ADVERTISEMENT

ಕಥೆ: “ಮಳ್ಳ ನಾರಾಯಣನೂ, ವಾಲಿಮೋಕ್ಷ ಪ್ರಸಂಗವೂ”

ದೀಪಾವಳಿ ಕಥಾಸ್ಪರ್ಧೆ–2020 ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ

ಅನಂತ ಕಾಮತ್‌
Published 12 ಡಿಸೆಂಬರ್ 2020, 19:30 IST
Last Updated 12 ಡಿಸೆಂಬರ್ 2020, 19:30 IST
ಕಲೆ: ಸಂಜೀವ ಕಾಳೆ
ಕಲೆ: ಸಂಜೀವ ಕಾಳೆ   

"ಎಲಎಲವೋ ಸುಗ್ರೀವ"

"ಹುಂ"

"ತಮ್ಮನೆಂಬ ಮಮತೆ ಈ ವಾಲಿಯ ಮನದಲ್ಲಿ ಇನ್ನೂ ಜೀವಂತವಾಗಿರುವ ಕಾರಣದಿಂದಲೇ ನೀನಿನ್ನೂ ಬದುಕಿಕೊಂಡಿರುವೆ"

ADVERTISEMENT

"ಓಹೋ"

"ಬದುಕುಳಿಯುವ ಇಚ್ಛೆ ನಿನಗಿದ್ದರೆ ಈಗಲೇ ಇಲ್ಲಿಂದ ಮರಳು"

ಮುಚ್ಚಿದ ಕಿಟಕಿಯ ಬಿರುಕಿನಿಂದ ಮಳ್ಳ ನಾರಾಯಣನ ಯಕ್ಷಗಾನದ ತಯಾರಿ ಹೊರಗೆ ಜೋರಾಗಿಯೇ ಕೇಳಿಸುತ್ತಿತ್ತು. ತನ್ನ ಪಾತ್ರದ ಮಾತನ್ನೂ ಎದುರು ಪಾತ್ರದ "ಹ್ಮ್" ಗುಡುವಿಕೆಯನ್ನೂ ಒಬ್ಬನೇ ನಿರ್ವಹಿಸುತ್ತಾ ತಯಾರಿಯಲ್ಲೇ ಮಗ್ನನಾಗಿದ್ದ ಆತ. ನಿಶ್ಶಬ್ಧ ರಾತ್ರಿ. ಒಳಗೆ ಹಚ್ಚಿದ್ದ ಚಿಮಣಿಯ ಬೆಳಕು ಕಿಟಕಿಯ ಬಿರುಕಿನಿಂದ ತೂರಿ ಹೊರಬಂದು ಮನೆಯ ಪಕ್ಕದಲ್ಲಿನ ದಾರಿಯ ಮೇಲೆ ಬೆಳಕಿನ ಗೆರೆಯೊಂದನ್ನು ಮೂಡಿಸಿತ್ತು. ಬೆಳಕಿದ್ದಾಗ ಮರ್ಯಾದೆಗಂಜಿ ಎಲ್ಲರಿಗೂ ಗೊತ್ತಾಗುವಂತೆ ಕುಡಿಯಲಾಗದೆ, ಕುಡಿತವಿಲ್ಲದೆ ರಾತ್ರಿಯ ನಿದ್ದೆಯೂ ಹತ್ತದ ಕಾರಣ, ರಾತ್ರಿಯ ಕತ್ತಲಲ್ಲಿ ಹೋಗಿ ಕಣ್ಣು ಕೆಂಪಗೆ ಮಾಡಿಕೊಳ್ಳುವ ಅಭ್ಯಾಸವಿದ್ದ ಆ ಊರಿನ ಇಬ್ಬರು ಸಭ್ಯ ಕುಡುಕರು ಅವನ ಮನೆಯ ಹತ್ತಿರದಿಂದ ಸಾರಾಯಿ ಅಂಗಡಿಯತ್ತ ಮಾತಾಡುತ್ತಾ ನಡೆದಿದ್ದರು.

"ಈ ನಾರಾಣನ್ ಮಳ್ಳು ದಿನಾ ಹೋದಾಂಗೆ ಜಾಸ್ತಿ ಆತೇ ಈದಾಗುದಾ.. ಯಾರೋ ಆಟಾ ಅಂತೇಳಿ ತಲೆ ಹಾಳ್ ಮಾಡಿರ್ ಕಾಣ್ತೀದ್.. ಅದ್ಕೇ ಈ ನಮನಿ ಯಾಸಾ.."

ಗ್ರಾಮ ಪಂಚಾಯ್ತಿ ಸದಸ್ಯ ತುಕ್ಕಪ್ಪನ ದನಿಗೆ ಬೀಡಿ ಸೇದುತ್ತಾ ಕೆಮ್ಮುತ್ತಿದ್ದ ಇನ್ನೊಬ್ಬ ಸಭ್ಯ ಕುಡುಕನ "ಹೂಂ"ಕಾರ ಅನುಮೋದನೆ ನೀಡಿತ್ತು. ಹೊರಗಿನ ಯಾವುದರ ಪರಿವೆಯೂ ಇಲ್ಲದೆ ಮಳ್ಳ ನಾರಾಯಣನ ಅಭ್ಯಾಸ ಸಾಗಿತ್ತು.

ನಾರಾಯಣನಿಗೆ ಆಟದ ಹುಚ್ಚು ಇದ್ದದ್ದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಅವ ದೂರದಲ್ಲಿ ಕಂಡಾಗ ಮಕ್ಕಳೂ ಕೂಡ ಯಾವುದಾದರೂ ಯಕ್ಷಗಾನದ ಪದ್ಯವನ್ನು ಇವನಿಗೆ ಕೇಳುವ ಹಾಗೆ ಕೂಗಿ ಹೇಳುತ್ತಿದ್ದರು. ಅಷ್ಟು ಕಿವಿಗೆ ಬಿದ್ದರೆ ಸಾಕು. ತನಗೆ ಗೊತ್ತಿದ್ದ ಪದ್ಯಗಳನ್ನೆಲ್ಲಾ ಹಾಡಲು ಪ್ರಾರಂಭಿಸುತ್ತಿದ್ದ. ಕುಡಿದಿದ್ದರಂತೂ ಕೇಳುವುದೇ ಬೇಡ. ತೂರಾಡುತ್ತಲೇ ಪದ್ಯದೊಟ್ಟಿಗೆ ಹೆಜ್ಜೆಯನ್ನೂ ಹಾಕುತ್ತಿದ್ದ ನಾರಾಯಣ ಪುಕ್ಕಟೆ ಮನರಂಜನೆಯ ವಸ್ತುವಾಗುತ್ತಿದ್ದ. ಆದರೆ ಇವತ್ತಿನದ್ದು ಅಮಲಿನ ತಾಲೀಮು ಆಗಿರಲಿಲ್ಲ. ಅದಕ್ಕೊಂದು ಬಲವಾದ ಕಾರಣವಿತ್ತು.

***

ಶ್ರೀಧರ ಹೆಗ್ಡೆರ ತೋಟದಲ್ಲಿ ಆವತ್ತು ತೆಂಗಿನ ಕೊಯ್ಲು. ಕಾಯಿ ಕೋಯ್ಯೊಕೆ ಜನ ಬಂದಾಗಿತ್ತು. ಒಟ್ಟು ಹಾಕಿ ಹೊರುವ ಆಳು ಕೈಕೊಟ್ಟಿದ್ದರಿಂದ ಹೆಗ್ಡೆರು ಸ್ವಲ್ಪ ತಲೆಬಿಸಿಯಲ್ಲಿದ್ದರು. ಅಷ್ಟರಲ್ಲೇ ತಲೆಗೊಂದು ಮಾಸಿದ ಮುಂಡಾಸು ಬಿಗಿದು ಎಲ್ಲಿಗೋ ಹೊರಟಿದ್ದ ಮಳ್ಳ ನಾರಾಯಣ ಅವರ ಕಣ್ಣಿಗೆ ಬಿದ್ದ. ನಾರಾಯಣ ಕೆಲಸಕ್ಕೆ ನಿಂತರೆ ಅವನ ಸಮಕ್ಕೆ ದುಡಿಯೋ ಮತ್ತೊಬ್ಬ ಆಳು ಆ ಊರಲ್ಲಿ ಇರಲಿಲ್ಲ ಅನ್ನೋ ಸತ್ಯ ಹೆಗಡೇರಿಗೂ ಗೊತ್ತಿತ್ತು. ಆದರೆ ಅವ ಕುಡಿಯೋ ಮೊದಲು ಕೆಲಸಕ್ಕೆ ಸಿಕ್ಕರೆ ಸೈ. ಇಲ್ಲದೆ ಹೋದ್ರೆ ಅವನನ್ನು ಸಂಭಾಳಿಸುವುದೇ ಕಷ್ಟದ ಕೆಲಸವಾಗುತ್ತಿತ್ತು. ಹತ್ತಿರ ಹೋಗಿ "ಚಾ ಆತೇನಾ?" ಎಂದು ಮಾತಾಡಿಸಿದ ಹೆಗ್ಡೆರಿಗೆ "ಹೂಂ ಆಯ್ತ್ರಾ" ಅನ್ನುವ ಉತ್ತರದೊಟ್ಟಿಗೇ ನಾರಾಯಣ ಇನ್ನೂ ಕುಡಿದಿಲ್ಲ ಅನ್ನೋ ಸಮಾಧಾನ ಕೂಡ ಸಿಕ್ಕಿತ್ತು.

"ಒಂದ್ ನಾಕ್ ಕಾಯ್ ಹೊರೂದಿತ್. ಬತ್ಯೇನಾ..? ಒಂದ್ ಗಂಟೆಗೇ ಎಲ್ಲಾ ಮುಗ್ಸ್ಕಂಡು ಇಲ್ಲೇ ಉಂಡ್ಕಂಡ್ ಹೋಗ್ಲಕ್ಕು" ಹೆಗ್ಡೆರು ಪೀಠಿಕೆ ಇಟ್ಟಿದ್ದರು.

"ಆಗುದಿಲ್ರಾ. ಕೆಲ್ಸಕ್ ಯಾರೂ ಸಿಕ್ದಿರೆ ಮಾತ್ರೆ ನಂಗೆ ಕರಿತಿರಿ ನೀವು" ಕಡ್ಡಿ ಮುರಿದ ಹಾಗೆ ಹೇಳಿದ್ದ ನಾರಾಯಣ. ಕೈಯಲ್ಲಿ ಕುಡಿಯಲು ದುಡ್ಡಿದ್ದಾಗ ಹದಿನಾರು ತುರಾಯಿಯ ಸಾಹೇಬ ಬಂದು ಕೆಲಸಕ್ಕೆ ಕರೆದ್ರೂ ಈ ಮಳ್ಳ ಕೆಲಸಕ್ಕೆ ಬರಲಾರ ಅನ್ನೋದು ಹೆಗ್ಡೆರಿಗೆ ಗೊತ್ತಾಗಿತ್ತು. ಮತ್ತೆ ಇವತ್ತು ಬಿಟ್ರೆ ತೆಂಗಿನಕಾಯಿ ಕೊಯ್ಯುವವರೂ ಸಿಗಲಾರರು. ಹಾಗಾಗಿ ನಾರಾಯಣನನ್ನೇ ಬಗ್ಗಿಸಬೇಕು ಎನ್ನುವ ವಿಚಾರದಲ್ಲಿದ್ದ ಹೆಗ್ಡೆರಿಗೆ ಹೊಳೆದದ್ದು

"ಯಕ್ಷಗಾನ".

"ಅದ್ ಹಾಳಾಗ್ಲಿ ಅತ್ಲಾಗೆ. ನೀ ಆಟಾ ಕುಣೀದೆ ಎಸ್ಟ್ ವರ್ಷಾ ಆತಾ ಮಾರಾಯಾ..? ಈ ಸರ್ತಿ ನಮ್ ಕಟ್ಟೆ ಪೂಜೆಗೆ ಒಂದ್ ಆಟಾ ಮಾಡ್ಕಂತೇಳಿ ಇದ್ದಿ ಮಾರಾಯಾ" ಹೆಗಡೆರು ತಮ್ಮ ಪೀಠಿಕೆ ಮುಗಿಸಿದ್ದರು. ನಾರಾಯಣನ ತಲೆಗೆ ಸುತ್ತಿದ್ದ ರುಮಾಲು ಕೈಗೆ ಬಂದಿತ್ತು.

"ಒಡೆದಿರು ನಾ ಕಡೆಗ್ ಮಾಡದ್ದು ಕೌರವ. ಹತ್ ಹನ್ನೆಡ್ ವರ್ಸಾ ಆಯ್ತ್ ಇರ್ಬೇಕ್. ಮತ್ ಬಣ್ಣ ಮುಟ್ಟದ್ದೇ ಇಲ್ಲ." ಹೆಗಡೆರ ಮದ್ದು ನಾಟಿತ್ತು. ತೋಟದತ್ತ ಹೆಜ್ಜೆ ಹಾಕಿದ್ದ ಹೆಗಡೆರ ಹಿಂದೆ ನಾರಾಯಣನೂ ಹೆಜ್ಜೆ ಹಾಕಿದ್ದ. "ನೀ ಕಾಯ್ ಒಟ್ಟಾಕ್. ನಾ ಚೂಳಿ ತಗಂಡ್ ಬತ್ತೆ" ಹೇಳಿ ಹೆಗಡೆರು ಮನೆ ಹತ್ರ ಬಂದ್ರು.

"ಏನೆ ನಾಕ್ ಹಿಡಿ ಅಕ್ಕಿ ಹೆಚ್ಚೇ ಹಾಕು ಅನ್ನಕ್. ಮಳ್ ನಾರಾಣಾ ಕಾಯ್ ಹೊರೂಕ್ ಬಯೀಂದ" ಹೆಂಡತಿಗೆ ಕೂಗಿ ಹೇಳಿದ್ರು ಹೆಗಡೆರು.

"ನಿಮಗ್ ಆ ಮಳ್ ಹಿಡದಂವಾ ಬಿಟ್ರ್ ಮತ್ಯಾರೂ ಸಿಗ್ತಿಲ್ಲೆ ಕಾಣತ್ ಕೆಲ್ಸಕ್." ಒಳಗಿನಿಂದಲೇ ಗೊಣಗಿದ್ದಳು ಹೆಗಡೆರ ಹೆಂಡತಿ.

"ಒಂದ್ಕೆಲ್ಸಾ ಮಾಡ್. ನಾ ಚೂಳಿ ತುಂಬಿ ಎತ್ತಿ ಕೊಡ್ತಿ ನೀ ಹೊರ್ಲಕ್ ಬಾ" ಮೊದಲೇ ಕೆಲಸದವರು ಕೈಕೊಟ್ಟಿದ್ದರಿಂದ ತಲೆಬಿಸಿಯಲ್ಲಿದ್ದ ಹೆಗಡೆರು ಸಿಡುಕಿದ್ದರು. ಮತ್ತೆ ಈ ಮಳ್ಳನನ್ನು ಸಂಭಾಳಿಸಲು ಕಟ್ಟಿದ್ದ ಕಥೆಯನ್ನು ಮುಂದುವರೆಸುವ ಕೆಲಸವೂ ಅವರ ಪಾಲಿಗಿತ್ತು. ಎರಡು ಚೂಳಿಮುಟ್ಟಿಯನ್ನು ಹಿಡಿದು ತೋಟದತ್ತ ನಡೆದರು.

"ಒಡೆದಿರು ಯಾವ ಪರ್ಸಂಗಾ..?" ಕಾಯಿ ಹೆಕ್ಕುತ್ತಲೇ ಕೇಳಿದ್ದ ನಾರಾಯಣ.

"ವಾಲಿವಧೆ" ಮಾಡಣ ಅಂತೇಳಿ. ನೀ ವಾಲಿ ಮಾಡದಾರೆ ನಂದೇ ಸುಗ್ರೀವಾ. ಕೆಳಮನೆ ಭಟ್ರು ರಾಮನ ಮಾಡ್ಲಿ" ಹೆಗಡೆರ ಮಾತು ಕೇಳಿ ನಾರಾಯಣ ಉಬ್ಬಿ ಹೋಗಿದ್ದ. ಸ್ವಲ್ಪ ಕುಡಿದಿದ್ದರೆ ಹೆಗಡೆರು ಅಲ್ಲೇ ಆಟ ನೋಡಬೇಕಿತ್ತೊನೋ. ಪ್ರತಿಯೊಂದು ಸಲ ಕಾಯಿಚೂಳಿ ಸುರಿದು ಬಂದಾಗಲೂ ನಾರಾಯಣನ ಒಂದೊಂದು ಪ್ರಶ್ನೆ ಕಾದಿರುತ್ತಿತ್ತು ಹೆಗಡೇರಿಗೆ.

"ಭಾಗವತರು ಯಾರು..?"

"ಹೊನ್ನಪ್ಪ ಗುನಗರಿಗೆ ಹೇಳಣಾಂತೇಳಿ." ನಾರಾಯಣನಿಗೆ ಗುನಗರ ಕುರಿತು ಇರುವ ಗೌರವದ ಬಗ್ಗೆ ಗೊತ್ತಿದ್ದ ಹೆಗ್ಡೆರು ಅವರ ಹೆಸರನ್ನೇ ಹೇಳಿದ್ದರು.

"ಛಲೋ ಆಯ್ತು. ಅವ್ರ್ ತಮ್ಮನೇ ಮುರ್ದಂಗ ಬಾರ್ಸ್ತಾ. ಚೆಂಡೆಗೆ ಸುಕ್ರಜ್ಜಗೆ ಹೇಳ್ರೆ ಆಯ್ತು." ಕೆಲವಕ್ಕೆ ನಾರಾಯಣನೇ ಉತ್ತರವನ್ನೂ ಕಂಡುಕೊಂಡಿದ್ದ.

ಕಾಯಿ ಹೊತ್ತು ಮುಗಿದ ಖುಷಿಯಲ್ಲಿ ಹೆಗಡೆರು ನಿರಾಳವಾಗಿ ಎಲೆ ಅಡಿಕೆ ಹಾಕುತ್ತಿದ್ದರೆ ನಾರಾಯಣ ಅಲ್ಲೇ ನಿಂತಿದ್ದ.

"ಬಣ್ಣದ ಬಾಬಣ್ಣಗೂ ಒಂದ್ ವೀಳೆ ಕೊಡ್ಬೇಕು. ಅಂವಾ ಇಲ್ದಿರೆ ಆಟಾ ಆದಂಗೆಯಾ" ನಗುತ್ತಾ ಹೇಳಿದ್ದ ನಾರಾಯಣ.

"ಹಾಂ ಹಾಂ ಹೇಳ್ವ ಹೇಳ್ವ. ಕಟ್ಟೆ ಪೂಜೆ ಬರೂ ಅಮಾಸಿಗೆ. ಒಂದ್ ತಿಂಗಳ್ ತಡ ಇದ್ದು." ಹೆಗಡೆರು ಮಾತು ತೇಲಿಸಿದ್ದರು. ನಾರಾಯಣ ಮಾತ್ರ ಖುಷಿಯಲ್ಲಿ ತೇಲುತ್ತಿದ್ದ. ಅಲ್ಲಿಂದ ನೇರ ಭಾಗವತರ ಮನೆಗೆ ತೆರಳಿದ್ದ.

"ಅಪಾ.. ಮಳ್ ನಾರಾಣಾ ಬಂದಾನೆ." ಜೋರಾಗಿ ಕೂಗಿ ಹೊನ್ನಪ್ಪ ಭಾಗವತರನ್ನು ಕರೆದಿದ್ದಳು ಅವರ ಕಿರಿ ಮಗಳು. ಕೂಡಲೇ ತನ್ನ ತಪ್ಪಿನ ಅರಿವಾಗಿ ನಾಲಿಗೆ ಕಚ್ಚಿಕೊಂಡು ಒಳ ಓಡಿದ್ದಳು. "ನಾಲ್ಗಿ ಕೊಯ್ದು ಕೈಗೆ ಕೊಡ್ತಿ ನೋಡ್ ಹಾಳ್ ಮಗ್ವೆ. ಭಾಳ್ ಉದ್ದಾಗಿದ್ ನಾಲ್ಗಿ ನಿಂದು" ಮಗಳಿಗೆ ಬಯ್ಯುತ್ತಾ ಎಲೆ ಅಡಿಕೆ ತಟ್ಟೆಯನ್ನು ನಾರಾಯಣನತ್ತ ತಳ್ಳಿ ಕೂತರು ಗುನಗರು.

"ಇರ್ಲ್ರಾ ಸಣ್ಣ ಮಗಾ ಪಾಪಾ." ಎಂದು ನಾರಾಯಣನೇ ಮಾತನ್ನು ಯಕ್ಷಗಾನದತ್ತ ತಿರುಗಿಸಿದ್ದ.

"ನಂಗ್ ಒಂದ್ ವಾಲಿ ವಧೆ ಆಟದ್ ಅರ್ಥ ಬರ್ಕಂಡದ್ ಇದ್ರೆ ಕೋಡ್ರಾ. ಶಿರಿದರ್ ಹೆಗ್ಡೆರ್ದ್ ಒಂದ್ ಆಟಾ ಆಗೂ ನಮನಿ ಅದೆ ಈ ಸತಿಗೆ." ನಾರಾಯಣ ಮಾತು ಮುಗಿಸಿದ ಕೂಡಲೇ ಗುನಗರು ವಾಲಿವಧೆಗೆ ಬರೆದಿಟ್ಟಿದ್ದ ಅರ್ಥದ ಪಟ್ಟಿಯನ್ನು ನಾರಾಯಣನ ಕೈಗೆ ಕೊಡುತ್ತಾ "ಕುಡ್ಕಂಡಿ ಇದ್ ಒಂದ್ ಎಲ್ಲಾರೂ ಹೊತಾಕ್ಬೇಡಾ ಮಾರಾಯಾ. ನಂಗ್ ಮತ್ ಮತ್ ಬರಿತೆ ಕೂತ್ಕಣುಕ್ ಆಗುದಿಲ್ಲ" ಎಂದು ಹೇಳಿ ನಾರಾಯಣನನ್ನು ಕಳಿಸಿದ್ದರು. ಆ ದಿನ ನಾರಾಯಣನಿಗೆ ಸಾರಾಯಿಯ ಅವಶ್ಯಕತೆ ಕಾಣಿಸಲಿಲ್ಲ. ಮನೆಗೆ ಬಂದವನೇ ಚಿಮಣಿ ಹಚ್ಚಿ ಅಭ್ಯಾಸ ಪ್ರಾರಂಭಿಸಿದ್ದ.

‘‘ಈ ಮಳ್ಳ ನಾರಾಣಗೆ ಓದೂಕೂ ಬತ್ತಿದೆನಾ ಅಪ್ಪಾ.." ರಾತ್ರಿ ಮಲಗುವಾಗ ಹೊನ್ನಪ್ಪ ಗುನಗರ ಮಗಳು ಕೇಳಿದ್ದಳು. ಮತ್ತೆ ಎಲ್ಲರೂ ನಾರಾಣನನ್ನು ಮಾತಾಡಿಸುವ ಹಾಗೆ ಅಪ್ಪ ಮಾತಾಡಿಸದ್ದು ಕಂಡು ಸ್ವಲ್ಪ ಆಶ್ಚರ್ಯವೂ ಆಗಿತ್ತು.

"ಅಂವಾ ಹುಟ್ಟಾ ಮಳ್ಳ ಅಲ್ವೇ. ಭಾಳ್ ಹುಷಾರಿ ಹುಡ್ಗ. ಯಾರ್ಯಾರ್ ಹಣೆಬರಾ ಹೆಂಗೆಂಗ್ ಇರ್ತೀದೋ ಯಾರಿಗೊತ್ತು. ಇಂವಾ ಹಿಂಗ್ ಆಗಿ ಹನ್ನೆಡ್ ವರ್ಷಾ ಆಯ್ತ್. ಭಾಳಾ ನಂಬಿಕಸ್ತಾ" ಗುನಗರು ಬೇಸರದಿಂದ ಮಾತಾಡುತ್ತಿದ್ದರು. ಗುನಗರಿಗೆ ನಾರಾಯಣನ ಮೇಲೆ ಇರುವ ಅನುಕಂಪಕ್ಕೂ ಕಾರಣವಿತ್ತು. ಗುನಗರ ಮನೆತನದ ಜಮೀನಿಗೆ ನಾರಾಯಣನ ಅಜ್ಜನ ಕಾಲದಿಂದಲೂ ಅವರೇ ಗೇಣಿ ಮಾಡುತ್ತಿದ್ದರು. ಸರ್ಕಾರ ಅದೇನೋ "ಉಳುವವನೆ ಹೊಲದೊಡೆಯ" ಅನ್ನೋ ಕಾನೂನು ಮಾಡಿತ್ತು. "ಟ್ರಿಬಿನಲ್ ತುಂಬರ್ ಸಾಕು. ಜಾಗಾ ಗೇಣಿ ಮಾಡೂ ಒಕ್ಕಲ ಹೆಸರಿಗೆ ಆತಿದಂತೆ" ಅನ್ನುವ ಮಾತು ಪ್ರತಿಯೊಬ್ಬರ ಬಾಯಲ್ಲೂ ಓಡಾಡುತ್ತಿತ್ತು. ಶ್ರೀಧರ್ ಹೆಗಡೆರು, ಕೆಳಮನೆ ಭಟ್ರು ಎಲ್ಲಾ ಸುಮಾರು ಜಮೀನು ಕಳಕೊಂಡಿದ್ದರು. ಇದ್ದ ಜಮೀನನ್ನು ಉಳಿಸಿಕೊಳ್ಳಲು ಜಮೀನಿನ ಯಜಮಾನರು ಓಡಾಡುತ್ತಿದ್ದ ಕಾಲ. ನಾರಾಯಣನ ಅಪ್ಪ ತೀರಿಹೋಗಿ ಈಗ ನಾರಾಯಣನೇ ಗೇಣಿ ಆಳಾಗಿ ದುಡಿಯುತ್ತಿದ್ದ. ಹೈಸ್ಕೂಲ್ ಮೆಟ್ಟಿಲು ಹತ್ತಿ ಬಂದಿದ್ದ ನಾರಾಯಣ ಗುನಗರ ಜಾಗ ಒಳಗೆ ಮಾಡಿಕೊಳ್ತಾನೆ ಎಂದೇ ಎಲ್ಲರೂ ಭಾವಿಸಿದ್ದರು. ಆ ವರ್ಷದ ಗೇಣಿಯಾಗಿ ಅಕ್ಕಿಯ ಮೂಡೆಗಳನ್ನು ಗುನಗರ ಅಂಗಳದಲ್ಲಿ ಹಾಕಿದವನೆ ನಾರಾಯಣ ಅವರಿಗೆ ಕೈಮುಗಿದು ಹೇಳಿದ್ದ "ನಮ್ಮಜ್ಜನ್ ಕಾಲದಿಂದೂ ನಾವ್ ಮೂರ್ ಹೊತ್ತು ಊಟಾ ಮಾಡ್ತೇ ಇವ್ರ್ ಅಂದ್ರೆ ಅದ್ ನಿಮ್ ಗೇಣಿ ಗದ್ದೆಯಿಂದೆ. ಯಾವ್ದೋ ಸರ್ಕಾರಾ ಅದೇನೋ ಹೇಳ್ತು ಅಂದಿ ನಾ ಅಂತಾ ಮಣ್ ತಿಂಬು ಕೆಲ್ಸಾ ಮಾಡುದಿಲ್ರಾ. ಹಾಂಗೆಲಾ ಮಾಡ್ರೆ ನನ್ ಬಾಯಿಗ್ ಹುಳಾ ಬೀಳುದು. ಮುಂದಕ್ಕೂ ನಾ ನಿಮ್ ಗೇಣಿ ಆಳಾಗೆ ದುಡಿತೆ" ಎಂದು ಹೇಳಿ ಗುನಗರ ಹೆಂಡತಿ ಕೊಟ್ಟ ಉಪ್ಪಿನಕಾಯಿ ಬಾಯಲ್ಲಿಟ್ಟು ನೀರು ಕುಡಿದು ಹೊರಟಿದ್ದ. ಹೀಗೆ ಎಲ್ಲರೂ ಜಮೀನು ಕಳಕೊಂಡಿದ್ದರೂ ಗುನಗರ ಜಮೀನಿಗೆ ಧಕ್ಕೆ ಬಂದಿರಲಿಲ್ಲ.

"ಮತ್ ಅವಂಗೆ ಮಳ್ ಹಿಡದದ್ ಹೆಂಗೆ..?" ಮಗಳು ಮರು ಪ್ರಶ್ನೆ ಕೇಳಿದ್ದಳು.

"ಎಂತಾದೋ. ಅವ್ರ್ ಮನೆತನದಾಗೂ ಯಾರ್ಗೂ ಮಳ್ಳು ಇಲ್ಲಾಗಿತ್ತು. ಎಲ್ಲಾರೂ ಆಟದಾಗೆ ಪಾರ್ಟ್ ಮಾಡೋರೆಯಾ. ಅವರಪ್ಪನ ಹನುಮಂತ ಎಸ್ಟ್ ಚಂದ ಆತಿತ್ತು ಗೊತ್ತಾ. ಇವ್ನೂ ಸರಿನೆ ಇದ್ದ. ದ್ಯಾವ್ರಿಗೆ ಕೆಂಡಾ ಹಾಯೂ ದಿನಾ ಸಾರಾಯಿ ಕುಡ್ಕಂಡ್ ಕೆಂಡಾ ಹಾದಾ. ಯಾವತ್ತೂ ಕುಡದಂವಾ ಅಲ್ಲಾಗಿತ್ತು ಮೊದ್ಲೆ. ಮಳ್ ಹಿಡದ್ ಹಾಂಗ್ ಮಾಡದ್ನೋ.. ಹಾಂಗ್ ಮಾಡಿದಕ್ ಮಳ್ ಹಿಡಿತೋ. ಪಾಪ ಹೆಂಡ್ತಿ ದ್ಯಾವರಂತೋಳು. ಇವಂಗ್ ಮಳ್ ಹಿಡದ್ಮ್ಯಾಲೆ ಒಬ್ಬಳೇ ಮನೆ ಮಾಡ್ಕಂಡಿ ಈದು." ಗುನಗರು ಮಾತು ಮುಗಿಸಿದ್ದರು.

***

ಮಳ್ಳ ನಾರಾಯಣನ ಆಟದ ಸುದ್ದಿ ಊರಿಗೆಲ್ಲಾ ಹಬ್ಬಿತ್ತು. ಚಾ ಅಂಗಡಿ ನರಸಿಂಹ ಕಾಮ್ತಿ ವಿಷಯ ತಿಳಿದವನೆ ಶ್ರೀಧರ ಹೆಗ್ಡೆರ ಮನೆಗೆ ಬಂದಿದ್ದ. ಅವರಿಬ್ಬರೂ ಒಟ್ಟಿಗೆ ಕಲಿತವರಾದ್ದರಿಂದ ಒಂದು ಸಲಿಗೆಯೂ ಇತ್ತು.

"ಹೆಗ್ಡೆರದ್ದು ಈ ಸರ್ತಿ ಆಟಾ ಅಂತೆ. ನಿಮಗ್ ಎಂತಾ ತಲುಬು ಎದ್ದದ್ದು ನಾರಾಣನ್ ಸಂಗ್ತಿಗ್ ಪಾರ್ಟ್ ಮಾಡುದು..?" ಕಾಮ್ತಿ ನಗುತ್ತಾ ಕೇಳಿದ್ದ. ಸುದ್ದಿ ಚಾ ಅಂಗಡಿಯವರೆಗೆ ತಲುಪಿದ್ದು ಆಶ್ಚರ್ಯವಾಗಿ ಹೆಗ್ಡೆರು ಕವಳ ಉಗಿದು ಬಂದು "ಆ ಮಳ್ಳಗ್ ಎಂತಾ ಆಟ್ವಾ.. ಕೆಲ್ಸಕ್ ಬರ್ಲಿ ಅಂದ್ಕ್ಯಂಡ್ ಒಂದ್ ಕತೆ ಕಟ್ಟದ್ ಅಸ್ಟೆಯಾ." ಹೆಗ್ಡೆರು ನಗುತ್ತಾ ಹೇಳಿದ್ದರು.

"ನೀವ್ ಹೋಗಿ ಹೋಗಿ ಗನಾ ಮನಷಾಗೆ ಹಿಡದೀರಿ. ಆ ಮಳ್ ನಾರಾಣನ್ ಕೂಡೆ ಆಟದ್ ಸುದ್ದಿ ಹೇಳಿ ತಪ್ಸ್ಕಂಬುಕೆ ಆತಿದ್ ಅಂದಿ ಮಾಡಿರಾ..? ಅವಾ ಕೌರವ ಮಾಡದ್ ಕತೆ ಗುತ್ತಿದಲಾ ನಿಮ್ಗೆ..?" ಕಾಮ್ತಿ ಎಲೆಗೆ ಸುಣ್ಣ ಹಚ್ಚುತ್ತಾ ಕೇಳಿದ್ದ. ನಾರಾಯಣ ಕೌರವ ಮಾಡಿದ್ದ ಸುದ್ದಿ ಹೆಗಡೇರಿಗೆ ಗೊತ್ತಿರಲಿಲ್ಲ. "ಅದೆಂತಾ ಕತೆ..?" ಹೆಗಡೆರು ಕೇಳಿದ್ದರು.

ನಾರಾಯಣ ಕುಂತಲ್ಲಿ ನಿಂತಲ್ಲಿ ಯಕ್ಷಗಾನದ ಪದ ಹಾಡುತ್ತಾ ತಿರುಗುತ್ತಿದ್ದ ಮೊದಮೊದಲ ದಿನಗಳವು. ಮೂಲೆಮನೆ ದೇವಪ್ಪನಿಗೆ ಅದೇನು ತಮಾಷೆ ಮಾಡುವ ಮನಸ್ಸು ಬಂತೋ ಏನೋ. "ಆಟ ಮಾಡವಾನಾ..? ನಿಂದೇ ಕೌರವ. ನಾ ಭೀಮನ ಮಾಡ್ತೆ" ಅಂದಿದ್ದ. ದಿನ ಕಳೆದಂತೆ ನಾರಾಯಣನಿಂದ ತಪ್ಪಿಸಿಕೊಳ್ಳಲು ನೋಡಿದ್ದ. ಆದರೆ ನಾರಾಯಣ ಬಿಡುವ ಜಾತಿಯೇ ಅಲ್ಲ. "ದೇವಣ್ಣಾ ನೀ ಹಿಂಗ್ ಹಲ್ಕಟ್ಗಿರಿ ಮಾಡ್ರೆ ನಾ ಸುಮ್ನ್ ಉಳಿಯಂವಾ ಅಲ್ಲಾ ಹಾಂ.. ದಗಾ ಏನಾರೂ ಕೊಟ್ರೆ ಮತ್ ನಾ ನಿನ್ ಕಾಲ್ ಮುರೀದಿರೆ ನಾ ಅಪ್ಪಂಗ್ ಹುಟ್ಟದಂವಾ ಅಲ್ಲಾ" ಎಂದು ಹೆದರಿಸಿ ಹೋಗಿದ್ದ. ದೇವಪ್ಪ ಉಪಾಯ ಕಾಣದೆ ತನ್ನ ಸ್ವಲ್ಪ ದುಡ್ಡನ್ನು ಹಾಕಿ, ನಾರಾಯಣನಿಂದ ಅಕ್ಕಿ ಮೂಡೆ ಮಾರಿಸಿ ಅವನಿಂದ ಹಣ ಹಾಕಿಸಿ ಆಟದ ತಯಾರಿ ಮಾಡಿದ್ದ. ಆಟದ ದಿನ, ಭೀಮ ಬಿದ್ದು ಕೌರವ ಕೃಷ್ಣನೊಟ್ಟಿಗೆ ಮಾತಾಡುವ ಸನ್ನಿವೇಶ. ಭಾಗವತರು ಇನ್ನೇನು "ಕಪಟ ನಾಟಕ ರಂಗ" ಪದ ಎತ್ತಬೇಕು, ಕೌರವನ ಪಾತ್ರದಲ್ಲಿದ್ದ ನಾರಾಯಣನಿಗೆ ಅದೇನಾಯಿತೋ. ಒಂದೇ ಸಮನೆ ಬಿದ್ದ ಭೀಮನನ್ನು ಒದೆಯತೊಡಗಿದ್ದ. ನಾರಾಯಣನ ಹುಚ್ಚಿನ ಅರಿವಿದ್ದ ಕೆಲವರು ರಂಗಸ್ಥಳಕ್ಕೆ ಹಾರಿಬಂದು ದೇವಪ್ಪನನ್ನು ಉಳಿಸಿದ್ದರು. ತನಗೆ ಕೊಟ್ಟ ಕಿರಿಕಿರಿಯನ್ನೂ ಹಾಕಿಸಿದ ಹಣವನ್ನೂ ನಾರಾಯಣ ಒದ್ದು ಒದ್ದು ತೀರಿಸಿದ್ದ. ಆಟ ಅರ್ಧಕ್ಕೆ ನಿಂತಿತ್ತು.

ನಾರಾಯಣನ ಕೌರವ ಪಾತ್ರದ ವಿಸ್ತಾರ ವಿವರಣೆ ಕೇಳಿದ್ದ ಹೆಗ್ಡೆರಿಗೆ ಹಣೆಯಲ್ಲಿ ಬೆವರು ಕಾಣಿಸಿತ್ತು. "ಈಗೆ ತಪ್ಸ್ಕಂಬುದು ಹೆಂಗಾಯ್ತು ಕಾಮತ್ರು..?" ಹೆಗಡೆರು ಹೆಗಲ ಮೇಲಿನ ಶಲ್ಯದಿಂದ ಬೆವರು ಒರೆಸಿಕೊಳ್ಳುತ್ತಾ ಕೇಳಿದರು.

"ಮತ್ ತಪ್ಸ್ಕಂಬು ಆಟಿಲ್ಲ. ನೀವ್ ಅವಂಗೆ ಆಟ ತಪ್ಸದ್ರೆ ನೀವ್ ಒಬ್ರೆ ಸಿಕ್ದಾಗ್ ಕಲ್ ಹೊಡದ್ ಆರೂ ಮಂಡೆ ಒಡಿತಾ ಅಂವಾ. ಹೊನ್ನಪ್ಪ ಭಾಗ್ವತ್ರಿಗ್ ಆಟಕ್ ಹೇಳಿ. ಅವ್ರ್ ಮಾತ್ ಸಲ್ಪ್ ಕೇಳ್ತಾ ಅಂವಾ. ಪಾತ್ರಾ ನೂ ಚಲೋ ನೆ ಮಾಡ್ತಾ. ಆಟಾ ಆಗೂ ತಂಕಾ ಅವ್ನ್ ಕೂಡೆ ಚಲೋ ಮಾತಾಡ್ಕಂಡಿ ಇರ್ರಿ. ಹೆಂಗೂ ಪೂಜೆಗ್ ಆಟಾ ಮಾಡ್ಲೆ ಬೇಕಲ್ಲಾ. ಸುಧಾರ್ಸ್ಕಂಡಿ ಹೋಗಿ" ಕಾಮ್ತಿ ಮಾತು ಮುಗಿಸಿ ಹೊರಡಲು ಸಿದ್ಧನಾದ.

ಹೆಗಡೆರಿಗೆ ಈಗ ಆಟ ತಪ್ಪಿಸೋದು ಸುಲಭ ಇಲ್ಲ ಅಂತಾ ಸ್ಪಷ್ಟವಾಗಿತ್ತು. ಈಗ ಅವರಿಗೆ ಇದ್ದದ್ದು ಒಂದೇ ಹೆದರಿಕೆ. "ಕೌರವ ಮಾಡುವಾಗ್ಲೇ ಬಿಡ್ಲಿಲ್ಲ. ಮತ್ ಈಗ ವಾಲಿ" ವಾಲಿ ಸುಗ್ರೀವನಿಗೆ ಹೊಡೆಯುವ ಸನ್ನಿವೇಶ ಅವರ ಎದೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡಿತ್ತು.

***

ಅಂತೂ ಆಟದ ದಿನ ಬಂದೇ ಬಿಟ್ಟಿತ್ತು. ಕಟ್ಟೆಯ ದೇವಿಯ ಪೂಜೆ ಸಾಂಗವಾಗಿ ಸಂಪನ್ನಗೊಂಡಿತ್ತು. ಶ್ರೀಧರ ಹೆಗ್ಡೆರ ಸುಗ್ರೀವ ಮತ್ತು ಕೆಳಮನೆ ಭಟ್ರ ರಾಮನ ಸನ್ನಿವೇಶ ಪ್ರಾರಂಭವಾಗಿತ್ತು. ಭಾಗವತರ "ಅಮಮ ವಾಲಿಯ ರಾಮ ಕೊಂದರೆ" ಪದ್ಯಕ್ಕೆ ಶ್ರೀಧರ ಹೆಗ್ಡೆರು ಕುಣಿಯುತ್ತಿದ್ದರು. ಚೌಕಿಯಲ್ಲಿ ವಾಲಿಯ ಪಾತ್ರದ ಸಿದ್ಧತೆ ನಡೆದಿತ್ತು. ಬಣ್ಣದ ಬಾಬು ನಾರಾಯಣನಿಗೆ ಬಣ್ಣ ಹಚ್ಚುತ್ತಾ ಕೂತಿದ್ದ. ಹಿಂದಿನಿಂದ ಯಾರದ್ದೋ ದನಿ ಕೇಳಿಸಿತ್ತು.

"ನಾರಾಣನ್ ಹೆಣ್ತಿನೂ ಆಟಕ್ ಬಂದಿದ್ ಇವತ್ತೆ. ಯಾವಾಗೂ ಬಂದದ್ದಲ್ಲ ಆಟಕ್ ಅದು. ಗಂಡನ್ ವೇಶಾ ನೋಡೂ ಮನ್ಸ್ ಆಯ್ತೇನೋ."

"ಪಾಪದ್ ಹೆಂಗ್ಸು ಅದು. ಇವಂಗ್ ಮದಿ ಆಗಿ ಪೂರ್ತಿ ಜೀವ್ನಾ ಒಬ್ಲೇ ಬದ್ಕೂ ಹಾಂಗ್ ಆಯ್ತ್." ಬೆನ್ನಿಗೇ ಇನ್ನೊಂದು ದನಿಯೂ ಕೇಳಿಸಿತ್ತು.

ವಾಲಿಯ ಪಾತ್ರದ ಗುಂಗಿನಲ್ಲಿದ್ದ ನಾರಾಯಣನಿಗೆ ಹೆಂಡತಿಯ ನೆನಪಾಗಿತ್ತು. ಹದಿನೈದು ವರ್ಷಗಳ ಹಿಂದೆ ಪಕ್ಕದೂರಿನ ಮಂಜಪ್ಪ ಗೌಡರ ಮಗಳು ಸೊಮಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಕೆಲವೇ ದಿನಗಳಲ್ಲಿ ತಂದೆಯನ್ನು ಕಳಕೊಂಡ ನಾರಾಯಣ ಸಂಸಾರದ ನೋಗವನ್ನು ತಾನೇ ಹೊರುವಂತಾಗಿತ್ತು. ಪ್ರೀತಿಸಿ ಮದುವೆಯಾದವಳು ಜೊತೆಗಿದ್ದಾಗ ಯಾವುದೂ ಭಾರವೆನಿಸಿರಲಿಲ್ಲ ಅವನಿಗೆ. ಆದರೆ ಸಂತೋಷ ಅವನ ಪಾಲಿಗೆ ಬಹಳ ದಿನ ಉಳಿಯಲಿಲ್ಲ. ಅದು ಮಾಸ್ತಿಯಮ್ಮನ ಬಂಡೀಹಬ್ಬದ ದಿನ. ಹಿಂದಿನ ತಲೆಮಾರು ನಡಕೊಂಡು ಬಂದಂತೆ ಕೆಲವು ಮನೆತನದವರು ಕೆಂಡ ಹಾಯುವ ಸೇವೆ ಇರುತ್ತಿತ್ತು. ತಂದೆ ಮಾಡುತ್ತಿದ್ದ ಕೆಂಡದ ಸೇವೆ ಈಗ ನಾರಾಯಣನ ಹೆಗಲೇರಿತ್ತು. ಆ ದಿನ ರಾತ್ರಿ ಕೆಂಡ ಹಾದು ಮುಗಿದರೆ ಬಂಡಿಹಬ್ಬ ಸಂಪನ್ನ. ಮಾರನೇ ದಿನ ಕಂಕಣ ಬಿಚ್ಚಿ ವ್ರತ ಮುಗಿಸುವುದು ವಾಡಿಕೆಯಾಗಿತ್ತು. ಹಬ್ಬದ ದಿನ ಬೆಳಿಗ್ಗೆ ಪೂಜೆಗೆ ದೇವಸ್ಥಾನಕ್ಕೆ ಹೋಗಿದ್ದ ನಾರಾಯಣ, ದೇವರ ಪಡಿಯ ಜೊತೆಗೆ ಕೊಡುವ ಕಾಣಿಕೆಯನ್ನು ಮನೆಯಲ್ಲೇ ಬಿಟ್ಟು ಹೋದ್ದರಿಂದ ಬೇಗನೆ ತಿರುಗಿ ಮನೆಗೆ ಬಂದಿದ್ದ.

"ಯೇ ಈಗೆ ವಾಲಿ ಪ್ರವೇಶಾ.. ನಾರಾಣಾ ಮುಂದಿನ ಪದ ನಿಂದೇ." ನೆನಪಿನ ಲೋಕಕ್ಕೆ ಹೋಗಿದ್ದ ನಾರಾಯಣನನ್ನು ಯಾರೋ ಎಚ್ಚರಿಸಿದ್ದರು. ಹನಿಗೂಡಿದ್ದ ಕಣ್ಣನ್ನು ಒರೆಸಿ ನಾರಾಯಣ ವಾಲಿಯ ಪ್ರವೇಶಕ್ಕೆ ಸಿದ್ಧನಾದ. ಸುಗ್ರೀವನ ಪಾತ್ರ ಮಾಡಿದ್ದ ಶ್ರೀಧರ ಹೆಗಡೆರು ರಂಗಸ್ಥಳದಿಂದ ಕೂಗಿದ್ದರು. "ಅಣ್ಣಾ ವಾಲಿ ಬಾ ಯುದ್ಧಕ್ಕೆ"

"ಭಾನು ತನುಜ ಭಳಿರೆ ಅನುಜ.." ಭಾಗವತರು ವಾಲಿಯ ಪದ್ಯ ಎತ್ತುತ್ತಿದ್ದಂತೆ ಎರಡೂ ಕೈಗಳಲ್ಲಿ ಮಾವಿನ ಟೊಂಗೆ ಹಿಡಿದು ವಾಲಿಯ ಅಬ್ಬರದ ಪ್ರವೇಶವಾಗಿತ್ತು. ಊರ ಜನರ ಶಿಳ್ಳೆ ಮುಗಿಲು ಮುಟ್ಟಿತ್ತು. ಶ್ರೀಧರ ಹೆಗಡೆರ ಎದೆ ಬಡಿತ ಚೆಂಡೆಯ ಸದ್ದಿನೊಂದಿಗೆ ಸ್ಪರ್ಧೆಗಿಳಿದಿತ್ತು. ಅಬ್ಬರದ ಕುಣಿತ ಮುಗಿಸಿ, ಬಾಯಿಪಾಠ ಹಾಕಿದ್ದನ್ನ ಪೂರ್ತಿ ಹೇಳಿ ಮುಗಿಸಿ ಗತ್ತಿನಿಂದ ಒಮ್ಮೆ ಸಭಿಕರತ್ತ ಕಣ್ಣು ಹಾಯಿಸಿದ್ದ ನಾರಾಯಣ. ಎದುರಿನಲ್ಲೇ ಚಿಕ್ಕಪ್ಪನ ಮಗ ವಿಟ್ಟು ಕಾಣಿಸಿದ್ದ. ನಾರಾಯಣನ ನೆನಪಿನ ಸುರುಳಿ ಮತ್ತೆ ಬಿಚ್ಚಿಕೊಂಡಿತು.

ಕಾಣಿಕೆ ಹಣವನ್ನು ತರಲು ಮನೆಯೊಳಕ್ಕೆ ಹೊಕ್ಕಿದ್ದ ನಾರಾಯಣನಿಗೆ ಕಾಣಿಸಿದ್ದು ಮಾತ್ರ ಬೇರೆಯೇ. ಅವನ ಹೆಂಡತಿ ಸುಕ್ರಿ ನಾರಾಯಣನ ತಮ್ಮ ವಿಟ್ಟುವಿನೊಟ್ಟಿಗೆ ಹೊರಳಾಡುತ್ತಿದ್ದಳು. ನಾರಾಯಣ ಒಳಬಂದಿದ್ದರ ಪರಿವೆಯೂ ಇಲ್ಲದೆ ಒಬ್ಬರ ತೆಕ್ಕೆಯಲ್ಲಿ ಮತ್ತೊಬ್ಬರು ಬಂಧಿಸಲ್ಪಟ್ಟಿದ್ದರು. ಅಂಗಳದ ಚಪ್ಪರಕಂಬಕ್ಕೆ ಬಿಗಿದಿದ್ದ ಬಾರುಕೋಲನ್ನು ತಂದು ಮಲಗಿದ್ದಲ್ಲೇ ಇಬ್ಬರಿಗೂ ಸರಿಯಾಗಿ ಬಾರಿಸಿದ್ದ. ಪರಿಸ್ಥಿತಿಯ ಅರಿವಾಗುತ್ತಿದ್ದಂತೆ ಪಂಚೆಯನ್ನೂ ಬಿಟ್ಟು ಹಾಗೆಯೇ ಓಡತೊಡಗಿದ್ದ ವಿಟ್ಟು. ಹೆಂಡತಿಗೆ ಹೊಡೆಯಲೂ ಮನಸ್ಸಾಗದೆ, ಕತ್ತಿ ಹಿಡಿದು ವಿಟ್ಟುವನ್ನು ಕಡಿಯಲು ಓಡಿದ್ದ ನಾರಾಯಣ. ವಿಟ್ಟು ಸಿಕ್ಕ ಸಮಯದಲ್ಲಿ ಎಲ್ಲೋ ಮರೆಯಾಗಿದ್ದ. ನಾರಾಯಣನ ಮನಸ್ಸಿನ ಸ್ಥಿಮಿತ ತಪ್ಪಿತ್ತು. ಹಳೆಪೈಕರ ಕೇರಿಗೆ ಹೋಗಿ ಬೆಲ್ಲದ ಸಾರಾಯನ್ನು ಗಟಗಟನೆ ಕುಡಿದು ಅಲ್ಲೇ ಮಲಗಿದ. ನಾರಾಯಣ ಕೆಂಡ ಹಾಯಬೇಕಿದ್ದ ವಿಷಯ ಗೊತ್ತಿಲ್ಲದೆ ಸಾರಾಯಿ ಕೊಟ್ಟ ಹಳೆಪೈಕರ ದಾಸುವಿಗೆ ಈಗ ಫಜೀತಿಯಾಗಿತ್ತು. ವ್ರತ ಮುರಿಸಿದ್ದಕ್ಕೆ ಊರವರ ಆಗ್ರಹಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವುದಕ್ಕೆ ನಾರಾಯಣನ ತಲೆಯ ಮೇಲೆ ತಣ್ಣೀರು ಸುರಿದು, ಮಜ್ಜಿಗೆ ಕುಡಿಸಿ ಅಮಲು ಇಳಿಯುವ ಹಾಗೆ ಮಾಡಿ ಅಲ್ಲಿಂದ ಕಳಿಸಿಬಿಟ್ಟ.

ಹಬ್ಬ ಪ್ರಾರಂಭವಾಗಿತ್ತು. ನಾರಾಯಣ ಯಾಂತ್ರಿಕವಾಗಿ ದೇವರ ಕಲಶದೊಟ್ಟಿಗೆ ನಡೆಯುತ್ತಿದ್ದ. ಕೆಂಡ ಹಾಯುವ ಸಮಯದಲ್ಲಿ ಮೊದಲ ಸುತ್ತಿನಲ್ಲಿ ಸರಿಯಾಗಿ ಕೆಂಡ ಹಾದವನು, ಎರಡನೇ ಸುತ್ತು ಬರುವಾಗ ದೇವರ ಕಲಶದೆದುರೆ ತಲೆಸುತ್ತಿ ಬಿದ್ದುಬಿಟ್ಟ. ಬಿದ್ದಲ್ಲೇ ಬಕಬಕನೆ ಕಾರಿಕೊಳ್ಳತೊಡಗಿದ. ನಾರಾಯಣನ ಪ್ರಜ್ಞೆ ತಪ್ಪಿತ್ತು. ಮಾರನೇ ದಿನ ಎದ್ದಾಗ ನಾರಾಯಣ ಮೊದಲಿನಂತೆ ಇರಲಿಲ್ಲ. ಮಾತು, ಹಾವಭಾವ ಎಲ್ಲವೂ ಬದಲಾಗಿತ್ತು. ಒಬ್ಬನೇ ನಗುತ್ತಿದ್ದ, ಒಬ್ಬನೇ ಅಳುತ್ತಿದ್ದ, ಹಾಡುತ್ತಾ ಕುಣಿಯುತ್ತಿದ್ದ. ಊರವರು ತಲೆಗೊಬ್ಬರಂತೆ ಕಾರಣ ಕಂಡುಕೊಂಡಿದ್ದರು. "ಸಾರಾಯಿ ಕುಡದು ಕೆಂಡ ಹಾದಾ.. ಅದ್ಕೇ ಮಳ್ ಹಿಡಿತು". "ದೇವರ ನೆಡೆ ಜಾಗದಲ್ಲಿ ಬಿದ್ರೆ ಮಳ್ಳು ಹಿಡಿದೆ ಮತ್ತೇನಾಗುದು?". ಒಟ್ಟಿನಲ್ಲಿ ನಾರಾಯಣ ಮಳ್ಳನಾಗಿದ್ದ. ಹಬ್ಬದ ದಿನವೇ ಘಟ್ಟದ ಕೆಲಸಕ್ಕೆ ಮರಳಿದ್ದ ವಿಟ್ಟುವನ್ನೂ, ತವರಿಗೆ ಹೋದ ಸುಕ್ರಿಯನ್ನೂ ಯಾರೂ ಗಮನಿಸಲಿಲ್ಲ. ಸ್ವಲ್ಪ ದಿನದ ಬಳಿಕ ತವರಿನಿಂದ ಊರಿಗೆ ಮರಳಿದ್ದಳು ಸುಕ್ರಿ. ಕೆಳಮನೆ ಭಟ್ರ ತೋಟದಲ್ಲಿ ಕೆಲಸಕ್ಕೆ ಸೇರಿ ಒಬ್ಬಳೇ ಗುಡಿಸಲು ಕಟ್ಟಿ ಬದುಕತೊಡಗಿದ್ದಳು.

ವಾಲಿಯ ಮಾತಿಗೆ ಪ್ರತಿಮಾತನ್ನಾಡಿ ಮುಗಿಸಿದ್ದ ಸುಗ್ರೀವ ಪಾತ್ರಧಾರಿ ಹೆಗಡೆರು ವಾಲಿಯ ಪ್ರತಿಮಾತಿಗಾಗಿ ಕಾಯುತ್ತಾ ನಿಂತಿದ್ದರು. ವಾಲಿ ಮಾತ್ರ ರಂಗಸ್ಥಳದಲ್ಲೇ ಸ್ತಬ್ಧನಾಗಿ ನಿಂತಿದ್ದ. ಭಾಗವತರು ಅನಿವಾರ್ಯವಾಗಿ ಸುಗ್ರೀವನ ಮುಂದಿನ ಪದ್ಯ ಎತ್ತಿದರು.

"ಮಾನಿನಿಯನು ಬಿಡುವುದಕ್ಕೆ ಮನಸು ಬಾರದೇ.." ಶ್ರೀಧರ ಹೆಗ್ಡೆರು ಕುಣಿಯುತ್ತಿದ್ದರೆ ಚೆಂಡೆಯ ಸದ್ದಿಗೆ ವಾಸ್ತವಕ್ಕೆ ಮರಳಿದ್ದ ನಾರಾಯಣ. ಹೆಂಗಸರ ಸಾಲಿನಲ್ಲಿ ಸುಕ್ರಿ ಕಾಣುತ್ತಾಳೋ ನೋಡಲು ಅತ್ತ ಕಣ್ಣು ಹಾಯಿಸಿದಾಗ ಅವಳು ಮೂಲೆಯಲ್ಲಿ ಕೂತಿದ್ದು ಕಾಣಿಸಿತು. ಅದುವರೆಗೆ ಕೈಗೆ ಸಿಗದೆ ಓಡಾಡುತ್ತಿದ್ದ ವಿಟ್ಟು ಇವತ್ತು ತನ್ನನ್ನೇ ನೋಡಿ ನಗುತ್ತಿರುವಂತೆ ಅನಿಸಿತು ನಾರಾಯಣನಿಗೆ. ಭಾಗವತರು ಹಾಡಿದ ಆ ಪದ್ಯ ತನಗಾಗಿಯೇ ಹಾಡಿದ್ದು ಅನ್ನಿಸಿತ್ತು ಅವನಿಗೆ.

ಹೆಂಡತಿ ರುಮೆಯನ್ನು ಬಿಟ್ಟುಕೊಡುವಂತೆ ಕೇಳುವ ಸುಗ್ರೀವನ ಮಾತನ್ನು ಮುಗಿಸಿದ್ದರು ಹೆಗ್ಡೆರು. ಎದುರು ಮಾತಾಡಬೇಕಿದ್ದ ನಾರಾಯಣ ಏನೂ ಮಾತಾಡುತ್ತಿಲ್ಲ. ಅವನ ಮೈ ಸೆಟೆದುಕೊಳ್ಳುತ್ತಿದ್ದದ್ದು ಗಮನಿಸುತ್ತಿದ್ದ ಶ್ರೀಧರ ಹೆಗ್ಡೆರಿಗೆ ಮಾತ್ರ ಕಾಲು ನಡುಗುತ್ತಿತ್ತು. ಹೊನ್ನಪ್ಪ ಗುನಗರು ಮುಂದಿನ ಪದ್ಯ ಎತ್ತಿದ್ದರು.

"ನಾನು ಸತಿಯ ಕೊಡೆನು ಜವದಿ ಮರಳಿ ಪೋಗೆಲಾ. ನೀನು ಹಿಂದೆ ಪಡೆದ ಭಂಗವೆಲ್ಲ ಮರೆತೆಲಾ"

ಇಲ್ಲ. ವಾಲಿ ಕುಣಿಯುತ್ತಿಲ್ಲ. ಅವನ ಮನಸ್ಸು ಮಾತ್ರ ಹಿಡಿತಕ್ಕೆ ಸಿಗದೆ ಕುಣಿಯುತ್ತಿದೆ.

"ನೀನು ಹಿಂದೆ ಪಡೆದ ಭಂಗ" ನಾರಾಯಣನ ಮರ್ಮಕ್ಕೆ ನಾಟಿತ್ತು. ಚೆಂಡೆಯವನು ನಾರಾಯಣನನ್ನು ಕುಣಿಸಲು ಶಕ್ತಿ ಮೀರಿ ಬಡಿಯುತ್ತಿದ್ದಾನೆ. ಚೆಂಡೆಯ ಬಡಿತಕ್ಕೆ ಆವೇಶಕ್ಕೊಳಗಾದವನಂತೆ "ಹೋ.." ಎಂದು ಒಮ್ಮೆ ಕಿರುಚಿದ ವಾಲಿಯ ದನಿಗೆ ಶ್ರೀಧರ ಹೆಗಡೆರು ರಂಗಸ್ಥಳದ ಚಪ್ಪರ ಬಿಟ್ಟು ಹಾರಿಯಾಗಿತ್ತು. ನಾರಾಯಣ ಮಾತ್ರ ರಂಗಸ್ಥಳದ ಎದುರಿಗೆ ಜಿಗಿದವನೆ ನೇರ ವಿಟ್ಟುವಿನ ಕುತ್ತಿಗೆಗೆ ಕೈ ಹಾಕಿದ್ದ. ಪರಿಸ್ಥಿತಿಯ ಅರಿವಾಗುತ್ತಿದ್ದಂತೆ ನಾಲ್ಕಾರು ಜನ ಓಡಿ ಬಂದು ವಿಟ್ಟುವನ್ನು ನಾರಾಯಣನ ಕೈಯಿಂದ ತಪ್ಪಿಸಲು ಪ್ರಯತ್ನಿಸಿದ್ದರು. ನಾರಾಯಣ ಈಗ ಕಾಂಚನಮಾಲೆ ಧರಿಸಿದ್ದ ವಾಲಿಯಾಗಿದ್ದ. ಎದುರಿನವರ ಅರ್ಧ ಶಕ್ತಿ ಸೆಳೆದುಕೊಳ್ಳುವ ವಾಲಿಯ ಹಾಗೆ, ಯಾರೆಷ್ಟೇ ಪ್ರಯತ್ನಿಸಿದರೂ ಹಿಡಿತ ತಪ್ಪದ ಹಾಗೆ ಬಿಗಿಯಾಗಿ ಕತ್ತನ್ನು ಹಿಚುಕಿ ಹಿಡಿದಿದ್ದ. ವಿಟ್ಟುವಿನ ಕಣ್ಣು ಮೇಲಕ್ಕೆ ಸೇರಿಕೊಂಡಿತ್ತು. ನಾರಾಯಣ ಆವೇಶದಿಂದ ಅವನ ಕತ್ತನ್ನು ಲಟಕ್ಕನೆ ತಿರುಗಿಸಿ ಮುರಿದು ತೃಪ್ತಿಯಿಂದ ಎದ್ದು ನಿಂತಿದ್ದ.

ಈಗ ನಾರಾಯಣನನ್ನು ತಡೆದು ನಿಲ್ಲಿಸುವ ಧೈರ್ಯ ಯಾರೂ ತೋರಿಸಲಿಲ್ಲ. ವೇಷದೊಟ್ಟಿಗೇ ಗತ್ತಿನಿಂದ ಹಾಡುತ್ತಾ ಮನೆಯತ್ತ ನಡೆಯತೊಡಗಿದ. "ನಾನು ಸತಿಯ ಕೊಡೆನು ಜವದಿ ಮರಳಿ ಪೋಗೆಲಾ.." ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕತ್ತಲಲ್ಲಿ ಮರೆಯಾದ. ಶ್ರೀಧರ ಹೆಗ್ಡೆರು ನೆಮ್ಮದಿಯ ಉಸಿರು ಬಿಟ್ಟಿದ್ದರು. ಪೂಜೆಯ ದಿನ ಸಾವು ಅಪಶಕುನ ಅಂತಾದರೂ ಆ ಸಾವು ತನ್ನದಲ್ಲವಲ್ಲ ಎಂಬುದೇ ಅವರಿಗೆ ಸಮಾಧಾನ ತಂದಿತ್ತು.

ವಿಷಯ ಗಾಳಿಯಂತೆ ಊರೆಲ್ಲಾ ಹಬ್ಬಿತ್ತು. ಊರವರ ಎದುರೇ ನಡೆದ ಈ ಭೀಕರ ಕೊಲೆಯ ವಿಷಯ ಪೊಲೀಸರಿಗೆ ಹೇಗೋ ಗೊತ್ತಾಗಿತ್ತು. ವಿಚಾರಣೆಗೆ ಬಂದ ಪೊಲೀಸರು ನಾರಾಯಣನ ಮನೆಯ ಬಾಗಿಲು ಬಡಿಯತೊಡಗಿದ್ದರು. ಬಾಗಿಲು ತೆರೆಯದಾದಾಗ ಅದನ್ನು ಒದ್ದು ಮುರಿದು ಒಳನುಗ್ಗಿದರು. ನಾರಾಯಣ ವಾಲಿಯ ವೇಷದೊಟ್ಟಿಗೆ ಮನೆಯ ಪಕ್ಕಾಸಿಗೆ ನೇತಾಡುತ್ತಿದ್ದ. ಹೆಣದ ಮುಖದಲ್ಲಿ ಸಂತೃಪ್ತಿಯ ಕಳೆ.

ನಾರಾಯಣ ಸತ್ತದ್ದಕ್ಕೋ ಅವನ ತಮ್ಮ ವಿಟ್ಟು ಸತ್ತದ್ದಕ್ಕೋ ಗೊತ್ತಿಲ್ಲ. ಸುಕ್ರಿ ಮಾತ್ರ ಗೋಳಾಡಿ ಅಳತೊಡಗಿದ್ದಳು. ಊರವರು ಆಡಿಕೊಳ್ಳತೊಡಗಿದರು. "ಪಾಪದ್ ಹೆಂಗ್ಸು. ಹಿಂಗ್ ಆಗೂಕಿಲ್ಲಾಗಿತ್ತು ಅದ್ಕೆ."

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.