತ್ತಿದ್ದ ಜನಗಳು. ಇಂದಿರಮ್ಮ ಋಣ ಪರಿಹಾರ ಕಾಯ್ದೆ ತಂದಿದ್ದರಿಂದ ಸಾಲ ಮಾಫಿ ಆಗಿದೆ, ಹಾಗಾಗಿ ಅಡ ಇಟ್ಟ ಬೆಳ್ಳಿ, ಬಂಗಾರ ಎಲ್ಲವನ್ನೂ ವಾಪಸ್ ತಗೋಬೋದು ಅಂತ ಪೊಲೀಸಪ್ಪ ಹೇಳುತ್ತಿದ್ದರೆ ಜನರಿಗೆ ನಂಬಿಕೆಯೇ ಬರುತ್ತಿಲ್ಲ. ಒಡವೆ ಬಿಚ್ಚಿಕೊಟ್ಟಾಗ ಇಟ್ಟ ಕಣ್ಣೀರ ನೆನಪಿನಲ್ಲಿ ಹೆಂಗಸರ ಕಣ್ಣು ಈಗಲೂ ಧಗಧಗ ಉರಿಯುತ್ತಿದೆಯೇನೋ ಎನ್ನುವಂತೆ ಮಿನುಗುತ್ತಿದ್ದರೆ, ಹಾಗಾದರೆ ನಾಳೆ ಏನಾದ್ರೂ ಕಷ್ಟ ಅಂದರೆ ಎಲ್ಲಿಂದಾದರೂ ಸಾಲಾ ಹುಟ್ಟೀತಾ, ಮುಂದೇನು ಗತಿಯಪ್ಪಾ ಎನ್ನುವ ಆತಂಕ ಗಂಡಸರಲ್ಲಿ. ಕಿಟ್ಟಯ್ಯ ಶೆಟ್ಟಿ ಹತ್ತಿರ ಒಡವೆ ಅಡ ಇಟ್ಟ ಜನ ಸಾಲುಸಾಲಾಗಿ ಸೇರುತ್ತಿದ್ದರೆ, ಶೆಟ್ಟರು ಒಂದೊಂದು ಪತ್ರ ಓದುವಾಗಲೂ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದ್ದರು.

ಕೈಲಿರುವ ಪತ್ರ ನೋಡುವುದು, ಒಡವೆ ಲೆಕ್ಕ ಕೇಳುವುದು, ಮೂಗಲ್ಲಿ ಸಿಂಬಳ ಸುರಿಸುತ್ತಾ ಶೆಟ್ಟರು ಒಳಗಿಂದ ಆ ಒಡವೆ ತಂದುಕೊಡುವುದು. ಮನೆ ಒಳಗಿಂದ ಹೆಂಗಸರು ಗೋಳಾಡುವ ಸದ್ದು ಸಹ ಕೇಳಿಸುತ್ತಿತ್ತು. ಇದಕ್ಕೆಲ್ಲಾ ಲಚ್ಚಯ್ಯ ಶೆಟ್ಟಿಯೇ ಹಚ್ಚಿಕೊಟ್ಟಿದ್ದಾನೆಂದು ಅವನ ಮೇಲೆ ಹಿಡಿ ಶಾಪ ಹಾಕುತ್ತಿದ್ದರು. ಸ್ವಲ್ಪ ಹೊತ್ತು ನೋಡಿದ ನವೀನನಿಗೆ ಇದರಲ್ಲಿ ಏನೂ ಸ್ವಾರಸ್ಯ ಇಲ್ಲ ಅನ್ನಿಸಿ ಮನೆ ಕಡೆ ತಿರುಗಿದ. ಈ ಸಲ ಬಸ್ ಬೇಡ, ಬೈಕ್ ಓಡಿಸೋಣ ಎಂದು ಅಡ್ಡಾದಿಡ್ಡಿ ಓಡುತ್ತಾ ಮನೆಕಡೆ ಸಾಗಿದ. ಮನೆಯ ಹಿತ್ತಲಿನಲ್ಲಿ ಜನ ಇದ್ದದ್ದು ಕಂಡ ಮಾವ ಅಲ್ಲೇ ಇದ್ದಾನೇನೋ ಎಂದು ನೋಡಿದ, ಮಾವನ ಮುಖ ಕಂಡಿದ್ದೇ ಓಡಿಹೋಗಿ ‘ಅದು ಪೊಲೀಸೋರು ಬಂದಿದ್ರಲ್ಲ, ಎಲ್ಲರಿಗೂ ಪೇಪರ್‌‌ನಲ್ಲಿ ಹೆಸರು ಓದಿ, ಒಡವೆ ಕೊಡುತ್ತಿದ್ದಾರೆ...’ ಎಂದವನು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದ, ಅರೆ, ಇಲ್ಲೂ ಪೊಲೀಸರು. ಜೊತೆಯಲ್ಲಿ ಅಜ್ಜನ ಕ್ಷೌರ ಮಾಡಲು ಬರುತ್ತಿದ್ದ ಉಗ್ರಪ್ಪನ ಮಗ ನಾರಾಯಣ. ಎದುರಿನಲ್ಲಿ ಗಂಭೀರವಾಗಿ ನಿಂತಿದ್ದ ಅಜ್ಜ, ಕಣ್ಣಿನಲ್ಲಿ ನೀರು ತುಂಬಿಕೊಂಡಿದ್ದ ಅಜ್ಜಿ, ಬಚ್ಚಲುಮನೆಯ ತುಂಬಾ ಮಣ್ಣು. ಏನು ಎಂದು ಅತ್ತಿತ್ತ ನೋಡುವಲ್ಲಿ ಯಾರೋ ಬಚ್ಚಲ ಹಂಡೆಯನ್ನು ಪಿಕಾಸಿಯಲ್ಲಿ ಮೀಟಿ ತೆಗೆಯುತ್ತಿದ್ದದ್ದು ಕಾಣಿಸಿತು. ‘ಏನ್ ನಾರಾಯಣ, ದೇವರು ಮೆಚ್ಚುವಂತಹ ಮಾತಾಡು, ಇದು ಅಡ ಇಟ್ಟು ಸಾಲ ತಗೊಂಡಿದ್ದಲ್ಲ. ನಿಮ್ಮಪ್ಪ 120 ರೂಪಾಯಿಗೆ ಮಾರಿದ್ದು. ಹಂಡೆ ಅಡ ಇಟ್ಟುಕೊಂಡು ಅಷ್ಟು ದುಡ್ಡು ಯಾರು ಕೊಡ್ತಾರೆ?’ ಜೋರು ದನಿಯಲ್ಲಿ ಶುರು ಮಾಡಿದ ಅಜ್ಜಿ, ಅಳುವಂತೆ ಮಾತು ಮುಗಿಸಿದ್ದನ್ನು ನೋಡಿ ನವೀನನಿಗೆ ತಡೆಯಲಾಗಲಿಲ್ಲ, ಅವನಿಗೆ ಅಜ್ಜಿ ಎಂದರೆ ಅಮ್ಮನಿಗಿಂತ ಒಂದು ಕೈ ಹೆಚ್ಚು. ಹೋಗಿ ಅಜ್ಜಿಯ ಕಾಲುಗಳನ್ನು ತಬ್ಬಿಕೊಂಡ.

‘ನಮ್ಮಪ್ಪ ಅಡ ಇಟ್ಟಿದೀನಿ ಅಂತ ಏಳವ್ನೆ, ಅಂಗಾರೆ ನಮ್ಮಪ್ಪ ಸುಳ್ಳೇಳ್ತಾನಾ’ ಎಂದು ನಾರಾಯಣ ತೋಳೇರಿಸಿದ. ‘ಹಾಗಾದ್ರೆ ಎಲ್ಲಿ ನಿಮ್ಮಪ್ಪ, ಕರ್ಕೊಂಡು ಬಾ, ಪ್ರಮಾಣ ಮಾಡಲಿ’ ಆನಂದ ಅಬ್ಬರಿಸಿದ. ‘ಮುದ್ಕನ್ನ ಇವಾಗ್ಲೆ ಎಳಕೊಂಡು ಬತ್ತೀನಿ’ ಎಂದು ನಾರಾಯಣ ತಿರುಗಿದ. ಅದುವರೆಗೆ ಸುಮ್ಮನಿದ್ದ ಅಜ್ಜ ಅವನನ್ನು ತಡೆದರು. ‘ಶಿವಾರ್ಪಣಾ, ತಗೊಂಡು ಹೋಗಲಿ. ಆನಂದ ಎಲ್ಲಾ ಹೋದ ಮೇಲೆ ಬಾಗಿಲು ಹಾಕು’ ಎಂದ ಅಜ್ಜಯ್ಯ, ಸಾಧಾರಣವಾಗಿ ಅವರು ಹೊರಗೆ ಹೋಗುವಾಗ ಧರಿಸುವ ಕೋಟು, ಟೋಪಿಯನ್ನೂ ಕೈಗೆತ್ತಿಕೊಳ್ಳದೆ ಮನೆಯಿಂದ ನಡೆದುಬಿಟ್ಟರು. ದೀಪಾವಳಿ ಹಬ್ಬಕ್ಕೆ ಅಲಂಕಾರ ಮಾಡಿ, ಪೂಜೆ ಮಾಡುತ್ತಿದ್ದ ಹಂಡೆ ಒಲೆಯಿಂದ ಹೊರಬಂದು, ಬರಿ ಮೈಯ್ಯಲ್ಲಿ ಅನಾಥವಾಗಿ ನಿಂತಂತೆ ಭಾಸವಾಗಿ ನವೀನನಿಗೂ ಅಳುಬಂತು.

ಮನೆಯಿಂದ ಹೊರಟ ಅಜ್ಜಯ್ಯನ ಕಾಲುಗಳು ಅವರಿಗೇ ಅರಿವಿಲ್ಲದಂತೆ ಅವರನ್ನು ಆನೆಬಂಡೆ ಹೊಲದ ಕಡೆಗೆ ಕರೆದೊಯ್ದವು. ಆ ಹೊಲದ ನಡುವೆ ಮಲಗಿರುವ ಆನೆಯಾಕಾರದ ಬಂಡೆಗಲ್ಲಿತ್ತು. ಪಕ್ಕದಲ್ಲಿದ್ದ ಕಚ್ಚುಗಳ ಮೇಲೆ ಕಾಲುಗಳನ್ನಿಟ್ಟುಕೊಂಡು ಬಂಡೆ ಹತ್ತಿದ ಅಜ್ಜಯ್ಯನ ಮುಖದಲ್ಲಿ ಒಂದು ರೀತಿಯ ವ್ಯಗ್ರತೆ. ಅದು ಸಿಟ್ಟಲ್ಲ, ನಡೆದದ್ದು ನ್ಯಾಯ ಅಲ್ಲ ಎನ್ನುವಾಗ ಬರುವ ಅಸಮಾಧಾನ. ಸ್ವಲ್ಪ ಹೊತ್ತು ಹಾಗೇ ನಿಂತಿದ್ದ ಅಜ್ಜಯ್ಯನ ದೃಷ್ಟಿ ಹೊಲದ ಕಡೆ ತಿರುಗಿತು. ಹಾಲು ಕಟ್ಟುತ್ತಿದ್ದ ರಾಗಿತೆನೆಗಳನ್ನು ನೋಡಿ ಮುಖ ನಿಧಾನವಾಗಿ ಮೃದುವಾಯಿತು. ಸ್ವಲ್ಪ ಹೊತ್ತಾದ ನಂತರ ಹೊಲದಿಂದ ಹೊರಗೆ ಬಂದವರಿಗೆ ಮನೆಗೆ ಹೋಗುವ ಮನಸ್ಸಿರಲಿಲ್ಲ. ಹೈವೇನಲ್ಲಿ ಬರುತ್ತಿದ್ದ ಯಾವುದೋ ಲಾರಿಗೆ ಕೈ ಅಡ್ಡ ಹಾಕಿ ನಿಲ್ಲಿಸಿದವರು ಟೌನಿಗೆ ಹೋಗಿ, ಹೊಸ ಹಂಡೆ ತಂದೇ ಬಿಟ್ಟರು. ಅಜ್ಜಮ್ಮ ಕಣ್ಣೊರೆಸಿಕೊಳ್ಳುತ್ತಲೇ ಹೊಸ ಹಂಡೆಗೆ ಹುಣಸೆಹಣ್ಣು ಹಾಕಿ ತಿಕ್ಕಿ, ಬಿಂದಿಗೆಗಳಲ್ಲಿದ್ದ ನೀರು ಬಗ್ಗಿಸಿದರು. ಆದರೂ ಎಲ್ಲರ ಮನಸ್ಸಲ್ಲೂ ಏನೋ ಕಸಿವಿಸಿ. ಅದಾಗಿ ನಾಲ್ಕೈದು ದಿನಗಳಾಗಿರಬಹುದು. ಮುಂಜಾನೆ ಅಜ್ಜ ಒಲೆಗೆ ಉರಿ ಹಾಕುವಾಗ ಅಜ್ಜನ ಪಕ್ಕದಲ್ಲಿ ಕೂತು ಬಿಸಿ ಕಾಯಿಸುತ್ತಿದ್ದ ನವೀನ ಹೊರಗಿನಿಂದ ಮಾವ ‘ಅಣ್ಣಾ ಉಗ್ರಪ್ಪ ಕ್ಷೌರಕ್ಕೆ ಬಂದಿದಾನೆ’ ಎಂದು ಕೂಗಿದಾಗ ಥಟ್ಟನೆ ಅಜ್ಜನ ಮುಖ ನೋಡಿದ. ಅಮಾವಾಸ್ಯೆ ಹೊರತು ಪಡೆಸಿ ಮಿಕ್ಕ ಭಾನುವಾರಗಳಂದು ಬೆಳಗ್ಗೆಯೇ ಉಗ್ರಪ್ಪ ಹಾಜರಾಗುತ್ತಿದ್ದ.

ಕಾಲೇಜು ಮೆಟ್ಟಿಲು ಹತ್ತಿದ ಹುಡುಗರು ಪಕ್ಕದ ತಾಲೂಕು ಕೇಂದ್ರದಲ್ಲಿ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳುತ್ತಿದ್ದರೂ, ಶಾಲಾಮಕ್ಕಳ ಕಟಿಂಗ್, ಊರಿನ ಗಂಡಸರ ಕ್ಷೌರ ಮಾಡುತ್ತಿದ್ದದ್ದು ಮಾತ್ರ ಉಗ್ರಪ್ಪನೆ. ಅದಕ್ಕೆ ಪ್ರತಿಯಾಗಿ ತಿಂಗಳಿಗೊಮ್ಮೆ ಹಣ ಕೊಡುವುದರ ಜೊತೆಗೆ ಕಣದಲ್ಲಿ ಬೆಳೆ ಪೂಜೆ ಆದಮೇಲೆ ಇಂತಿಷ್ಟು ಎಂದು ಊರ ಜನ ಪಡಿಯಲ್ಲಿ ಧಾನ್ಯ ಅಳೆದು ಕೊಡುತ್ತಿದ್ದರು. ಎಂದಿನಂತೆ ಈ ಭಾನುವಾರವೂ ಉಗ್ರಪ್ಪ ಬಂದಿದ್ದ. ಉಗ್ರಪ್ಪನೆಂದರೆ, ಅವನ ಹಡಪ ಇರುವ ಜೋಳಿಗೆ ಎಂದರೆ ನವೀನನಿಗೆ ವ್ಯಾಮೋಹ ತುಂಬಿದ ಕುತೂಹಲ. ಮಟ್ಟಸವಾದ ಎತ್ತರ, ಕಪ್ಪು ಬಿಳಿ ಗುಂಗುರು ಕೂದಲು, ಉಬ್ಬಿದ್ದ ಕೆನ್ನೆಗಳು, ಉಬ್ಬಿದ್ದ ಕಣ್ಣುಗಳು, ಮುಂದೆ ಚಾಚಿದ್ದ ದಪ್ಪ ಕೆಳದುಟಿ, ಯಾವಾಗಲೂ ತಾಂಬೂಲ ಹಾಕಿರುತ್ತಿದ್ದ ಉಗ್ರಪ್ಪ ಬಂದವನೇ ತನ್ನ ಹಡಪ ತೆಗೆದು ಪಕ್ಕಕ್ಕಿಟ್ಟು, ಮೊದಲು ಅದರಿಂದ ಒಂದು ಮರದ ತುಂಡು ತೆಗೆದಿಟ್ಟು ಅದರ ಮೇಲೆ ಕೂರುತ್ತಿದ್ದ. ಆಮೇಲೆ ಒಂದು ಮಣುಕು ಹಿಡಿದ ವೆಲ್ವೆಟ್ ಬಟ್ಟೆ ಹಾಸಿ ಸಾಣೆ ಕಲ್ಲು, ಮಡಿಸುವ ಕ್ಷೌರದ ಕತ್ತಿ, ತುಂಡು ಸೋಪು, ನೀರು ಹಾಕಲು ಒಂದು ಬೋಸಿ, ಕನ್ನಡಿ ಒಂದೊಂದಾಗಿ ತೆಗೆದು, ಹೆಗಲ ಮೇಲಿನ ವಲ್ಲಿಯಿಂದ ಒರೆಸಿ, ಜೋಡಿಸಿ, ಒಮ್ಮೆ ಮುಟ್ಟಿ ಕಣ್ಣಿಗೊತ್ತಿಕೊಳ್ಳುತ್ತಿದ್ದ. ಅಷ್ಟರಲ್ಲಿ ಬಚ್ಚಲು ಮನೆಯಿಂದ ಬಿಸಿನೀರು ತಂದು ಬೋಸಿಗೆ ಸೋಕದಂತೆ ಸುರಿಯುವುದು ನವೀನನ ಕೆಲಸ. ತಿಂಗಳಿಗೊಮ್ಮೆ ಅವನೂ ಅಜ್ಜಯ್ಯನ ಪಕ್ಕ ಕೂತು ಕ್ರಾಪು ಕೆತ್ತಿಸಿಕೊಳ್ಳುತ್ತಿದ್ದ.

ಉಗ್ರಪ್ಪನಿಗೂ, ಅಜ್ಜಯ್ಯನಿಗೂ ಒಂದು ವಿಚಿತ್ರ ಸಂಬಂಧವಿದೆ ಎನ್ನುವುದು ನೋಡಿದವರಿಗೆಲ್ಲಾ ಗೊತ್ತಾಗುತ್ತಿತ್ತು. ಎಷ್ಟೋ ಭಾನುವಾರಗಳು ಜೊತೆಯಲ್ಲಿ ಕಳೆದ ಅವರ ನಡುವೆ ಒಂದು ಅವರ್ಣನೀಯ ಸ್ನೇಹ ಬೆಳೆದಿತ್ತು. ಏನೇ ಕೊಟ್ಟರೂ ಸಮಾಧಾನವಾಗದ ಚಿಕ್ಕ ಬೀಗರ ಬಗ್ಗೆ ಅಜ್ಜಯ್ಯ ಮಾತನಾಡಿದರೆ, ಕೈಬಿಟ್ಟೇ ಹೋಗಿರುವ ಮಗನ ಬಗ್ಗೆ ಉಗ್ರಪ್ಪ ಹೇಳಿಕೊಳ್ಳುತ್ತಿದ್ದ. ಒಮ್ಮೆಯಂತೂ ತನ್ನ ಮೇಲೇ ಕೈಮಾಡಿದ್ದ ಎಂದು ಉಗ್ರಪ್ಪ ನೊಂದುಕೊಂಡ ದಿನ ಅಜ್ಜಯ್ಯನೂ ಅವನೊಂದಿಗೆ ನಿಟ್ಟುಸಿರಿಟ್ಟಿದ್ದರು. ನಾರಾಯಣ ಪೂರ್ತಿ ಹಾದಿ ಬಿಟ್ಟಿದ್ದ. ಕುಲಕಸುಬು ಬೇಡ, ಓದಿ ಆಫೀಸರಾಗಲಿ ಎಂದು ಉಗ್ರಪ್ಪ ಶಾಲೆಗೆ ಸೇರಿಸಿದರೆ, ಹೈಸ್ಕೂಲಿನಲ್ಲೇ ಬೀಡಿ ಹೊಡೆಯುತ್ತಿದ್ದ. ಯಾವುದೋ ಮೇಷ್ಟರು ಬೈದರು ಎಂದು ಸಂಜೆ ಅವರು ಹೋಗುತ್ತಿರುವಾಗ ಹಿಂದಿನಿಂದ ಕಲ್ಲು ಬೀಸಿ ಹೊಡೆದು ಅವರ ತಲೆ ತೂತಾಗಿ, ಅವನನ್ನು ಶಾಲೆಯಿಂದ ಓಡಿಸಿದ್ದರು. ಅವನಿಗೆ ಅಪ್ಪನ ಕೆಲಸ ಕಲಿಯುವ ಇಷ್ಟವಾಗಲಿ, ದುಡಿಯಬೇಕು ಎನ್ನುವ ಆಸೆಯಾಗಲೀ ಇರಲೇ ಇಲ್ಲ. ಅಪ್ಪನ ಹತ್ತಿರ ಜಗಳವಾಡಿ, ಅಮ್ಮನ ಹತ್ತಿರ ರೋಪು ಹಾಕಿ ಹೇಗೋ ತನ್ನ ಚಟಗಳಿಗೆ ಕಾಸು ಹೊಂಚಿಕೊಳ್ಳುತ್ತಿದ್ದ.

ಅಜ್ಜಯ್ಯನದು ಇನ್ನೊಂದು ರೀತಿ ಸಂಕಟ. ಮಗ ಓದಲೆಂದು ಬೆಂಗಳೂರಿಗೆ ಹೋದವನು ಹಳ್ಳಿಯ ಕಳ್ಳುಬಳ್ಳಿಯನ್ನೇ ಕತ್ತರಿಸಿಕೊಂಡಿರುವುದು ಅವರ ಸಂಕಟಕ್ಕೆ ಕಾರಣವಾಗಿತ್ತು. ಕಣ ಕಟ್ಟುವ ದಿನ ಸಹ ಬೆಂಗಳೂರಿನಿಂದ ಬರದ ಮಗನ ಬಗ್ಗೆ ಅಜ್ಜ ಬೇಸರ ಮಾಡಿಕೊಳ್ಳುತ್ತಿದ್ದರೆ, ’ಪಾಪ ಓದೋ ಹುಡುಗ, ನೆನೆಸ್ಕಂಡಾಗ ಬರಕ್ಕಾಗ್ತೈತಾ’ ಎಂದು ಉಗ್ರಪ್ಪ ಸಮಾಧಾನದ ಮಾತುಗಳನ್ನಾಡುತ್ತಿದ್ದ. ಭಾನುವಾರಗಳಂದು ಕುಳಿತು ಅವರು ಜೀವನದ ಕಷ್ಟ ಸುಖಗಳನ್ನೆಲ್ಲಾ ಹಂಚಿಕೊಳ್ಳುತ್ತಿದ್ದರು. ಅವರಲ್ಲಿದ್ದ ಸಮಾನಸಂಕಟ ಅವರ ನಡುವೆ ಒಂದು ಸ್ನೇಹವನ್ನೂ ಹುಟ್ಟುಹಾಕಿತ್ತು. ಹಾಗೆ ನೋಡಿದರೆ ಅವರಿಬ್ಬರ ಬಂಧವನ್ನೂ ಗಟ್ಟಿ ಮಾಡಿದ್ದು ಒಂದು ಚೇಳು. ಅಜ್ಜಯ್ಯ ವರ್ಷಕ್ಕೊಮ್ಮೆ ಎಲ್ಲಿಂದಲೋ ಚೇಳಿನ ಮಾತ್ರೆಗಳನ್ನು ತರುತ್ತಿದ್ದ. ತೇದ ಗಂಧದಲ್ಲಿ ಈ ಮಾತ್ರೆ ಅರೆದು, ಚೇಳು ಕಚ್ಚಿದ ಕಡೆ ಹಚ್ಚಿದರೆ ನಿಮಿಷಗಳಲ್ಲಿ ಉರಿ ತಗ್ಗುತ್ತಿತ್ತು. ಸುತ್ತಮುತ್ತ ಹಳ್ಳಿಗಳಲ್ಲಿ ಯಾರಿಗೇ ಚೇಳು ಕಚ್ಚಿದರೂ, ಸಮಯಾಸಮಯದ ಯೋಚನೆ ಮಾಡದೆ ಅಜ್ಜಯ್ಯನ ಮನೆ ಬಾಗಿಲು ತಟ್ಟುತ್ತಿದ್ದರು. ಅಜ್ಜಯ್ಯ ಕೂಡಾ ಒಂದಿಷ್ಟೂ ಬೇಸರಿಸದೆ, ಅವರಿಗೆ ಮಾತ್ರೆ ಕೊಟ್ಟು, ಪಥ್ಯ ಹೇಳಿ ಕಳಿಸುತ್ತಿದ್ದರು. ಅದಕ್ಕೆ ಯಾರಿಂದಲೂ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಅದಕ್ಕೆಲ್ಲಾ ಹಣ ಕೊಡಬೇಕು ಎನ್ನುವುದು ಯಾರಿಗೂ ತಲೆಗೇ ಬರುತ್ತಿರಲಿಲ್ಲ ಎಂದರೂ ಸರಿಯೇ. ಸಹಾಯ ಬೇಕಾದಾಗ ಯಾವುದೇ ವೇಳೆಯಲ್ಲಾಗಲಿ ಕೇಳುವುದು ತಮ್ಮ ಹಕ್ಕು ಮತ್ತು ಯಾರೇ ಹಾಗೆ ತಮ್ಮನ್ನು ನೆರವು ಕೇಳಿದರೆ ಹೋಗುವುದು ತಮ್ಮ ಕರ್ತವ್ಯ ಎಂದೇ ಆಗ ಹಳ್ಳಿಯಲ್ಲಿನ ಸಾಮಾನ್ಯ ತಿಳುವಳಿಕೆ.

ಹತ್ತು ವರ್ಷಗಳ ಹಿಂದೆ ಯಾವಾಗಲೋ ನಡುರಾತ್ರಿ ಉಗ್ರಪ್ಪ ಸಹ ಹೀಗೇ ಬಂದು ಬಾಗಿಲು ತಟ್ಟಿದ್ದ, ಅವನ ಹೆಂಡತಿ ರಾತ್ರಿ ಬಯಲ ಕಡೆ ಹೋಗಿದ್ದಾಗ ಚೇಳು ಕಚ್ಚಿಬಿಟ್ಟಿತ್ತು. ಅಜ್ಜಯ್ಯ ಕೊಟ್ಟ ಮಾತ್ರೆ ಕೈಯಲ್ಲಿ ಹಿಡಿದವನು ಕಾಲು ನೆಲಕ್ಕೆ ಕೀಲಿಸಿದಂತೆ ನಿಂತೇ ಇದ್ದ. ಆಮೇಲೆ ನಿಧಾನವಾಗಿ ‘ಗಂಧದ ತುಂಡು...’ ಎಂದು ತಡವರಿಸಿದ. ಇನ್ನೊಂದು ಮಾತನಾಡದೆ ಅಜ್ಜ ದೇವರ ಗೂಡಿನಲ್ಲಿದ್ದ ಗಂಧದ ಕೊರಡು ತಂದು ಅವನ ಕೈಗಿಟ್ಟಿದ್ದರು. ‘ದೇವರ ಗೂಡಲ್ಲಿದ್ದದ್ದು, ಬೆಳಗ್ಗೆ ಸ್ನಾನ ಆದ ಮೇಲೆ ವಿಭೂತಿ ಮಧ್ಯ ಇಟ್ಕೊಳೋಕೆ ಗಂಧ ಬೇಡವಾ’ ಎಂದು ಅಜ್ಜಿ ಗೊಣಗುಟ್ಟಿದಾಗ, ಅಂದೂ ಸಹ ‘ಶಿವಾರ್ಪಣ’ ಎಂದು ಕೈ ಮುಗಿದಿದ್ದರು. ಅಂದಿನಿಂದ ಪ್ರತಿ ಭಾನುವಾರ ಉಗ್ರಪ್ಪ ಮೊದಲು ಅಜ್ಜಯ್ಯನ ಮನೆಗೇ ಬಂದು, ನಂತರ ಹಳ್ಳಿಯ ಬೇರೆ ಮನೆಗಳಿಗೆ ಹೋಗುವುದು ವಾಡಿಕೆ.

ಉಗ್ರಪ್ಪ ಸೋಪಿಗೆ ನೀರು ಹನಿಸಿ, ಬ್ರಷ್‌‍ನಿಂದ ಉಜ್ಜಲು ಶುರು ಮಾಡಿದನೆಂದರೆ, ಆ ಸ್ ಸ್ ಸ್ ಸದ್ದಿಗೆ ಅಜ್ಜ ನಿಧಾನವಾಗಿ ಕಣ್ಣು ಮುಚ್ಚಿಕೊಳ್ಳುತ್ತಿದ್ದರು. ನೀರನ್ನು ತೆಗೆದುಕೊಂಡು ಅಜ್ಜಯ್ಯನ ಮುಖಕ್ಕೆ ಹನಿಸಿದ ಉಗ್ರಪ್ಪ ಆಮೇಲೆ ಎಡ ಕೆನ್ನೆಯಿಂದ ಶುರು ಮಾಡಿ ಬ್ರಶ್ ಅನ್ನು ವೃತ್ತಾಕಾರವಾಗಿ ತಿರುಗಿಸುತ್ತಿದ್ದ. ಅದರ ಚಲನೆಗೆ ಅನುಸಾರವಾಗಿ ನವೀನ ಕೂತಲ್ಲೇ ತೂಗುತ್ತಿದ್ದ. ಕೆನ್ನೆಯೆಲ್ಲಾ ನೊರೆ ಬೆಳ್ಳಗಾಗಿ, ಅಜ್ಜನ ಮುಖವನ್ನು ಒಂದು ದಿವ್ಯವಾದ ಮಂದಹಾಸ ಆವರಿಸುತ್ತಿತ್ತು. ಮುಖದ ಪೂರಾ ಸೋಪು ಹಚ್ಚಿದ ಮೇಲೆ ಉಗ್ರಪ್ಪ ಕತ್ತಿ ತೆಗೆದು, ಸಾಣೆಕಲ್ಲಿನ ಮೇಲೆ ಒಂದೆರಡು ಸಲ ಕಸ್ ಕಸ್, ಕಸ್ ಕಸ್ ಎಂದು ಓಡಿಸಿ, ಎಡಕೈ ಬೆರಳುಗಳನ್ನು ಅಜ್ಜಯ್ಯನ ಕೆನ್ನೆಯ ಮೇಲೆ ಊರಿ, ಹೆಬ್ಬೆರಳನ್ನು ಕೆನ್ನೆಯ ಕೆಳಭಾಗದಲ್ಲಿಟ್ಟು, ಸುಕ್ಕಾದ ಚರ್ಮವನ್ನು ಎಳೆದು ಬಿಗಿಮಾಡಿ, ಬಲಗೈಯಿಂದ ಲೇಸಾಗಿ ಗಡ್ಡ ಹೆರೆಯುತ್ತಿದ್ದ. ಬಂದ ಸೋಪು, ಕೂದಲನ್ನು ಎಡ ಮುಂಗೈ ಮೇಲೆ ಒರೆಸಿಕೊಂಡು ಮತ್ತೆ ಮುಖದ ಮೇಲೆ ಕತ್ತಿ. ನಿಧಾನಕ್ಕೆ ಮುಖವನ್ನು ನಯವಾಗಿ ಸಾಫುಗೊಳಿಸಿದನೆಂದರೆ ಇನ್ನೊಂದು ವಾರ ಅಜ್ಜಯ್ಯನ ಮುಖ ಮಿರಮಿರ. ಮುಖದ ನಂತರ ಅಜ್ಜಯ್ಯ ತೋಳು ಎತ್ತುತ್ತಿದ್ದರು, ಕಂಕುಳ ಕೂದಲು ಸಹ ಹೀಗೆ ನೀಟಾಗಿ ಹೆರೆಯಲ್ಪಡುತ್ತಿತ್ತು.

ಎರಡು ಮೂರು ತಿಂಗಳಿಗೊಮ್ಮೆ, ಮುಕ್ಕಾಲು ಬೋಳಾಗಿದ್ದ ಅಜ್ಜನ ತಲೆಗೂದಲ ತುದಿ ಕತ್ತರಿಸುವ ಶಾಸ್ತ್ರವೂ ನಡೆಯುತ್ತಿತ್ತು. ಎಲ್ಲಾ ಮುಗಿದ ಮೇಲೆ ಉಗ್ರಪ್ಪ, ಮಣುಕು ಕನ್ನಡಿ ತೆಗೆದು ಅಜ್ಜನ ಮುಖಕ್ಕೆ ಹಿಡಿಯುತ್ತಿದ್ದ. ಇದು ಪ್ರತಿವಾರದ ಕ್ರಿಯೆಯೆ ಆಗಿದ್ದರೂ ಅಜ್ಜ, ಕನ್ನಡಿ ನೋಡಿ, ಸಮಾಧಾನದಿಂದ ತಲೆ ಆಡಿಸಿದ ಮೇಲೆಯೇ ಉಗ್ರಪ್ಪನ ಮುಖ ನಿರಾಳವಾಗುತ್ತಿದ್ದದ್ದು. ಪ್ರತಿವಾರ ನೋಡಿದರೂ ನವೀನನಿಗೆ ಇದರ ಬಗ್ಗೆ ಮೋಹ ತೀರುತ್ತಿರಲಿಲ್ಲ. ತನಗೆ ಯಾವಾಗ ಗಡ್ಡಮೀಸೆ ಬರುವುದೋ ಎಂದು ಪ್ರತಿ ದಿನ ಕನ್ನಡಿ ಮುಂದೆ ಹತ್ತಾರು ನಿಮಿಷ ನಿಂತು ಈಕಡೆ, ಆ ಕಡೆ ತಿರುಗಿ ನೋಡಿನೋಡಿ ನಿರಾಶನಾಗುತ್ತಿದ್ದ. ಇಂದೂ ಸಹ ಉಗ್ರಪ್ಪ ಬಂದ ಸುದ್ದಿ ಕೇಳಿ, ಚಂಗನೆ ಜಿಗಿದು, ಜಗಲಿಗೆ ಓಡಿ ಕಟ್ಟೆ ಏರಿ ಕೂತುಬಿಟ್ಟ. ಉಗ್ರಪ್ಪ ಸಿದ್ಧನಾಗಿ ಕೂತು 3–4 ನಿಮಿಷಗಳಾದರೂ ಅಜ್ಜಯ್ಯನ ಸುಳಿವಿಲ್ಲ. ಒಳೆಗೇನೋ ಗುಸುಗುಸು ನಡೆಯುತ್ತಿತ್ತು. ಕಡೆಗೆ ಆನಂದ ಬಂದು, ‘ಅಣ್ಣ ಇವತ್ತು ಕ್ಷೌರ ಬೇಡ ಅಂದ್ರು ಉಗ್ರಪ್ಪ’ ಅಂದ. ಉಗ್ರಪ್ಪನ ಮುಖ ಮಂಕಾಯಿತು. ನಿಟ್ಟುಸಿರು ಬಿಟ್ಟ. ಇನ್ನೊಂದು ಮಾತನಾಡದೆ ಒಂದೊಂದಾಗಿ ಸೋಪು, ಕತ್ತಿಗಳನ್ನು ಹಡಪದೊಳಗೆ ಜೋಡಿಸಿಕೊಂಡು ಎದ್ದು ನಿಂತ. ನವೀನನಿಗೆ ಅಜ್ಜ ಯಾಕೆ ಬರಲಿಲ್ಲ ಅನ್ನಿಸಿ ಒಳಗೆ ಓಡಿದ. ಅಜ್ಜ ನೀರೊಲೆ ಬೆಂಕಿ ಮುಂದೆ ಹಾಗೇ ಕೂತಿದ್ದರು. ‘ಊರಗೌಡನ ಮೇಲೆ ಸಿಟ್ಟು ಮಾಡಿಕೊಂಡು, ಕೆರೆಲಿ ತೊಳಕಳಲ್ಲ ಅಂದ್ರಂತೆ ಯಾರೋ. ಈ ವಾರ ಸರಿ ಮುಂದಿನವಾರ, ಮುಂದಿನ ತಿಂಗಳು?’ ಅಜ್ಜಿ ಗೊಣಗುತ್ತಿದ್ದರು. ಆನಂದ ‘ಅಣ್ಣಾ ನನ್ ಜೊತೆ ಟೌನ್ ಗೆ ಬಾರಣ್ಣ, ಅಲ್ಲೇ ಕಟಿಂಗ್, ಶೇವಿಂಗ್ ಮಾಡಿಸ್ಕೋ’ ಅಂದ. ಅಜ್ಜಯ್ಯ ಮಾತೇ ಇಲ್ಲದೆ ಕುಳಿತಿದ್ದರು. ನೀರೊಲೆಯ ಬೆಂಕಿಯ ದಗೆ ಅವರನ್ನು ಆವರಿಸಿದಂತೆ ಅವರ ಮುಖ ಹಿಂಡಿತ್ತು. ಉಗ್ರಪ್ಪ ಮಗನನ್ನು ಕಳಿಸಿಲ್ಲ ಎಂದು ಅವರಿಗೂ ಗೊತ್ತು, ನಾರಾಯಣ ಅಪ್ಪನ ಮಾತು ಕೇಳುವ ಮಗನಲ್ಲ. ಹಂಡೆ ಹೋಗಿದ್ದಕ್ಕೆ ಅವರಿಗೆ ಅಷ್ಟು ಬೇಸರವಾಗಿರಲಿಲ್ಲ. ಆದರೆ ಮನೆಮುಂದೆ ಅಷ್ಟು ಪಂಚಾಯತಿ ನಡೆಯುತ್ತಿದ್ದಾಗ ಉಗ್ರಪ್ಪ ಬಂದು ನಿಜ ಹೇಳಲಿಲ್ಲ ಎನ್ನುವ ಸಂಕಟ ಅವರನ್ನು ಕೊರೆಯುತ್ತಿತ್ತು. ಉಗ್ರಪ್ಪನ ಎದುರಿಗೆ ಹೋದರೆ ಮೊದಲಿನಂತೆ ಅವನ ಜೊತೆ ಮಾತನಾಡಲಾರೆ. ಅದು ಅವನಿಗೂ ಗೊತ್ತಾಗಿ ಬಿಡುತ್ತದೆ. ಅಷ್ಟು ನಿಮಿಷಗಳು ಹಾಗೆ ಶತೃವಿನ ಮುಂದೆ ಕೂತಂತೆ ಕೂರುವುದು ಹೇಗೆ ಎನ್ನುವುದೇ ಅವರಿಗೆ ಅರ್ಥವಾಗದೆ, ಕಡೆಗೆ ಗಡ್ಡ ಮಾಡಿಸಿಕೊಳ್ಳುವುದೇ ಬೇಡ ಎಂದು ನಿರ್ಧಾರ ಮಾಡಿಬಿಟ್ಟಿದ್ದರು.

ಅಂದಿನಿಂದ ಇದು ಪ್ರತಿ ಭಾನುವಾರದ ಕಥೆ ಆಯಿತು. ಪ್ರತಿ ಸಲ ಕ್ರಮ ತಪ್ಪದೆ ಉಗ್ರಪ್ಪ ಬಂದು, ಜಗಲಿ ಮೇಲೆ ಕೂತು, ಹಡಪ ತೆಗೆದು ಜೋಡಿಸುತ್ತಿದ್ದ. ಸ್ವಲ್ಪ ಹೊತ್ತು ಕೂತಿದ್ದು ಒಂದಿಷ್ಟೂ ಮನಸ್ಸು ಕೆಡಿಸಿಕೊಳ್ಳದೆ ಎದ್ದು ಹೋಗುತ್ತಿದ್ದ. ಅವನು ಮಾತ್ರ ಕ್ರಮ ತಪ್ಪಿಸಲೇ ಇಲ್ಲ. ಆದರೆ ನಿಜಕ್ಕೂ ಕಂಗಾಲಾಗುತ್ತಿದ್ದವರೆಂದರೆ ಅಜ್ಜಯ್ಯ. ಶನಿವಾರ ಆಯಿತು ಎಂದರೆ ಸಾಕು ಅವರು ವಿಚಲಿತರಾಗುತ್ತಿದ್ದರು. ಕೂತಲ್ಲೇ ಕೂತುಬಿಡುತ್ತಿದ್ದರು. ರಾತ್ರಿ ಎಷ್ಟೋ ಹೊತ್ತು ಹೊರಳಾಡುತ್ತಾ ಕಳೆದರೆ, ಭಾನುವಾರ ಮುಂಜಾನೆ ಊರಿಗೆ ಮೊದಲು ಎಚ್ಚರಾಗುವರು. ತಲೆಬಾಗಿಲು ದಾಟಿ ಹೊರಹೋಗಲು ಅಂಜಿದಂತೆ, ಸೂರ್ಯ ಆಳೆತ್ತರ ಬಂದರೂ ಹೊರಗೆ ಹೋಗದೆ ಅಡಿಗೆ ಮನೆ, ಬಚ್ಚಲ ಮನೆಯ ನಡುವಿನ ನಡುವೆ ಮನೆಯಲ್ಲಿ ಕೂತುಬಿಡುವರು. ಬೀದಿಬಾಗಿಲ ಕಡೆ ಸಣ್ಣ ಸದ್ದಾದರೂ ಬೆಚ್ಚಿಬೀಳುವರು. ಮನೆಯವರಿಗೆಲ್ಲಾ ಮೊದಲು ತಮಾಷೆ ಅನ್ನಿಸಿದ ವಿಷಯ ದಿನಗಳೆದಂತೆ ಗಂಭೀರವಾಗುತ್ತಾ ಹೋಯಿತು. ಅಲ್ಲದೆ ಕತ್ತರಿಸದ ತಲೆಗೂದಲು, ಬೆಳೆದ ಗಡ್ಡದಿಂದ ಅಜ್ಜಯ್ಯ ಸೊರಗಿದಂತೆ ಕಾಣತೊಡಗಿದರು.

ಟೌನ್‌‍ನಲ್ಲಿರುವ ಕಟಿಂಗ್ ಶಾಪ್‌‍ಗೆ ಹೋಗೋಣ ಎಂದು ಬಲವಂತ ಮಾಡಿದ ಆನಂದನ ಮೇಲೆ ಸಿಕ್ಕಾಪಟ್ಟೆ ಕೂಗಾಡಿದ ಮೇಲೆ ಅವನು ಆ ವಿಷಯ ಮಾತನಾಡುವುದನ್ನೇ ಬಿಟ್ಟ. ಅಜ್ಜಿ ಎಷ್ಟೋ ಹೇಳಿ ನೋಡಿದರು, ‘ಒಂದು ಹಂಡೆಗಾಗಿ ಇಷ್ಟೆಲ್ಲಾ ಹಟ ಮಾಡಬೇಕಾ’ ಎಂದಾಗ, ತಲೆ ಆಡಿಸಿದ ಅಜ್ಜ, ‘ಹಂಡೆ ಅಲ್ಲ...’ ಎಂದು ತೊದಲಿ, ಮುಂದೇನು ಹೇಳುತ್ತಾರೆ ಎಂದು ಕಾದು ನೋಡುತ್ತಿದ್ದ ಅಜ್ಜಿ ಅಲ್ಲಿ ಇಲ್ಲವೇ ಇಲ್ಲ ಎನ್ನುವಂತೆ, ತಾನು ಮಾತಾಡಿದ್ದೇ ಸುಳ್ಳು ಎನ್ನುವಂತೆ ಸುಮ್ಮನೆ ಕುಳಿತುಬಿಟ್ಟರು. ದಿನಕಳೆದಂತೆ ಜುಟ್ಟು, ಗಡ್ಡ ಬಿಟ್ಟು ಹೊರಗೆ ಹೋಗುವುದಕ್ಕೇ ಮುಜುಗರ ಎನ್ನುವಂತೆ ಅಜ್ಜಯ್ಯ ಹೊಲದ ಕಡೆ, ಅಂಗಡಿ ಕಡೆ ಹೋಗುವುದನ್ನೇ ಬಿಟ್ಟುಬಿಟ್ಟರು. ಯಾರಾದರೂ ಸಿಕ್ಕಿ ಯಾಕೆ ಗಡ್ಡ ಬಿಟ್ಟಿದ್ದೀರಿ ಎಂದರೆ ಏನು ಹೇಳುವುದು ಎನ್ನುವುದೇ ಅವರ ಚಿಂತೆಯಾಗಿ ಹೋಗಿತ್ತು.

ಒಮ್ಮೆ ಹಾಗೇ ಕೂತಿದ್ದಾಗ ಯಾರೋ ಬಂದು ತಲೆಬಾಗಿಲ ಬಳಿನಿಂತು ಕರೆದರು. ಅಜ್ಜಯ್ಯ ಅಲ್ಲಾಡಲಿಲ್ಲ. ಸ್ವಲ್ಪ ಹೊತ್ತು ನೋಡಿ, ಅಜ್ಜಿಯೇ ಒಳಗಿನಿಂದ ಬಂದು ವಿಚಾರಿಸಿದರು. ಅವರ ಬಳಿ ಮಾತನಾಡಿದ ಅಜ್ಜಿ, ಒಂದು ನಿಮಿಷ ಯೋಚಿಸಿ, ‘ನೀವು ಹೋಗಿ, ಅವರೇ ಬರುತ್ತಾರೆ’ ಎಂದು ಅವರನ್ನು ಕಳಿಸಿಬಂದು ಅಜ್ಜಯ್ಯನ ಎದುರಿಗೆ ನಿಂತರು. ಅಜ್ಜಯ್ಯ ತಲೆಯನ್ನೂ ಎತ್ತಲಿಲ್ಲ. ‘ಕೆರೆ ಏರಿ ಹತ್ರ ಉಗ್ರಪ್ಪಂಗೆ ಚೇಳು ಕಡಿದಿದೆಯಂತೆ. ಉರಿಉರಿ ಅಂತ ಒದ್ದಾಡುತ್ತಾ ಇದ್ದಾನಂತೆ...’. ಅಜ್ಜನ ನೋಟ ಚೂಪಾಯಿತು, ಆದರೆ ಘಟ ಒಂದಿಷ್ಟೂ ಕದಲಲಿಲ್ಲ. ‘ಔಷಧ ಮನೇಲಿಟ್ಕೊಂಡು ಬೇಕಾದವರಿಗೆ ಕೊಡದೆ ಇದ್ದರೆ ಪ್ರಾಣ ತೆಗೆದಷ್ಟು ಪಾಪ’ ಅಜ್ಜಿಯ ಮಾತು ಅಜ್ಜನ ಮೌನವನ್ನು ಸೂಜಿಯಂತೆ ಚುಚ್ಚಿತು. ಒಂದೈದು ನಿಮಿಷ ತಲೆತಗ್ಗಿಸಿ ಕೂತಿದ್ದವರು ಎದ್ದು ಬನಿಯನ್ನಿನ ಅಡ್ಡಜೇಬಿನಿಂದ ಅಲಮಾರಿನ ಬೀಗದ ಕೈ ತೆಗೆದುಕೊಂಡು ಬೀಗ ತೆಗೆದರು. ಕೈಯಲ್ಲಿ ಗುಳಿಗೆ ಹಿಡಿದುಕೊಂಡು ಬಂದು ಅಜ್ಜಿಯ ಕಡೆ ಚಾಚಿ, ‘ಗಂಧದ ಜೊತೆ ತೇದು...’ ಎಂದು ಶುರು ಮಾಡುತ್ತಿದ್ದಂತೆ ಅಜ್ಜಿ, ‘ಔಷಧ ಕೇಳಕ್ಕೆ ಬಂದಿರೋರು ನೀವು ಇಷ್ಟೊತ್ತು ಮಾಡಿದರೆ ನಿಂತೇ ಇರ್ತಾರಾ, ಹೋಗಾಯ್ತು. ಪಾಪ ಆಯಪ್ಪ ಎಷ್ಟು ಒದ್ದಾಡ್ತಾ ಇದಾನೋ ಏನೋ. ಒಂದೆಜ್ಜೆ ಹೋಗಿ ಕೊಟ್ಬನ್ನಿ’, ಎಂದರು. ಅಜ್ಜಯ್ಯ ನವೀನನ ಕಡೆ ತಿರುಗಿದರು, ‘ಸ್ಸರಿ ನೀವೊಂದು ಹೇಳಿ, ಅವನೊಂದು ಹೇಳಿ ಒಂದು ನಾಲ್ಕಾದಾತು. ಕೆರೆ ಏರಿ ಏನು ಊರಲ್ಲದ ಊರಲ್ಲಿ ಇದೆಯಾ’ ಎಂದು ಅಜ್ಜಿ ಅಜ್ಜಯ್ಯನ ಎಲ್ಲಾ ಚಾಲ್‌ಗಳನ್ನೂ ಒಂದೊಂದಾಗಿ ಚಿತ್ತಾಗಿಸಿದರು. ಕೈಯಲ್ಲಿ ಮಾತ್ರೆ ಹಿಡಿದ ಅಜ್ಜಯ್ಯ, ಎದುರಿಗೆ ನಿಂತು, ಸೊಂಟದ ಮೇಲೆ ಎಡಗೈ ಇಟ್ಟುಕೊಂಡ ಅಜ್ಜಿ ನಿಂತೇ ಇದ್ದರು. ಗಡಿಯಾರದಿಂದ ಕಾಲವೆನ್ನುವ ಕಾಲ ಹನಿಹನಿಯಾಗಿ ಕರಗಿ ಬೀಳುತ್ತಲೇ ಇತ್ತು. ಕಡೆಗೆ ಅಜ್ಜಯ್ಯ ನಿಧಾನವಾಗಿ ಗೋಡೆಯ ಮೊಳೆಕಟ್ಟಿನ ಕಡೆ ನಡೆದರು. ಜುಬ್ಬ ತೆಗೆದು ಹಾಕಿಕೊಂಡರು, ಬಿಕ್ಕರೆದಿದ್ದ ಕೂದಲನ್ನು ಗಂಟು ಹಾಕಿಕೊಂಡವರೇ, ಜಗುಲಿಯಾಚೆಗೆ ಬಿಟ್ಟಿದ್ದ ಚಪ್ಪಲಿ ಮೆಟ್ಟಿಕೊಂಡು ನಡೆಯಲಾರಂಭಿಸಿದರು.

ಮುಂದಿನ ಭಾನುವಾರ ಬಂತು. ಹಜಾರದಲ್ಲಿ ಮೂಟೆಗಳ ಹಿಂದೆ ಇಟ್ಟಿದ್ದ ಜೀರುಂಡೆ ಇದ್ದ ಬೆಂಕಿಪೊಟ್ಟಣವನ್ನು ನವೀನ ಮೆಲ್ಲಗೆ ಹೊರತೆಗೆಯುತ್ತಿದ್ದ. ಅಜ್ಜಯ್ಯ ಹಜಾರದಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದರು. ಅಜ್ಜಿ ಮುಖದಲ್ಲಿ ಒಂದು ನಗುವಿನ ಚಿಟ್ಟೆ ಅಡಗಿಸಿಟ್ಟುಕೊಂಡಂತೆ, ಕೆನ್ನೆ ಉಬ್ಬಿಸಿಕೊಂಡು, ಕಣ್ಣು ಮಿನುಗಿಸುತ್ತಾ ಕಾಫಿ ತಂದು ಕೊಟ್ಟರು. ಜಗಲಿಯಲ್ಲಿ ಸದ್ದಾಯಿತು, ‘ಓಹ್ ಉಗ್ರಪ್ಪ ಬಂದಿರಬೇಕು, ಅಜ್ಜ ಈಗ ಒಳಗೆ ಹೋಗಿಬಿಡುತ್ತಾರೆ’ ಎಂದು ನವೀನ ಅಂದುಕೊಳ್ಳುವಷ್ಟರಲ್ಲಿ, ಅವಸರದಲ್ಲಿ ಕಾಫಿ ಮುಗಿಸಿ ಅಜ್ಜ ಹೊರಬಾಗಿಲ ಹೊಸಿಲು ದಾಟಿದರು. ನವೀನನಿಗೆ ಇಂದೇನೋ ದೊಡ್ಡ ವಿಸ್ಮಯ ಘಟಿಸುತ್ತದೆ ಅನ್ನಿಸಿಬಿಟ್ಟಿತು. ಜೀರುಂಡೆಯನ್ನು ಅದರ ಪಾಲಿಗೆ ಬಿಟ್ಟ ನವೀನ ಧಡಾರನೆ ಎದ್ದ, ಪಕ್ಕದಲ್ಲೇ ಇದ್ದ ಟೇಬಲ್ ಎಡತಲೆಗೆ ತಗುಲಿತು. ಮಾಮೂಲಿನಂತಾಗಿದ್ದರೆ ಇಷ್ಟಕ್ಕೆ ಮನೆಮಂದಿ ಎಲ್ಲಾ ಸೇರುವಂತೆ ಅರಚುತ್ತಿದ್ದವನು ಇಂದು ತಲೆ ಸವರಿಕೊಳ್ಳುತ್ತಲೇ ಹೊರಗೆ ಓಡಿದ. ಅಲ್ಲಿ ನೋಡುತ್ತಾನೆ, ಉಗ್ರಪ್ಪ, ಪಕ್ಕದಲ್ಲೇ ಅವನ ಸಾಮ್ರಾಜ್ಯ, ಎದುರಲ್ಲಿ ಅಜ್ಜಯ್ಯ!

ಅಚ್ಚುಕಟ್ಟಾಗಿ ಮಣೆ ಹಾಕಿಕೊಂಡು ಕೂತಿದ್ದಾರೆ. ನವೀನನಿಗೆ ಎಲ್ಲಾ ಅಯೋಮಯ, ಒಮ್ಮೆ ಅಜ್ಜನನ್ನ, ಒಮ್ಮೆ ಉಗ್ರಪ್ಪನನ್ನ ನೋಡುತ್ತಾ ನಿಂತೇ ಇದ್ದ. ಅಷ್ಟರಲ್ಲಿ ತನ್ನ ಕರ್ತವ್ಯ ನೆನಪಾಗಿ ಬಿಸಿನೀರು ತರಲು ಓಡಿದ. ನಡುಮನೆ ಬಾಗಿಲು ದಾಟಿ ಅಜ್ಜಿ ಬರುತ್ತಿದ್ದರು. ‘ಅಜ್ಜಿ...ಅಜ್ಜ..ಉಗ್ರಪ್ಪ..’ ಪೂರಾ ಉತ್ತೇಜಿತನಾಗಿ ಅಜ್ಜಿಗೆ ತಾನೇ ಮೊದಲು ವಿಷಯ ಹೇಳುವುದು ಎಂದು ಹೆಮ್ಮೆಯಿಂದ ಶುರು ಮಾಡಿದ್ದ ನವೀನ ಅಜ್ಜಿಯ ಕೈಯ್ಯಲ್ಲಿನ ಬಿಸಿನೀರ ತಂಬಿಗೆ ನೋಡಿ ಪೆಚ್ಚಾದ. ‘ನಿಮಗೆ ಹೆಂಗೆ ಗೊತ್ತು?’ ಅಂದ. ತಂಬಿಗೆ ಅವನ ಕೈಗಿಟ್ಟ ಅಜ್ಜಿ ‘ಕೊಟ್ಬಾ ಹೋಗು’ ಅಂದರು. ಹೊರಗೆ ಬಂದ ನವೀನ ಬೋಸಿಗೆ ನೀರು ಬಗ್ಗಿಸಿದವನೇ ತಂಬಿಗೆಯನ್ನು ಒಳಗಿಡಲೂ ಹೋಗದೆ ಕಟ್ಟೆ ಏರಿ ಕೂತ. ಅಜ್ಜ ನಿಧಾನವಾಗಿ ಕಣ್ಣು ಮುಚ್ಚಿಕೊಂಡು ಕೆನ್ನೆಯ ಮೇಲಿನ ಬಿಸಿನೀರಿನ ಸ್ಪರ್ಶಕ್ಕೆ ಕಾಯುತ್ತಾ ಕೂತರು. ಇನ್ನೇನು ಉಗ್ರಪ್ಪ ಬ್ರಶ್ ತೆಗೆಯುತಾನೆ ಎಂದು ನವೀನ ಕೂತ ಕಡೆಯೇ ತೂಗುತ್ತಾ ಆ ಕಡೆ ತಿರುಗಿದರೆ ಉಗ್ರಪ್ಪ ಸುಮ್ಮನೆ ಕೂತೇ ಇದ್ದ. ಒಂದೆರಡು ಕ್ಷಣ ಕಾದ ಅಜ್ಜಯ್ಯ ನಿಧಾನವಾಗಿ ಕಣ್ಣು ಬಿಟ್ಟರು. ಉಗ್ರಪ್ಪ ನಿಧಾನವಾಗಿ ತನ್ನ ಹಡಪ ತೆಗೆದ. ಅಲ್ಲಿ ಎಷ್ಟೋ ದಿನಗಳಿಂದ ಅಲ್ಲೇ ಇದ್ದು, ಮುದುರಿ ಸುಕ್ಕಾದ ಎರಡು ಐವತ್ತು ರೂ ಮತ್ತು ಒಂದು 20 ರೂಪಾಯಿ ನೋಟುಗಳಿದ್ದವು. ಅದನ್ನು ತೆಗೆದು ಅಜ್ಜಯ್ಯನ ಮಡಚಿದ ಎಡತೊಡೆಯ ಪಕ್ಕ ಇಟ್ಟ ಉಗ್ರಪ್ಪ ಕೈಕಟ್ಟಿಕೊಂಡು, ಉಸಿರಾಡುತ್ತಿದ್ದಾನೋ ಇಲ್ಲವೋ ಎನ್ನುವಂತೆ ಶಿಲೆಯಂತೆ ಕೂತು ಬಿಟ್ಟ. ನವೀನನಿಗೆ ಏನೆಂದರೆ ಏನೂ ಅರ್ಥವಾಗುತ್ತಿಲ್ಲ. ಅಜ್ಜಯ್ಯನ ಹುಬ್ಬ ಗಂಟಿಕ್ಕಿದೆ, ನಿಮಿಷಗಳೆನ್ನುವುದು ಭಾರವಾದಂತೆ ಗಂಟೆಯಂತೆ ತೆವಳಿತು. ನಿಧಾನವಾಗಿ ಅಜ್ಜನ ಹುಬ್ಬಿನ ಗಂಟುಗಳು ಸಡಿಲಾದವು. ನೋಟುಗಳನ್ನೆತ್ತಿಕೊಂಡು, ಬನಿಯನ್ನಿನ ಅಡ್ಡ ಜೇಬಿನಲ್ಲಿಟ್ಟುಕೊಂಡರು. ಮತ್ತೆ ಕಣ್ಣು ಮುಚ್ಚಿ ಕೂತರು. ಚಸ್, ಚಸ್ ಎಂದು ಕತ್ತಿ ಮಸೆತದ ಸದ್ದು. ಅಜ್ಜಯ್ಯನ ಮುಖ, ತಲೆಯ ಮೇಲಿದ್ದ ಹೊರೆ ಕಳಚಿ ಗುಪ್ಪೆಗುಪ್ಪೆಯಾಗಿ ಕೆಳಗುರುಳಿತು. ಮತ್ತೆ ಹಳೆಯ ಅಜ್ಜಯ್ಯ ದೊರಕಿದಂತೆ ಅವರ್ಣನೀಯ ಖುಷಿಯಲ್ಲಿ ನವೀನ ಕುಕ್ಕರುಕಾಲಿನಲ್ಲಿ ಕೂತು, ಇಷ್ಟಿಷ್ಟೇ ಹೊರಬರುತ್ತಿದ್ದ ಅಜ್ಜಯ್ಯನ ಹಳೆಯ ನಗುಮುಖವನ್ನು ಪ್ರೀತಿಯಿಂದ ನೋಡತೊಡಗಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.