ADVERTISEMENT

ಶ್ರೀದೇವಿ ಕಳಸದ ಬರೆದ ಕಥೆ: ಯಂಕ್ ಪೋಸ್ಟ್

ಶ್ರೀದೇವಿ ಕಳಸದ
Published 9 ಮೇ 2021, 7:29 IST
Last Updated 9 ಮೇ 2021, 7:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಯಾವುದೋ ಒಂದು ಕೆಟ್ಟ ಹುಳ ಹರದಾಡಿ ಹೋಯ್ತು ಅಂತ ಜಾಡಿಸಿಕೊಂಡು ಎದ್ದು ಹೊರಟುಬಿಡಬೇಕು ನಿರು’

ಕಡಲೆಬೇಳೆಗಿಂತ ಚಿಕ್ಕದಿದೆ ಅದು, ಅದರ ಬೆನ್ನ ಮೇಲೆ ಫ್ರೀ ಹ್ಯಾಂಡ್ ಡಿಸೈನ್ ನೋಡು. ಹಿಂದೆ ಆಸ್ಥಾನದಲ್ಲಿ ಚಿತ್ರಕಲಾವಿದರಿಗೆ ಕೊಟ್ರೆ ಇಂಥ ಸವಾಲುಗಳನ್ನ ಕೊಡಬೇಕಿತ್ತು.

‘ಅದರ ಸ್ವಭಾವನೇ ಹರಿದಾಡೋದು ಅಂದಮೇಲೆ ಮಾಡೋದೇನು?’

ADVERTISEMENT

ಜಟ್ಟಿಗಳಿಗೆ ಇದರ ಕೈಕಾಲುಗಳನ್ನ ಕಟ್ಟಿ ಹಾಕುವ ಸ್ಪರ್ಧೆ ಏರ್ಪಡಿಸಬೇಕಿತ್ತು.

‘ತನಗೇನು ಬೇಕೋ ಅದನ್ನು ಮುಲಾಜಿಲ್ಲದೆ ಹುಡುಕಿಕೊ‍ಳ್ಳುತ್ತೆ’

ಜ್ಯೋತಿಷಿಗಳಿಗೆ ಇದರ ಜಾತಕ ಬರೆಯೋದಕ್ಕೆ ಹೇಳಬೇಕಿತ್ತು.

‘ಹೇಗೆ ಎಲ್ಲಿ ಹೊಕ್ಕು ಎಲ್ಲಿಂದ ಬರುತ್ತೆ ಅಂತಾನೇ ತಿಳಿಯೋಲ್ಲ ನೋಡು’

ಗೂಢಚಾರಿಗಳಿಗೆ ಆ ಕೆಲಸ ವಹಿಸಬೇಕಿತ್ತು.

‘ಆದರೂ ಹುಳ ಹುಳಾನೇ’

ಕುಟುಂಬೋ ರಕ್ಷತಿ ರಕ್ಷಿತಃ

‘ನಿರು, ಎಷ್ಟು ದಿನ ನೀನು ಹೀಗೇ ಇರ್ತಿ?’

ನಾಳೆತನಕ. ಈವತ್ತಿನ ಸ್ನಾನ ಆಗಿದೆಯಲ್ಲ?

‘ಸಾಕು ತಮಾಷೆ. ಇದನ್ನೇ ಎಷ್ಟು ದಿನ ಮನಸಲ್ಲಿಟ್ಕೊಂಡು ಹೀಗೇ ಇರ್ತಿ ಅಂದೆ.

‘ಕಣ್ಣಲ್ಲಿ ಕಣ್ಣಿಟ್ಟು ನೋಡು, ತಮಾಷೆ ಕಾಣ್ತಿದೆಯಾ ನಿನಗೆ?

‘ಇಲ್ಲ ಇಡೀ ಬ್ರಹ್ಮಾಂಡವೇ ಕಾಣ್ತಿದೆ’

ನಿನಗಾದರೂ ಗೊತ್ತಾಯ್ತಲ್ಲ, ನಾನು ಕೇವಲ ಇಂಥವರ ಮಗಳು, ಮೊಮ್ಮಗಳು ಮಾತ್ರ ಅಲ್ಲ. ಆ ಮನೆಗಷ್ಟೇ, ಆ ಮನೆತನಕ್ಕಷ್ಟೇ, ಈ ಊರಿಗಷ್ಟೇ, ಈ ರಾಜ್ಯಕ್ಕಷ್ಟೇ, ಈ ದೇಶಕ್ಕಷ್ಟೇ ಸಂಬಂಧಿಸಿದವಳು ಅಲ್ಲಾ ಅಂತ?

‘ಇದೆಲ್ಲ ಭಾಷಣಕ್ಕೆ ಚೆಂದ’

ಅಂದಗೆಟ್ಟಿದ್ದೆಲ್ಲ ಬದುಕು ಅಂತಾನಾ?

‘ಛೆ ನಾನೆಲ್ಲಿ ಹಾಗಂದೆ?’

ಮಿಸ್ಟರ್ ಅಪ್ರಮೇಯ, ನಾಳೆ ಒಂದು ಮ್ಯಾಜಿಕ್ ಆಗುತ್ತೆ ನೋಡ್ತಿರು!

ಎಲೆಯ ಮೇಲಿರುವ ಹುಳದ ಫೋಟೋ ಪೋಸ್ಟ್ ಮಾಡಿ ಕ್ಯಾಮೆರಾ ಲೆನ್ಸ್ ಮುಚ್ಚುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು.

***

ಹರಿದಾಡಿಸಿಕೊಂಡದ್ದರ ಬದುಕು ನಿಜಕ್ಕೂ ಶುರುವಾಗೋದೇ ಆನಂತರ. ಅಲ್ಲೀತನಕ ಯಾರೋ ಹೊಯ್ದ ಎರಕದಲ್ಲಿ ಅದು ಹೊರಳಾಡತಿರುತ್ತೆ. ತಾನು ತನ್ನತನದ ಅರಿವಿನ ಸೂಕ್ಷ್ಮ ಟಿಸಿಲುಗಳೊಡೆಯುವ ಪ್ರಕ್ರಿಯೆ ಶುರುವಾಗುವುದೇ ಇಂಥ ಆಕಸ್ಮಿಕಗಳಿಂದ, ಅನುಚಿತಗಳಿಂದ. ಆದರೆ ಆನಂತರ ನಮ್ಮ ಮೈಮನಸಿನ ಕಣಕಣವೂ ಅದೆಷ್ಟು ಪ್ರಜ್ಞಾವಸ್ಥೆಗೆ ಜಾರಿಬಿಡುತ್ತೆ ಅಂದರೆ, ಬಹುಶಃ ಇಡೀ ಜೀವಮಾನ ನಿದ್ರೆಯಲ್ಲಿಯೂ ಜಾಗೃತವಾಗಿರುವಷ್ಟು. ಯಾರನ್ನೂ ಅನುಮಾನಿಸುವಷ್ಟು. ಹಾಗಾಗಿಯೇ ಲೋಕಾಂತದ ನಂಬಿಕೆಗಳು ಎಂದೂ ತಾಳೆಯಾಗದೆ ಏಕಾಂತದ ಸತ್ಯಾನ್ವೇಷಣೆಯ ಕಠಿಣ ಹಾದಿಯಲ್ಲಿ ಅದು ತನಗರಿವಿಲ್ಲದೆಯೇ ತೆರೆದುಕೊಳ್ಳುತ್ತಾ ಸಾಗುತ್ತೆ.

‘ಮಿಸ್ ನಿರೂಪಿತಾ, ಸಾರಿ ಫಾರ್ ದಿ ಇಂಟರ್ಫಿಯರೆನ್ಸ್. ಫೆಂಟಾಸ್ಟಿಕ್ ಅಂಡ್ ಇಟ್ಸ್‍ ರಿಯಲೀ ಥಾಟ್ ಪ್ರೊವೋಕಿಂಗ್ ಟೂ! ಆದರೆ ಇಷ್ಟೊಂದು ಅಬ್‍ಸ್ಟ್ರ‍್ಯಾಕ್ಟ್? ಇಲ್ಲಿ ಬಹಳಷ್ಟು ಕಬ್‍ ಜರ್ನಲಿಸ್ಟ್‌ಗಳೂ ಇದಾರೆ. ನೀವು ಪ್ರೆಸ್ ಮೀಟ್ ಕರೆದ ಉದ್ದೇಶದ ಬಗ್ಗೆ ಸ್ಪಷ್ಟವಾಗಿ ಒಂದು ಸಣ್ಣ ಇಂಟ್ರಡಕ್ಷನ್ ಕೊಟ್ಟರೆ ಸಾಕು. ಆಗ ನಮಗೂ ಪ್ರಶ್ನೆ ಕೇಳಲು ಅನುಕೂಲವಾಗುತ್ತೆ. ಇಟ್ ಈಸ್ ಟೋಟಲಿ ಅನ್‍ಕನ್ವೆನ್ಷನಲ್. ಇಫ್ ಯೂ ಡೋಂಟ್ ಮೈಂಡ್, ಕ್ಯಾನ್ ಐ ಹ್ಯಾವ್ ಅ ಕಾಪಿ ಆಫ್ ಪ್ರೆಸ್ ರಿಲೀಸ್?’

ಇಂಗ್ಲಿಷ್ ಪತ್ರಿಕೆಯ ಹಿರಿಯ ವರದಿಗಾರನೊಬ್ಬ ಹೇಳಿದ್ದನ್ನು ಅನುಮೋದಿಸುವಂತೆ ಎಲ್ಲರೂ ಕೈ ಎತ್ತಿದರು. ನಿಜಕ್ಕೂ ನನಗೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ. ಎಲ್ಲಾ ಸೇರಿ ಮುತ್ತಿಗೆ ಹಾಕಿದರೆ? ಮೈಕುಗಳ ನಡುವೆ ನಾನು ತಲೆತಗ್ಗಿಸಿ ಕುಳಿತುಕೊಂಡ ದೃಶ್ಯ ಎಲ್ಲೆಡೆ ಪ್ರಸಾರವಾದರೆ?

ಇದ್ದಕ್ಕಿದ್ದಂತೆ ಸುತ್ತಲಿನ ಕಿಟಕಿಗಳು ಹೊರಗಿನಿಂದ ಒಂದೊಂದೇ ಮುಚ್ಚಿಕೊಂಡವು. ಅಲ್ಲಿದ್ದವರೆಲ್ಲ ಏನು ನಡೆಯುತ್ತಿದೆ ಎಂದು ಗ್ರಹಿಸುವ ಮೊದಲೇ ಜೇನುಹುಳುಗಳು ನುಗ್ಗಿದ್ದವು. ಎಲ್ಲರೂ ಇನ್ನೊಂದು ಕೋಣೆಗೆ ನುಗ್ಗಿ ಬಾಗಿಲು ಹಾಕಿಕೊಂಡರು. ನಾನೊಬ್ಬಳೇ ಆ ದೊಡ್ಡ ಹಾಲಿನಲ್ಲಿ ಉಸಿರುಬಿಗಿಹಿಡಿದು ಕುಳಿತೆ. ಎದುರಿನ ಮೂಲೆಯಲ್ಲಿದ್ದ ಕುರ್ಚಿಗೆ ಯಾರೋ ಕಪ್ಪು ಜಾಕೇಟಿನಂಥದ್ದೇನೋ ಹೊದಿಸಿ ಹೋಗಿದ್ದರು. ಅದು ಏನಂತ ಸರಿಯಾಗಿ ಗೊತ್ತಾಗಲಿಲ್ಲ.

ಜೇನುಹುಳುಗಳ ದಂಡು ಕಬ್ಬನ್ ಪಾರ್ಕಿನೆಡೆ ನುಗ್ಗುತ್ತಿದ್ದಂತೆ, ಪತ್ರಿಕಾಗೋಷ್ಠಿ ಮುಂದುವರಿಯಿತು.

ತುಪ್ಪ ಕಟ್ಟಿದ್ದಕ್ಕೇ ಕಲ್ಲಿನೆಸೆತ ಬೀಳೋದಲ್ವಾ? ಎಂಥ ಬಿರುಗಾಳಿಮಳೆಯನ್ನೂ ತಡೆದುಕೊಳ್ಳುವ ಅತೀ ಪರಿಶ್ರಮಜೀವಿಗಳಾದ ಅವು, ಹೀಗೆ ಒಂದು ಸಣ್ಣ ಕಲ್ಲಿನೆಸೆತಕ್ಕೆ ಹುಚ್ಚೆದ್ದು ಚದುರಿಬಿಡ್ತಾವೆ, ಮತ್ತೆ ಕಂಡವರಿಗೆಲ್ಲಾ ಕಚ್ಚತಾವೆ ಅಂತಂದ್ರೆ ಅವುಗಳ ಹಿಂದಿನ ಸೂಕ್ಷ್ಮ ಯೋಚಿಸುವಂಥದ್ದೇ ಅಲ್ವಾ?

‘ಅಲ್ಲಾ ನೀವ್ ನಮಗ್ಯಾಕೆ ಒಂದೇ ಸಮ ಕಚ್ತಿದೀರಾ? ನಿಮ್ಮದೇನಾದರೂ ಆಶ್ರಮಗೀಶ್ರಮ ಕಟ್ಟೋ ಪ್ಲ್ಯಾನ್ ಇದೆಯಾ? ದಯವಿಟ್ಟು ಬೇಗನೇ ಸಬ್ಜೆಕ್ಟಿಗೆ ಬಂದ್ಬಿಡಿ ಅತ್ಲಾಗೆ’ ಸೀನಿಯರ್ ರಿಪೋರ್ಟರ್‌ನೊಬ್ಬ ಬೆಳಗಿನ ನಾಲ್ಕೂ ಪ್ರೆಸ್ ರಿಲೀಸ್‍ಗಳನ್ನು ಒಟ್ಟಿಗೇ ಕಲೆಕ್ಟ್ ಮಾಡಿಕೊಂಡು ಗೊಣಗಿಕೊಳ್ಳುತ್ತ ಸಿಗರೇಟಿಗೆ ಲೈಟರ್ ಹೊತ್ತಿಸಿ ಲಾಂಜಿಗೆ ಹೋದ.

‘ತಲೆ ಇಲ್ಲ ಬುಡಾ ಇಲ್ಲ ಏನೇನೋ ಬಡಬಡಸ್ತದೆ. ಇದು ಸಿಂಗಲ್ ಕಾಲಮ್ಮಲ್ಲ, ಸೀದಾ ಕ.ಬುಗೂ ಅಲ್ಲ ಇದು ಇಲ್ಲಿಗೇ…’ ಆ್ಯಶ್ ಟ್ರೇಗೆ ಸಿಗರೇಟಿನ ಮೂತಿ ಚುಚ್ಚಿದ.

ಬಾಗಿಲು ಹಾಕಲು ಬಂದ ವೆಂಕಟೇಶಿ, ‘ಮ್ಯಾಡಮ್ನೋರೇ ಓದವಾರಾನೇ ಯೋಳಿದ್ನಲ್ವರಾ, ಬರವಾಗ ಪ್ರೆಸ್‍ ರಿಲೀಸ್ ಕಾಪಿಗಳು ಅಂಗೇ ಏನಾರಾ ಸಣ್ಪುಟ್ ಕಾಣ್ಕೆ, ಜೊತೀಗ್ ನಿಮ್ಮ ಅತ್ರ‍್ದವ್ರು ಒಂದಿಬ್ರನ್ನ ಕರ್ಕಂಬನ್ನಿ ಅಂತ.’

ಮಾರನೇ ದಿನ ಎಣಿಸಿದಂತೆ ಯಾವ ಪತ್ರಿಕೆ, ಟಿವಿಗಳೂ ವರದಿ ಮಾಡಿರಲಿಲ್ಲ. ಮಾಡಲು ಇದ್ದಿದ್ದಾದರೂ ಏನು ಅವರ ರೀತಿಯಲ್ಲಿ? ಆದರೆ ಬೆಳಗ್ಗೆ ಯಾವುದೋ ನಂಬರಿಂದ ಒಂದು ಲಿಂಕ್ ಬಂದಹಾಗಿತ್ತು.

ಅರೆ! ನನ್ನ ಎಡಗಲ್ಲದ ಮೇಲೆ ಜೇನುಹುಳುವಿನ ಕುಟುಕು ಫೋಕಸ್ಸಾಗಿ ಗುಂಡುಸೂಜಿಯಂತೆ ಕಾಣ್ತಿದೆ. ಹಾರಿಹೋಗುತ್ತಿದ್ದ ಹುಳ ಬ್ಲರ್ ಆಗಿದೆ. ‘ಯಂಕ್ ಪೋಸ್ಟ್’ ಪೋರ್ಟಲ್ಲಿನಲ್ಲಿ ಮತ್ತೆ ಮತ್ತೆ ನೋಡಿದೆ ಅದು ನನ್ನದೇ ಮುಖ. ಕ್ಯಾಪ್ಷನ್; ಭರವಸೆ ಎನ್ನುವ ಹುಳ ಮಾತ್ರ ಯಾವ ಹೂವಿಲ್ಲದೆಯೂ ಮಧುವನ್ನು ತಯಾರಿಸುತ್ತದೆ.

ದೇವರೇ… ಹದಿನೈದು ವರ್ಷಗಳ ಹಿಂದೆ ನನಗಾದ ಅನ್ಯಾಯವನ್ನು ಹೇಳಿ, ನನ್ನೊಳಗಿನ ಧಗೆಯನ್ನು ಇಂದು ಎಲ್ಲರೆದುರೂ ಕಾರಿಕೊಂಡುಬಿಡಬೇಕು ಅಂತೆಲ್ಲ ಬಯಸಿದೆ. ಆದರೆ ಆಗುವುದೆಲ್ಲಾ ಎಷ್ಟೊಂದು ಒಳ್ಳೆಯದಕ್ಕೆ! ಈ ಒಂದು ಸಾಲು ನನ್ನನ್ನು ಮಂಜಿನ ಹನಿಯಂತೆ ಮತ್ತೆ ಮತ್ತೆ ಕರಗಿಸುತ್ತಿದೆ. ಒಂದು ಅನುಭವವನ್ನು ವಸ್ತುನಿಷ್ಠವಾಗಿ ಒಂದೇ ಸಲಕ್ಕೆ ಎಲ್ಲರೆದುರು ವ್ಯಕ್ತಪಡಿಸಲು ಆಗದ ನನ್ನ ಪುರಾತನ ಸಮಸ್ಯೆಯೇ ನನ್ನನ್ನಿಂದು ಬೇರೊಂದು ಸ್ತರದಲ್ಲಿ ಯೋಚಿಸುವಂತೆ ಮಾಡುತ್ತಿದೆ. ಇದಕ್ಕಿಂತ ದೊಡ್ಡ ಮ್ಯಾಜಿಕ್ ಬೇಕಾ? ಇಲ್ಲವಾದಲ್ಲಿ ಇಷ್ಟೊತ್ತಿಗೆ ನಾನೊಂದು ಡೆಮೋ ಪೀಸ್!

ಇಲ್ಲ ಇನ್ನು ನನ್ನ ಸ್ವಭಾವಗಳನ್ನು ನಾನು ಯಾರ ಒತ್ತಾಯಕ್ಕೂ ಉದ್ಧಾರಕ್ಕೂ ಬದಲಾಯಿಸಿಕೊಳ್ಳಲಾರೆ. ಹೀಗಂತ ಅಪ್ಪ ಅಮ್ಮನಿಗೆ ಮೆಸೇಜ್ ಮಾಡಿ ನಿರಾಳವಾಗಬೇಕೆಂದು ಮೊಬೈಲ್ ಕೈಗೆತ್ತಿಕೊಂಡೆ. ಯಾಕೆ ಹೇಳಬೇಕು? ಅನ್ನಿಸಿತು.

ಅಪ್ರೂ, ನಾವಿರುವ ಹಾಗೆ ಇದ್ದರೆನೇ ನಮ್ಮೊಳಗಿನ ಶಕ್ತಿ ಘನೀಕೃತಗೊಳ್ಳುವುದಲ್ವಾ?

‘ಗೊತ್ತಿಲ್ಲ ನಿರು, ನಾನು ಕೆಲಸ ಮುಗಿಸಿ ಮಲಗಿದ್ದೇ ಬೆಳಗ್ಗೆ ನಾಲ್ಕಕ್ಕೆ, ತಲೆ ತಿನ್ನಬೇಡ ಇರೋದೊಂದೇ ಭಾನುವಾರ. ಹೋಗಿ ಆ ನಿನ್ನ ರಾಮಮೂರ್ತಿಯನ್ನ ಕೇಳ್ಕೋ’

‘ಸಮಾಜದ ಸ್ವಾಸ್ಥ್ಯವೇ ನಮ್ಮ ಸ್ವಾಸ್ಥ್ಯ. ಅದು ನಿರೀಕ್ಷಿಸುವಂತೆ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಪರ್ಸನಾಲಿಟಿ ಟ್ಯೂಟರ್ ರಾಮಮೂರ್ತಿಯ ಬದಲಾಗದ ಸ್ಟೇಟಸ್ ಅನ್ನು ಓದಿ ಚಚ್ಚಿ ಹಾಕಿಬಿಡಬೇಕು ಅನ್ನುವಷ್ಟು ಕೋಪ ಬಂದಿತು. ಅಮ್ಮ ಐದು ಸಾವಿರ ರೂಪಾಯಿ ಅಡ್ವಾನ್ಸ್ ಪೇ ಮಾಡಿದ್ದಕ್ಕೆ ರಸೀದಿ ಕಳಿಸಿ ಥ್ಯಾಂಕ್ಸ್ ಬೇರೆ ಹೇಳಿದ್ದ. ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿ ಅವನ ನಂಬರ್ ಡಿಲೀಟ್ ಮಾಡಿಬಿಟ್ಟೆ.

ಬೈ ದಿ ವೇ ನನ್ನ ಫೋಟೋ ತೆಗೆದವರು ಯಾರಿರಬಹುದು, ಯಾರದಿದು ‘ಯಂಕ್ ಪೋಸ್ಟ್?’ ಸಾವಿರಾರು ಲೈಕುಗಳು, ಶೇರುಗಳು. ಒಂದೊಂದೇ ಪೋಸ್ಟ್ ಓದುತ್ತ ಹೋದೆ. ಎಷ್ಟೊಂದು ಸೂಕ್ಷ್ಮವಾಗಿ ರೂಪಿಸಿದ್ದಾರೆ.

‘ಈವತ್ತಾದ್ರೂ ನಿಮ್ಮನೆಗೆ ಹೋಗು ನಿರು’

ನಿನಗೂ ನಾನು ಭಾರವಾಗ್ತಿದೀನೇನೋ?

‘ಛೆ ನಾನೆಲ್ಲಿ ಹೊತ್ಕೊಂಡು ನಿಂತಿದ್ದೇನೆ ನಿನ್ನನ್ನ?’

ಬೆಳೆದ ಹುಡುಗಿ ನೀನು ಏನಾದ್ರೂ ಹೆಚ್ಚೂ ಕಮ್ಮಿ ಆಗ್ಬಿಟ್ರೆ ಅಂತ ನಿನ್ನ ಅಪ್ಪ ಅಮ್ಮನಿಗೆ ಕಳವಳ ಆಗಿರುತ್ತೆ, ಅಂತೀ ತಾನೆ?

ರಜಾಯಿ ತೆಗೆದೆಸೆದು, ವಾರ್ಡ್‌ರೋಬಿನ ಬಾಗಿಲು ತೆರೆದ. ಹ್ಯಾಂಗರುಗಳು ಲ್ಯಾಬಿನಲ್ಲಿಟ್ಟ ಅಸ್ಥಿಪಂಜರದಂತೆ ಹೌದೋ ಅಲ್ಲೋ ಎಂಬಂತೆ ನೇತಾಡುತ್ತಿದ್ದವು.

ಮಂಡಿಯೂರಿ ಕಾಲಬಳಿ ಕುಳಿತು ತೊಡೆಗೆ ತಲೆಯಿಟ್ಟ. ಹೊರಗಿನ ಗಾಳಿ ಸೋಕದ ಕೇವಲ ಅವನೊಳಗಿನ ಶುದ್ಧ ಬೆಚ್ಚಗಿನ ಉಸಿರು ಆಪ್ತವೆನ್ನಿಸಿತು.

‘ನೀನು ನನ್ನ ಬಟ್ಟೆಗಳನ್ನ ಹಾಕಿಕೊಂಡಿರೋಕೆ ನನಗೇನೂ ಅಭ್ಯಂತರ ಇಲ್ಲ. ಆದರೆ ಇಸ್ತ್ರೀ ಮಾಡಿಟ್ಟಿದ್ದೆಲ್ಲ ಖಾಲೀ ಆಯ್ತೇ ನಿರು’

ತೊಡೆಯೊಳಗೆ ಇದ್ದಕ್ಕಿದ್ದಂತೆ ಶೀತಲಗಾಳಿ ನುಗ್ಗಿದಂತಾಗಿ ಕೈಸೋಲುವ ತನಕ ಬೆನ್ನು ಗುದ್ದಿಟ್ಟೆ.

ಮತ್ತೆ ಯಂಕ್ ಪೋಸ್ಟ್. ಈ ಸಲ ನನ್ನ ಮುಖದ ಮುಂದೆ ಹಾರಾಡುತ್ತಿದ್ದ ಜೇನುಹುಳು ಬ್ಲರ್ ಆಗಿ ಮುಚ್ಚಿದ ಕಣ್ಣುಗಳು ಫೋಕಸ್ ಆಗಿದ್ದವು; ‘ಕೆಲವೊಮ್ಮೆ ಸುಮ್ಮನೇ ಕಣ್ಣುಮುಚ್ಚಿಕೊಂಡಿದ್ದುಬಿಡಬೇಕು, ಸುತ್ತಮುತ್ತ ನಡೆಯುವ ಏನನ್ನೂ ಧನ್ಯತಾ ಭಾವದಿಂದ ಸ್ವೀಕರಿಸಬೇಕು.’

ಅರೆ ವ್ಹಾ! ವೆಬ್‍ಸೈಟಿನಲ್ಲಿ ಫೋನ್‍ನಂಬರ್, ವಿಳಾಸ ಹುಡುಕಿದೆ. ಮೇಲ್ ಐಡಿ ಬಿಟ್ಟರೆ ಏನೊಂದೂ ಸಿಗಲಿಲ್ಲ. ಪ್ರೆಸ್‍ಕ್ಲಬ್‍ಗೆ ಕಾಲ್ ಮಾಡಿ, ಕಾಂಟ್ಯಾಕ್ಟ್ ನಂಬರ್ ಕೇಳಿದೆ. ತನಗದರ ಬಗ್ಗೆ ಗೊತ್ತೇ ಇಲ್ಲ ಅಂದುಬಿಟ್ಟ ವೆಂಕಟೇಶಿ. ಯಾಕೋ ಚೂರು ಆತಂಕವಾಯಿತು.

ಅಪ್ರೂ, ಸಣ್ಣವರಿದ್ದಾಗ ನಮಗೆಲ್ಲಾ ಮಾತ್ರೆ ಕುಟ್ಟಿ ಅದಕ್ಕೆ ಸಕ್ಕರೆ ಬೆರೆಸಿ ಔಷಧಿ ಕುಡಿಸ್ತಿದ್ರಲ್ವಾ, ಆಮೇಲಾಮೇಲೆ?

‘ಆಮೇಲೇನು? ಕಹಿ ನಾಲಗೆಗೆ ತಾಕದಂತೆ ಮಾತ್ರೆ ನುಂಗುವುದೂ ಅಭ್ಯಾಸ ಆಯ್ತು ತಾನೆ?

ಅಂದ್ರೆ ಇದೊಂದು ಒಳ್ಳೆಯ ಆರಂಭ, ಅಪಾಯ ಅಲ್ಲ ಅಂತೀ?

‘ಮತ್ತೆ ಯಾವ ಹೊಸ ಹುಳ ಬಿಟ್ಕೊಂಡೇ ತಾಯೀ?’

ಮತ್ತೊಂದು ಹೊಸ ಲಿಂಕು ಬಂದು ಬಿತ್ತು. ಈ ಸಲ ಜೇನುಹುಳ ಇರಲಿಲ್ಲ, ಕಚ್ಚಿಹಿಡಿದ ನನ್ನ ತುಟಿಗಳು, ಫೋಕಸ್ ಆಗಿದ್ದವು. ‘ನಿಮ್ಮ ಭಾವನೆಗಳ ಹರಿವು ನಿಮ್ಮ ಬುದ್ಧಿವಂತಿಕೆಯ ಮೇಲೆ ಪ್ರಾಬಲ್ಯ ಸಾಧಿಸದೇ ಇರಲಿ’

ಮೂರು ಮಿಸ್ಡ್ ಕಾಲ್‍ಗಳು ಮೇಲೊಂದು ‘ಕಾಲ್’ ಎನ್ನುವ ಮೆಸೇಜು. ವೆಂಕಟೇಶಿ ಪ್ರೆಸ್ ಕ್ಲಬ್ಬಿಗೆ ಒಮ್ಮೆ ಬಂದು ಹೋಗಬಹುದಾ ಅಂದ. ಅಯ್ಯೋ ಉಸಾಬರಿಯೇ ಬೇಡ ಅಂದೆ. ದಯವಿಟ್ಟು ಬಂದು ಹೋಗಿ ಅಂತ ಗೋಗರೆದ.

ಲಾಂಜಿನ ಮೂಲೆಯ ಕುರ್ಚಿಯಲ್ಲಿ ತಲೆತಗ್ಗಿಸಿ ಕುಳಿತಿದ್ದವ ಅವನೇ ಆಗಿದ್ದ. ‘ಮ್ಯಾಡಮ್ಮು ಕ್ಷಮುಸ್ಬಿಡಿ, ನನ್ನಿಂದ ತಪ್ಪಾಗದೆ’ ಕೈಮುಗಿದ. ಮುಖ ಹಿಂಡಿ ಹೋಗಿತ್ತು.

‘ಈಗ ಡೈರೆಕ್ಟರೊಬ್ರು ನಿಮ್ಮನ್ನ ನೋಡೋಕೆ ಬತ್ತವ್ರಂತೆ’

ಎಂಥ ಕಥೆ ಏನು ಎತ್ತ? ಅದಕ್ಕ್ಯಾಕೆ ಇಷ್ಟೊಂದು ಗಾಬರಿ?

‘ಈಗ ನಾನು ಯೋಳೋದನ್ನಾ ಕೇಳಿಸ್ಕಂಡು ನೀವು ಒರಟ್ಬಿಡಿ. ಕ್ಸಮ್ಸೋದಾದ್ರೆ ಕ್ಸಮ್ಸಿ ಇಲ್ಲಾ ಕೆನ್ನೆಗ್ ನಾಕ ಏಟಾಕಿ.’

‘ನನಗೆ ಚಿಕ್ಕಂದಿಂದ ಪೋಟೊಗ್ರಪರ್ ಆಗಬೇಕು ನಾ ತೆಗೆದ ಪೋಟೋ ಪ್ಯಾಪರಲ್ ಬರಬೇಕು ಅಂತ ಬೋ ಆಸೆ ಇತ್ತು. ನಮ್ಮೂರಿನ ಪೊಲೀಸಪ್ಪನ ತಾವಾ ಯೋಳ್ಕಂಡೆ. ಅವ ನನ್ನ ಇಲ್ಲಿಗೆ ತಂದು ಸರ‍್ಸಿದ. ಸಂಬ್ಳಾ ಬರಕ್ ಸುರು ಆಯ್ತಲ್ಲಾ ಅಂಗೇ ಉಳ್ಕಂಬಿಟ್ಟೆ. ವರ್ಸಾ ಕಳೀತಿದ್ದಂಗೆ ಮತ್ತೆ ಯಸನ ಸುರು ಆತು. ಸಂದಾಕಿರೋದೊಂದ್ ಕ್ಯಾಂಬ್ರಾ ಕೊಡಸಣ್ಣಾ ಅಂತ ಒಬ್ಬ ಪೋಟೋಗ್ರಾಪರ್ ವಣ್ಣನ ಕೈಗೆ ಕೂಡಿಟ್ ಕಾಸೆಲ್ಲಾ ಕೊಟ್ರೆ ಅವ ಕಿಮಕ್ ಅನ್ಲಿಲ್ಲ. ಒಂದ್ ರಾತ್ರಿಡೀ ಇಸ್ಕಿ ಬರ‍್ಸಿ ಬರ‍್ಸಿ ಕೊಟ್ನಾ, ಯಣಾ ಬಿದ್ಕಂಡಂಗೆ ಬಿದ್ಕಂಬಿಟ್ಟ. ಮೆತ್ಗೆ ಅವನ ಕ್ಯಾಂಬ್ರಾ ಎತ್ಕಂಬಿಟ್ಟೆ. ಅಂಗಂತ ನಾನೇನ್ ಕದೀಮ್ನಲ್ಲ. ಲೆಕ್ಕಾ ಚುಕ್ತಾ ಆಯ್ತಸ್ಟೇಯಾ.’

‘ಆ ವಣ್ಣಾ ದಿನಾ ಪ್ರೆಸ್ ಮೀಟ್ಗೆ ಬರೋವ್ನಲ್ಲ, ಎಂಗ್ ಪಟ ತಗ್ಯೋದು? ಆಗ ಕಾಪಾಡಿದ್ದೇ ನಮ್ಮೂರಿನ ಯಂಕಟ ತಾತಪ್ಪನ ಗದ್ಗೆಗೆ ಹೊದ್ಸಿದ್ ಕಂಬ್ಳಿ. ಆದ್ರೂ ಪ್ಯಾಪರ್ನಾಗ ಬರೋ ಆಸೆ ಅಂಗೇ ಉಳ್ಕಂಬ್ತು. ದಿನಾ ಒಬ್ಬ ರಿಪರ‍್ಟರಕ್ಕಾ ಬರೋವ್ಳು, ತಾನಾಯ್ತು ತನ್ ಕೆಲ್ಸಾ ಆಯ್ತು. ಒಂದಿನಾ ಪಟಾನೇಲ್ಲಾ ತೋರುಸ್ದೆ. ಆಕೆ ಬೋ ಕುಸಿ ಪಟ್ಟು, ಪೋಸ್ಟರ್ ಎಬ್ಸೈಟ್ ಮಾಡಣ ಕಲಾ, ಆದ್ರೆ ಈ ಇಸ್ಯಾ ನೀ ಒಟ್ಯೇಲ್ ಮಡೀಕ್ಕಂಡರ‍್ಬೇಕು, ಇಲ್ಲಾ ನನ್ ಕೆಲ್ಸಾ ಓದಂಗೇಯಾ ಅಂದ್ಲು. ಒತ್ತಾರೆ ಎದ್ದು ಕಬ್ನ ಪರ‍್ಕು, ರಾತ್ರಿಯಾದ್ರೆ ಸಿವಾಜಿನಗ್ರಾ, ಎಂಜಿ ರೋಡು ಅಲ್ದು ಪಟ ಇಡಿಯೋಕ್ ಸುರು ಮಾಡ್ದೆ. ಪಸಂದನ್ಸಿದ ಪಟಗಳನ್ನ ನೋಡ್ತಿದ್ದಂಗೆ ಸಣ್ಣವ್ನಿರುವಾಗ ನನ್ನವ್ವ ಮಡ್ಲಾಗ್ ಮಲಗ್ಸಕಂಡು ಯೋಳ್ತಿದ್ ಪಡ್ನುಡಿಗಳು ನೆಪ್ಪಾಗೋವು. ಅವನ್ನೇ ಆ ವಕ್ಕಂಗೆ ವಾಯ್ಸ್ ನೋಟ್ ಕಳಸ್ತಿದ್ನಾ, ಆಕೆ ಪ್ಯಾಪರಿನ ಬಾಸೇಲಿ ಅದನ್ನ ಬರ್ದು ಎಬ್ಸೈಟಿಗೆ ಆಗ್ತಾ ಓಗವ್ಳು. ಆಮ್ಯಾಕೆ ನಾನು ನನ್ ಮೊಬೈಲಲ್ಲಿರೋ ನಂಬರಿಗೆಲ್ಲಾ ಲಿಂಕ್ ಕಳ್ಸವ್ನು. ಈಗ ನಮ್ ಎಬ್ಸೈಟಗೆ ಇಟ್ಸ್ ಮೇಲೆ ಇಟ್ಸ್ ಬಂದು ಬೋ ಪೇಮಸ್ ಆಗದೆ. ಆದ್ರೆ ಈಗ ಇದ್ರಿಂದಾನೇ ಒಂದು ಯಡವಟ್ಟೂ ಆಗದೆ. ನಾನೇ ನಿಮ್ನಾ ತೊಂದ್ರೆಗೆ ಸಿಕ್ಕಾಕಿಸ್ಬಿಟ್ನಾ ಅಂತ. ಒಬ್ಬ ಡೈರೆಕ್ಟ್ರು ನಿಮ್ ಪಟ ನೋಡಿದ್ದೇ ಗಂಟುಬಿದ್ದುಬಿದ್ದವ್ರೆ. ಈಗವ್ರು ಒಳ್ಗಡೆ ಕಾಯ್ತವ್ರೆ. ಅದೇನೋ ಪಿಚ್ಚರ್ ಮಾಡಬೇಕಂತೆ. ನೀವ್ ಇಂಗಿಂದಿಂಗೇ ಮನೇಗ್ ಓಗ್ಬಿಡಿ. ನಾ ಆ ವಯ್ಯಂಗೆ ಏನಾರಾ ಒಂದ್ ಯೋಳಿ ಕಳಸ್ಬಿಡ್ತೀನತ್ಲಾಗೆ. ಮದ್ಲೇ ಇದು ಬೆಂಗ್ಳೂರು ನಮ್ಮವ್ವ ಬಡ್ಕಂಡ್ಲು, ಒಂದೋಗಿ ಒಂದಾಯ್ತದೋ ಉಸಾರು ಮಗಾ ಅಂತ. ಬಿತ್ತಲ್ಲ ಗುನ್ನಾ! ಬ್ಯಾಡಾ ಈ ಸಿನ್ಮಾ ಮಂದಿ ಸಾವಾಸಾ’

ಶ್! ಇದೆಲ್ಲಾ ಬಿಟ್ ಹಾಕು. ಹೇಳು ನಿನಗೆ ನಿನ್ನಮ್ಮ ಏನಂತ ಕರೀತಿದ್ರು? ಆ ಕರೀ ಕಂಬಳಿ ಯಾರ ಗದ್ದುಗೆ ಮೇಲಿನದು? ನಿನ್ನ ವೆಬ್‍ಸೈಟಿನ ಹೆಸರೇನು?

‘ಯಂಕಾ, ಯಂಕಪ್ಪ, ಯಂಕ್’

yunk! ಗೂಗಲ್ಲಿನ ಸರ್ಚ್‌ ಎಂಜಿನ್ನಿಗೆ ಸಾವಿರಾರು ಜನ ಇಂಗ್ಲೀಷಿನ ಈ ಹೊಸ ಶಬ್ದವನ್ನು ಅರ್ಥಕ್ಕಾಗಿ ಸುರಿದು ಹೋಗಿದಾರೆ. ಸಾಕಷ್ಟು ಜನ ತಮಗೆ ತೋಚಿದಂತೆಯೂ ವಿಶ್ಲೇಷಿಸಿದಾರೆ. ಇನ್ನೂ ಡಿಕ್ಷನರಿಯೊಳಗೆ ಸೇರಿಕೊಳ್ಳದ ಈ ಶಬ್ದದ ಅರ್ಥವನ್ನ ಕೆಲವರು ಬಹಳ ಇಂಟ್ರೆಸ್ಟಿಂಗ್ ಆಗಿ ವಿವರಿಸಿದಾರೆ. ಸಿಂಪಲ್ಲಾಗಿ ಹೇಳಬೇಕೆಂದರೆ ಹೊಸತನದ್ದು, ವಿಶೇಷವಾದದ್ದು ಅಂತನ್ನುವ ಅರ್ಥವೇ ಈ ಪದಕ್ಕೂ ಒದಗುತ್ತೆ. ಇದೊಂದು ನಾಮಪದವು ಅಲ್ಲದ ಕ್ರಿಯಾಪದವೂ ಅಲ್ಲದ ಗುಣವಾಚಕದಂತೆ. ಸದ್ಯಕ್ಕೆ ಇದನ್ನ ಸೋಶಿಯಲ್ ಮೀಡಿಯಾದ ಕೆಲ ಗುಂಪುಗಳು ಮಾತ್ರ ಬಳಸ್ತಿವೆ. ಈ ಶಬ್ದದ ಎಲ್ಲಾ ಅರ್ಥಸಾಮ್ಯತೆಗಳಿಗೆ ಅನುಗುಣವಾಗಿ, ಅರಿವಿಲ್ಲದೆಯೇ ನಿನ್ನ ವೆಬ್ ಪ್ರಾಯೋಗಿಕವಾಗಿ ತೊಡಗಿಕೊಂಡಿದೆ ಅನ್ನೋದು ನನಗಂತೂ ಮ್ಯಾಜಿಕ್. ಆದರೆ, ಕನ್ನಡದ ‘ಯಂಕ್’ ಪೋಸ್ಟ್‌ಗಳಿಗೆ ಲೈಕ್, ಶೇರ್ ಒತ್ತುವವರಲ್ಲಿ ಇದರ ಅರ್ಥ ವಿವರಣೆಯ ಬಗ್ಗೆ ಈ ತನಕ ಏನೊಂದೂ ಪ್ರಶ್ನೆ ಹುಟ್ಟಲೇ ಇಲ್ಲವೆ?

ವೆಂಕಟೇಶಿಗೆ ತಲೆ ಮೇಲೆ ಒಮ್ಮೆಲೆ ನೊಣಗಳು ಹಾರಿಹೋದಂಗಾಯ್ತೇನೊ.

ಅಷ್ಟೊತ್ತಿಗೆ ಆ ಸಿನೆಮಾ ಡೈರೆಕ್ಟರ್ ನಾವಿದ್ದಲ್ಲಿಗೇ ಬಂದರು. ತಮ್ಮ ಪ್ರಾಜೆಕ್ಟಿಗೆ ಬೇಕಾದಂತೆ ನನ್ನನ್ನ ಒಪ್ಪಿಸೋದಕ್ಕೆ ಪ್ರಯತ್ನಿಸಿದರು. ನನಗೆ ನಟನೆಯಲ್ಲಿ ಆಸಕ್ತಿಯೂ ಇಲ್ಲ ಅದು ನನ್ನ ಕ್ಷೇತ್ರವೂ ಅಲ್ಲ ಅನ್ನಿಸಿ ಹೊರಡಲುನವಾದೆ.

‘ಇಟ್ಸ್ ಓಕೆ ನೋ ಪ್ರಾಬ್ಲಮ್. ಹಾಗೇ ಇನ್ನೊಂದು ವಿಚಾರ. ಮೊನ್ನೆಯಷ್ಟೇ ಕೆನಡಾದಿಂದ ನನ್ನೊಬ್ಬ ಸ್ನೇಹಿತರು ಬಂದಿದಾರೆ. ಬಿಝಿನೆಸ್ ಫೀಲ್ಡ್‌ನಲ್ಲಿರುವ ಅವರು ಲೋಕಲ್ ಪೊಲಿಟಿಕ್ಸ್ ಜೊತೆ ಗುರುತಿಸಿಕೊಂಡಿದಾರೆ. ಇಂಡಿಯಾದಲ್ಲಿ ಐಡೆಂಟಿಟಿಗಾಗಿ ಏನಾದರೂ ಮಾಡಬೇಕಿದೆ ಅಂತಿದ್ರು. ಸಿನೆಮಾ ಕ್ಷೇತ್ರದವನಾದ ನಾನು ಅಂಥವರಿಗೆ ಇನ್ನೇನು ಐಡಿಯಾ ಕೊಡಲು ಸಾಧ್ಯ? ಒಂದು ಸಿನೆಮಾ ಪ್ರೊಡ್ಯೂಸ್ ಮಾಡಿ ಅಂದೆ. ಆದರವರು ಅದನ್ನೇ ಗಂಭೀರವಾಗಿ ತೆಗೆದುಕೊಂಡು ಈಗ ಕಥೆಗಾಗಿ ಹುಡುಕಾಟ ನಡೆಸ್ತಿದಾರೆ. ನಿಮಗೆ ಯಾರಾದರೂ ಹೊಸ ಕಥೆಗಾರರು ಗೊತ್ತಿದ್ದರೆ ಅವರಿಗೆ ಕನೆಕ್ಟ್ ಮಾಡಿಕೊಡಿ. ಇವು ನನ್ನ ಮತ್ತು ಅವರ ವಿಸಿಟಿಂಗ್ ಕಾರ್ಡ್‌ಗಳು.’

ಥ್ಯಾಂಕ್ಸ್. ಆದರೆ ನನಗೂ ಈ ಜಗತ್ತಿಗೂ ಸಂಬಂಧವೇ ಇಲ್ಲ. ನೀವು ಯಾರಾದರೂ ರೈಟರ್, ಜರ್ನಲಿಸ್ಟಗಳನ್ನು ಸಂಪರ್ಕಿಸುವುದು ಒಳ್ಳೆಯದು ಪ್ಲೀಸ್.

ಅಪ್ರಮೇಯ ಗೇಟಿನಾಚೆ ಕಾಯುತ್ತ ನಿಂತಿದ್ದ. ಡಿನ್ನರ್? ಅಂದ. ಇಲ್ಲ ನನಗೆ ಹಸಿವಿಲ್ಲವೆಂದು ಹೇಳಿ, ವಿಸಿಟಿಂಗ್ ಕಾರ್ಡಿನಲ್ಲಿರುವ ಹೆಸರನ್ನೊಮ್ಮೆ ಗೂಗಲ್ ಮಾಡಿದೆ. ಫೋಟೋ ತೆರೆದುಕೊಳ್ಳುತ್ತಿದ್ದಂತೆ ಇನ್ಸೆಕ್ಟ್ ಕಿಲ್ಲರ್ ಮಶೀನಿಗೆ ತಾನಾಗಿಯೇ ಹುಳು ಬಂದು ಬಿದ್ದ ಹಾಗಾಯಿತು! ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಲ್ಯಾಪ್‍ಟಾಪ್ ಓಪನ್ ಮಾಡಿ ಬರೆಯಲು ಶುರು ಮಾಡಿದೆ.

ಮಿಸ್ಟರ್ ಇಂದ್ರಿಜಿತ್,

ಇದು ನಾನು ಮೊದಲ ಸಲ ಬರೆಯುತ್ತಿರುವ ನನ್ನದೇ ಕಥೆ. ಯಾವ ಭಾಷೆಯಲ್ಲಿ ಇದು ಚಿತ್ರೀಕರಣಗೊಂಡರೂ ಇದಕ್ಕಿರುವ ಅರ್ಥ ಒಂದೇ!

ನನಗಾಗ ಆರೋ ಏಳೊ ಅಷ್ಟೇ. ಬಸ್‍ಸ್ಟ್ಯಾಂಡಿಗೆ ಬಂದು ಅಪ್ಪ ಬಸ್ಸು ಹತ್ತಿಸಿ ಹೋಗುತ್ತಿದ್ದರು. ಕಂಡಕ್ಟರ್ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದೆ. ಐದರ, ಹತ್ತರ, ಇಪ್ಪತ್ತರ ನೋಟುಗಳನ್ನು ಪ್ರತ್ಯೇಕವಾಗಿ ಬೆರಳುಗಳ ಮಧ್ಯೆ ಜೋಡಿಸಿಟ್ಟುಕೊಂಡು ಬಂದ ಕಂಡಕ್ಟರ್, ಕಿವಿಮೇಲಿಟ್ಟುಕೊಂಡ ಪೆನ್ನು ಮರೆತು, ಬ್ಯಾಗಿನ ಖಾನೆಗಳೊಳಗೆಲ್ಲಾ ಹುಡುಕಾಡುತ್ತ ನನ್ನನ್ನು ಕೈಸನ್ನೆಯಲ್ಲೇ ತನ್ನ ಟ್ರಂಕಿನ ಮೇಲೆ ಕೂರುವಂತೆ ಹೇಳುತ್ತಿದ್ದ. ಎತ್ತರದ ಜಾಗದಲ್ಲಿ ಕುಳಿತ ನನ್ನ ಬೆನ್ನಿಗೆರಡು ರೆಕ್ಕೆ ಮೂಡಿ ನಾನೊಬ್ಬ ದೇವತೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಕಿಟಿಕಿಯಾಚೆ ಹಿಂದಿಂದೆ ಓಡುವ ಮರಗಳು, ಮೋಡಗಳು ನನಗೇ ಚಾಮರ ಬೀಸುತ್ತಿವೆ ಎನ್ನಿಸಿ ಭರ್ತಿ ಬೀಗುತ್ತಿದ್ದೆ. ಖಾನಾಪುರದ ರೋಡಿನಲ್ಲಿ ಯಡ್ಡಾದಿಡ್ಡಿ ಓಡುವ ಹುಂಬ ಹುಡುಗನನ್ನು ಸಂಭಾಳಿಸುವವನಂತೆ ಡ್ರೈವರ್ ಸ್ಟೇರಿಂಗ್ನೊಂದಿಗೆ ಹೆಣಗಾಡುತ್ತಿದ್ದ. ನನ್ನ ಪಕ್ಕದಲ್ಲಿ ಪುಟ್ಟ ಅಲ್ಯೂಮೀನಿಯಂ ನೋಟ್‍ ಪ್ಯಾಡಿಗೆ ಚೌಕುಳಿಹಾಳೆಗಳನ್ನು ಸಿಕ್ಕಿಸಿಕೊಂಡು ಲೆಕ್ಕದೊಳಗೆ ಕಣ್ಣೂ ಕೈ ನೆಟ್ಟ ಕಂಡಕ್ಟರ್, ‘ಪುಟ್ಟೀ ಈಗ ದಿಬ್ಬ ಬರುತ್ತದೆ, ತಿರುವು ಬರುತ್ತದೆ, ಹಳ್ಳ ಸಿಗುತ್ತದೆ, ಹೊಳೆ ಬರುತ್ತದೆ’ ಅಂತೆಲ್ಲ ಅಕ್ಕರೆಯಿಂದ ಹೇಳುತ್ತಿದ್ದ. ತಕ್ಕಂತೆ ಎರಡೂ ಕೈಗಳನ್ನು ಸಳಿಗೆ ಬಿಗಿಗೊಳಿಸುತ್ತಿದ್ದೆ. ಬ್ರೇಕ್ ಬಿತ್ತೋ ಮುಗೀತು ನಿದ್ದೆಬಡುಕರ ಕಥೆ! ದೀಪಾವಳಿಯ ಸಂಜೆ ಮಾಳಿಗೆಯನೇರಿದ್ದ ಶೆಗಣಿ ಪಾಂಡವರು ಕೌರವರು ಗೌರೀ ಹುಣ್ಣಿಮೆ ಹೊತ್ತಿಗೆ ಬೀಸುತ್ತಿದ್ದ ಜೋರುಗಾಳಿಗೆ ಉರುಳುರುಳಿ ಬೀಳುವುದು ನೆನಪಾಗಿ ಜೋರು ನಗು ಬರುತ್ತಿತ್ತು. ಕಂಡಕ್ಟರ್ ತುಟಿಯ ಮೇಲೆ ಕೈ ಇಟ್ಟುಕೊಂಡು ಶ್ಶ್! ಸನ್ನೆ ಮಾಡುತ್ತ ತಾನೂ ಒಳಗೊಳಗೇ ನಗುತ್ತಿದ್ದ. ಇಳಿಯುವಾಗ ಲಿಂಬೀಹುಳಿ ಪ್ಯಾಕೆಟ್ ಕೊಟ್ಟು ಜೋಪಾನ ಅನ್ನುತ್ತಿದ್ದ.

ಬಸ್‍ಸ್ಟ್ಯಾಂಡ್ ಇಳಿದು ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಂತೆ, ಚಿಕ್ಕಮ್ಮ ಕರಿಯುತ್ತಿದ್ದ ಪೂರಿಯ ಪರಿಮಳ ಮೂಗಿಗಡರುತ್ತಿತ್ತು. ತುಪ್ಪದೊಳಗೆ ಮಿಂದ ಬತ್ತಿಗಳ ಕುಡಿಯನ್ನು ತನ್ನೊಡಲಿಗೆ ಜಾರಿಸಿಕೊಂಡಿರುತ್ತಿದ್ದ ಜೋಡಿ ನೀಲಾಂಜನ. ಅದರ ಪಕ್ಕದಲ್ಲಿ ಪುಟ್ಟ ಬೆಳ್ಳಿತಟ್ಟೆಯಲ್ಲಿ ಮಿಣಿಮಿಣಿ ಹಾಳೆಯ ಮೇಲೆ ಸ್ಪಂಜಿನ ಬಿಲ್ಲೆ, ನಟ್ಟನಡುವೆ ಮಿರುಗುವ ಪುಟ್ಟ ನಕ್ಷತ್ರ, ಅದರ ಹೊಟ್ಟೆಯಲ್ಲೊಂದು ಹೊಳೆವ ಮುತ್ತು. ಇದೆಲ್ಲವನ್ನೂ ತನ್ನ ಎಳೆಯಲ್ಲಿ ಬಂಧಿಸಿ ರಾಖಿಯಾಗಿಸಿದ ಬಣ್ಣದ ದಾರ… ಎಂಥ ಖುಷಿ!. ಅಣ್ಣನ ಮುಖವನ್ನೊಮ್ಮೆ ಅದನ್ನೊಮ್ಮೆ ನೋಡುತ್ತ ಚಿಕ್ಕಪ್ಪನ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೆ. ತೊಡೆ ಮೇಲೆ ಪೇಪರ್ ಇಟ್ಟುಕೊಂಡು ಮುಂದೆ ತಾಟಿಟ್ಟುಕೊಂಡು ಕುಳಿತಿರುತ್ತಿದ್ದ ಚಿಕ್ಕಪ್ಪ, ಅಣ್ಣನಿಗೆ ಅಂದಿನ ರಾಜಕೀಯ ವಿದ್ಯಮಾನಗಳನ್ನು ಪರಾಮರ್ಶಿಸುತ್ತಾ ರಾಜಕೀಯ ವ್ಯಕ್ತಿಗಳ ನಡೆನುಡಿ ಪ್ರಸಂಗಗಳನ್ನು ಸ್ಥಳ, ಇಸವಿ ಸಮೇತ ವಿವರಿಸುತ್ತಿದ್ದರು. ಅವ ಬಾಸುಂದಿಯನ್ನು ಮುಂಗೈತನಕ ಮುಳುಗಿಸಿಕೊಂಡು ಕಣ್ಣು ಬಾಯಿ ಬಿಟ್ಟುಕೊಂಡು ಕೂರುತ್ತಿದ್ದ. ರಾಖಿ ಕಟ್ಟಿ ಆರತಿ ಬೆಳಗಿ ಊಟ ಮಾಡಿ ಸಂಜೆ ಹೊತ್ತಿಗೆ ನಾನು ಊರಿಗೆ ಮರಳುತ್ತಿದ್ದೆ.

ಅಪರೂಪಕ್ಕೆ ಅಣ್ಣ ನಮ್ಮ ಮನೆಗೆ ಬಂದರೆ ಅಂದೇ ದೀಪಾವಳಿ ಗಣೇಶ ಯುಗಾದಿ ಎಲ್ಲವೂ. ಕಾಲೇಜು ಓದಲು ನಾನಿರುವ ಊರಿಗೇ ಅವ ಬಂದಾಗಲಂತೂ ಶಾಲೆಗೆ ಹೋಗುತ್ತಿದ್ದ ನಾನು ಹಿಗ್ಗಿ ಹೀರೇಕಾಯಿಯಾದೆ. ಇದ್ದೂರಲ್ಲೇ ಇದ್ದು ಒಂದು ದಿನವೂ ನಮ್ಮ ಮನೆಗೆ ಬಂದುಳಿದುಕೊಳ್ಳುವುದಿಲ್ಲ ಅಂತೆಲ್ಲ ಅತ್ತುಕರೆದಾಗ ಆ ರಾತ್ರಿ ಇದ್ದು, ನಸುಕು ಹರಿಯುವ ಮೊದಲೇ ಹೋಗಿಬಿಡುತ್ತಿದ್ದ. ಸಂಜೆ ಗೆಳತಿಯರೊಂದಿಗೆ ಆಟವಾಡುವಾಗ, ನನಗೂ ಒಬ್ಬ ಅಣ್ಣ ಇದ್ದಾನೆ ಅವ ನಿನ್ನೆ ಬಂದಿದ್ದ ಗೊತ್ತಾ? ಜಂಬ ಕೊಚ್ಚಿಕೊಳ್ಳುತ್ತಿದ್ದೆ.

ಆದರೆ ಅಪ್ಪ ಅಮ್ಮ ಊರಿಗೆ ಹೋದಾಗ ಮಾತ್ರ ಕಾಲೇಜನ್ನೂ ಮರೆತು ನಮ್ಮ ಮನೆಯಲ್ಲಿಯೇ ಇದ್ದುಬಿಡುತ್ತಿದ್ದ. ಒಂದು ಮಧ್ಯರಾತ್ರಿ ನನ್ನ ಮೇಲೆ ಏನೋ ಹರಿದಾಡಿದಂತಾಗುತ್ತಿದೆ ಎನ್ನಿಸಿ ಖೊಡವಿದೆ. ಪದೇಪದೆ ಹಾಗಾದಾಗ ಎದ್ದು ಲೈಟೂ ಹಾಕಿದೆ, ಏನೂ ಕಾಣಲಿಲ್ಲ. ಭಯವೆನ್ನಿಸಿ ಹೊರಗೆ ಬಂದರೆ ಅಣ್ಣನೂ ಇಲ್ಲ, ಮುಚ್ಚಿದ ಬಾಗಿಲು. ಹೊಟ್ಟೆಯೊಳಗಿನಿಂದ ಚಳಿ ಎದ್ದು ಮೈ ನಡುಗಹತ್ತಿತು. ನನ್ನ ಮಂಚದ ಕೆಳಗೆ ಕಾಲು ಕಂಡಂತಾಗಿ ಬೆಚ್ಚಿದೆ. ಸದ್ಯ! ಅಣ್ಣನನ್ನು ನೋಡಿ ಸ್ವಲ್ಪ ಸಮಾಧಾನವೆನ್ನಿಸಿತು. ಮತ್ತೊಂದು ಸಲ ಬೆಳಗ್ಗೆ ಮಗ್ಗಲು ಹೊರಳಲಾಗಲಿಲ್ಲ. ತುಂಬಾ ಹೊತ್ತಿನಿಂದ ಯಾರೋ ನನ್ನನ್ನು ಅವುಚಿ ಮಲಗಿದ್ದಾರೆನ್ನಿಸಿತು. ಬಿಡಿಸಿಕೊಂಡು ಎದ್ದು ಕೂತೆ. ಚಚಳಿ ಚಳಿ ತೊದಲುತ್ತ ಅಣ್ಣ ಎದ್ದು ಹೋದ. ಅವನಿಗೆ ಅಪ್ಪನ ಸ್ವೆಟರ್ ಕೊಟ್ಟು, ಶೆಟ್ಟರಂಗಡಿಯಲ್ಲಿ ಹಾಲು ತಂದು ಚಹಾ ಮಾಡಿ ಕೊಟ್ಟೆ. ಹಣೆ ಮುಟ್ಟಿ ಜ್ವರ ಇಲ್ಲದುದನ್ನು ಖಾತ್ರಿ ಪಡಿಸಿಕೊಂಡು, ಅಮ್ಮನ ಎರಡೂ ಶಾಲುಗಳನ್ನು ಮತ್ತು ನನ್ನ ಹೊದಿಕೆಯನ್ನೂ ಹೊದಿಸಿ ನನ್ನ ಕೋಣೆಗೆ ಹೋದೆ. ಮತ್ತೊಂದು ರಾತ್ರಿ ತೊಡೆಯೊಳಗೆ ಏನೋ ಹರಿದಾಡಿದಂತಾಗಿ ಕಾಲು ಜಾಡಿಸಿ ಒದ್ದೆ. ಸ್ವಿಚ್ ಆನ್ ಮಾಡಿದೆ, ಲೈಟು ಹತ್ತಲೇ ಇಲ್ಲ. ಅಂದಾಜಿನಲ್ಲಿ ಹೊರಬಂದೆ, ಹೊರಬಾಗಿಲು ತೆರೆದುಕೊಂಡಿತ್ತು.

ಮುಂದೆ ನಾನು ಮೈಸೂರಿನಲ್ಲಿ ಕಾಲೇಜು ಸೇರಿದಾಗ, ಅದಾಗಲೇ ಅಣ್ಣ ಅಲ್ಲಿಯೇ ಒಂದು ಕಂಪೆನಿ ಸೇರಿ ಹೊಸ ಬೈಕನ್ನೂ ಕೊಂಡಾಗಿತ್ತು. ದೊಡ್ಡ ಊರು ಥರಥರದ ಮಂದಿ ನಡುವೆ ಒಂಟಿತನ ಕಾಡಿ ಒಮ್ಮೊಮ್ಮೆ ಅಳುಬಂದುಬಿಡುತ್ತಿತ್ತು. ಫೋನ್ ಮಾಡಿದಾಗೆಲ್ಲಾ ಅಣ್ಣ ಹಾಸ್ಟೆಲ್ಲಿಗೆ ಬಂದು ಭೇಟಿಯಾಗುವುದಾಗಿ ಹೇಳುತ್ತಿದ್ದ. ಕಿಟಕಿಯಲ್ಲಿ ಕೂತು ರಸ್ತೆಯಲ್ಲಿ ಓಡಾಡುವ ಒಂದೊಂದು ಬೈಕುಗಳನ್ನೂ ನೋಡುತ್ತ, ಹೆಲ್ಮೇಟಿನೊಳಗೆ ಅಣ್ಣನ ಮುಖವನ್ನೇ ಹುಡುಕಾಡುತ್ತಿದ್ದೆ.

ಅಂತೂ ಒಂದು ದಿನ ಹಾಸ್ಟೆಲ್ಲಿಗೆ ಬಂದ. ನನ್ನ ರೂಮ್‍ಮೇಟುಗಳಿಗೆ ಪರಿಚಯ ಮಾಡಿಸಿದೆ. ಒಳ್ಳೇ ಸಿನೆಮಾ ಹೀರೋ ಇದ್ದಂಗಿದಾನೆ ಅಂತೆಲ್ಲ ಹೊಗಳಿದರು. ಖುಷಿಯಿಂದ ಬೀಗಿದೆ. ಮುಂದಿನವಾರ ಮತ್ತೆ ಬಂದ, ಈ ಸಲ ಅವನ ಹೆಲ್ಮೇಟಿಗೆ ಕಪ್ಪು ಗಾಜು ಕೂರಿಸಲಾಗಿತ್ತು. ನನ್ನನ್ನು ನನ್ನ ಗೆಳತಿಯರನ್ನೂ ಕರೆದುಕೊಂಡು ಚಾಟ್ ತಿನ್ನಲು ಕರೆದುಕೊಂಡು ಹೋದ. ನಾನು ಪ್ರತೀ ವಾರಾಂತ್ಯವೂ ಅವನಿಗಾಗಿ ಕಿಟಕಿಗೆ ಕಣ್ಣುನೆಟ್ಟು ಕೂರುತ್ತಿದ್ದೆ. ಅವ ಬರುವುದನ್ನೇ ನಿಲ್ಲಿಸಿಬಿಟ್ಟ. ಆದರೆ ಒಂದೊಂದು ವಾರವೂ ನನ್ನ ಒಬ್ಬೊಬ್ಬ ರೂಮೇಟ್ ತಡರಾತ್ರಿ ಕಳ್ಳಬೆಕ್ಕಿನಂತೆ ಬಂದು, ಮೆಲ್ಲಗೆ ನನ್ನ ಕಿವಿಯಲ್ಲಿ ಥ್ಯಾಂಕ್ಸ್ ಎಂದುಸುರಿ ಹೋಗುತ್ತಿದ್ದರು. ಬೆಳಗ್ಗೆದ್ದು ಏನು ಯಾಕೆ ಅಂತೆಲ್ಲ ಕೇಳಿದರೆ ಜೋರಾಗಿ ನಕ್ಕುಬಿಡುತ್ತಿದ್ದರು.

ಮೇಲ್ ಕಳಿಸಿ ಮುಖ ಎತ್ತಿದಾಗ ಅಪ್ರಮೇಯನ ಮನೆ ಬಂದು ಬಹಳ ಹೊತ್ತಾಗಿತ್ತು. ನಾನು ಇಳಿಯುವುದನ್ನೇ ಕಾಯುತ್ತಿದ್ದ ಅವ ಹೊರಗೇ ನಿಂತಿದ್ದ. ಅಪ್ಪ ಅಮ್ಮನ ಮನೆಗೆ ಹೋಗಬೇಕು ಅಂದಾಗ ಡ್ರಾಪ್ ಮಾಡಿದ. ತಲುಪಿದಾಗ ತಡರಾತ್ರಿಯಾಗಿತ್ತು, ಇಬ್ಬರೂ ಮಲಗಿದ್ದರು.

ಬೆಳಗ್ಗೆ ಕೆಳಗಿಳಿದು ಬಂದಾಗ, ಅಪ್ಪ ಯಾರೊಂದಿಗೋ ಜೋರಾಗಿ ಹರಟೆ ಹೊಡೆಯುತ್ತ ನಗುತ್ತಿದ್ದರು.

‘ಇಂದ್ರಜಿತ್, ಅದೆಷ್ಟು ವರ್ಷ ನೀನು ಬಂಧು-ಬಳಗ ಬಿಟ್ಟು ಕೆನಡಾದಲ್ಲೇ ಇರುತ್ತೀ, ಎಷ್ಟಂತ ಆಸ್ತಿ ಮಾಡುತ್ತಿ? ಹೇಗೂ ಮತ್ತೊಂದು ಫ್ಲ್ಯಾಟ್ ತೆಗೆದುಕೊಂಡಿದ್ದೇನೆ. ಅದರ ಪಕ್ಕದಲ್ಲೇ ಇನ್ನೊಂದು ಖಾಲಿ ಇದೆ. ಅದಕ್ಕೆ ನಿನ್ನ ಅಪ್ಪನೂ ಒಪ್ಪಿದ್ದಾರೆ. ಈಗಲಾದರೂ ನಾವು ಒಟ್ಟಾಗಿ ಕುಟುಂಬಸುಖವನ್ನು...’

ಅಮ್ಮ ಅಡುಗೆಮನೆಯ ಶೆಲ್ಫಿನಲ್ಲಿ ಡಬ್ಬಿಗಳನ್ನು ಜೋಡಿಸುತ್ತಿದ್ದಳು. ಆಕೆ ಕೈಮೇಲೆತ್ತಿ ಇಳಿಸಿದಾಗೆಲ್ಲ ಕಿಟಕಿಯಿಂದ ಹೊಮ್ಮಿದ ಸೂರ್ಯನ ಕಿರಣಗಳು ಅವಳ ಕೈಬಳಿಗಳಿಗೆ ತಾಕಿ ಸೂತ್ರದಗೊಂಬೆಯಂತೆ ಕಾಣುತ್ತಿದ್ದಳು.

ಹೊರಬಂದು ಸೀದಾ ಹೋಮ್ ಅಪ್ಲೈಯೆನ್ಸಿಸ್ ಅಂಗಡಿಗೆ ಹೊಕ್ಕು ಒಂದು ಇಸ್ತ್ರೀಪೆಟ್ಟಿಗೆ ಖರೀದಿಸಿ ಅಪ್ರಮೇಯನ ಮನೆಗೆ ಹೊರಟೆ.

ಯಂಕ್ ಪೋಸ್ಟಿನ ಹೊಸ ಲಿಂಕ್ ಬಂದು ಬಿತ್ತು. ಒಂದು ದೊಡ್ಡ ಕಪ್ಪುಗೋಡೆಯ ಮೇಲೆ ಥರಥರದ ಹುಳುಗಳು ಅಂಟಿ ಕುಳಿತಿದ್ದವು; ನೋ ಕ್ಯಾಪ್ಷನ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.