ADVERTISEMENT

ಕಥೆ: ಮಧ್ಯವರ್ತಿ

ದೊಡ್ಡರಂಗೇಗೌಡ
Published 5 ಸೆಪ್ಟೆಂಬರ್ 2020, 19:30 IST
Last Updated 5 ಸೆಪ್ಟೆಂಬರ್ 2020, 19:30 IST
ಕಲೆ: ಡಿ.ಕೆ. ರಮೇಶ್‌
ಕಲೆ: ಡಿ.ಕೆ. ರಮೇಶ್‌   

ಆ ಹೊತ್ತು ಸಂಪಿಗೆಹಳ್ಳಿ ಶಿವಣ್ಣ ತನ್ನ ಮಗ ಆನಂದ ಬಲವಂತ ಮಾಡಿದ್ದರಿಂದ ಶಾಲಾ ವಾರ್ಷಿಕೋತ್ಸವದ ನಾಟಕ ನೋಡಲಿಕ್ಕೆ ಹೋಗಿದ್ದ. ಶಿವಣ್ಣನ ಹೆಂಡತಿ ಪಾರ್ವತಿ ಸಂಕೋಚದ ಹೆಂಗಸು; ಮದುವೆಗೂ ಮುನ್ನವೂ ಅಷ್ಟೇ, ಮದುವೆಯಾದ ಮೇಲೂ ಅಷ್ಟೇ! ಹೇಗೆ ಕರೆದರೂ ಹೆಂಡತಿ ನಾಟಕಕ್ಕೆ ಬರೋದಿಲ್ಲ ಎಂಬುದನ್ನು ಅರಿತಿದ್ದ ಶಿವಣ್ಣ ತನ್ನ ಬೀದಿಯಲ್ಲೇ ಇದ್ದ ‘ಬೆಳ್ಳಿ ತೆರೆ’ ಸಿನಿಮಾ ಪತ್ರಿಕೆಯ ನಗಾರಿ ನಂಜುಂಡನನ್ನು ಅಕ್ಕರೆಯಿಂದ ಕರೆದ.

ಶಿವಣ್ಣ ಉಳ್ಳವನು. ಕಾರಿಟ್ಟಿದ್ದ. ಹೀಗಾಗಿ ನಗಾರಿ ನಂಜುಂಡನಿಗೆ ಪೈಸೆ ಖರ್ಚಿಲ್ಲ. ಸಂಜೆ ಐದಕ್ಕೇನೆ ಇಬ್ಬರೂ ಮೊದಲು ದ್ವಾರಕಾ ಹೋಟೆಲ್‍ನಲ್ಲಿ ಖಾಲಿ ದೋಸೆ ತಿಂದು ಕಾಫಿ ಕುಡಿದು ಆರಾಮವಾಗಿ ‘ಭಾರತೀಯ ವಿದ್ಯಾಪೀಠ’ದ ದಾರಿ ಹಿಡಿದರು. ರಿಂಗ್ ರೋಡಿನಲ್ಲಿ ಭವ್ಯವಾಗಿ ಕಟ್ಟಿದ್ದ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾಪೀಠ! ಶಾಲೆ ಎಂದೇ ಪ್ರಖ್ಯಾತಿ. ಮಾರ್ಗಮಧ್ಯೆ ಅದೂ ಇದೂ ರಾಜಕೀಯ ಮಾತಾಡುತ್ತಾ ‘ಯಾಕೆ ನಮ್ಮ ದೇಶ ಹೀಗಾಯಿತು’ ಎಂದು ಇಬ್ಬರೂ ಆತಂಕಪಡುತ್ತಾ ಶಾಲೆ ಆವರಣದ ಕ್ವಾಡ್ರ್ಯಾಂಗಲ್ ಸೇರಿದ್ದರು. ಆಗಲೇ ಅದ್ಧೂರಿ ಸಮಾರಂಭ ಪ್ರಾರಂಭವಾಗಿತ್ತು.

ಮುಖ್ಯ ಅತಿಥಿಯಾಗಿ ಬಂದಿದ್ದ ನಗೆಗಾರ ನರಸಿಂಹಮೂರ್ತಿ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದಾದ ಮೇಲೆ ಸಾಹಿತಿಗೆ ಸನ್ಮಾನವಾಯಿತು. ಆನಂತರ ವಂದನಾರ್ಪಣೆ. ಸಂಪಿಗೆಹಳ್ಳಿ ಶಿವಣ್ಣನ ಮಗ ಆನಂದ ಆಗಲೇ ಮೇಕಪ್ ಮಾಡಿಸಿಕೊಂಡಿದ್ದರಿಂದ ಅಪ್ಪನ್ನ ನೋಡಲು ಬರಲಾಗಲೇ ಇಲ್ಲ. ನಾಟಕದ ಡೈರೆಕ್ಟರ್ ನಾರಾಯಣ ‘ಬಿಟ್ಟರೆ ಸಿಕ್ಕ ಭೀಮಣ್ಣ’ ನಾಟಕದ ಸಾರಾಂಶ ಮಾಡಿದರು. ಆನಂದನೇ ನಾಟಕದಲ್ಲಿ ಭೀಮಣ್ಣ. ಹೆಸರು ಮಾತ್ರ ಭೀಮ! ಹಾಗೆ ನೋಡಿದರೆ ಆನಂದ ಸಪೂರ ಬೆಳೆದ ಸುಂದರ ತರುಣನೇ! ನಾಟಕ ತುಂಬಾನೇ ಚೆನ್ನಾಗಿ ಮೂಡಿ ಬರುತ್ತಿತ್ತು.

ADVERTISEMENT

ನಗಾರಿ ನಂಜುಂಡ ಸುಮ್ಮನೆ ಇರುವುದನ್ನು ಬಿಟ್ಟು ಶಿವಣ್ಣನ ತಲೇಲಿ ನಿಮ್ಮ ಹುಡುಗನ ಹತ್ತಿರ ‘ಹೀರೊ’ ಪಾತ್ರವೇ ಮಾಡಿಸಬಹುದು. ಒಳ್ಳೆಯ ಸಿನಿಮಾನೂ ತೆಗೆಯಬಹುದು ಎಂದು ಪೀಠಿಕೆ ಹಾಕಿದ. ಸಿನಿಮಾ ಪತ್ರಿಕೆ ನಡೆಸುತ್ತಿದ್ದುದರಿಂದ ಸಿನಿಮಾ ಬಿಟ್ಟು ನಗಾರಿಗೆ ಬೇರೆ ವಿಷಯಾನೇ ಗೊತ್ತಿಲ್ಲ... ಹಾಗಂತಿರಾ? ನಮ್ಮ ಹುಡುಗ ಹಾಗಾದರೆ ‘ಹೀರೋ’ ಆಗಬಹುದು ಅನ್ನಿ ಎಂಬ ಲೆಕ್ಕಾಚಾರ ಶುರುವಾಗಿತ್ತು. ನಾಟಕ ಮುಗಿದ ಮೇಲೆ ‘ಬೆಸ್ಟ್ ಆ್ಯಕ್ಟರ್’ ಅಂತ ಆನಂದನಿಗೆ ಒಂದು ಪ್ರೈಜೂ ಬಂತು. ನಾಟಕಕ್ಕೆ ಬಂದದ್ದು ಸಾರ್ಥಕ ಆಯ್ತು ಅಂದುಕೊಂಡರು ಶಿವಣ್ಣ.

ಡ್ಯಾಡಿ ಅಂತ ಓಡಿ ಬಂದು ಆನಂದ ತನ್ನಪ್ಪ ಶಿವಣ್ಣನನ್ನು ತಬ್ಬಿಕೊಂಡ. ಖುಷಿ ಅಂದರೆ ಖುಷಿ ಸಂಪಿಗೆಹಳ್ಳಿ ಶಿವಣ್ಣನಿಗೆ, ‘ಭೋ ಚೆನ್ನಾಗಿ ಮಾಡಿದೆ ಮಗನೇ. ಭೇಷ್ ಭೇಷ್’ ಎಂದು ಮನಸಾರೆ ಮಗನನ್ನು ಹೊಗಳಿದ್ದ ಶಿವಣ್ಣ. ಇದೇ ಸಮಯ ನೋಡಿ ನಗಾರಿ ನಂಜುಂಡ ಶಿವಣ್ಣನಿಗೆ ಒಂದೆರಡು ಒಳ್ಳೆಯ ಫೋಟೊ ಕೊಡಿ. ನಮ್ಮ ಪತ್ರಿಕೇಲಿ ‘ರಂಗಭೂಮಿ’ ಅಂತ ಅಂಕಣ ಇದೆ. ಅಲ್ಲಿ ನಿಮ್ಮ ಹುಡುಗನ ಬಗ್ಗೆ ನಾಲ್ಕು ಮಾತು ಪ್ರೀತಿಯಿಂದಲೇ ಬರೆಯುವೆ ಅಂದ ನಗಾರಿ. ಅಲ್ಲಿಂದ ಶುರುವಾಯ್ತು ಮಂಗನ ಮೇಲೆ ಸಿನಿಮಾ ಪ್ರೀತಿ!

ಮನುಷ್ಯನಿಗೆ ಏನಾದರೂ ಒಂದು ಹುಚ್ಚು ಹತ್ತಿದರೆ ಮುಗಿಯಿತು ಅನ್ನಿ. ಅದೇ ಗುಂಗು ಕಾಡುತ್ತದೆ. ನಗಾರಿ ನಂಜುಂಡನಿಗೆ ‘ಬೆಳ್ಳಿತೆರೆ’ಯ ಕಾರ್ಯಾಲಯ ಮನೆಯೇ. ಬೆಳ್ಳಿತೆರೆಯ ಎಲ್ಲ ವಿಷಯ ಅವನಿಗೆ ಕರತಲಾಮಲಕ ಆಗಿದ್ದರೂ ಅವನ ಮನೆ ಯಾವತ್ತೂ ರಜತಗಿರಿಯೂ ಆಗಲಿಲ್ಲ. ಅವನು ರಜತ ರಾಜನೂ ಆಗಿರಲಿಲ್ಲ. ಹೀಗೆ ಶುರುವಾದ ಶಿವಣ್ಣ ಹಾಗೂ ನಂಜುಂಡನ ಸಂಬಂಧ ದಿನೇ ದಿನೇ ಪ್ರವರ್ಧಮಾನಕ್ಕೆ ಬಂದು ಸ್ನೇಹದ ತಳಹದಿ ಗಟ್ಟಿಯಾಗಿತ್ತು. ಸಿಕ್ಕಾಗೆಲ್ಲಾ ‘ಎಲ್ಲಿಗೆ ಬಂತು ಮಗನನ್ನು ಹೀರೋ ಮಾಡೋ ಕನಸು?’ ಎಂದೇ ನಗಾರಿ ಮಾತಿಗೆ ಎಳೆಯುವ ಕಲೆ ರೂಢಿಸಿಕೊಂಡಿದ್ದ. ಶಿವಣ್ಣ ಮುಗ್ಧ. ಮಗನ ಬಗ್ಗೆ ಅಪಾರ ಅರ್ತಿ, ಉಬ್ಬಿ ಹೋಗುತ್ತಿದ್ದ ತಂದೆ! ಇಬ್ಬರೂ ಸೇರಿ ಒಬ್ಬ ಡೈರೆಕ್ಟರ್‌ನನ್ನು ಹುಡುಕುವ ಪ್ರಯತ್ನದಲ್ಲಿ ಯಶಸ್ವಿ ಆಗಿದ್ದರು. ಇವರ ಇಚ್ಛೆ ಈಡೇರಿಸಲು ಮುಂದಾದ ನಿರ್ದೇಶಕನೇ ಮಾರುತಿ.

ಮಾರುತಿ ಶ್ರಮಜೀವಿ. ಶ್ರದ್ಧಾವಂತ, ಒಳ್ಳೆಯ ಲೇಖಕಕಾರ. ಇವರಿಗಾಗಿ ‘ಪ್ರೇಮ ಪೂಜಾರಿ’ ಎಂಬ ಕಥೆ ರೆಡಿ ಮಾಡಿದ. ಹುಡುಗನಾದರೂ ಗಟ್ಟಿಗ, ಮಹತ್ವಾಕಾಂಕ್ಷಿ. ಹದಿನೈದು ವರ್ಷಗಳ ಸಿನಿಮಾ ಸಂಸರ್ಗದಿಂದ ಅಪಾರವಾಗಿ ಸಿನಿಮಾ ಜ್ಞಾನ ಸಂಪಾದಿಸಿದ್ದು, ಸಿನಿಮಾ ಪರಿಭಾಷೆಯ ಕಲಾತ್ಮಕ ವ್ಯಾಕರಣ ಬಲ್ಲ ಉತ್ಸಾಹಿ ತರುಣನಾಗಿದ್ದ. ಜವಾಬ್ದಾರಿ ವಹಿಸಿಕೊಂಡ ಮೇಲೆ ಒಂದೇ ಸಮನೆ ಹಗಲು-ಇರುಳು ಮಾರುತಿ ದುಡಿಯತೊಡಗಿದ. ಚಿತ್ರಕಥೆಯೂ ಅಣಿಯಾಯ್ತು. ಸಂಭಾಷಣೆಯನ್ನೂ ಬರೆದಾಯ್ತು. ಪಾತ್ರಗಳಿಗೆ ನಟ ನಟಿಯರ ನೇರ ಹುಡುಕಾಟ ಶುರುವಾಗಿತ್ತು. ಹೀರೋ ಆನಂದನೇ. ಅದು ಖಚಿತವಾಗೇ ಇತ್ತು. ತಂದೆ ಮಗನ ಪುರೋಭಿವೃದ್ಧಿಗಾಗೇ ಹಣ ಹೂಡಲು ಮುಂದಾಗಿದ್ದುದು. ಅದು ಸ್ಪಷ್ಟ. ಶಿವಣ್ಣನನ್ನು ಚೆನ್ನಾಗಿ ಉಬ್ಬಿಸಿದರೆ ಅದರಿಂದ ತನಗೆ, ತನ್ನ ಪತ್ರಿಕೆಗೆ ಲಾಭ ಇದೆ ಎಂದು ಬಲ್ಲ ನಗಾರಿ ದಿನ ದಿನವೂ ಹೊಸ ಐಟಂ ಹುಡುಕಿ ಹಣವನ್ನು ಕಸಿಯಲು ಪ್ರಾರಂಭಿಸಿದ್ದ.

ಮುಗ್ಧ ಶಿವಣ್ಣ ತಾನು ತನ್ನ ಮಗನ ಏಳಿಗೆಗಾಗಿ ಅವರು ಕೇಳಿದಷ್ಟು ಇವನು ಕೊಡಲಾರಂಭಿಸಿದ್ದ. ಸುಲಿಗೆ ಎಂಬ ಯಾಗ ನಡೆದಿತ್ತು. ಕಣ್ಣಪ್ಪ ಕಾಗೇರಿ ಆಗ ಪ್ರಸಿದ್ಧ ಛಾಯಾಗ್ರಾಹಕ. ಆ ಸಿನಿಮಾಟೋಗ್ರಾಫರ್ ಇರಲಿ ಎಂದು ತೀರ್ಮಾನವಾಯ್ತು. ಎಲ್ಲರೂ ಲೊಕೇಷನ್ ನೋಡಲು ಹೊರಟರು. ಕರಿಘಟ್ಟ ಬ್ಯಾಕ್ ಡ್ರಾಪ್‍ನಲ್ಲಿ ಒಂದು ಪುಟ್ಟ ಸೆಟ್ ಹಾಕಲು ತೀರ್ಮಾನಿಸಿದರು. ಶೂಟಿಂಗ್ ದಿನವೂ ನಿರ್ಧಾರ ಆಯ್ತು. ಹಿರೋಯಿನ್ ಪಾತ್ರ ಯಾರಿಗೆ ಕೊಡುವುದು ಎಂದು ಲೆಕ್ಕ ಹಾಕುವಾಗ ನಗಾರಿ ತಾನೇ ಮುಂದೆ ಬಂದು ನಿಮ್ಮ ಹುಡುಗ ಆನಂದ ಜೊತೆಯಲ್ಲಿ ಪಾತ್ರ ಮಾಡಿದ್ದಳಲ್ಲಾ ಭೂಮಿಕಾ ಅವಳ ತಂದೆ-ತಾಯಿ ಕೇಳಿ ಒಪ್ಪಿಸಿ ಹಿರೋಯಿನ್ ಪಾತ್ರ ಮಾಡಿಸಿದರಾಯಿತು ಎಂದು ಕೊಂಡರು. ಮಾರುತಿ ಕೂಡ ಒಪ್ಪಿಗೆ ಕೊಟ್ಟ. ಕಣ್ಣಪ್ಪ ಸೈ ಎಂದ.

ಒಂದೇ ಷೆಡ್ಯೂಲ್‌ನಲ್ಲಿ ಚಿತ್ರೀಕರಣ ಮಾಡಿ ಮುಗಿಸುವ ಹಟ ಮಾರುತಿಗೆ. ಅದೇ ಅಭಿಪ್ರಾಯ ಕಾಗೇರಿ ಕಣ್ಣಪ್ಪನಿಗೂ ಕೂಡ. ನಗಾರಿ ಬರುತ್ತಾ ಬರುತ್ತಾ ಶಿವಣ್ಣನನ್ನು ಏಕಾಂತದಲ್ಲಿ ಕರೆದೇ ದುಡ್ಡಿನ ವಿಷಯವನ್ನು ಮಾತಾಡುತ್ತಿದ್ದ. ಕರಿಘಟ್ಟದ ದೇವಸ್ಥಾನದ ಕಲ್ಲು ಕಲ್ಲಿಗೂ ಅವರಿಬ್ಬರ ವ್ಯವಹಾರ ಗೊತ್ತಿತ್ತೇ ಹೊರತು ಮಾರುತಿಗಾಗಲೀ ಕಣ್ಣಪ್ಪನಿಗಾಗಲೀ ಗೊತ್ತಿರಲಿಲ್ಲ. ಅವರಿಬ್ಬರೂ ತಾವಾಯ್ತು, ತಮ್ಮ ಕೆಲಸವಾಯ್ತು. ಇಬ್ಬರಿಗೂ ಸಂಭಾವನೆ ಖಚಿತವಾಗಿ ಗೊತ್ತಾಗಿದ್ದುದರಿಂದ ಹಣಕಾಸಿನ ವಿಷಯದಲ್ಲಿ ತಲೆ ಹಾಕುತ್ತಿರಲಿಲ್ಲ. ಅಲ್ಲೇ ಸುತ್ತಮುತ್ತ ರೈತರ ಹೊಲಗದ್ದೆ ಕಬ್ಬಿನ ತೋಟಗಳಲ್ಲಿ ಚಿತ್ರೀಕರಣ ಸಾಗಿತ್ತು. ಜೀವನದಿ ಕಾವೇರಿಯ ದಂಡೆಯಲ್ಲೂ ಸಾಕಷ್ಟು ದೃಶ್ಯಗಳನ್ನು ಕಾಗೇರಿ ಕಣ್ಣಪ್ಪ ನಿಷ್ಠೆಯಿಂದಲೇ ಚಿತ್ರೀಕರಿಸಿದ್ದರು.

ಭೂಮಿಕಾ ನಿಧಾನ. ಅವಳ ಆ ನಿಧಾನಗತಿಯಿಂದ ಚಿತ್ರೀಕರಣ ಕುಂಟುತ್ತಾ ಕುಂಟುತ್ತಾ ಸಾಗಿತ್ತು. ಗ್ರಾಮೀಣ ಪರಿಸರವನ್ನು ಪುನರ್ ನಿರ್ಮಿಸುವಲ್ಲಿ ಮಾರುತಿ ಅಹರ್ನಿಶಿ ದುಡಿಯುತ್ತಿದ್ದರು. ಕಣ್ಣಪ್ಪ ನಿರ್ದೇಶಕರು ಹೇಳಿದ ರೀತಿಯಲ್ಲೇ ಚಿತ್ರೀಕರಿಸುತ್ತಿದ್ದರು. ಅಂತೂ-ಇಂತೂ ಚಿತ್ರೀಕರಣ ಇಪ್ಪತ್ತೊಂದನೇ ದಿನ ಮುಗಿದು ಕುಂಬಳಕಾಯಿ ಒಡೆದದ್ದೂ ಆಯಿತು. ಆ ಹೊತ್ತು ನಗಾರಿ ಶೂಟಿಂಗ್ ಸ್ಪಾಟಿಗೆ ಬಂದಿರಲಿಲ್ಲ. ಆಗ ಮಾರುತಿಗೆ, ಕಣ್ಣಪ್ಪನಿಗೆ ಗೊತ್ತಾದ ವಿಷಯ: ಇದುವರೆಗೆ ನಗಾರಿ ನಂಜುಂಡ ತನ್ನಿಂದ ಮೂವತ್ತೈದು ಲಕ್ಷ ದುಡ್ಡು ತಗೊಂಡಿದ್ದಾನೆ ಎಂಬ ವಿಷಯ ಬಹಿರಂಗವಾಯ್ತು!

ಮಾರುತಿ: ಸಾರ್ ನೀವು ಟೋಪಿ ಹಾಕಿಸಿಕೊಂಡಿರಿ.

ಕಣ್ಣಪ್ಪ: ಅಷ್ಟೆಲ್ಲಾ ಎಲ್ಲಿ ಖರ್ಚಾಗಿದೆ?

ಶಿವಣ್ಣ: ಅದಕ್ಕೆ ಇದಕ್ಕೆ ಬೇಕೇ ಬೇಕು. ಖರ್ಚು ಕೇಳಿದರೆ ಶೂಟಿಂಗ್ ನಿಲ್ಲುತ್ತೆ ಅಂತ ನಂಜುಂಡ ಹೇಳ್ತಾ ಇದ್ರು ಸಾರ್. ಅದ್ಕೇ ಕೊಡ್ತಾ ಬಂದೆ.

ಮಾರುತಿ: ಇನ್ನಾದರೂ ಹುಷಾರಾಗಿರಿ ಸಾರ್.

ಕಣ್ಣಪ್ಪ: ನಮ್ಮನ್ನು ಕೇಳದೆ ಅವರಿಗೆ ದುಡ್ಡು ಕೊಡಬೇಡಿ ಸಾರ್.

ಶಿವಣ್ಣ: ನಂಬಿ ಬಿಟ್ಟೆ ನಂಜುಂಡನನ್ನ! – ಇದು ಚರ್ಚೆಯ ವರಸೆಯಾಗಿತ್ತು.

ಅಲ್ಲಿಂದ ನಗಾರಿ ಬೇರೆ ವರಸೆ ತೆಗೆದ. ತನಗೆ ಹಾರ್ಟ್ ಪ್ರಾಬ್ಲಂ ಇದೆ ಅಂತ ಹೇಳೋಕೆ ಶುರುಮಾಡಿದ. ಶಿವಣ್ಣನ ಕೈಗೆ ಸಿಕ್ಕುತ್ತಲೇ ಇರಲಿಲ್ಲ. ಮನೆಯಲ್ಲೂ ಇರುತ್ತಿರಲಿಲ್ಲ. ಯಾವಾಗ ನೋಡಿದರೂ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರೋಕೆ ಅಭ್ಯಾಸ ಮಾಡಿಕೊಂಡಿದ್ದ. ಸಿನಿಮಾ ಕೆಲಸ ಇನ್ನೂ ಸಾಕಷ್ಟಿದೆ. ಶಿವಣ್ಣನ ದುಡ್ಡು ಖಾಲಿ ಆಗಿದೆ. ಆದರೇನು ಮಧ್ಯವರ್ತಿ ಎಲ್ಲರ ಕಣ್ಣಿಂದ ಮರೆಯಾಗಿದ್ದಾನೆ. ಎಷ್ಟು ಹುಡುಕಿದರೂ ನಗಾರಿ ನಾಪತ್ತೆ. ಕತ್ತೆಯ ಹಾಗೆ ಕೆಲಸ ಮಾಡಿದವರಿಗೆ ಸಂಭಾವನೆ ಸಿಕ್ಕಲಿಲ್ಲ. ಶಿವಣ್ಣ ಕಳಾಹೀನ ಮುಖ ಹೊತ್ತು ‘ಯಾಕಾದರೂ ನಾನು ಇಲ್ಲಿ ಬಂದು ಸಿಕ್ಕಿಹಾಕಿಕೊಂಡೆ’ ಎಂದು ಪೇಚಾಡುತ್ತಿದ್ದ. ಮಾರುತಿ ಮಾತ್ರ ಇದು ನನ್ನ ಮೊದಲ ಚಿತ್ರ. ಈ ಸಿನಿಮಾ ನಿಲ್ಲಬಾರದು ಎಂದು ಒಂದೇ ಸಮನೆ ಎಲ್ಲಾ ಕೆಲಸ ತಾನೇ ಸರಿದೂಗಿಸಿಕೊಂಡು ಹೋಗಲು ತೀರ್ಮಾನಿಸಿ ದುಡಿಯುವ ಯಂತ್ರವಾಗಿ ಹೈರಾಣಾಗಿ ಸುಸ್ತಾಗಿದ್ದ.

ಕ್ಯಾಮೆರಾಮನ್ ಕಣ್ಣಪ್ಪ ‘ನಮಗೇ ಹೀಗೆ ಆಗಬೇಕಾ’ ಎಂದು ಪೇಚಾಡಿಕೊಳ್ಳುತ್ತಿದ್ದ. ನಾಟಕವಾಡುತ್ತಾ ಆಸ್ಪತ್ರೆ ಸೇರಿದ ನಗಾರಿ ಯಾವುದಕ್ಕೂ ಲೆಕ್ಕ ಕೊಡಲಿಲ್ಲ. ಖಾಲಿ ಕೈ ಶಿವಣ್ಣನಿಗೆ ಯಾವುದೂ ಬೇಡವಾಯ್ತು. ಎಲ್ಲಾ ಕಟ್ಟಿಕೊಂಡು ಒದ್ದಾಡಿದ ವ್ಯಕ್ತಿ ಮಾತ್ರ ಡೈರೆಕ್ಟರ್ ಮಾರುತಿ. ಈ ಸಿನಿಮಾ ಹೊರಗೆ ಬರುತ್ತೋ ಇಲ್ಲವೋ ಎಂಬ ಆತಂಕ ಆನಂದ, ಭೂಮಿಕಾಗೆ. ಎಲ್ಲಾ ಮರೆತು ತನಗೂ ಇದಕ್ಕೂ ಯಾವುದಕ್ಕೂ ಸಂಬಂಧವಿಲ್ಲವೆಂಬಂತೆ ಆಸ್ಪತ್ರೆಯಲ್ಲಿ ಮಲಗಿದ್ದ ಮಹಾಪುರುಷ ನಗಾರಿ ನಂಜುಂಡ. ಪ್ರೇಮ ಪೂಜಾರಿ ಸೇರಿ ಹೋಗಿತ್ತು ಗರ್ಭಗುಡಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.