ADVERTISEMENT

ದೀಪಾವಳಿ ಕಥಾಸ್ಪರ್ಧೆ | ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ: ಕೊನಡೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 2:06 IST
Last Updated 6 ಡಿಸೆಂಬರ್ 2020, 2:06 IST
ಕಲೆ: ಬದರಿ ಪುರೋಹಿತ್‌
ಕಲೆ: ಬದರಿ ಪುರೋಹಿತ್‌   

ಗಾಳಿ ಸ್ತಬ್ಧವಾಗಿತ್ತು. ಮಳೆ ಬಿರುಸು ಕಳೆದುಕೊಂಡಿತ್ತು. ಬಸ್ ಇಳಿದ ತಕ್ಷಣವೇ ಅದರ ಪರಿಣಾಮವನ್ನು ವಿನುತಾ ಅನುಭವಿಸತೊಡಗಿದಳು. ಮಳೆಯನ್ನು ಧಿಕ್ಕರಿಸುವಂತೆ ಬಸ್ಸು ಚಿಲ್ಲ್ ಎಂದು ನೀರನ್ನು ಚಿಮ್ಮಿ ಗಣೇಶ ಗುಡಿಯತ್ತ ಹೊರಟು ಹೋಯಿತು. ಇಳಿಯುವುದನ್ನೇ ಕಾಯುತ್ತಿದ್ದಂತೆ ಮಳೆ ರಭಸ ಹೆಚ್ಚಿಸಿಕೊಂಡಿತು. ಚಾಟಿನ ಆಸರೆಗೆ ಮರದ ಅಡಿಗೆ ಓಡಿದಳು. ಅದು ಬಾಲ್ಯದಿಂದಲೂ ರೂಢಿಯಾಗಿರುವಂತದ್ದು. ಸ್ಕೂಲಿಗೆ ಹೋಗಿ ಬರುವಾಗ ಮಳೆಯ ಕಾಟ ಇದ್ದಿದ್ದೆ. ಜೋಯಿಡಾ ಕಾಡಿನ ಮಳೆಯೇ ಹೀಗೆ. ಸನ್ನಿ ಹಿಡಿದಂತೆ ಕಾಡಿನ ನೆತ್ತಿಯ ಮೇಲೆ ಸುರಿಯುತ್ತಿರುತ್ತದೆ. ಮೊದಲಿಗಾದರೆ ಬಸ್ಸು ಬರುವ ದಾರಿಯನ್ನೇ ಕಾಯುತ್ತಾ ಕುಳಿತಿರುತ್ತಿದ್ದ ಬ್ರೂನೀ. ಅವನ ಜೈವಿಕ ಗಡಿಯಾರ ಹೇಗೆ ಕೆಲಸ ಮಾಡುತ್ತಿತ್ತು ಎಂಬುದೇ ದೊಡ್ಡ ಅಚ್ಚರಿ..! ಸರಿಯಾದ ಟೈಮಿಗೆ ಅವನು ಹಾಜರಾಗುತ್ತಿದ್ದ. ಕಿಲೋಮೀಟರ್‍ಗೊಂದು ಮನೆಯಿರುವ ಇಲ್ಲಿನ ಕಾಡಿನ ಊರುಗಳಲ್ಲಿ ಬ್ರೂನೀಯೇ ಆಪ್ತ ಬಂಧು. ಅಷ್ಟು ಚೆನ್ನಾಗಿ ಮನುಷ್ಯರನ್ನು ಅರ್ಥ ಮಾಡಿಕೊಂಡಿದ್ದ.

ಗಡಿಯಾರ ನೋಡಿಕೊಂಡಳು. 3 ಗಂಟೆ. ಆದರೆ ಮೋಡ ದಟ್ಟಣೆಯಿಂದ ಸಂಜೆಯಾದಂತೆ ತೋರುತ್ತಿತ್ತು. ಇಲ್ಲಿಂದ ಮೂರು ಕಿಲೊಮೀಟರ್ ಕಾಡು ಹಾದಿಯಲ್ಲಿ ಸಾಗಬೇಕು. ಅದು ಹಾದಿಯೆಂದರೆ ಹಾದಿಯಲ್ಲ. ಕಾಲು ಸಾಗಿದಂತೆ ಹಾದಿ ತೆರೆದುಕೊಳ್ಳುತ್ತದೆ ಅಷ್ಟೆ. ಆಗ ದೂರ ಸಾಗಲು ಅರ್ಧ ಗಂಟೆ ಸಾಕಾಗುತ್ತಿತ್ತು. ಈಗ ಅದು ಸಾಧ್ಯವೇ.? ನಿನ್ನೆಯ ಸಂಗತಿಗಳು ಇಂದಿಗೆ ಯಾವತ್ತಿಗೂ ಅಚ್ಚರಿಗಳೆ. ಕಣ್ಣು ಯಾಮಾರಬಹುದು. ಆದರೆ ಕಾಲುಗಳು ಹಾದಿ ಮರೆತಿಲ್ಲ. ಎಲ್ಲ ದಾರಿಗಳನ್ನು ಕಾಡು ಒಂದೆ ತೆರನಾಗಿ ತೋರುತ್ತದೆ. ಹೀಗೆ ಸಾಗುತ್ತಾ ಸಾಗುತ್ತಾ ಅನೇಕ ಆಗಂತುಕರು ಯಾವ ಯಾವದೋ ಹಳ್ಳಿಯನ್ನು ತಲುಪಿದ ಕಥೆಗಳು ಬೇಕಾದಷ್ಟಿವೆ. ಬಾಲ್ಯದಲ್ಲಿ ಅಂಗಳದಲ್ಲಿ ಕೂತು ಇಂತಹ ಅನೇಕ ಕಥೆಗಳನ್ನು ಅಜ್ಜ ದೆವ್ವದ ಕಥೆಗಳನ್ನು ಹೇಳುವಂತೆ ಹೇಳುತ್ತಿದ್ದ. ಆತನೂ ಒಮ್ಮೆ ದಾರಿತಪ್ಪಿ ದೂರದ ಫರ್ನಾಂಡಿಸ್ ಗೆಸ್ಟ್‌ಹೌಸ್ ತಲುಪಿದ್ದನಂತೆ.

ಜನರಿಗದು ಭೂತ ಬಂಗಲೆ. ಯಾವ ಕಾಲದಿಂದಲೂ ಪಾಳು ಬಿದ್ದಿರುವ ಅಲ್ಲಿ ರಾತ್ರಿಯಾಗುತ್ತಿದ್ದಂತೆ ಒಂದು ದೀಪ ಏಕಾಏಕಿ ಪಳ್ಳನೇ ಹೊತ್ತಿಕೊಳ್ಳುತ್ತದೆಯಂತೆ. ಯಾವ ವಿದ್ಯುತ ಸಂಪರ್ಕವಿಲ್ಲದ ಈ ಕಾಡಿನಲ್ಲಿ ಇದೊಂದು ಭಯಾನಕ ಸಂಗತಿಯಾಗಿತ್ತು. ಫರ್ನಾಂಡಿಸ್ ಆ ಕಾಲಕ್ಕೆ ಹಾಕಿಸಿದ್ದ ಸೋಲಾರ್ ಪ್ಯಾನಲ್ ಎಂದೋ ಕಿತ್ತು ಹೋಗಿ ಕಂಬ ಮಾತ್ರ ಉಳಿದಿತ್ತು. ಇದಲ್ಲದೇ ಆ ಮನೆಯಿಂದ ಹೊಗೆಯಾಡುವ ದೃಶ್ಯದೊಂದಿಗೆ ಕಡವೆ ಮಾಂಸದ ಘಮಘಮ ಕಾಡಿನ ತುಂಬಾ ಹಬ್ಬಿಕೊಳ್ಳುತ್ತದೆಯಂತೆ.

ADVERTISEMENT

ಅಜ್ಜ ದಾರಿ ತಪ್ಪಿ ನೇರ ಹೋಗಿ ಗೆಸ್ಟ್‌ಹೌಸ್ ಎದುರಿಗೆ ನಿಂತಿದ್ದ. ಫಕ್ಕನೇ ದೀಪ ಹೊತ್ತಿಕೊಂಡಿದೆ. ಆ ದೀಪದ ಅರೆಬೆಳಕಲ್ಲಿ ಫರ್ನಾಂಡಿಸ್‍ನ ನಿಗಿನಿಗಿ ಉರಿಗಣ್ಣುಗಳು. ಚೀರಬೇಕೆಂದರೆ ಬಾಯಿಯೇ ಇಲ್ಲ. ಮೂರ್ಛೆ ಹೋಗಿ ಬಿದ್ದಿದ್ದ ಅಜ್ಜನನ್ನು ಮರುದಿನ ಗೌಳಿಗಳು ಕರೆದುಕೊಂಡು ಬಂದಿದ್ದರು. ಈ ದಾರಿಯಲ್ಲಿಯೇ ತಾನು ಸಾಗಬೇಕಿರುವುದು ವಿನುತಾಳನ್ನು ಅಧೀರಳನ್ನಾಗಿಸಿತು.

ಫರ್ನಾಂಡಿಸ್ ಎಂಬ ಮೋಜುಗಾರ ಬ್ರಿಟೀಷ್ ಅಧಿಕಾರಿ ಬೇಟೆಗಾಗಿ ಬರುತ್ತಿದ್ದ. ಅದಕ್ಕಾಗಿ ತಂಗಲು ಮಾಡಿಕೊಂಡಿದ್ದ ಪುಟ್ಟ ಮನೆ ಅದು. ಆತನಿಗೆ ಕಡವೆ ಮಾಂಸವೆಂದರೆ ಎಲ್ಲಿಲ್ಲದ ಮೋಹ. ಸುಟ್ಟ ಮಾಂಸದ ತುಂಡುಗಳನ್ನು ತನ್ನ ಕೋಟಿನ ಜೇಬಿನಲ್ಲಿಟ್ಟುಕೊಂಡು ಸ್ನ್ಯಾಕ್ಸ್ ಥರ ತಿನ್ನುತ್ತಿದ್ದನಂತೆ. ಆ ಕಾಲಕ್ಕೆ ಇಂಪೋರ್ಟೆಡ್‌ ವೈನು, ಮಸಾಲೆ ಹಾಕಿ ಮಾಂಸದ ತುಂಡುಗಳನ್ನು ಫ್ರೈ ಮಾಡುತ್ತಿದ್ದ ಬಾಣಸಿಗ ಅವನು. ಅಂಥದ್ದೇ ವಾಸನೆ ಈಗಲೂ ಅಮಾವಾಸ್ಯೆ, ಹುಣ್ಣಿಮೆಯ ರಾತ್ರಿಗಳಲ್ಲಿ ಹರಡಿಕೊಳ್ಳುತ್ತಿರುವುದು ಭಯಾನಕ ಸಂಗತಿಯಾಗಿತ್ತು. ಎಲ್ಲಿ ಬೇಕೆಂದರಲ್ಲಿ ನುಗ್ಗುವ ಆನೆಯ ಹಿಂಡುಗಳು, ಕಾಡು ಮಿಕಗಳು ಸೇರಿದಂತೆ ಯಾವ ಪ್ರಾಣಿಗಳು ಗೆಸ್ಟ್‌ಹೌಸ್ ಪ್ರವೇಶಿಸಿದ್ದನ್ನು ಕಂಡವರಿಲ್ಲ. ಒಂದು ಪಾರಿವಾಳವೂ ಗೂಡು ಕಟ್ಟಿಕೊಂಡಿಲ್ಲ. ಫರ್ನಾಂಡಿಸ್ ಹಗಲು ರಾತ್ರಿ ಎನ್ನದೇ ತುಪಾಕಿ ಹಿಡಿದುಕೊಂಡು ಗಸ್ತು ತಿರುಗುತ್ತಿರುತ್ತಾನೆ ಎಂಬ ಪುಕಾರು ಕೇಳಿಯೆ ಮೈ ನಡುಗುತ್ತಿತ್ತು.

ಫರ್ನಾಂಡಿಸ್‍ನದ್ದು ತಿಕ್ಕಲು ಬುದ್ಧಿ. ಬೇಟೆಗಾಗಿ ಸುತ್ತಲಿನ ಗೌಳಿಗರನ್ನು ಬಳಸಿಕೊಳ್ಳುತ್ತಿದ್ದ. ಬೇಟೆಯಾಡಿದ ಕಡವೆಯನ್ನು ತಂದು ಬೆಂಕಿ ಹಾಕಿ ಅದರ ಮೇಲೆ ಕೋಲು ಕಟ್ಟಿ ನೇತು ಹಾಕಿ ಸುಡುತ್ತಿದ್ದ. ಆಸೆಯಿಂದ ಜೋತುಕೊಂಡು ಗೌಳಿಗಳು ಕುಳಿತುಕೊಳ್ಳುತ್ತಿದ್ದರು. ಆ ಕಾಲದಲ್ಲಿ ಕಡವೆ ಬೇಟೆ ನಿಷಿದ್ಧವಾಗಿತ್ತು. ಜನ್ಮದಲ್ಲೊಮ್ಮೆಯಾದರೂ ಕಡವೆ ಮಾಂಸ ತಿನ್ನಬೇಕೆನ್ನುವ ಗೌಳಿಗರ ಬಯಕೆ ಫರ್ನಾಂಡಿಸ್‍ನ ವ್ಯಾಪ್ತಿಯಲ್ಲಿ ಸಾಧ್ಯವಾಗುವಂತದಲ್ಲ. ಅದಕ್ಕಾಗಿ ಅವರು ಫರ್ನಾಂಡಿಸ್‍ನ ಹಂಗಿಗೆ ಒಳಗಾಗಿದ್ದರು. ಅವನ ಹ್ಯಾಟು, ಕೋಟು, ಬೂಟಿನ ಬಿರು ನಡಿಗೆಗೆ ಬಂದೂಕಿನ ನಳಿಕೆಗೆ ಗೌಳಿಗಳು ಥರಗುಟ್ಟುತ್ತಿದ್ದರು. ಕಡವೆ ಪೂರ್ತಿ ಸುಡುವವರೆಗೂ ಗೌಳಿಯ ಹೆಂಗಸರು ಅದರ ಸುತ್ತ ಅರೆ ಬೆತ್ತಲೆಯಾಗಿ ನರ್ತಿಸಬೇಕಾಗುತ್ತಿತ್ತು. ಅವರು ಬಾಗಿ ಬಾಗಿ ನರ್ತಿಸುವಾಗ ಅವರ ಎದೆ ಭಾಗವನ್ನು ಬಾಯಿಬಿಟ್ಟು ಬಾಚಿಕೊಳ್ಳುವಂತೆ ನೋಡುತ್ತಿದ್ದ. ಈ ಕುಚೇಷ್ಟೆ ನೀಡುವ ಅತುಲ್ಯ ಆನಂದಕ್ಕಾಗಿ ತಿಂಗಳಲ್ಲಿ ಒಮ್ಮೆಯಾದರೂ ಗೆಸ್ಟ್‌ಹೌಸ್‍ಗೆ ಬರುತ್ತಿದ್ದ. ಹಾಗಂತ ಆತ ಎಂದೂ ಆ ಹೆಂಗಸರಿಗೆ ಕೈ ಹಾಕಿದವನಲ್ಲ. ಅವನು ತೆವಲುಗಳೇ ಬೇರೆ.

ಕುಣಿದು ಕುಣಿದು ದಣಿದ ಗೌಳಿಗಳು ಆಸೆಗಣ್ಣುಗಳಿಂದ ಕೂರುತ್ತಿದ್ದರು. ಅವರಿಗೆ ಮಾಂಸ ಬೇಕು. ಆದರೆ ಫರ್ನಾಂಡಿಸ್ ಧೂರ್ತನಂತೆ ಒಬ್ಬನೇ ಮಸಾಲೆ ಹಾಕಿ ಪ್ರೈ ಮಾಡಿಕೊಂಡು ಅವರೆದುರೇ ತಿನ್ನುತ್ತಿದ್ದ. ಸುತ್ತ ಕೂತ ಅವರ ಬಾಯಿಯ ಕಟಿಯಿಂದ ತೊಟ್ಟಿಕ್ಕುವ ಜೊಲ್ಲು ಅವನಿಗೆ ಅಪರಿಮಿತ ಆನಂದ ಉಂಟು ಮಾಡುತ್ತಿತ್ತು. ಹಾಗೆ ತಾನು ತಿಂದಾದ ಮೇಲೆ ‘ನೀವಿನ್ನು ಹೋಗಿ ನಾಳೆ ಬನ್ನಿ ಕೊಡುತ್ತೇನೆ ಎನ್ನುತ್ತಿದ್ದ’. ಅವರು ಬರಿಗೈಯಲ್ಲಿ ಮರಳುವುದು ಚರಿತ್ರೆಯ ಹತಾಶ ಪುಟವೊಂದು ಸಾವಿನ ಎವೆ ಕಣ್ಮುಚ್ಚುವಂತೆ ನಿಧಾನವಾಗಿ ಹೊರಳಿದಂತೆ ಕಾಣುತ್ತಿತ್ತು. ಮಾಂಸದಾಸೆಗೆ ಊಟ ಮಾಡದೇ ತಡರಾತ್ರಿವರೆಗೂ ಕೂತಿರುತ್ತಿದ್ದ ಮಕ್ಕಳನ್ನು ಸಂತೈಸುವ ಕಷ್ಟ ದೇವರಿಗೂ ಕಷ್ಟ. ಗೌಳಿಗಳ ಕರಳು ಕಲಸಿ ಹಾಕಿದಂತಾಗುತ್ತಿತ್ತು. ಕಡವೆ ಮಾಂಸ ಮರುದಿನವೇ ಹೆಚ್ಚು ರುಚಿಯಾಗಿರುತ್ತೆ.. ಎಂದು ಮಕ್ಕಳಿಗೆ ನಾಳೆಯ ಕನಸು ಬಿತ್ತಿ ಮಲಗುತ್ತಿದ್ದರು. ಆದರೆ ಮರುದಿನ ಫರ್ನಾಂಡಿಸ್ ಇರುತ್ತಿರಲಿಲ್ಲ. ಬೆಳಗಿನ ಜಾವವೇ ಕುದುರೆಯೇರಿ ಹೋಗಿಬಿಟ್ಟಿರುತ್ತಿದ್ದ. ಅದೆಲ್ಲೋ ದೂರದಲ್ಲಿ ಉಳಿದ ಕಡವೆ ನರಿಗಳಿಗೆ ಹಬ್ಬದೂಟವಾಗುತ್ತಿತ್ತು. ಕಡವೆ ಶ್ರೇಷ್ಠರಿಗೆ ಮಾತ್ರ, ಭಿಕ್ಷುಕರಿಗಲ್ಲಾ ಎಂಬ ನಿಲುವು ಫರ್ನಾಂಡಿಸನದ್ದು. ಅವನು ಇರುವಷ್ಟು ಕಾಲ ಒಂದೇ ಒಂದು ಬಾರಿಯೂ ಮಾಂಸವನ್ನು ಕೊಡಲಿಲ್ಲ.

ಒಂದು ದಿನ ರಾತ್ರಿ. ಗೆಸ್ಟ್‌ಹೌಸಿನಲ್ಲಿ ಗೌಳಿಗಳು ವೈನ್ ನೆತ್ತಿಗೇರಿಸಿಕೊಂಡು ಹಲಲೇ.. ಹಲಲೇ.. ಎಂದು ಹುಯಿಲು ಎಬ್ಬಿಸಿದ್ದರು. ಅಲ್ಲಿ ಫರ್ನಾಂಡಿಸ್ ಇರಲಿಲ್ಲ. ಗೌಳಿಗರ ನರ್ತನ ರಣಕೇಕೆ ಹಾಕುತ್ತಾ ಮುಗಿಲು ಮುಟ್ಟುತ್ತಲಿತ್ತು. ನಡುವೆ ಕಿಚ್ಚು. ಪ್ರಾಣಿಯೊಂದನ್ನು ಅಡ್ಡಲಾಗಿ ನೇತು ಹಾಕಿ ಸುಡಲು ನಾಲಗೆ ಚಾಚುತ್ತಿರುವ ಬೆಂಕಿ. ಪ್ರಾಣಿಯು ಕೊಸರಾಡುತ್ತಲೇ ಇತ್ತು. ಅದರ ಕೂಗಾಟ ಹೆಚ್ಚಾದಂತೆ ಬೆಂಕಿಯೂ ಗಹಗಹಿಸತೊಡಗಿತ್ತು.

***

ನೆತ್ತಿಯ ಮೇಲಿಂದ ಹನಿಗಳು ಬೀಳತೊಡಗಿದ್ದವು. ವಿನುತಾ ತಲೆಯೆತ್ತಿ ನೋಡಿದಳು. ಒಂದು ಕಾಲಕ್ಕೆ ದಟ್ಟವಾಗಿ ಹೆಣೆದುಕೊಂಡು ಛಾವಣಿಯಂತಿದ್ದ ಮರವೀಗ ತುಸು ಸಡಿಲಾಗಿದೆ. ಎಷ್ಟು ಮಳೆ ಸುರಿದರೂ ತೊಟ್ಟಿಕ್ಕದ ಮರ ಈಗ ಕಾಡಿನ ಕಣ್ಣೀರಿನಂತೆ ಹನಿಯುತ್ತಿದೆ. ಇದು ವಾರಗಟ್ಟಲೇ ಹಿಡಿಯುವ ಮಳೆ. ವಾರಗಟ್ಟಲೇ ಸೂರ್ಯನನ್ನೇ ಕಾಣುತ್ತಿರಲಿಲ್ಲ. ಸಂಜೆ ಶುರುವಾದರೆ ಮುಗೀತು. ಜನ ಮನೆಯಿಂದ ಹೊರ ಬರುವುದೇ ದುಸ್ತರ. ಇಂಥದ್ದರಲ್ಲಿ ಎಲ್ಲ ಸಂಪರ್ಕಗಳೂ ಕಡಿದು ಹೋಗುತ್ತವೆ. ವಿನುತಾಳ ಆತಂಕ ಹೆಚ್ಚಾಗತೊಡಗಿತು. ಇನ್ನೇನು ರಾತ್ರಿಯಾಗುತ್ತಾ ಬಂತು. ಇಪ್ಪತ್ತು ವರ್ಷಗಳ ನಂತರ ಕಾಡುದಾರಿ ಹೇಗೆ ನಡೆಸಿಕೊಳ್ಳುತ್ತದೋ..? ದಾರಿತಪ್ಪಿ ತಾನೂ ಗೆಸ್ಟ್‌ಹೌಸ್ ತಲುಪಿದರೇ..? ಹುಲಿ, ಆನೆ, ಕರಡಿ ಇದಿರಾದರೆ.. ಸಿಡಿಲು ಎರಗಿದರೆ.. ಮರ ಕತ್ತರಿಸಿ ಬಿದ್ದರೆ.. ಗುಡ್ಡ ಕುಸಿದರೆ.. ಯಾರಾದರೂ ಆಗಂತುಕ ಎದುರಾದರೆ.. ಎದೆ ಢವಗುಡತೊಡಗಿತು. ಅರ್ಧ ಬದುಕನ್ನು ಕಳೆದಿರುವ ತನ್ನೂರಿನ ಜಾಗವೇ ತನಗೆ ಅಪರಿಚಿತ ಆಗಂತುಕನಂತೆ ತೋರತೊಡಗಿತು. ಕಾಡು ಪ್ರಾಣಿಗಳಿಗಿಂತ ಮನುಷ್ಯರೇ ಅಪಾಯಕಾರಿ ಎನ್ನುತ್ತಿದ್ದ ಅವಳು ಕಾಡು ಪ್ರಾಣಿಗಳ ಬಗ್ಗೆ ಆತಂಕಕ್ಕೊಳಗಾಗಿದ್ದಳು. ತನ್ನನ್ನು ಬದಲಾಯಿಸಿದ ನಾಗರಿಕತೆ ಬಗ್ಗೆ ಮರುಕಪಟ್ಟಳು. ತಡರಾತ್ರಿಗಳಲ್ಲಿ ಜೋರು ಮಳೆಯಲ್ಲಿಯೇ ನೆನೆಯುತ್ತಾ ಬ್ರೂನೀಯ ಜೊತೆ ಆಟವಾಡಿಕೊಂಡು ಕಾಲಿಗೆ ಜಿಗಣಿ ಮೆತ್ತಿಸಿಕೊಂಡು ಮನೆ ತಲುಪುತ್ತಿದ್ದ ಆ ವಿನುತಾ ಕಳೆದುಹೋಗಿದ್ದಳು. ಮಳೆ ಅತಿಯಾದಾಗ ತುಸು ದೂರದಲ್ಲೇ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಹಿದಾಯತ್ ಅವರ ಮನೆಯಲ್ಲಿ ಉಳಿದುಕೊಂಡಿದ್ದಿದೆ. ಆಗ ಚಿಕ್ಕವಳು. ಈಗ ಹಾಗೆ ಮಾಡಲಾದೀತೆ..?

ಹಿದಾಯತ್ ಸಂಬಾವಿತ ಮನುಷ್ಯರು. ನಾವೆಲ್ಲ ಕಾಡಿನಲ್ಲಿ ಸಾಗಿ ಸ್ಕೂಲಿಗೆ ಹೋಗುವ ಬಗ್ಗೆ ಅವರಿಗೆ ಮೆಚ್ಚುಗೆ ಇತ್ತು. ಅವರ ದನದ ಮಾಂಸ ತಿನ್ನುವುದಿಲ್ಲವಾದರೂ ಅವರು ಕೊಟ್ಟಿದ್ದನ್ನು ತಿನ್ನಲು ಮನಸ್ಸಾಗುತ್ತಿರಲಿಲ್ಲ. ‘ಪಾಪ ಹುಡುಗಿ ನೀರು ಕುಡಿದು ಮಲಗಿತು.’ ಎಂದು ಹೆಂಡತಿಯ ಹತ್ತಿರ ಅವರು ಲೊಚಗುಟ್ಟಿದ್ದನ್ನು ಎಷ್ಟೋ ಬಾರಿ ಕೇಳಿ ನನ್ನ ಬಗ್ಗೆಯೇ ಬೇಸರವಾಗುತ್ತಿತ್ತು. ಜೋರು ಮಳೆಯಿಂದಾಗಿ ಮನೆಗೆ ಬರುವದು ತಡವಾದರೆ ಹಿದಾಯತ್‍ರ ಮನೆಯಲ್ಲಿರುತ್ತಾಳೆ ಬಿಡು ಎಂದು ಅಪ್ಪ ಅಮ್ಮ ನಿರಾಳವಾಗುತ್ತಿದ್ದರು. ಬ್ರೂನೀ ವಾಪಾಸ್ಸಾಗಿ ಸುದ್ದಿ ಮುಟ್ಟಿಸುತ್ತಿದ್ದ. ಈಗ ಬ್ರೂನೀ ಇಲ್ಲ. ರಾತ್ರಿ ಕತ್ತಲಲ್ಲಿ ಏನನ್ನೋ ಕಂಡು ಬೊಗಳುತ್ತಿದ್ದನೆಂದರೆ ಅಲ್ಲೇನೋ ಅಪಾಯಕಾರಿಯಾದದ್ದು ಇದೆ ಅಂತಲೇ ಅರ್ಥ. ಅದು ಕಾಡು ಪ್ರಾಣಿಯೋ, ದೆವ್ವವೋ.. ಕಳ್ಳರೋ.. ಅವನ ಕಣ್ಣಿಗೆ ದೆವ್ವಗಳು ಕಾಣುತ್ತವೆ ಎಂಬುದನ್ನು ನಾವು ಬಲವಾಗಿ ನಂಬುತ್ತಿದ್ದೆವು. ಬ್ರೂನಿ ಒಮ್ಮೊಮ್ಮೆ ಕಾಡುಗತ್ತಲೆಯಲ್ಲಿ ಬೊಗಳುತ್ತಾ ದೂರ ದೂರಕ್ಕೆ ಅಲ್ಲಿಂದಿಲ್ಲಿಗೆ ನೆಗೆಯತ್ತಿದ್ದರೆ ಯಾವುದೋ ದೆವ್ವ ಆತನನ್ನು ಆಟ ಆಡಿಸುತ್ತಿದೆ ಎಂದುಕೊಂಡು ಭಯದೊಂದಿಗೆ ಎಂಜಾಯ್ ಮಾಡುತ್ತಿದ್ದೆವು.

ಅದೊಂದು ರಾತ್ರಿ.. ಊಟ ಮಾಡಿ ಮಲಗುತ್ತಿದ್ದೆವು, ಮಲಗಲು ನಮಗೊಂದು ದೆವ್ವದ ಕಥೆ ಬೇಕು. ಅದಕ್ಕಾಗಿ ಅಜ್ಜನನ್ನು ಪೀಡಿಸುತ್ತಿದ್ದೆವು. ಅಜ್ಜ ದಿನಕ್ಕೊಂದು ಕಥೆಯ ಕಥಾ ಕಣಜದಂತಿದ್ದ. ಆದರೆ ಅವತ್ತು ಅಜ್ಜ ಯಾಕೋ ಕಥೆಗಾಗಿ ತಡಕಾಡತೊಡಗಿದ. ಕೊನೆಗೆ ನಿಟ್ಟುಸಿರು ಬಿಟ್ಟು ಕಥೆ ಹೇಳತೊಡಗಿದ. ಅವನ ದಾಟಿ ಎಂದಿನಂತಿರಲಿಲ್ಲ. ಧ್ವನಿಯಲ್ಲಿ ಖೇಧವಿತ್ತು. ನಾವು ಪ್ರಶ್ನಿಸ ಹೋಗಲಿಲ್ಲ. ಅದು ಧರಣಿ ಮಂಡಲದ ಉಡುಚಿಯ ಕಥೆ.

ಸೂಪಾ ಡ್ಯಾಮು ಕಟ್ಟಲು ರಾಯಚೂರು, ಯಾದಗಿರಿ, ಕೊಪ್ಪಳ ಕಡೆಯ ಜನರನ್ನು ಕುರಿಗಳಂತೆ ಲಾರಿಗಳಲ್ಲಿ ತುಂಬಿಸಿಕೊಂಡು ತರುತ್ತಿದ್ದರು. ಅವರಿಗೆ ಅಲ್ಲಲ್ಲಿ ಟೆಂಟ್ ಹಾಕಿ ಕೊಟ್ಟಿದ್ದರು. ನಮ್ಮ ಮನೆಯ ಸಮೀಪದಲ್ಲಿಯೇ ಐದಾರು ಟೆಂಟುಗಳು.. ಒಂದರಲ್ಲಿ ಉಡುಚಿ ಅವಳ ತಂದೆ ತಾಯಿ ಮತ್ತವಳ ಸಣ್ಣ ಮಗ. ಮಕ್ಕಳ ಸಮೇತ ಎಲ್ಲರೂ ಜಾತ್ರೆಗೆ ಹೊರಟವರಂತೆ ಗುಳೆ ಹೊರಟು ಬಂದಿದ್ದರು. ಕಡಿಮೆ ಕೂಲಿಗೆ ಮನುಷ್ಯರು ಸಿಗುವುದು ಈ ಭಾಗದಲ್ಲಿಯೇ ಎಂಬುದು ಈಗಲೂ ಜನಜನಿತ.

ಆಕೆಯ ಹೆಸರು ಉಡುಚವ್ವ. ಎಲ್ಲರೂ ಉಡುಚಿ ಅಂತಲೇ ಕರೆಯುತ್ತಿದ್ದರು. ಒಂದು ಹೆತ್ತ ಮೇಲೆ ಗಂಡ ಬಿಟ್ಟು ಹೋಗಿದ್ದ. ಯಾಕೆ ಅಂತ ಅಜ್ಜ ಕೇಳಿದ್ದಾಗ ‘ಯಾಕೋ ಏನ್ರಿ ಬ್ಯಾಡಾತು ಹೋದಾ ಕಾಣ್ತೈತಿ..’ ಎಂದು ನಗುತ್ತಲೇ ನುಡಿದಿದ್ದಳು. ಅವಳಿಗದು ಗಂಭೀರವಾದ ವಿಷಯವಾಗಿರಲಿಲ್ಲ. ಉಡುಚಿಯ ಮೈಯಲ್ಲಿನ್ನು ಕಾವು ಇತ್ತು. ಜೋಡು ಗುಡ್ಡದ ಮಧ್ಯದಿಂದ ಝರಿಯೊಂದು ಸಾಗಿ ಬರುವಂತೆ ಅವಳೆದೆಯ ಸೀಳು ನಿಚ್ಚಳವಾಗಿತ್ತು. ಆ ಝರಿಯಲ್ಲಿ ಮೈದೊಳೆಯಲು ಇಚ್ಚಿಸದ ಗಂಡಸರಿರಲಿಲ್ಲ. ಆದರೂ ಗಠಾಣಿ ಉಡುಚಿಯ ಸುದ್ದಿಗೆ ಹೋಗುವುದು ಚಿಣಗಿ ಹಾವಿನ ಸಂಗ ಮಾಡಿದಂತೆ ಎಂಬ ಎಚ್ಚರವಿತ್ತು.

ಡ್ಯಾಮಿನ ಕೆಲಸ ಜೋರಾಗತೊಡಗಿತು. ಒಂದು ದಿನ ಶೂಟಿಂಗ್ ಮಾಡಲು ಸಿನಿಮಾ ಮಂದಿ ಬೆಂಗಳೂರಿನಿಂದ ಬಂದಿಳಿದರು. ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಅದು. ನಮ್ಮ ಮನೆಯ ಕಣ್ಣಳತೆಯಲ್ಲಿ ಮನೋಹರವಾದ ಝರಿಯೊಂದು ಬೆಟ್ಟ ಸೀಳಿಕೊಂಡು ಹರಿದು ಬರುತ್ತಿತ್ತು. ಅದನ್ನು ನಾವು ನದಿಯಂತಲೇ ಕರೆಯುತ್ತಿದ್ದೆವು. ಅಲ್ಲಿ ಸಿಗುತ್ತಿದ್ದ ದಾಂಡೀ.. ವಾಳೈ..ಡೆಕೂಳ್ ಮೀನಿನ ರುಚಿ ಜಗತ್ತಿನ ಯಾವ ಮೀನಿಗೂ ಇಲ್ಲವೇನೋ ಅನ್ನುವಷ್ಟು ಅದು ನಮ್ಮ ಕೋಶದೊಳಗೆ ಜೀವಂತವಾಗಿದೆ. ಈ ಝರಿಯ ಕಾರಣಕ್ಕಾಗಿ ಸಿನಿಮಾದವರು ಇಲ್ಲಿಯೇ ಟೆಂಟ್ ಹಾಕಿದರು. ಉಡುಚಿಗೆ ಶೂಟಿಂಗ್ ನೋಡುವ ಆಸೆ. ಅವರೆಲ್ಲರೂ ದೇವಲೋಕದಿಂದ ಇಳಿದು ಬಂದವರಂತೆ ಈ ಬಯಲುಸೀಮೆಯ ಹೆಂಗಸಿಗೆ ಕಂಡುಬಂದರು. ಅವಳ ಅಮಾಯಕತೆಯನ್ನು ಒಬ್ಬ ಗುರುತಿಸಿದ. ನೆಪ ಮಾಡಿಕೊಂಡು ಟೆಂಟ್ ಹೂಡತೊಡಗಿದ. ಸಿನಿಮಾ ಮನುಷ್ಯನೊಬ್ಬ ತನ್ನ ಟೆಂಟ್‍ಗೆ ಬರುವುದು ಜಗದ್ಗುರುಗಳು ದಲಿತರ ಮನೆಗೆ ಬಂದಂತಹ ಸೌಭಾಗ್ಯವೆಂದೇ ಭಾವಿಸಿದಳು. ಕಾಲ ಸರಿಯತೊಡಗಿತು. ಜನರ ಬಾಯಿಯಲ್ಲಿ ಮಾತು ಹರಿದಾಡತೊಡಗಿದವು.

ಅದೊಂದು ದಿನ. ಉಡುಚಿ ಟೆಂಟ್‍ಗೆ ವಾಪಾಸ್ಸಾಗಲಿಲ್ಲ. ವಯಸ್ಸಾದ ತಂದೆ-ತಾಯಿ, ಪುಟ್ಟ ಮಗ ಬಾಗಿಲು ತೆರೆದು ಕಾಡಿನುದ್ದಕ್ಕೂ ಕಣ್ಣು ಹಚ್ಚಿ ಕೂತರು. ಯಾರಿಗೂ ಸುದ್ದಿಯಿಲ್ಲ. ಆ ಆಸಾಮಿಯ ಪತ್ತೆಯೂ ಇಲ್ಲ. ಇಬ್ಬರೂ ಓಡಿ ಹೋದರು ಎಂದು ಜನ ಮಾತನಾಡಿಕೊಳ್ಳತೊಡಗಿದರು. ಕೆಲ ದಿನಗಳ ನಂತರ ಆ ಆಸಾಮಿಯ ಹೆಣ ಪತ್ತೆಯಾಯಿತು. ಹಾಗಾದರೆ ಉಡುಚಿ..? ಡ್ಯಾಮಿಗೆ ಹಾರಿಕೊಂಡಂಳೆಂದು... ಆಯತಪ್ಪಿ ಬಿದ್ದು ಸತ್ತಳೆಂದು... ಡ್ಯಾಮಿಗೆ ಬಲಿ ಕೊಟ್ಟರೆಂದು... ಹೊಸ ಸುದ್ದಿಗಳು ರೆಕ್ಕೆಪುಕ್ಕ ಹಚ್ಚಿಕೊಂಡವು. ಮಗಳನ್ನು ನೆನೆದು ಹೆತ್ತವರ ಕಣ್ಣೀರು ಬತ್ತಿಹೋದವು. ನಂತರದ ಕಾಲದಲ್ಲಿ ಅವರಿಗೆ ಕಂಡಳೆಂದು.. ಇವರಿಗೆ ಕಂಡರೆಂಬ ಸುದ್ದಿ ಕೇಳಬರತೊಡಗಿದವು. ಆ ಆಸಾಮಿಯನ್ನು ಬಲಿತೆಗೆದುಕೊಂಡಿರುವುದು ಉಡುಚಿಯ ಆತ್ಮವೇ ಎಂಬ ಕಲ್ಪನೆ ದೃಢವಾಗತೊಡಗಿತು. ಈ ಕಾಡಿನಲ್ಲಿ ಕದ್ದು ಕೂಡಬಯಸುವವರನ್ನು ಉಡುಚಿ ಕಾಡುತ್ತಾಳೆ ಎಂಬ ನಂಬಿಕೆ ಜನರಲ್ಲಿ ಪ್ರಚಲಿತವಾಯಿತು.

ಗರತಿ ಉಡುಚಿ ಡ್ಯಾಮಿಗೆ ಹಾರಿದ್ದು ಮಾನಕ್ಕೆ.. ಎಂದು ಹೇಳಿ ಅಜ್ಜ ಕಥೆ ಮುಗಿಸಿದ. ಅಷ್ಟರಲ್ಲಿ ಬ್ರೂನೀ ಬೊಗಳುತ್ತಾ ಎಗರಾಡತೊಡಗಿದ. ಅದರ ರಂಪ ಕಂಡು ಮನೆ ಹತ್ತಿರ ಉಡುಚಿಯ ರೂಹು ಕಂಡಿರಬಹುದೆಂದು ಅನಿಸಿ ನಮ್ಮ ನಿದ್ದೆ ಹಾರಿ ಹೋಯಿತು. ಅಲ್ಲಿಂದಿಲ್ಲಿಗೆ ಇಲ್ಲಿಂದಿಲ್ಲಿಗೆ ಬ್ರೂನೀಯನ್ನು ಜಿಗಿಯುವಂತೆ ಮಾಡತ್ತಾ ಉಡುಚಿ ಮಗನೊಂದಿಗೆ ಆಟವಾಡುವಂತೆ ಆಡುತ್ತಾಳೆ ಎಂದು ಅಜ್ಜ ಹೇಳಿದನಾದರೂ ನಮ್ಮ ಭಯ ಕಡಿಮೆಯಾಗಿರಲಿಲ್ಲ. ಅಷ್ಟರಲ್ಲಿ ಕೊಟ್ಟಿಗೆಯಲ್ಲಿ ಹಸುವಿನ ಚೀರಾಟ ಕೇಳತೊಡಗಿ ಬ್ರೂನೀ ಜೋರಾಗಿ ಬೊಗಳತೊಡಗಿದ. ನಾವು ಧುತ್ತನೇ ಎದ್ದು ಲಾಟೀನು ಹಚ್ಚಿ ಕಿಟಕಿ ತೆರೆದರೆ ಗುರ್ರ್.. ಎಂಬ ಧ್ವನಿ. ಅರೆ ಬೆಳಕಿನಲ್ಲಿ ಬಿರಿಬಿರಿ ಕಣ್ಣುಗಳು. ಮೈ ಥರಗುಟ್ಟಿಹೋಯಿತು. ಕರುವಿನ ಗಂಟಲು ವ್ಯಾಘ್ರನ ಬಾಯಲ್ಲಿತ್ತು. ಬಾಯಿಯಿಂದ ರಕ್ತ... ಕರುವಿನ ಕಣ್ಣಲ್ಲಿ ನೀರು.. ಬ್ರೂನೀ ಬೊಗಳುತ್ತಿದ್ದಂತೆ ವ್ಯಾಘ್ರ ಹಸುವನ್ನು ಎತ್ತಿಕೊಂಡು ಹೋಯಿತು. ಬ್ರೂನೀ ಬೊಗಳುತ್ತಿದ್ದಿದ್ದು ಹುಲಿಯನ್ನು ಕಂಡು ಎಂಬುದು ಮನವರಿಕೆಯಾಗಿತ್ತು.

***

ಈಗ ಬ್ರೂನೀ ಇದ್ದಿದ್ದರೆ ಫರ್ನಾಂಡಿಸ್‍ಗೆ ಅಷ್ಟು ಅಂಜಬೇಕಾಗಿರಲಿಲ್ಲ. ಹಿದಾಯತ್‍ರ ಮನೆಯಲ್ಲಿ ಉಳಿದುಕೊಂಡರೆ ಹೇಗೆ ಎಂಬ ಯೋಚನೆ ಬಂದಿತಾದರೂ ಈಗಿನ ಪರಿಸ್ಥಿತಿಗಳು ತುಂಬಾ ಭಿನ್ನವಾಗಿದ್ದವು. ಮಂಗಳೂರು ಕಡೆಗಿನ ಪ್ರಭಾವ ದಾಂಡೇಲಿಯನ್ನು ಆವರಿಸಿತ್ತು. ಸಾಹೇಬರ ಹುಡುಗನೊಬ್ಬ ಘೋಷಣೆ ಕೂಗಲಿಲ್ಲ ಎಂಬ ಕಾರಣಕ್ಕಾಗಿ ಶಾಶ್ವತ ಮೂಕನಾಗಿ ಹೋಗಿದ್ದ. ಹಿಂದೂಗಳ ಮನೆಯ ಮೇಲೆ ಭಗವಾಧ್ವಜ, ಗೋಡೆಗಳು ಕೇಸರಿ ಬಣ್ಣಕ್ಕೆ ತಿರುಗಿದ್ದವು. ಹಾಗೆಯೇ ಮುಸಲ್ಮಾನರ ಮನೆಗಳು ಹಸಿರು ಬಾವುಟ... ಗೋಡೆ ಬಣ್ಣ ಬದಲಿಸಿಕೊಂಡಿದ್ದವು. ಅಕ್ಕಪಕ್ಕ ಜೀವಿಸಿದವರು ಇದಿರು-ಬದಿರಾಗಿದ್ದರು.

ಈ ಸನ್ನಿವೇಶದಲ್ಲಿ ಹಿದಾಯತ್‍ರ ಮನೆಗೆ ಹೋಗುವದೋ ಬೇಡವೋ ಎಂಬುದನ್ನು ನಿರ್ಧರಿಸಲಾಗಲಿಲ್ಲ. ಹಿದಾಯತ್‍ರ ಮನೆ ಮೊದಲಿನ ಸುಣ್ಣದ ಬಣ್ಣದಲ್ಲೇ ಇತ್ತು. ಏನಾದರೂ ಆಗಲಿ ಎಂದು ಮರದಡಿಯಿಂದ ಹೆಜ್ಜೆ ಕಿತ್ತಳು. ಆಗಿನ ದಾರಿ ಜಾಡು ಹಿಡಿದು ನಡೆಯತೊಡಗಿದಳು. ಇಪ್ಪತ್ತು ವರ್ಷಗಳಲ್ಲಿ ಕಾಡಿನ ರಚನೆ ಹೇಗೆಲ್ಲಾ ಬದಲಾಗಿರಬಹುದು ಎಂಬ ಆತಂಕ ಅವಳಿಗಾದರೆ ಪಾದಗಳು ತಮ್ಮ ದಾರಿ ತಾವು ಕಂಡುಕೊಳ್ಳತೊಡಗಿದವು.

ಐದಾರು ಗೌಳಿಗರ ಜೋಪಡಿ ಮತ್ತು ತಮ್ಮದೊಂದು ಹೆಂಚಿನ ಮನೆ. ಇದು ಊರು. ಜೊಯಿಡಾದ ನಕಾಶೆಯಲ್ಲಿ ಸಣ್ಣ ಚುಕ್ಕೆಯಂತೆ ಕಾಣುತ್ತದೆ ಕೊನಡೆ. ಅವಳ ಗೆಳತಿಯರು ಅದನ್ನು ಕೆನಡಾ ಎಂದು ನಕ್ಕಿದ್ದುಂಟು. ಈಗ ಊರಲ್ಲಿ ಯಾರು ಯಾರು ಇದ್ದಾರೋ ಇಲ್ಲವೋ.. ಮನೆಯಲ್ಲಿ ಅತ್ತೆಯೊಬ್ಬಳೆ. ಯಾರೂ ದಿಕ್ಕಿಲ್ಲದ ಅತ್ತೆ ನಮ್ಮೊಂದಿಗೆ ಬದುಕು ಕಳೆದವಳು. ಯಾರ ಹಂಗಿಲ್ಲದವರಿಗೆ ಯಾವ ಭಯ. ತನ್ನ ಪಾಡಿಗೆ ತಾನು ಬದುಕಿದ್ದವಳಿಗೆ ಅರಣ್ಯ ಇಲಾಖೆಯವರು ಪದೇ ಪದೇ ಕಿರುಕುಳ ಕೊಡುತ್ತಿದ್ದುದರ ಬಗ್ಗೆ ಪತ್ರ ಬರೆದಿದ್ದಳು. ಇದರಿಂದ ಗೌಳಿಗರು ರೋಸಿ ಹೋಗಿದ್ದರು. ಎಲ್ಲರನ್ನು ಒಕ್ಕಲೆಬ್ಬಿಸುವ ಹುನ್ನಾರವದು. ಪ್ರವಾಸೋದ್ಯಮ ಅಭಿವೃದ್ಧಿಯ ನೆಪದಲ್ಲಿ ಸರಕಾರವೇ ರೆಸಾರ್ಟ್ ನಿರ್ಮಿಸುತ್ತಿದೆ. ನಿಸರ್ಗ ರಮಣೀಯ ಸ್ಥಳದ ಮೇಲೆ ಲಾಗಾಯ್ತಿನಿಂದಲೂ ಕಣ್ಣಿಟ್ಟಿದ್ದ ಸೋನಾರರು ನಾವು ಭೂಮಿ ಕೊಡುವುದಿಲ್ಲ ಎಂಬುದು ಗೊತ್ತಾದಾಗ ಈಗ ಸರ್ಕಾರದ ಮೂಲಕವೇ ಗುತ್ತಿಗೆ ಪಡೆದು ಡೆವಲೆಪ್ ಮಾಡಲು ಹಾತೊರೆಯುತ್ತಿದ್ದಾರೆ. ಇದು ಅತ್ತೆಗೆ ಗೊತ್ತಾದಂತೆ ಗೌಳಿಗರಿಗೂ ಅರ್ಥವಾಗಿದೆ. ಆದರೆ ಅಮಾಯಕ ಗೌಳಿಗಳು ಹಣದಾಸೆಗೆ ಈಗಾಗಲೇ ಬೇರೆ ಊರು ನೋಡಿಕೊಂಡಾಗಿದೆ. ಆದರೆ ಅತ್ತೆಯ ಹಟಕ್ಕಿಂತ ಆಕೆಯ ಅಲ್ಲಿನ ಬದುಕಿನ ಘಟನೆಗಳು ಭಾವಕೋಶದಲ್ಲಿ ಇನ್ನಿಲ್ಲದಂತೆ ಹೆಣೆದುಕೊಂಡಿವೆ. ಅವುಗಳನ್ನು ಒಕ್ಕಲೆಬ್ಬಿಸುವುದು ಯಾವ ಸರ್ಕಾರಕ್ಕೆ ಸಾಧ್ಯವಾದೀತು. ಈ ಬಾರಿ ಅತ್ತೆಯನ್ನು ಹೇಗಾದರೂ ಮನವೊಲಿಸಿ ತನ್ನೊಂದಿಗೆ ಕರೆದುಕೊಂಡು ಹೋಗಬೇಕು. ಆದರೆ ಕಾಡು, ಝರಿ, ಈ ಮರಗಳು, ಪ್ರಾಣಿಗಳೊಂದಿಗೆ ಆತ್ಮಸಾಂಗತ್ಯ ಸಾಧಿಸಿರುವ ಅತ್ತೆಯನ್ನು ಒಪ್ಪಿಸುವುದು ಅಷ್ಟು ಸರಳವಾಗಿರಲಿಲ್ಲ. ಗೌಳಿಗಳು ಸೀಜನ್‍ಗೊಮ್ಮೆ ದನ ಹೊಡೆದುಕೊಂಡು ಅಲ್ಲಿಗೆ ಬರುತ್ತಾರೆ. ಆಗಾಗ ಬರುವ ಫಾರೆಸ್ಟ್ ಗಾರ್ಡ್‍ಗಳು, ಮೋಜಿಗೆಂದು ಬರುವ ಹುಡುಗರ ಗುಂಪು ಆ ಕ್ಷಣದ ಕಾಲಕ್ಷೇಪವಷ್ಟೇ.. ಆದರೆ ಅವಳು ತನ್ನನ್ನು ಏಕಾಂಗಿಯೆಂದು ಭಾವಿಸಿಯೇ ಇಲ್ಲವೇನೊ ಎನಿಸುತ್ತದೆ. ಅವಳಿಗೆ ಕೆಲವರ್ಷಗಳಿಂದ ಭರಮಲಿಂಗನ ಸಹಚರ್ಯವೂ ಒದಗಿತ್ತು. ಗೌಳಿ ಜನೀಯ ಮಗಳು ರೂಪ್ಲೀಯನ್ನು ಮದುವೆಯಾಗಿದ್ದ ಭರಮಲಿಂಗ. ಕೆಲ ದಿನಗಳ ಸಂಸಾರದ ನಂತರ ರೂಪ್ಲೀ ಮ್ಯಾನ್‍ಪವರ್ ಸಪ್ಲೈಯರ್ ಮುನೀರ್‍ನ ಜೊತೆಗೆ ಓಡಿ ಹೋಗಿದ್ದಳು. ಜನೀ ಭರಮಲಿಂಗನನ್ನು ಮನೆಯಿಂದ ಹೊರಹಾಕಿದ್ದಳು. ಅರೇ ಲಾಡೂ... ಎಂಬ ಜನೀಯ ಹೀಯಾಳಿಕೆಯನ್ನು ಸಹಿಸದ ಭರಮಲಿಂಗ ಕಷ್ಟಕೋಟಲೆಗಳಿಂದ ಮುಕ್ತನಾದವನಂತೆ ಜನೀಯ ಮನೆಬಿಟ್ಟು ಅತ್ತೆಯ ಆಶ್ರಯ ಪಡೆದಿದ್ದ.

ರೂಪ್ಲೀ ಚೊಲಾಕೀನ.. ಆದ್ರ ಜನೀ ಮಾಟಾ ಮಾಡ್ಸೀ ಮುನೀರ್‍ಗ ಹಾಕಿಕೊಟ್ಲು... ಬಾಡ ತಿನ್ನಾಕಿ.. ಅಕಿ.. ಎಂದು ಯಬಡನಂತೆ ಭರಮಲಿಂಗ ಅತ್ತೆಯೊಂದಿಗೆ ಬಡಬಡಿಸಿದ್ದನ್ನು ಅವನ ಅಮಾಯಕತೆಯ ಬಗ್ಗೆ ಅತ್ತೆ ಪತ್ರದಲ್ಲಿ ಬರೆದಿದ್ದಳು. ಅದರಿಂದ ಅವನ ಬಗ್ಗೆ ಅತ್ತೆಗಿರುವ ಕಕ್ಕುಲಾತಿ ಎಷ್ಟೆಂದು ತಿಳಿದುಬರುತ್ತಿತ್ತು.

ಅಂದ ಹಾಗೆ ಭರಮಲಿಂಗ ಉಡುಚಿಯ ಮಗ. ಸೂಪಾ ಡ್ಯಾಮ್ ಮುಗಿಯುವಷ್ಟರಲ್ಲೇ ಅವನ ಅಜ್ಜ ಅಜ್ಜಿ ತೀರಿ ಹೋಗಿದ್ದರು. ನಂತರ ಅಲ್ಲಿಯೇ ಉಳಿದ ಭರಮಲಿಂಗ ರೂಪ್ಲೀಯನ್ನು ಜೋಡು ಮಾಡಿಕೊಂಡಿದ್ದ. ಅವನಿಗೊಂದು ಮರು ಮದುವೆ ಮಾಡುವ ಬಗ್ಗೆ ಅದಕ್ಕೆ ಬೇಕಾಗುವ ಹಣದ ಬಗ್ಗೆ ಅತ್ತೆ ಪತ್ರದಲ್ಲಿ ಬರೆದಿದ್ದಳು. ಭರಮಲಿಂಗನದು ಯಾವ ಜಾತಿಯೋ ಆದರೆ ಅವನಿಗೆ ಗೌಳಿಗರು ಮಾತ್ರ ಹೆಣ್ಣು ಕೊಡಬಲ್ಲವರಾಗಿದ್ದರು. ಈ ಗೌಳಿಗರಲ್ಲಿ ಎರಡನೇ ಬಾರಿ ಮದುವೆಯಾಗುವ ಹೆಣ್ಣುಗಳಿಗೆ ಹೆಚ್ಚಿನ ಬೆಲೆ. ಶೀಲಕ್ಕಿಂತ ಬದುಕಿನ ಅನುಭವವೇ ಮುಖ್ಯ ಎನ್ನುವ ಶಿಷ್ಟಾಚಾರವದು.

ಹಣದ ವಿಚಾರ ನೆನಪಾಗುತ್ತಲೇ ತಕ್ಷಣವೇ ವಿನುತಾ ಹೆಗಲು ಮುಟ್ಟಿಕೊಂಡಳು. ಹಳ್ಳದಲ್ಲಿ ಕಾಲು ಜಾರಿದ್ದಾಗಲೇ ವೆನಿಟಿಬ್ಯಾಗು ತೇಲಿ ಹೋಗಿತ್ತು. ಆತಂಕದಲ್ಲಿ ಹಾಗೆಯೇ ಬಂದಿದ್ದ ವಿನುತಾ ಲೊಚಗುಟ್ಟಿದಳು. ಆದರೆ ಹಿಂದಕ್ಕೆ ಹೋಗುವ ಧೈರ್ಯ ಮಾಡಲಿಲ್ಲ. ಆ ತಕ್ಷಣಕ್ಕೆ ಪಕ್ಕದ ಪೊದೆಯಲ್ಲಿ ಮಿಣುಕು ಹರಿದಂತಾಗಿ ಬೆಚ್ಚಿ ನೋಡಿದಳು. ಕ್ಷಣಗಳಲ್ಲೇ ಸರಸರನೇ ಬೆಂಕಿಯ ಜ್ವಾಲೆಯೊಂದು ಮುಗಿಲಿಗೆ ಚಾಚಿಕೊಂಡಿತು. ಅದನ್ನು ಕಂಡು ಬಾಯಿ ತೆರೆದ ವಿನುತಾ ಆ ಚಳಿಯಲ್ಲಿಯೂ ಬೆವರಿದಳು. ಆ ಕ್ಷಣಕ್ಕೆ ಅವಳಿಗೆ ಫರ್ನಾಂಡಿಸ್ ಮತ್ತು ಉಡುಚಿ ಒಟ್ಟಿಗೆ ನೆನೆಪಾದರು. ದೂರದಲ್ಲಿ ದೀಪದ ಮಿಣುಕು. ಇನ್ನೇನು ಮನೆ ಹತ್ತಿರದಲ್ಲೇ ಇದೆ. ದುಗುಡದಿಂದ ಹೆಜ್ಜೆ ಹಾಕತೊಡಗಿದಳು. ದೂರದ ಮನೆಯೊಂದರಿಂದ ಹೆಣ್ಣಿನ ನರಳುವ ಧ್ವನಿ ನಿಧಾನಕ್ಕೆ ಹೆಚ್ಚಳವಾಗುತ್ತಾ ಕಿವಿಗೆ ಹತ್ತಿರವಾಗುತ್ತಿತ್ತು. ವಿನುತಾ ಓಡ ತೊಡಗಿದಳು. ಒಂದೇ ಗುಕ್ಕಿಗೆ ಮನೆ ಮುಂದೆ ನಿಂತಳು. ಮನೆಯೊಂದನ್ನು ಬಿಟ್ಟು ಸುತ್ತಲೂ ನೀರು ತುಂಬಿಕೊಂಡಿದೆ. ಯಾವ ಗೌಳಿಗಳ ಮನೆಯೂ ಕಾಣುತ್ತಿಲ್ಲ. ಎಲ್ಲಾ ದಿಕ್ಕುಗಳಲ್ಲೂ ರೆಸಾರ್ಟ್ ತಲೆ ಎತ್ತಿ ನಿಂತಿದೆ. ಇವಳು ಗರಬಡಿದಂತೆ ನಿಂತಿದ್ದಾಳೆ. ಪ್ರತಿ ದಿಕ್ಕಿನಿಂದಲೂ ಆ ನರಳುವ ಧ್ವನಿ ನಿಧಾನಕ್ಕೆ ಹೆಚ್ಚುತ್ತಿದೆ. ಕಿವಿಯನ್ನು ಅಪ್ಪಳಿಸುತ್ತಿದೆ. ದಬದಬನೇ ಕದ ಬಡಿಯತೊಡಗಿದಳು. ಕದ ತೆರೆಯಿತು. ನೋಡಿದರೆ ಅತ್ತೆ ನಿರುಮ್ಮಳಗಾಗಿ ನಿಂತಿದ್ದಾಳೆ. ಅವಳ ಮುಖದಲ್ಲಿ ಕುತೂಹಲವಾಗಲಿ ಆನಂದವಾಗಲಿ ಕಾಣುತ್ತಿಲ್ಲ. ಒಳಗೆ ಕರೆಯುತ್ತಿಲ್ಲ. ವಿನುತಳ ದೃಷ್ಟಿ ನಿಧಾನಕ್ಕೆ ಅತ್ತೆಯ ಹೆಗಲ ಕಡೆ ಹೊರಳಿತು. ಅವಳ ಹೆಗಲಲ್ಲಿ ವಿನುತಳ ಬ್ಯಾಗ್..! ವಿನುತಳಿಗೆ ಮಾತನಾಡಲು ಯತ್ನಿಸಿದರೂ ಧ್ವನಿ ಹೊರಡುತ್ತಿಲ್ಲ. ಎದೆ ಢವಗುಡುತ್ತಿದೆ. ಕಣ್ಣು ಬಾಯಿ ಅಗಲವಾಗುತ್ತಿವೆ. ದಢಾರ್.. ಎಂದು ಬಾಗಿಲು ಮುಚ್ಚಿಕೊಂಡಿತು. ವಿನುತಾ ಕಿಟಾರನೇ ಕಿರುಚಿಕೊಂಡಳು.

***

ಗಡಿಯಾರ 5 ಗಂಟೆ ತೋರಿಸಿತ್ತು. ನಸುಕು ಹರಿಯತೊಡಗಿತ್ತು. ನೀರು ಕಾಯಲಟ್ಟು ವಿನುತಾ ಬ್ಯಾಗ್ ಹೊಂದಿಸತೊಡಗಿದಳು. ಬೆಳಗಿನ ಕೆಟ್ಟ ಕನಸು ಅವಳಲ್ಲಿ ಆತಂಕವುಂಟು ಮಾಡಿತ್ತು. ಅತ್ತೆಯನ್ನು ನೋಡಲು ತಕ್ಷಣವೇ ಹೊರಟು ನಿಂತಳು.

ವಸೋಡಾ ಕ್ರಾಸ್‍ಗೆ ಬಂದಿಳಿದಾಗ ಸೂರ್ಯ ನೆತ್ತಿಗೆ ಬಂದಿದ್ದ. ಅಲ್ಲಲ್ಲಿ ಚದುರಿದ ಮೋಡಗಳು. ಹಾದಿ ಸರಿದು ಆ ಮರದ ಅಡಿ ಬಂದಳು. ಮಳೆಯ ಚಾಟಿಗೆ ನಿಲ್ಲುತ್ತಿದ್ದ ಮರವನ್ನೊಮ್ಮೆ ತಲೆಯೆತ್ತಿ ನೋಡಿದಳು. ಅದರ ತುಂಬಾ ಸೂರ್ಯ ಕಣ್ಣಾಡಿಸುತ್ತಿದ್ದ. ಕಾಡು ಅಷ್ಟು ಬದಲಾಗಿದೆ. ಕಣ್ಣು ಹಿದಾಯತ್‍ರ ಮನೆ ಕಡೆಗೆ ಹೊರಳಿದವು. ಆ ಗೋಡೆಗಳು ಇನ್ನೂ ಅಚ್ಚಬಿಳಿಯಾಗಿವೆ. ಹಾಗೆಯೇ ಸುತ್ತ ಕಣ್ಣಾಡಿಸುತ್ತಾ ಸಾಗತೊಡಗಿದಳು. ದಾರಿ ಇಷ್ಟಗಲವಾಗಿದೆ. ಎಲ್ಲೋ ಏರಿ ಹತ್ತುತ್ತಲೇ ಸಾವಕಾರ್ ಎನ್ನುವ ಧ್ವನಿ ಕೇಳಿತು. ತಲೆ ಮೇಲೆ ಸೆಣಬಿನ ಚೀಲ ಹೊತ್ತು ವಿಶ್ವಾಸ ನಿಂತಿದ್ದ. ಅವನ ಕೂದಲು ಗಡ್ಡ ನರೆತಿದ್ದವು. ತುಸು ದೂರದಲ್ಲಿ ನಿಂತ ಹೆಂಗಸೊಬ್ಬಳು ಬಾಗಿ ನಮಸ್ಕರಿಸಿದಳು. ಅವಳು ಅವನ ಹೊಸ ಹೆಂಡತಿ ಎಂದು ಗೊತ್ತಾಯಿತು. ಊರು ಮೊದಲಿನಂತಿಲ್ಲ. ಈಗ ಹುಲಿಯೂ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ. ಎಂದಿನಂತೆ ಹುಷಾರು ಎಂದು ಕಳಕಳಿ ವ್ಯಕ್ತಪಡಿಸಿ ಕಳಿಸಿದ.

ತುಸು ದೂರದಿಂದಲೇ ಮನೆ ಬಾಗಿಲು ನಿಚ್ಛಳವಾಗಿ ಕಂಡಿತು. ನಿತ್ಯ ಹೂವು ಬಿಟ್ಟು ತೋಳು ಚಾಚಿಕೊಂಡು ಮನೆಗೆ ಮರೆಯಾಗಿದ್ದ ಹೂವಿನ ಗಿಡ ಒಣಗಿ ನಿಂತಿತ್ತು. ಅತ್ತೆ ಬಾಗಿಲಲ್ಲೇ ಕೂತು ಕಾಯುತ್ತಿದ್ದ ಅತ್ತೆ ನನ್ನ ಕಾಣುತ್ತಲೇ ಎದ್ದು ನಿಂತಳು. ಅವಳ ಮುಖ ಅರಳಿತು. ಕಣ್ಣುಗಳು ಭಾವುಕವಾದವು. ಏನೊಂದು ಮಾತನಾಡದೇ ಗಟ್ಟಿಯಾಗಿ ಅಪ್ಪಿಕೊಂಡಳು. ಆ ಅಪ್ಪುಗೆಯೇ ಎಲ್ಲ ಮಾತುಗಳನ್ನು ಆಡಿಕೊಂಡಿತು. ಅಲ್ಲೇ ಗೇರು ಆಯುತ್ತಿದ್ದ ಭರಮಲಿಂಗನು ಬಂದು ಸೇರಿದ. ತುಸು ದೂರದಲ್ಲೇ ಇದ್ದ ಅಪ್ಪನ ಸಮಾಧಿ ಕಡೆಗೆ ಹೊರಟೆವು. ಅಲ್ಲಿ ಎಂದೂ ತಪ್ಪದ ಹೂಗಳು. ಅತ್ತೆಯ ಶ್ರದ್ಧೆ ಎಷ್ಟೂ ಮುಕ್ಕಾಗಿಲ್ಲ.

ರಾತ್ರಿಯಾಗುವರೆಗೂ ಮಾತೇ ಮಾತು. ಅತ್ತೆ ಎಷ್ಟು ಮಾತನಾಡಿದಳು. ನನಗಾಗಿ ಅಕ್ಕಿರೊಟ್ಟಿ, ಕಾಡುಗೆಣಸು, ಬಾಳೆದಿಂಡಿನ ಪಲ್ಲೆ ಜೊತೆಗೆ ಪಾತೋಳಿ, ಮೀನು ಸಾರು. ಎಲ್ಲ ಎಷ್ಟು ಪ್ರೀತಿಯಿಂದ ಮಾಡಿಟ್ಟಳು. ಊಟ ಮಾಡುವಾಗ ನಿನ್ನಪ್ಪನಿಗೆ ದಾಂಡೀ ಮೀನುಸಾರು ಎಂದರೆ ಪ್ರಾಣ ಎಂದು ಹೇಳಲು ಮರೆಯಲಿಲ್ಲ. ಎಲ್ಲ ಗೌಳಿಗಳು ತೆರವು ಮಾಡಿದ ಊರಿನಲ್ಲಿ ಅತ್ತೆಯೊಬ್ಬಳೇ ಇರುವ ಬಗ್ಗೆ ವಿನುತಾ ಬೇಸರ ವ್ಯಕ್ತಪಡಿಸಿದಳು. ಕೊನೆಗಾಲದಲ್ಲಾದರೂ ತನ್ನ ಜೊತೆ ಹಾಯಾಗಿ ಇರಬಹುದೆಂದು ಅತ್ತೆಗೆ ಮನವರಿಕೆ ಮಾಡಲು ವಿನುತಾ ಯತ್ನಿಸಿದಳು. ಅತ್ತೆ ನಸುನಕ್ಕಳು.

ಇಲ್ಲಿ ನಾನು, ನನ್ನಣ್ಣ, ಆಡಿದ ನೆನಪುಗಳಿವೆ. ಅಪ್ಪ, ಅಮ್ಮನ ಉಸಿರುಗಳಿವೆ. ನಿನ್ನಜ್ಜನ ಕಥೆಗಳಿವೆ ಎಂದು ಮುಖ ನೋಡಿದಳು. ಅವಳ ಕಣ್ಣಲ್ಲಿ ಶೂನ.. ಅನಂತ ಶೂನ್ಯ.. ಅಪ್ಪನ ಸಮಾಧಿಯತ್ತ ನೆಟ್ಟ ಅವಳ ಕಣ್ಣುಗಳು ನನಗೆ ಸುಲಭಕ್ಕೆ ಅರ್ಥವಾಗಲಿಲ್ಲ.

ಎಲ್ಲರೂ ಬಿಟ್ಟು ಹೋದರು. ಈ ಹುಡುಗ ನನ್ನ ಬಿಟ್ಟು ಹೋಗಲಿಲ್ಲ. ಇವನಿಗೊಂದು ಜೋಡು ಮಾಡಿ ಕಾಲ ಕಳೆಯುತ್ತೇನೆ. ನನ್ನ ಬಿಟ್ಟರೆ ಇವನಿಗ್ಯಾರಿದ್ದಾರೆ. ಎಲ್ಲರಿಗೂ ಶಿವ ಒಂದೊಂದು ಜೋಡು ಮಾಡಿರುತ್ತಾನೆ ಎನ್ನುತ್ತಾ ಪಕ್ಕದಲ್ಲೇ ಕೋಳಿಪಿಳ್ಳೆಯಂತೆ ಕುಳಿತಿದ್ದ ಭರಮಲಿಂಗನ ತಲೆ ನೇವರಿಸಿದಳು. ಅವನು ಮುಗ್ಧ ಮಗುವಿನಂತೆ ಮುದುರಿಕೊಂಡ. ಅವನಿಗೆ ಅವ್ವ ಸಿಕ್ಕಿದ್ದಳು. ಅತ್ತೆಗೆ ಕಾಡಿನೊಂದಿಗೆ ಕರಳು ಬಳ್ಳಿಯ ಸಂಬಂಧವಿದೆ ಎಂಬುದು ವಿನುತಾಗೆ ಅರ್ಥವಾಗತೊಡಗಿತು.

***

ತಡವಾಗಿ ಮಲಗಿದ್ದರಿಂದ ಎಚ್ಚರವಾಗುವುದು ತಡವಾಯಿತು. ಪಕ್ಕದಲ್ಲಿ ಅತ್ತೆ ಇರಲಿಲ್ಲ. ಪಡಸಾಲೆಯಲ್ಲಿ ಭರಮಲಿಂಗನೂ ಇರಲಿಲ್ಲ. ಹೊರಗೆ ಹೋಗಿ ಸುತ್ತ ನೋಡಿದಳು. ಹೊಸ ಬೆಳಗು ಮೈತಾಕಿ ಚೈತನ್ಯವೊಂದು ಅವಳಲ್ಲಿ ತುಂಬಿಕೊಂಡಿತು. ತಾನು ಬಾಲ್ಯದಲ್ಲಿ ಕಂಡಿದ್ದ ಬೆಳಗದು. ಭರಮಲಿಂಗ ಕೊಟ್ಟಿಗೆ ಗುಡಿಸಿ ಕರು ಬಿಟ್ಟಿದ್ದ. ಅದು ಚೆಂಗನೇ ಜಿಗಿಯುತ್ತಾ ಜಿಗಿಯುತ್ತಾ ಚಿನ್ನಾಟವಾಡತೊಡಗಿತ್ತು. ಅತ್ತೆ ಅದಾಗಲೇ ಸ್ನಾನ ಮುಗಿಸಿ ಅಪ್ಪನ ಸಮಾಧಿಯ ಮೇಲೆ ಹೂವುಗಳನ್ನಿಟ್ಟು ಹಣೆಯೆತ್ತಿ ಧ್ಯಾನಿಸುತ್ತಿದ್ದುದು ಕಂಡಿತು. ಅಪ್ಪ ಅಜ್ಜ ಬ್ರೂನೀ ಉಡುಚಿ ಮಕ್ಕಳಂತೆ ಇಲ್ಲಿಯೋ ಎಲ್ಲೋ ಚಿನ್ನಾಟವಾಡುತ್ತಿರಬಹುದು ಎನಿಸತೊಡಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.