ADVERTISEMENT

ಕಥೆ: ಸರ್ವೈವಲ್ ಬೆನಿಫಿಟ್

ದಯಾನಂದ ಎಚ್‌.ಎಚ್‌.
Published 3 ಏಪ್ರಿಲ್ 2021, 19:30 IST
Last Updated 3 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಲ್ಲಿಗೆ ಸರಿಯಾಗಿ ನೂರೈವತ್ತು ವರ್ಷಗಳ ಹಿಂದೆ ಆರ್ವಾಕ್ಸೋವಿಯದ ಒಂದು ಬಡ ನಾಟಕ ತಂಡ ಆ ದೇಶದ ಪ್ರಭುತ್ವಕ್ಕೆ ಇನ್ನಿಲ್ಲದ ತಲೆನೋವಾಗಿ ಕಾಡತೊಡಗಿತ್ತು. ಪ್ರಭುತ್ವದ ಭಾಗವಾಗಿರುವವರು ಆ ನಾಟಕ ತಂಡದಿಂದಾಗಿ ರೋಸಿ ಹೋಗಿದ್ದರು. ಪ್ರಭುತ್ವದ ಪ್ರತಿಯೊಂದು ನಡೆಯನ್ನೂ ಈ ತಂಡ ನಾಟಕವಾಗಿ ಕಟ್ಟಿ ಪ್ರಭುತ್ವದ ಲೋಪದೋಷಗಳನ್ನು ಮೂದಲಿಸಿ ಗುರುತಿಸಿ ಜನರಿಗೆ ಎತ್ತಿ ತೋರಿಸುತ್ತಿತ್ತು. ಜನರು ನಾಟಕಗಳನ್ನು ನಾಟಕಗಳಾಗಿ ನೋಡುತ್ತಿದ್ದರೂ ಪ್ರಭುತ್ವಕ್ಕೆ ಅವುಗಳನ್ನು ಕೇವಲ ನಾಟಕಗಳಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ನಾಟಕ ತಂಡವನ್ನು ಬಗ್ಗು ಬಡಿಯಲು ಪ್ರಭುತ್ವ ಇನ್ನಿಲ್ಲದಂತೆ ಪ್ರಯತ್ನಿಸುತ್ತಲೇ ಇತ್ತು. ನಾಟಕ ತಂಡದಲ್ಲಿ ಇರುವ ಕಲಾವಿದರಿಗೆ ಪ್ರಭುತ್ವದಿಂದ ಸಿಗಬೇಕಾದ ಕನಿಷ್ಠ ಸವಲತ್ತುಗಳೂ ಸಿಗದಂತೆ ಮಾಡಲಾಗುತ್ತಿತ್ತು. ತಂಡದ ಕಲಾವಿದರನ್ನು ಆಗಾಗ ಜೈಲಿಗೆ ಅಟ್ಟಲಾಗುತ್ತಿತ್ತು. ಕೊನೆಗೆ ಈ ತಂಡಕ್ಕೆ ಯಾವ ನಾಟಕಗೃಹಗಳೂ ಸಿಗದಂತೆ ತಡೆಯಲಾಯಿತು. ಆದರೂ ಈ ಕಲಾವಿದರು ಬೀದಿಗಳಲ್ಲೇ ನಾಟಕ ನಡೆಸಿ ಅದರಿಂದ ಬಂದ ಹಣದಿಂದಲೇ ಜೀವನ ನಾಟಕಗಳನ್ನೂ ನಡೆಸುತ್ತಿದ್ದರು.

ಏನು ಮಾಡಿದರೂ ಬಗ್ಗದ ಈ ನಾಟಕ ತಂಡದ ಬಗ್ಗೆ ಪ್ರಭುತ್ವದ ನಾಯಕನಿಗೇ ಪಿಚ್ಚೆನಿಸತೊಡಗಿತ್ತು. ಆ ತಂಡದ ಕಲಾವಿದರು ಕೊನೆಗೆ ಇದನ್ನೇ ನಾಟಕವಾಗಿ ಕಟ್ಟಿ ಕುಣಿದರು. ಇದಂತೂ ಪ್ರಭುತ್ವದ ನಾಯಕನ ಕಣ್ಣನ್ನಷ್ಟೇ ಅಲ್ಲ ಇಡೀ ಮೈಯನ್ನೇ ಕೆಂಪಾಗಿಸಿತ್ತು. ಇದರಿಂದ ಪ್ರಭುತ್ವದ ಆಡಳಿತ ವರ್ಗದ ಮೇಲೆ ಒತ್ತಡ ಹೆಚ್ಚಾಯಿತು. ಏನಾದರೂ ಮಾಡಿ ಈ ನಾಟಕ ತಂಡವನ್ನು ಮುಗಿಸಲೇಬೇಕು ಎಂಬ ತೀರ್ಮಾನಕ್ಕೆ ಪ್ರಭುತ್ವ ಬಂದಿತ್ತು. ಆದರೆ, ಏನು ಮಾಡಬೇಕೆಂಬುದು ಯಾರಿಗೂ ಸ್ಪಷ್ಟವಿರಲಿಲ್ಲ.

ಇದ್ದಕ್ಕಿಂದ್ದಂತೆ ಒಂದು ದಿನ ನಾಯಕ ಆ ತಂಡದ ಕಲಾವಿದರನ್ನು ಭೇಟಿ ಮಾಡಿ ಅವರೊಂದಿಗೆ ತಾನು ಊಟ ಮಾಡಬೇಕೆಂದು ಅಧಿಕಾರಿ ವರ್ಗಕ್ಕೆ ಆದೇಶಿಸಿದ. ಇಡೀ ಅಧಿಕಾರಿ ವರ್ಗಕ್ಕೆ ಇದು ವಿಚಿತ್ರವಾಗಿ ತೋರಿತು. ಆದರೂ ನಾಯಕರ ಆದೇಶವನ್ನು ಪ್ರಶ್ನಿಸಲಾಗದೆ ಕಲಾವಿದರೊಂದಿಗೆ ಭೋಜನಕ್ಕೆ ವ್ಯವಸ್ಥೆ ಮಾಡಲಾಯಿತು. ಇಷ್ಟು ದಿನ ತಾವು ವಿರೋಧಿಸುತ್ತಿದ್ದ, ವಿಡಂಭಿಸುತ್ತಿದ್ದ, ಹೀಯಾಳಿಸುತ್ತಿದ್ದ ನಾಯಕನೇ ಇಂದು ತಮ್ಮೊಂದಿಗೆ ಊಟಕ್ಕೆ ಕೂರುತ್ತಿದ್ದಾನೆ ಎಂಬುದನ್ನು ಆ ಕಲಾವಿದರು ಅರಗಿಸಿಕೊಳ್ಳುವುದೂ ಕಷ್ಟವಾಗಿತ್ತು. ನಾಟಕ ತಂಡ ಇದ್ದಲ್ಲಿಗೇ ಬಂದ ನಾಯಕ ಅಂದು ನಾಟಕ ಕಲಾವಿದರ ಜತೆಗೆ ಹರುಕಲು ಮುರುಕಲು ಟೆಂಟಿನೊಳಗೇ, ಕಲಾವಿದರ ಜತೆಗೇ ಕೂತು ಅವರೇ ಮಾಡಿದ್ದ ಹೊಗೆ ಘಮಲಿನ ಅಡುಗೆಯನ್ನು ನಗುನಗುತ್ತಾ ಊಟ ಮಾಡಿದ. ಊಟವಾದ ಮೇಲೆ ಅವರ ನಾಟಕಗಳ ಬಗ್ಗೆ ಅವುಗಳ ಜನಪ್ರಿಯತೆಯ ಬಗ್ಗೆ ಮನಸ್ಸು ಬಿಚ್ಚಿ ಹೊಗಳಿದ. ಕಲಾವಿದರು ಯಾವಾಗಲೂ ಪ್ರಭುತ್ವಕ್ಕೆ ಕನ್ನಡಿಯ ಹಾಗೆ ಇರಬೇಕು, ಪ್ರಭುತ್ವದ ತಪ್ಪುಗಳನ್ನು ಎತ್ತಿ ತೋರುವ ಮೂಲಕ ಅದನ್ನು ತಿದ್ದಿಕೊಳ್ಳಲು ನೆರವಾಗಬೇಕು ಎಂದು ಇನ್ನೂ ಏನೇನೋ ಮಾತಾಡಿದ. ನಾಯಕ ನಿಜವಾಗಿಯೂ ತಮ್ಮನ್ನು ಹೊಗಳುತ್ತಿದ್ದಾನೋ ಇಲ್ಲವೇ ತಮ್ಮನ್ನು ಗುಡಿಸಿಹಾಕುವ ಹುನ್ನಾರವೋ ಇದು ಎಂದು ಕಲಾವಿದರಿಗೆ ಗೊಂದಲ ಶುರುವಾಯಿತು. ನಾಯಕನೊಂದಿಗೆ ಇದೇ ಕೊನೆಯ ಭೋಜನವಾಗುವುದೋ ಎಂದು ಹಲವು ಕಲಾವಿದರು ಒಳಗೊಳಗೇ ಆತಂಕಕ್ಕೆ ಬಿದ್ದರು.

ADVERTISEMENT

ಆದರೆ, ಅಂಥದ್ದೇನೂ ಆಗಲಿಲ್ಲ. ಭೋಜನ ಮುಗಿಸಿಕೊಂಡು ಹೋದ ನಾಯಕ ತನ್ನ ಆಪ್ತ ಅಧಿಕಾರಿ ವರ್ಗವನ್ನು ಕರೆದು ಆ ನಾಟಕ ತಂಡಕ್ಕೆ ತಿಂಗಳಿಗೆ ಬೇಕಾಗುವಷ್ಟು ಅಡುಗೆ ಸಾಮಾನಿನ ವ್ಯವಸ್ಥೆ ಮಾಡುವಂತೆ ಹೇಳಿದ. ಜತೆಗೆ ತಂಡದ ಎಲ್ಲಾ ಕಲಾವಿದರ ಸನ್ಮಾನಕ್ಕೆ ದಿನ ನಿಗದಿ ಪಡಿಸುವಂತೆ ಆದೇಶಿಸಿದ. ನಾಯಕನ ಈ ನಡೆಯಂತೂ ಅಧಿಕಾರಿ ವರ್ಗಕ್ಕೆ ಇದ್ದಿದ್ದೂ ವಿಚಿತ್ರವಾಗಿ ಕಂಡಿತು. ನಾಯಕನಿಗೆ ತಲೆ ಕೆಟ್ಟಿದೆ ಎಂದೂ ಹಲವರು ಮಾತಾಡಿಕೊಂಡರು. ನಿಗದಿಯಾದ ದಿನದಂದು ನಾಯಕನ ಸೌಧದ ಮುಂಭಾಗ ದೊಡ್ಡ ವೇದಿಕೆಯಲ್ಲಿ ಲಕ್ಷಾಂತರ ಜನರೆದುರು ಬಾಲ ಕಲಾವಿದರು, ಪರದೆ ಎತ್ತುವವರೂ ಸೇರಿದಂತೆ ಆ ನಾಟಕ ತಂಡದ ಎಲ್ಲರಿಗೂ ಚಿನ್ನದ ಪದಕ ಕೊಟ್ಟು ಸನ್ಮಾನಿಸಲಾಯಿತು. ಖುದ್ದು ನಾಯಕನೇ ಎಲ್ಲರಿಗೂ ಪದಕದ ಮಾಲೆ ಹಾಕಿ ಕೈ ಕುಲುಕಿ ನಗುನಗುತ್ತಾ ಸನ್ಮಾನ ಮಾಡಿದ. ವೇದಿಕೆಯಲ್ಲಿ ಮಾತನಾಡುತ್ತಾ ಈ ಕಲಾವಿದರು ಮತ್ತು ಅವರ ನಾಟಕಗಳ ಬಗ್ಗೆ ನಾಯಕ ಉದಾರವಾಗಿ ಮೆಚ್ಚುಗೆಯ ಮಾತನಾಡಿದ. ನಗರದ ಮಧ್ಯಭಾಗದಲ್ಲಿರುವ ಪ್ರಭುತ್ವಕ್ಕೆ ಸೇರಿದ ನಾಟಕಗೃಹವನ್ನು ಈ ತಂಡದ ಹೆಸರಿಗೇ ಬರೆದುಕೊಡುವುದಾಗಿ ಹೇಳಿದ. ಪ್ರತಿಯೊಬ್ಬ ಕಲಾವಿದರಿಗೂ ಲಕ್ಷಗಳಲ್ಲಿ ಮಾಸಾಶನ ಕೊಡಲಾಗುವುದು ಎಂದು ಘೋಷಿಸಿದ.

ಅಂದಿನಿಂದ ಪ್ರಭುತ್ವಕ್ಕೆ ತಲೆನೋವು ಇಲ್ಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.