ADVERTISEMENT

ಕಥೆ | ಕತ್ತಲಲ್ಲೊಂದು ದಾರಿ....

ಸುರೇಶ ಮರಕಾಲ ಸಾಯ್ಬರಕಟ್ಟೆ
Published 7 ಜೂನ್ 2020, 3:44 IST
Last Updated 7 ಜೂನ್ 2020, 3:44 IST
ಕಲೆ: ಮೋನಪ್ಪ
ಕಲೆ: ಮೋನಪ್ಪ   

‘ಆದರೂ ಇಷ್ಟೊತ್ತಿಗಾಗಲೇ ಬರಬೇಕಾಗಿತ್ತು.......... ಏನಾದ್ರೂ ತೊಂದರೆ ಆಗಿರಬಹುದೇ?’ ಪುನಾ ಕೇಳಿದೆ.

‘ಥತ್! ಯಾವನಯ್ಯಾ ನೀನು? ಎಷ್ಟು ಬಾರಿ ಹೇಳಬೇಕು? ಬರದೇ ಮಾಯವಾಗೋಕೆ ಅವಳೇನು ದೇವತೇನಾ?..’ ಆತ ಗದರಿಸಿದ.

‘ಆದರೂ..... ಎರಡೂವರೆಗೆ ಬರುತ್ತೇನೆಂದು ಹೇಳಿದವಳು, ಐದಾಗುತ್ತಾ ಬಂದ್ರೂ..?’ ನನಗಿನ್ನೂ ಸಂಶಯ, ಹೆದರಿಕೆ.

ADVERTISEMENT

‘ಯೋ!, ಈ ಹೆಂಗಸರ ಹಣೆಬರಹ ಗೊತ್ತಿಲ್ಲದವನ ತರಹ ಆಡ್ತಿದ್ದೀಯಲ್ಲಾ?.. ಈಗ ಅವಳು ಬರಲೇ ಇಲ್ಲ ಅಂತ ಇಟ್ಟುಕೋ! ಏನ್ಮಾಡ್ಲಿಕ್ಕಾಗುತ್ತೇ? ಏನಾದ್ರೂ ಆ್ಯಕ್ಸಿಡೆಂಟೇ ಆಗಿರಬಹುದು ಅಂದ್ಕೋ!.. ನೀನು ಎಂಟನೂರೈವತ್ತು ಕಿಲೋಮೀಟರ್ ದೂರದ, ಈ ಸರ್ಕಲಿನ- ಈ ಪರ್ಬು ಚಾದಂಗಡಿಯಲ್ಲಿ ಕಿಸಿಯೋದಾದ್ರೂ ಏನು?...’ ಆತ ಇನ್ನೂ ಗದರಿಸತೊಡಗಿದ. ನನ್ನನ್ನು ಹೆದರಿಸಲಿಕ್ಕೆ ಆ ರೀತಿ ಆಡುತ್ತಿದ್ದಾನೋ ಅಥವಾ ಆತ ಮಾತಾಡೋ ರೀತಿನೇ ಹಾಗೋ- ನನಗೆ ಗೊತ್ತಾಗಲಿಲ್ಲ.

‘ಪರ್ಬು, ಇನ್ನೆರಡು ಎರಡು ಚಾ ಹಾಕು..’ ಅವನು ಮುರುಕುಬೆಂಚಿನ ಮೇಲೆ ಕುಳಿತಲ್ಲಿಂದಲೇ ಸ್ಟೌ ಎದುರು ಮಂದವಾಗಿ ಉರಿಯುತ್ತಿದ್ದ ಚಿಮಿಣಿ ದೀಪದ ಪಕ್ಕದಲ್ಲಿ ನಿಂತಿದ್ದವನಿಗೆ ಹೇಳಿದ. ‘ಎರಡು ಚಾ..’ ಎಂದು ಕೇಳುತ್ತಲೂ ಹಳೆಕಾಲದ ಯಂತ್ರ ಚಾಲು ಆದಂತೆ ಆತ ನಿಧಾನವಾಗಿ ನಿಂತಲ್ಲೇ ಬಗ್ಗಿ ಸ್ಟೌಗೆ ಗಾಳಿ ಹಾಕತೊಡಗಿದ. ‘ಗರ್..ಗರ‍್ರ..ಭರ್‍ರ..’ ಎಂದು ರಿಪೇರಿಗೆ ಬಂದ ಫ್ಯಾನಿನಂತೆ ಶಬ್ದಮಾಡುತ್ತಾ ಸ್ಟೌನಿಂದ ಬೆಂಕಿ ಹೊರಬರಲಾರಂಭಿಸಿತು. ಮೂಗಿನ ಮೇಲೆ ಸೋಡಾ ಬಾಟಲಿಯ ಬುಡದಷ್ಟು ದಪ್ಪದ ಕನ್ನಡಕದೊಳಗಿನಿಂದ ನಿಶ್ಚಲವಾಗಿದ್ದ ಬೋಳು ಕಣ್ಣುಗಳು, ಬೆಂಕಿಯ ಹಳದಿ ಜ್ವಾಲೆಗೆ ಇನ್ನಷ್ಟು ಗಾಢವಾಗಿ ಕಾಣುತ್ತಿದ್ದ ನೆರಿಗೆಗಳೊಂದಿಗೆ ಪರ್ಬುವಿನ ಮುಖ ಕೆಂಪಗೆ ಕಾಣಿಸತೊಡಗಿತು. ಆತ ಸ್ಟೌ ಮೇಲಿದ್ದ ದೊಡ್ಡ ಪಾತ್ರೆಯನ್ನು ಕೆಳಗಿಳಿಸಿ, ಬದಿಯಲ್ಲೇ ಇದ್ದ ಉದ್ದ ಹಿಡಿಯ ಚಾ ಪಾತ್ರೆಗೆ ನೀರು, ಹಾಲು ಎರೆದು ಸ್ಟೌ ಮೇಲಿಟ್ಟು, ಮಸಿ ಹಿಡಿದ ಡಬ್ಬಿಗಳಿಂದ ಸಕ್ಕರೆ, ಚಾಪುಡಿ ತೆಗೆದು ಹಾಕಿದ. ಆ ಪಾತ್ರೆ- ಎಲ್ಲಾ ಪದಾರ್ಥಗಳನ್ನು ತುಂಬಿಕೊಂಡು- ಸ್ಟೌನ ‘ಭರ್‍ರ..’ ಸದ್ದಿನೊಂದಿಗೆ ತಾನೂ ಜೀವತಾಳಲಾರಂಭಿಸಿತು.

‘ಬಸ್ಸಿಗೆ ಕಾಯ್ತಿದೀರಾ..’ ಅಷ್ಟು ಹೊತ್ತಿನವರೆಗೆ ಬಾಯಿಮೂಕನಾಗಿದ್ದ ಪರ್ಬು ನನ್ನಲ್ಲಿ ಕೇಳಿದ. ‘ಹೌದು’ ನನ್ನೆದುರಿಗಿದ್ದ ವ್ಯಕ್ತಿಯೇ ಉತ್ತರಿಸಿದ.

‘ಯಾವೂರು’

‘ಮೂಲೆಗಲ್ಲೂರಂತೆ..’

‘ಅಷ್ಟು ದೂರದಿಂದ ಬಂದ್ರಂತ?.. ಏನು ಬೈಕು ತಂದಿದ್ದಾರೋ..?’ ಪರ್ಬು ಆತನಲ್ಲೆ ಕೇಳಿದ.

‘ಏನ್ ಪರ್ಬು!, ಈ ಡಿಸೆಂಬರ್ ಚಳೀಲಿ ಯಾರಾದ್ರೂ ಬೈಕ್ ತರ್ತಾರಾ? ಅದೂ ಹೆಂಡತಿ ಜೊತೆ ವಾಪಾಸ್ಸು ಹೋಗಬೇಕಾಗಿರುವಾಗ?...... ಹ್ಹೆ!?...... ಕಾರು ತಂದಿದ್ದಾನೆ. ಅಲ್ಲಿದ್ಯಲ್ಲಾ.... ಬಿಳೀದು......’ ಪರ್ಬು ಅತ್ತ ನೋಡಿದ, ತುಟಿಗಳು ಚಲಿಸಿದವು, ‘ಕೆ.ಎ. ಹತ್ತೊಂಭತ್ತು... ಮಂಗಳೂರು ರಿಜಿಸ್ಟ್ರೇಶನ್’. ಚಾಪುಡಿ ಕುದಿದು ಹಬೆಯಾಡತೊಡಗಿತು.

ಸ್ವಾತಿ ಬಾಂಬೆಯಿಂದ ಬರಬೇಕಾಗಿತ್ತು. ಮಧ್ಯಾಹ್ನ ಫೋನ್ ಮಾಡಿ, ರಾತ್ರಿ ಎರಡೂವರೆಗೆ ಬೈಪಾಸ್ ಹತ್ತಿರ ಬಂದಿರಿ, ಅಲ್ಲಿಗೇ ಬಂದಿಳಿತೀನಿ ಅಂದಿದ್ದಳು. ಬಾಂಬೆ ಗಾಡಿ- ಟೈಮೆನ್ನೋ ಪದಾನೇ ಗೊತ್ತಿರದವರ ಬಸ್ಸು- ಏನಾದರೂ ಎರಡೂವರೆಗೆ ಮೊದಲೇ ಬಂದರೆ ಎಂದು ಒಂದುಗಂಟೆ ಮೊದಲೇ ಬಂದಿದ್ದೆ. ಬಸ್‍ಸ್ಟ್ಯಾಂಡ್ ಬಳಿ ಕಾರುನಿಲ್ಲಿಸಿ ಕೆಳಗಿಳಿದಾಗ ನನ್ನ ಜೊತೆ ಇದ್ದಿದ್ದು ಕಿವಿತಮಟೆಯನ್ನು ಮರಗಟ್ಟಿಸುತ್ತಿದ್ದ ಡಿಸೆಂಬರ್ ಚಳಿ. ಸರ್ಕಲ್ಲಿನ ಮಧ್ಯದಲ್ಲಿ ದೊಡ್ಡದಾದ ದೀಪವೊಂದು ಉರಿಯುತ್ತಿತ್ತು. ಅದರ ಕೆಂಪಗಿನ ಮಂದ ಬೆಳಕಿನಿಂದ ಸುತ್ತಲ ವಾತಾವರಣ ಇನ್ನಷ್ಟು ಗಂಭಿರವಾಗಿತ್ತು. ಕೆಂಪನೆಯ ಬೆಳಕು ಬಿದ್ದು ತಾನೂ ಕೆಂಪಾದಂತೆ ಕಾಣುತ್ತಿದ್ದ ರಸ್ತೆಯ ಮಧ್ಯದಲ್ಲಿ ಉದ್ದಕ್ಕೂ ಸಾಲಾಗಿ ಮಲಗಿದ್ದ ಬಿಳಿ ಪಟ್ಟಿಗಳು ದೂರದಿಂದ ಒಂದಕ್ಕೊಂದು ಅಂಟಿಕೊಂಡು ಗೆರೆಯೊಂದನ್ನು ಎಳೆದಂತೆ ಕಾಣುತ್ತಿತ್ತು. ಗೋಡೆಗಳಿಲ್ಲದ ಬಸ್‍ಸ್ಯಾಂಡ್‍ನೊಳಗೆ ದನಗಳು ನಿಶ್ಚಿಂತೆಯಿಂದ ಮಲಗಿದ್ದವು. ಎಲ್ಲೋ ಬಿದ್ದ ಕಸ, ಹುಲ್ಲಿನಿಂದಾಗಿ ತನ್ನೊಳಗೆ ಹುಟ್ಟುವ ಹಾಲನ್ನು ಯಾರೋ ಒಬ್ಬ ತನ್ನದೆಂದು ಕೆಚ್ಚಲು ನೋವು ಬರುವಂತೆ ಹಿಂಡಿ ಕಸಿದುಕೊಂಡರೂ ಆ ನೋವು ಅವುಗಳನ್ನು ಬಾಧಿಸಿದಂತಿರಲಿಲ್ಲ. ಸ್ವಲ್ಪ ದೂರದಲ್ಲಿ ನಾಲ್ಕಾರು ಕಂತ್ರಿ ನಾಯಿಗಳು ಮಾತ್ರ ತಮ್ಮದೇ ಒಂದು ಪಂಗಡವನ್ನು ರಚಿಸಿಕೊಂಡು ಹಿಂದೆ-ಮುಂದೆ ನೋಡುತ್ತಾ ವಾಪಾಸ್ಸು ಓಡಿಹೋಗಲೊ ಬೇಡವೋ ಎಂದು ತಿಳಿಯದೇ, ನಿಂತಲ್ಲೇ ನೆಲವನ್ನು ಕೆರೆಯುತ್ತಿದ್ದ ಒಂಟಿ ನಾಯಿಯೊಂದರ ಮೇಲೆ ಕೂಗಾಡುತ್ತಿದ್ದವು. ಅವುಗಳ ಬೊಗಳುವಿಕೆ ನೀರವ ವಾತಾವರಣವನ್ನು ಕದಡಿ, ಸುತ್ತೆಲ್ಲ ಪ್ರತಿಧ್ವನಿಸುತ್ತಿತ್ತು. ದನಗಳಂತೆ ನಾಯಿಗಳಿಗೆ ನಿದ್ದೆ ಬರುವುದಿಲ್ಲವೇ?....

ವಾಚು ನೋಡಿದೆ. ಎರಡೂ ಮುಳ್ಳುಗಳು ಎರಡರ ಮೇಲೆ ಹೋಗಿ ಬಿದ್ದುಕೊಂಡಿದ್ದವು. ಸ್ವಾತಿ ಬರಲು ಇನ್ನೂ ಸ್ವಲ್ಪ ಸಮಯವಿದೆ ಎನಿಸುತ್ತಲೇ ಕಾರಿಗೆ ಒರಗಿ ಸರ್ಕಲ್ಲನ್ನೇ ನೋಡತೊಡಗಿದೆ. ಈಗ ಸುಮ್ಮನೆ ಹೊದ್ದುಕೊಂಡು ಮಲಗಿರುವ ಈ ಸರ್ಕಲ್, ಬೆಳಗಾಗುತ್ತಲೆ ಜನರಿಂದ ಗಿಜಿಗುಟ್ಟುವುದು, ಹಗಲಿಡೀ ಪುರುಸೊತ್ತಿಲ್ಲದೆ ಅವರವರದ್ದೇ ತಲೆಬಿಸಿಯಿರುವ ಜನರಿಂದ ತುಂಬಿ ಹೋಗುವಾಗ, ತಾನೂ ತುಂಬು ವ್ಯವಹಾರಸ್ಥನಂತೆ ಕಾಣುವ ಈ ಸ್ಥಳ-ಈಗ ತನಗೂ ಅವರಿಗೂ ಯಾವುದೇ ಸಂಬಂಧವಿಲ್ಲದಂತೆ ಇರುವುದು; ಹಗಲಿಡೀ ತುಂಬುಗರ್ಭಿಣಿಯಂತಿದ್ದು, ಈಗ ಬಂಜೆ ಹೊಟ್ಟೆಯ ಮರುಭೂಮಿಯಾಗಿರುವುದು ಸೋಜಿಗವೆನಿಸಿತು. ಈಗ ಸತ್ತಿರುವ ಈ ಜಾಗ ಬೆಳಗಾಗುತ್ತಲೆ ಮತ್ತೆ ಜೀವತಾಳುತ್ತದೆ, ಅಂಬೆಗಾಲಿಡುತ್ತದೆ, ತಪ್ಪು ಹೆಜ್ಜೆಯಿಡುತ್ತದೆ, ನಡೆಯುತ್ತದೆ, ಕುಣಿಯುತ್ತದೆ...... ಕತ್ತಲೆಯಾದಂತೆ ಸುಸ್ತಾಗಿ ಸತ್ತು ಮತ್ತೆ ಬೆಳಕಿಗಾಗಿ ಕಾಯುತ್ತದೆ. ಜೀವಿಗಳನ್ನು ಕಾಡುವ ಹುಟ್ಟು-ಸಾವಿನ ಬಾಧೆ, ಈ ಸರ್ಕಲ್ಲಿಗೂ ಹಿಡಿಯಿತೇ? ಅಚ್ಚರಿಯೆನಿಸಿತು! ಸರ್ಕಲ್ಲಿನ ಬದಿಯಲ್ಲಿ ಹಳೆಯಕಾಲದ ಆಲದ ಮರ ತನ್ನ ದಢೂತಿ ದೇಹವನ್ನು ತನ್ನಿಂದ ಸಾಧ್ಯವಾದಷ್ಟು ಕೈಗಳನ್ನು ಚಾಚಿ ನೆಲಹಿಡಿದು ಆಯಾಸದಿಂದ ನಿಂತಿತ್ತು. ಆ ಮರವನ್ನು ಸುತ್ತು ಹಾಕಿ ನಿಂತಿದ್ದ ಏಳೆಂಟು ರಿಕ್ಷಾಗಳಿಂದ ನಿದ್ದೆಯ ನರಳಾಟ, ಗೊರಕೆ ಸದ್ದಿನ ಹೋರಾಟ ಅಸ್ಪಷ್ಟವಾಗಿ ಕೇಳುತ್ತಿತ್ತು.

ಎರಡು ಹೆಡ್‍ಲೈಟ್‍ಗಳು ಕಾಣಿಸತೊಡಗಿದವು. ಬಾಂಬೆ ಬಸ್ ಎಂದು ಆಸೆಯಿಂದ ಅತ್ತನೋಡಿದೆ. ಆದರೆ ಹತ್ತಿರ-ಹತ್ತಿರ ಬರುತ್ತಲೂ ಟ್ರಕ್ ಎಂದು ಗೊತ್ತಾಯ್ತು; ಸುಮ್ಮನಾದೆ. ಟ್ರಕ್ ಹಾದು ಹೋಗುವಾಗ ಅನಿಸಿತು, ಹೆಂಡತಿ ಮಕ್ಕಳೊಂದಿಗೆ ಇರಲಾಗದ ಬದುಕನ್ನು ಇವರೆಲ್ಲ ಹೇಗೆ ರೂಢಿಸಿಕೊಳ್ಳುತ್ತಾರೆ? ಆಲದ ಮರದ ಕೆಳಗೆ ಗೊರಕೆ ಹೊಡೆಯುತ್ತಿರುವ ರಿಕ್ಷಾದವರಾದರೊ ಬೆಳಗಾದರೆ ಮನೆಗೆ ಹೋಗುತ್ತಾರೆ.., ಮನಸ್ಸಿದ್ದರೆ ಹೆಂಡತಿಗೊಂದು ಹೂಮುತ್ತ ನೀಡುತ್ತಾರೆ. ಆದರೆ ಇವರು......? ನಾನೇ ಈ ರೀತಿ ಯೋಚಿಸಿದರೆ, ಟ್ರಕ್‍ನೊಳಗಿನವರು ಹೇಗೆ ಯೋಚಿಸುತ್ತಿರಬಹುದು?... ಮೈ-ಝಂ ಎಂದಿತು. ತಿಂಗಳುಗಟ್ಟಲೆ ಮನೆಯವರಿಗೇ ನೆಂಟರಂತೆ ಬದುಕುವ ಅವರ ಜೀವನ ವಿಚಿತ್ರವೆನಿಸಿತು. ಹಸುಗಳು ನಿಶ್ಚಿಂತೆಯಿಂದ ಮೆಲುಕು ಹಾಕುತ್ತಿದ್ದವು. ನಾಯಿಗಳ ಹಾರಾಟ ನಾನು ಬಂದಾಗ ಇದ್ದಷ್ಟು ಇಲ್ಲದೆ, ಈಗ ಮೂರೂವರೆ ಕಾಲಿನ ನಾಯಿಯೊಂದರ ಆರ್ಭಟ ಮಾತ್ರ ಕಾಣಿಸುತ್ತಿತ್ತು; ಬಹುಷಃ ಹೊಸದಾಗಿ ಕಾಲು ಮುರಿದುಕೊಂಡ ನಾಯಿ ಇರಬೇಕು ಅಂದುಕೊಂಡೆ. ನಮ್ಮ ಎದುರು ಮನೆಯ ಕೇರಳದವರು ಸಾಕಿದ್ದ, ಯಾರೇ ರಸ್ತೆಯಲ್ಲಿ ಹೋದರೂ ‘ನನ್ನ ಈ ಸ್ಥಳಕ್ಕೆ ಬರಲು ನಿನಗೆಷ್ಟು ಧೈರ್ಯ?’ ಎಂದು ದಾರಿಹೋಕರನ್ನೆಲ್ಲ ಅಟ್ಟಾಡಿಸುತ್ತಿದ್ದ ವಿಪರೀತ ಸಿಡುಕು ಸ್ವಭಾವದ ಕೆಂಪು ಬಣ್ಣದ ನಾಯಿಯ ಕಾಟವನ್ನು ತಡೆಯಲಾರದೆ, ತಿಂಗಳ ಹಿಂದೆ ಯಾರೋ ಹಿಂದಿನ ಕಾಲನ್ನು ಮುರಿದು ಹಾಕಿದ್ದರು. ಎಲ್ಲರೂ ಇನ್ನುಮುಂದೆ ಇದು ಯಾರ ತಂಟೆಗೂ ಹೋಗಲಾರದೆಂದುಕೊಂಡರೆ, ಹಿಂದಿನ ಅಸಲುಬಡ್ಡಿಯನ್ನು ತೀರಿಸಿಕೊಳ್ಳುವಂತೆ, ಬರಿಯ ನಡೆದಾಡುವವರನ್ನು ತಡೆಯುತ್ತಿದ್ದ ಅದು ಕಾಲು ಮುರಿಸಿಕೊಂಡ ಮೇಲೆ ಕಾರು ಬೈಕು ಲಾರಿಗಳೆನ್ನದೆ ಕಣ್ಣಿಗೆ ಕಾಣುವ ಸಕಲ ಚರಾಚರ ವಸ್ತುಗಳನ್ನೂ ಅಟ್ಟಾಡಿಸತೊಡಗಿತ್ತು. ಕಾಲುಮುರಿದುಕೊಂಡ ಮೇಲೆ ರಾತ್ರಿ ಇಡೀ ತಾನೂ ಮಲಗದೆ, ತನ್ನ ಕೂಗಾಟದಿಂದ ಇಡೀ ಕಾಲನಿಯ ನರಪಿಳ್ಳೆಗಳು ಕಣ್ಣುಮುಚ್ಚದ ಹಾಗೆ ಮಾಡಿತ್ತು. ಮೂರೂವರೆ ಕಾಲಿನ ನಾಯಿಯನ್ನು ಕಂಡು ನಗೆಬರತೊಡಗಿತು. ಮನೆಯಲ್ಲಿ ಸಾಕಿರುವ ಚುಕ್ಕಿ ಕಣ್ಮುಂದೆ ಬಂದ. ಎಂಟೂವರೆ ಸಾವಿರ ಕೊಟ್ಟು ಖರೀದಿಸಿದ ವಿದೇಶೀ ತಳಿಯ ಮರಿ ಅದು. ಆರು ತಿಂಗಳಿಗೇ ನನ್ನ ಎದೆಯೆತ್ತರ ಬೆಳೆದಿದ್ದಾನೆ. ಈಗ ಮನೆಯಲ್ಲಿ ನನ್ನ –ಅಲ್ಲ ನಮ್ಮ ದಾರಿಕಾಯುತ್ತಿರಬಹುದು. ಸ್ವಾತಿಗೆ ಚುಕ್ಕಿ ಎಂದರೆ ಪ್ರಾಣ. ಆದರೂ ಬಿಟ್ಟು ಹೊರಟೇ ಹೋದಳಲ್ಲ ಮುಂಬೈಗೆ? ಕರೆದುಕೊಂಡು ಬರಬೇಕಿತ್ತು ಚುಕ್ಕಿಯನ್ನು ಇಂದು ಕಾರಲ್ಲಿ. ವಾಪಾಸ್ಸು ಹೋಗುವಾಗ ಸ್ವಾತಿ ಬಹಳ ಹಗುರವಾಗುತ್ತಿದ್ದಳು ಅನಿಸಿತು. ದೂರದಲ್ಲೆರಡು ಪ್ರಖರವಾದ ಹೆಡ್‍ಲೈಟ್‍ಗಳು ಬರಲಾರಂಭಿಸಿದವು. ಓಹ್, ಇದಂತೂ ಬಾಂಬೆ ಬಸ್ಸೇ... ಶಬ್ದ ಕೂಡಾ ಬಸ್ಸಿನದ್ದೇ... ದೂರದಿಂದ ಕಾಣುತ್ತಿದ್ದ ಅದು ಹತ್ತಿರತ್ತಿರ ಬರುತ್ತಲೂ ಬಸ್ಸು ಎಂದು ಖಚಿತವಾಯ್ತು. ಎದೆಯೊಳಗೆ ಬಡಿತ ಜೋರಾಯ್ತು. ನಾಲ್ಕು ತಿಂಗಳಾಯ್ತಲ್ಲವೆ ಸ್ವಾತಿಯನ್ನು ನೋಡಿ? ವೇಗವಾಗಿ ಬಂದ ಬಸ್ಸು ನನ್ನೆದುರು ನಿಂತು ಸ್ವಾತಿಯನ್ನು ಇಳಿಸುವ ಬದಲು ಬಂದ ವೇಗದಲ್ಲೇ ಹಾಯ್ದುಕೊಂಡು ಮುಂದೋಡಿತು. ಅಚ್ಚರಿಯಿಂದ ನೋಡಿದೆ, ಯಾವುದೋ ತಮಿಳುನಾಡಿನ ಟೂರಿಸ್ಟ್ ಬಸ್ಸು. ‘ಥತ್’ ಎನಿಸಿತು.

ಎರಡು-ಮೂರು ನಿಮಿಷಗಳ ಕಾಲ ಬಸ್ಸಿನ ಶಬ್ದ ವಾತಾವರಣವನ್ನೆಲ್ಲ ಕಲಕಿ, ಮತ್ತೆ ನಿಧಾನವಾಗಿ ನೀರವವಾಗೊಡಗಿತು. ಐವತ್ತು ಮಾರು ಬಸ್ಸನ್ನು ಅಟ್ಟಿಸಿಕೊಂಡು ಹೋಗಿ ಸಿಗಲಿಲ್ಲವೆಂಬ ಸಿಟ್ಟಿಗೋ ಏನೋ ಕೆಸ್‌ ಕೆಸ್ ಎನ್ನುತ್ತಾ ಸರ್ಕಲ್ಲಿನ ಕಡೆಗೆ ನರ್ತನ ಮಾಡುವಂತೆ ಕುಂಟುತ್ತಾ ಬಂದ ಮೂರೂವರೆ ಕಾಲಿನ ನಾಯಿಯ ಕೂಗಾಟ ಬಿಟ್ಟರೆ ಮತ್ತೆಲ್ಲ ಮೌನ. ಬಸ್ಸು ಹತ್ತಿರದಲ್ಲೇ ಹಾದುಹೋಗಿದ್ದರಿಂದ ಕಿವಿಯೊಳಗೆ ಇನ್ನೂ ಎಂಜಿನಿನ ಶಬ್ದ ಗುಂಯ್‍ಗುಡುತ್ತಿತ್ತು. ವಾಚು ನೋಡಿಕೊಂಡೆ. ಎರಡರ ಮೇಲಿದ್ದ ದೊಡ್ಡ ಮುಳ್ಳು ಒಂಭತ್ತರ ಮೇಲೆ ಹೋಗಿ ಬಿದ್ದುಕೊಂಡಿತ್ತು. ಸಣ್ಣಮುಳ್ಳು ಮಾತ್ರ ಅಜಗರವೃತ್ತಿಯ ಸನ್ಯಾಸಿಯಂತೆ ಅಕ್ಕಿಕಾಳು ಗಾತ್ರದಷ್ಟು ಚಲಿಸಿತ್ತು. ಈ ಲೋಕಲ್ ಬಸ್ಸು, ಎಕ್ಸ್‌ಪ್ರೆಸ್ ಬಸ್ಸುಗಳಿಗೆ ಟೈಮಿಂಗ್ ಇರುವಂತೆ ಬಾಂಬೆ ಬಸ್ಸುಗಳಿಗೂ ಟೈಮಿಂಗ್ ಫಿಕ್ಸ್ ಮಾಡಿಸಬೇಕು ಎಂಬ ಯೋಚನೆ ಬಲವಾಯಿತು. ಆದರೆ ಮಾಡುವವರಾರು? ಇಂದು ನನಗೆ ತುರ್ತು ಇದೆ, ನಾನು ಮಾಡಿಸಲೋ? ನಗೆ ಬಂತು. ಸ್ವಾತಿ ಬಸ್ಸಿಳಿದು, ನನ್ನ ಕೆಲಸವಾದ ಮೇಲೆ ಬಸ್ಸುಗಳ ಟೈಮಿಂಗ್ ಹೋಗಲಿ, ಈ ಸರ್ಕಲ್ಲಿನ ನೆನಪು ಕೂಡಾ ಆಗಲಿಕ್ಕಿಲ್ಲ.

ಇದ್ದಕ್ಕಿದ್ದಂತೆ ಪ್ರಾಣ ಹೋದಂತೆ ಕೂಗುತ್ತಾ ಮೂರುವರೆ ಕಾಲಿನ ನಾಯಿ ನಾಲ್ಕು ಕಾಲಿನ ನಾಯಿಗಳನ್ನೂ ಮೀರಿಸುವ ವೇಗದಲ್ಲಿ ಬಾಣದಂತೆ ಓಡತೊಡಗಿತು. ಅದರ ಕೂಗು, ಅಲ್ಲಲ್ಲಿ ಮಲಗಿದ್ದ ಅದರ ಪರಿವಾರದವರಿಗೆ ಎಚ್ಚರಿಕೆಯ ಕೂಗಾಗಿ ಕೇಳಿಸಿ, ಇಷ್ಟು ಹೊತ್ತು ಅರಚಾಡುತ್ತಿದ್ದ ಅದರ ಕೂಗನ್ನು ಸಂಪೂರ್ಣ ನಿರ್ಲಕ್ಷಿಸಿದ್ದ ಉಳಿದ ನಾಯಿಗಳ ಪಡೆಯೇ ಧುತ್ತೆಂದು ಪ್ರತ್ಯಕ್ಷವಾಗಿ ಕ್ಷಣಮಾತ್ರದಲ್ಲಿ ದುರ್ಬೀನು ಹಾಕಿಹುಡುಕಿದರೂ ಕಾಣಿಸದ ವೇಗದಲ್ಲಿ ಮೂರೂವರೆಯವನು ಚಿಮ್ಮಿದ ಕಡೆಗೆ ತಾವೂ ಬಸ್‍ಸ್ಟ್ಯಾಂಡಿನಿಂದ ಬಲಭಾಗಕ್ಕೆ ಅನತಿ ದೂರದಲ್ಲಿದ್ದ ಆಲದ ಮರದತ್ತ ಚಿಮ್ಮಿದವು. ಕಿರುಚಾಟ, ಕೂಗು, ಯಾವುದೋ ನಾಯಿ ಪ್ರಾಣ ಹೋದಂತೆ ಕೂಗಿ ಓಡಿಹೋಗುತ್ತಿರುವ, ಅದನ್ನು ಅಟ್ಟಿಸಿಕೊಂಡು ಉಳಿದವುಗಳು ಹೋದ ಸದ್ದು. ಕ್ಷಣಕಾಲ ಅಷ್ಟೆ, ಮತ್ತೆ ಹಳೆಯ ನೀರವ...

ವಾಚು ನೋಡಲು ಕೈ ಎತ್ತಿದವ, ಥತ್ ಎನಿಸಿ ಹಾಗೆಯೇ ಕೆಳಬಿಟ್ಟೆ. ರಸ್ತೆಯಲ್ಲಿ ಒಂದು ವಾಹನವೂ ಇಲ್ಲದೆ, ತಾಸಿನ ಮೊದಲು ಚೇತೋಹಾರಿಯೆನಿಸಿದ್ದ ಈ ಸ್ಥಳವೇ ಈಗ ಬಿಕೋ ಎನಿಸತೊಡಗಿತು. ನಿಶ್ಚಲವಾಗಿ ಮಲಗಿಕೊಂಡಿರುವ ದನಗಳು, ನಿಶ್ಚಲವಾಗಿ ಮಲಗಿರುವ ರಿಕ್ಷಾಗಳು, ನಿಶ್ಚಲವಾಗಿರುವ ಮರಗಳು, ನಿಶ್ಚಲವಾಗಿರುವ ಗಾಳಿ... ಎಲ್ಲ ನಿಶ್ಚಲ... ಹುಚ್ಚು ಹಿಡಿಸಬಹುದು ಈ ಮೌನ. ಮೊದಲ ಬಾರಿಗೆ ಮೌನದ ಮೇಲೆ ಅಸಹ್ಯ ಹುಟ್ಟಿತು. ‘ಅದ್ಯಾಕೆ ಸದಾ ಮಾತುಬಾರದ ಮೂಕರ ಹಾಗೆ ಇರ್ತೀರಪ್ಪಾ? ನಾನಾದ್ರೆ ಪ್ರಾಣ ಬೇಕಾದ್ರೆ ಬಿಟ್ಟೇನು, ನಿಮ್ಮ ಹಾಗೆ ಮಾತಾಡದೆ ಇರಲು ಸಾಧ್ಯವಿಲ್ಲ...’ ಸ್ವಾತಿ ನನಗೆ ಯಾವಾಗಲೂ ಹೇಳುತ್ತಿದ್ದ ಮಾತುಗಳು. ನಾನು ಮೂಕನೇ, ಸದಾ ಅಂತರ್ಮುಖಿ, ನನ್ನೊಳಗೆ ನಾನು ಮಾತಾಡುವಷ್ಟು ಖುಷಿ ಬಾಯಿ ಬಿಟ್ಟು ಆಡುವುದರಲ್ಲಿ ಎಂದೂ ಸಿಕ್ಕಿಲ್ಲ. ಆದರೆ ಇನ್ನು ಹಾಗಾಗಬಾರದು. ‘ಒಮ್ಮೆ ನನ್ನನ್ನು ಕ್ಷಮಿಸಿ ಬಂದುಬಿಡು ಸಾಕು ಸ್ವಾತಿ, ಇನ್ನುಮೇಲೆ ನೀನು ಸಾಕೆನ್ನುವವರೆಗೆ ಮಾತಾಡ್ತಾ ಇರ್ತೇನೆ...’ ನನಗೆ ನಾನೇ ಹೇಳಿಕೊಂಡೆ. ನರಪಿಳ್ಳೆ ಇಲ್ಲದ ಈ ನೀರವ ರಾತ್ರಿಯನ್ನು ಕಳೆಯುವುದಾದರೂ ಹೇಗೆ?

ಅಷ್ಟರಲ್ಲಿ ಒಂದೆಲೆಯೂ ಅಲುಗಾಡದ ಚಿತ್ರದ ನಡುವೆ ದೂರದ ಆಲದ ಮರದ ಬುಡದಲ್ಲಿ ಏನೋ ಚಲಿಸಿದಂತಾಯ್ತು. ನನ್ನ ಭ್ರಮೆಯೆ?! ಇಲ್ಲ, ನಿಜವಾಗಿಯೂ ನೆರಳೊಂದು ಚಲಿಸಿತು, ಜೊತೆಗೆ ಆ ನೆರಳನ್ನಾಶ್ರಯಿಸಿಕೊಂಡು ಒಂದು ರೂಪವೂ... ನಿಧಾನವಾಗಿ ಆಕೃತಿ ನಡೆಯುತ್ತಾ ಬಂದಂತೆ, ಹಿಂದಿನಿಂದ ಬೀಳುತ್ತಿದ್ದ ಬೆಳಕಿನ ನೆರಳು ಆಕೃತಿಗಿಂತ ಎರಡು ಮಾರು ಮುಂದೆ ಬರುತೊಡಗಿತು. ಆ ಮಸುಕು ಅಸ್ಪಷ್ಟ ಬೆಳಕಿನಲ್ಲೂ ಆತನ ಎರಡು ಕಾಲುಗಳಲ್ಲಿ ಬಲಗಾಲು ಮುಂಗಾಲಿನವರೆಗೆ ಬಂದು, ಅಲ್ಲೇ ತುಂಡಾಗಿದ್ದು ಸ್ಪಷ್ಟವಾಗಿ ಗ್ರಾಹ್ಯವಾಗುತ್ತಿತ್ತು. ಎರಡೂ ಕಂಕುಳಿಗೆ ಊರುಕೋಲುಗಳನ್ನು ಸಿಕ್ಕಿಸಿಕೊಂಡು ಎಡಗಾಲ ಬಲದಮೇಲೆ ಕುಂಟುತ್ತಾ ಬರುತ್ತಿದ್ದ. ನೋಡುನೋಡುತ್ತಿದ್ದಂತೆ ನಿಧಾನವಾಗಿ ನೆರಳು ನನ್ನ ಮುಂದೆಯೇ ಬಂದಿತು, ಆತನೂ ಬಂದ. ಅಬ್ಬಾ, ಮಾತಾಡುವುದಕ್ಕಾದರೂ ಒಬ್ಬ ವ್ಯಕ್ತಿ ಸಿಕ್ಕಿದ ಎಂದುಕೊಳ್ಳುವುದರೊಳಗೆ,

‘ಏನು, ಬಸ್ಸಿಗೆ ಕಾಯ್ತಾ ಇದ್ದೀಯೇನು?’ ಅತ್ಯಂತ ಕಟು ಧ್ವನಿ. ದಿಟ್ಟಿಸಿ ನೋಡಿದೆ, ಅತ್ಯಂತ ಸಾಧಾರಣವಾದ ಅಂಗಿ, ನೀರು ತಾಗದೆ ವಾರವಾಗಿರಬಹುದು, ಹಾಕಿದ್ದ ಪ್ಯಾಂಟಿನ ಅವಸ್ಥೆ ಅದಕ್ಕಿಂತ ಕೆಟ್ಟದ್ದಾಗಿತ್ತು. ತಿಂಗಳಿಂದ ಕ್ಷೌರಕಾಣದ ಮುಖದ ತುಂಬ ಕಾಡುಬಿದ್ದ ಗಡ್ಡ, ಮರ್ಕ್ಯುರಿ ದೀಪದ ಹಿನ್ನೆಲೆಯಲ್ಲಿ ಕೆಂಪನೆಯ ಎಳೆಗಳಂತೆ ಹಾರಾಡುತ್ತಿದ್ದ ಅಸ್ತವ್ಯಸ್ತ ಕೂದಲು. ದಿನಕ್ಕೆ ಆರಂಕಿ ಆದಾಯವಿರುವ, ನಾನೂರು ಕೆಲಸಗಾರರ ಯಜಮಾನನಾದ ನನ್ನನ್ನು, ತೀರಾ ಅಪರಿಚಿತ ಮೂಢನಂತಿರುವ ಈ ಹ್ಯಾಪ ಏಕವಚನದಲ್ಲಿ ಕರೆಯುತ್ತಿದ್ದಾನೆ. ಬೇರೆ ಸಮಯವಾದರೆ ಕುತ್ತಿಗೆ ಹಿಡಿದು ಹೊರನೂಕುತ್ತಿದ್ದೆ. ಆದರೀಗ ನನಗೇ ಅಚ್ಚರಿಯಾಗುವ ಹಾಗೆ ಸಮ್ಮೋಹನಕ್ಕೊಳಗಾದವನಂತೆ ಸುಮ್ಮನೇ ‘ಹೂಂ’ ಎಂದೆ.

‘ಎಲ್ಲಿಂದ?’

‘ಬಾಂಬೆಯಿಂದ..’

‘ಎಷ್ಟು ಗಂಟೆಗೆ ಮಾರಾಯ?’

‘ಎರಡೂವರೆಗೆ...’

‘ಯಾವಾಗ ಬಂದೇ...?’

‘ಒಂದೂವರೆಗೆ’

‘ಎಂತಹ ಹುಚ್ಚನಯ್ಯ ನೀನು?! ಬಾಂಬೆ ಗಾಡಿಗಳು ಯಾವತ್ತಾದ್ರೂ ಟೈಮಿಗೆ ಮೊದಲೇ ಬರೋದಿದ್ಯಾ... ಹ್ಹೆ..? ಯಾರು ಬರುವವರಿದ್ರು?’

‘ಸ್ವಾತಿ... ನನ್ನ ಹೆಂಡತಿ...’

‘ಯಾವಾಗ ಹೋಗಿದ್ಲು..?’

ಒದ್ದು ಓಡಿಸಬೇಕು, ಅಧಿಕಪ್ರಸಂಗಿ ಈತ! ನನ್ನ ವೈಯಕ್ತಿಕ ವಿವರ ಈತನಿಗೇಕೆ ಹೇಳಬೇಕು? ಮರ್ಯಾದೆ ಹೀನ!, ನನ್ನ ಮಡದಿಯನ್ನು... ಸ್ವಾತಿಳನ್ನ ಏಕವಚನದಲ್ಲಿ ಕೇಳ್ತಿದ್ದಾನೆ...! ಆದರೆ ಏನೂ ಮಾಡಲಾಗದೆ ಮೋಡಿಗೆ ಬಿದ್ದವನಂತೆ ಆತ ಕೇಳಿದ್ದಕ್ಕೆ ಉತ್ತರಿಸಿದೆ!

‘ನಾಲ್ಕು ತಿಂಗಳಾಯ್ತು..!’

‘ಓ... ಏನು ಗಲಾಟೆಯಾಯ್ತೋ...?’

‘ಹೌದು, ಆದರೆ ಅದರಲ್ಲಿ ನನ್ನ ತಪ್ಪಿರಲಿಲ್ಲ...’

‘ಏ... ಪೆಕರನ ಹಾಗೆ ಮಾತಾಡಬೇಡಯ್ಯಾ! ಹೆಂಡತಿಯೊಂದಿಗಿನ ಗಲಾಟೆಯಲ್ಲಿ ಎಂದಾದರೂ ಗಂಡನ ತಪ್ಪಿರುವುದು ಉಂಟೇನಯ್ಯಾ..?! ಹೂಂ... ನಾಲ್ಕು ತಿಂಗಳೂ ಅಂತೀಯ, ಇಷ್ಟು ದಿನ ಎಲ್ಲಿಗೆ ಹೋಗಿದ್ದೇ? ಬಾಂಬೆಗೆ ಹೋಗಿ ಕರಕೊಂಡು ಬರೋದು ಬಿಟ್ಟು..?’

‘ಕಾಂಟ್ಯಾಕ್ಟ್‌ಗೇ ಸಿಕ್ಕಿರಲಿಲ್ಲ. ಏನೆಲ್ಲ ಹರಸಾಹಸ ಮಾಡಿ ಕಳೆದವಾರ ಸಿಕಿದಳು. ಒಪ್ಪಿಸಿದೆ, ಒಪ್ಪಿದಳು. ಈಗ ಎರಡೂವರೆಗೆ ಬರ್ತೇನೆ ಅಂತ ಹೇಳಿದ್ಲು... ಅದಕ್ಕೇ ಕಾಯ್ತಿದ್ದೇನೆ ಇಲ್ಲಿ...’

‘ನೀನು ಶುದ್ಧ ಪೆಕರಾನೇ ಕಣಯ್ಯಾ! ಅಲ್ದಿದ್ರೆ ಅಲ್ಲಿಗೇ ಹೋಗಿ ಕರಕೊಂಡು ಬರೋದುಬಿಟ್ಟು...!? ನೀನೇನೋ ಕರೆದೆಯಂತೆ, ಅವಳೇನೋ ಬರ್ತೇನೆ ಅಂದ್ಲಂತೆ... ಅವಳು ಬಂದ್ಹಾಗೇ... ನೀನು ಕರಕೊಂಡು ಹೋದ್ಹಾಗೇ...!’

‘ಏ ಥೂ, ಏನ್ ಮಾತೂ ಅಂತ ಆಡ್ತೀಯಾ...?! ಅಪಶಕುನದ ಮಾತು...’

ಅರ್ಧದಲ್ಲೇ ತುಂಡರಿಸಿ ಆತ ಹೇಳಿದ, ‘ಹೌದಪ್ಪಾ, ನನ್ನ ಮಾತು ಈಗ ನಿನಗೆ ಅಪಶಕುನವಾಗಿಯೇ ಕಾಣಿಸ್ತದೆ. ಆದರೆ ಯೋಚಿಸಿ ನೋಡು, ನೀನು, ನಿನ್ನ ಕಾರು ಎಲ್ಲಾ ನೋಡಿದ್ರೆ ನಿನ್ನ ಹೆಂಡತಿಯೂ ಚೆನ್ನಾಗಿಯೇ ಇದ್ದಾಳೆ ಅಂತ ಊಹಿಸಬಲ್ಲೆ ನಾನು. ಅಂಥವಳು ನಾಲ್ಕು ತಿಂಗಳು ಊರು ಬಿಟ್ಟು, ಅದೂ ಬಾಂಬೆಯಲ್ಲಿ... ಯಾವನಾದ್ರೂ ನನ್ನಂತವನು ಗಾಳ ಹಾಕದೇ ಬಿಡ್ತಾನೇನು? ಅವಳ ಮಾತನ್ನ ನಂಬಿಕೊಂಡು ಈ ಚಳಿಯ ಅಪರಾತ್ರಿಯಲ್ಲಿ ಈ ಸರ್ಕಲ್ಲಿನಲ್ಲಿ ಕಾಯ್ತಾ ಇದ್ದೀಯ ಅಂದ್ರೆ....’ ಕೊಂಕು ನಗೆ ನಕ್ಕು, ಅಲ್ಲೇ ಬಸ್‍ಸ್ಟ್ಯಾಂಡ್‍ನ ಗೋಡೆಗೊರಗಿ ಊರುಗೋಲನ್ನು ಆನಿಸಿಕೊಂಡು ಬಲಗೈಯ್ಯಿಂದ ಅಂಗಿಯ ಕಿಸೆಯಿಂದ ಬೀಡಿ ತೆಗೆದು ಕಚ್ಚಿಕೊಂಡು ಕಡ್ಡಿಗೀರಿ, ‘ಫೂ.....’ ಎಂದು ಹೊಗೆ ಬಿಟ್ಟು, ನನ್ನೆಡೆಗೆ ಹಿಡಿದು ‘ಬೀಡಿ ಸೇದ್ತೀಯೇನು?’ ಎಂದ.

ತೆಗೆದು ಕೆನ್ನೆಗೆರಡು ಬಾರಿಸಲೇ ಅನಿಸುವಷ್ಟು ಸಿಟ್ಟುನೆತ್ತಿಗೇರಿತು. ಆದರೆ ಕೈಗಳು ಮುಷ್ಕರ ಹೂಡಿದ್ದವು! ನಾಲಗೆ ಮುಷ್ಕರ ಹೂಡಿ ಆಗಲೇ ಅರ್ಧಗಂಟೆಯಾಗಿತ್ತು! ಮುಖ ಸಿಂಡರಿಸಿ ಬೇರೆ ಕಡೆ ನೋಡಿದೆ.

‘ನೀನೆಲ್ಲಿ ನಮ್ಮ ಬಡವರ ಬೀಡಿ ಸೇದ್ತಿಯಪ್ಪಾ... ಹ್ಹೆ ಹ್ಹೆ...’

ಈ ದರಿದ್ರವನ ಜೊತೆ ಇದ್ದರೆ ತಲೆ ಹಾಳಾಗುತ್ತದೆ. ಕಾರೊಳಗೆ ಕಿಶೋರನನ್ನಾದರೂ ಕೇಳುತ್ತಾ ಕೂರೋಣ ಎಂದರೆ ಕಾಲೂ ಮುಷ್ಕರ ಹೂಡಿದೆ! ಈತ ಯಾವುದೋ ಮಾಟಗಾರನೇ ಇರಬೇಕು. ದೇಹದೊಳಗೆ ಒಮ್ಮೆ ಛಳ್ ಎಂದು ಭಯದ ಎಳೆ ಮೀಟಿ ಮಾಯವಾಯ್ತು!

ಹೆಡ್‍ಲೈಟ್ ಕಾಣುತ್ತಲೂ ಮತ್ತೊಮ್ಮೆ ಅತ್ತ ಧಾವಿಸಿದೆ. ಹಿಂದಿನಿಂದ ಆತ ನಕ್ಕ, ‘ಮಾರಾಯ, ಆಕೆ ಬಂದರೆ ಬಸ್ ನಿಂತೇನಿಲ್ತದೆ. ನೀ ಓಡ್ಬೇಡಾ... ಹ್ಹ ಹ್ಹ ಹ್ಹ...’ ಅವನನ್ನು ಸಂಪೂರ್ಣ ನಿರ್ಲಕ್ಷಿಸಿ ರಸ್ತೆಕಡೆಗೆ ಓಡಿದೆ. ಬಂದ ವೇಗದಲ್ಲೇ ಸದ್ದು ಮಾಡುತ್ತಾ ಬಸ್ ಕರಗಿ ಮಾಯವಾಯ್ತು. ಆತನ ನಗುವಿನ್ನೂ ನಿಂತಿರಲೇ ಇಲ್ಲ.

ವಾಪಾಸ್ಸು ಹೊರಟು ಬಿಡಲೇ? ಏನಾಗಿದೆ ನನಗೆ? ಯಾವುದಕ್ಕೂ ದೇಹ ಸ್ಪಂದಿಸುತ್ತಿಲ್ಲವಲ್ಲ? ಅದೆಷ್ಟು ಹೊತ್ತು ಆ ನೀರವ ರಾತ್ರಿಯಲ್ಲಿ ಆತನ ಪಕ್ಕದಲ್ಲಿ ಅವನ ಪ್ರಶ್ನೆಗಳಿಗೆ ವಿಧೇಯನಾಗಿ ಉತ್ತರಿಸುತ್ತಾ ನಿಂತಿದ್ದೆನೋ. ಅದೇಕೆ ನಿಂತಿದ್ದೆನೋ..?

ಪಕ್ಕದಲ್ಲೇ ಕಿರ್ರ್‍ರ್ರ್ ಎಂಬ ಸದ್ದಿನೊಂದಿಗೆ ಎಚ್ಚರವಾಗಿ, ನೋಡಿದರೆ ಬಸ್‍ಸ್ಟ್ಯಾಂಡಿನ ಎಡಬದಿಯಲ್ಲಿದ್ದ ಗೂಡಂಗಡಿಯೊಳಗಿಂದ ಒಬ್ಬ ಆಸಾಮಿ ಬಾಗಿಲನ್ನು ದೂಡಿಕೊಂಡು ಹೊರಗಿಳಿದ. ಅಷ್ಟು ಹತ್ತಿರದಲ್ಲೇ ಇದ್ದರೂ ಇಷ್ಟು ಹೊತ್ತಿನವರೆಗೆ ಈ ಗೂಡಂಗಡಿಯ ಅಸ್ತಿತ್ವವೇ ತಿಳಿಯದಿದ್ದುದಕ್ಕಾಗಿ ನಾನು ವಿಸ್ಮಯಪಡುತ್ತಿದ್ದರೆ, ಕಾಲಿಗೆ ಜೀವಬಂದವನಂತೆ ನನ್ನ ಪಕ್ಕದ ಆಸಾಮಿ, ‘ಓ.. ಅಂತೂ ಪರ್ಬು ಬಾಗಿಲು ತೆಗೆದ ಅಂತಾಯ್ತು. ಬಾ, ಚಾ ಕುಡಿಯೋಣ. ಬುದ್ಧಿ ಚುರುಕಾಗುತ್ತೆ... ಪರ್ಬು ಎರಡು ಚಾ ಹಾಕು...’ ನಗುತ್ತಾ ಎಂದ.

ರಾತ್ರಿ ಜಾವ ಕಳೆದು ಮುಂಜಾವು ಆರಂಭವಾಗುತ್ತಿರುವುದು ಅನುಭವವೇದ್ಯವಾಗುತ್ತಿತ್ತು. ಪರ್ಬು ಹೂ ಎನ್ನಲಿಲ್ಲ, ಹಾ ಎನ್ನಲಿಲ್ಲ... ಹೊಗೆಯಾಡುವ ಎರಡು ಚಾ ಲೋಟಗಳನ್ನ ತಂದಿಟ್ಟು, ತನ್ನ ಕರ್ತವ್ಯವಾಯಿತೆಂಬಂತೆ ಪುನಾ ಹೋಗಿ ಸ್ಟೌವಿನ ಬಿಸಿ ಪಕ್ಕದಲ್ಲಿ ಕುಳಿತು, ಬೋಳೆ ಕಣ್ಣುಗಳಿಂದ ನಮ್ಮನ್ನು ನೋಡತೊಡಗಿದ.

ವಿರುದ್ಧ ದಿಕ್ಕಿನಿಂದ ಹೆಡ್‍ಲೈಟ್‍ಗಳು ಕಾಣಿಸಿದವು. ಸ್ವಾತಿ ಬರುವ ದಿಕ್ಕಲ್ಲದ್ದರಿಂದ ತಾತ್ಸರದಿಂದ ಆಕಡೆಗೆ ನೋಡಲಿಲ್ಲ. ದೈತ್ಯಾಕಾರದ ಲಾರಿಯೊಂದರಿಂದ ಅಜಾನುಬಾಹು ಪಂಜಾಬಿ ಸಿಖ್ಖರಿಬ್ಬರು ಚಂಗನೆ ಜಿಗಿದರು. ಡ್ರೈವರ್ ನೀಡಿದ ಕೈಯ್ಯಾನಿಸಿ ಒಬ್ಬಾಕೆ ಮೂವತ್ತು-ಮೂವತ್ತೆರಡರ ತರುಣಿಯೂ ಕೆಳಗಿಳಿದಳು. ಅಚ್ಚರಿಯೆನಿಸಿತು, ಆಕೆಯನ್ನು ಕಂಡರೆ ದಕ್ಷಿಣ ಭಾರತದವಳು ಎಂಬುದು ಯಾರಿಗೂ ತಿಳಿಯುವಂತಿತ್ತು. ಪರ್ಬು ಅಂಗಡಿಗೆ ಬಂದವರೇ ಡ್ರೈವರ್ ಕೇಳಿದ, ‘ಖಾನೇಕೋ ಕ್ಯಾ ಹೈ?’

‘ಕುಚ್ ನಹೀ, ಸಿರ್ಫ್ ಚಾಯ್ ಓರ್ ಆಮ್ಲೇಟ್...‌’ ಪರ್ಬು ಹೇಳಿದ.

ಆತ ತರುಣಿಯೆಡೆಗೆ ತಿರುಗಿ, ‘ಸಿರ್ಫ್ ಆಮ್ಲೇಟ್... ಚಲೇಗಾ..?’

ಆಕೆ ವಾಚು ನೋಡಿಕೊಳ್ಳುತ್ತಾ ಅನ್ಯಮನಸ್ಕಳಾಗಿ ಹೇಳಿದಳು, ‘ಚಲೇಗಾ, ಡಬಲ್ ಡಾಲೋ ಭಯ್ಯಾ...’

ನಮ್ಮೊಂದಿಗೆ ಮಾತನಾಡದ ಪರ್ಬು ಸುಲಲಿತವಾಗಿ ಹಿಂದಿ ಮಾತಾಡಿದ್ದನ್ನು ಅರಗಿಸಿಕೊಳ್ಳುವುದರೊಳಗೆ, ಮೂರು ಆಮ್ಲೇಟ್‍ಗಳನ್ನು ಹಾಕಿ, ಅವರು ಕೊಟ್ಟ ಹಣಪಡೆದು ವಾಪಾಸ್ಸು ಚಿಲ್ಲರೆ ನೀಡಿ, ಮತ್ತದೇ ಸ್ಟೌ ಬಳಿಕುಳಿತ. ಆಮ್ಲೇಟ್ ತಿನ್ನುವ ಸಮಯದಲ್ಲಿ ಡ್ರೈವರ್ ನಾವೆಲ್ಲರೂ ಇರುವುದನ್ನು ನೋಡಿಯೂ, ತನಗೆ ಸಂಬಂಧಿಸಿಯೇ ಇಲ್ಲವೆಂಬಂತೆ ಆಕೆಯೊಂದಿಗೆ ಅಸಹ್ಯವೆನಿಸುವಷ್ಟು ಸರಸವಾಡುತ್ತಿದ್ದ. ಆಕೆಯೋ ಆತನಿಗೆ ಸಹಕರಿಸುತ್ತಾ ದೇಹವಿಡೀ ಅಲುಗಾಡುವಂತೆ ಕಿಲಕಿಲನಗುತ್ತಾ ಆತನಿಗೆ ಪ್ರೋತ್ಸಾಹಿಸುತ್ತಿದ್ದಳು. ಕ್ಲೀನರ್ ಯುವಕನೋ ಅವರಿಬ್ಬರ ಕೇಳಿಯನ್ನು ನೋಡುತ್ತಾ ಬಾಯಿ ಚಪ್ಪರಿಸುತ್ತಾ ಆಮ್ಲೇಟ್ ಹೊಟ್ಟೆಗಿಳಿಸುತ್ತಿದ್ದ. ನಾನು ವಿಚಿತ್ರವೆಂಬಂತೆ ನೋಡುತ್ತಿದ್ದರೆ, ಊರುಗೋಲಿನವನು ನೋಡಿಯೂ ನೋಡದವನಂತಿದ್ದ. ಪರ್ಬುವಾದರೋ ಈ ಲೋಕದ ಧ್ಯಾಸದಲ್ಲೇ ಇರಲಿಲ್ಲ!

ಲಾರಿ ಹತ್ತಿಸುವಾಗ ತರುಣಿಗೆ ಕ್ಲೀನರ್ ಏನೋ ಮಾಡಿರಬೇಕು, ‘ಕ್ಯಾಬೇ, ಇತ್ನಾ ಅರ್ಜೆಂಟ್ ಹೈ ಕ್ಯಾ...?’ ಎಂದಿದ್ದು, ಮೂವರೂ ಒಟ್ಟಿಗೇ ಸೇರಿ ನಕ್ಕಿದ್ದೂ ಲಾರಿಯ ಎಂಜಿನ್ ಶಬ್ದವನ್ನೂ ಮೀರಿ ಕೇಳಿಸಿತು. ಲಾರಿ ಹೊರಟಿತು.

‘ಥುತ್, ಮಾನಗೆಟ್ಟ ಮಂದಿ....!’ ಅಷ್ಟುಹೊತ್ತಿನ ನನ್ನ ಆಕ್ರೋಶ ಮಾತಿನರೂಪದಲ್ಲಿ ಬಂತು.

‘ಯಾಕಯ್ಯಾ, ಏನಾಯ್ತೀಗ?’

‘ಯಾಕಾ? ನಾವು ಮೂರು ಮಂದಿ ಇದೀವಿ, ಹೆಣ್ಣಾಗಿ ಆಕೆಗೆ ಮರ್ಯಾದೆ ಬೇಡಾ?’ ನಾನು ಕೇಳಿದೆ.

‘ಅಯ್ಯೋ ಪುಣ್ಯಾತ್ಮಾ, ಮೈಮಾರಿಕೊಳ್ಳೋಳು ಮಾನ-ಮರ್ಯಾದೆ ಅಂತ ಮಾತಾಡಿದ್ರೆ ಹೊಟ್ಟೆಗೆ ನೀನು ತಂದು ಹಾಕ್ತೀಯಾ?’

‘ಮೈ ಮಾರಿಕೊಳ್ಳೋಳಾದ್ರೆ ಅವರ ಖಾಸಗಿತನದಲ್ಲಿ. ಸೂಳೆಯಾದ ಮಾತ್ರಕ್ಕೆ ಇಷ್ಟುಜನರ ಎದುರು.....’

ನನ್ನ ಮಾತನ್ನು ಅರ್ಧದಲ್ಲೇ ತುಂಡರಿಸಿ ಆತ ಹೇಳಿದ, ‘ಆದರ್ಶದ ಮಾತಾಡಬೇಡ. ನಿನ್ನ ಪ್ರಪಂಚಕ್ಕೆ ಇದು ತಪ್ಪು. ಆದರೆ ಆಕೆಗಿದು ಅನ್ನ. ಲಾರಿಯಲ್ಲಿರುವ ಅವರಿಬ್ಬರನ್ನ ಹೊಟ್ಟೆ ತುಂಬುವಷ್ಟು ಖುಷಿಪಡಿಸಿದರೆ ಮಾತ್ರ ಮುಂದಿನ ವಾರವೋ, ಮುಂದಿನ ತಿಂಗಳೋ ಈ ಮಾರ್ಗವಾಗಿ ಬಂದಾಗ ಡ್ರೈವರ್ ಮತ್ತೊಮ್ಮೆ ಫೋನಾಯಿಸಿ ಆಕೆಯನ್ನ ಕರೆದಾನು. ಅದನ್ನು ಬಿಟ್ಟು ನೀನು ಹೇಳಿದ ಮಾನ-ಮರ್ಯಾದೆ ಮುಖ ನೋಡಿದರೆ ಆಕೆ ನೇಣು ಹಾಕಿಕೋಬೇಕಷ್ಟೆ... ನಿನ್ನ ಸಂಸ್ಕಾರ ಆಕೆಗೆ ಸ್ಮಶಾನದ ದಾರಿ. ಆಕೆಯನ್ನು ನಂಬಿಕೊಂಡಿರುವ ಹೊಟ್ಟೆ ಹೊರೆಯಲು ಆಕೆ ಮಾಡುವ ಮುಖವಾಡ ನಿಮ್ಮಂತವರ ಪಾಲಿಗೆ ನಿರ್ಲಜ್ಯ ಸ್ಥಿತಿ ಅಷ್ಟೆ.....’

ಆತನ ಮಾತು ಗಂಭೀರವಾಯಿತು.

‘ಯಾವ ಹೆಣ್ಣು ತಾನೇ ಗಂಡನ ಜೊತೆಗಿರುವುದನ್ನು ಬಿಟ್ಟು ಈ ರೀತಿ ಬದುಕುವುದಕ್ಕೆ ಆಸೆಪಡುತ್ತಾಳೆ ಹೇಳು? ಇಷ್ಟು ಜನರೆದುರು ಆಕೆಯ ಎದೆಯನ್ನು ಆತ ಹಿಸುಕುತ್ತಿದ್ದರೂ ಆಕೆ ಪ್ರತಿಭಟಿಸಲಿಲ್ಲವೆಂದರೆ, ಅದರ ಹಿಂದೆ ಆಕೆಯನ್ನು ಆಶ್ರಯಿಸಿರುವವರ ಹಸಿವಿನ ಕೂಗು ಆಕೆಯನ್ನು ಕ್ಷಣಕ್ಷಣಕ್ಕೂ ಎಚ್ಚರಿಸುತ್ತಿರುತ್ತದೆ ಎಂದಲ್ಲವೆ? ನೋಡು, ಹಾಗೆಂದು ಆಕೆ ಮಾಡಿದ್ದು ಪೂರ್ಣಸರಿ ಎನ್ನಲಾರೆ. ಆದರೆ ಆಕೆ ಪರಿಸ್ಥಿತಿಯ ಕೈಗೊಂಬೆ- ಇಷ್ಟನ್ನು ಮಾತ್ರ ಸ್ಪಷ್ಟವಾಗಿ ಹೇಳಬಲ್ಲೆ. ಸರಿತಪ್ಪುಗಳನ್ನು ವಿಶ್ಲೇಷಿಸುತ್ತಾ ಕೂತರೆ ಬದುಕು ಸಾಗಬೇಕಲ್ಲ...? ಈಗ ನನ್ನನ್ನೇ ನೋಡು...!’

ತಟ್ಟನೆ ಮಾತು ನಿಲ್ಲಿಸಿ ಮೌನವಾದ. ಮಧ್ಯಮಸ್ಥಾಯಿಯಲ್ಲಿ ಆತನಾಡುತ್ತಿದ್ದ ಮಾತುಗಳು ಸುತ್ತೆಲ್ಲ ಕದಡಿ ಕರಗಿದವು. ಪರ್ಬುವಿನ ಸ್ಟೌ ಸದ್ದನ್ನು ಬಿಟ್ಟರೆ ಬೇರಾವ ರವವೂ ಕೇಳಿಸದಷ್ಟು ಮೌನ. ನಾನು ಆತನತ್ತ ಮುಖವೆತ್ತಿ ನೋಡಿದೆ. ಆತ ಮುಂದುವರೆದ,

‘ಒಂದು ಕಾಲದಲ್ಲಿ ನಾನೂ ನಿನ್ನ ಹಾಗೇ ಬದುಕಿದವನು. ಚೆಂದದ ಹೆಂಡತಿ, ನೌಕರಿ, ಅಧಿಕಾರ, ಹಣ ಎಲ್ಲವೂ ಇದ್ದ ಕಾಲವದು. ಇನ್ನೇನು ಬೇಕು. ಆದರೆ ಎಲ್ಲವನ್ನೂ ಮಣ್ಣು ಮಾಡಲು ಬಲಗಾಲು ನನ್ನಿಂದ ದೂರವಾಯ್ತು. ಅದೊಂದೇ ನೆಪವಾಗಿಟ್ಟುಕೊಂಡು ಕಂಪೆನಿಯವರು ಕೆಲಸ ಕಿತ್ತುಕೊಂಡರು, ಹೆದರಲಿಲ್ಲ, ಬೇರೆಡೆಗೆ ಕೆಲಸ ಹುಡುಕುವಾಗಲೇ ನನ್ನ ಹೆಂಡತಿಗೂ ನಾನು ಬೇಡವೆನಿಸಿದೆನೇನೋ, ಜ್ಯೂನಿಯರ್ ಮ್ಯಾನೇಜರ್ ಜೊತೆಗೆ ಹೊರಟುಹೋದಳು. ಎರಡು ವಾರ ಅವರಿಬ್ಬರನ್ನೂ ಕತ್ತರಿಸಿ ಹಾಕುತ್ತೇನೆ ಎಂದು ಹುಚ್ಚನಂತೆ ಅಲೆದಾಡಿದೆ. ಸಿಟ್ಟು ಮುಷ್ಟಿಯೊಳಗೆ ಬಂದಾಗ ನಾನೆಂತಹ ಹುಚ್ಚಿನಲ್ಲಿದ್ದೇನೆ ಅನಿಸಿತು. ಆಕೆಯನ್ನು ಪರಿಸ್ಥಿತಿ ಆ ರೀತಿ ಮಾಡಿಸಿತು, ಅದರಲ್ಲಿ ಆಕೆಯ ತಪ್ಪೇನು ಎಂದು ನನಗೆ ನಾನು ಸಾವಿರ ಬಾರಿ ಕೇಳಿಕೊಂಡೆ. ಕ್ಷಮಿಸಿದೆ ಎಂದರೆ ದೊಡ್ಡ ಮಾತಾದೀತು! ಮರೆತೇ ಬಿಟ್ಟೆ. ವರ್ಷದೊಳಗೆ ಆತ ನನ್ನ ಹೆಂಡತಿಯನ್ನು ಬಿಟ್ಟ ಸುದ್ದಿ ಬಂತು. ಹೊಸ ಪರಿಸ್ಥಿತಿ ನನ್ನ ಹೆಂಡತಿಯನ್ನು ಮತ್ತೆ ನನ್ನಲ್ಲಿಗೆ ತರಬಹುದೆಂಬ ಆಸೆ ಮೂಡಿಸಿತು. ಆಕೆ ಎಲ್ಲಿದ್ದಾಳೆ ಎಂಬುದೂ ನನಗೆ ತಿಳಿದಿಲ್ಲ. ಆದರೂ ಅದೆಷ್ಟೋ ವರ್ಷಗಳಿಂದ ಪ್ರತಿದಿನ ಈ ಹೊತ್ತಿಗೆ ಇಲ್ಲಿಗೆ ಬರುತ್ತೇನೆ. ಸುಮ್ಮನೆ ಕಾಯುತ್ತೇನೆ. ಬಸ್ಸುಗಳು ನಿಂತಾಗ ನನ್ನ ಮುದ್ದು ಹೆಂಡತಿ ಕೆಳಗಿಳಿದಳೆ ಎಂದು ನೋಡುತ್ತೇನೆ. ಬೇರೆ ಮುಖಗಳು ಕಂಡಾಗ ಸುಮ್ಮನಾಗುತ್ತೇನೆ. ನನ್ನ ಸಂಸಾರದಂತೆ ಅವರದು ಆಗದಿರಲೆಂದು ಆಶಿಸುತ್ತೇನೆ.’

ಆತ ಮಾತು ನಿಲ್ಲಿಸಿ ಬಲಗೈಯ್ಯನ್ನು ನನ್ನ ಹೆಗಲಮೇಲೆ ಮೃದುವಾಗಿ ಅಮುಕಿ, ‘ಗೆಳೆಯಾ, ಪರಿಸ್ಥಿತಿ ನಿಮ್ಮಿಬ್ಬರನ್ನು ದೂರವಾಗಿಸಿತು. ಈಗ ಅದೇ ಪರಿಸ್ಥಿತಿ ನಿಮ್ಮಿಬ್ಬರನ್ನು ಒಂದುಗೂಡಿಸಲಿ, ನಿನ್ನ ಹೆಂಡತಿ ಬರಲಿ ಎಂದೇ ಹಾರೈಸುತ್ತೇನೆ. ಆದರೊಂದು ನೆನಪಿರಲಿ, ಆಕೆಗೆ ಬರಲು ಒಂದು ಕಾರಣವಿದ್ದರೆ ಬರದಿರಲು ಸಾವಿರ ಕಾರಣವಿದ್ದೀತು. ನನ್ನ ಮಾತುಗಳು ಒರಟಾಗಿದ್ದರೆ ಕ್ಷಮಿಸು ಗೆಳೆಯಾ.. ನಿನಗೆ ಒಳ್ಳೆಯದಾಗಲಿ...’ ಎಂದ. ಊರುಗೋಲುಗಳನ್ನು ಹಿಡಿದುಕೊಳ್ಳಲು ತುಸು ಬಗ್ಗಿದವನ ಕಣ್ಣಂಚಲ್ಲಿ ಕಣ್ಣೀರು ಜಿನುಗಲು ಸಿದ್ಧವಾಗಿರುವುದನ್ನು ಕಂಡೆ. ಅದನ್ನು ತೋರಗೊಡದೆ ಆತ ಥಟ್ಟನೆ ಮುಖ ತಿರುಗಿಸಿ ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಊರುಗೋಲುಗಳ ಹೆಜ್ಜೆಯನ್ನಿಡುತ್ತಾ ಆಲದ ಮರದ ನೆರಳೊಳಗೆ ಕರಗಿಹೋದ. ಪರ್ಬುವಿನ ಕಡೆಗೆ ನೋಡಿದೆ, ಆತನ ಭಾವಹೀನ ಕಣ್ಣುಗಳೂ ತೇವಗೊಂಡಿದ್ದವು. ಬಲಗಡೆಯಿಂದ ರಸ್ತೆಯ ತುದಿಯಲ್ಲಿ ಅತ್ಯಂತ ಪ್ರಖರ ಹೆಡ್‍ಲೈಟ್‍ಗಳು ಕಾಣಿಸಿದವು. ದೇವಲೋಕದ ಬೆಳಕಿನಂತಿದ್ದ ಆ ಹೆಡ್‍ಲೈಟಿನತ್ತ ನಾನು ಉತ್ಸಾಹದಿಂದ ಹೆಜ್ಜೆ ಹಾಕತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.