ADVERTISEMENT

ಕಾಡ್ಕೋಣ ಭೂತಲಿಂಗ: ಮಂಜಯ್ಯ ದೇವರಮನಿ ಬರೆದ ಕಥೆ

ಮಂಜಯ್ಯ ದೇವರಮನಿ
Published 21 ಆಗಸ್ಟ್ 2021, 19:30 IST
Last Updated 21 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿಮ್ಮಿನಕಟ್ಟಿ ತಿಮ್ಮೇನಳ್ಳಿಗಳ ನಡುವೆ ದರ್ಗಾ ಹಳ್ಳವಿದೆ. ಹಳ್ಳದ ದಂಡೇಲಿ ಇರೋ ದರ್ಗಾದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹಜ್ಜಾ ಕೂಗುವುದು ಎರಡು ಊರುಗಳಿಗೆ ಗಡಿಯಾರವಾಗಿತ್ತು. ಬೆಳಗ್ಗಿನ ಹಜ್ಜಾ ವೇಳೆಗೆ ತಿಮ್ಮೇನಳ್ಳಿಯ ಬೋಳ್ಗುಂಟಿ ಬಸಣ್ಣನೂ ತಿಮ್ಮಿನಕಟ್ಟಿಯ ಜಾಡರ ಗುರಣ್ಣನೂ ದರ್ಗಾ ಮುಂದಿದ್ದ ಕೌದಿ ಮಲ್ಲಣ್ಣನ ಚಾ ಹೊಟ್ಲಾನ್ಯಾಗ ಮಿರ್ಚಿ ಮಂಡಕ್ಕಿ ಮುಕ್ಕುತ್ತಿದ್ದರು. ಹೊಟ್ಲ ಮುಂದಿನ ಎಣ್ಣೆ ಬಳ್ಳಿಯಲ್ಲಿ ಮಲ್ಲಣ್ಣ ಹಸಿಯಿಟ್ಟಿನಲ್ಲಿ ಗೇಣುದ್ದದ ಮೆಣಸಿನಕಾಯಿಗಳನ್ನು ಅದ್ದಿ ಮಿರ್ಚಿ ಬಿಡುತ್ತಿದ್ದ. ಬಿಸಿ ಬಿಸಿ ಮಿರ್ಚಿ ತಿನ್ನಾಕ ಅಂತಾನೆ ಎರಡು ಊರಿನ ಜನ ಕೌದಿ ಮಲ್ಲಣ್ಣನ ಹೋಟೆಲ್ಲಿಗೆ ಬರುತ್ತಿದ್ದರು.

ಮುಂಗಾರು ಮಳೆಯ ಮೋಡಗಳು ತೂತುಬಿದ್ದ ಗಡಿಗೆಗಳಂತೆ ಸೋರಕಚ್ಚಿದ್ದವು. ಹಳ್ಳಕ್ಕೆ ಹರೆಯ ಬಂದು ಆರ್ಭಟಿಸುತಿತ್ತು. ಕಾಲುವೆಗಳಲ್ಲಿ ನೀರು, ಹಾವು ಹರಿದಂತೆ ಸುಳುಸುಳು ಹರಿಯುತಿತ್ತು. ರೊಚ್ಚೆಯಿಡಿದ ಮಳೆ, ವದರಾಟಕಿತ್ತ ಎಮ್ಮೆ ನೋಡಿ ಬೋಳ್ಗುಂಟಿ ಬಸಣ್ಣ ‘ಗದ್ದೆಗೆ ನೀರು ಕಟ್ಟಬೇಕು, ರೊಳ್ಳಿಯೊಡೀಬೇಕು, ಗದ್ದೆ ಸವರಿ ಬದು ಹಾಕಬೇಕು, ನಾಟಿ ಹಚ್ಚಬೇಕು, ಈ ಎಮ್ಮಿ ನೋಡಿದ್ರೆ ನಶೆ ಬಂದು ವದರಾಟಕಿತ್ತಾತಿ ಭೂತಲಿಂಗನ ಬೀಜದ ಕೋಣ ಹತ್ತಿಸಿಗೆಂದು ಬರಬೇಕು. ಕೆಲಸಗಳು ನೋಡಿದ್ರೆ ಮೈ ಮುರಿಯಂಗ ಬಿದ್ದಾವು ನನ್ನ ಮಕ್ಕಳೋ... ಮಾಡೋ ಕೆಲಸ ಬಿಟ್ಟು ಬೈಕ್ ಹಾಕ್ಕೆಂದು ಪಾಲ್ತು ತಿರುಗುತ್ತಾವೆ’ ಅಂದ ಗುರುಣ್ಣನತ್ತ ತಿರುಗಿ. ‘ಅಯ್ಯೋ ಬೋಳ್ಗುಂಟಿ ಈಗಿನ ಹುಡ್ರು ನಮ್ಮ ಮಾತು ಎಲ್ಲಿ ಕೇಳ್ತಾವೆ, ಬಾಡಗಿ ಟ್ಯಾಕ್ಟ್ರಿ ಹಚ್ಚಿ ರೊಳ್ಳಿ ಹೊಡ್ಸಿ, ಕೂಲೇರು ಹಚ್ಚಿ ಕೇಸರ್ರೊಡ್ಡು ಹಾಕ್ಸಿ, ಸೊಂಟ ಕೈಯಾಗಿ ನಿಂತು ನಾಟಿ ಮಾಡಿಸ್ತಾರೆ. ನನ್ನಂಗೆ ನಿನ್ನಂಗೆ ಕೆಸರಗದ್ದೆ ತುಳಿದು ಗೇಯ್ತಾರ ಇವ್ರು’ ಎಂದು ಗುರಣ್ಣ ಬ್ಯಾಸರಸಿದ. ಮಿರ್ಚಿ ಬಿಡುತ್ತಿದ್ದ ಕೌದಿ ಮಲ್ಲಣ್ಣ ‘ನಮ್ಮ ಭೂತಲಿಂಗನ್ನೇ ತಗೋ ಪಾಪ ಹೊಲಮಾಳದಲ್ಲಿ ಮನೆ ಮಾಡ್ಕೆಂದು ಕಾಡ್ಕೋಣದಂತೆ ಒಂದೇ ದೋಖತೈತಿ. ಅದರ ಮಕ್ಕಳು ಅವನ ಮಾತು ಕೇಳದೆ ಕುಡುದು ಬಂದು ನಿತ್ಯ ವಾರೆ ತೆಗಿತಾವೆ. ಮೈ ತುಂಬಾ ಸಾಲ ಮಾಡ್ಕೆಂದು ಹೊಲ ಮಾರು ಅಂತಾ ಕುಂತಾವೆ. ಸತ್ತರು ಹೊಲ ಮಾರಲ್ಲ ಅಂದಿದ್ದಕ್ಕೆ ಹಿರೆ ಹೆಂಡ್ತಿ ಮಗ ಬೋರ ಟ್ಯಾಕ್ಟ್ರಿ ಹತ್ತಿಸಿ ಕಾಲು ಮುರುದು ಕಟ್ಟಿ ಮ್ಯಾಲ ಕುರ್ಸ್ಯಾನ ಅಂತೇ...’ ಎಂದು ತಕಪಕ ಕುದಿಯುವ ಎಣ್ಣೆಯಿಂದ ಮಿರ್ಚಿ ತೆಗೆದು ಹೊರಹಾಕಿದನು. ಬೋಳ್ಗುಂಟಿ ಬಸಣ್ಣ ‘ಮಲ್ಲಣ್ಣ ನಂಗೆ ಹೊತ್ತಾಕ್ಕತಿ ನಾ ಹೊಕ್ಕೇನಿ ಲೆಕ್ಕಕ್ಕೆ ಬರ್ಕೊಂಡು ಬಿಡು’ ಎಂದು ನಶೆ ಬಂದು ವದರಾಟಕಿತ್ತಿದ್ದ ತನ್ನ ಎಮ್ಮಿ ಹತ್ತಿಸಿಗೆಂದು ಬರಲು ಭೂತಲಿಂಗನ ಮನೆಕಡೆ ಹೊಂಟ. ಮಳೆ ಸಣ್ಣಗೆ ಜಿನುಗುತ್ತಿತ್ತು. ಊರಿಂದ ಹೊರಗೆ ಹೊಲಮಾಳದಲ್ಲಿ ಮನೆ ಮಾಡಿಕೊಂಡಿದ್ದ ಭೂತಲಿಂಗನ ಮನೆ ಹತ್ತಿರವಾಗುತ್ತಲೇ ಬೋಳ್ಗುಂಟಿ ಬಸಣ್ಣನಿಗೆ ಬೀಜದ ಕೋಣ ಕಣ್ಣಿಗೆ ಬಿತ್ತು. ಅದನ್ನ ನೋಡಿದ್ದೇ ತಡ ಅವನ ಎಮ್ಮಿ ವಯಾಂಕ ವಯಾಂಕ ಒದರಿ ಕೈಯಾಗಿನ ಹಗ್ಗ ಕೊಸರಕ್ಕೆಂದು ನುಗ್ಗಿತು. ಮೂಸಿದ ಕೋಣ ಮುಗಿಲಿಗೆ ಮಾರಿ ಮಾಡಿತು. ನಶೆ ಬಂದ ಎಮ್ಮಿ ಚಡಪಡಿಸುತಿತ್ತು. ಎಮ್ಮಿ ವದರಾಟ ಕೇಳಿ ‘ಯಾರು ಅದು ಅಂತಾ’ ಭೂತಲಿಂಗನೇ ಕುಂಟುತ್ತಾ ಮನೆಯಿಂದಾಚೆ ಬಂದ. ‘ಬೋಳ್ಗುಂಟಿ ಬಸಣ್ಣನೇ ಬಾ... ಬಾ... ಎಮ್ಮಿ ಹೊಡಕೊಂಡು ಬಂದಿಯಾ. ಬಾ... ಅದು ಯಾಕೋ ಇತ್ತೀಚಿಗೆ ಅಷ್ಟು ಬೇಗ ಏರಿ ಬರಲ್ಲ ಅದಕ್ಕೂ ಮುಪ್ಪು, ವಯಸ್ಸಾತು ತಡ ಹಾಕ್ಕೆತಿ... ಬಾ ಕುಂದ್ರು’ ಎಂದು ಕಟ್ಟಿಮೇಲೆ ಕರೆದು ಕೂರಿಸಿದ.

ತಿಮ್ನಳ್ಳಿ ಮತ್ತು ಸುತ್ತಮುತ್ತಲಿನ ಊರುಗಳವರು ನಶೆ ಬಂದ ಎಮ್ಮಿಗಳನ್ನು ಹತ್ತಿಸಿಗೆಂದು ಹೋಗಲು ಭೂತಲಿಂಗನ ಬೀಜದ ಕೋಣಕ್ಕೆ ಬರುತಿದ್ದರು. ದೊಡ್ಡ ಕೊಂಬಿನ, ಗುಳ್ಳಡುಬ್ಬದ ಪರಮಾಷಿ ತಳಿ. ಹರೆಯದಾಗ ಅಜಮಟ್ಟಿಗೆ ಏರಿ ಬಿಡುತಿತ್ತು. ಸಣ್ಣಪುಟ್ಟ ದನಗಳು ವದರಾಡಿ ಹೊಕ್ಕಿದ್ದವು. ಧ್ಯಾಮವ್ವಗ ಬಿಟ್ಟ ಕೋಣ ತುಡುಗು ಮೆಯೇಕೆಂತ ಗಡಿದಾಟಿ ಹೋದಾಗ ಅನಿವಾರ್ಯವಾಗಿ ಭೂತಲಿಂಗನ ಕೊಣನೇ ಬೇಕಿತ್ತು. ಭೂತಲಿಂಗ ದುಡ್ಡು ಮಾಡಲು ಸಾಕಿರಲಿಲ್ಲ. ತನ್ನ ಕೊಟ್ಟಿಗೆಯ ಹತ್ತು ಇಪ್ಪತ್ತು ದನಗಳು ತಿಂಗಳೊಪ್ಪತ್ತಿಗೆ ಒಂದಿಲ್ಲೊಂದು ನಶೆ ಬಂದು ವದಾರಾಟ ಕೀಳುತಿದ್ದವು. ಮಾಡುವ ಕೆಲಸಬಿಟ್ಟು ಹತ್ತಿಸಿಗೆಂದು ಬರಲು ದೂರದ ಕುಪ್ಪೇಲೂರಿಗೆ ಹೋಗಬೇಕಿತ್ತು, ಒಂದು ದಿನದ ಕೆಲಸ ಹಾಳು ಎಂದು ಕೋಣದ ಮರಿ ಬಿಡಿಸಿಕೇಂಡಿದ್ದ. ತಿಮ್ಮಿನಕಟ್ಟಿ ಅತಾವುಲ್ಲ ‘ಇದೇನು ಭೂತಣ್ಣ ಹಾಲು ಬಿಡಿಸಿಗೆಣತಿದ್ದಂಗೆ ಕೋಣಮರಿ ಸಾಕೋದಾಗಲ್ಲ ಅಂತೇಳಿ ನಮ್ಮ ಕಸಾಯಿಗೆ ಹೊಡಿತಿದ್ದೆ ಯಾಸ್ಯಾಟ್ಗೆ ಬ್ಯಾಡ ಅಂತಿದೀಯ’ ಅಂತಾ ಕೇಳಿದಕ್ಕೆ ಮೇಲಿನಂತೆ ಹೇಳಿದ್ದ. ಗಿಟ್ಟಲ್ಲ ತ್ಯಗಿ ಎಂದು ಅತಾವುಲ್ಲಾ ತನ್ನ ಮೇಕೆಗಡ್ಡ ಕೆರಕೊಂಡು ಹೋಗಿದ್ದ.
ಕೋಣ ಬೀಜಕ್ಕೆ ಬಂದಮ್ಯಾಲೆ ಮಣಕಗಳು ಯಾವಾಗ ಕಟ್ಟಿಗೊಂಡುವು ಯಾವಾಗ ಈಯ್ದವು ಎಂಬುದೇ ಗೊತ್ತು ಸಿಗವಲ್ದಾಗಿತ್ತು ಭೂತಲಿಂಗನಿಗೆ.

ADVERTISEMENT

ಭೂತಣ್ಣ ಬಸಣ್ಣ ಒಂದೇ ವಾರಿಗೆಯವರು ಅಷ್ಟೇ ಅಲ್ಲ ಬೇರೆ ಬೇರೆ ಊರಿನವರಾದರು ಅಕ್ಕಪಕ್ಕದ ಹೊಲದವರು. ಇಬ್ಬರು ಜೊತೆಗೆ ಕಮತಕ್ಕೆ ಕೈ ಹಚ್ಚಿದ್ದರು. ಆದ್ದರಿಂದ ಅವರಿಬ್ಬರಲ್ಲಿ ಒಂದು ವಿಧದ ಸಲುಗೆಯಿತ್ತು. ಬಸಣ್ಣನಿಗಿಂತ ಭೂತಣ್ಣನಿಗೆ ಜಮೀನು ಹೆಚ್ಚೇ ಅಂದರೆ ಪರವಾಗಿಲ್ಲ. ಆದರೆ ಬಸಣ್ಣನ ಹಾಗೆ ಸ್ಥಿತಿವಂತನಾಗಿರಲಿಲ್ಲ. ಅದಕ್ಕೆ ಕಾರಣ ಹಲವು. ಭೂತಲಿಂಗನ ಕಾಲು ಕುಂಟಾಗಿ ಅವನದು ಒಂಟಿ ಕಾಲಿನ ಕೋಳಿಯ ಜೀವನವಾಗಿತ್ತು. ಒಬ್ಬನೇ ಹೊಲವೆಂಬ ತಿಪ್ಪೆ ಕೇದರಬೇಕಾಗಿ ಬಂದು ಸೋತು ಹೋಗಿದ್ದ. ಅವನ ಪಾಲಿಗೆ ಜೀವನ ಇನ್ನೇನು ಮುಳುಗವ ಸಂಜೆ. ತನ್ನ ನೋವಿನ ಹೊಂಡವನ್ನು ಬಸಣ್ಣನೊಂದಿಗೆ ತೋಡಿಕೊಂಡ. ‘ಏನು ಅಂತಾ ಹೇಳೋಣ ಬಸಣ್ಣ ಎರಡನೇ ಮದುವಿ ಮಾಡಿಕೆಂಡು ದೊಡ್ಡ ತಪ್ಪು ಮಾಡಿದೆ, ಸುಖವಿಲ್ಲ’ ಎಂದು ಉಸಿರುಗಳಿದ. ಒಕ್ಕಲು ಮಾಡುವಾಗ ಅವನ ಮಗನೆ ಅವನ ಕಾಲು ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದ. ಕಾಲು ಮುರಿದುಕೊಂಡು ಮೂಲೆ ಸೇರಬೇಕಾಯಿತು. ಅಚಾನಕ್ಕಾಗಿ ಆಯಿತೋ ಅಥವಾ ಬೇಕು ಅಂತಲೇ ಹತ್ತಿಸಿದನೋ ಸ್ವತಃ ಭೂತಲಿಂಗನಿಗೆ ತಿಳಿವಲ್ದಾಗಿತ್ತು. ಆದರೆ ಊರಲ್ಲಿ ಒಂದೊಂದು ಪುಕಾರು ಎದ್ದು ಪುಕಾರಿಗೆ ಚಿಗರಿ ಕೊಡಿನಂತೆ ನಾನಾ ಟಿಸಿಲು ಮೂಡಿದ್ದವು. ಭೂತಲಿಂಗನಿಗೆ ಹೆಂಡ್ತಿ ಮಕ್ಕಳು ಸೆಟಗೊಂಡಿರುವುದು ಮಾತ್ರ ನಿಕ್ಕಿಯಾಗಿತ್ತು. ಹಿರೆಹೆಂಡ್ತಿ ಮತ್ತು ಮಕ್ಕಳ ಕಾಟಕ್ಕೆ ಬ್ಯಾಸತ್ತು ನೇಣು ಹಾಕ್ಕೊಂಡು ಬದುಕಿಳುದಿದ್ದ. ಇವೆಲ್ಲಾ ಬೋಳ್ಗುಂಟಿ ಬಸಣ್ಣನಿಗೆ ಗೊತ್ತಿದ್ದ ವಿಚಾರಗಳೇ ಆಗಿದ್ದವು.
‘ಜೀವನ ಹ್ಯಾಂಗ ಬರತ್ತಾದೋ ಹಂಗ ತುಳೀಬೇಕು ಭೂತಣ್ಣ, ನಾನು ನೀನು ಮೈಲಾರಲಿಂಗನ ಜಾತ್ರಿಯೊಳಗಿನ ಗೊಂಬಿಗಳು. ಕಾರ್ಣಿಕ ನುಡಿದು ಕುಣಿಸ್ತಾನ, ನಾವು ಕುಣಿಬೇಕು ಅಷ್ಟೇ. ಮೈಲಾರಲಿಂಗ ನೀನೇ ಕಾಪಾಡು’ ಎಂದು ಕೈ ಮುಗಿದ. ಕಾರ್ಣಿಕದ ಮಾತು ಕಿವಿಗೆ ಬೀಳುತ್ತೀದ್ದಾಂಗೆ ಭೂತಲಿಂಗ ‘ನಾಕು ವರ್ಷಾತು ಕಾರ್ಣಿಕಕ್ಕೆ ಹೋಗಿಲ್ಲ. ನಮ್ಮ ಹುಡ್ರಿಗೆ ಕರ್ಕೊಂಡು ಹೋಗರಲೇ ಅಂದ್ರ ಕಿವಿಮ್ಯಾಲ ಹಾಕೊಳ್ಳೋದಿಲ್ಲ. ಕುಂಟಿಗೆಂದು ನನ್ನ ಕಡೆ ಹೋಗಕಾಗಲ್ಲ. ಅದ್ಕೆ ಏನೋ... ಕಾಡಾಟ ಹತ್ಯಾತಿ’ ಎಂದು ಕಚ್ಚಿಪಂಚೆ ದಡಿಯಿಂದ ಕಣ್ಣೀರ ವರಿಸಿಕೊಂಡ.

ಭೂತಲಿಂಗ ಕಾಡು ಪಾಲಗಿದ್ದ. ಅವನ ಅವ್ವ ತೀರಿದ ಮೇಲೆ ಕೂಳು ನೀರು ಹೊಂದಿಸಿಕೊಳ್ಳೋದೇ ರಮ್ಮಗಾಲವಾಗಿತ್ತು. ಮಗಳು ಮೈ ನೆರತು ಎರಡು ವರ್ಷಾಗಿ ಅಷ್ಟು ಇಷ್ಟು ಬೇಯಿಸಿ ಹಾಕೋದು ಕಲ್ತಿತ್ತು. ಒಮ್ಮೊಮ್ಮೆ ತಾನೇ ಕೈ ಕೂಳು ಮಾಡಿಕೊಳ್ಳುತಿದ್ದ. ‘ಇಬ್ಬರು ಹೆಂಡ್ರು ಇದ್ದರು ಕೈ ಕೂಳು ಮಾಡ್ಕೆಂದು ತಿನ್ನೋದು ತಪ್ಪಲಿಲ್ಲ. ಮಕ್ಕಳು ಮದುವಿಗೆ ಬಂದಾವು ಒಳ್ಳೆಕಡೆ ಹೆಣ್ಣು ನೋಡಿ ಲಗ್ನ ಮಾಡಬೇಕು. ಸುಲಭಕ್ಕೆ ಹೆಣ್ಣು ಹತ್ತೋದಿಲ್ಲ. ಮಕ್ಕಳು ಹಾದಿ ತಪ್ಪಿರೋದು ಎಲ್ಲರಿಗೂ ತಿಳಿದೈತಿ. ಹೊಲ ಮನಿ ನೋಡಿ ಹೆಣ್ಣು ಕೊಡಬೇಕು. ಅಂತಹ ಮನಿತ್ಯಾನ ಗೊತ್ತಿದ್ರೆ ನೋಡು’ ಅಂತೇಳಿ ಬಸಣ್ಣನ ಮುಂದೆ ಆಗಾಗ ಕಣ್ಣೀರು ತೆಗಿತ್ತಿದ್ದ.

ಭೂತಲಿಂಗನಿಗೆ ಇಬ್ಬರು ಹೆಂಡಿರು. ವಯಸ್ಸಿನಲ್ಲಿ ಜಗ್ಗು ಮೆರೆದಾಡಿದ ಆಸ್ಸಾಮಿ. ಮೊದಲನೇ ಹೆಂಡ್ತಿ ಮಾಲಿಂಗಿಗೆ ಮೂರು ಗಂಡು ಮಕ್ಕಳಾಗಿದ್ದರೂ ಇನ್ನೊಂದು ಮದುವಿಯಾಗಿದ್ದ. ದೊಡ್ಡಗುಬ್ಬಿಗೆ ಹದಿನೈದು ದಿನ ನಾಟಕದ ತಾಲೀಮಗೆ ಅಂತಾ ಹೋದಾಗ ಶಿವಲಿಂಗಿಯನ್ನ ಮೆಚ್ಚಿ ಹೆಣ್ಣು ಕೇಳಿದ್ದ. ಕಾಡ್ಕೊಳ್ಡು ಪೀರಲಿಂಗಣ್ಣನಿಗೆ ನಾಕು ಹೆಣ್ಣು ಒಂದು ಗಂಡು. ಶಿವಲಿಂಗಿನೇ ಮೊದಲನೇಯವಳು. ಹೆಣ್ಣು ಖರ್ಚಾದರೆ ಸಾಕು ಎಂದು ಯೋಚನೆ ಮಾಡದೆ ಒಪ್ಪಿದ್ದ. ಎರಡೇ ದಿನದಲ್ಲಿ ಮಾರಿಕೊಪ್ಪದ ಮಾರಿಗುಡಿಯಲ್ಲಿ ಮದುವೆಯೂ ಮುಗಿದು ಹೆಣ್ಣು ಮನೆ ತುಂಬಿಸಿಕೊಳ್ಳಲು ಊರಿಗೆ ಬಂದಿದ್ದ. ಹೇಳದ ಕೇಳದೆ ತಾಳಿಕಟ್ಟಿಕೊಂಡು ಬಂದಿದ್ದು ಮೊದಲನೇ ಹೆಂಡ್ತಿ ಮಾಲಿಂಗಿಗೆ ಸಿಟ್ಟು ತರಿಸಿತ್ತು. ದಿನ ಮನೆಯಲ್ಲಿ ಈ ಸಂಬಂಧ ರಂಪಾಟಗಿಟ್ಟುಕೊಂಡು ನೆಮ್ಮದಿ ಎನ್ನುವುದು ಮನೆಬಿಟ್ಟು ಹೋತು. ಆದ್ದರಿಂದ ಬ್ಯಾಸತ್ತು ಭೂತಲಿಂಗ ಮಾಳಿಗೆ ಮ್ಯಾಲ ಹೋಗಿ ನೇಣು ಹಾಕೊಂಡುಬಿಟ್ಟ. ಸರಿಯಾದ ವೇಳೆಗೆ ಶಿವಲಿಂಗಿ ಬಂದು ಎತ್ತಿಹಿಡಿದು ಕೂಗಾಡಿ ಕುಣಿಕೆ ಹರಿದಿದ್ರೆ ಕತೆಯೇ ಬೇರೆಯಾಕಿತ್ತು. ಇದ ಕಂಡು ಎದೆನೊಂದ ಶಿವಲಿಂಗಿ ‘ನಂಗೆ ಹೊಲ್ದಾಗ ಮನಿ ಮಾಡ್ಕೊಡು ನಾನು ಅಲ್ಲೆ ಇರ್ತೀನಿ. ನಂಗೆ ಅಡವಿಯಾಗಿದ್ದು ಅಭ್ಯಾಸ ಐತಿ’ ಅಂದಳು. ಅವರ ಅಪ್ಪ ಕೆಲ ವರ್ಷ ದೊಡ್ಡಗುಬ್ಬಿಯ ಮಾರಿಹಳ್ಳದಲ್ಲಿ ತೋಟಕಟ್ಟಿಕೊಂಡು ವಾಸವಾಗಿದ್ದ ಆದ್ದರಿಂದ ಶಿವಲಿಂಗಿಗೆ ಅಡವಿ ಜೀವನ ಒಂದು ರೀತಿಯಲ್ಲಿ ರೂಢಿಯಾಗಿ ಹೋಗಿತ್ತು. ಇವರ ಜೋಡಿ ‘ತಮ್ಮ ನಾನು ಬರ್ತೀನಿ’ ಅಂತಾ ಮುದುಕಿನೂ ಹೊಂಟು ನಿಂತಿತು. ತೊಲಗಿದ್ರೆ ಸಾಕು ಆಮೇಲೆ ಗಂಡನ್ನ ಗುದ್ದಿಕಟ್ಟಿ ಬಗ್ಗಿಸಬೋದು ಎಂದು ಮಾಲಿಂಗವ್ವ ತುಟಿ ಬಿಚ್ಚಲಿಲ್ಲ. ಭೂತಲಿಂಗ ಅವನ ಹೆಂಡ್ತಿ ಶಿವಲಿಂಗವ್ವನ ಕೈ ಕಸುಬಿಗೆ ವಾರೋಪ್ಪತ್ತಿನೊಳಗ ಹೊಲಮಾಳದಲ್ಲಿ ವಾರೆಜಪ್ಪರದ ಮನೆ ಎದ್ದು ನಿಂತಿತು. ನೆರ್ಕಿ ಬಿಗಿದು, ತಡಿಕೆಕಟ್ಟಿ ಕೆಮ್ಮಣ್ಣು ಮೆತ್ತಿ ಒಪ್ಪ ಹೊರಣಮಾಡಿದರು. ಊರಾಗಿನ ಪಡಜಂತಿ ಮಾಳಗಿ ಮನಿಗಿಂತ ಎಷ್ಟೋ ನೆಮ್ಮದಿ, ಸುಖ ಚಪ್ಪರದಲ್ಲಿ ಹರಿದಾಡಿತು. ಭೂತಲಿಂಗ ಊರು ಮರೆತು ಕಾಡುಲಿಂಗನಾದ. ಗಂಡ ಹೆಂಡ್ತಿ ಇಬ್ಬರು ಗಟ್ಟಿಯಾಗಿ ದುಡಿಯಾಕ ನಿಂತ್ರು. ಒಂದು ಗಂಡು ಒಂದು ಹೆಣ್ಣು ಮಕ್ಕಳಾಗಿ ಊರಿನ ಶಾಲೆಗೆ ಹೊಂಟವು.

ಜೀವನವು ಸುಖದಿಂದ ಜೀಕುತಿರುವಾಗ ಇತ್ತಕಡೆ ಮಾಲಿಂಗವ್ವನ ಮೂರು ಗಂಡು ಮಕ್ಕಳಿಗೆ ವಿದ್ಯಾ ಅಮಾಸಿಯಾಗಿ ಪಾಲ್ತು ತಿರುಗಾಡುತ್ತಿದವು. ವಿದ್ಯಾ ತೆಲಿಗೆ ಹತ್ತಲಿಲ್ಲ ಹೊಲಮನಿ ಕೆಲಸನಾದ್ರೂ ಮಾಡೀಕೇಂದ್ರ ಸಾಕು ಅಂತಾ ಕಮತಕ್ಕೆ ಹಚ್ಚಿದ. ಹುಡುಗರು ದೊಡ್ಡವರಾದ ಮೇಲೆ ಹೊಲಜಾಸ್ತಿ ಗಳೆವು ನುಗ್ಗೋದಿಲ್ಲ ಅಂತ ಮಾಲಿಂಗವ್ವ ಪಟ್ಟುಕುಂತಿದ್ದಕ್ಕೆ ಲೋನ್ ಮಾಡಿ ಟ್ರ್ಯಾಕ್ಟರ್ ತಂದು ಕೊಟ್ಟ. ಸಂತಿ ಹುಡುಗರ ಸವಾಸ ಮಾಡಿ ಕುಡಿಯೋದು ಕಲಿತು ಮುಖ ತಿಕ್ಕುವಂಗ ವಳ್ಳಿ ಮಾತಾಡಕಚ್ಚಿದವು. ಮಕ್ಕಳು ಬೆಳದು ದೊಡ್ಡವರಾದಂಗ ಸಮಸ್ಯೆಗಳು ದೊಡ್ಡದಾಗಿ ಬೆಳೆಯ ತೊಡಗಿದವು.

ಒಂದು ಸಾರಿ ಹೊಲಮಾಳದ ಕಣದಲ್ಲಿ ಜೋರು ಒಕ್ಕಲು ನೆಡಿತಿತ್ತು. ಕೊಯ್ಲು ಮುಗಿದು ಮೆದೆಕಟ್ಟಿ ಕಣಕ್ಕೆ ನೆಲ್ಲುಹುಲ್ಲನ್ನು ಕೂಲಿಯಾಳಗಳು ಸಾಗಿಸುತ್ತಿದ್ದರು. ಆ ವರ್ಷ ಪೀಕು ಹುಲುಸಾಗಿ ಬಂದಿತ್ತು. ಭೂತಣ್ಣ ಗೆಲುವಾಗಿದ್ದ. ತಿಮ್ನಳ್ಳಿ, ತಿಮ್ಮಿನಕಟ್ಟೆ, ಕುಪ್ಪೆಲೂರುಗಳಿಂದ ಕೂಲಿಯಾಳುಗಳು ಬಂದಿದ್ದವು. ದೂರದ ದೊಡ್ಡಗುಬ್ಬಿಯ ನೆಂಟರಿಷ್ಟರು ಒಕ್ಕಲಿಗೆ ಬಂದು ನಿಂತಿದ್ದರು. ಬೀಗರು ಹೀಗೆ ಒಕ್ಕಲಿನ ವೇಳೆಗೆ ಬಂದು ಗಟ್ಟಿಯಾಗಿ ನಿಂತು ಕೆಲಸ ಮಾಡಿಕೊಟ್ಟು ಹೋಗುವುದು ಹಾವೇರಿ ಸೀಮೆಯ ವಾಡಿಕೆಯಾಗಿತ್ತು. ಹೆಣ್ಣು ಕೊಟ್ಟವರು ಅಳಿಯನ ಸಹಾಯಕ್ಕಾಗದಿದ್ದರೆ ಮತ್ಯಾರು ಆಗ್ತಾರೆ ಹೇಳಿ? ಅದರಂತೆ ಅಂದು ಬಂದು ನಿಂತಿದ್ದರು. ಒಕ್ಕಲು ಭರದಿಂದ ಸಾಗುತಿತ್ತು. ಮಧ್ಯಾಹ್ನದ ಬಿಸಿಲು ತದಕುತಿತ್ತು. ಅಳುಗಳು ಕೊಯ್ಯುವುದು ಮುಗಿದಿದ್ದರಿಂದ ಮೆದೆ ಕಟ್ಟುವುದು, ಕೆಲವರು ಮೆದೆಗಳನ್ನು ಕಣ್ಣಕ್ಕೆ ಹೊರುವುದು. ರೋಣಗಲ್ಲು ಹರ್ತಿ ಹೊಡೆದಂತೆ ನೆರೆಕೋಲು, ಜಂತಿಗುಂಟಿಯಿಂದ ನೆಲ್ಲುಹುಲ್ಲು ಸೋಸುವುದು. ಸೋಸಿದ ನೆಲ್ಲುಹುಲ್ಲನ್ನು ಬಣಬೆಗೆ ಹಾಕುವುದು. ಬೇರೆಯಾದ ನೆಲ್ಲನ್ನು ಗ್ವಾರಿಯಿಂದ ರಾಶಿ ಮಾಡುತ್ತಿದ್ದರು. ಕಣಕ್ಕೆ ಕೂಲಿಯಾಳುಗಳಿಂದ ಜೀವ ಬಂದಿತ್ತು. ಭೂತಲಿಂಗ ಮತ್ತು ಅವನ ನೆಂಟಭಾವ ಕಾಟಲಿಂಗ ಮಂಚಿಗೆಯ ಮೇಲೆ ಕುಂತು ವರ್ಷದ ಕಷ್ಟ ಸುಖ ಮಾತಾಡುತ್ತಿದ್ದರು. ಅವರ ಮಾತಿನ ವಿಸ್ತಾರ ಒಮ್ಮೊಮ್ಮೆ ಹೆಣ್ಣು ಗಂಡು, ಕೊಡುವುದು ತೆಕ್ಕೊಳ್ಳುವುದು, ಹೊಲಮನಿ ವ್ಯಾಜ್ಯಗಳು, ಕೋರ್ಟು ಕಛೇರಿಗೆ ಸಂಬಂಧಿಸಿದಂತೆ ದೊಡ್ಡಗುಬ್ಬಿಯಿಂದ ಧಾರವಾಡದವರೆಗೂ ಹೋಗುತ್ತಿತ್ತು. ನಡುನಡುವೆ ಶಿವಲಿಂಗವ್ವ ಮಾಲಿಂಗವ್ವನ ಕಿತ್ತಾಟವು ಬಂದರು ಅದು ಬಗೆಯರಿಯೋ ಮಾತಲ್ಲಬಿಡು ಎಂದು ಸುಮ್ಮನಾಗುತ್ತಿದ್ದರು.

ಭೂತಲಿಂಗನಿಗೆ ದೂರದಲ್ಲಿ ಟ್ರ್ಯಾಕ್ಟರ್ ಬರೋದು ಆ ಸುಡು ಬಿಸಿಲಲ್ಲಿ ಮಂಜು ಮಂಜಾಗಿ ಕಾಣಿಸಿತು. ಹತ್ತಿರವಾಗುತ್ತಲೇ ಟ್ರ್ಯಾಕ್ಟರ್ ಮೇಲೆ ಕುಳಿತು ಬರುತ್ತಿರುವುದು ತನ್ನ ಹಿರೆಹೆಂಡ್ತಿ ಮಾಲಿಂಗವ್ವ ಅಂತಾ ಗೊತ್ತಾದದ್ದೇ ತಡ ಎದೆ ಒಮ್ಮೆಲೇ ದಸ್ಸಕ್ಕಂದಿತು. ಇಬ್ಬರು ಒಮ್ಮಲೇ ಮಂಚಿಗೆಯಿಂದೆದ್ದರು ‘ಮತ್ತಿನೇನು ಕಾದಿದೆಯೋ ಮೈಲಾರಲಿಂಗ’ ಎಂದು ದಿಗಿಲುಗೊಂಡ. ಪ್ರತಿಸಲ ಬೆಳೆದ ಬೆಳೆಗೆ ಬಂದು ಅಡ್ಡಗಾಲು ಹಾಕುವುದು ಅವನಿಗೆ ತೆಲೆನೋವಾಗಿತ್ತು. ಕಣದಲ್ಲಿ ದೊಡ್ಡ ರಂಪಾಟವೇ ನೆಡದು ಹೊಕ್ಕಿತ್ತು. ಶಿವಲಿಂಗವ್ವ ಮಾಲಿಂಗವ್ವ ತೆಕ್ಕೆಬಿದ್ದು ಜಡೆಕಿತ್ತು ಜಗಳ ಕಾಯುತಿದ್ರು. ಇತ್ತೀಚಿಗೆ ಮಾಲಿಂಗವ್ವ ತನ್ನ ಮಕ್ಕಳನ್ನು ಚೂ ಬಿಡುತ್ತಿದಳು. ತಾಯಿಯೇ ಚೂ ಬಿಟ್ಟರೆ ಕಚ್ಚದೆಯಿರುತ್ತವೆಯೇ? ಅವಕ್ಕೆ ಬೊಗಳುವದಕ್ಕಿಂತ ಕಚ್ಚುವುದೇ ರೂಡಿಯಾಗಿತ್ತು. ಹಳಸಿದ ಹಂಬಲಿಗೆ ಕಚ್ಚಾಡುವುದು ನಾಯಿಯ ಹುಟ್ಟುಗುಣವಲ್ಲವೇ? ಅಂತೂ ಚೆನ್ನಾಗಿ ಕಚ್ಚಾಡುವದನ್ನು ಕಲಿಸಿದ್ದಳು ಮಾಲಿಂಗವ್ವ. ಎದೆಯತ್ತರಕ್ಕೆ ಬೆಳೆದ ಮೂರು ಗಂಡು ಮಕ್ಕಳ ಬಲವಿತ್ತು ಅವಳಲ್ಲಿ. ಅದನ್ನು ನೆನೆದ ಭೂತಲಿಂಗನ ಮುಖ ಒಮ್ಮೆಲೆ ಕರಿಬಡಿಯಿತು.

ಟ್ರ್ಯಾಕ್ಟರ್ ಸಮೇತ ಬಂದಿದ್ದ ಮಾಲಿಂಗವ್ವ ಎರಡರಲ್ಲಿ ಒಂದು ಕಾಣಿಸಬೇಕು ಅಂತಲೇ ಮಕ್ಕಳಿಗೆ ಹೇಳಿದ್ದಳು. ಒಂದು ಹಿಸ್ಸೇ ಪಾಲಾಗಬೇಕು ಇಲ್ಲವೇ ಬೆಳೆ ಕೊಡಬೇಕು. ಭೂತಲಿಂಗನ ಎದೆ ಹಾರಿ ಹಾರಿ ಬೀಳತೊಡಗಿತು. ಮಾಲಿಂಗವ್ವನ ಹಕ್ಕಿಕತ್ತು ತಿಳಿದಿದ್ದ ನೆಂಟಭಾವ ಕಾಟಲಿಂಗನೂ ಕೂಡಾ ಊಹಿಸದ ಘಟನೆ ಅಂದು ನೆಡದು ಹೋಯಿತು. ಮಾಲಿಂಗವ್ವ ಬಂದವಳೇ ಕೂಲಿಯಾಳುಗಳೊಂದಿಗೆ ಅದು ಇದು ಮಾತಾಡತೊಡಗಿದಳು. ಅವಳ ಮಾತಿನ ಲಯ ತಮ್ಮ ಪಾಲಿನ ನೆಲ್ಲನ್ನು ಬೇರೆ ಹಾಕಬೇಕು ಎನ್ನುವುದಾಗಿತ್ತು. ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ಭೂತಲಿಂಗನ ಎದೆಯ ಮೇಲೆ ಗುಂಡುಕಲ್ಲು ಬಿದ್ದಂಗಾತು. ಮಾಲಿಂಗವ್ವ ‘ನಾವು ಟ್ಯಾಕ್ರಿ ತಂದೀವಿ... ಬೇಕಾದ್ರೆ ಒಕ್ಕಲು ಮಾಡಿಕೊಡ್ತೀವಿ. ನಮ್ಮ ಪಾಲಿಂದ ನಮ್ಗೆ ಕೊಟ್ಬಿಡ್ರಿ ಅಷ್ಟೇ’ ಎಂದು ಭೂತಲಿಂಗನಿಗೆ ಕೇಳುವಂತೆ ಗಟ್ಟಿಯಾಗೆ ಹೇಳಿದಳು. ಮೆದೆ ಕಟ್ಟುತಿದ್ದ ಶಿವಲಿಂಗವ್ವ ಕಣ್ಣು ಕೆಂಪಗೆ ಮಾಡಿ "ರೊಳ್ಳಿ ಹೊಡೆಯಾಕ ಟ್ಯಾಕ್ರಿ ಕೇಳಿದ್ರೆ ಕೊಡಲಿಲ್ಲ, ಬಾಡಗಿ ಟ್ಯಾಕ್ರಿ ಹಚ್ಚಿ ಹೊಡಸ್ಯಾವಿ, ನಾಟಿಗೂ ಬಂದಿಲ್ಲ, ಎಣ್ಣಿಗೂ ಬಂದಿಲ್ಲ, ಒಕ್ಕಲಿಗೆ ಬಂದಾಳ ಗೌಡಸೇನಿ. ಏನು ಗೆಯ್ದಿಯಂತ ಕೇಳೋಕ ಬಂದಿಯೇ ಮನೆಹಾಳಿ" ಎಂದು ರೇಗಿ ಕಚ್ಚಿ ಅಡ್ರಗಟ್ಟಿದಳು. ‘ನನ್ನ ಮನೆಹಾಳಿ ಅಂತೀಯಾ ಹಡ್ಬೇಗುಟ್ಟಿದವಳೇ. ನಾನು ಕಣೇ ಕಟ್ಗೆಂಡೊಳು. ನಡುಬರಕ ಬಂದು ನಾಟಕ ಮಾಡ್ತಿಯಾ. ನಿನ್ನ ಕಳ್ಳಾಟ ಗೊತ್ತಿಲ್ಲ ಅಂತಾ ಮಾಡಿಯಾ ಕಳ್ಳಗಂಟಿಲಿ ಎಲ್ಲದನ್ನೂ ತವರಿಗೆ ಸಾಗಿಸೋ ಕಳ್ಳಮಿಂಟಿ...!’ ಎಂದವಳೇ ಮಗನ ಕಡೆ ನೋಡಿ "ಲೇ ಬೋರ ತಂಬಾರಲೇ ಟ್ಯಾಕ್ರಿಯ ಯಾರು ಅಡ್ಡಬರತ್ತಾರ ನಾನು ನೋಡ್ತೀನಿ" ಎಂದು ಪಕ್ಕದಲ್ಲಿದ್ದ ನೆರೆಕೋಲು ತೆಗೆದು ಜೋರಾಗಿ ಬಿಸಿದಳು. ಮಾತಿಗೆ ಮಾತು ಬಿರುಸಾಗುತ್ತ ಕೈ ಕೈ ಹಚ್ಚಿದರು. ಒಬ್ಬರ ಸೀರೆಯನ್ನು ಒಬ್ಬರು ಎಳೆದಾಡಿ ಜಡೆ ಜಡೆಯಿಡಿದು ಕಿತ್ತಾಡತೊಡಗಿದರು. ಕೂಲಿಯಾಳುಗಳು ಮಾಡುವ ಕೆಲಸ ನಿಲ್ಲಿಸಿ ನೋಡುತ್ತಾ ನಿಂತರು. ನೆಡೆಯುವ ಜಟಾಪಟಿಯನ್ನು ಬಿಡಿಸಲು ಭೂತಲಿಂಗನು ಧಾವಿಸಿ ಬಂದ. ಅದೇ ವೇಳೆಗೆ ಬೋರಲಿಂಗ ಟ್ರ್ಯಾಕ್ಟರ್ ನುಗ್ಗಿಸಿಬಿಟ್ಟ. ಟ್ರ್ಯಾಕ್ಟರ್ ಭೂತಲಿಂಗನ ಮೇಲೆ ಹರಿದುಬಿಟ್ಟಿತು. ಅಯ್ಯೋಯ್ಯೋ ಭೂತಣ್ಣ ಬಿದ್ದ! ಭೂತಣ್ಣ ಬಿದ್ದ! ಹತ್ತಿತು ಹತ್ತಿತು!ಟ್ಯಾಕ್ರಿ ಹತ್ತಿತು! ಕಾಲು ಮುರಿಯಿತು ತೆಲೆ ಹೊಡೆಯಿತು ಅಯ್ಯೋಯ್ಯೋ ಭೂತಣ್ಣ ಸತ್ತ! ಮೇಲೆತ್ತಿ ಮೇಲೆತ್ತಿ! ನೀರು ತನ್ನಿ ನೀರು! ಇತ್ಯಾದಿ ಕೂಗುಗಳೋಡನೆ ಕೂಲಿಯಾಳುಗಳು ಭೂತಣ್ಣನ ಕಡೆಗೆ ಓಡಿದರು. ಕಿತ್ತಾಡುವದನ್ನು ಬಿಟ್ಟು ಎದೆಬಿರಿಯ ಕೂಗಿಕೊಳ್ಳುತ್ತಾ ಶಿವಲಿಂಗವ್ವ ಓಡಿಬಂದಳು. ನೆಂಟಭಾವ ಕಾಟಲಿಂಗ ಬಂದು ಭೂತಣ್ಣನನ್ನು ಮೇಲೆತ್ತಿದನು. ಭೂತಲಿಂಗನಿಗೆ ಮೇಲೇಳಲಾಗಲಿಲ್ಲ. ಎಡಗಾಲು ಮೇಲೆ ಟ್ರ್ಯಾಕ್ಟರ್ ಗಾಲಿ ಹತ್ತಿದ್ದರಿಂದ ತೀರಿವಿಕೊಂಡಿತ್ತು. ಎಲ್ಲರೂ ಎತ್ತಿ ನಿಲ್ಲಿಸಿದಾಗ ಎಡಗಾಲು ಗಡಿಯಾರದ ಲೋಲಕದಂತೆ ಅತ್ತಿಂದಿತ್ತ ಓಲಾಡುತಿತ್ತು. ಸಹಿಸಲಾಗದ ನೋವಿನಿಂದ ಅಮ್ಮಯ್ಯ ದಮ್ಮಯ್ಯ ಕಾಲು... ಕಾಲು... ಹೋ...ತ... ಪ್ಪ ಹೋತು ಎಂದು ಭೂತಲಿಂಗ ಹಲವರಿಯ ತೊಡಗಿದ.

ಭೂತಲಿಂಗನನ್ನು ಗಾಡಿಯಲ್ಲಿ ಹಾಕಿ ತಿಮ್ಮಿನಕ್ಕಟ್ಟೆ ಆಸ್ಪತ್ರೆಗೆ ಕಳುಹಿಸಿದರು. ಮಹಾಲಿಂಗವ್ವಗೆ ಭಯವಾಗಿ ತನ್ನ ಮಕ್ಕಳನ್ನು ಕರೆದುಕೊಂಡು ಬೇಗ ಬೇಗನೆ ಊರಕಡೆ ಓಡಿದಳು. ದಾರಿಯುದ್ದಕ್ಕೂ ತನ್ನ ಮಗ ಬೋರಲಿಂಗನಿಗೆ ಉಗಿಯುವದನ್ನು ಬಿಡಲಿಲ್ಲ. ಇತ್ತಕಡೆ ಪೀರಲಿಂಗ ಮತ್ತು ಅವನ ಮಗ ಕಾಟಲಿಂಗನಿಗೆ ಕಣದಲ್ಲಿಯ ರಾಶಿಯನ್ನು ಲೂಟಿ ಮಾಡಲು ಒಳ್ಳೆ ಕಾಮೈತಿ ಸಿಕ್ಕಂಗಾತು. ಇಬ್ಬರು ಎಗ್ಗಿಲ್ಲದೆ ದೊಡ್ಡಗುಬ್ಬಿಗೆ ಸಾಗಿಸಿದರು.

ಧಾರವಾಡಕ್ಕೆ ಓದಲು ಹೋಗಿದ್ದ ಚಿಕ್ಕಹೆಂಡ್ತಿ ಶಿವಲಿಂಗವ್ವನ ಮಗ ಸಿದ್ದಲಿಂಗ ಅಪ್ಪನ ಸ್ಥಿತಿ ತಿಳಿದು ಹೊಲಮಾಳಕ್ಕೆ ದಮ್ಮುಗುಟ್ಟಿಕೊಂಡು ಬಂದನು. ಕಾಲು ಮುರಿದುಕೊಂಡು ಮೂಲೆಯಲ್ಲಿ ಕುಳಿತಿದ್ದ ಅಪ್ಪನನ್ನು ತಬ್ಬಿಕೊಂಡು ಮೆಲ್ಲಗೆ ಮುಖದಡವಿದ ಹರುಕು ಪುರುಕುಗಡ್ಡ, ಬೋಕ್ಕುತೆಲೆ, ಸುಕ್ಕಾದ ಹಣೆ, ಮಂಜೂರು ಪಾಟಿನ ಅಂಗಿ, ತೀರಿವಿಕೊಂಡ ಕಾಲು... ನೋಡಿ ತುಂಬಾ ವ್ಯಥೆಪಟ್ಟ. ಚಿಕ್ಕವನಿದ್ದಾಗ ಉಕ್ಕಡಗಾತ್ರಿ ಜಾತ್ರಿಲಿ ಹೆಗಲಮೇಲೆ ಕೂರಿಸಿಕೊಂಡು ತೇರು ತೋರಿಸಿದ್ದು. ಆಟಿಕೆ ಸಾಮಾನು ಬೇಕು ಅಂತಾ ಕಿಲ್ಲ್ಯಾದರ ಅಂಗಡಿ ಮುಂದ ಹಠಮಾಡಿ ಬಿದ್ದು ಹೊಳ್ಯಾಡಿದಾಗ ಇದ್ದಬದ್ದ ಕಾಸು ಜೋಡಿಸಿ ಕೀಲಿಗೊಂಬಿ ಕೊಡಿಸಿದ್ದು. ಜಾಲಿಗುಂಡಿ ದಂಡೆಯಲ್ಲಿನ ಕರಿಜಾಲಿ ಮರದ ಬಡ್ಡೆಯಿಂದ ಬುಗುರಿ ಕೆತ್ತಿಕೊಟ್ಟಿದ್ದು. ಪೆಟ್ಲು ನಿಲುಕದಿದ್ರು ಸೈಕಲ್ ಕಲಿಸಿದ್ದು. ಸಾಲಿಗೆ ಹೋಗಲ್ಲ ಅಂತಾ ಕುಂತಾಗ ಕೈ ಕಾಲು ಕಟ್ಟಿ ಎತ್ತಿಗೆಂದು ಹೋಗಿ ಶಾಲೆಗೆ ಹಾಕಿಬಂದದ್ದು. ಎಲ್ಲ ನೆನಪುಗಳು ಸಿವುಡು ಸಿವುಡಾಗಿ ಬಿಚ್ಚಿಕೊಂಡವು. ಸಿದ್ದಲಿಂಗನ ಕಣ್ಣಂಚಿನಿಂದ ವಸರಿದ ಕಣ್ಣೀರು ಕೆನ್ನೆಗಿಳಿಯತೊಡಗಿದವು.

ಇದನ್ನೆಲ್ಲಾ ಕೇಳುತ್ತಾ ಕುಂತ ಬೋಳ್ಗುಂಟಿ ಬಸಣ್ಣನ ಕಣ್ಣುಗಳಲ್ಲಿ ಕೂಡಾ ತಳ್ಳಗೆ ನೀರಾಡಿತು. ಅಷ್ಟೋತ್ತಿಗೆ ಮಳೆ ಹೊಳವಾಗಿತ್ತು. ಬಿಸಿಲು ಇಣುಕಿ ಹಾಕಲು ತಡವರಿಸುತಿತ್ತು. ಜಾಲಿಮರದಲ್ಲಿಯ ಚಿಟುಗುಬ್ಬಿಮರಿಗಳು ಗೂಡಿನಿಂದ ಬಾನಿಗೆ ಹಾರುತ್ತಿದ್ದವು. ಆದರೆ ಬೀಜದ ಕೋಣ ಮಾತ್ರ ಹತ್ತದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.